ಕಂಚುಗಾರನಹಳ್ಳಿ ಸತೀಶ್ ಕವಿತೆ-ಪ್ರತಿಬಿಂಬ

ಕಾವ್ಯ ಸಂಗಾತಿ

ಕಂಚುಗಾರನಹಳ್ಳಿ ಸತೀಶ್

ಪ್ರತಿಬಿಂಬ

ನಾನು ಒಂಥರ ಕನ್ನಡಿಯ ಬಿಂಬ
ನಕ್ಕರು ಅತ್ತರು ಅದೇ ನೈಜತೆಯ ಕಂಬ
ದುಃಖದಲಿ ಮಳೆಯಲ್ಲಿ ನೆನೆಯುತ್ತಾ ಅಳುವೆನು
ಕಾರಣ ತಿಳಿಯದಿರಲಿ ಕಣ್ಣೀರು ಬೆರೆತು ಹೋಗಲಿ ಎಂದು

ನಾನು ಪ್ರತಿಬಿಂಬ ನೋಡಿ ನಿಜವೆಂದು ನಂಬುವನು
ಆ ಬಿಂಬಕ್ಕೆ ಪ್ರತ್ಯುತ್ತರ ನೀಡಿ ಮೂರ್ಖನಾದೆ
ಇಷ್ಟು ಸಾಕಲ್ಲವೇ ನಿನ್ನನ್ನು ಪ್ರೀತಿಸೋಕೆ
ಏಕೆಂದರೆ ಪ್ರೀತಿಯೇ ಮೂರ್ಖತನದ ಪರಮಾವಧಿ ಎಂದೆನಿಸಿದೆ ನನಗೆ

ಕನ್ನಡಿಯಲ್ಲಿ ನಿನ್ನ ಕಂಡು ಭಾವೋದ್ವೇಗಕ್ಕೊಳಗಾಗಿ
ಭಾವನೆಯ ಹಂಚಿಕೊಂಡವನು ನಾನು
ನನ್ನ ಬದುಕಿನ ಕನ್ನಡಿಯಲ್ಲಿ ಮುನ್ನುಡಿಯಾಗಿ ಬಂದು ಬೆನ್ನುಡಿಯಾಗಿ ಹೊರಡುವೆ ಎಂದು

ಬಾಹುಬಂಧನದಲಿ ಬಂಧಿಯಾಗುವೆ ಎಂದು ಕಾಯುತ್ತಿದ್ದೆ
ಭ್ರಮಾಲೋಕದಲ್ಲೆ ಸಂಚರಿಸಿ ಮರೀಚಿಕೆಯಾದೆ
ಕನಸಿಂದ ತಟ್ಟನೆ ಎದ್ದು ಉದ್ವೇಗಕ್ಕೊಳಗಾದೆ
ಹುಡುಕಾಡಿ ಅಲೆದಾಡಿ ಕೊರಗಾಡಿ ಮೂಕನಾದೆ

ಪ್ರೀತಿಯ ಗುಂಗಲ್ಲಿ ಅತ್ತು ಅತ್ತು ಮೌನಿಯಾದೆ
ಕೇಳಿ ಪಡೆಯಲು ನೀನು ಆಕಾಶ ನಾನು ಭೂಮಿ
ಅಜಗಜಾಂತರವೆನಿಸಿ ಬಿಕ್ಕಿಬಿಕ್ಕಿ ಸುಮ್ಮನಾದೆ
ದಿಟ ನೀನಿಲ್ಲದೆ ಬದುಕು ಭಾವನೆಗಳಿಲ್ಲದೆ ಬರಡಾಗಿದೆ


ಕಂಚುಗಾರನಹಳ್ಳಿ ಸತೀಶ್

Leave a Reply

Back To Top