ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ಕರನಂದಿ ಯವರ ಗಜಲ್ ಗಳಲ್ಲಿ ಪ್ರೇಮದ ಒರತೆ

ಗುರುವಾರ ಎಂದರೆ ಹಲವು ಆಚರಣೆಗಳ ತವರೂರು, ಆದರೆ ಗಜಲ್ ಮನಸುಗಳಿಗೆ ಗಜಲ್ ವಾರ. ಪ್ರತಿ ವಾರದಂತೆ ಈ ವಾರವೂ ಸಹ ತಮ್ಮ ನಿರೀಕ್ಷೆಯಂತೆ ಒಬ್ಬ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ಅವರ ಗಜಲ್ ಅಶಅರ್ ನಲ್ಲಿ ಒಂದು ಸುತ್ತು ವಿಹರಿಸಿ ಬರೋಣವೇ … ಮತ್ತೇಕೆ ತಡ … ಚಲೋ, ಹೋಗಿ ಬರೋಣ.

“ಎಲ್ಲರೂ ಅವಳು ಎಲ್ಲಿದ್ದಾಳೊ ಅಲ್ಲಿಯೇ ನೋಡುತ್ತಿದ್ದಾರೆ
ನಾವು ನೋಡುತ್ತಿರುವವರ ದೃಷ್ಟಿಯನ್ನು ನೋಡುತ್ತಿದ್ದೇವೆ”
-ದಾಗ್ ದೇಹಲವಿ

