ಅಂಕಣ ಬರಹ
ಗಜಲ್ ಲೋಕ
ಡಾ. ಮಲ್ಲಿನಾಥ ಎಸ್. ತಳವಾರ,
೧೦೦. ಲಕ್ಷ್ಮೀಯವರ ಗಜಲ್ ಗಳಲ್ಲಿ
ಮಧುರಾನುಭೂತಿ
ಎಲ್ಲರಿಗೂ ನಮಸ್ಕಾರಗಳು, ಎಲ್ಲರೂ ಸೌಖ್ಯವಾಗಿರುವಿರಿ ಎಂಬ ಭಾವದೊಲವಿನೊಂದಿಗೆ ತಮ್ಮ ಮುಂದೆ ಗಜಲ್ ಗಂಗೆ ಸಮೇತ ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಬಂದಿರುವೆ, ಅದೂ ಗಜಲ್ ಬಾನಂಗಳ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಏನಿದ್ದರೂ ಇವಾಗ ಗಜಲಯಾನ…
“ಮತ್ತೆ ಇನ್ನೇನು ಉಳಿದಿದೆ ನೋಡಲು
ನಿನಗೆ ಹೃದಯ ಕೊಟ್ಟು ನೋಡಿದೆ”
-ಫೈಜ್ ಅಹಮದ್ ಫೈಜ್
“ನಾನು ಬೆಳಕನ್ನು ಪ್ರೀತಿಸುತ್ತೇನೆ, ಏಕೆಂದರೆ ಅದು ನನಗೆ ದಾರಿ ತೋರಿಸುತ್ತದೆ. ಆದರೆ ನಾನು ಕತ್ತಲೆಯನ್ನು ಸಹಿಸಿಕೊಳ್ಳುತ್ತೇನೆ, ಏಕೆಂದರೆ ಅದು ನನಗೆ ನಕ್ಷತ್ರಗಳನ್ನು ತೋರಿಸುತ್ತದೆ” ಎಂಬ ಅಮೇರಿಕನ್ ಲೇಖಕ ಓಗ್ ಮಂಡಿನೋ ರವರ ಈ ಹೇಳಿಕೆ ಬೆಳಕು ಮತ್ತು ಕತ್ತಲು ಮನುಷ್ಯನ ಜೀವನದಲ್ಲಿ ಎಷ್ಟು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಆಧುನಿಕತೆಯ ಭರಾಟೆಯಲ್ಲಿ ರಾತ್ರಿ, ಹಗಲುಗಳು ಕಾಲದ ಚಕ್ರದಲ್ಲಿ ತಿರುಗುತ್ತ ಒಂದರ ಸ್ಥಾನವನ್ನು ಮತ್ತೊಂದು ಅಲಂಕರಿಸುತ್ತಿವೆಯಾದರೂ ಅವುಗಳ ಮೂಲವನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ನಾವು ಗೆದ್ದಾಗ ನಮ್ಮನ್ನು ಹೊಗಳಲು, ಪೂಜಿಸಲು ಒಂದು ಪಡೆಯೇ ಸಿದ್ಧವಾಗುತ್ತದೆ. ಆ ‘ಪಡೆ’ ಯಾರ ಸ್ವತ್ತೂ ಅಲ್ಲ. ಏಕೆಂದರೆ
ಎಲ್ಲರೂ ಹೇಳುವಷ್ಟು ನಾವು ಎಂದಿಗೂ ಒಳ್ಳೆಯವರಾಗಿರುವುದಿಲ್ಲ. ಇನ್ನೂ ನಾವು ಸೋತಾಗ ಜನರು ಹೇಳುವಷ್ಟು ಕೆಟ್ಟವರೂ ಆಗಿರುವುದಿಲ್ಲ. ಯಾವತ್ತೂ ಮಹಾನ್ ನಾಯಕರು ಟೀಕೆ, ಟಿಪ್ಪಣೆಗಳಿಗೆ ಹೆದರುವುದಿಲ್ಲ. ಅವರು ತಮ್ಮ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಲು ಅವುಗಳನ್ನು ಸಾಧನವನ್ನಾಗಿ ಬಳಸಿಕೊಳ್ಳುತ್ತಾರೆ. ಟೀಕೆಗಳ ಭಯವು ಪ್ರತಿಭೆಯನ್ನು ಸಾಯಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ. ಯಶಸ್ಸಿನ ಗೋಪುರವು ದೃಷ್ಟಿ, ಕ್ರಿಯೆ, ತಾಳ್ಮೆ ಮತ್ತು ಟೀಕೆಗಳನ್ನು ತಡೆದುಕೊಳ್ಳುವ ವ್ಯಕ್ತಿತ್ವದ ಮೇಲೆ ನಿಂತಿದೆ. ನಮ್ಮ ಸಂತೋಷದ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳಬೇಕೆ ಹೊರತು ಅದನ್ನು ಎಂದಿಗೂ ಇತರರ ಕೈಯಲ್ಲಿ ಇಡಬಾರದು. ಕಾರಣ, ಇತರರು ನಮ್ಮ ಬಾಳಿನಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಅದಕ್ಕಾಗಿ ಕಾಯುವುದು ಮೂರ್ಖತನ. ನಾವೇ ಬದಲಾಗಬೇಕು, ನಾವೇ ಬದಲಾವಣೆಯನ್ನು ತರಬೇಕು. ಇದೆಲ್ಲವೂ ಹೇಳಿದಷ್ಟು ಸುಲಭವಲ್ಲವಾದರೂ ಅಸಾಧ್ಯವಂತೂ ಅಲ್ಲವೇ ಅಲ್ಲ. “The best way to predict the future is to create it.” ಎಂಬ ಅಬ್ರಾಹಂ ಲಿಂಕನ್ ರವರ ಮಾತು ತುಂಬಾನೇ ಪ್ರೇರಣದಾಯಕವಾಗಿದೆ. ನಾವು ಉದಾತ್ತ ಮತ್ತು ಸುಂದರವಾದದ್ದನ್ನು ಮಾಡಿದಾಗ, ಅದನ್ನು ಯಾರೂ ಗಮನಿಸದಿದ್ದಾಗ ಸಹಜವಾಗಿಯೇ ಬೇಸರವಾಗುತ್ತದೆ. ಆದರೆ ಆ ಬೇಸರದ ಅವಶ್ಯಕತೆ ಇಲ್ಲ. ಏಕೆಂದರೆ ಪ್ರತಿದಿನ ಉದಯಿಸುವ ಭಾಸ್ಕರನಿಗೆ ಪ್ರತಿ ಮುಂಜಾನೆಯೆನ್ನುವುದು ಒಂದು ಸುಂದರವಾದ ದೃಶ್ಯ! ಹಾಗೆ ನೋಡಿದರೆ ಎಷ್ಟು ಜನರು ಆ ಸುಂದರವಾದ ದೃಶ್ಯ ನೋಡಿರಲು ಸಾಧ್ಯ ಹೇಳಿ? ಇಂಥ ಬದುಕಿನ ಪಾಠವನ್ನು ಅನುಭವ ಜನ್ಯವಾದ ಸಾಹಿತ್ಯ ನಮಗೆ ಕಲಿಸುತ್ತದೆ…ಅಲ್ಲಲ್ಲ, ತಿಳಿಸುತ್ತ ಮನವರಿಕೆ ಮಾಡಿಕೊಡುತ್ತದೆ. ಗಜಲ್ ಎನ್ನುವ ಸೂಫಿ ಸೆಲೆಯ ಊರುಗೋಲು ನಮಗೆ ಜೀವನದ ರೀತಿ ನೀತಿಗಳನ್ನು ಅನೂಚಾನವಾಗಿ ಉಣಬಡಿಸುತ್ತಲೆ ಬಂದಿದೆ. ಇಂದು ಕನ್ನಡ ಸಾರಸ್ವತ ಲೋಕದಲ್ಲಿ ಊಹೆಗೂ ಮೀರಿ ಗಜಲ್ ಫಸಲು ಬೆಳೆದಿದೆ, ಬೆಳೆಯುತ್ತಿದೆ. ಅಸಂಖ್ಯಾತ ಬರಹಗಾರರು ಗಜಲ್ ಕೃಷಿಯಲ್ಲಿ ನಿರತರಾಗಿದ್ದಾರೆ. ಅವರಲ್ಲಿ ಶಾಯರಾ ಶ್ರೀಮತಿ ಲಕ್ಷ್ಮೀ ವಿ.ಭಟ್ ಅವರೂ ಸಹ ಒಬ್ಬರು.
