ವತ್ಸಲಾ ಶ್ರೀಶ ಕೊಡಗು-ಉದ್ಯೋಗಸ್ಥ ಮಹಿಳೆಯರು ಎದುರಿಸಬೇಕಾಗಿರುವ ಸಮಸ್ಯೆಗಳು

ಕನ್ನಡ ರಾಜ್ಯೋತ್ಸವ ವಿಶೇಷ

ವತ್ಸಲಾ ಶ್ರೀಶ ಕೊಡಗು-

ಉದ್ಯೋಗಸ್ಥ ಮಹಿಳೆಯರು

ಎದುರಿಸಬೇಕಾಗಿರುವ ಸಮಸ್ಯೆಗಳು

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ
ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ
ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂಬುದು ಈ ಶ್ಲೋಕದ ಅರ್ಥವಾಗಿದೆ..

ವೇದಗಳ ಕಾಲದಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನಮಾನಗಳನ್ನು ನೀಡಲಾಗಿತ್ತು ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಆದರೆ ಕಾಲಕಳೆದಂತೆ ಸಂಪ್ರದಾಯಗಳು ಆಚಾರ ವಿಚಾರಗಳು ಸ್ತ್ರೀ ಶೋಷಣೆಯ ರೀತಿಯಲ್ಲಿ ಬದಲಾವಣೆಯಾಗುತ್ತಾ ಬಂದಿರುವುದು ಖೇದಕರ ವಿಚಾರ…ಇದರ ಮೂಲಕ ಹೆಣ್ಣು ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಾ ಬಂದಳು..ಕೆಲವೆಡೆ ಈಗಲೂ ಅಮಾನುಷ ರೀತಿ ನೀತಿಗಳು ಜೀವಂತವಾಗಿರುವ ಬಗ್ಗೆ ಆಗೊಮ್ಮೆ ಈಗೊಮ್ಮೆ ಕೇಳುತ್ತಲೇ ಇರುತ್ತೇವೆ..

