ದಾವಣಗೆರೆಯ ಕಪ್ಪು ಗುಲಾಬಿ
ಮಲ್ಲಿಕಾರ್ಜುನ ಕಡಕೋಳ
ಕಣ್ಮರೆಯಾದ ದಾವಣಗೆರೆಯ ಕಪ್ಪು ಗುಲಾಬಿ
ಆ ಪುಟ್ಟ ಕಂದನಿಗೆ ಎರಡು ವರ್ಷವೂ ತುಂಬಿರಲಿಲ್ಲ. ಮೊಲೆಹಾಲು ಕುಡಿಯುವ ಆ ಹಸುಳೆಯ ತಂದೆ ಜೈಲು ಸೇರಬೇಕಾದ ದುಃಸ್ಥಿತಿ. ಅವರೇನು ಕಳ್ತನ, ದರೋಡೆ ಮಾಡಿ ಜೈಲು ಸೇರಿದ್ದಲ್ಲ. ಮಿಲ್ಲುಗಳಲ್ಲಿ ದುಡಿಯುವ ಕೂಲಿ ಕಾರ್ಮಿಕರ ಪರವಾಗಿ ಹೋರಾಟ ಮಾಡಿ ಕಾರಾಗೃಹ ಸೇರಬೇಕಾಯ್ತು. ದಿಟ್ಟ ಹೋರಾಟಕ್ಕೆ ಸಿಕ್ಕ ಕೆಟ್ಟ ಪ್ರತಿಫಲ ಎಂಬಂತೆ ಒಂದಲ್ಲ ಎರಡು ಬಾರಿ, ಒಟ್ಟು ಹದಿನಾಲ್ಕು ವರುಷ ಈ ತಂದೆ ಜೈಲು ಪಾಲಾದರು. ತಂದೆಯ ಅನುಪಸ್ಥಿತಿಯಲ್ಲೇ ಈ ಪುಟ್ಟ ಬಾಲಕ ಧೃತಿಗೆಡದೇ ಸಂಕಟದ ಬಾಲ್ಯ ಕಳೆಯುತ್ತಾನೆ. ಅವನ ತಾಯಿ ನಾಗರತ್ನಮ್ಮ ಪಕೋಡ ಮಾರಿ ಮಗನನ್ನು ಸಲಹುತ್ತಾಳೆ. ಅರವತ್ತರ ದಶಕದಲ್ಲಿ ಅಂದು ಸೆರೆಮನೆವಾಸಿಯಾಗಿದ್ದ ತಂದೆಯ ಹೆಸರು ಕಾಮ್ರೇಡ್ ಎಂ. ಜಿ. ತಿಪ್ಪೇಸ್ವಾಮಿ. ಕಂದನ ಹೆಸರು ಎಂ. ಟಿ. ಸುಭಾಷ್. ವರ್ತಮಾನದ ಕಾಂಗ್ರೆಸ್ ಪಕ್ಷದ ಯುವ ಮುಖಂಡನೇ ನಮ್ಮ ಸುಭಾಷ್, ಅವರ ತಂದೆ ಕಾಂ. ಎಂ.ಜಿ. ತಿಪ್ಪೇಸ್ವಾಮಿ ಮೊನ್ನೆಯಷ್ಟೇ (೦೪.೦೩.೨೦೨೦) ತೀರಿಕೊಂಡರು.