ಶ್ರೀಮತಿ ಲಕ್ಷ್ಮೀ ವಿ. ಭಟ್ ರವರು ೧೯೬೬ ರ ಡಿಸೆಂಬರ್ ೧೩ ರಂದು ಜನಿಸಿದ್ದಾರೆ. ಎಂ.ಎ., ಬಿ.ಎಡ್ ಪದವಿಯನ್ನು ಪೂರೈಸಿದ್ದು, ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಉರ್ವದ ಕೆನರಾ ಪ್ರೌಢಶಾಲೆಯಲ್ಲಿ ಅಧ್ಯಾಪಿಕೆಯಾಗಿ ಸೇವೆಯನ್ನು ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದು ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ವಿದ್ಯಾರ್ಥಿನಿ ಜೀವನದಿಂದಲೇ ಸಾಹಿತ್ಯದ ಒಲವನ್ನು ಹೊಂದಿದ್ದು, ಷಟ್ಪದಿ, ಕಂದ, ರಗಳೆ, ವೃತ್ತ ಸಾಂಗತ್ಯ, ಕಾವ್ಯ, ಚುಟುಕು, ಹನಿಗವನ, ಮುಕ್ತಕ, ಭಾವಗೀತೆ, ಭಕ್ತಿಗೀತೆ, ಮಕ್ಕಳ ಗೀತೆ, ಚಿತ್ರ ಕವನ, ದೇಶಭಕ್ತಿ ಗೀತೆ, ತ್ರಿಪದಿಗಳು, ಲೇಖನಗಳು, ವಿಮರ್ಶೆ, ರುಬಾಯಿ, ಹೈಕು, ತಂಕಾ ಹಾಗೂ ಗಜಲ್…ದಂತಹ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಇವರು “ಕಾವ್ಯ ಮೃಷ್ಟಾನ್ನ”, “ವನಸುಮ”, “ಹೊಸ ಬರಹಗಾರರ ಕೈಪಿಡಿ”, “ಜನಮಾನ್ಯ” ಎಂಬ ಮುಕ್ತಕ ಸಂಕಲನ, “ಭಕ್ತಿ ಮಂಜರಿ”, “ಕಲರವ” ಎಂಬ ಮಕ್ಕಳ ಗೀತೆ, “ಭಾರತಾಂಬೆಗೆ ನಮನ” ಎಂಬ ದೇಶಭಕ್ತಿ ಗೀತೆ, “ಸುಚರಿತರು” ಎಂಬ ವ್ಯಕ್ತಿ ಚಿತ್ರಣ ಹಾಗೂ “ಭಾವ ಸ್ಪರ್ಶ” ಎಂಬ ಗಜಲ್ ಸಂಕಲನ .. ಮುಂತಾದ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಇವುಗಳೊಂದಿಗೆ ಇನ್ನೂ ಕೆಲವು ಪುಸ್ತಕಗಳು ಪ್ರಕಟಣೆಯ ಹಂತದಲ್ಲಿದಲ್ಲಿರುವುದು ಸಂತಸದ ಸಂಗತಿ.
ಶ್ರೀಮತಿ ಲಕ್ಷ್ಮೀ ವಿ. ಭಟ್ ಅವರು ಉತ್ತಮ ಸಂಘಟಕರಾಗಿದ್ದು, ಸಾಹಿತ್ಯದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ. ಅದರೊಂದಿಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದು ತಾಲ್ಲೂಕು, ಜಿಲ್ಲಾ ಮಟ್ಟದ ಅನೇಕ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯದ ಒಲವನ್ನು ಹಂಚಿದ್ದಾರೆ. ಇವರು ಬರೆದ ವಿವಿಧ ಬರಹಗಳು ರಾಜ್ಯದ ಬಹು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಸೇವೆಯನ್ನು ಗುರುತಿಸಿ ನಾಡಿನ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಕೀರ್ತಿ ಪ್ರಕಾಶನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ “ಸುವರ್ಣ ಕನ್ನಡ ರತ್ನ” ಪ್ರಶಸ್ತಿ, “ಸಾಹಿತ್ಯ ದೀವಿಗೆ ಪ್ರಶಸ್ತಿ”, “ಕಾವ್ಯ ಕಣಜ ಪ್ರಶಸ್ತಿ”, “ಚೈತನ್ಯ ಶ್ರೀ ಪ್ರಶಸ್ತಿ”… ಮುಂತಾದವುಗಳು ಪ್ರಮುಖವಾಗಿವೆ.