ಆದರೂ ಇತ್ತೀಚಿನ ದಿನಗಳಲ್ಲಿ ಸ್ತ್ರೀ ಯರಿಗೆ ಎಲ್ಲಾ ರಂಗಗಳಲ್ಲೂ ಸಮಾನ ಅವಕಾಶಗಳನ್ನು ನೀಡಲಾಗುತ್ತಿದೆ..ಎಲ್ಲಾ ಹೆಣ್ಣು ಮಕ್ಕಳೂ ತಮ್ಮ ಜೀವನವನ್ನು ಸೀಮಿತಗೊಳಿಸಿಕೊಳ್ಳದೆ ..ತನ್ನ ಸುತ್ತ ಪರಿಧಿಯನ್ನು ಹಾಕಿಕೊಳ್ಳದೆ ತಮ್ಮ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ..ಹಾಗೇ ಭಾವನಾತ್ಮಕವಾಗಿಯೂ ಗಟ್ಟಿಯಾಗಿದ್ದಾರೆ..ಅದರ ಫಲವಾಗಿ
ಈಗ ಅತ್ಯಂತ ಹೆಚ್ಚಾಗಿ ಮಹಿಳೆ ಹೆಜ್ಜೆ ಇರಿಸಿರುವುದು ಉದ್ಯೋಗ ಕ್ಷೇತ್ರದಲ್ಲಿ.ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸ್ವಾವಲಂಬನೆಗಾಗಿ ತಂದೆತಾಯಿಯರು  ಹೆಚ್ಚು ಒತ್ತು ಕೊಡುತ್ತಿದ್ದಾರೆ..ಹಾಗೆ ಸ್ವತಃ ಹೆಣ್ಣು ಮಕ್ಕಳೂ ಶಿಕ್ಷಣ ಹಾಗೂ ಉದ್ಯೋಗದ ಗುರಿ ಹೊಂದಿರುತ್ತಾರೆ.ಹಾಗೆಂದ ಮಾತ್ರಕ್ಕೆ  ಹೆಣ್ಣು ಹಾಗೂ ಉದ್ಯೋಗ ಇದು ಅಷ್ಟು ಸುಲಭದ ಮಾತಲ್ಲ.  ಉದ್ಯೋಗಿ ಮಹಿಳೆ ಉದ್ಯೋಗ ಹಾಗೂ ಸಂಸಾರ ಎರಡನ್ನೂ ಹೊಂದಿಸಿಕೊಂಡು ಹೋಗುವುದು ನಮ್ಮ ಸಮಾಜದಲ್ಲಿ ಅನಿವಾರ್ಯ ಎಂದೇ ಹೇಳಬಹುದು. ಏಕೆಂದರೆ ಹಿಂದಿನಿಂದಲೂ ಸಂಸಾರದ ಜವಾಬ್ದಾರಿ ಹೆಣ್ಣಿಗೇ..ಚಕ್ರವೊಂದು ಸುತ್ತಿದಂತೆ ಪ್ರತಿದಿನ ಅದೇ ಅಡುಗೆ ಮನೆ ಕೆಲಸ ಮಕ್ಕಳ ಬೇಕು ಬೇಡಗಳು, ಗಂಡನ ಬೇಕು ಬೇಡಗಳು, ಹಿರಿಯರು ಇದ್ದರೆ ಅವರ ಇಡೀದಿನದ ಅವಶ್ಯಕತೆಗಳು.ಇವೆಲ್ಲವನ್ನೂ ನಿಭಾಯಿಸಿಕೊಂಡು ತನ್ನನ್ನೂ ಸಂಭಾಳಿಸಿಕೊಂಡು ಉದ್ಯೋಗಕ್ಕೆ ಹೋಗಬೇಕಾಗುತ್ತದೆ..ನಮ್ಮ ಭಾರತದ ಹೆಚ್ಚಿನ ಉದ್ಯೋಗಿ ಮಹಿಳೆಯರ ಬದುಕಿನ ವಾಸ್ತವ ಕೂಡಾ ಇದಾಗಿದೆ..ಆಲೋಚಿಸಿದಾಗ  ಇದೆಲ್ಲಾ ಹೆಣ್ಣಿನಿಂದ ಹೇಗೆ ಸಾಧ್ಯವಾಗುತ್ತದೆ ಎಂದೆನಿಸುತ್ತದೆ..ಬಹುಶಃ ಹಿಂದಿನಿಂದ ಹೇಳಿಕೊಂಡು ಬಂದಂತೆ ಹೆಣ್ಣು ಒಂದು ಶಕ್ತಿ??

