ಎ.ಎಂ.ಮದಾರಿಯವರ ಆತ್ಮಕಥೆ “ಗೊಂದಲಿಗ್ಯಾ” ಪರಿಚಯ ಲಲಿತಾ ಪ್ರಭು ಅಂಗಡಿ

ಪುಸ್ತಕ ಸಂಗಾತಿ

ಎ.ಎಂ.ಮದಾರಿಯವರ ಆತ್ಮಕಥೆ

“ಗೊಂದಲಿಗ್ಯಾ” ಪರಿಚಯ

ಲಲಿತಾ ಪ್ರಭು ಅಂಗಡಿ

ಈ ಮೊದಲೆ ಕರ್ನಾಟಕದ ಹಲವಾರು ಪತ್ರಿಕೆಗಳಾದ ಪ್ರಜಾವಾಣಿ, ವಿಜಯಕರ್ನಾಟಕ, ಕನ್ನಡಪ್ರಭ, ನವೋದಯ,ಇಂಡಿಯಾಟುಡೆ ಮುಂತಾದ ಪತ್ರಿಕೆಯಲ್ಲಿ “ಗೊಂದಲಿಗ್ಯಾ ”  ಎ,ಎಂ,ಮದರಿಯವರ ಆತ್ಮಕತೆಯ ಬಗ್ಗೆ ಹಲವಾರು ಹೆಸರಾಂತ ಸಾಹಿತಿಗಳು ತಮ್ಮ ಅಭಿಪ್ರಾಯ, ಮೆಚ್ಚುಗೆ ವ್ಯಕ್ತಪಡಿಸಿದ ಲೇಖನಗಳು    ಬಂದಿವೆ, ಕರ್ನಾಟಕದಲ್ಲಿ ತುಂಬಾ ಪ್ರಸಿದ್ಧಿ ಆಗಿರುವ ಆತ್ಮಕತೆ ಮರಾಠಿ ದಲಿತ ಕತೆ ಹೋಲುವ ಈಕ್ರೃತಿ ಶಾರ್ಟ್ ಫಿಲ್ಮ್ ಕೂಡಾ ಆಗಿದೆ ಅಮರ್ ದೇವ ಬೆಂಗಳೂರು ಇವರು ನಿರ್ದೇಶನಲಿ , ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಕೂಡಾ ದೊರಕಿದೆ,

ನನ್ನ ಗುರುಗಳಾದ ಶ್ರೀ ಎ, ಎಂ ಮದರಿಯವರ ಆತ್ಮಕತೆಯ ಪುಸ್ತಕ ವಿಮರ್ಶೆ ಮಾಡುವಷ್ಟು ಪ್ರತಿಭಾನ್ವಿತೆ ನಾನಲ್ಲದಿದ್ದರೂ ಅನಿಸಿಕೆಗಳನ್ನು ವ್ಯಕ್ತಪಡಿಸುವ ಹಂಬಲ ನನ್ನಲ್ಲಿದೆ,
ಪೈಥಾಗೊರಸ್ನ ಪ್ರಮೆ,ಗಣಿತದ ಸೂತ್ರ ವಿಜ್ಞಾನದ ಫಾರ್ಮುಲಾಗಳನು ಹೇಳಿಕೊಡುತ್ತಿದ್ದ ಗುರುಗಳ ಜೀವನದಲ್ಲಿ ಇಷ್ಟೊಂದು ಜಟಿಲ ಸಮಸ್ಯೆಯಿಂದ ಶಿಕ್ಷಕರಾಗಿ ಮೇಲೆ ಬಂದದ್ದು,ಅವರ ಆತ್ಮಕತೆಯನು ಮುಂಬಯಿಯಲ್ಲಿ ಓದಿದ ನಂತರವೇ ಗೊತ್ತಾಗಿದ್ದು,
ಅದೆಷ್ಟು ಹಿಂಸೆ ಅನುಭವಿಸಿದ್ದಾರೆ, ಅಬ್ಬಬ್ಬಾ ಓದಿದರೆ ಮೈನರಗಳೆಲ್ಲ ರೋಮಾಂಚನವಾಗುತ್ತವೆ.
ಪುಟ್ಟಿಯಲಿ ಸ್ಟೇಷನರಿ ಸಾಮಾನು ಹೊತ್ತು ಮಾರುವ ಅವ್ವನ ಹಿಂದೆ,ಹಳ್ಳಿ ಹಳ್ಳಿಗೆ ಹೋಗುವ ಸೂಕ್ಷ್ಮ ಗ್ರಹಿಕೆಯ ಲೇಖಕರು,ಅವ್ವನ ಗರ್ಭಪಾತದ ಹ್ರೃದಯಸ್ಪರ್ಶಿ ಘಟನೆಗಳಿಗೆ ತಟ್ಟುವ ಅವರಮಿಡಿತ ಓದುಗರ ಮನಸ್ಸನ್ನು ತಟ್ಟುತ್ತದೆ,

