ಕಾಲ್ಪನಿಕ ಬರಹ
ಮಧುರಾ ಗಾಂವ್ಕರ್
ಒಂದು ಸಂಭಾಷಣೆ–ಕರವ_ಪಿಡಿಯೋ
ರಾಮ: ” ಕರವಬಿಡಲಾರೆನು ನಲ್ಲೆ ಹೆದರದಿರು ಬಾಲೆ..ಬಾರೇ ಬಾ ಗೆಳತಿ ಇತ್ತ ಬಾ ಮನದೊಳಗೆ ಬಂದು ನೆಲೆಯೂರಿದಂತೆ ತೋರೆಯ ದಡದಿ ಮೆಲ್ಲನೇರು ಬಾ. … ಇನ್ನೊಂದು ಕರವ ಪಾದಕಿಡಲೇನು ಸಖಿ… ನಿನ್ನ ಮೃದುವಾದ ಪಾದವು ಅದೆಷ್ಟು ನೊಂದಿದೆಯೋ , ಮುಂದಕಡಿಯಿಡಲಾಗದಷ್ಟು ಮೆತ್ತನೇರಿಬಿಡು ಈ ಕಡಿದಾದ ಬಂಡೆಯ ದಡವ… ಭುಜದ ಮೇಲೆ ಹೊತ್ತು ನಿನ್ನ ಮೊಗನೋಡುತ್ತಾ ಸಾಗಿಬಿಡುವೆ ಗಮ್ಯಸ್ಥಳವ! ಕೆಲವರನ್ನು ,ಕೆಲವು ಪ್ರದೇಶವನ್ನು ದೂರದಿಂದ ನೋಡುವುದು ಮಾತ್ರ ಚೆಂದ…! ಜಲಪಾತದ ಅಂದವನ್ನು ಅತೀ ಹತ್ತಿರದಿಂದ ನೋಡುವುದು ಭೀಕರ ಗೆಳತಿ…! ತುಂತುರು ಹನಿಗೆ ಕಾಲು ಜಾರೀತು…ಆಳವಾದ ಗುಂಡಿಗಳಿವೆ.. ಸುತ್ತಲೂ ವಿಷಕಾರಿ ಜಂತುಗಳಿರಬಹುದು ..ರಾಣಿ ನೀನು ಅರಮನೆಯಲ್ಲಿರುವುದ ಬಿಟ್ಟು ಕಠಿಣವಾದ ಬದುಕೇ ಬೇಕೆಂದು ಹಟ ಮಾಡಿದೆಯಲ್ಲ.ಸೀತಾ ಸೀತಾ ಬಾ….”
ಸೀತೆ: ” ಹೆದರುವಿರೇಕಷ್ಟು ನೀವು.. ನಿಮ್ಮೆದೆಯೊಳಗೇ ನಾನು ನೆಲೆನಿಂತಿರುವಾಗ ಹಿಡಿದಿರುವ ಕರವು,ಸಪ್ತಪದಿ ತುಳಿದ ಪಾದವೆಲ್ಲಿ ಜಾರೀತು ಆರ್ಯ.. ನಿಮ್ಮೆದೆಗೆ ಒರಗಿದರೆ ಅದೇ ಅರಮನೆಯ ಸುಪ್ಪತ್ತಿಗೆ. ದೇಹದಿಂದ ಕಣ್ಣನ್ನು ಬೇರ್ಪಡಿಸಿದರೆ ಅ ನಯನ ಜಗವ ನೋಡಿತೇನು? ಅಂತೆಯೇ ನಾನು.. ಇನಿಯಾ … ಯಾವ ಪರೀಕ್ಷೆ, ತ್ಯಾಗ, ನೋವಿಗೂ ಬೆದರಲಾರೆ ನಾನು.ಎನ್ನೆದೆಯಲ್ಲಿ ನೀವು …, ನಿಮ್ಮ ಪ್ರೇಮವೇ ತುಂಬಿರುವಾಗ…!”
