ನಾನು ಓದಿದ ಪುಸ್ತಕ

ದಿ ಲಾಸ್ಟ್ ಲೆಕ್ಚರ್

ಮೂಲ: Ryandy pash

ಕನ್ನಡಕ್ಕೆ: ಎಸ್. ಉಮೇಶ್

“ಅದ್ಭುತಕನಸುಗಳನ್ನು ಕಾಣಲು ಪ್ರಯತ್ನಿಸಿ, ನಿಮ್ಮ ಮಕ್ಕಳಿಗೂ ಸಹ ಅಂತಹ ಕನಸುಗಳನ್ನು ಕಾಣುವಂತೆ ಪ್ರೇರೇಪಿಸಿ. ಮಕ್ಕಳು ಕತ್ತಲಿನ ಪ್ರಪಂಚದಿಂದ ಹೊರಬಂದು ಬೆಳಕಿನ ಸುಂದರ ಪ್ರಪಂಚವನ್ನು ನೋಡುವಂತೆ ಮಾಡಿ – Ryandy pash

ಇದೊಂದು ಸಾವಿನ ಸಾಂಗತ್ಯದಲ್ಲಿ ಬದುಕಿನ ಸಾರ್ಥಕತೆ ಸಾರಿದ ಕಂಪ್ಯೂಟರ್ ವಿಜ್ಞಾನಿಯ ರೋಚಕ ಕಥೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂ. ಮ. ಸಾ. ಸಂ. ನೀಡುವ ಪ್ರತಿಷ್ಠಿತ *ಅರಳು ಸಾಹಿತ್ಯ ಪ್ರಶಸ್ತಿ” ಪಡೆದ ಜನಮೆಚ್ಚುಗೆಯ ನಂಬರ್ ಒನ್ ಕೃತಿಯಾಗಿದೆ. ಈ ಕೃತಿಗೆ ವಿಶ್ವೇಶ್ವರ ಭಟ್ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಮೂಲ ಲೇಖಕರು Ryandy pash(ಪ್ರೊಫೆಸರ್, ಕಾರ್ನಿಗಿ ವಿಶ್ವವಿದ್ಯಾಲಯ) ಮತ್ತು ಜೆಫ್ರಿ ಜೆಲ್ಲೊ. ಮೈಸೂರಿನ ಧಾತ್ರಿ ಪ್ರಕಾಶನದಿಂದ ಹೊರಬಂದ ಕೃತಿಯಾಗಿದೆ.

ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅಲ್ಲಿನ ಉಪನ್ಯಾಸಕರಿಗೆ “ಅಂತಿಮ ಉಪನ್ಯಾಸ” ನೀಡುವ ಅವಕಾಶವನ್ನು ಕಲ್ಪಿಸಿಕೊಡುತ್ತವೆ. ಸಾವು – ಬದುಕಿನ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿ ಉಪನ್ಯಾಸದ ವೇದಿಕೆಯಲ್ಲಿ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕು. ಪ್ರೊ. Ryandy pash ಗೆ ಇಂತಹ ಅವಕಾಶ ಒದಗಿದಾಗ ಅದು ನಿಜಕ್ಕೂ ಅಂತಿಮ ಉಪನ್ಯಾಸವಾಗಲಿದೆ ಎಂದು ಆತ ಊಹಿಸಿಯೇ ಇರಲಿಲ್ಲ. ಕಾರಣ ವೈದ್ಯರು ಆತನಿಗೆ ಕ್ಯಾನ್ಸರ್ ಇರುವಿಕೆಯನ್ನು ದೃಢಪಡಿಸಿದ್ದರು. Ryany ಯ ಉಪನ್ಯಾಸ ಸಾವಿನ ಬಗ್ಗೆ ಇರಬಹುದೆಂದು ಭಾವಿಸಿದವರಿಗೆ ದೊರಕಿದ್ದು “ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವುದು ಹೇಗೆ ” ಎಂದು. ಈ ಪ್ರಶ್ನೆಗಳಿಗೆ “ದಿ ಲಾಸ್ಟ್ ಲೆಕ್ಚರ್” ಸಮರ್ಪಕ ಉತ್ತರ ನೀಡಿತು. ಅದು ಇಂದು ಜಗತ್ತಿನ ಲಕ್ಷಾಂತರ ಜನರ ಜೀವನದ ದಿಕ್ಕನ್ನೇ ಬದಲಿಸಿದೆ. ಜಗತ್ತಿನ ಪ್ರತಿಯೊಬ್ಬ ಪೋಷಕರಿಗೂ ಇದೊಂದು ಮಾರ್ಗದರ್ಶಿ ಹೊತ್ತಿಗೆ. ಆದರ್ಶ ಶಿಕ್ಷಕರಿಗೊಂದು ಪಠ್ಯ. ವಿದ್ಯಾರ್ಥಿಗಳಿಗೊಂದು ಅಮೂಲ್ಯ ಕೈಪಿಡಿ ಹಾಗೂ ಸಂಶೋಧಕರಿಗೊಂದು ದಾರಿದೀಪ.