        ಹಾಗೆಂದು ಅವಳಿಗೆ ಹೆಣ್ಣು ಒಂದು ಶಕ್ತಿ ಎಂಬ ಪಟ್ಟವೊಂದನ್ನು ಕೊಟ್ಟು ಅವಳನ್ನು ಅದೇ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ..? ಒಂದು ಉದಾಹರಣೆ ತೆಗೆದುಕೊಳ್ಳುವುದಾದರೆ ಒಂದು ಮನೆಯಲ್ಲಿ ಉದ್ಯೋಗಿ ಮಹಿಳೆಯೊಬ್ಬಳು ಗಂಡ, ಇಬ್ಬರು ಮಕ್ಕಳು, ಅತ್ತೆ ಮಾವ ಎಲ್ಲರ ಕೆಲಸಗಳನ್ನೂ ಮಾಡಿ ಕೆಲಸಕ್ಕೂ ಹೋಗುತ್ತಿದ್ದಳು..ಅವಳಿಲ್ಲದೆ ಒಂದು ಹುಲುಕಡ್ಡಿಯೂ ಅಲ್ಲಾಡುತ್ತಿರಲಿಲ್ಲ..ಬೆಳಿಗ್ಗೆ ಐದು ಗಂಟೆಗೆ ಎದ್ದು ಕೆಲಸ ಮಾಡಿ ೯ ಗಂಟೆಗೆ ಕಛೇರಿಗೆ ಹೋಗಿ ಸಾಯಂಕಾಲ ೫ಗಂಟೆಗೆ ಬಂದವಳು ರಾತ್ರಿ ೧೦ರ ವರೆಗೂ ದುಡಿಯುತ್ತಿದ್ದಳು..ಒಂದು ವಸ್ತುವನ್ನೂ ಆ ಕಡೆಯಿಂದ ಈ ಕಡೆಗೆ ಇಡದ ಗಂಡ..ಅಮ್ಮಾ ಎನ್ನದೆ ಒಂದು ಕೆಲಸವೂ ಮಾಡದ ಮಕ್ಕಳು, ಸೊಸೆಯಿಲ್ಲದೆ ದಿನ ಕಳೆಯಲಾಗದ ಅತ್ತೆ ಮಾವ..ಎಲ್ಲರೂ ಪ್ರೀತಿಸುವವರೇ..ಆದರೆ ಅವಳ ಈ ಕೆಲಸಗಳು  ಅವರ ದೃಷ್ಟಿಯಲ್ಲಿ ಮನೆಯ ಹೆಣ್ಣು ಅಂದ ಮೇಲೆ ಸಾಮಾನ್ಯವಾಗಿತ್ತು.ಹೀಗಿರುವಾಗಲೇ ಒಂದು ದಿನ ಸೊಸೆ ಅಚಾನಕ್ ಆಗಿ ದುರ್ಮರಣಕ್ಕೀಡಾಗುತ್ತಾಳೆ..ಇಡೀ ಸಂಸಾರ ಅವಳನ್ನು ನಂಬಿ ಕೊಂಡಿತ್ತು..ಸಂಸಾರ ಅಲ್ಲೋಲ ಕಲ್ಲೋಲವಾಗಿರಬಹುದಲ್ಲವೇ..ಖಂಡಿತಾ …ಅಲ್ಲೋಲ ಕಲ್ಲೋಲವಾಯಿತು..ಆದರೆ..ಎಷ್ಟು ದಿನ?? ೧೩ ದಿನ??? ೧೫ ದಿನ??ಒಂದು ತಿಂಗಳು?….ಅಷ್ಟೇ.. ಮತ್ತೆ ಆ ಮನೆಯಲ್ಲಿ ಎಲ್ಲಾ ಮಾಮೂಲಿಯಂತೆ ನಡೆಯುತ್ತಿತ್ತು..ಕೆಲಸದವಳೊಬ್ಬಳನ್ನು ನೇಮಿಸಿ ಕೊಳ್ಳುತ್ತಾರೆ. ಎಲ್ಲವೂ ಎರಡು ತಿಂಗಳಲ್ಲಿ ಸಹಜತೆಯತ್ತ  ಮರಳುತ್ತದೆ.ಅವಳಿಲ್ಲದ ಕೊರತೆ ಕೆಲಸಕಾರ್ಯಗಳಲ್ಲಿ ಕಾಣಲಿಲ್ಲ.. ಬಹುಶಃ ಇದನ್ನು ಮೊದಲೇ ಮಾಡಿದ್ದರೆ.. ಸಾಯುವ ಮುನ್ನ ಅವಳಿಗಾಗಿ ಬದುಕಿನಲ್ಲಿ ಕೆಲವು ಸಮಯ ಸಿಗುತ್ತಿತ್ತೇನೋ…ಈಗ ನಮಗೆಲ್ಲರಿಗೂ ಅವಳ ಬಗ್ಗೆ  ಕರುಣೆ ಮೂಡುತ್ತದೆ. ಉಳಿದವರೆಲ್ಲರೂ ತಪ್ಪಿತಸ್ಥರು ಎಂದೆನಿಸುತ್ತದೆ.. ಆದರೆ ಹಾಗಲ್ಲ ಅವರೆಷ್ಟು ತಪ್ಪಿತಸ್ಥರೋ ಅಷ್ಟೇ ಅವಳೂ ಕೂಡ ತಪ್ಪಿತಸ್ಥಳು. ಅವಳಿಗೂ ಎಲ್ಲರಂತೆ ಬದುಕುವ ಹಕ್ಕನ್ನು ಅವಳು ಪಡೆದುಕೊಳ್ಳಬಹುದಿತ್ತು. ಅವಳು ಅಂತಹ ಒಂದು ಆಲೋಚನೆಯನ್ನು ಮಾಡಬಹುದಿತ್ತು.. ತನ್ನ ಒತ್ತಡದ ಜೀವನಕ್ಕೆ ಬದಲಿ ವ್ಯವಸ್ಥೆಯನ್ನು ಅವಳು ಕಂಡುಕೊಳ್ಳಬಹುದಿತ್ತು…  ಇನ್ನೊಂದು ಉದಾಹರಣೆ ತೆಗೆದುಕೊಳ್ಳುವುದಾದರೆ ಇಲ್ಲೂ ಒಬ್ಬಳು ಉದ್ಯೋಗಿ ಮಹಿಳೆ… ಎಲ್ಲಾ ಜವಾಬ್ದಾರಿಗಳು ತನಗೆ ಬಳುವಳಿಯಾಗಿ ಬಂತೇನೋ ಎನ್ನುವಷ್ಟರ ಮಟ್ಟಿಗೆ ತನ್ನನ್ನು ಮನೆಗಾಗಿ ಅರ್ಪಣೆ ಮಾಡುತ್ತಾಳೆ..ಗಂಡನ ಸಮಾನವಾಗಿ ದುಡಿದು ಸಂಪಾದಿಸುತ್ತಾ ಎಲ್ಲರ ಬೇಕು-ಬೇಡಗಳ ಜೊತೆಗೆ ಮನೆಯ ಖರ್ಚುವೆಚ್ಚವನ್ನೂ ನೋಡಿಕೊಳ್ಳುತ್ತಿದ್ದಳು.ದುಡಿಯುವ ಯಂತ್ರವೇನೋ ತಾನು ಎನಿಸುತ್ತದೆ..ಹಾಗಿರುವಾಗಲೇ ಅವಳಿಗೊಂದು ಪ್ರಶ್ನೆ ಮೂಡುತ್ತದೆ ತಾನಿಷ್ಟು ಮಾಡಿದರೂ ಯಾರೂ ತನ್ನನ್ನು ವಿಶೇಷವಾಗಿ ಏನೂ ನಡೆಸಿಕೊಳ್ಳುತ್ತಿಲ್ಲ. ಈಗೀಗ ಮೆನೋಪಾಸ್ ಸಮಯ ಬೇರೆ. ಮಾನಸಿಕ ಒತ್ತಡದ ಜೊತೆಗೆ ಶರೀರವೂ ಸಹಕರಿಸುತ್ತಿಲ್ಲ ಮುಖದಲ್ಲಿ ಬಳಲಿಕೆ ಕಂಡರೂ ತಮ್ಮಪಾಡಿಗೆ ಇರುವ ಮನೆಯ ಸದಸ್ಯರನ್ನು ಗಮನಿಸಿದ್ದಳು.ಅಸಹಾಯಕತೆಗೆ ಕಣ್ಣಲ್ಲಿ ನೀರು ಜಿನುಗಿದ್ದೂ ಇದೆ. ಕೊನೆಗೊಂದು ನಿರ್ಧಾರಕ್ಕೆ ಬರುತ್ತಾಳೆ. ಒಂದೊಂದೇ ಸಣ್ಣ ಪುಟ್ಟ ಕೆಲಸ ಗಳಿಗೆ ಗಂಡನನ್ನು ನಾಜೂಕಿನಿಂದಲೇ ಸಹಾಯ ಕೇಳುತ್ತಾಳೆ.. ಕೆಟ್ಟವನೇನು ಅಲ್ಲದ ಗಂಡನಿಗೆ ಮೊದಮೊದಲು ಇದು ಪ್ರಶ್ನಾರ್ಥಕವಾದರೂ ನಗುನಗುತ್ತಲೇ ಕೇಳಿಕೊಳ್ಳುವ ಹೆಂಡತಿಗೆ ಅಷ್ಟಿಷ್ಟು ಕೈಜೋಡಿಸಲು ಇಲ್ಲವೆನ್ನಲಾರದಾದ.
ಕೊನೆಗೆ ಅರ್ಧಕ್ಕೆ ಅರ್ಧ ಕೆಲಸಕ್ಕೆ ಕೈಜೋಡಿಸುವುದು ಅವನಿಗೆ ಅಭ್ಯಾಸವಾಗುತ್ತದೆ. ಮಕ್ಕಳಿಗೆ ಎಲ್ಲಾ ಕೆಲಸ ಕೈಕಾಲಿಗೆ ಮಾಡಿ ಕೊಡಬೇಕಾಗಿತ್ತು…  ಮಕ್ಕಳಿಗೂ ಅವರವರ ಕೆಲಸಗಳನ್ನು  ಸ್ವಲ್ಪ ಸ್ವಲ್ಪ ವಾಗಿ  ಹೊರಿಸುತ್ತಾಳೆ… ಅವರ ಯಾವುದೇ  ಕೆಲಸಕ್ಕೆ ತಲೆಹಾಕಲು ಹೋಗುತ್ತಿರಲಿಲ್ಲ.. ಒಮ್ಮೊಮ್ಮೆ ಕೆಲವು ಅಸಂಬದ್ಧಗಳೂ ನಡೆದರೂ ಈಗೀಗ ಮಕ್ಕಳು ಅವರವರ ಕೆಲಸವನ್ನು  ಕಷ್ಟವೇ ಅಲ್ಲ ಎನ್ನುವಂತೆ ಮಾಡುತ್ತಿರುವುದನ್ನು ಕಂಡಾಗ ಮಕ್ಕಳೂ ಜವಾಬ್ದಾರಿ ಕಲಿತರೆಂದು ಅವಳಿಗೆ ಹಿಗ್ಗು.  ಅವರೆಲ್ಲ ಮಾಡುತ್ತಿಲ್ಲ ಎನ್ನುವುದನ್ನಷ್ಟೇ ಯೋಚಿಸುತ್ತಿದ್ದೆ ನಾನ್ಯಾವತ್ತೂ ಅವರ ಸಹಾಯ ಕೇಳಿರಲಿಲ್ಲ.. ಈಗ ನಕ್ಕು ಹಗುರಾಗುತ್ತಾಳೆ..ಆದರೆ ಇಲ್ಲೂ ಒಂದು ಸಣ್ಣ ಸಂಗತಿ ನುಸುಳುತ್ತದೆ..ಬಂಧು ಬಳಗ ಕೊಂಕು ಮಾತನಾಡಲು ಶುರು ಮಾಡುತ್ತಾರೆ..ಗಂಡನ ಬಳಿ ಕೆಲಸ ಮಾಡಿಸಿಕೊಳ್ಳುವ ಅಥವಾ ಗಂಡನನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡ ಅಹಂಕಾರಿ ಹೆಣ್ಣು..ಎಂದು ಪಟ್ಟ ಕಟ್ಟುತ್ತಾರೆ..ಗಂಡು ತನ್ನ ತಂದೆ ತಾಯಿ ಅಕ್ಕತಂಗಿಯರಿಂದ ಹಿಡಿದು ಎಲ್ಲರೂ ಹೆಂಡತಿಯ ಗುಲಾಮ ಎಂಬ ಪಟ್ಟಿಕೊಳ್ಳಬೇಕಾಗುತ್ತದೆ..ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ ಇಂತಹ ಮಾತುಗಳು ಬರುವುದು ಹೆಚ್ಚಾಗಿ ಹೆಣ್ಣಿನಿಂದಲೇ..ಆಗೆಲ್ಲಾ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಗಾದೆ ಎಷ್ಟು ಸರಿ ಇದೆ ಅನಿಸುತ್ತದೆ..