ಕೆಲವಾರು ಗುರುಗಳಿಂದ ಹಲವಾರು ಗೆಳೆಯರಿಂದ ವಿಕ್ರೃತ ಭಾವನೆಯ ಮತ್ತಲವಾರು ಮನಸ್ಸಿನವರಿಂದ ಸಮಾಜದಲ್ಲಿ ಅನುಭವಿಸಿದ ರೀತಿ ಮನಸಿಗೆ  ನೋವುಂಟು ಮಾಡುತ್ತದೆ, ಇದೆಲ್ಲವನ್ನೂ ಸಹಿಸಿದ ಅವರ ಸಹನಾ ಶಕ್ತಿ ಅದೆಂತ ಗಟ್ಟಿಯಾದದ್ದು ಆಶ್ಚರ್ಯ, ಆದರೂ ಸತ್ಯ,.

ಸಹಪಾಠಿ ತಿಮ್ಮನಗೌಡ (ದೊಡ್ಡವರ ಮೊಮ್ಮಗ)ನ ಕಳ್ಳತನವನ್ನು ಇವರ ಮೇಲೆ ಹೇರಿ ಅಮಾಯಕ ನಿರ್ದೋಷಿಯಾದ ಲೇಖಕರನ್ನು ಕಂಬಕ್ಕೆ ಕಟ್ಟಿ ಬಡಿಯುವ ರೀತಿ, ಸಮಾಜದಲ್ಲಿರುವ ಮೇಲ್ವರ್ಗದವರ ಸೊಕ್ಕಿನ ದುರ್ನಡತೆಯನ್ನು ತೋರಿಸುತ್ತದೆ, ಆಗ ಸಹಾಯಕ್ಕೆ ಬಂದ ಜಾಲಿಹಾಳ ಗುರುಗಳು ಮತ್ತು ಮಠದಲ್ಲಿಯ ಕಾಳಪ್ಪ ಅವರು ಕರುಣೆಯಿಂದ ಮನೆಗೆ ಬಿಡುವ ರೀತಿ,ಇಲ್ಲಿ ಕಾಳಪ್ಪ ನ ಮಾತುಗಳನ್ನು ಲೇಖಕರು ಹಿಡಿದಿಟ್ಟಿದ್ದು ಮೆಚ್ಚವಂತಹವು, “ಬಡವರ ಮಕ್ಳ ಅಂದ್ರ ಕಳ್ರಂತ ತಿಳಕೊಂಡಾರ, ದುಡ್ಡಿದ್ದ ಸುಳೆಮಕ್ಳ”,,
ಯಾಕ್ ಉಳಿದವರನ್ನು ಬಡಿಬೇಕಿತ್ತು, ಆ ಗಂಡಸುತನ ತೋರಿಸಬೇಕು,ಹಿಂದ ಮುಂದ ಕೇಳವರಿಲ್ಲಾಂತ,ಇಂಥ ಭಿಕಾರಿಗಳ ಮ್ಯಾಲೆ ತಾಕತ್ತ ತೋರಿಸತಾರ, ಎನ್ನುವ ಮಾತುಗಳು ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ, ಹೊಟ್ಯಾಗಿನ ಸಿಟ್ಟು ರಟ್ಯಾಗಿಲ್ಲ ಎನ್ನುವ ಮಾತಿಗೆ ಪುಷ್ಠಿ ಕೊಡುತ್ತದೆ,ಬಡವರು ಎಲ್ಲವನು ಸಹಿಸಿಕೊಳ್ಳಬೇಕಾದಂತ ಪರಿಸ್ಥಿತಿಯನ್ನು ಚಿತ್ರಿಸುತ್ತದೆ, ಲೇಖಕರ ತಾಯಿ ಸಹ ಹೆದರಿ ಮಗನ ತಪ್ಪು ಇರದಿದ್ದರೂ ಬಡಿದವರ ಮನೆಗೆ ಹೋಗಿ   ಕಾಲಿಗೆ ಬಿದ್ದು ಹುಡುಗ ತಿಳಿದಾ ತಪ್ಪು ಮಾಡೈತಿ ಮತ್ತೆ ಹೊಡೆದು ಸಾಯಿಸಬೇಡ್ರಿ ಎನ್ನುವ ಧೀನತೆ ಕರುಳು ಕಿತ್ತು ಬರುವಂತೆ ಮಾಡುತ್ತದೆ.

