ಸ್ತ್ರೀ ಎಂದರೆ ಅಷ್ಟೇ ಸಾಕೆ?ಸುಜಾತ ಗಿಡ್ಡಪ್ಪಗೌಡ್ರ

ಲೇಖನ

ಸ್ತ್ರೀ ಎಂದರೆ ಅಷ್ಟೇ ಸಾಕೆ?

ಸುಜಾತ ಗಿಡ್ಡಪ್ಪಗೌಡ್ರ

ಸ್ತ್ರೀ ಎಂದರೆ ಅಷ್ಟೇ ಸಾಕೆ….
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ. ….


ಜಿ.ಎಸ್.ಶಿವರುದ್ರಪ್ಪ ನವರು ಬರೆದ ಈ ಸಾಲುಗಳಲ್ಲಿ ಜೀವಸಂಕುಲದ ಬೆಳವಣಿಗೆಗೆ ಕಾರಣಳಾದ ಜಗನ್ಮಾತೆಗೆ ಕೇವಲ ಒಂದು ಪದ “ಸ್ತ್ರೀ ” ಎಂಬುದು ಸಾಕಾಗುತ್ತಿಲ್ಲ ಎಂಬ ವೇದನೆ ಅದರೊಂದಿಗೆ ಸ್ತ್ರೀ ಯ ಸಾರ್ಥಕತೆ ಇದೆ.
ಅನಾದಿ ಕಾಲದಿಂದಲೂ ನಾಲ್ಕು ಗೋಡೆಗಳ ಮಧ್ಯೆ ಇದ್ದು ತನ್ನ ಅಸ್ತಿತ್ವ ಹಾಗೂ ಅಸ್ಮಿತೆಯ ಹೋರಾಟದಲ್ಲಿ ತನ್ನದೊಂದು ಗುರುತನ್ನು ಹುಡುಕುತ್ತಾ ಕುಳಿತಿದ್ದ ಹೆಣ್ಣು ಇಂದು ಮನೆಯಿಂದ , ಊರಿನಿಂದ, ರಾಜ್ಯ, ದೇಶ ಅಷ್ಟೇ ಏಕೆ ಈ ಭೂಮಿಯ ಗಡಿಯನ್ನೇ ದಾಟಿ ಮಂಗಳ ಗ್ರಹವನ್ನು ಮುಟ್ಟಿ ಬಂದಿದ್ದಾಳೆ. ಸದಾ ಇತರಿಗಾಗಿ ಬದುಕಬೇಕು, ದುಡಿಯಬೇಕು, ಯೋಚಿಸಬೇಕು, ಸಂಭ್ರಮಿಸಬೇಕು ಎನ್ನುತ್ತಿದ್ದ ಈ ಸಮಾಜದಿಂದಲೇ ತನ್ನನ್ನು ಕುರಿತು ಯೋಚಿಸಿ, ಚಿಂತಿಸಿ, ಯೋಜಿಸಿ ಅವಳ ಗೆಲುವನ್ನು, ಸಂತೋಷವನ್ನು ಸಂಭ್ರಮಿಸುವ ಹಂತಕ್ಕೆ ಬೆಳೆದು ನಿಂತಿದ್ದಾಳೆ.
ಮನೆಯೆಂಬ ಪುಟ್ಟ ಜಗತ್ತಿನ ಯಜಮಾನಿ, ಚಕ್ರವರ್ತಿಣಿ, ಸಾಮ್ರಾಟಿಣಿಯಾದ ಹೆಣ್ಣು ಇಂದು ದೇಶ, ಜಗತ್ತನ್ನು ಆಳಬಲ್ಲ ವೀರಾಗ್ರಣಿಯಾಗಿದ್ದಾಳೆ. ತನ್ನ ಜೀವನವೇ ಒಂದು ಸುಂದರ ಕವಿತೆ ಎಂದು ತೋರಿಸಿದ ಆ ಮಹಿಳೆಗೆ ದೊಡ್ಡದೊಂದು ಸಲಾಂ.


ನೀನ್ಯಾತಕ್ಕೆ ಲಾಯಕ್ಕು… ನಿಂದಿಷ್ಟೇ ಗೋಳು…. ನೀನಿಷ್ಟೇ…. ಎಂದು ತೀರ್ಮಾನಿಸಿದವರ ಮುಂದೆಯೇ ಬೆಳೆದು ತನ್ನ ಬೆಲೆ, ಘನತೆ, ಗೌರವ ಆಕಾಶದ ಎತ್ತರಕ್ಕೆ ಎಂದು ತೋರಿಸಿದ್ದಾಳೆ.
ಪರಿಸರದ ಪ್ರತಿ ಜೀವಿಯ ಉಗಮಕ್ಕೆ ಸ್ತ್ರೀ ಎಂಬುದೊಂದು ಇರದೆ ಇದ್ದರೆ ನಾವಿಂತಹ ಸುಂದರ ಲೋಕದಲ್ಲಿ ಇರಲು ಆಗುತ್ತಿರಲಿಲ್ಲ. ಆಕೆಯ ನಿಸರ್ಗ ಸೃಷ್ಟಿಯ ಮುಂದೆ ಉಳಿದುದೆಲ್ಲವೂ ತೃಣಕ್ಕೆ ಸಮಾನ.
ಬಿದ್ದಲ್ಲೇ ಎದ್ದು, ಅವಮಾನಿಸಿದಲ್ಲೇ ಸನ್ಮಾನಿಸಿಕೊಂಡು, ಹೀಗಳೆದಲ್ಲೇ ಹೊಗಳಿಸಿಕೊಂಡು, ಪುಟಿದೆದ್ದು, ಸಿಡಿದೆದ್ದು… ತನ್ನನ್ನು ತಾನು ಯಾರೆಂದು ನಿರೂಪಿಸಿಕೊಂಡ ಮಹಿಳೆಗೆ ಸಾವಿರ ಸಾವಿರ ನಮನಗಳು.
ತನ್ನ ಮನೆಯಿಂದ ಹಿಡಿದು ದೇಶದ ಉನ್ನತ ಸ್ಥಾನದವರೆಗೂ ಅಧಿಕಾರವಹಿಸಿ ಉತ್ತಮವಾಗಿ ನಿರ್ವಹಿಸಿ ತೋರಿಸಿದ ಈ ಮಹಿಳೆಗೆ, ಹೆಣ್ಣಿಗೆ, ಸ್ತ್ರೀ ಎಂದರೆ ಅಷ್ಟೇ ಸಾಕೆ. … ???? ಆಕೆಯ ಸಾರ್ಥಕ ಬದುಕಿನ ಚಿಂತನೆಗೆ… ಆಕೆಯ ನಿಷ್ಕಲ್ಮಶ ಪ್ರೀತಿಗೆ… ಆಕೆಯ ನಿಸ್ವಾರ್ಥ ತ್ಯಾಗಕ್ಕೆ… ತನ್ನನ್ನೇ ತಾನು ಸಮರ್ಪಿಸಿಕೊಳ್ಳುವ ರೀತಿಗೆ ನಾವೇನೆಂದು ಹೆಸರಿಡೋಣ….!!!!!!?????


ಸುಜಾತ ಗಿಡ್ಡಪ್ಪಗೌಡ್ರ

Leave a Reply

Back To Top