ಪ್ರಕೃತಿ ಹೇಳಿದ ಪಾಠ
ಗಣೇಶ್ ಭಟ್
ಕೊರೊನಾ ಮುಖಾಂತರ ಪ್ರಕೃತಿ ಹೇಳಿದ ಪಾಠ
ವ್ಯಕ್ತಿ ಅಥವಾ ಸಮುದಾಯದ ಬದುಕಿನಲ್ಲಿ ನಡೆಯುವ ಯಾವ ಘಟನೆಯೂ ಆಕಸ್ಮಿಕವಲ್ಲ. ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ; ಅದು ತಿಳಿಯದಾಗ ನಾವು ಆಕಸ್ಮಿಕ ಎಂದು ಹೇಳುತ್ತೇವೆ ಅಥವಾ ಹಾಗೆ ಭಾವಿಸುತ್ತೇವೆ. ಇಡೀ ಮಾನವ ಕುಲವನ್ನು ನಡುಗಿಸುತ್ತಿರುವ ಕೊರೊನಾ ಸಾಂಕ್ರಾಮಿಕ ಪಿಡುಗೂ ಕೂಡಾ ಆಕಸ್ಮಿಕವಲ್ಲ. ಪ್ರಕೃತಿಯ ಮೇಲೆ ಮಾನವ ನಡೆಸಿದ, ನಡೆಸುತ್ತಿರುವ ದೌರ್ಜನ್ಯದ ಪ್ರತಿಕ್ರಿಯೆ ಅಷ್ಟೇ.
ಕಳೆದ ಮೂರು ಶತಮಾನಗಳಿಂದ ಮಾನವ ನಿರ್ಮಿಸಿಕೊಂಡಿದ್ದ ಆರೋಗ್ಯ ಸೌಲಭ್ಯಗಳು, ಆಧುನಿಕ ಚಿಕಿತ್ಸಾ ವಿಧಾನಗಳು, ಕೂಡಿಹಾಕಿಕೊಂಡ ಸಂಪತ್ತುಗಳೆಲ್ಲವೂ ವೈರಾಣುವಿನ ಎದುರು ನಿಷ್ಪಲವಾದವು. ಯಾಕೆಂದರೆ , ಪ್ರಕೃತಿಯ ನಿಯಮದ ವಿರುದ್ಧವಾಗಿ ಮಾನವನ ಆಹಾರ ಪದ್ಧತಿ ಬೆಳೆದು ಬಂದಿತ್ತು. ಪಶು, ಪಕ್ಷಿ, ಪ್ರಾಣ ಗಳು ಇರುವುದೇ ತನ್ನ ಜಿವ್ಹಾ ಚಾಪಲ್ಯ ತಣ ಸುವುದಕ್ಕಾಗಿ ಎಂಬ ರೀತಿಯಲ್ಲಿ ಮಾನವರು ವರ್ತಿಸುತ್ತಿದ್ದಾರೆ. ಕೊರೊನಾ ಪೀಡಿತರ ಆಹಾರ ಪದ್ಧತಿಯನ್ನು ಗಮನಿಸಿದಾಗ ಸಸ್ಯಾಹಾರಿಗಳಿಗಿಂತ ಮಾಂಸಾಹಾರಿಗಳೇ ಹೆಚ್ಚಿನ ಪ್ರಮಾಣದಲ್ಲಿರುವುದು ಕಂಡು ಬರುತ್ತದೆ. ಧಾನ್ಯ, ಹಣ್ಣು, ತರಕಾರಿಗಳೇ ಮಾನವನ ಸಹಜ ಆಹಾರವಾಗುವ ರೀತಿಯಲ್ಲಿ ಜೀರ್ಣಾಂಗಗಳನ್ನು ಪ್ರಕೃತಿ ರೂಪಿಸಿದೆ. ಮಾಂಸಾಹಾರ ಸೇವನೆ ಪ್ರಕೃತಿ ವಿರೋಧಿಯಾಗಿರುವುದರಿಂದ ಅಂಥವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ಬಹು ಬೇಗ ರೋಗಗ್ರಸ್ತರಾಗುತ್ತಾರೆ.