      ಭೂಮಂಡಲದ ಜೀವಸಂಕುಲಗಳಲ್ಲಿ ಮನುಷ್ಯ ಭಿನ್ನವಾಗಿ, ಪ್ರತ್ಯೇಕವಾಗಿ, ವಿಶಿಷ್ಟವಾಗಿ ಹಾಗೂ ಉತ್ಕೃಷ್ಟವಾಗಿ ಕಂಗೊಳಿಸುವುದು ತನ್ನ ಬೌದ್ಧಿಕ ವಿಕಸನದಿಂದ, ಚಿಂತನಾ ಲಹರಿಯಿಂದ. ಆದರೆ ಎಷ್ಟೋ ಸಲ ಅವನ ಶಕ್ತಿಯೇ ದೌರ್ಬಲ್ಯವಾಗಿ ಅವನನ್ನು ಇನ್ನಿಲ್ಲದಂತೆ ಕಾಡುವುದೂ ಉಂಟು. ಮನಸ್ಸಿನಲ್ಲಿ ಎಷ್ಟು ಸ್ಪೇಸ್ ಇರುತ್ತದೆಯೋ ಅಷ್ಟು ನೆಮ್ಮದಿ ನಮಗೆ ಸಿಗುತ್ತದೆ. ಆದರೆ ಕಿಕ್ಕಿರಿದ ಮನಸ್ಸು ಶಾಂತಿಯುತ ಹೃದಯಕ್ಕೆ ಜಾಗವನ್ನು ಬಿಡುವುದಿಲ್ಲ. ತೀಕ್ಷ್ಣವಾದ ಮನಸ್ಸುಗಳು ಮುಂದಿನ ಹೆಜ್ಜೆಯ ಬಗ್ಗೆ ಯೋಚಿಸುವ ಮೂಲಕ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತವೆ. ಅಂತೆಯೇ ಅತಿಯಾದ ಯೋಚನೆಯು ಸರಳವಾದ ವಿಷಯಗಳನ್ನೂ ಸಂಕೀರ್ಣಗೊಳಿಸುತ್ತವೆ ಎನ್ನಲಾಗುತ್ತದೆ. ಏಕೆಂದರೆ ಅತಿಯಾಗಿ ಯೋಚಿಸುವ ವ್ಯಕ್ತಿ ಎಂದಿಗೂ ಅಸ್ತಿತ್ವದಲ್ಲಿರದ ಅಡೆತಡೆಗಳನ್ನು ಸೃಷ್ಟಿಸುತ್ತಾನೆ. ತುಂಬಾ ಆಳವಾಗಿ ಯೋಚಿಸುವುದು ಎಂದರೆ ಬೇರೇನೂ ಅಲ್ಲ, ನಮ್ಮನ್ನು ನಾವು ಮುಳುಗಿಸುವುದು. ಒಬ್ಬ ವ್ಯಕ್ತಿ ತನ್ನ ಅತಿಯಾದ ಆಲೋಚನೆಗಳಿಂದ ಉಂಟಾಗುವ ಭಯದ ಒತ್ತಡದಿಂದಾಗಿ ಉತ್ತಮ ಕನಸು ಕಾಣುವುದನ್ನು ನಿಲ್ಲಿಸುತ್ತಾನೆ. ಆವಾಗ ಸಹಜವಾಗಿಯೇ ಆತನ ಜೀವನವೂ ನಿಲ್ಲುತ್ತದೆ!! “ನಮ್ಮ ಆಲೋಚನೆಗಳಲ್ಲಿ ಶೇಕಡಾ ಎರಡರಷ್ಟು ಮಾತ್ರ ಗಂಭೀರವಾಗಿ ಪರಿಗಣಿಸಲು ಅರ್ಹವಾಗಿವೆ” ಎಂಬ ದಕ್ಷಿಣ ಆಫ್ರಿಕಾದ ತತ್ವಜ್ಞಾನಿ, ಸಾಮಾಜಿಕ ವಿಮರ್ಶಕ, ವಿಡಂಬನಕಾರ, ಕವಿ ಮೊಕೊಕೊಮಾ ಮೊಖೊನೊವಾನಾ ರವರ ಈ ಮಾತು ನಮಗೆ ಜಿಜ್ಞಾಸೆಗೆ ಹಚ್ಚುತ್ತದೆ.‌ ಅತಿಯಾಗಿ ಯೋಚಿಸುವುದರಿಂದ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ, ಅದರಿಂದ ಏನೂ ಆಗುವುದಿಲ್ಲ; ಹಾಗಾದರೆ ನಾವೇಕೆ ಒತ್ತಡವನ್ನು ಆಹ್ವಾನಿಸಬೇಕು? ಒಂದೆಡೆ ಕುಳಿತು ವಿಶ್ರಾಂತಿ ಪಡೆಯುವುದು ಅಷ್ಟು ಕಷ್ಟವೇ? ಎಂದೆನಿಸದೆ ಇರದು!! ಮುಚ್ಚಿದ ಬಾಗಿಲುಗಳ ಹಿಂದೆ ಕುಳಿತುಕೊಳ್ಳುವುದರಿಂದ ನಮ್ಮ ಆಲೋಚನೆಗಳು ನಮ್ಮನ್ನೇ ತಿನ್ನುತ್ತವೆ, ತಿಂದು ತೇಗುತ್ತವೆ. ಅತಿಯಾಗಿ ಯೋಚಿಸುವುದು ಒಂದು ರೋಗ. ಇದಕ್ಕೆ ಕಾರಣ ನಮ್ಮ ಸೃಜನಶೀಲ ಶಕ್ತಿಯ ಕಡಿಮೆ ಬಳಕೆ. ನಾವು ಅರಿವಿಲ್ಲದೆ ನಕಾರಾತ್ಮಕ ಭಾವನೆಗಳು ಮತ್ತು ಆಲೋಚನೆಗಳನ್ನು ಪ್ರಚೋದಿಸಿದಾಗ ಮತ್ತು ಸಕಾರಾತ್ಮಕ ಭಾವನೆಗಳು ಮತ್ತು ಆಲೋಚನೆಗಳನ್ನು ತಪ್ಪಿಸಿದಾಗ ಅತಿಯಾದ ಚಿಂತನೆ ಉಂಟಾಗುತ್ತದೆ. ನಾವು ಅತಿಯಾಗಿ ಯೋಚಿಸುವುದನ್ನು ಬಿಡಬೇಕಾದರೆ ನಮ್ಮ ಮನಸ್ಸನ್ನು ಪ್ರಸ್ತುತ ಕ್ಷಣಕ್ಕೆ ತರಬೇಕು. ನಮ್ಮ ಮನಸನ್ನು ಮುನ್ನಡೆಸುವ ಜವಾಬ್ದಾರಿ ನಮ್ಮದೇ ಹೊರತು ಬೇರೆಯವರದಲ್ಲ. ನಾವು ಪಶ್ಚಾತ್ತಾಪ ಪಡುವುದನ್ನು ಕಣ್ತುಂಬಿಕೊಳ್ಳಲು ತುಂಬಾ ಜನರು ಕಾಯುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಾಹಿತ್ಯವು ನಮಗೆ ಬದುಕುವ ಕಲೆಯನ್ನು ಕಲಿಸುತ್ತದೆ, ಮನದಟ್ಟಾಗಿಸುತ್ತದೆ. ಸಾಹಿತ್ಯದ ಒಂದು ಭಾಗವಾದ ಗಜಲ್ ವ್ಯಕ್ತಿತ್ವ ವಿಕಸನಕ್ಕೆ ಚಿರಾಗ್ ಹಿಡಿದುಕೊಂಡು ಬರುತ್ತಿದೆ. ಇಂಥಹ ಚಿರಾಗ್ ಹಿಡಿದವರಲ್ಲಿ ಶ್ರೀ ಶಿವಕುಮಾರ ಕರನಂದಿ ಅವರೂ ಒಬ್ಬರು.

