ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೆ ಒಂದಿಷ್ಟು ಹೊತ್ತು

ನೆನಪಿರಲಿ ಕವನ‌ಸಂಕಲನ

ಮಲೆನಾಡಿನ ಗಿರಿಶೃಂಗಗಳ ಕೊರಳಿನ ಹಾರ
ಕರಾವಳಿಯ ಅಂಚು ಕಟ್ಟಿರಲು ಸುಂದರ
ಗುಡಿ ದೇಗುಲಗಳ ಪುಣ್ಯ  ಪವಿತ್ರ ತಾಣ
ಇದುವೇ ಕನ್ನಡಮ್ಮನ ಆವಾಸಸ್ಥಾನ

೩೦೫/೩೬೬

ನೆನಪಿರಲಿ   ಕವನ‌ಸಂಕಲನ
ಸಂಪಾದಕರು   ಸ ರಾ ಸುಳಕೂಡೆ
ಪ್ರಕಾಶಕರು ವಿಶ್ವ ವಿಕಾಸ ಫೌಂಡೇಷನ್
ಪ್ರಥಮ ಮುದ್ರಣ ೨೦೧೮

ಇದು 120 ಕವಿಗಳ ಪ್ರಾತಿನಿಧಿಕ ಕವನಗಳ ಸಂಕಲನ . ಭೌಗೋಳಿಕ ಹಾಗೂ ವಯೋಮಾನಗಳ ವಿವಿಧ ಅಂತರಗಳ ವಿಭಿನ್ನ ವೃತ್ತಿಗಳಲ್ಲಿ ತೊಡಗಿರುವ ಕವಿ ಕವಯತ್ರಿಗಳ ಅಂತರಾಳದ ನುಡಿಗಳು ಇಲ್ಲಿ ಪದರೂಪದಲ್ಲಿ ಆವರಣಗೊಂಡಿದೆ. ಬೆನ್ನುಡಿಯಲ್ಲಿ ಶ್ರೀಯುತ ವಿದ್ಯಾಧರ ಮುತಾಲಿಕ ದೇಸಾಯಿ ಅವರ ನುಡಿಗಳಲ್ಲಿ ಹೇಳುವುದಾದರೆ ಬಹುಮುಖ ಪ್ರತಿಭಾನ್ವಿತ, ನಿರಂತರ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ಶ್ರೀ ಮೋಹನ ಬಸವನಗೌಡ ಪಾಟೀಲ ಹಾಗೂ ಶ್ರೀ ಸ.ರಾ. ಸುಳಕೂಡೆ ಅವರ ಪರಿಶ್ರಮದ ಫಲ ಈ ಪ್ರಾತಿನಿಧಿಕ ಕವನ ಸಂಕಲನ. ಕನ್ನಡ ಸಾಹಿತ್ಯ ಪರಿಷತ್ ನ  ಅಧ್ಯಕ್ಷರಾದ ಮನು ಪ ಬಳಿಗಾರ್ ಅವರು ತಮ್ಮ ಮುನ್ನುಡಿಯಲ್ಲಿ “ಈ ಸಂಕಲನದ ಕವಿತೆಗಳು ಸಮಕಾಲೀನ ಸಂವೇದನೆಗಳನ್ನು ಕಟ್ಟಿ ಕೊಟ್ಟಿವೆಯಲ್ಲದೆ ಜನಮುಖಿಯಾಗಿವೆ ಜೀವನ ಹಸನು ಗಳಿಸುವ ಸದಾಶಯ ಹೊಂದಿ ಯಶಸ್ವಿಯಾಗಿದೆ ಎಂದು ನಿಶ್ಚಿತವಾಗಿ ಹೇಳಬಹುದು” ಎಂದು ಹೇಳಿ ಸಮಸ್ತ ಕನ್ನಡಿಗರ ಪರವಾಗಿ ಪ್ರಕಾಶಕರು ಹಾಗೂ ಸಂಪಾದಕರನ್ನು ಅಭಿನಂದಿಸುತ್ತಾರೆ.

“ಆಳದ ಅನುಭವವನ್ನು ಮಾತು ಕೈ ಹಿಡಿದಾಗ ಕಾವು ಬೆಳಕಾದಾಗ ಒಂದು ಕವನ”
ಕೆ ಎಸ್ ನರಸಿಂಹಸ್ವಾಮಿ

ಹೀಗೆ ಕವನವೇನೋ ಹುಟ್ಟಿಬಿಡುತ್ತದೆ; ಆದರೆ ಅದನ್ನು ರಸಿಕನಾದ ಓದುಗ ಓದಿ ಆಸ್ವಾದಿಸಿದಾಗ ಮಾತ್ರ ತಾನೇ ಕಾವ್ಯದ ಸಾರ್ಥಕತೆ.  ಶ್ರೀ ಮನು ಬಳಿಗಾರ್  ಅವರೇ ತಮ್ಮ ಮುನ್ನುಡಿಯಲ್ಲಿ ಹೇಳಿದಂತೆ

ಕವನ ಬರೆಯುವುದೆಂದರೆ ತೋಟದಲ್ಲಿ ಹೂಗಳರಳಿದಂತೆ
ಸಹೃದಯರು ಆಲಿಸಿದರೆ ಅವು ದೇವರ ತಲೆ ಏರಿದಂತೆ

ದೇವರ ಮುಡಿ ಏರಿದಾಗ ಹೂಗಳಿಗೆ ಸಾರ್ಥಕತೆ ಬರುವಂತೆ ಪುಸ್ತಕಗಳಲ್ಲಿ ಅಚ್ಚಾಗಿ ಸಹೃದಯರ ಹೃದಯ ಹೊಕ್ಕಾಗ ಕವನಗಳಿಗೆ ಸಾರ್ಥಕತೆ. ಈ  ಸಾರ್ಥಕತೆಯನ್ನು ಇಲ್ಲಿನ 120 ಕವಿಕಾವ್ಯಗಳಿಗೆ ತಂದು ಕೊಟ್ಟಿರುವವರು ಸಂಪಾದಕರು ಮತ್ತು ಪ್ರಕಾಶಕರು.