ಫ್ರೆಂಚ್ ಫ್ಯಾಶನ್ ಡಿಸೈನರ್
ಕ್ರಿಶ್ಚಿಯನ್ ಡಿಯರ್ ರವರು ಹೇಳಿರುವ “ಮಹಿಳೆಯರ ನಂತರ, ಹೂವುಗಳು ಜಗತ್ತಿಗೆ ದೇವರು ನೀಡಿದ ಅತ್ಯಂತ ಸುಂದರವಾದ ವಸ್ತು” ಎಂಬ ಮಾತು ಮಹಿಳೆ ಮತ್ತು ಹೂವಿನ ಸಮ್ಮಿಲನವಾದ ಗಜಲ್ ಗೆ ಹೆಚ್ಚು ಅನ್ವಯಿಸುತ್ತದೆ. ನಾವು ಅನುಭವಿಸುವ ಯಾವುದೇ ನೋವು, ಯಾವುದೇ ಪ್ರಯೋಗವು ವ್ಯರ್ಥವಾಗುವುದಿಲ್ಲ. ಅವು ನಮ್ಮ ಶಿಕ್ಷಣಕ್ಕೆ, ತಾಳ್ಮೆ, ನಂಬಿಕೆ, ಸ್ಥೈರ್ಯ ಮತ್ತು ನಮ್ರತೆಯಂತಹ ಗುಣಗಳ ಬೆಳವಣಿಗೆಗೆ ಸೇವೆ ಸಲ್ಲಿಸುತ್ತವೆ. ನಾವು ಅನುಭವಿಸುವ ಎಲ್ಲವನ್ನೂ ಮತ್ತು ನಾವು ಸಹಿಸಿಕೊಳ್ಳುವ ಎಲ್ಲವನ್ನೂ, ವಿಶೇಷವಾಗಿ ನಾವು ತಾಳ್ಮೆಯಿಂದ ಸಹಿಸಿಕೊಂಡಾಗ, ನಮ್ಮ ಪಾತ್ರಗಳನ್ನು ನಿರ್ಮಿಸಿದಾಗ, ನಮ್ಮ ಹೃದಯವನ್ನು ಶುದ್ಧೀಕರಿಸಿದಾಗ ಮೂಡುವ ಭಾವನೆಗಳನ್ನು ಗಜಲ್ ರೂಪದಲ್ಲಿ ಅಭಿವ್ಯಕ್ತಿಸಿದಾಗ ಅವು ಸಹೃದಯ ಓದುಗರ ಮನವನ್ನು ಸೂರೆಗೊಳ್ಳುತ್ತ, ಜನಮಾನಸದಲ್ಲಿ ನೆಲೆಯೂರುತ್ತವೆ. ಈ ನೆಲೆಯಲ್ಲಿ ಗಜಲ್ ಎಂಬುದು ಅಂತರಂಗದ ತಂತಿಯಿಂದ ನಾದಗೈಯುವ ವೀಣಾಪಾಣಿ. ನಮ್ಮ ಜೀವನವು ಹತ್ತಾರು ಉತ್ತರವಿಲ್ಲದ ಪ್ರಶ್ನೆಗಳಿಂದ ತುಂಬಿದೆ. ಆದರೆ ಆ ಉತ್ತರಗಳನ್ನು ಹುಡುಕುವ ಧೈರ್ಯವು ಜೀವನಕ್ಕೆ ಅರ್ಥವನ್ನು ನೀಡುತ್ತ ಸಶಕ್ತ ಗಜಲ್ ಗೆ ಜಮೀನ್ ಅನ್ನು ಒದಗಿಸುತ್ತದೆ. ಈ ನೆಲೆಯಲ್ಲಿ ಸುಖನವರ್ ಶ್ರೀಮತಿ ಲಕ್ಷ್ಮೀ ವಿ.