ಮತ್ತೊಂದು ಪ್ರಸಂಗ ಮೇಲ್ವರ್ಗದ ಮಕ್ಕಳು  ಕೆಳವರ್ಗದ ಮಕ್ಕಳ ಜೊತೆ ಆಡುವ ಅಟ್ಟಹಾಸದ ನಡವಳಿಕೆಗೆ ಕನ್ನಡಿ ಹಿಡಿದಂತಿದೆ, ಬಸಯ್ಯ ಗುಡಿ ಪೂಜಾರಿಯ ಮಗ ಮತ್ತು ಖಾಜಾಮಿರ ಇವರಿಂದ ಅನುಭವಿಸಿದ ರೈಗಿಂಗ್ ಅಂದಿನ ಕಾಲಕ್ಕೆ ಲೇಖಕರು ಅನುಭವಿಸಿದ ಬತ್ತಲೆಆಟ ಮನಮಿಡಿಯುತ್ತದೆ,
ಇನ್ನೊಂದು ಘಟನೆ ಹಕ್ಕಾಪಕ್ಕಿಯವರ ಶ್ರೀಮಂತರ ಹುಡುಗ ಗಟ್ಟಿಯಾದ ಕಟ್ಟಿಗೆಯಿಂದ ಮೊಣಕಾಲಿಗೆ ಮತ್ತು ಡುಬ್ಬಕ್ಕೆ ಹೊಡೆದದ್ದು ಆಗ ಲೇಖಕರು ಅನುಭವಿಸಿದ ಯಾತನೆ ಅವರಿಗಾದ ನೋವು,
ಮಗದೊಂದು ಪ್ರಸಂಗ ಹೊಳೆಯ ದಂಡೆಯ ಮೇಲೆ ಆದ ಮತ್ತದೆ ಸಿರಿವಂತರ ಮಕ್ಕಳಿಂದ , ಲೇಖಕರನ್ನು ನೂಕಿದಾಗ ಅಲ್ಲೆ ಇರುವ ಆರೇಳು ಇಂಚು ಇರುವ ಬೊಡ್ಡೆಯು ಅವರ ತೊಡೆಗೆ ನಾಟಿ ಸುಮಾರು ರಕ್ತಬಿದ್ದು ಅಲ್ಲಿಯೇ ಮೂರ್ಛೆ ಹೋಗಿ ಬಿದ್ದದ್ದು ಓದುಗರಿಗೆ ತಮಗರಿವಿಲ್ಲದಂತೆ ಕಣ್ಣೀರು ದಳದಳ ಹರಿಯುತ್ತವೆ,