ಡಿವಿಜಿ ಯವರು ಕಗ್ಗದಲ್ಲಿ ಹೇಳುತ್ತಾರೆ

ಹೃದಯಕೊಪ್ಪುವ ಭಾಷೆ ರಾಗ ಲಯ ವಿಸ್ತಾರ
ಪದವಿಚಾರಕೆ ಚರ್ಚೆ ಮತ ವಿಚಾರಕ್ಕೆ ತಕ್ಕ ಭಾಷೆ
ಹೃದಯಮತಿ ಸತಿಪತಿಗಳಂತೆ ಇರಲು ಯೋಗ್ಯವದು  
ಬದುಕು ರಸತರ್ಕೈಕ್ಯ_ ಮಂಕುತಿಮ್ಮ

ಮನುಷ್ಯನು ಪ್ರಪಂಚವನ್ನು ತಾನು ತಿಳಿದುಕೊಳ್ಳುವುದಕ್ಕೂ,  ಪ್ರಪಂಚಕ್ಕೆ ತನ್ನನ್ನು ತಿಳಿಯಪಡಿಸುವುದಕ್ಕೂ ಇರುವ ಸಾಧನಗಳಲ್ಲಿ ಹೃದಯ ಮತ್ತು ಬುದ್ಧಿ ತುಂಬಾ ಮುಖ್ಯವಾದವು.  ದೈನಂದಿನ ಚಟುವಟಿಕೆಗಳಲ್ಲಿ ಬುದ್ಧಿ ಪಾತ್ರ ವಹಿಸುತ್ತದೆ . ಹೃದಯದ ಮೃದುಕೋಮಲ ಭಾವನೆಗಳ ಜಾಗೃತಿಯೇ ಸಂಸ್ಕಾರ.  ಕವನ ಕಾವ್ಯ ಬರವಣಿಗೆಗಳು ಈ ಸಂಸ್ಕಾರದ ಫಲ.  

ನಮ್ಮ ಸುತ್ತಮುತ್ತಲ ಪ್ರಪಂಚದ ಆಗು ಹೋಗುಗಳನ್ನು ಅವಲೋಕಿಸಿದಾಗ ನಮಗೂ ನೂರೆಂಟು ಆಲೋಚನೆಗಳು ಅಭಿಪ್ರಾಯಗಳು ಮನಸ್ಸಿನಲ್ಲಿ ಹಾದು ಹೋಗಿರುತ್ತದೆ. ಆದರೆ ಅವುಗಳಿಗೊಂದು ಸ್ಪಷ್ಟ ರೂಪ ಕೊಟ್ಟು ಬೇಕಾದಲ್ಲಿ ಇನ್ನಷ್ಟು ಅಧ್ಯಯನ ನಡೆಸಿ ಶ್ರಮಪಟ್ಟು ಬರಹ ರೂಪ ಕ್ಕಿಳಿಸಿದಾಗ ಮಾತ್ರ  ಉತ್ತಮ ಕವನಗಳು ಹೊರಬರುತ್ತದೆ .ಪ್ರಕಟಣಾ ಹಾಗೂ ಸಂಗ್ರಹ ಯೋಗ್ಯವಾಗುತ್ತದೆ.  ಈ ಪರಿಶ್ರಮದ ಫಲವೇ ಇದು.  

ತಾನು ಬರೆಯುವುದು ರಚಿಸುವುದು ವೈಯಕ್ತಿಕ ಸಾಧನೆ.  ಆದರೆ ತಮ್ಮೊಂದಿಗೆ ಬೇರೆಯವರಿಂದ ಬರೆಸಿ ಅವರನ್ನು ಸಾಹಿತ್ಯ ಪಯಣದಲ್ಲಿ ಕೈಹಿಡಿದು ಮುನ್ನಡೆಸಿ ಕೊಂಡು ಹೋಗುವುದಿದೆಯಲ್ಲ ಅದು ಸಾಮಾನ್ಯ ಸಂಗತಿ ಅಲ್ಲವೇ ಅಲ್ಲ .ರಾಜಕೀಯ, ಒಳಜಗಳ, ಪರರ ಉತ್ಕರ್ಷದ ಬಗ್ಗೆ ಅಸೂಯೆ ವಿಜೃಂಭಿಸುತ್ತಿರುವ ಈ ಕಾಲದಲ್ಲಿ  ಲೇಖಕರ ಸೃಜನಶೀಲತೆಗೆ ಮೆರಗುಕೊಟ್ಟು ವೇದಿಕೆ ಕಲ್ಪಿಸಿ ಪ್ರಗತಿಗೆ ಪ್ರೋತ್ಸಾಹ ಕೊಡುತ್ತಿರುವ ಅಪ್ರತಿಮ ಕಾರ್ಯ ಶ್ರೀ ಸ ರಾ ಸುಳಕೂಡೆ ಇವರದು. ಇವರ ಹೆಗಲಿಗೆ ಹೆಗಲು ಕೊಟ್ಟು ಪ್ರಕಾಶನದ ಹೊಣೆ ಹೊತ್ತುಕೊಂಡ ಮೋಹನ ಬಸವನಗೌಡ ಪಾಟೀಲ ಇವರ ಬೆಂಬಲವೂ ಅತ್ಯಪೂರ್ವ
ಅಸದೃಶ.

ಒಮ್ಮನದ ಸಾಹಿತ್ಯಕ ಮನಗಳು ಕೂಡಿ ಕವಿತೆಯ ಸಂಚಯಿಸಿ ಕ್ರೋಡೀಕರಿಸುವ ಈ ಸತ್ಕಾರ್ಯ ನಿಜಕ್ಕೂ ಶ್ಲಾಘನೀಯ. ಮನದ ಭಾವಗಳು ಸರಿತೆಯಾಗಿ ಹರಿದು ಓದುಗನ ಮನ ಮುಟ್ಟಿ ಭಾವೋತ್ಕರ್ಷವನ್ನು ಉಂಟುಮಾಡಿದಾಗ ಕಬ್ಬಿಗನ ಸೃಷ್ಟಿಗೆ ಸಾರ್ಥಕ್ಯ.  ಓದುಗ ತನ್ನ ಮನಸ್ಥಿತಿಯನ್ನು ಅದರೊಡನೆ ತಾದ್ಯಾತ್ಮಗೊಳಿಸಿದಾಗ ಅದು ಕಾವ್ಯಾನುಸಂಧಾನ .