ಕೊರೊನಾ ವೈರಾಣುವಿನ ಕುರಿತು ಅನಗತ್ಯವಾಗಿ ಭಯ ಹುಟ್ಟಿಸಲಾಗುತ್ತಿದೆ. ಮನೆಯಿಂದ ಹೊರಗೆ ಬಂದರೆ ಕೊರೊನಾ ಭೂತ ಹೊತ್ತೊಯ್ದು ಸತ್ತೇ ಹೋಗುತ್ತೇವೆಂದು ಜನ ಭಯಭೀತರಾಗಿದ್ದಾರೆ. ಈ ವೈರಾಣುವಿನಿಂದ ಪೀಡಿತರಾಗಿ ಮರಣಹೊಂದಿದವರಲ್ಲಿ ಹೆಚ್ಚಿನವರು ಈಗಾಗಲೇ ಇತರೆ ರೋಗಗಳಿಂದ ಬಳಲುತ್ತಿರುವವರು ಎಂದು ಸಾಬೀತಾಗಿದೆ. ಭಾರತದಲ್ಲಿ ಸಂಭವಿಸಿದ ಕೊರೊನಾ ಸಾವುಗಳಲ್ಲಿ ಶೇಕಡಾ 85 ಜನರಿಗೆ ಗಂಭೀರ ಸ್ವರೂಪದ ಇತರೆ ಕಾಯಿಲೆಗಳಿದ್ದವೆಂದು ಸರ್ಕಾರವೇ ಹೇಳುತ್ತಿದೆ. ಮಧುಮೇಹ, ಕ್ಯಾನ್ಸರ್, ಕ್ಷಯ, ಹೃದಯಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಬಹುಬೇಗ ವೈರಾಣು ರೋಗಕ್ಕೆ ಬಲಿಯಾಗುತ್ತಾರೆಂಬುದು ಸಿದ್ಧವಾಗಿದೆ. ಪ್ರಕೃತಿ ವಿರೋಧಿ ಬದುಕಿನ ಜೀವನ ವಿಧಾನವೇ ಇಂತಹ ಕಾಯಿಲೆಗಳ ಮೂಲ ಕಾರಣವೆಂಬುದು ವೈದ್ಯ ವಿಜ್ಞಾನದ ಹೇಳಿಕೆ.
ಕೊರೊನಾ ಪ್ರಸರಣ ತಡೆಯುತ್ತೇವೆಂಬ ಭ್ರಮೆಯಲ್ಲಿ ಹಲವು ದೇಶಗಳು ಲಾಕ್‍ಡೌನ್ ಘೋಷಿಸಿಕೊಂಡು, ಆರ್ಥಿಕ ಚಟುವಟಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿಕೊಂಡಿವೆ. ಇದರ ಪರಿಣಾವದಿಂದಾಗಿ ಕಲುಷಿತಗೊಂಡಿದ್ದ ಎಷ್ಟೋ ನದಿಗಳು ಶುದ್ಧವಾಗುತ್ತಿವೆ; ವಾಯುಮಾಲಿನ್ಯ ಕಡಿತಗೊಂಡಿದೆ, ಪರಿಸರ ಸ್ವಚ್ಛಗೊಳ್ಳುತ್ತಿದೆ, ಇದೇ ರೀತಿ ಲಾಕ್‍ಡೌನ್ ತೆರವುಗೊಂಡ ನಂತವೂ ಮುಂದುವರಿಯುತ್ತದೆಂದು ನಂಬಲು ಯಾವುದೇ ಆಧಾರಗಳಿಲ್ಲ. ಪ್ರಕೃತಿಯನ್ನು ದೋಚಿಯೇ ಮಾನವನ ಭೌತಿಕ ಸೌಲಭ್ಯಗಳನ್ನು ಬೆಳೆಸಿಕೊಳ್ಳಬೇಕೆಂಬ ತಪ್ಪುಗ್ರಹಿಕೆ ಹಾಗೂ ಸ್ವಾರ್ಥಕೇಂದ್ರಿತ ಚಿಂತನೆಯ ಆಧಾರದಲ್ಲಿ ರೂಪುಗೊಂಡಿರುವ ಬಂಡವಾಳವಾದಿ ಚಿಂತನೆಯಿಂದ ನಮ್ಮ ಆರ್ಥಿಕ ರೀತಿ- ನೀತಿಗಳು ರೂಪುಗೊಂಡಿವೆ. ದಶಕಗಳಿಂದಲೂ ಪರಿಸರಕ್ಕೆ ವಿಷ ಕಕ್ಕುತ್ತಿದ್ದ ಉದ್ಯಮಗಳು ಲಾಕ್‍ಡೌನ್ ತೆÉರವಿನ ನಂತರ ಕಾರ್ಯಾರಂಭ ಮಾಡಿ, ತಮ್ಮ ಮಾಲಿನ್ಯಕಾರಿ ಕ್ರಮವನ್ನು ಮುಂದುವರಿಸುತ್ತವೆ. ಇವುಗಳನ್ನು ತಡೆಯುವ, ಪರಿಸರ ಸ್ನೇಹಿ ಉದ್ಯಮನೀತಿಯನ್ನು ರೂಪಿಸಿಕೊಂಡಿರದ ಕಾರಣಕ್ಕಾಗಿ ಮುಂದೆ ಇನ್ನೊಂದು ದುರಂತಕ್ಕೆ ಆವ್ಹಾನ ನೀಡುವ ಸಿದ್ಧತೆ ನಡೆಸುತ್ತಿದ್ದೇವೆ. ಕಳೆದ 15 ವರ್ಷಗಳಿಂದೀಚೆಗೆ ಒಂದಾದ ನಂತರ ಒಂದರಂತೆ ವೈರಸ್‍ನ ಹೊಸ ಹೊಸ ರೂಪಗಳು ಮಾನವ ಸಮಾಜವನ್ನು ಕಾಡುತ್ತಿವೆ; ಆದರೂ ನಾವು ಇನ್ನೂ ಪಾಠ ಕಲಿತಿಲ್ಲ.