ಅವ್ವನ ಅಳು,ತಂದೆಯ ಅಸಹಾಯಕತೆಯ ಮಾತು “ನಾವು ಈ ದರಿದ್ರ ಜಾತಿಯೊಳಗೆ ಹುಟ್ಟಿದ್ದರಿಂದ ಯಾರ್ ಎನ್ ಮಾಡಿದ್ರೂ ಜೀವಲ್ದಿಂಗಿರಬೇಕಾಗೈತಿ”!!!!ಎಂಬ ಮಾತುಗಳು ಹ್ರೃದಯಸ್ಪರ್ಶಿಸುವಂತೆ ವಿಚಾರಕ್ಕೀಡು ಮಾಡುತ್ತವೆ,

ಈಗ ಹೀಗೆ ದೌರ್ಜನ್ಯ ನಡೆಸಿದ ಎಷ್ಟೋ ಕುಟುಂಬಗಳು ಹೇಳ ಹೇಸರಿಲ್ಲದಂತಾಗಿದ್ದು “ಕಾಲ ಎನ್ನುವ ದೊಡ್ಡ ನ್ಯಾಯಾಧೀಶ” ಎನ್ನುವ ಲೇಖಕರ ಮಾತು ಬಹಳ ಅರ್ಥಗರ್ಭಿತವಾಗಿದೆ,

ಸಮಾಜದಲ್ಲಿರುವ ಕೆಲವು ಕ್ರೂರ ಮನಸ್ಸಿನ,ವಿವೇಚನೆ ಇಲ್ಲದ,ಮನುಷ್ಯ ಮನುಷ್ಯರ ನಡುವಿನ ಭಾವನೆಯ ಕೊರತೆ,ನನ್ನಂತೆ ಅವರು ಸಹ,ಅವರಿಗಾದ ಸ್ಥಿತಿ ನನಗೆ ಆಗಿದ್ದರೆ? ಅವರಂತೆ ನಾನು ನೋವು ಅನುಭವಿಸಿದರೆ? ಎಂದು ಯೋಚಿಸದೆ ಕೆಳದರ್ಜೆಯವರ ಮೇಲೆ ಮನಬಂದಂತೆ ನಡೆದುಕೊಳ್ಳುವ ಇಂತಹ ವಿಕ್ರೃತ ಮನಸುಗಳಿಗೆ ದಿಕ್ಕಾರವಿರಲಿ,

ತಾಯಿಯು ಕ್ಯಾನ್ಸರ್ ನಿಂದ ಬಳಲುವಿಕೆ ಆ ತಾಯಿ ಅನುಭವಿಸಿದ ಯಾತನೆ ಎಂತಹವರಿಗೂ ಸಹ ಕರುಳು ಕಿತ್ತು ಬರುವಂತೆ ಮಾಡುತ್ತದೆ,

ತಂದೆ ಜಾನಪದ ಕವಿಯಾಗಿ,ನಾಟಕಕಾರನಾಗಿ ಆಶುಕವಿಯಾಗಿದ್ದರೂ,ಅವರು ಅವರ ಜಾತಿಯ ಜನರಲ್ಲೆ ಅಪರೂಪದವರಾಗಿದ್ದರೂ ಸಹ ಮೇಲೆ ಬರಲು ಆಗಲಿಲ್ಲ ಅನ್ನುವ ನೋವು ಲೇಖಕರಲ್ಲಿದೆ.

ಜಾತೀಯತೆಯಿಂದ ಎಷ್ಟೊಂದು ಜನರಿಂದ ಅವಮಾನಗೊಂಡಿದ್ದಾರೆ,ಬೇರೆ ಯಾರಾದರೂ ಅವರಸ್ಥಾನದಲ್ಲಿದ್ದಿದ್ದರೆ ಭ್ರಮೆನಿರಸನರಾಗಿರುತ್ತಿದ್ದರು,