   ಈ ಮೇಲಿನ ಎರಡು ಉದಾಹರಣೆಗಳಿಂದ ಎಲ್ಲಾ ಹೆಂಗಸರ ಸಮಸ್ಯೆ ಇಷ್ಟು ಸುಲಭದಲ್ಲಿ  ಪರಿಹಾರವಾಗಲು ಸಾಧ್ಯವೇ.ಎಂಬ ಸಂಶಯ ಮೂಡುವುದು ಸಹಜ.. ಎಲ್ಲಾ ಗಂಡಸರಿಗೆ ಅನುಸರಿಸಿಕೊಂಡು ಹೋಗುವಂತಹ ಮನಸ್ಥಿತಿ ಇರುವುದಿಲ್ಲ…ತಾನು ಗಂಡಸು ಎಂಬ ಅಹಂ  ಅವರಲ್ಲಿ ತುಂಬಿಕೊಂಡಿರುತ್ತದೆ. ಇದು ಅವರ ತಪ್ಪಲ್ಲದಿದ್ದರೂ ಅವರು ಬೆಳೆದ ಪರಿಸರ ಅಥವಾ ಬೆಳೆಸಿದವರ ತಪ್ಪಾಗಿರಬಹುದು… ಈಗಲೂ ಸಂಪಾದನೆ ಇಲ್ಲದೆ ಮನೆಯಲ್ಲಿ ಸೋಮಾರಿಯಾಗಿ ಬಿದ್ದಿರುವ ಗಂಡಸರು ಎಷ್ಟೋ ಇದ್ದಾರೆ.. ಅವರನ್ನು ಸಹಿಸಿಕೊಂಡು ಸಂಸಾರವನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ.