ಚೀನಾ ದೇಶ ತೋಡಿದ ಲಾಕ್‍ಡೌನ್ ಎಂಬ ಖೆಡ್ಡಾದಲ್ಲಿ ಪಾಶ್ಚಾತ್ಯ ದೇಶಗಳು ಸುಲಭದಲ್ಲಿ ಬಿದ್ದವು. ಭಾರತ ತಾನಾಗಿಯೇ ಈ ಖೆಡ್ಡಾದಲ್ಲಿ ಹಾರಿ ಸಿಲುಕಿಕೊಂಡಿದೆ. ಅಂತರಾಷ್ಟ್ರೀಯ ಮನ್ನಣೆ ಗಳಿಸುವ ಉದ್ದೇಶದಿಂದ, ಯಾವ ಪೂರ್ವ ತಯಾರಿಯೂ ಇಲ್ಲದೆಯೇ ಏಕಾಏಕಿ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದಾಗಿ ಕೋಟಿಗಟ್ಟಲೇ ಜನರು ಅನಗತ್ಯವಾಗಿ ತೊಂದರೆಗೆ ಸಿಲುಕಿದರು. ವೈರಿ ಪಡೆಯ ಮೇಲೆ ಆಕ್ರಮಣ ಮಾಡುವ ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ಲಾಕ್‍ಡೌನ್ ಘೋಷಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಲಾಗಿದೆ. ಸಾಕಷ್ಟು ಪೂರ್ವ ತಯಾರಿ, ಪೂರ್ವ ಸೂಚನೆಗಳನ್ನು ನೀಡಿ ಲಾಕ್‍ಡೌನ್ ಜಾರಿಗೆ ತಂದಿದ್ದರೆ ಇಷ್ಟೊಂದು ಆವಾಂತರಗಳಾಗುತ್ತಿರಲಿಲ್ಲ. ಪೋಲೀಸ್ ಬಲವನ್ನು ನೆಚ್ಚಿಕೊಂಡು ಜನರನ್ನು ಬಲವಂತವಾಗಿ ಮನೆಗೆ ಸೀಮಿತಗೊಳಿಸಬೇಕಿರಲಿಲ್ಲ.
ಸರ್ಕಾರದ ಬೆದರಿಕೆ , ರೋಗದ ಭಯ ಯಾವುದನ್ನೂ ಲೆಕ್ಕಿಸದೇ, ತಮ್ಮ ಊರುಗಳಿಗೆ ವಾಪಸು ಹೋಗಲು ಜನರು ಸಾಲುಗಟ್ಟಿದರು; ನೂರಾರು ಕಿಲೋ ಮೀಟರ್ ನಡೆದೇ ಸಾಗಿದರು. ಕೆಲಸವನ್ನು ಕಳೆದುಕೊಂಡು, ದುಡಿಮೆಯ ಅವಕಾಶವಿಲ್ಲದೇ, ಉಪವಾಸ ಸಾಯುವುದಕ್ಕಿಂತ, ತಮ್ಮ ಊರನ್ನು ಸೇರಬೇಕೆಂಬ ತವಕ, ರೋಗ ಪೀಡಿತರಾಗಿ ತಮ್ಮ ಊರಿನಲ್ಲಿ ಸತ್ತರೂ ಚಿಂತೆಯಿಲ್ಲವೆಂಬ ಅವರ ಆಕ್ರಂದನ ಅಧಿಕಾರದಲ್ಲಿದ್ದವರಿಗೆ ಅರ್ಥವೇ ಆಗಲಿಲ್ಲ. ಯಾಕೆಂದರೆ ಈ ರೀತಿಯಾಗಿ ನಡೆಯುವ ಕಾರ್ಮಿಕರ ಮರುವಲಸೆಯನ್ನು ಅವರು ನಿರೀಕ್ಷಿಸಿರಲಿಲ್ಲ.