ಭಟ್ ರವರ “ಭಾವ ಸ್ಪರ್ಶ” ಗಜಲ್ ಸಂಕಲನವನ್ನು ಗಮನಿಸಿದಾಗ ಅದರಲ್ಲಿಯ ಮಧುರ ಅನುಭೂತಿಗಳು, ಹರೆಯದ ಕನಸುಗಳು, ಪ್ರೀತಿ-ಪ್ರೇಮಭಾವಗಳು, ವಿರಹದ ಬೇಗೆ, ಮೋಸದ ಛಾಯೆ, ವಾತ್ಸಲ್ಯ, ಅಮ್ಮ, ಬದುಕಿನ ಹಾದಿಗಳು, ಮನದ ಭಾವೋತ್ಕರ್ಷಗಳು, ನೋವು, ದುಗುಡ ದುಮ್ಮಾನಗಳು, ನಂಬಿಕೆ, ಪ್ರಶ್ನೆಗಳು, ದೇಶಾಭಿಮಾನ, ಹೆಣ್ಣಿನ ಸೌಂದರ್ಯ, ಪ್ರೀತಿ ಹಂಚುವಿಕೆ… ಎಲ್ಲವೂ ಸಹೃದಯ ಓದುಗರ ಮನವನ್ನು ತಣಿಸುತ್ತವೆ.
ಮನುಷ್ಯನಿಗೆ ನೆನಪುಗಳು ವರವೂ ಹೌದು, ಶಾಪವೂ ಹೌದು. ಪ್ರೀತಿಸುವ ಜೀವ ಜೊತೆಗಿದ್ದಾಗ ನೆನಪುಗಳು ಮನಸ್ಸಿಗೆ ಮುದ ನೀಡುತ್ತವೆ. ಅದೇ ಆ ಜೀವ ಜೊತೆ ಇರದಿದ್ದಾಗ ನೆನಪುಗಳು ಅಕ್ಷರಶಃ ಕೊಲ್ಲುತ್ತವೆ. ಇಲ್ಲಿ ಶಾಯರಾ ಶ್ರೀಮತಿ ಲಕ್ಷ್ಮೀ ವಿ. ಭಟ್ ರವರು ನೆನಪುಗಳು ಹೇಗೆ ಕಂಬನಿಯಾಗಬಲ್ಲವು ಮತ್ತು ಆ ಕಂಬನಿ ಹೇಗೆ ರಕುತವಾಗಿ ಪರಿವರ್ತನೆಯಾಗಬಲ್ಲದು ಎಂಬುದನ್ನು ತುಂಬಾ ಸರಳವಾಗಿ ಹಾಗೂ ಮನಸ್ಸಿಗೆ ಮುಟ್ಟುವಂತೆ ನಿರೂಪಿಸಿದ್ದಾರೆ. ಈ ಕೆಳಗಿನ ಷೇರ್ ವಿರಹವನ್ನು ಅತ್ಯುತ್ತಮವಾಗಿ ಸೆರೆ ಹಿಡಿದಿದೆ. ಮನ ಬೆತ್ತಲಾಗುವ ಪರಿ ಅನುಪಮವಾಗಿ ಮೂಡಿಬಂದಿದೆ.
