ಕಾವ್ಯಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಹಂಬಲ..!
ಹೃದಯವನೊಮ್ಮೆ ಹೊರತೆಗೆದು
ಅಂಟಿದ್ದ ಕಸ ಕಲ್ಮಶಗಳ ತೊಳೆದು
ಸ್ವಚ್ಚಗೊಳಿಸಿ ಮರಳಿಯಿಡುವಂತಿದ್ದರೆ
ಎಷ್ಟು ಶುಭ್ರವಿರುತಿತ್ತು ಎದೆಯಂಗಳ.!
ಹಗೆ-ಮತ್ಸರದÀ ಕೊಳೆಗಳ ಕಳೆದು
ರಾಗ-ದ್ವೇಷ ಸ್ವಾರ್ಥಗಳ ಜಿಡ್ಡಳಿದು
ಪರಿಶುಭ್ರವಾಗಿಸಿ ಕಾಪಿಡುವಂತಿದ್ದರೆ
ಬೆಳದಿಂಗಳಾಗಿರುತಿತ್ತು ಭಾವದಂಗಳ.!
ಜಾರಿದ ನುಡಿಗಳ ಥಟ್ಟನೆ ಹೆಕ್ಕಿತೆಗೆದು
ನೊಂದ ಕಂಗಳ ಕಂಬನಿ ತೊಡೆದು
ನರಳಿದ ಹೃದಯ ಅರಳಿಸುವಂತಿದ್ದರೆ
ನಲಿದು ನಳನಳಿಸುತಿತ್ತು ಬಂಧದಂಗಳ.!
ಮೆದುಳನ್ನೊಮ್ಮೆ ಹಾಗೆ ಹೊರಗೆಳೆದು
ದುರ್ಮತಿ ವಿಕೃತಿ ವಿಕಾರಗಳ ಹೊಡೆದು
ಪ್ರಾಂಜಲಗೊಳಿಸಿ ಒಳಗಿಡುವಂತಿದ್ದರೆ
ಎಷ್ಟು ನಿರ್ಮಲವಿರುತಿತ್ತು ಚಿತ್ತದಂಗಳ.!
ಕೋಪ ಕುಯುಕ್ತಿ ಕ್ರೌರ್ಯಗಳ ಕಡಿದು
ಕುತಂತ್ರ ಕೆಡಕು ಕೆಟ್ಟಕ್ರಿಮಿಗಳ ಬಡಿದು
ಕುಶಲ ಸದೃಢ ಸ್ವಾಸ್ತ್ಯವಾಗಿಸುವಂತಿದ್ದರೆ
ನಿರೋಗಿಯಾಗಿರುತಿತ್ತು ಮನದಂಗಳ.!
ಮಾಡಿದ ಪಾಪಗಳ ತಕ್ಷಣ ತಿಳಿದು
ಘಾಸಿಗೊಂಡ ಬದುಕುಗಳ ಪೆÇರೆದು
ಬೆಂದ ಜೀವ ಶಾಂತವಾಗಿಸುವಂತಿದ್ದರೆ
ನೆಮ್ಮದಿ ನಿರಾಳವಿರುತಿತ್ತು ಜಗದಂಗಳ.!
ಹೃದಯ ಮೆದುಳುಗಳ ನಿತ್ಯ ತೊಳೆದು
ಪ್ರೀತಿ ಸ್ನೇಹ ನಿಸ್ಪೃಹತೆಗಳ ಸ್ಫುರಿದು
ಶ್ರದ್ದೆ ಧ್ಯಾನದಿಂದ ಚೈತನ್ಯವಾಗಿಸುವಂತಿದ್ದರೆ
ಸದಾ ನಂದನವಾಗಿರುತಿತ್ತು ಬಾಳಂಗಳ.!
ಎ.ಎನ್.ರಮೇಶ್.ಗುಬ್ಬಿ.