ದಿನದ ದುಡಿಮೆಯನ್ನು ಆಧರಿಸಿಯೇ ಬದುಕಬೇಕಾದ ಸ್ಥಿತಿಯಲ್ಲಿರುವ ಕಾರ್ಮಿಕರು, ಸ್ವ- ಉದ್ಯೋಗಿಗಳು, ಚಿಕ್ಕ ಪುಟ್ಟ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರು, ರೈತರುಗಳಿಗೆ ಆಗುವ ಕಷ್ಟವೂ ಸರ್ಕಾರ ನಡೆಸುವವರು ಗಂಭೀರವಾಗಿ ಪರಿಗಣ ಸಿಯೇ ಇಲ್ಲ. ಸರ್ಕಾರದಿಂದ ಒಂದಷ್ಟು ಕೊಡುಗೆಗಳನ್ನು ಕಾಲಕಾಲಕ್ಕೆ ಘೋಷಿಸಿ, ಇವರಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸಂತುಷ್ಟಗೊಳಿಸಲು ಸಾಧ್ಯವೆಂದು ರಾಜಕಾರಣ ಗಳಿಗೆ ತಿಳಿದಿದೆ. ಅತಿ ಶ್ರೀಮಂತ ವರ್ಗ ಮತ್ತು ಆಳುವ ಪಕ್ಷಕ್ಕೆ ದೊಡ್ಡ ಮೊತ್ತದ ದೇಣ ಗೆ ನೀಡುವವರ ಹಿತಾಸಕ್ತಿ ಕಾಯುವುದೇ ತಮ್ಮ ಗುರಿ ಎಂಬಂತೆ ಸರ್ಕಾರದ ನೀತಿಗಳು ರೂಪುಗೊಳ್ಳುತ್ತಿವೆ. ಬಡವರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಉಚಿತ ಆಹಾರ ಪದಾರ್ಥ ನೀಡಿ ಸಂತುಷ್ಟಿಗೊಳಿಸುವ ಪ್ರಯತ್ನ ನಡೆದಿದೆ. ಅಕ್ಕಿ, ಬೇಳೆಯ ಹೊರತಾಗಿ ಇತರ ವೆಚ್ಚಗಳಿಗಾಗಿ ಅವರು ಏನು ಮಾಡಬೇಕೆಂಬ ಕುರಿತು ಸರ್ಕಾರ ನಡೆಸುವವರಿಗೆ ಯೋಚನೆ ಇದ್ದಂತಿಲ್ಲ. ಅತ್ತ ಬಿಪಿಎಲ್ ಕಾರ್ಡ್ ಹೊಂದಿರದ, ಇತ್ತ ದೊಡ್ಡ ಉಳಿತಾಯವನ್ನೂ ಹೊಂದಿರದ ಸ್ವ- ಉದ್ಯೋಗಿಗಳು, ಚಿಕ್ಕ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರ ಸಂಕಷ್ಟಗಳ ಕುರಿತು ಲಾಕ್‍ಡೌನ್ ಮಾಡಿ ಒಂದು ತಿಂಗಳಾಗುತ್ತಿದ್ದರೂ ಸರ್ಕಾರದ ಸ್ಪಂದನೆಯಿಲ್ಲ.