    ಅದು ಹಾಗಾದರೆ ಇನ್ನು ಕೆಲವೆಡೆ ಹೆಣ್ಣನ್ನು ಶೋಷಿಸುವ ಅತ್ತೆ ಮಾವಂದಿರು ಇರುತ್ತಾರೆ… ಇಂತಹ ಸಂದರ್ಭದಲ್ಲಿ ಹೆಣ್ಣಿನ ಜೀವಮಾನ ಕಣ್ಣೀರಾಗುತ್ತದೆ…ಕೆಲವು ಕಡೆ ಹೆಣ್ಣು ದುಡಿಯಲು ಹೋಗುವುದು ಮರ್ಯಾದಸ್ತ ಹೆಣ್ಣುಮಗಳ ಲಕ್ಷಣವಲ್ಲ ಎಂಬ ಮೂಢ ಅಭಿಪ್ರಾಯವಿದೆ. ಹಾಗೆ ಮದುವೆಯ ನಂತರ ಉದ್ಯೋಗ ತೊರೆದು ತನ್ನ ನಿಜವಾದ ಅಸ್ತಿತ್ವವನ್ನು ಕಳೆದುಕೊಂಡ ಎಷ್ಟೋ ಹೆಣ್ಣು ಮಕ್ಕಳಿದ್ದಾರೆ..ಹೆಣ್ಣಿಗೆ ಇರುವ ಕಟ್ಟುಪಾಡು ಹಾಗೂ ಸಂಸಾರದಲ್ಲಿ ಹೊಂದಾಣಿಕೆ ಹಾಗೂ ಸಹಕಾರ ಇಲ್ಲದಿರುವುದು.ಹಾಗೂ ಬದಲಾಗದ ಪುರುಷ ಪ್ರಧಾನ ಸಮಾಜ ಇವುಗಳೂ‌ ಕೂಡಾ ಇದಕ್ಕೆಲ್ಲಾ  ಕಾರಣ ಎಂದರೂ ತಪ್ಪಾಗಲಾರದು.