ಹೀಗೆ ಕವನಗಳನ್ನು ಆಸ್ಪಾದಿಸುತ್ತಾ ಹೊರಟಾಗ 120 ಕವಿ ಮನಗಳು ಬೇರೆ ಬೇರೆಯಾದರೂ ಭಾವ ವೀಣೆಯ ಶ್ರುತಿ ಮಾತ್ರ ಒಂದೇ ಹದನಾಗಿರುವುದು ಕಂಡುಬರುತ್ತದೆ. ವಿಷಯಗಳು ವಿಶಿಷ್ಟ ವಿಭಿನ್ನವಾದರೂ ಬೇರೆ ಬೇರೆ ನದಿಗಳು ಸಾಗರವನ್ನು ಮೂಲಗಮ್ಯವಾಗಿರಿಸಿಕೊಂಡಂತೆ ಸಾಮಾಜಿಕ ಒಳಿತನ್ನೇ ಗುರಿ ಮಾಡಿಕೊಂಡಿರುವುದು ಗಮನಾರ್ಹ. ಕವಿತೆಯ ವಸ್ತು ವಿಷಯವನ್ನು ಆಧಾರವಾಗಿಟ್ಟುಕೊಂಡು ಸ್ಥೂಲವಾಗಿ ಕವನ ಸಂಕಲನವನ್ನು 10 ವಿಭಾಗಗಳನ್ನಾಗಿ ಮಾಡಿ ವಿವರಿಸಲು ಪ್ರಯತ್ನಿಸಿದ್ದೇನೆ.

೧.  ವ್ಯಕ್ತಿ ಚಿತ್ರಣ

ಸಾಹಿತ್ಯ ಜೀವನದ ಪ್ರತಿಬಿಂಬ ಎನ್ನುವುದು ಸಾಮಾನ್ಯ ನಂಬಿಕೆ . ಬಿಂಬ ಮಾತ್ರವಲ್ಲದೆ ಅದು ಪ್ರತಿಫಲನವೂ ಸಹ ಹೌದು . ಸಾಹಿತ್ಯವೆಂದರೆ ನದಿ ಹರಿದ ಮೇಲೆ ರೂಪಿತವಾಗುವ ನದಿ ಪಾತ್ರ ಮಾತ್ರ ಎಂದು ಪರಿಗಣಿಸಲಾಗದು.  ನದಿಯು ಹರಿಯಬೇಕಾದ ದಿಕ್ಕು ದಾರಿಗಳನ್ನು ನಿರ್ಣಯಿಸುವ ನಿರ್ದಿಷ್ಟ ಪ್ರೇರಕ ಶಕ್ತಿಯೂ ಆಗಬೇಕು . ಆ ನಿಟ್ಟಿನಲ್ಲಿ ಕವಿ ಬರೀ ಅಂತರ್ದೃಷ್ಟಿಯುಳ್ಳವನು  ಆಗದೆ ಸುತ್ತಲ ಪರಿಸರವನ್ನು ಅವಲೋಕಿಸುವ ಅಧ್ಯಯಿಸುವ ಅಭ್ಯಾಸಿಯೂ,  ಅದರ ಮೇಲೆ ತನ್ನ ಕ್ಷಕಿರಣ ನೋಟವನ್ನು ಬೀರುವಂಥವನೂ ಆಗಬೇಕಾಗುತ್ತದೆ. ಸ್ವಾತಂತ್ರ್ಯಕ್ಕಾಗಿ ಪಟ್ಟ ಪಾಡನ್ನು ಕಣ್ಣಾರೆ ಕಂಡ ತಲೆಮಾರು ನಮ್ಮಿಂದ ಮಾಯವಾಗುತ್ತಿರುವಾಗ ಆ ದಿನಗಳ ಚಿತ್ರಣವನ್ನು ನಾವು ಬರವಣಿಗೆಯ ಮೂಲಕ ಮಾತ್ರ ಕಟ್ಟಿ ಕೊಡಬೇಕಾಗುತ್ತದೆ. ಹಾಗಾಗಿ ಇಲ್ಲಿನ ಕಿತ್ತೂರು ಚೆನ್ನಮ್ಮ ರಾಣಿ ಸಂಗೊಳ್ಳಿ ರಾಯಣ್ಣ ಇವರುಗಳ ವ್ಯಕ್ತಿತ್ವ ಚಿತ್ರಣದ ಕವಿತೆಗಳು ಮಹತ್ವವಾಗುತ್ತದೆ.  ಇತಿಹಾಸದ ಪುನರ್ಮನನಕ್ಕೆ ಕಾರಣವಾಗುತ್ತದೆ.

ಕಿತ್ತೂರು ಚೆನ್ನಮ್ಮ

ಕವನದ ಮೊದಲ ಪುಟಗಳ ತುಂಬಾ ಚೆನ್ನಮ್ಮನ ಕುರಿತಾದ ಕವನಗಳು.  ಹದಿನಾರಕ್ಕೂ ಹೆಚ್ಚು ಕವನಗಳಲ್ಲಿ ಈ ವೀರವನಿತೆಯ ಬದುಕು ಸಾಧನೆಗಳನ್ನು ಕವಿಮನಗಳು ತುಂಬಾ ಚೆನ್ನಾಗಿ ಬಣ್ಣಿಸಿವೆ. ಚೆನ್ನಮ್ಮನ ಅಪ್ರತಿಮ ದೇಶಭಕ್ತಿ ಈ ಕವನಗಳಲ್ಲಿ ಬಹಳ ಚೆನ್ನಾಗಿ ಬಿಂಬಿತವಾಗಿದೆ ಇಂದಿನ ಯುವ ಜನಾಂಗಕ್ಕೆ ಇಂತಹ ಕವನಗಳ ಮೂಲಕವಾದರೂ ನಮ್ಮ ಹಿರಿಯರ ಪರಿಚಯವಾಗುತ್ತಿರುವುದು ಸಂತಸದ ವಿಷಯ.

ಸಂಗೊಳ್ಳಿ ರಾಯಣ್ಣ

ಚೆನ್ನಮ್ಮ ಎಂದ ಮೇಲೆ ಅವಳ ನೆಚ್ಚಿನ ಬಂಟ ವೀರ ಸಂಗೊಳ್ಳಿ ರಾಯಣ್ಣನನ್ನು ನೆನೆಯದಿದ್ದರೆ ಆಗುತ್ತದೆಯೇ? ಹಾಗಾಗಿ ಅವನ ಬಗೆಗಿನ ಕವನಗಳು ಇಲ್ಲಿ ಸ್ಥಾನ ಪಡೆದಿವೆ ಹಾಗೂ ರಾಯಣ್ಣನ ವೀರ ಚರಿತೆಯನ್ನು ಹಾಡಿ ಹೊಗಳಿವೆ.

ಹಾಗೆಯೇ ಬೆಳಗಾವಿ ಜಿಲ್ಲೆಯ ಸ್ವಾತಂತ್ರ ಹೋರಾಟಗಾರರಾದ ತಲ್ಲೂರ ರಾಯನಗೌಡರ ಕುರಿತಾದ ಕವನವು ಇಲ್ಲಿ ಬೆಳಕು ಕಂಡಿದೆ.