“ನೆನಪು ಮರುಕಳಿಸಿ ಕಣ್ಣೀರು ಮಡುಗಟ್ಟಿ ನೆತ್ತರಾಗಿದೆ ಸಖ
ಸನಿಹ ನೀನಿಲ್ಲದೆ ಕಗ್ಗತ್ತಲಲಿ ಮನ ಬೆತ್ತಲಾಗಿದೆ ಸಖ”
ಪ್ರಕೃತಿಯಲ್ಲಿ ಭೂಮಿಗೆ ತನ್ನದೆಯಾದ ಒಂದು ಪವಿತ್ರವಾದ ಸ್ಥಾನವಿದೆ. ಆದರೆ ಅಲ್ಲೂ ತಾರತಮ್ಯವಿದೆ. ‘ಬಂಜರು’ ಭೂಮಿ ಎಂದರೆ ಎಲ್ಲಿಲ್ಲದ ಅಸಡ್ಡೆ. ಆದರೆ ಪ್ರೇಮಲೋಕದಲ್ಲಿ ಮಾತ್ರ ಯಾವುದೂ ಬಂಜೆ ಎಂಬುದೇ ಇಲ್ಲ. ಪ್ರೀತಿಗೆ ಆ ಅಪರಿಮಿತವಾದ ಶಕ್ತಿಯಿದೆ. ಪ್ರೀತಿಯಲ್ಲಿ ಎಲ್ಲ ಹೃದಯಗಳೂ ಫಲ ನೀಡುವ ಅವನಿಯೇ! ಇಲ್ಲಿ ಸುಖನವರ್ ಶ್ರೀಮತಿ ಲಕ್ಷ್ಮೀ ಯವರು ‘ಸುರಿಸಿದವ’, ‘ಬೆಳೆಸಿದವ’ ಎನ್ನುವ ಕವಾಫಿ ಮೂಲಕ ಒಲವಿನ ಅಲೆಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಇದಕ್ಕೆ ಪೂರಕವಾಗಿ ಎಂಬಂತೆ ‘ನೀನಲ್ಲವೇ’ ಎಂಬ ರದೀಫ್ ಬಳಕೆಯಾಗಿದೆ. ಅನುರಾಗದ ಹಾದಿಯಲ್ಲಿ ಬರಡು, ಕೊರಡು ಎಂಬ ಪದಗಳಿಗೆ ಅರ್ಥವೇ ಇಲ್ಲ. ಅಲ್ಲೇನಿದ್ದರೂ ಹಚ್ಚ ಹಸಿರಿನ ಭಾವದೋಕುಳಿಯದೆ ಕಾರುಬಾರು.
“ಬರಡಾಗಿದ್ದ ಎನ್ನೆದೆಯಲಿ ಪ್ರೀತಿಯ ಮಳೆಹನಿ ಸುರಿಸಿದವ ನೀನಲ್ಲವೇ
ಕೊರಡಾಗಿದ್ದ ಬಾಳಿನಲ್ಲಿ ಆಸೆಗಳ ಬಳ್ಳಿಯನು ಬೆಳೆಸಿದವ ನೀನಲ್ಲವೇ”
ಇನ್ನೊಬ್ಬ ವ್ಯಕ್ತಿಯ ಕಣ್ಣೀರು ದೌರ್ಬಲ್ಯದ ಸಂಕೇತವಲ್ಲ. ಅದು ಶುದ್ಧ ಹೃದಯದ ಸಂಕೇತ. ಇದನ್ನು ಅರಿತಾಗ ಮನಸ್ಸಿಗೆ ತಟ್ಟುವ ಗಜಲ್ ಗಳು ರೂಪುಗೊಳ್ಳುತ್ತವೆ. ಈ ದಿಸೆಯಲ್ಲಿ ಗಜಲ್ ಗೋ ಶ್ರೀಮತಿ ಲಕ್ಷ್ಮೀ ವಿ.ಭಟ್ ರವರಿಂದ ಗಜಲ್ ಜಗತ್ತು ಮತ್ತಷ್ಟು ಮೊಗೆದಷ್ಟೂ ಸಮೃದ್ಧವಾಗಿ ಬೆಳೆಯಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.
“ಏನಾದರೂ ಒತ್ತಡಗಳು ಇದ್ದಿರಬೇಕು
ಯಾರೂ ಸುಮ್ಮನೆ ವಿಶ್ವಾಸ ದ್ರೋಹಿ ಆಗುವುದಿಲ್ಲ”
-ಬಸೀರ್ ಬದ್ರ
ಹೃದಯದ ಪಿಸುಮಾತಾದ ಗಜಲ್ ನ ವಿವಿಧ ಆಯಾಮಗಳ ಕುರಿತು ಯೋಚಿಸುವುದಾಗಲಿ, ಮಾತಾಡುವುದಾಗಲಿ ಹಾಗೂ ಬರೆಯುವುದಾಗಲಿ ಮಾಡ್ತಾ ಇದ್ದರೆ ಈ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಗಡಿಯಾರದ ಮಾತು ಕೇಳಲೆಬೇಕಲ್ಲವೇ. ಅಂತೆಯೇ ಈ ಬರಹಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!
ಧನ್ಯವಾದಗಳು..
ಡಾ. ಮಲ್ಲಿನಾಥ ಎಸ್. ತಳವಾರ,
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