ದೈಹಿಕವಾಗಿ ಮಾನಸಿಕವಾಗಿ ಆಘಾತಗೊಳಿಸಿದ ಇಂತಹ ಸಮಾಜದ ಎದುರೆ  ಅದೆ ಊರಲ್ಲಿ ಹತ್ತನೆಯ ತರಗತಿಯಲ್ಲಿ ಡಿಸ್ಟಿಂಕ್ಷನ್ ನಲಿ ಪಾಸಾಗಿ, ಮುಂದೆ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಲೇಖಕರ ತಾಯಿಗೆ “ನಿನ್ನಮಗ ಶಾಣ್ಯಾ” ಅದಾನ ಮುಂದ ನಿನಗ ಸುಖವಾಗಿಡತಾನ ಎನ್ನುವ ಜನರ ಮಾತು ಕೇಳಿದ ಸಂತೋಷ ಮಾತ್ರ ತಾಯಿಯದು.
ಒಂದು ದಿನ ಸುಖ ಕಾಣದ ಅವ್ವ ನಡು ವಯಸ್ಸಿನಲ್ಲಿ ಮಣ್ಣಾಗಿದ್ದು ಎಂತಹವರಿಗೂ ಕೆಟ್ಟ ಅನಿಸುತ್ತದೆ.

ತಾವು ಮಗನ ಸುಖ ಕಾಣದಿದ್ದರೂ,ಸಮಾಜ ಗುರುತಿಸುವಂತ ಒಬ್ಬ ಅಪ್ರತಿಮ ಪುತ್ರನನ್ನು ಕೊಟ್ಟಂತ ಹೆಗ್ಗಳಿಕೆ ಆ ಮಾತೆಗೆ ಸಲ್ಲುತ್ತದೆ,

ಇಂತಹ ಗುರುಗಳು ನನತವರೂರು ಆದ ಕನಕಗಿರಿಯಲಿ 1974 ರಿಂದ 1985 ರವರೆಗೆ ಹನ್ನೊಂದು ವರುಷಗಳ ಕಾಲ ಹೈಸ್ಕೂಲ್ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ
ಒಬ್ಬೊಬ್ಬರ ಮನೆಯಲಿ ಮೂರು ನಾಲ್ಕು ಮಕ್ಕಳು ಇವರ ಭೋಧನೆಯನು ಪಡೆಯುವ ಅವಕಾಶ ದೊರೆತಿದ್ದು ನಮ್ಮೆಲ್ಲರ ಭಾಗ್ಯ ಎಂದೆ ಹೇಳಬೇಕು.

ಗುರುಗಳು ಪಾಠ ಮಾಡುವ ರೀತಿ ತುಂಬಾ ಅಚ್ಚುಕಟ್ಟಾಗಿತ್ತು,ಅವರ ಮೆಮರಿ ಪವರ್ ತುಂಬಾ ತೀಕ್ಷ್ಣ ವಾದದ್ದು, ಅನ್ಲಿಮಿಟೆಡ್ ಜಿ,ಬಿ,ಅಂತಹ ಮೆಮರಿ ಕಾರ್ಡ್ ಅವರಮೆದುಳಿನಲಿ,
ಶಿಸ್ತು, ನಿಷ್ಟಾವಂತ ಸೇವೆ,ಶ್ರಮಜೀವಿಗಳಾಗಿದ್ದರು, ವಿಜ್ಞಾನದ ಶಿಕ್ಷಕರಾಗಿದ್ದರೂ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಕೊರಿಯೋಗ್ರಾಫರ್ ಆಗಿದ್ದರು,
ಹಲವಾರು ವಿಮರ್ಶೆ, ಕತೆಗಳನು ಬರೆಯುತ್ತಿದ್ದರು,