ಬಂಡವಾಳವಾದದ ಮೂಲತತ್ವವೇ ಲಾಭ ಗಳಿಕೆಯನ್ನು ಹೆಚ್ಚಿಸುವುದು. ಭೂಮಿ, ನೈಸರ್ಗಿಕ ಸಂಪನ್ಮೂಲ, ಮಾನವ ಶಕ್ತಿಯನ್ನು ಬಳಸಿ ಉದ್ಯಮ ನಡೆಸುವಾಗ, ಒಳಸುರಿಗಳು ಆದಷ್ಟು ಕಡಿಮೆ ವೆಚ್ಚದಲ್ಲಿ ಲಭ್ಯವಾಗಬೇಕು ಹಾಗೂ ಮಾರಾಟ ಮಾಡುವಾಗ ಅತಿ ಹೆಚ್ಚು ಲಾಭ ಸಿಗಬೇಕೆಂಬ ನೀತಿ ಅನುಸರಿಸಲಾಗುತ್ತಿದೆ. ಇದು ನಿಸರ್ಗ ಹಾಗೂ ಮಾನವರ ಶೋಷಣೆಗೆ ಕಾರಣವಾಗುತ್ತದೆ. ಕೇಂದ್ರೀಕೃತ ಉದ್ದಿಮೆಗಳಿಂದಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಇದರಿಂದಾಗಿ ನಗರಗಳ ಅವ್ಯವಸ್ಥಿತ ಬೆಳವಣ ಗೆ, ಕೊಳೆಗೇರಿಗಳು ಹೆಚ್ಚುತ್ತವೆ.
ಪೃಥ್ವಿಯ ಎಲ್ಲೆಡೆ ಪ್ರಕೃತಿ ಸಂಪನ್ಮೂಲಗಳನ್ನು ಹಂಚಿದೆ. ಅವನ್ನು ಗುರ್ತಿಸಿ ಬಳಸುವ ಬುದ್ದಿಮತ್ತೆಯನ್ನು ಮಾನವನಿಗೆ ನೀಡಿದೆ. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಆಥಿರ್üಕ ಚಟುವಟಿಕೆಗಳು ನಡೆದು ಜನರು ತಾವಿರುವ ಊರಿನಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಪ್ರಕೃತಿ ಅವಕಾಶ ಸೃಷ್ಟಿಸಿದೆ. ಆದರೆ ಮಾನವನ ದುರಾಸೆಯಿಂದಾಗಿ ಇದರ ವಿರುದ್ಧ ದಿಸೆಯಲ್ಲಿ ಸಮಾಜ ನಡೆಯುತ್ತಿದೆ. ಚಿಕ್ಕಪುಟ್ಟ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವದು ಅನಿವಾರ್ಯವಾಗುತ್ತಿದೆ. ಇಂತಹ ನಿಸರ್ಗ ವಿರೋಧಿ ವ್ಯವಸ್ಥೆಗೆ ಕಾರಣವಾದ ಬಂಡವಾಳವಾದವು ಪ್ರಕೃತಿ ವಿರೋಧಿ. ಇಡೀ ಜಗತ್ತು ಬಂಡವಾಳವಾದವನ್ನು ಅನುಸರಿಸುತ್ತಿರುವುದರಿಂದ ಹೊರ ಬರಲು ಪ್ರಕೃತಿ ಎಚ್ಚರಿಸುತ್ತಿದೆ.
ಭಾರತದಲ್ಲಿ ಲಾಕ್‍ಡೌನ್ ಪ್ರಾರಂಭವಾದಾಗಿನಿಂದ ಮರುವಲಸೆಯ ಮಹಾಪರ್ವ ಪ್ರಾರಂಭವಾಗಿದೆ. ಇದು ಬಹು ಗಂಭೀರವಾದ ಸಮಸ್ಯೆಯೆಂಬುದನ್ನು ಆಳುವ ಪ್ರಭುಗಳು ಅರ್ಥ ಮಾಡಿಕೊಂಡಂತೆ ಕಾಣುವುದಿಲ್ಲ. ಲಾಕ್‍ಡೌನ್‍ಗೂ ಮೊದಲೇ ಪ್ರಾರಂಭವಾದ ಆರ್ಥಿಕ ಹಿಂಜರಿತದಿಂದ ಅದಾಗಲೇ ಇದ್ದ ನಿರುದ್ಯೋಗ ಸಮಸ್ಯೆಯ ತೀವ್ರತೆ ಹೆಚ್ಚುತ್ತಿದೆ. ಅವೈಜ್ಞಾನಿಕ ಲಾಕ್‍ಡೌನ್ ಪರಿಣಾಮದಿಂದಾಗಿ ಸ್ಥಗಿತವಾಗಿರುವ ಉದ್ದಿಮೆ, ವ್ಯಾಪಾರ-ವಹಿವಾಟುಗಳು ಪ್ರಾರಂಭವಾಗಲು ತಿಂಗಳುಗಳೇ ಬೇಕು. ಪೂರ್ಣ ಪ್ರಮಾಣದಲ್ಲಿ ನಡೆಯಲು ಆರು ತಿಂಗಳಿನಲ್ಲೂ ಸಾಧ್ಯವಾಗದು. ಇದರಿಂದಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗದೇ, ಇರುವ ಉದ್ಯೋಗಾವಕಾಗಳು ಕ್ಷೀಣ ಸುವ ಸಾಧ್ಯತೆಗಳಿವೆ.