ಎಂ.ಜಿ.ಟಿ. ಅವರು ಎಂಬತ್ತೊಂದು ವರ್ಷಗಳ ತುಂಬು ಜೀವನ ಬಾಳಿ ಬದುಕಿದವರು. ಅವರು ಅಕ್ಷರಶಃ ಹೋರಾಟದ ಕಿಚ್ಚಿನ ಹಿರಿಯ ಚೇತನ. ಜೈಲಿಗೆ ಹೋಗಿ ಬಂದವರಿಗು, ಮತ್ತು ಅವರನ್ನು ನೋಡುವ ಸಮಾಜಕ್ಕು ಒಂದು ಬಗೆಯ ಮುಜುಗರ, ಕಳಂಕದ ಕನವರಿಕೆಗಳು. ಆದರೆ ತಿಪ್ಪೇಸ್ವಾಮಿ ಅಳುಕಲಿಲ್ಲ, ಅಂಜಲಿಲ್ಲ. ಫೀನಿಕ್ಸ್ ಪಕ್ಷಿಯಂತೆ ಬೂದಿ ತುಂಬಿದ ಕೆಂಡ ಕೊಡವಿಕೊಂಡು, ರೆಕ್ಕೆ ಜಾಡಿಸಿಕೊಂಡೆದ್ದು ನಿಂತರು. ದಾವಣಗೆರೆಯಲ್ಲಿ ಭಾರತ ಕಮ್ಯುನಿಸ್ಟ್ ಪಾರ್ಟಿಯನ್ನು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಕಟ್ಟುವಲ್ಲಿ ಪಂಪಾಪತಿ ಅವರಿಗೆ ಹೊಯ್ ಕೈಯಾಗಿ ಶ್ರಮಿಸಿದರು. ಅದರ ಫಲವಾಗಿ ನಗರಸಭೆ ಆಡಳಿತದ ಚುಕ್ಕಾಣಿಯನ್ನು ಹಿಡಿದು ಪಂಪಾಪತಿ ನಗರಸಭಾಧ್ಯಕ್ಷರಾದರು. ದಾವಣಗೆರೆ ನಗರಕ್ಕೆ ಹಸಿರು ಮತ್ತು ಉಸಿರನ್ನು ತಂದುಕೊಟ್ಟ ಪಂಪಾಪತಿ ಮತ್ತು ಕಮ್ಯುನಿಸ್ಟ್ ಪಾರ್ಟಿಯನ್ನು ಈ ಊರು ಇನ್ನೂ ನೂರು ವರ್ಷ ಕಳೆದರೂ ಮರೆಯುವಂತಿಲ್ಲ. ಅಂತಹ ಮರೆಯಲಾಗದ ಹತ್ತು ಹಲವು ಕೆಲಸಗಳಲ್ಲಿ ಎಂ.ಜಿ.ಟಿ. ಅವರಿಗೂ ಸಿಂಹಪಾಲಿದೆ. ಅಷ್ಟು ಮಾತ್ರವಲ್ಲದೆ ಕಾಂ. ಪಂಪಾಪತಿ ಅವರು ನಿರಂತರವಾಗಿ ಮೂರು ಅವಧಿಗೆ ದಾವಣಗೆರೆ ಶಾಸಕರಾಗಿ ಆಯ್ಕೆಯಾದರು. ಅದರ ಹಿಂದಿನ ದಿವಿನಾದ ಶಕ್ತಿಗಳಲ್ಲಿ ಎಂ.ಜಿ.ಟಿ. ಡೆಮಾಕ್ರಸಿಯು ದೈತ್ಯ ಶಕ್ತಿಯಂತೆ ಕೆಲಸ ಮಾಡಿದ್ದನ್ನು ಯಾರೂ ಮರೆಯಲಾಗದು.
ಅವು ಅರವತ್ತರ ದಶಕದ ದಿನಮಾನಗಳು. ಡಾವಣಗೇರಿಯೆಂಬ ಗಿರಣಿಗಳ ನಗರಿಯಲ್ಲಿ ಶ್ರಮಸಂಸ್ಕೃತಿಯ ಕೆಂಬಾವುಟ ಮುಗಿಲೆತ್ತರಕ್ಕೆ ಹಾರಾಡಲು ಶುರುವಿಟ್ಟುಕೊಂಡ ಕಾಲಮಾನ. ಕಾಂ. ಮಾಣಿಕ್ಕಂ ಪಂಪಾಪತಿ ೧೯೫೫ ರ ಸುಮಾರಿಗೆ ದಾವಣಗೇರಿಗೆ ಬರುವ ಪೂರ್ವದಲ್ಲೇ ದಾವಣಗೆರೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಇತ್ತು. ಕಾಂ. ಬಿ. ವಿ. ಕಕ್ಕಿಲಾಯ ಅವರ ಮಾರ್ಗದರ್ಶನದಲ್ಲಿ ಕಮ್ಯುನಿಷ್ಟ್ ಪಕ್ಷದ ಕಾರ್ಯಚಟುವಟಿಕೆಗಳ ಕೆಂಬಾವುಟವನ್ನು ಪತ್ರಕರ್ತ “ಪುಢಾರಿ” ಮುರಿಗಯ್ಯ, ಮಲಕಪ್ಪ, ವಕೀಲರಾದ ಎಚ್. ಎಸ್. ರಾಮಚಂದ್ರರಾಯರು ಹಾಳತವಾಗಿ ಹಾರಿಸಿದ್ದುಂಟು. ಹೊಸಪೇಟೆಯಿಂದ ಬಂದ ಅಗಮುಡಿ ಮೊದಲಿಯಾರ ಜನಾಂಗದ ಪಂಪಾಪತಿ, ದಾವಣಗೆರೆ ಕಾಟನ್ ಮಿಲ್ ಕಾರ್ಮಿಕನಾಗಿ ಕಸ ಹೊಡೆಯುವ ಕೆಲಸಕ್ಕೆ ಸೇರಿದ ಮೇಲೆ ಕೂಲಿ ಕಾರ್ಮಿಕರನ್ನು ಸಂಘಟಿಸುತ್ತಾರೆ. ಆಗ ಪಂಪಾಪತಿ ಹೇಳುತ್ತಿದ್ದುದು : ಚಂದ್ರೋದಯ ಮಿಲ್ಲಿನ ಎಚ್. ಕೆ. ರಾಮಚಂದ್ರಪ್ಪ, ಗಣೇಶರ ಮಿಲ್ಲಿನ ಎಂ.ಜಿ. ತಿಪ್ಪೇಸ್ವಾಮಿ ಈ ಇಬ್ಬರೂ ನನಗೆ ಎಡಗೈ ಬಲಗೈಗಳಿದ್ದಂತೆ. ಆಗ ಕಾಂ. ಆನಂದತೀರ್ಥ ಅವರು ದಾವಣಗೆರೆ ಕಮ್ಯುನಿಸ್ಟ್ ಪಾರ್ಟಿಯ ಬ್ರೇನ್ ಆಗಿದ್ದರು. ಮುಖ್ಯವಾಗಿ ಕಾರ್ಮಿಕರ ಪರ ಹೋರಾಟದಲ್ಲಿ ಮಡಿದ ಹಿರಿಯರಾದ ಕಾಂ.ಸುರೇಶ್ ಮತ್ತು ಕಾಂ. ಶೇಖರಪ್ಪ ಅವರು ಕಾರ್ಮಿಕ ಹೋರಾಟದ ಮುಂಚೂಣಿ ನಾಯಕರೆಂಬುದು ಯಾರೂ ಮರೆಯಲಾಗದು.
ಡಾವಣಗೇರಿ, ದುಡಿಯುವ ವರ್ಗಗಳ ಪ್ರೀತಿ ಸೌಹಾರ್ದತೆಗಳ ಊರು. ಈ ಊರಿನ ಇತಿಹಾಸಕ್ಕೆ ಕಾರ್ಮಿಕ ಪ್ರಜ್ಞೆಯ ಜೀವ ಸಂವೇದನೆಗಳಿವೆ. ಅಜಮಾಸು ಅರ್ಧಶತಮಾನಕ್ಕು ಅಧಿಕವೆನ್ನಬಹುದಾದ ಆರೇಳು ದಶಕಗಳ ಹಿಂದಿನ ಗಟ್ಟಿ ಹೋರಾಟದ ಐತಿಹಾಸಿಕ ನೆಲೆಗಟ್ಟಿನ ದಿನಮಾನಗಳವು. ಹತ್ತಾರು ಹತ್ತಿಗಿರಣಿಗಳು, ಸಣ್ಣಪುಟ್ಟ ಇತರೆ ಹತ್ತಾರು ಕಾರ್ಖಾನೆಗಳ ಊರು. ಹಳೇ ಡಾವಣಗೇರಿಯ ಮನೆ ಮನೆಗಳಲ್ಲೂ ಹತ್ತಿಗಿರಣಿಗಳಿಗೆ ಬೇಕಾಗುವ ನೂಲುಲಡಿ ತಯಾರಿಕೆಯ ಹೋಮ್ ಇಂಡಸ್ಟ್ರೀಸ್. ಹತ್ತಿಬಟ್ಟೆ ಗಿರಣಿ ಸಮುಚ್ಛಯಗಳಿಂದಾಗಿಯೇ ಈ ಊರು ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಹೆಸರಿನ ಕೀರ್ತಿಗೆ ಭಾಜನವಾದ ಊರು.