#ರಾಮ: “ಸೀತಾ..ಲೌಕಿಕ ಜಗದ ಹೆಜ್ಜೆಯಲ್ಲಿ ಜೊತೆಯಾಗೇ ಸಾಗಬೇಕೆಂದು ಜೊತೆಗೂಡಿದವರು ನಾವು ಅಹುದು.. ವಿಧಿಯೊಮ್ಮೆ ಪರೀಕ್ಷೆಯೊಡ್ಡಿದರೂ ನಮ್ಮೊಳಗಿನ ಪ್ರೀತಿ ಇನಿತೂ ಬಾಡದು ನಲ್ಲೆ. ಜಾನಕಿ ನೀ ನೈದಿಲೆ ಅರಳಿ ನಗುತಿರಬೇಕು ನೀನು ಮೃದು ಮಧುರ. ನಾನೋ ನೀಲ ಮೇಘ ವರ್ಣನು ಆಜ್ಞಾಧಾರಕನು ನನ್ನ ನೋವನ್ನೊಂದೇ ಅಲ್ಲ ನಿನ್ನ ಮತ್ತು ಜಗದ ನೋವನ್ನೆಲ್ಲ ಹೊರಬೇಕೆಂದೇ ಬಯಸುವವ ಗೆಳತಿ. ಮೆತ್ತನೇರು ಬಾ ಭುಜವ.”
ಸೀತೆ “ಕಂಗಳು ಸಂಧಿಸಿದಾಗ ಬೇರೆ ಜಗವು ಕಾಣದು ಗೆಳೆಯ… ನೀವೇ ಎನ್ನ ಲೋಕವು ..ಆರ್ಯ….! ನೀವೇ ಪಿಡಿದೆತ್ತಿರಿ ಎನ್ನನು…ಕಲ್ಲೂ ಹೆಣ್ಣಾಗುವಳಂತೆ ನಿಮ್ಮ ಸ್ಪರ್ಷಕೆ… !! ಮೃಗಖಗಗಳಿಗೂ ಭಕ್ತಿ ಮೂಡುವುದಂತೆ ..!!!. ರಾಮ… ಹೃದಯದೊಳಗೆ ನಿಮ್ಮನ್ನೇ ಹೊತ್ತಿರುವಿದರಿಂದ ನಿಮ್ಮ ನೋವು ಎನಗೆ ..ಎನ್ನ ನೋವು ನಿಮಗೆ…!!ಸೀತಾರಾಮರ ಭಾವ ಭಿನ್ನತೆಯು ನಮಗೆ ಸಾಧ್ಯವಿಲ್ಲದ ವಿಷಯ..! ಸದಾ ನಿಮ್ಮ ಹೆಗಲೇರಿದ ಭಾವಕ್ಕೆ ಮತ್ತು ಪರಿಸ್ಥಿತಿಗೆ ಜೊತೆಯಾಗಬೇಕು ನಾನು . ನಿಮ್ಮ ಹೆಗಲೇರಿದ ಜವಬ್ದಾರಿ ನಾನಾಗುವುದಕ್ಕಿಂತ … ಗೆಳೆಯ ನಿಮ್ಮ ಹೆಗಲೇರಿದ ಅನ್ಯ ಜವಾಬ್ದಾರಿಗಳಿಗೆಲ್ಲ ನೀವಾಲೋಚಿಸಿದ್ದಕ್ಕೆ ಕಾರ್ಯತತ್ಪರಗೊಳ್ಳಲು ನಾನು ನೀನೆಂಬ ಬೇಧವ ತೊರೆದು ಎನ್ನ ಬಾಳ ನಿರ್ಧರಿಸಲು ಈ ಕರವನಿತ್ತಿರುವೆ ನಲ್ಲ. ಕಷ್ಟಗಳನುತ್ತರಿಸಿ ಗೆಲ್ಲಬಲ್ಲೆ ಗೆಳೆಯ.., ನೀವೇ ಕರಪಿಡಿದರೆ ಕಾರ್ಪಣ್ಯ ದಾರಿಯೂ ಸ್ವರ್ಗವಪ್ಪುದಲ್ಲ ಎಂಬ ಭಾವವಷ್ಟೇ…! ಅನುಸರಿಸಿ ಬರುವೆ ನಲ್ಲ. ಹೆಗಲೇರಿದಪ್ಪಣೆಯ ಭಾರವೇ ಹೆಚ್ಚಿರುವಾಗ ಭುಜವೇರಿ ಇಳಿಸಲಾರದ ಹೊರಲಾಗದ ಹೊರೆಯಾಗಲಾರೆ ಇನಿಯ… ರಾಮ ಬಂದೆ ನಿನ್ನೆಡಿಗೆ….ಕರವ ಪಿಡಿಯೋ…!!!”
ಮಧುರಾ ಗಾಂವ್ಕರ್
ಸುಂದರ ಸಂವಾದ
ಸೂಪರ್ ಮುದ್ದು