ರೈತರು ಬೆಳೆದ ಬೆಳೆಗಳು ಹೊಲದಲ್ಲೇ ನಷ್ಟವಾಗುತ್ತಿವೆ ಅಥವಾ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಹೈನುಗಾರರು, ಪಶು ಸಂಗೋಪನಾಕಾರರು, ಮೀನುಗಾರರ ಪರಿಸ್ಥಿತಿ ಕೂಡಾ ಆಶಾದಾಯಕವಾಗಿಲ್ಲ. ಹೀಗಿರುವಾಗ ಜನಸಾಮಾನ್ಯರ ಖರೀದಿ ಶಕ್ತಿ ಕುಂಠಿತವಾಗಿ ಇಡೀ ಅರ್ಥವ್ಯವಸ್ಥೆಯ ಹಿಂಜರಿತ ತೀವ್ರವಾಗುತ್ತದೆ. ಇವುಗಳ ಪರಿಣಾಮ ನಗರಗಳ ಉದ್ಯಮಗಳ ಹಿನ್ನೆಡೆ, ಉದ್ಯೋಗ ನಷ್ಟ ಹಾಗೂ ಕಾರ್ಮಿಕರ ಮರು ವಲಸೆಯಲ್ಲಿ ಹೆಚ್ಚಳವಾಗಲಿದೆ.
ಈ ಮಹಾ ಮರುವಲಸೆಯ ಪರ್ವವನ್ನು ತಡೆಯುವ ಅಥವಾ ಅದನ್ನು ಪರಿಹರಿಸುವ ಯಾವ ಚಿಂತನೆ, ಕಾರ್ಯ ಯೋಜನೆಗಳು ಇಂದಿನ ಸರ್ಕಾರಗಳಿಗೆ ಇಲ್ಲ. ಇದರಿಂದಾಗಿ ಗ್ರಾಮಗಳಲ್ಲಿ ನಿರುದ್ಯೋಗ, ಸಾಮಾಜಿಕ ಸಂಘರ್ಷಗಳು ಪ್ರಾರಂಭವಾಗಲಿವೆ.
ಮಾರ್ಚ್‍ನಲ್ಲಿ 21 ದಿನಗಳ ಲಾಕ್‍ಡೌನ್ ಘೋಷಿಸುವಾಗ ಪ್ರಧಾನಿಯವರು ದೇಶವನ್ನು ರಕ್ಷಿಸುವ ಸಲುವಾಗಿ ಈ ನಿರ್ಣಯ ಮಾಡಿರುವುದಾಗಿ ಹೇಳಿದ್ದರು. ಮನೆಯಲ್ಲಿ ಉಳಿಯದೇ ಹೊರಗೆ ಬಂದರೆ ಆರ್ಥಿಕವಾಗಿ ದೇಶ 21 ವರ್ಷಗಳಷ್ಟು ಹಿಂದೆ ಹೋಗುವುದಾಗಿ ಎಚ್ಚರಿಸಿದ್ದರು. ಕೇಂದ್ರದ ಶ್ರೀಮಂತರ ಪರ ಆರ್ಥಿಕ ನೀತಿ, ಅವೈಜ್ಞಾನಿಕ ರೀತಿಯಲ್ಲಿ ಅನುಷ್ಟಾನಗೊಳಿಸಿದ ನೋಟು ರದ್ದತಿ ಹಾಗೂ ಅಗತ್ಯವಲ್ಲದ ಲಾಕ್‍ಡೌನ್ ಹೇರಿಕೆಯಿಂದ ದೇಶದ ಜನಸಾಮಾನ್ಯರ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು ಅವರಿಗೆ ಕಾಣುತ್ತಿಲ್ಲವೇ? ಹೆಚ್ಚಿನ ಭಾರತೀಯರು ದೇಶದ ಅರ್ಥವ್ಯವಸ್ಥೆಯಲ್ಲಿ ವಿಶ್ವಾಸವನ್ನೇ ಕಳೆದುಕೊಂಡಿರುವುದು ಅವರಿಗೆ ಗೋಚರಿಸುತ್ತಿಲ್ಲವೇ?