ಜಗಜ್ಯೋತಿ ಬಸವೇಶ್ವರರ ಹಾಗೂ ಮುರುಘೇಶರ ಬಗೆಗಿನ ಕವನಗಳು ಗಾಯನಗಂಗೆ ಗಂಗೂಬಾಯಿ ಹಾನಗಲ್ ಅವರ ಕುರಿತಾದ ಕವನ ಇವೆಲ್ಲವೂ ಅವರುಗಳ ಪರಿಚಯ ಮಾಡಿಕೊಡುವುದರೊಂದಿಗೆ ನಮ್ಮ ಭವ್ಯ ಸಂಸ್ಕೃತಿಯ ಪರಂಪರೆಯ ಸ್ಮರಣಿಕೆಯಾಗಿ ಕಂಡುಬರುತ್ತದೆ. ಕನ್ನಡ ವಾಙ್ಮಯದ ಆಸ್ತಿ ವಚನ ಸಿರಿ  ಸಂಪತ್ತಿನ ಬಗ್ಗೆಯೂ ಇಲ್ಲಿ ಪ್ರಸ್ತಾಪವಿದೆ.

ದೇಶದ ಇತರ ಭಾಗಗಳ ಸ್ವಾತಂತ್ರ್ಯ ಸಂಗ್ರಾಮದ ಕಲಿಗಳ ವಿಷಯ ಹೆಚ್ಚು ಪ್ರಚುರಗೊಂಡಷ್ಟು ನಮ್ಮ ಕನ್ನಡ ನಾಡಿನ ಸ್ವಾತಂತ್ರ್ಯ ವೀರರ ವಿಷಯ ಆಗಿಲ್ಲ ಎನ್ನುವ, ಅಲಕ್ಷಿತವಾಗಿದೆ ಎನ್ನುವ ದೂರುಗಳನ್ನು ಸ್ವಲ್ಪಮಟ್ಟಿಗಾದರೂ ಈ ಸಂಕಲನ ಕಡಿಮೆ ಮಾಡಿದೆ ಎಂದರೆ ತಪ್ಪಿಲ್ಲ.

೨. ಮಹಿಳಾಂತರಂಗ

ಮನಸಿನೊಳಗಡೆ ಎಂದೂ
ಇಣುಕಲಾರಿರಿ ನೀವು. ಹುಡುಕಿ
ತೆಗೆಯಲಾರಿರಿ ಏನನೂ
ಇಣುಕಲಾದರೂ ಹಾಗೆ ಮಾಡಲಾಗದು ನೀವು
ಚೀಲದೊಳಗಿನ ತಿರುಳನು
ಹುಡುಕಿ ತೆಗೆಯಲಾದರೂ ಹಾಗೆ
ಮಾಡಲಾಗದು ನೀವು
ನೋಡಬಾರದು ಚೀಲದೊಳಗನು.

                                          – ವೈದೇಹಿ

ನಿಜ ಯಾರೊಬ್ಬರೂ ಹೆಣ್ಣಿನ ಅಂತರಂಗದಲ್ಲಿ ಇಣುಕಲು ಸಾಧ್ಯವಿಲ್ಲ. ಇಣುಕಿ ನೋಡಿದರೂ ಅರಿಯಲು ಸಾಧ್ಯವಿಲ್ಲ. ಆದರೆ ಹೆಣ್ಣು ತಾನಾಗಿಯೇ ತನ್ನ ಅಂತರಂಗದ ಭಾವನೆಗಳನ್ನು ಅನಾವರಣ ಗೊಳಿಸಿದಾಗ ಅವಳನ್ನು ಅರ್ಥೈಸಿಕೊಳ್ಳುವಿಕೆ ಸ್ವಲ್ಪವಾದರೂ ಸುಲಭವಾಗಬಹುದೇನೋ…..

ಇಲ್ಲಿನ ಕವಯತ್ರಿಯರ ಕೆಲವು ಕವನಗಳು ಸ್ತ್ರೀ ಅಂತರಾಳದ ಸೂಕ್ಷ್ಮ ಸಂವೇದನೆಗಳನ್ನು ಎತ್ತಿ ಹಿಡಿಯುವಲ್ಲಿ ತುಂಬಾ ಸಫಲತೆ ಕಂಡಿವೆ.  .ಅದಕ್ಕೆ ಉತ್ತಮ ಉದಾಹರಣೆ “ಸ್ವಾತಂತ್ರ್ಯ”  “ನಾವು ಮಾನಿನಿಯರು” “ನಿತ್ಯ ಸುಮಂಗಲಿ” “ಝಾಂತಿಪೆಯ ಸ್ವಗತ’  ” ತವರು ಮುಂತಾದ ಕವನಗಳು. ಶೋಷಣೆಯ ವಿರುದ್ಧ ದನಿಯೆತ್ತುವ ವಿಷಾದದ ಕಡಲಾಳಕ್ಕೆ ದೂಡುವ ಇಲ್ಲಿನ ಕವಿತೆಗಳು ಸ್ತ್ರೀ ಸಂವೇದನೆಯ ಪ್ರತಿನಿಧಿತ್ವ ವಹಿಸುತ್ತಾ ಸಮಾಜದ ಓರೆ ಕೋರೆಗಳ ಕಡೆ ದೃಷ್ಟಿ ಹಾಯುವಂತೆ ಮಾಡುವಲ್ಲಿ ಸಫಲವಾಗಿವೆ. ಹಾಗೆಯೇ ಮೃದು ಮನಸ್ಸಿನ ಹೆಂಗರುಳಿನ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಮನಸ್ಸಿನ ದ್ವಂದ್ವ ಗೊಂದಲ ಹತಾಶೆ ಸಂಕಟ ನೋವು ನಲಿವು ಎಲ್ಲವನ್ನು ಪದಗಳ ಮೂಲಕ ಹೊರ ಹಾಕುತ್ತ ಸಾಂತ್ವನ ಗೊಳ್ಳುವಂತಿವೆ