ಡಾ. Ryandy pash ಅಮೇರಿಕಾದ ಕಾರ್ನಿಗಿ ಮೆಲನ್ ವಿಶ್ವವಿದ್ಯಾನಿಲಯದಲ್ಲಿ 1988 ರಿಂದ 1997 ರವರೆಗೆ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸ್ವತಃ ವಿಜ್ಞಾನಿಯಾದ ಇವರು ವರ್ಜಿನಿಯ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿದ್ದು, ಅನಂತರ ಅಡೋಬ್, ಗೂಗಲ್, ಇಲೆಕ್ಟ್ರಾನಿಕ್ಸ್ ಆರ್ಟ್ ಮತ್ತು ವಾಲ್ ಡಿಸ್ನಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜಗತ್ತಿನ ಪ್ರಸಿದ್ಧ ಆಲಿಸ್ ಸಾಫ್ಟವೇರ್ ನ ಜನಕ. ಮಡದಿ ಜೈ ಮತ್ತು ಮೂವರು ಮಕ್ಕಳಾದ ಡೈಲನ್, ಲೋಗನ್ ಮತ್ತು ಚೋಲೆ ಯರೊಂದಿಗೆ  ಸಾರ್ಥಕ ಜೀವನ ನಡೆಸಿ ತಮ್ಮ 47 ನೇ ವಯಸ್ಸಿನಲ್ಲೇ (25-07-2008) ಪ್ಯಾಂಕ್ರಿಯಾಸಿಸ್ ಕ್ಯಾನ್ಸರ್ ನಿಂದ ನಿಧನರಾದರು.

Ryandy ಅವರ ಅಂತಿಮ ಉಪನ್ಯಾಸದಲ್ಲಿ ಭಾಗವಹಿಸಿ ಈ ಪುಸ್ತಕವನ್ನು ಬರೆದು ಕೋಟ್ಯಂತರ ಜನರ ಕನಸುಗಳಿಗೆ ನೀರೆರೆದು ಹಸಿರು ಮೂಡಿಸಿದ ಕೀರ್ತಿ ಅಮೇರಿಕಾದ ಪ್ರತಿಷ್ಠಿತ ಪತ್ರಿಕೆಯ ವರದಿಗಾರ ಜೆಫ್ರಿ ಅವರಿಗೆ ಸಲ್ಲುತ್ತದೆ. ಇದನ್ನು ಕನ್ನಡಕ್ಕೆ ಎಸ್. ಉಮೇಶ್ ರವರು ಅನುವಾದಿಸಿದ್ದು ನಿಜಕ್ಕೂ ಶ್ಲಾಘನೀಯ.

