ಡಾ.ಡೋ.ನಾ.ವೆಂಕಟೇಶ-ಹಂತ

ಕಾವ್ಯ ಸಂಗಾತಿ

ಡಾ.ಡೋ.ನಾ.ವೆಂಕಟೇಶ-

ಹಂತ

ಈ ಚತುರ್ದಶಿಗೆ
ಅರ್ಧ ಶತಕದ ಹತ್ತಿರದ
ವೈದ್ಯ ವೃತ್ತಿ
ಮತ್ತದರ ತುಸು ಮುಂಚಿನ
ಸಾಹಿತ್ಯ ಪ್ರವೃತ್ತಿ

ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ
ಸಂತೃಪ್ತಿಯ ಸಂತೆ
ಮುಗಿಯಲೇ ಯಿಲ್ಲ

ಬದುಕು ಹಸುರಾಗಿ ಬೆಳೆದ
ಬೆಳೆಗಳೆಷ್ಟೋ!
ಲೆಕ್ಕವಿಲ್ಲದಷ್ಟು ಬೆಳೆದ
ಪೈರುಗಳೆಷ್ಟೋ!

ಹೀಗೇ
ಹಿಂದಿನ ಒಂದು ವರ್ಷ-

ಎಳೆಯ ಒಂದು ತಾಯಿ ಬಂದು
ಕೈಲೊಂದು ಕುಡಿಗೂಸು ಹಿಡಿದು ನಿಂತು
ಇಣುಕಿಣುಕಿ ನೋಡಿ ನನ್ನ

ಹರ್ಷಾತಿರೇಕದಿಂದ ಕರೆದಳು
ತನ್ನ ತಾಯಿಯನ್ನ
“ನೋಡವ್ವ ನನ್ನವ್ವ,
ಇವರೇ, ಇನ್ನೂಊ ಬದುಕ್ ಅವರೇ,
ನನ್ನ ಅಂದು ಬದುಕಿಸಿದವರೇ”

ಹರ್ಷ ಸಾಂಕ್ರಾಮಿಕವಾಗಿ
ಕಣ್ಣಂಚಿನ ಮುತ್ತುಗಳು
ಹೊಳೆ ಹೊಳೆವ ಹಾರವಾಗಿ
ಸಂಭ್ರಮದ ಹೊಸ ಲೋಕ ಸೃಷ್ಟಿ!

ಕಲಿತಿದ್ದ ವಿದ್ಯೆ
ತಲೆಮಾರುಗಳ ಗಡಿ ದಾಟಿ
ಅನ್ಯೋನ್ಯತೆ
ಕೃತಕೃತ್ಯತೆ ,ಧನ್ಯತೆಯ
ಲೋಕದ ಮರು ಸೃಷ್ಟಿ ಅಂದು
ನನ್ನ ಚಿಕಿತ್ಸಾಲಯದಲ್ಲಿ!

ಮರೆತಿದ್ದೆ-

ಈಗೈದು ಸಂವತ್ಸರಗಳ ಹಿಂದೆ
ನನ್ನ ಹುದುಗಿದ್ದ ಸಾಹಿತ್ಯದ
ಮರು ಸೃಷ್ಟಿ!

“ಮರೆತಂತೆ ಯಾಕೆ ಇದ್ದೀ! ಸುಂದರ
ಕವನಗಳ ಉಣ ಬಡಿಸಲಿಲ್ಲ ಯಾಕೆ?
ಇಷ್ಟು ದಿನ ಮಾನ ಯಾಕೆ
ಮೌನ?
ಕವನದ ಕಥನ ಈ ಮೊದಲೇ
ಯಾಕೆ ಅಣುರಣಿಸಲಿಲ್ಲ”
ಉಸುರಿದಳು ನನ್ನ ಕವಿತೆ.

ಎಲ್ಲ ಹಂತಗಳೂ ಈಗ
ಹಂತ ಹಂತವಾಗಿ ಮುಗಿದು
ಸ್ವಾಗತಿಸ ಬೇಕು ಕಡೆಯ ಹಂತ !

ವೈದ್ಯ-ಸಾಹಿತ್ಯ
ಏನೂ ಇಲ್ಲದಂತಹ
ಪರಮ ಸತ್ಯದ ಹಂತ!
ಎಲ್ಲಾ ಚತುರ್ದಶಿಗಳ
ಮುಂದಿನ ಹಂತ

ಹುಣ್ಣಿಮೆ ಮತ್ತು ಅಮಾವಾಸ್ಯೆಗಳ
ಪರಮ ಸತ್ಯದ ಹಂತ

ನಿತ್ಯ ಸತ್ಯ!!


ಡಾ.ಡೋ.ನಾ.ವೆಂಕಟೇಶ

17 thoughts on “ಡಾ.ಡೋ.ನಾ.ವೆಂಕಟೇಶ-ಹಂತ

  1. ಹಂತ ಹಂತವಾಗೀ
    ಮೆಟ್ಟಿಲನು ಏರ ಬೇಕು,
    ಅಂದಿಗೆ ಸುಖಃ ಕಾಣೋ ಮಿತ್ರ…
    ಆಗಸಕೆ ಜಿಗಿದವನ,
    ಬೀಳುವಿಕೆಯಲ್ಲಿದೆ
    ಪಟಾಕಿಯ ಶಬ್ದ .
    ಅದು ಬೇಡ ನಿನಗೆ.
    ಮುಗಿಲೆತ್ತರಕ್ಕೇರು, ಸಾಹಿತ್ಯದ ಸೋಪಾನದಿ ,
    ನಿಧಾನವೇ ಪ್ರಧಾನ,
    ನೆನಪಿರಲಿ ಎಂದೆಂದೂ.

    1. ಸೂರ್ಯ
      ರವಿ ಅಷ್ಟೇ ಅಲ್ಲ ನೀ
      ಕಂಗೊಳಿಸುವ ಕವಿ !
      Thanks a lot Surya!

Leave a Reply

Back To Top