೩. ದೇಶಭಕ್ತಿ

“ಭರತ ಭೂಮಿ ನಮ್ಮ ತಾಯಿ
ನಮ್ಮ ಪೊರೆವ ತೊಟ್ಟಿಲು

ಹಿಂದೆ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಜನರನ್ನು ಪ್ರೇರೇಪಿಸಲು ದೇಶ ರಕ್ಷಣೆಗಾಗಿ ತನುಮನ ಧನಗಳನ್ನು ತ್ಯಾಗ ಮಾಡಲು ಮುಂದಾಗುವಂತೆ ಮಾಡಿದ್ದು ದೇಶಭಕ್ತಿಯ ಗೀತೆಗಳು .  ಅಂದಿನ ಎಷ್ಟೋ ಗೀತೆಗಳು ಇಂದಿಗೂ ಸಹ ಭಾವೋತ್ಕಟತೆ ಉಂಟುಮಾಡಿ ಮೈ ಝುಂ ಎನಿಸುವುದು ಸುಳ್ಳಲ್ಲ . “ದೇಶ ಕಟ್ಟುವ ಬನ್ನಿ ” “ಜೈ ಘೋಷನಾದ” “ಭರತ ಭಾರತ” ಮುಂತಾದ
ಸಮೂಹ ಗೀತೆಗಳಾಗಿ ಹಾಡಬಹುದಾದಂತಹ ಕೆಲವು ದೇಶಭಕ್ತಿ ಗೀತೆಗಳು ಈ ಸಂಗ್ರಹದಲ್ಲಿ ಕಂಡುಬಂದಿದ್ದು ನಿಜಕ್ಕೂ ಖುಷಿ ಕೊಟ್ಟ ವಿಷಯ.

೪.‌ಕನ್ನಡ ದೇಶ_ಭಾಷೆ

“ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಎಂದರು ಕುವೆಂಪು ಅವರು . ಹಾಗೆ ಭಾರತಮಾತೆಯ ಬಗ್ಗೆ ಹಾಡಿದಂತೆಯೇ ಕನ್ನಡ ನಾಡು ನುಡಿಗಳ ಬಗ್ಗೆಯೂ ಇಲ್ಲಿ ಅನೇಕ ಗೀತೆಗಳು ಮೂಡಿದ್ದು ಕನ್ನಡ ನಾಡಿನ ಮೇಲಿನ  ಪ್ರೇಮವನ್ನು ಅಭಿಮಾನವನ್ನು ಎತ್ತಿ ಹಿಡಿದು ಜೈಕಾರ ಹಾಕಿವೆ. “ಕನ್ನಡಾಂಬೆ” “ಕನ್ನಡ ಅಭಿಮಾನ”  “ನಮ್ಮ ನಾಡು” “ನಮ್ಮ ಬೆಳಗಾವಿ”  “ಸುವರ್ಣಸೌಧ ಸ್ವಗತ” ಇವೇ ಮೊದಲಾದುವುಗಳನ್ನು ಈ ಶೀರ್ಷಿಕೆಯಡಿ ಹೆಸರಿಸಬಹುದು.  ಕನ್ನಡದ ಮೇಲಿನ ಅಭಿಮಾನ ಮಾಯವಾಗಿ ಹೋಗುತ್ತಿರುವ ಈಗಿನ ಕಾಲದಲ್ಲಿ ಮತ್ತೆ ಹೊಸ ಹುರುಪು ಭರವಸೆಗಳನ್ನು ತರುವಂತಹ ಇಂತಹ ಭಾಷೆಯ ಹಿರಿಮೆ ಸಾರುವ ಗೀತೆಗಳು ಅತಿ ಅವಶ್ಯಕ ಎಂದು ಸಾರುವಂತಿವೆ.

೫.  ಯೋಧ

ಜೈ ಜವಾನ್ ಜೈ ಕಿಸಾನ್ ಎಂದು  ಘೋಷಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಯವರು ರೈತ ಹಾಗೂ ಸೈನಿಕ ದೇಶದ ಬೆನ್ನೆಲುಬು ಎಂದು ಸಾರಿದರು. ನಾವಿಲ್ಲಿ ನೆಮ್ಮದಿಯ ಬದುಕು ಕಾಣಬೇಕೆಂದರೆ ಗಡಿಯನ್ನು ಕಾಯುವ ಶತ್ರುಗಳಿಂದ ರಕ್ಷಿಸುವ ಯೋಧನ ಕಾಣಿಕೆ ಎಷ್ಟು ಅಮೂಲ್ಯವಾದದ್ದು ಎಂಬುದು ಸರ್ವವಿದಿತ. ಅಂತಹ ಯೋಧನಿಗೆ ನುಡಿ ನಮನಗಳನ್ನು ಸಲ್ಲಿಸುವ ಅನೇಕ ಗೀತೆಗಳು ಇಲ್ಲಿ ಕಂಡುಬಂದಿವೆ.  “ಯೋಧ”  “ಸೈನಿಕನೇ ಇದೋ ನಿನಗೆ ವಂದನೆ” ಮುಂತಾದ ಗೀತೆಗಳು ಅಲ್ಲದೆ “ನನ್ನ ಸೈನಿಕ ನನ್ನ ಪತಿದೇವ” ಎಂದು ಸೈನಿಕನ ಪತ್ನಿಯೊಬ್ಬಳ ಸ್ವಗತದಂತೆ ತೋರುವ ಕವನವೂ ಸಹ ಇಲ್ಲಿದೆ.  ಮನೆ ಮಠಗಳನ್ನು ಬಿಟ್ಟು ದೇಶ ರಕ್ಷಣೆಗಾಗಿ ಸಂಸಾರದಿಂದ ದೂರ ಉಳಿದು ಚಳಿ ಮಳೆಗಳನ್ನು ಲೆಕ್ಕಿಸದೆ ದುಡಿಯುವ ಯೋಧರಿಗೆ ಇದು ನಿಜಕ್ಕೂ ಒಂದು ಕೃತಜ್ಞತೆಯ ಸಲ್ಲಿಕೆಯೇ ಸರಿ.

