ಕಾವ್ಯ ಸಂಗಾತಿ
ಕೆ.ಎಂ.ತಿಮ್ಮಯ್ಯ ಕವಿತೆ
ದಾಹ ತೀರದ ಗರ್ಭ
ತಿಂಗಳೊಂಬತ್ತು ತುಂಬುವ ತನಕ
ಉದರದಲ್ಲಿ ಹೊತ್ತು
ಹೆಣ್ಣುಗೂಸ ಹೆತ್ತು
ಕಸದ ತೊಟ್ಟಿಯಲ್ಲಿ ಸದ್ದಿಲ್ಲದೆ…,
ಸಂಸ್ಕಾರ ಮಾಡಿದವರಿಗೆ
ದಾಹ ತೀರದು
ಗಂಡು ಹುಟ್ಟುವ ತನಕ
ಮಾಂಸದ ಮುದ್ದೆಗೆ ರಕ್ತ
ಹಂಚಿದವಳು ಹೆಣ್ಣು
ಭ್ರೂಣವ ಬೆಳೆಸಿ
ಹಸಿವು ನೀಗಿಸಿ
ಜನ್ಮ ಕೊಟ್ಟವಳೂ.. ಹೆಣ್ಣು
ಆದರೂ ..ಹೆಣ್ಣೆಂದರೆ
ಏಕಿಷ್ಟು ತಾತ್ಸಾರ…?
ಗಂಡು ಕೂಸೇ ಬೇಕೆಂಬ ದಾಹದಿ
ಗರ್ಭದಲ್ಲೆ ಭ್ರೂಣದ
ಹುಟ್ಟಡಗಿಸಿದ್ದರೂ… ಮತ್ತೆ
ಹುಟ್ಟಿದ್ದೂ..ಹೆಣ್ಣೆ ! ಅದೂ
ಬೀದಿ ನಾಯಿಗಳ ಪಾಲು ಎಂದೂ
ಹಡೆಯದ ಪುರುಷಾಕೃತಿಗೆ
ಏನು ಗೊತ್ತು
ಹೆತ್ತ ಕರುಳಿನ ಬೇಗುದಿ
——————————–
ಕೆ.ಎಂ.ತಿಮ್ಮಯ್ಯ