ಬೆರಳೆಣ ಕೆಯ ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಇಡೀ ದೇಶವನ್ನು ಸಂಕಷ್ಟಕ್ಕೆ ದೂಡಿದರೂ, ಬುದ್ದಿಯನ್ನು ಒತ್ತೆಯಿಟ್ಟಿರುವ ಮಾಧ್ಯಮದವರು ಹಾಗೂ ಬುದ್ದಿಜೀವಿಗಳೆನಿಸಿಕೊಂಡವರು ಜೈಕಾರ ಹಾಕುತ್ತಿದ್ದಾರೆ. ಯಾಕೆಂದರೆ ಇವರು ಯೋಚಿಸುವುದಕ್ಕೂ ಲಾಕ್‍ಡೌನ್ ವಿಧಿಸಿಕೊಂಡಿದ್ದಾರೆ. ಬಂಡವಾಳಶಾಹಿಗಳ ಹಂಗಿನಲ್ಲಿರುವ, ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ತಮ್ಮ ಬುದ್ಧಿಶಕ್ತಿಯನ್ನೇ ಮಾರಾಟ ಮಾಡಿಕೊಂಡಿರುವವರು ಮಾಧ್ಯಮಗಳಲ್ಲಿ ಹೊಗಳುಭಟರಾಗಿದ್ದಾರೆ. ಒಪ್ಪೊತ್ತಿನ ತುತ್ತಿಗಾಗಿ ಪರಿತಪಿಸುವವರ ಕಷ್ಟ ಇವರಿಗೆ ಅರ್ಥವೇ ಆಗುವುದಿಲ್ಲ. ಸರ್ಕಾರದ ಹಾಗೂ ಫೋಟೊ ಪ್ರಿಯ ದಾನಿಗಳ ಔದಾರ್ಯದಲ್ಲೇ ಜನರು ಸದಾ ಬದುಕುತ್ತಿರಬೇಕೆಂದು ಇವರು ಬಯಸುತ್ತಾರೆ.
ಸಾಂಕ್ರಾಮಿಕ ರೋಗ ನಿರ್ವಹಣಾ ತಜ್ಞರ ಅಭಿಪ್ರಾಯದಂತೆ ಲಾಕ್‍ಡೌನ್‍ನಿಂದ ಕೊರೊನಾ ನಿರ್ಮೂಲನೆ ಸಾಧ್ಯವಿಲ್ಲ. ಇದು ತೆರವುಗೊಂಡು ಓಡಾಟ ಪ್ರಾರಂಭವಾದೊಡನೆ ಸೋಂಕು ತಗಲುವವರ ಪ್ರಮಾಣ ಒಮ್ಮೆಲೇ ಹೆಚ್ಚಾಗಲಿದೆ. ( ಆ ಸಂದರ್ಭದಲ್ಲಿ ಲಾಕ್‍ಡೌನ್ ಸಮರ್ಥಕರು ಪುನಃ ಕ್ರಿಯಾಶೀಲರಾಗುತ್ತಾರೆ) ಆದರೆ ಅದಕ್ಕಾಗಿ ಗಾಬರಿ ಪಡಬೇಕಾದ ಅಗತ್ಯವಿಲ್ಲವೆಂದು ಅವರು ಹೇಳುತ್ತಾರೆ. 5 ರಿಂದ 60 ವಯಸ್ಸಿನವರಿಗೆ ಕೊರೊನಾ ಸೋಂಕು ತಗಲುವುದರಿಂದ ಅವರಿಗೆ ಹೆಚ್ಚಿನ ತೊಂದರೆಯೇನೂ ಆಗುವುದಿಲ್ಲ. ಬದಲಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ. ಇಂದು ಪ್ರಚಾರ ಮಾಡುತ್ತಿರುವಷ್ಟು ಕೊರೊನಾ ಅಪಾಯಕಾರಿಯಲ್ಲವೆಂದು ವಾದಿಸುವವರ ಹೇಳಿಕೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಲಾಗುತ್ತಿದೆ.
ಶುದ್ಧ ಗಾಳಿಯ ಸೇವನೆ , ನಡಿಗೆ, ಧನಾತ್ಮಕ ಚಿಂತನೆಗಳು, ಮನಸ್ಸಿಗೆ ಉಲ್ಲಾಸ ನೀಡುವ ದೈಹಿಕ ಚಟುವಟಿಕೆಗಳಿಂದ ಉಸಿರಾಟ ಸಂಬಂಧಿತ ಕೊರೊನಾ ಹಾಗೂ ಇತರ ರೋಗಗಳ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯ ಎನ್ನುತ್ತಾರೆ ತಜ್ಞ ವೈದ್ಯರು.
ಹದಗೆಡುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದ ವೈಫಲ್ಯಗಳನ್ನು ಕೊರೊನಾ ನೆಪದ ಲಾಕ್‍ಡೌನ್ ತಲೆಗೆ ಕಟ್ಟಲು ಕೇಂದ್ರ ಪ್ರಯತ್ನಿಸುತ್ತಿದೆ ಎಂಬ ಆಪಾದನೆಗೆ ಪುಷ್ಠಿ ನೀಡುವಂತಹ ಹಲವು ಘಟನೆಗಳು ನಡೆಯುತ್ತಿವೆ. ಉದಾಹರಣೆಗಾಗಿ ಪಕ್ಷಾಂತರ ಪರ್ವ ನಡೆಸಿ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಿರುವದು; ಲಾಕ್‍ಡೌನ್ ಸಂದರ್ಭದಲ್ಲೇ ವಿಡಿಯೋ ಸಂವಾದದ ಸಭೆ ನಡೆಸಿ ಶರಾವತಿ ಭೂಗರ್ಭ ವಿದ್ಯುತ್ ಯೋಜನೆಯ ಅಧ್ಯಯನಕ್ಕೆ ಸಮ್ಮತಿ ನೀಡಿರುವುದು; ಪ್ರಧಾನಮಂತ್ರಿ ಪರಿಹಾರ ನಿಧಿಯೆಂಬ ಖಾತೆಯಿರುವಾಗಲೂ ಪಿಎಂ ಕೇರಸ್ ಖಾತೆ ಪ್ರಾರಂಭ ಮಾಡಿರುವುದು; ವಿದೇಶಿ ನೇರ ಹೂಡಿಕೆಗೆ ಕೆಲವು ದೇಶಗಳಿಗೆ ಮಾತ್ರ ನಿರ್ಬಂಧ ವಿಧಿಸಿರುವುದು ಇತ್ಯಾದಿ. ಸಾಂಕ್ರಾಮಿಕ ಶ್ವಾಸಕೋಶದ ರೋಗವಾದ ಕ್ಷಯದಿಂದ ಭಾರತದಲ್ಲಿ ಪ್ರತಿದಿನ ಸರಾಸರಿ 1200 ಜನರು ಸಾಯುತ್ತಿದ್ದರೂ, ಅದರ ಕುರಿತು ನೀಡಬೇಕಾದ ಕಾಳಜಿಗಿಂತ ಎಷ್ಟೋ ಪಟ್ಟು ಹೆಚ್ಚಿನ ಮಹತ್ವವನ್ನು ಕೊರೊನಾಕ್ಕೆ ನೀಡುತ್ತಿರುವುದರ ಹಿನ್ನೆಲೆ ಏನು?
ಹುಟ್ಟು– ಸಾವುಗಳನ್ನು ನಿರ್ಣಯಿಸುವುದು ಮಾನವನನ್ನು ಮೀರಿದ ಪ್ರಕೃತಿ ಶಕ್ತಿ ಎಂಬ ನಂಬಿಕೆಯನ್ನು ಹೂತು ಹಾಕಿ, ತಮ್ಮ ಸಾವನ್ನು ಮುಂದೂಡಲು ಆಡಳಿತ ನಡೆಸುವವರೇ ಸಮರ್ಥರು ಎಂದು ಬಿಂಬಿಸಲು ಯತ್ನಿಸುತ್ತಿರುವವರ ನಡೆ ಅಸಹ್ಯ ಹುಟ್ಟಿಸುತ್ತದೆ. ಆರ್ಥಿಕ, ಸಾಮಾಜಿಕ, ಬೌದ್ಧಿಕ ಕ್ಷೇತ್ರಗಳಲ್ಲಿ ನಿಸರ್ಗ ನಿಯಮವನ್ನು ಮೀರುತ್ತಿರುವವರು ಕೊರೊನಾ ಮೂಲಕ ನಿಸರ್ಗ ಹೇಳುತ್ತಿರುವ ಪಾಠದಿಂದ ಏನನ್ನೂ ಕಲಿಯದಿದ್ದರೆ ಇನ್ನಷ್ಟು ತೊಂದರೆಗೆ ಸಿಲುಕುವದನ್ನು ಯಾರೂ ತಪ್ಪಿಸಲಾರರು.
*********************