೬.  ರೈತ

“ನೇಗಿಲ ಹಿಡಿದ ಹೊಲದೊಳು ಹಾಡುವ ಉಳುವ ಯೋಗಿಯ ನೋಡಲ್ಲಿ”

ನಮಗೆಲ್ಲ  ಅನ್ನದಾತನಾದ ರೈತನ ಹಿರಿಮೆ ಗರಿಮೆ ಅರಿಯದವರಾರು? ಆದರೂ ಬೇಸಾಯ ಎನ್ನುವುದು ಇಂದಿಗೂ ಉಪೇಕ್ಷಿತ ವೃತ್ತಿಯೇ ಸೈ. ಈ ನಿಟ್ಟಿನಲ್ಲಿ ಕವಿಮನಗಳು ಆರಂಬದ ಮಹತ್ವವನ್ನು ಒತ್ತಿ ಹೇಳುವ ಕವನಗಳ ಮೂಲಕ ವ್ಯವಸಾಯದ ಕಡೆ ಒಲವು ಮೂಡಿಸುವಂತೆ ಮಾಡುತ್ತಿರುವುದು ಶ್ಲಾಘನೀಯ.  ಇಲ್ಲಿನ “ಸಾಗ್ವಳಿ ಸುಖ”  “ರೈತರು ನಾವು”  “ರೈತ ಎಚ್ಚೆತ್ತುಕೊಳ್ಳಬೇಕಿದೆ”  “ಅನ್ನದಾತನ  ಆರ್ತನಾದ”  ಮುಂತಾದ ಕವನಗಳಲ್ಲಿ ರೈತ ಎದುರಿಸಬೇಕಾದ ಸಮಸ್ಯೆಗಳು ಅವನ ಕಷ್ಟ ಸುಖಗಳ ಬಗ್ಗೆ ವ್ಯಾಪಕ ಚರ್ಚೆ ನಡೆದು ರೈತನನ್ನು ಸಮಾಜಕ್ಕೆ ಪರಿಚಯಿಸುವ ಪ್ರಯತ್ನವಾಗಿದೆ.

. ಕವಿ_ಕವಿತೆ

ಕವಿ  ಕೆ ಎಸ್ ನ ಅವರು ತಮ್ಮ ಶಿಲಾಲತೆ ಕವನಸಂಕಲನದ ಶರದ್ ಶಾರದೆ ಕವನದಲ್ಲಿ ತಮ್ಮ ಕವಿತೆಯ ಬಗ್ಗೆ ಹೀಗೆ ಹೇಳುತ್ತಾರೆ

ಋತುಗತಿಯಲ್ಲ ಶೈಲಿಮತಿಯಲ್ಲ ಶಬ್ದ ರತಿಯಲ್ಲ ನನ್ನ ಕವಿತೆ
ಪದ ಪದಕವಿಲ್ಲ ತಲೆ ಭಾರವಿಲ್ಲ ನಿಮ್ಮುಸಿರು ನನ್ನ ಕವಿತೆ
ಅಹಂಕಾರವಿಲ್ಲ ಅಲಂಕಾರವಿಲ್ಲ ನಿಜಾಕಾರ ನನ್ನ ಕವಿತೆ
ನನ್ನಾಸೆ ಕಣ್ಣ ಬಂದರಿಗೆ ಬಂದ ಶರನ್ನೌಕೆ ಈ ಕವಿತೆ

ಕವಿಗೆ ತನ್ನ ಕವಿತೆಗಳ ಮೇಲೆ ತನ್ನ ಮಕ್ಕಳ ಮೇಲಿನ ಹಾಗೆಯೇ ಪ್ರೀತಿ ಪ್ರೇಮ.  ಹಾಗಾಗಿ ಕವಿತೆಯ ಬಗ್ಗೆ ಕವಿ ಬರೆಯುವುದು ಸಹಜವೂ ಸಹ.  “ಕವನ ಕಥೆ”  “ಕವಿತೆ”  ಈ ಕೆಲವು ಕವಿತೆಗಳು ಕವಿ ಮನದ ಕವಿ ಭಾವದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳುತ್ತವೆ.

೮. ಅಮ್ಮ

ಅಮ್ಮನಿಗೆ

ಅಮ್ಮ ನಿನ್ನ ಹೆಸರಿನಲ್ಲೇ
ಎಂಥ ಸವಿಯು ಅಡಗಿದೆ
ಮಧುರಭಾವ ಸುತ್ತ ಹರಡಿ
ಹಳೆಯ ನೆನಪ ತರುತಿದೆ

ಸುಬ್ರಾಯ ಚೊಕ್ಕಾಡಿ

ಪ್ರಪಂಚದ ಬೇರೆಲ್ಲಾ ಬಂಧ ಸಂಬಂಧಗಳು ನಾವು ಭೂಮಿಗೆ ಬಂದು ಕಣ್ಣು ಬಿಟ್ಟ ನಂತರ ಆರಂಭವಾದರೆ ತಾಯಿಯೊಂದಿಗಿನ ನಮ್ಮ ಅನುಬಂಧ ಅದಕ್ಕೂ 9 ತಿಂಗಳ ಮುಂಚಿನದು . ಅಣುವಾದಾಗಿನಿಂದ ಒಡಲಿನಲ್ಲಿ  ಕಂದನ ರೂಪ ತರಿಸಿ ಜೀವ ಕೊಟ್ಟು ಭೂಮಿಗೆ ತಂದು ನಂತರ ಅಮೃತ ಊಡಿಸುವ ಅಮ್ಮಾ ಎಂದರೆ ಮನಸ್ಸಿಗೆ ಏನೋ ಒಂದು ರೀತಿಯ ಹಿತ. ಅಮ್ಮನ ಬಗ್ಗೆ ಅಮ್ಮನೊಂದಿಗಿನ ಒಡನಾಟವನ್ನು ಸಂಬಂಧವನ್ನು ಪದಗಳಿಗೆ ಹಿಡಿದಿಡುವ ಶಕ್ತಿ ಇಲ್ಲ ನಿಜ .ಆದರೆ ಅದರ ಬಗ್ಗೆ ಬರೆಯದಿದ್ದರೆ ಅದೂ ಒಂದೇ ರೀತಿಯ ಅನ್ಯಾಯವೇ ಸೈ . ಹಾಗಾಗಿಯೇ ತಮ್ಮ  ತಮ್ಮ ಅರಿವಿಗೆ ನಿಲುಕಿದಷ್ಟು ಅಮ್ಮನ ಬಗ್ಗೆ ಬರೆಯುವವರೇ ಬರೆದವರೇ ಎಲ್ಲ ಕವಿಗಳು.  ಈ ಸಂಗ್ರಹವೂ ಅದಕ್ಕೆ ಅಪವಾದವಲ್ಲ. ಅಮ್ಮನ ಬಗ್ಗೆ ಬರೆದ ಕೆಲವಷ್ಟು ಕವನಗಳು ಈ ಸಂಕಲನದ ಸಂಗ್ರಹದಲ್ಲಿದೆ. “ಅಮ್ಮನ ಹರಕೆ” “ಪ್ರೀತಿಯ ಅಮ್ಮ”  “ಪ್ರೀತಿ ಎಂಬ ಅಮೃತ” ಇಷ್ಟೇ ಅಲ್ಲದೆ ಅಮ್ಮನಾಗುವ ಬವಣೆಯನ್ನು ಅಮ್ಮನಾಗುವ ಹಿರಿಮೆಯನ್ನು ವರ್ಣಿಸುವ “ಸುಮ್ಮನೇನೆ ಅಮ್ಮನಾಗುವುದೆಂದರೆ” ಕವನಗಳು ಮಾತೃತ್ವದ  ಹಿರಿಮೆಯನ್ನು ಬಣ್ಣಿಸುತ್ತವೆ.