ಇದಕ್ಕೇನು ಪರಿಹಾರ? ಈ ಹಿಂದೆ ಕೊಟ್ಟ ಉದಾಹರಣೆಗಳಂತೆ  ಹೆಣ್ಣು ಯಾವುದಾದರೂ ಒಂದು ಮಾರ್ಗವನ್ನು ಕಂಡುಕೊಳ್ಳಬೇಕು.ತನಗಾಗಿ ಬದುಕನ್ನು ಅನುಭವಿಸಬೇಕು..ತನ್ನ ಬದುಕನ್ನು ತನ್ನ ಹಕ್ಕಿನಂತೆ ಬದುಕಲು ಪ್ರಯತ್ನಿಸಬೇಕು.. ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಮಾತ್ರ ತನ್ನ ಬದುಕನ್ನು ಇನ್ನೊಬ್ಬರಿಗೆ ಅರ್ಪಿಸಿಕೊಳ್ಳಬೇಕು.. ಹೆಣ್ಣು ಬದಲಾದರೆ ಸಾಲದು ಗಂಡು ಕೂಡ ಬದಲಾಗಬೇಕು.. ಇದರಲ್ಲಿ ಗಂಡುಮಕ್ಕಳ ತಾಯಿಯಂದಿರ ಪಾತ್ರ ತುಂಬಾ ಇದೆ. ತನ್ನ ಮಕ್ಕಳಿಗೆ ಹೊಂದಾಣಿಕೆಯಿಂದ ಬಾಳುವುದನ್ನು ಕಲಿಸಿಕೊಡಬೇಕು ಹೆಣ್ಣು-ಗಂಡು ಎಂಬ ಭೇದವನ್ನು ಮಕ್ಕಳಲ್ಲಿ ತುಂಬಬಾರದು. ಹೆಣ್ಣಿನ ದೌರ್ಜನ್ಯದ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ತನ್ನ ಮನೆಯಲ್ಲಿ ಬೆಳೆಯುವ ಗಂಡು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು..ಆಗ ಮಾತ್ರ ಹೆಣ್ಣು ಮತ್ತು ಗಂಡು ಸಮಾಜದಲ್ಲಿ, ಮನೆಯಲ್ಲಿ ಸಮಾನತೆಯನ್ನು ಪಡೆಯಬಹುದು. ಹಾಗೂ ಮನೆಯ ಒಳ ಹೊರಗೆ ದುಡಿಯುವ ಮಹಿಳೆಯರ ಸಮಸ್ಯೆಗೆ ಪರಿಹಾರ ಸಿಗಬಹುದು..ಅದಲ್ಲದೆ ಈಗೀಗ ಹೆಣ್ಣು ಮಕ್ಕಳು ಉದ್ಯೋಗ ಪಡೆದುಕೊಳ್ಳುತ್ತಾರೆ..ಉದ್ಯೋಗ ಸಿಗದೆ ಮದುವೆಯಾಗಲಾರೆ ಎಂಬ ಹಟಕ್ಕೆ ಬೀಳುತ್ತಾರೆ..ಮುಂದೆ ಕೈತುಂಬಾ ಹಣ ಓಡಾಡುವಾಗ ಮದುವೆಯೇಕೆ..ಮಕ್ಕಳು ಸಂಸಾರ ಏಕೆ ..ಎಂದು ಯೋಚಿಸತೊಡಗುತ್ತಾರೆ..ಅಥವಾ ಮದುವೆಯಾದರೂ ಮೇಲೆ ಹೇಳಿದಂತೆ ಸಂಸಾರದ ಮಾದರಿ ಹೆಣ್ಣಾಗಿ ಬದುಕಬೇಕು ಅಂದಾಗ ಕಷ್ಟವಾಗುತ್ತದೆ..ಮದುವೆಯಾದರೂ ವಿಚ್ಛೇದನಗಳಾಗುತ್ತವೆ.ಇದು ಅಪಾಯದ ಮುನ್ಸೂಚನೆ ಎಂದರೆ ತಪ್ಪಾಗಲಾರದು.ಇದನ್ನು ತಪ್ಪಿಸಲು ಹೆಣ್ಣು ಗಂಡಿನ ಸಹಕಾರದಿಂದ ಮಾತ್ರ ಸಾಧ್ಯ.    