ಹತ್ತಾರು ಸಾವಿರ ಕೂಲಿ ಕಾರ್ಮಿಕರ ಊರು. ದುಡಿಯುವ ವರ್ಗದ ಬೆವರಿನ ಶ್ರಮದಿಂದಾಗಿಯೇ ಅಂತಾರಾಷ್ಟ್ರೀಯ ಮಟ್ಟದವರೆಗೂ ಡಿಸಿಎಂ, ಕಾಟನ್ ಮಿಲ್ ಬಟ್ಟೆಯ ಖ್ಯಾತಿ ಹಬ್ಬಿತ್ತು.
ಅದಕ್ಕೆಲ್ಲ ಲಿಂಗ ತಾರತಮ್ಯ ಇಲ್ಲದೇ, ಹಗಲು ರಾತ್ರಿ ಎನ್ನದೇ ಹೆಣ್ಣು ಗಂಡುಗಳು ಈ ಗಿರಣಿಗಳಲ್ಲಿ ಅಡ್ಡ ದುಡ್ಡಿಗೆ ಯಂತ್ರಗಳಂತೆ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಅವರ ದುಡಿತದ ಫಾಯದೆಯನ್ನು ಖಾಸಗಿ ಮಾಲೀಕರು ಯಥೇಚ್ಛವಾಗಿ ಪಡೆಯುತ್ತಿದ್ದರು. ಕೂಲಿ ಕಾರ್ಮಿಕರನ್ನು ಹತ್ತಾರು ತಾಸುಗಳ ಕಾಲ ಕಡಿಮೆ ಕೂಲಿಗೆ ದುಡಿಸಿಕೊಳ್ಳುತ್ತಿದ್ದ ಊಳಿಗಮಾನ್ಯದ ಕಾಲಮಾನಗಳವು. ವಿಶೇಷವಾಗಿ ಹೆಣ್ಣುಮಕ್ಕಳು, ಬಸುರಿ – ಬಾಣಂತಿಯರು ರಾತ್ರಿ ಪಾಳಿಯಲ್ಲಿ ಹಬ್ಬ ಹರಿದಿನಗಳೆನ್ನದೇ ದುಡಿಯಲೇಬೇಕಿದ್ದ ಕಠೋರದ ದುರ್ದಿನಗಳವು. ಕೂಲಿ ಕಾರ್ಮಿಕರ ನೋವು, ಸಂಕಟ ಮುಗಿಲು ಮುಟ್ಟಿದ ಬರ್ಬರ ಸಂದರ್ಭಗಳು.
ಹೀಗೆ ದುಡಿದುಣ್ಣುವ ಕಾಯಕ ಜೀವಗಳು ಕೆಂಬಾವುಟದಡಿ ಒಗ್ಗೂಡಿದರು. ಪಂಪಾಪತಿ ಮುಂದಾಳತ್ವದಲ್ಲಿ ಸೆಕೆಂಡ್ ಲೈನ್ ಕೆಡರ್ಸ್ ತಯಾರಾದರು. ಅದರಲ್ಲಿ ಎಂ. ಜಿ. ಟಿ. ಅಗ್ರಪಂಕ್ತಿ ನಾಯಕರು. ನಗುಮೊಗದ ಅವರ ಸ್ನೇಹಶೀಲ ತಿತೀಕ್ಷೆಯೆದುರು ಎಲ್ಲ ಅಹಮಿಕೆಗಳು ಕುಬ್ಜಗೊಳ್ಳುತ್ತಿದ್ದವು. ಮುತ್ತಾತನ ಕಾಲದಲ್ಲೇ ಅಂದಿನ ಬಿಜಾಪುರ ಜಿಲ್ಲೆಯಿಂದ ಡಾವಣಗೇರಿಯೆಂಬ ವಾಣಿಜ್ಯ ನಗರಿಗೆ ಗುಳೇ ಬಂದ ಮಮದಾಪುರ ಗುರುಸಿದ್ದಪ್ಪ ತಿಪ್ಪೇಸ್ವಾಮಿ, ಎಂ. ಜಿ. ಟಿ. ಎಂತಲೇ ಖ್ಯಾತನಾಮರಾದವರು. ಡಾವಣಗೇರಿ ನಗರ ಕಟ್ಟುವಲ್ಲಿ ಎಂ. ಜಿ. ಟಿ. ಸೇರಿದಂತೆ ಉತ್ತರ ಕರ್ನಾಟಕದ ಎರೆಸೀಮೆ ಜನರ ಶ್ರಮದ ಬೃಹತ್ ಪಾಲಿದೆ. ದಾವಣಗೆರೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಗಟ್ಟಿಗೊಳ್ಳಲು ಇವರ ಪಾತ್ರ ಉಲ್ಲೇಖನೀಯ. ಎಂ. ಜಿ. ಟಿ., ದಾವಣಗೆರೆ ನಗರಸಭಾಧ್ಯಕ್ಷರಾಗಿ ಪಂಪಾಪತಿಯವರು ಹಾಕಿಕೊಟ್ಟ ಜನಪರ ಮತ್ತು ಆದರ್ಶ ಕೆಲಸಗಳನ್ನು ಮುಂದುವರೆಸಿದರು. ಜಗಳೂರು ರಸ್ತೆಯಲ್ಲಿ ನಿರ್ಮಾಣಗೊಂಡ ಬಸ್ ನಿಲ್ದಾಣ ಇವರ ಕನಸಿನ ಕೂಸು. ಬದಲಾದ ರಾಜಕೀಯದ ವಿಪ್ಲವಗಳಲ್ಲಿ ಎಂ. ಜಿ. ಟಿ. ಪಕ್ಷದಿಂದ ದೂರ ಸರಿದು ಜೆ.ಡಿ.ಯು. ಸೇರಿಕೊಂಡರು. ಸಾವಿನ ಕೊನೆಯ ದಿನಗಳಲ್ಲಿ ಅವರು ಯಾವುದೇ ರಾಜಕೀಯ ಪಕ್ಷದ ಸಕ್ರಿಯ ರಾಜಕಾರಣ ಬದುಕಿರಲಿಲ್ಲ.
ಆದರೊಂದು ಮಾತು ಮಾತ್ರ ಖರೇವಂದ್ರ., ಅವರೊಳಗೊಬ್ಬ ಕ್ರಿಯಾಶೀಲ ಕಮ್ಯುನಿಸ್ಟ್ ಮೂಲದ ಎಕ್ಟಿವಿಸ್ಟ್ ಸದಾ ಜೀವಂತವಾಗಿರುತ್ತಿದ್ದನೆಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಕೃಷ್ಣವರ್ಣದ ತಿಪ್ಪೇಸ್ವಾಮಿಯವರದು ಸರಳ ಉಡುಗೆ. ದೊಗಳೆ ಪ್ಯಾಂಟ್, ಅರ್ಧ ತೋಳಿನ ಅಂಗಿ. ಸದಾ ಲವಲವಿಕೆಯಿಂದ ಗಟ್ಟಿ ಮತ್ತು ಸ್ಪಷ್ಟ ದನಿಯಲ್ಲೆ ಮಾತಾಡುತ್ತಿದ್ದ ಅವರು ಭಾಷಣ ಮಾಡುತ್ತಿದ್ದರೆ ಸಿರಿವಂತ ಫ್ಯೂಡಲ್ ಗಳ ವಿರುದ್ದ ಸೆಡ್ಡು ಹೊಡೆದಂತೆ ಗುಡುಗುತ್ತಿದ್ದರು. ದಾವಣಗೆರೆಯಲ್ಲಿ ಕೆಂಪಂಗಿ, ಕೆಂಬಾವುಟಗಳ ಕ್ರಾಂತಿಯಹವಾ ಕಮರಿ ಹೋಗಿ ಒಂದೆರಡು ದಶಕಗಳೇ ಉರುಳುತ್ತಿರುವಾಗ ಎಂ. ಜಿ. ಟಿ. ಯಂತಹ ಕಪ್ಪುಗುಲಾಬಿಯ ಸಾವಿನೊಂದಿಗೆ ಸಮತಾವಾದದ ಪ್ರಬಲ ಶಕ್ತಿಯನ್ನು ಕಳಕೊಂಡ ಕೊರತೆ ಬಹುಪಾಲು ಪ್ರಗತಿಪರರನ್ನು ಕಾಡುತ್ತಲಿದೆ. ಹೋಗಿಬನ್ನಿ ಕಾಮ್ರೆಡ್ ನಮಸ್ಕಾರ.
ಕಪ್ಪು ಗುಲಾಬಿಯ ಕೆಂಪು ನೆನಹುಗಳು.
*******************************