೯. ಮಳೆ

ಪ್ರಕೃತಿಯ ಸುಂದರ ಭಾಗ ಮಳೆ. ಹಸಿರಿಗೆ ಉಸಿರಾಗುವ ಚೈತನ್ಯದ ಮೂರ್ತಿಯಾಗುವ ಈ ಮಳೆ ಕವಿಗಳಿಗಂತೂ ಸ್ಪೂರ್ತಿಯ ಸೆಲೆಯೇ ಸರಿ .ಮಳೆಯ ಬಗ್ಗೆ ಬರೆಯದ ಕವಿಯೇ ಇಲ್ಲ ಎಂದೆನಿಸುತ್ತದೆ .ಕಾಳಿದಾಸನಿಂದ ಹಿಡಿದು ಇಂದಿನ ಆಧುನಿಕ ಕವಿಗಳವರೆಗೆ ಮಳೆಯ ಸೊಬಗಿಗೆ ಮನಸೋಲದ, ಬಣ್ಣಿಸದ ಕವಿ ಮನ ಇಲ್ಲವೇ ಇಲ್ಲ ಎಂದರೆ ಅತಿಶಯೋಕ್ತಿಯೇನೂ ಅಲ್ಲ.  ಹಾಗಾಗಿಯೇ ಮಳೆಯ ಬಗ್ಗೆ ಬರೆದ ಕವನಗಳು ಇಲ್ಲಿನ ಭಾಗವಾಗಿರುವುದು ಖಂಡಿತ ಆಶ್ಚರ್ಯವಲ್ಲ. “ಮಳೆಯ ಅಬ್ಬರ”  “ರಾತ್ರಿ ಮಳೆ ಬಂದು ನಿಂತಾಗ”  “ತುಂತುರು ಮಳೆ” “ಜಲಲ ಜಲಲ ಜಲಧಾರೆ” ” ಮೊದಲ ಮಳೆ” “ಮಳೆ ಹನಿ”  “ಮಳೆಗಾಲ”  ಒಂದೇ ಎರಡೇ  ಬೇಕಾದಷ್ಟು ಕವನಗಳು ಮಳೆಯ ಬಗ್ಗೆ,  ಮಳೆಯ ಸೊಬಗನ್ನು, ಅದು ಮಾಡುವ ಅನಾಹುತವನ್ನು ತರುವ ಖುಷಿಯನ್ನು ಒಡ್ಡುವ ಕಷ್ಟಗಳನ್ನು ಎಲ್ಲವನ್ನೂ ಬಣ್ಣಿಸಿವೆ. ಮಳೆಯ ವಿವಿಧ ಆಯಾಮಗಳನ್ನು ಪರಿಚಯಿಸಿವೆ.

೧೦. ಪ್ರಸ್ತುತತೆ ಹಾಗೂ ವಾಸ್ತವಿಕ ಪರಿಸ್ಥಿತಿ

“ಹಿಂಗ್ಯಾಕಾದ್ರೂ ಈ ಮನುಸ್ಯಾರಾ” “ಸಮಾಜಕ್ಕೊಂದು ಮುನ್ನುಡಿ” “ವಿಶ್ವ ವಿಚಿತ್ರವಾದ ಕಾಲ” “ನಮ್ಮ ಸಮಾಜದ ಸ್ಥಿತಿ” “ಶುದ್ದವಾಗಲಿ ಮನಸ್ಸು” ಮುಂತಾದ ಕವನಗಳು ವಾಸ್ತವದ ಚಿತ್ರಣವನ್ನು ಬಿಚ್ಚಿಡುತ್ತಾ ಹೋಗುತ್ತವೆ. ಜೀವನದಲ್ರ್ಲಿ ಮೌಲ್ಯಗಳ ಅವನತಿಯಾಗುತ್ತಿರುವುದು  ಅವನ್ನು ಕಾಪಾಡಿಕೊಳ್ಳಬೇಕಾದ ಆನಿವಾರ್ಯತೆಯನ್ನು ಒತ್ತಿ ಹೇಳುತ್ತವೆ. ಸಂಸ್ಕೃತಿ ಪರಂಪರೆ ಸದಾಶಯಗಳ ಹರಿಕಾರನಾಗಬೇಕಾದ ಕವಿಯ ಮಹತ್ವವನ್ನು ಎತ್ತಿ ಹಿಡಿಯುತ್ತವೆ.  ಕವಿ ಸಾಮಾಜಿಕ ವ್ಯವಸ್ಥೆಯ ಬದಲಾವಣೆಗೆ ಕಾರಣೀಭೂತನಾಗಬೇಕಾದ ಅಗತ್ಯತೆಗೆ,ನಡೆಸಬೇಕಾದ ಕ್ರಾಂತಿಗೆ ಸಾಕ್ಷಿಯೆನಿಸುತ್ತವೆ. ಸಾಮಾಜಿಕ ಕಳಕಳಿಯ ಹೇತುವಾಗುತ್ತವೆ.

ಹೀಗೆ ಈ ಸಂಕಲನದ ವಿವಿಧ ಕವನಗಳಲ್ಲಿ ಹೆಣ್ಣಿನ ಮನಃಸ್ಥಿತಿ ಪರಿಸ್ಥಿತಿಗಳ ಮೇಲೆ ಕ್ಷಕಿರಣ ಬೀರುವ ಮನೋಲೀನ ಕವನಗಳಿವೆ, ತಾಯಿಯ ಮೇಲಿನ ಪ್ರೇಮದ ಮಹತ್ವ ಉತ್ಕಟತೆ ಹೊರಹಾಕುವ ಭಾವಪೂರ್ಣತೆ ಇದೆ, ಕೆಲವೆಡೆ ದೈವಭಕ್ತಿಯ ಸುಳಿವು ಹೊಳಹುಗಳಿದ್ದರೆ, ದೇಶಭಕ್ತಿ ನಾಡಭಕ್ತಿ ಭಾಷಾ ಪ್ರೇಮದ ಆವೇಶಗಳನ್ನೂ ಕಾಣಬಹುದು.  ಪ್ರಕೃತಿಯ ಸೌಂದರ್ಯ ಚಿರಂತನತೆಗೆ  ದೃಷ್ಟಿ ಬೀರುವ ಪುಷ್ಟಿ ಕೊಡುವ ಸೃಷ್ಟಿಗಳೂ ಇವೆ.  ಒಟ್ಟಿನಲ್ಲಿ ಒಂದೇ ವಿಷಯಕ್ಕೆ ಸೀಮಿತವಾಗದೆ ಬಹುಮನ ವಿಹಾರಿಯಾದ ಇದು ವಿದ್ವಜ್ಜನ ಮನೋಪಹಾರಿಯೂ ಆಗಿದೆ.  ಓದುಗ ರಸಿಕನಿಗೆ ಷಡ್ರಸೋಪೇತ ರಸದೌತಣವಾಗಿದೆ.