ಶಿಕ್ಷಕ ವ್ರೃತ್ತಿಯಲಿರುವಾಗಲೆ ಕೆ,ಎ, ಎಸ್ ಪರೀಕ್ಷೆಯಲ್ಲಿ ಪಾಸಾಗಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಗೊಂದಲಿಗ್ಯಾ  ಎಂಬ ಆತ್ಮಕತೆಯನು ಅತ್ಯಂತ ಪ್ರಾಮಾಣಿಕವಾಗಿ ಯಾವುದೇ ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟಿದ್ದಾರೆ.
ಇವರು ಪಟ್ಟಪಾಡೆಲ್ಲವು ಹುಟ್ಟು ಹಾಡಾದಂತೆ ಅವರ ಜೀವನದುದ್ದಕ್ಕೂ ನಡೆದ ಅನುಭವಿಸಿದ ಘಟನೆಗಳು ಒಂದಲ್ಲ ಎರಡಲ್ಲ ನೂರಾರು ಅವೆಲ್ಲವನ್ನೂ ಅನುಭವಿಸಿ, ನಿಭಾಯಿಸಿ, ಜೀವನಕ್ಕೆ ಒಂದು ಸೂತ್ರವನ್ನು ಕೊಟ್ಟು ಆ ಸೂತ್ರಕ್ಕೆ ಒಂದು ವ್ಯವಸ್ಥೆಯ ಪ್ರೇಂ ಹಾಕಿ ವ್ಯವಸ್ಥೆಯ ವ್ಯವಸ್ಥೆ ಅಂತ ಹೇಳ್ತಿವಲ್ಲ ಆತರಹ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಮದರಿ ಗುರುಗಳು.

ಕೇವಲ ತಮ್ಮ ಬಗ್ಗೆ ಅಲ್ಲ ಅವರ ಇಡೀ ಜನಾಂಗದ ಏಳ್ಗೆಯನ್ನು ಬಯಸುವ ಗುರುಗಳ ಮನೋಭಾವ, ಆಶಾಕಿರಣ,ಅವರ ಬಗ್ಗೆ ಇರುವ ಕಳಕಳಿ ಎತ್ತಿ ತೋರಿಸುತ್ತದೆ.

ಇಂತಹ ಅಮೋಘ ಕ್ರೃತಿಯನು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಹೆಗ್ಗಳಿಕೆ ಅವರದಾಗಿದೆ,ಆ ಮೂಲಕ ಇಂತಹ ಗುರುಗಳ ಕೈಯಲ್ಲಿ  ಕಲಿತ ಭಾಗ್ಯ ನನ್ನದು ನಮ್ಮ ಗುರುಗಳು ಎನ್ನುವ ಅಭಿಮಾನ ಹೆಮ್ಮೆ ನಮ್ಮದಾಗಿದೆ,

 ಈಕ್ರೃತಿಗೆ ಅಲಂಕರಿಸಿದ ಪ್ರಶಸ್ತಿಗಳು,
1) ಕರ್ನಾಟಕ ವಿ,ವಿ ದ ಪ್ರೊ ಸ,ಸ, ಮಾಳವಾಡ ಪ್ರಶಸ್ತಿ,

2) ಕ,ಸಾ,ಪ,ನಿಡಸಾಲೆ ಪುಟ್ಟಸ್ವಾಮಯ್ಯ ದತ್ತಿನಿಧಿ ಪ್ರಶಸ್ತಿ,
3) ನರೇಗಲ್ ಬಾಲಕ್ರೃಷ್ಣ ಸಾಹಿತ್ಯ ಪುರಸ್ಕಾರ
4) ಕಲಬುರ್ಗಿಯ ಕನ್ನಡನಾಡು ಲೇಖಕರ ಮತ್ತು ಓದುಗರ ಒಕ್ಕೂಟ ನಿಯಮಿತ ಸಾಹಿತ್ಯ ಪ್ರಶಸ್ತಿ.

5) ಡಿ, ದೇವರಾಜ್ ಅರಸು ಪ್ರಶಸ್ತಿ.

6) ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,

ಹೀಗೆ ಪ್ರಶಸ್ತಿಗೂ ಶೋಭೆ ತಂದಿರುವ ಮನಮುಟ್ಟುವ ಆತ್ಮಕತೆ ಗೊಂದಲಿಗ್ಯಾ, ಓದಲೇಬೇಕಾದ ಪುಸ್ತಕ,


ಲಲಿತಾ ಪ್ರಭು ಅಂಗಡಿ

One thought on “ಎ.ಎಂ.ಮದಾರಿಯವರ ಆತ್ಮಕಥೆ “ಗೊಂದಲಿಗ್ಯಾ” ಪರಿಚಯ ಲಲಿತಾ ಪ್ರಭು ಅಂಗಡಿ

Leave a Reply

Back To Top