ಸಾಯುವುದು ಗ್ಯಾರಂಟಿ ಎನಿಸಿದ ಮೇಲೆ ತಾನು ಇಲ್ಲದ ಜಗತ್ತಿನಲ್ಲಿ ಬದುಕುವುದು ಹೇಗೆಂದು ಹೆಂಡತಿಗೆ ಹೇಳಿಕೊಟ್ಟು ಯಾರಿಗೆ ಯಾರೂ ಅನಿವಾರ್ಯವಲ್ಲವೆಂದು ಮನವರಿಕೆ ಮಾಡಿಕೊಡುವ ಪರಿ ಒಂದು ಕ್ಷಣ ಎಂಥವರನ್ನಾದರೂ ಭಾವುಕರನ್ನಾಗಿಸುತ್ತದೆ. Ryandy ಬದುಕಿನ ಕಷ್ಟಸುಖಗಳ ವಿಶ್ಲೇಷಣೆಯನ್ನು ಕುರಿತು”ಇಸ್ಪೀಟ್ ಆಟದಲ್ಲಿ ಯಾವ ಕಾರ್ಡ್ ನಮ್ಮ ಕೈ ಸೇರುತ್ತದೆ ಅನ್ನುವುದಕ್ಕಿಂತ ಬಂದ ಕಾರ್ಡ್ ಗಳಲ್ಲಿ ನಾವು ಹೇಗೆ ಆಡುತ್ತೇವೆ ಎನ್ನುವುದು ಮುಖ್ಯ” ಎನ್ನುತ್ತಾರೆ. ಅವನ ಇಡೀ ಬದುಕಿನಲ್ಲಿ ಪತ್ನಿ ಜೈ ಳ ಧೈರ್ಯ, ಶ್ರಮ, ಸಹಕಾರ, ಸಹಾಯ ಎಲ್ಲವನ್ನೂ ತನ್ನ ಕಣ್ಮುಂದೆ ತಂದುಕೊಂಡು ಅವಳ ದಿಟ್ಟತನವನ್ನು ಕೊಂಡಾಡುತ್ತಾ ಜೈ ಳನ್ನು ‘ಸದೃಢ ಗೋಡೆ’ (ದಿ ವಾಲ್) ಎಂಬ ರೂಪಕಕ್ಕೆ ಹೋಲಿಸಿದ್ದಾನೆ.

ಸದಾ ಸಮಸ್ಯೆಗಳನ್ನೇ ಬಣ್ಣಿಸುತ್ತಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾರಿರಿ. ಅದು ಎಂದಿಗೂ ಕಾರ್ಯ ನಿರ್ವಹಿಸುವ ವೈಖರಿಯಾಗಲಾರದು. ನಮ್ಮೆಲ್ಲರಿಗೂ ಇರುವುದು ಅತ್ಯಂತ ಕಡಿಮೆ ಅವಧಿ ಮತ್ತು ಅಪರಿಮಿತ ಶಕ್ತಿ. ಸಮಯವನ್ನು ಸದ್ವಿನಿಯೋಗ ಪಡಿಸಿಕೊಳ್ಳಿ ಆಗ ಅಗಾಧವಾದುದನ್ನು ಸಾಧಿಸಬಹುದು ಎಂದು ಕರೆ ನೀಡಿದ್ದರೆ. ಇದರಿಂದ ಅವರು ಸಮಯಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರೆಂಬುದು ಅರಿವಾಗುತ್ತದೆ. ಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಅಗತ್ಯವಾಗಿ ಪೂರ್ವಸಿದ್ಧತೆ ಮಾಡಿಕೊಂಡಾಗ ಮಾತ್ರ ಆಶಾವಾದಿಯಾಗಿ ಬಾಳಲು ಸಾಧ್ಯವೆಂದು ಹೇಳಿ ಬದುಕಿಗೊಂದು ಹೊಸ ಅರ್ಥ ಕಲ್ಪಿಸಿದ್ದಾರೆ. ಇಂತಹ ಒಂದು ಪುಸ್ತಕ ಹಲವರ ಜೀವನದ ಪಥವನ್ನೇ ಬದಲಿಸುವಂತಹ ಸ್ಫೂರ್ತಿಯಾಗಬಲ್ಲದು. ಆದ್ದರಿಂದ ಪುಸ್ತಕ ಜೀವನದ ಅಮೂಲ್ಯ ಸಂಗಾತಿ ಎಂದರೆ ತಪ್ಪಾಗಲಾರದು.

ತಡೆಗೋಡೆಗಳು ನಮ್ಮನ್ನು ಹೊರದಬ್ಬಲು ಅಲ್ಲ, ದಾಟಿ ಮುನ್ನುಗ್ಗಲು, ನಮಗೆ ಅವಕಾಶ ನೀಡುವುದಕ್ಕಾಗಿ ಇವೆ –  ryandy pash

*****************************

ತೇಜಾವತಿ ಹೆಚ್. ಡಿ

Leave a Reply

Back To Top