ಒಬ್ಬೊಬ್ಬರದೇ ಕವಿತೆಗಳ ಸಂಗ್ರಹವೆಂದರೆ ಅವು ಮುತ್ತು, ರತ್ನ, ಪಚ್ಚೆ, ಹವಳ, ಮಾಣಿಕ್ಯ ಗಳನ್ನು ಬಿಡಿಬಿಡಿಯಾಗಿ ಬೇರೆಬೇರೆಯಾಗಿ ಪೋಣಿಸಿದ ಮಾಲೆಗಳಂತೆ.  ಒಬ್ಬರದೇ ಅಂತಸ್ಸತ್ವ ಅಲ್ಲಿ ಅಂತಃಸ್ಸರಿತೆಯಾಗಿ ಹರಿಯುತ್ತಾ ಓದುಗನಲ್ಲಿ ಅಂತರ್ಧಾನವಾಗಿ ಲೀನವಾಗುತ್ತದೆ.  ಈ ರೀತಿ ಬೇರೆ ಬೇರೆಯವರ ಕೃತಿಗಳನ್ನು ಸಂಕಲಿಸಿದಾಗ ಅದು ಮುತ್ತು, ರತ್ನ, ಪಚ್ಚೆ, ಹವಳ ಮಾಣಿಕ್ಯಗಳನ್ನು ಕುಂದಣದಲ್ಲಿಟ್ಟ ರತ್ನಹಾರದಂತೆ ಶೋಭಿಸುತ್ತದೆ . ಚೆಲುವು ನೂರ್ಮಡಿಸುತ್ತದೆ . ಅಂತಹ ಚಿನ್ನದ ಸರಿಗೆಯಲ್ಲಿ ನೇದಿರುವ ಸುಂದರ ಮಾಲಿಕೆ ಕನ್ನಡಮ್ಮನಿಗೆ ಕಂಠೀಹಾರವಾಗಿದೆ.

ತಮ್ಮ ಪ್ರಸ್ತಾವನೆಯಲ್ಲಿ ಸಂಪಾದಕರ ಈ ನುಡಿಗಳು ಸಂಕಲನದ ಪರಿಚಯ ಹೇಳುತ್ತವೆ.  ” ಇದೊಂದು ಮಾನವ ಬದುಕಿನ ಸುತ್ತಮುತ್ತ ಜರುಗುತ್ತಿರುವ ಎಲ್ಲ ವಿದ್ಯಮಾನಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾದ ಕೃತಿಯಾಗಿದೆ.” ನೆನಪಿರಲಿ” ಸಂಕಲನದ ಕವಿತೆಗಳು ಸಹೃದಯತೆಯನ್ನು ಕಟ್ಟಿಕೊಟ್ಟ ಕಾವ್ಯ ಕಲಾಕೃತಿಯಂತಿವೆ.”

ನಾನು ಗಮನಿಸಿದ ಮತ್ತೊಂದು ಅಂಶವೆಂದರೆ ಇಲ್ಲಿ ಕಿರಿಯ ಕವಿಗಳು ಅಂದರೆ ಪ್ರೌಢಶಾಲಾ ವಿದ್ಯಾರ್ಥಿನಿಯರು ಹಾಗೂ ತಾಂತ್ರಿಕ ಕಾಲೇಜಿನಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿನಿಯರು ಬರೆದ ಕವನಗಳಿಗೂ ಪ್ರಾತಿನಿಧ್ಯ ದೊರಕಿರುವುದು. ನಮ್ಮ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ತನ್ಮೂಲಕ ಕಾಪಿಡುವ ಗುರುತರ ಜವಾಬ್ದಾರಿ ಇಲ್ಲಿ ತಕ್ಕಮಟ್ಟಿಗೆ ನಿರ್ವಹಣೆಯಾಗಿದೆ ಎಂಬುದು ಸ್ತುತ್ಯಾರ್ಹ.

೧೨೦ ಕವಿಭಾವಸುಮಗಳ ಹೂಹಾರದಿಂದ ತಾಯಿ ಭುವನೇಶ್ವರಿಯನ್ನು ಅಲಂಕರಿಸಿ ಗೌರವಿಸಿದ ಹೂವಾಡಿಗ ಸ ರಾ ಸುಳಕೂಡೆ ಅವರಿಗೆ ಆಭಿನಂದನೆಗಳು. ಇದು ನೆನಪಿರಲಿ ಎಂದು ನೆನಪಿಸದೆಯೇ ನೆನಪಿನಲ್ಲಿ ಉಳಿಯುವಂತಹ ಕೃತಿ.

ಕಲೆಯು ನಿಡಿದು ಕಾಲವೋ ಕಿರಿದು ಎಂದು ಸಾರುತ್ತಾ ನಡೆದಷ್ಟೇ ದಾರಿ ಪಡೆದಷ್ಟೇ ಭಾಗ್ಯ ಎನ್ನುವ ವೇದಾಂತವನ್ನ ಸಾರುವ  ಪುತಿನ ಅವರ ಈ ಸಾಲುಗಳೊಂದಿಗೆ  ವಿರಾಮ.

ಚಿತ್ತವ ಹಗುರಾಗಿಸಿ ಉಫ್ ಎನ್ನುತ ಎತ್ತೆತ್ತಲೋ ಕವಿ ತೂರುವನು
ಹತ್ತುವೆಡೆಯೊಳಚ್ಚಯನೆ  ಸಮೆವನು
ಹೊತ್ತೊಡನಮೃತಕೆ ಹೊರುವನು


ಸುಜಾತಾ ರವೀಶ್

Leave a Reply

Back To Top