    ತಿರುಗಿ ನೋಡಿದಾಗ  ಒಂದೊಂದೇ ಹೆಜ್ಜೆಯಾದರೂ ಸರಿ ಈಗೀಗ ಹೆಣ್ಣಿನ ಸ್ಥಾನಮಾನ ಬದಲಾಗುತ್ತಿರುವುದು ಸಂತಸದ ವಿಚಾರ.ಇನ್ನೂ ಸಮಾಜ ಬದಲಾಗುತ್ತಾ ಮುಂದುವರಿದು ಮಹಿಳೆಯನ್ನು ಮನೆ ಹಾಗೂ ಸಮಾಜ ಗೌರವ ಮರ್ಯಾದೆಯೊಂದಿಗೆ ನಡೆಸಿಕೊಳ್ಳುವಂತಾಗಲಿ. ಹಾಗೂ ಪ್ರತಿ‌ ಮಹಿಳೆಯೂ ಸ್ವಾವಲಂಬಿಯಾದರೆ ಇವೆಲ್ಲದರ ಬಗ್ಗೆ ಧ್ವನಿ ಎತ್ತಲು  ಹಾಗೂ ಅವಳೂ ಗಂಡಿಗೆ ಸರಿ ಸಮಾನವಾಗಿ ತನ್ನ ಬದುಕನ್ನು ಬದುಕುವ ಅವಕಾಶ ಸಿಗುವಂತಾಗಬಹುದು ಎಂಬ ಆಶಾಭಾವನೆ ನಮ್ಮದಾಗಿದೆ..


ವತ್ಸಲಾ ಶ್ರೀಶ ಕೊಡಗು

Leave a Reply

Back To Top