ಯಾತ್ರಿಕ
ವಿಭಾ ಪುರೋಹಿತ್
ಜಗದೆದೆಯ ತುಂಬ ಹತ್ತಿ ಉರಿಯುತ್ತಿದೆ
ಬತ್ತಲಾರದ ಜ್ವಾಲೆ.
ಹಾದಿ ಮುಗಿಯುವುದಿಲ್ಲ
ಮುಗಿದರದು ಹಾದಿಯಲ್ಲ !
ಯಾತ್ರೆ ಮುಂದುವರೆದಿದೆ
ಹೊಸ ಹೊಸ ದೇಶ ಪ್ರದೇಶವನು ತೆಕ್ಕೆಯೊಳಗೆ ನುಂಗಿದೆ.
ನೂರು,ಸಾವಿರ,ಲಕ್ಷಗಳ ದಾಟುತ್ತಲಿದೆ
ರಕ್ತಬೀಜಾಸುರನ ನೆತ್ತರಿನ ಹನಿಗಳಿಗಿಂತ
ವಿಷಾಣು ಹರಡುತ್ತ,ಹಬ್ಬುತ್ತ
ರಕ್ಕಸನಂತೆ ಮೀರಿ ಬೆಳೆಯುತ್ತಲಿದೆ
ಮನುಕುಲವ ಕಂಗೆಡಿಸುತ್ತಿದೆ.
ಹೊರಗಿಂದ ಬಂದವರು ಸುಮ್ಮನೆ ಬರಲಿಲ್ಲ
ಇಂದಿಗೂ ಹಂಚುತ್ತಲೇ ಇರುವರು
ಬೆನ್ನು ಹಿಂದೆ ನಿಂತು ಚೂರಿ ಹಾಕಿದರು
ಕಾಡುಪಾಪದ ರುಚಿಗೆ ಸೋತವರು
ಸಂಜೆ ಹಕ್ಕಿಯ ದನಿಗೆ ಕಿವುಡರಾದವರು
ನೋವು ಕೇಕೆ ಹಾಕುತ್ತಿದ್ದರೂ, ನಲಿವು ಮರೆಯಲ್ಲಿ ನಿಂತು ಹಣಿಕೆಹಾಕುತ್ತಿರುವಂತೆ
ಮನಸಿನ ಯಾವುದೋ ಒಂದು ಮೂಲೆಯಲ್ಲಿ…….
ಈಗೀಗ ಕಣ್ಮುಚ್ಚಿ ದರೆ ನಿದ್ದೆ ಸುಳಿಯುವುದಿಲ್ಲ
ಸುಳಿದರೂ ಆ ಸುಳಿಯಲ್ಲಿ ಇರುಳೋ,ಬೆಳಕೋ,
ಒಂದೂ ತಿಳಿಯುವುದಿಲ್ಲ
ತಾನಿರುದಿಲ್ಲವೆಂಬ ಸಂಶಯ ಆ ಯಾತ್ರಿಕನಿಗೆ
ಯಾವಾಗ ಬರುವುದೋ ?
ದೇವರೇ ಬಲ್ಲ !
ನಕ್ಕ ನಿಮಿಷಗಳೀಗ ದಿಗ್ಬಂಧನದಲಿವೆ.
ಸರಪಳಿ ಸಾಗುತ್ತಲಿದೆ ಕೊನೆಯಿರದ ದಾರಿಯಲಿ
ಶಂಖನಾದ ಘಂಟೆ ಜಾಗಟೆಗಳಾದವು
ಚಪ್ಪಾಳೆಗಳ ತಾಳದಲ್ಲಿ
ಕಾಣದ ಮೂಲಮೂರ್ತಿಗೆ ಹರಿವಾಣ ಸೇವೆಯಾಯ್ತು
ಹಚ್ಚಿಟ್ಟ ಹಣತೆಗಳು ಹೋರಾಡುತ್ತಿವೆ ಇಂದಿಗೂ ಕತ್ತಲಿನ ವಿರುದ್ಧ
ಯುದ್ಧದ ಅಂತ್ಯ ಅರಿಯದೇ !
ಬೆಳಗುತ್ತಿವೆ ರಕ್ಷಕರಿಗೆ ದಾರಿ ದೀಪವಾಗತ್ತ…..
ಇನ್ನೂ ಯಾಕೆ ಪೀಡಿಸುವೆ ?
ಭಯಾನಕತೆ ತೋರದಿರು
ಸಮಾಧಿಯಾಗಿಬಿಡು
ಮುಗಿಸಿ “ಮಹಾಯಾತ್ರೆ” .
**********