ಭೂದೇವಿ
ಡಾ: ಪ್ರಸನ್ನ ಹೆಗಡೆ
ಕಾಣದ ದೇವರ ಹುಡುಕುವೆ ಏಕೋ
ಕಾಣುವ ದೇವತೆ ಈ ಭೂಮಿ
ನಾವೆಲ್ಲರೂ ಇರುವಾ ನಮ್ಮೆಲ್ಲರ ಹೊರುವಾ
ಪ್ರತ್ಯಕ್ಷ ದೇವತೆ ಈ ಧರಣಿ
ಗಂಧದ ಕಾಡನು ಜೇನಿನ ಗೂಡನು
ಕರುಣಿಪ ದೇವತೆ ಈ ಧರಣಿ
ತಣ್ಣನೆ ಹೊನಲನು ತುಂಬಿದ ಹೊಲವನು
ಹೊತ್ತಿಹ ದೇವತೆ ಈ ತರುಣಿ
ಏನು ಬಿತ್ತಿದರೂ ಬೆಳೆಯನು ಕೊಡುವಾ
ಅಕ್ಷಯ ಪಾತ್ರೆಯೇ ಈ ಭೂಮಿ
ಸಾವಿರ ತಪ್ಗಳ ನಗುತಾ ಕ್ಷಮಿಸುವ
ಕ್ಷಮಾಧಾತ್ರಿಯೆ ಈ ಭೂಮಿ
ಒದೆಯುವ ಕಾಲ್ಗಳ ಜರಿಯದೆ ಇರಿಯದೆ
ಚುಂಬಿಸೊ ದೇವತೆ ಈ ಧರಣಿ
ಉಗುಳುವ ಬಾಯ್ಗಳ ತೆಗಳದೆ ತದುಕದೆ
ತುತ್ತೀಯುವ ತಾಯಿ ಈ ಜನನಿ
ಧರ್ಮವ ಕೇಳದೆ ಜಾತಿಯ ನೋಡದೆ
ಎಲ್ಲರ ಹೊರುವಳು ಈ ಭೂಮಿ
ಏನನೂ ಕೇಳದೆ ಎಲ್ಲವ ನೀಡುವ
ಕರುಣಾ ಮಯಿಯೇ ಈ ಭೂಮಿ
ಚಂದದ ಮಣ್ಣನು ರುಚಿ ರುಚಿ ಹಣ್ಣನು
ಈಯುವ ದೇವತೆ ಈ ರಮಣಿ
ಜೀವ ಜಲವನು ಉಸಿರಾಟಕೆ ಉಸಿರನು
ಕರುಣಿಪ ಕರುಳೇ ಈ ಧರಣಿ
ದುಡಿಯುವ ಕೈಗೆ ದುಡಿಮೆಯ ನೀಡುವ
ಕೊಡುಗೈ ದೇವಿ ಈ ಭೂಮಿ
ಸತ್ತರೂ ಎಸೆಯದೆ ಕೈಗಳ ಚಲ್ಲದೆ
ಮಡಿಲನೆ ಕೊಡುವಳು ಈ ಜನನಿ
********
ಅದ್ಭುತ ಕಾಣಿಕೆ, ಭೂರಮೆಗೆ.
ಧನ್ಯವಾದಗಳು