      ಬಾಗಲಕೋಟೆ ಜಿಲ್ಲೆಯ ‘ರಂಗಶಿಲ್ಪಿ’ ಎಂದೇ ಖ್ಯಾತರಾಗಿದ್ದ ದಿ.ರಾಚಪ್ಪ ಗು. ಕರನಂದಿ ಮನೆತನದ ಕುಡಿಯಾದ ಶ್ರೀ ಶಿವಕುಮಾರ ಕರನಂದಿಯವರು ೧೯೯೧ ರ ಜುಲೈ ೦೨ ರಂದು ಶ್ರೀ ಮೋಹನ ಕರನಂದಿ ಹಾಗೂ ಶ್ರೀಮತಿ ನಿಂಭಾವತಿ ಮೋಹನ ಕರನಂದಿ ದಂಪತಿಗಳ ಮಗನಾಗಿ ರಾಮದುರ್ಗದಲ್ಲಿ ಜನಿಸಿದರು. ಗುಳೇದಗುಡ್ಡ, ಬಾಗಲಕೋಟೆಯಲ್ಲಿ ತಮ್ಮ ಶಿಕ್ಷಣ ಡಿ.ಎಮ್.ಎಲ್.ಟಿ, ಬಿ.ಎ ಪೂರೈಸಿದ್ದಾರೆ. ಪ್ರಸ್ತುತವಾಗಿ ಇವರು ತಾಲೂಕಾ ಆಸ್ಪತ್ರೆ ಬಾದಾಮಿಯಲ್ಲಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ರಂಗಭೂಮಿಯ ಪರಿಸರದೊಂದಿಗೆ ಬೆಳೆದ ಇವರು ಸಾಹಿತ್ಯದ ಅಭಿರುಚಿಯನ್ನು ಹೊಂದಿದ್ದು ಕಾವ್ಯ, ಭಾವಗೀತೆ, ಕಥೆ, ಲೇಖನ ಹಾಗೂ ಗಜಲ್ ಗಳನ್ನು ಬರೆಯುತ್ತ ಕನ್ನಡ ಸಾಹಿತ್ಯ ಲೋಕದಲ್ಲಿ ಸಕ್ರೀಯವಾಗಿದ್ದಾರೆ. ಇವರ ಮೊದಲ ಕೃತಿ ‘ಮೌನ ಮಾತಾದಾಗ’ ಕವನ ಸಂಕಲನವು ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಯೋಜನೆಯಲ್ಲಿ ಪ್ರಕಟವಾಗಿರುವುದು ಅಭಿನಂದನಾರ್ಹ.‌ ಅದರೊಂದಿಗೆ ಸ್ನೇಹಿತರೊಡಗೂಡಿ ಸಂಪಾದಿಸಿದ ‘ಗಾಲಿಬ್ ನಿನಗೊಂದು ಸಲಾಂ’, ಎಂಬ ಗಜಲ್ ಸಂಕಲನ, ‘ನೆರಳಿಗಂಟಿದ ನೆನಪು’, ಗಜಲ್ ಸಂಕಲನ… ಗ್ರಂಥಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

       ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುವ ಕರನಂದಿಯವರು ಅನೇಕ ಸಂಘ ಸಂಸ್ಥೆಗಳಲ್ಲಿ ಉತ್ತಮ ಸಂಘಟಕರಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇವರ ಗಜಲ್, ಕವಿತೆ, ಲೇಖನ ಹಾಗೂ ಪುಸ್ತಕ ಕುರಿತಾಗಿ ಬರೆದ ವಿಮರ್ಶೆಗಳು ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ನಾಡಿನಾದ್ಯಂತ ಜರುಗಿದ ಹಲವು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯದ ಒಲವನ್ನು ಹಂಚಿಕೊಂಡಿದ್ದಾರೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ರಾಜ್ಯದ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ.

      ಪ್ರೀತಿ ಎನ್ನುವುದು ನವಿರಾದ ಕುತೂಹಲ. ಇದು ಕೊಡುವ ಅಥವಾ ಪಡೆಯುವ ವಸ್ತುವಲ್ಲ, ಇದೊಂದು ಅನುಭವ ಜನ್ಯ ಭಾವದುಂಗುರ. ಇಲ್ಲಿ ಕಣ್ಣಾಮುಚ್ಚಾಲೆ ಇರುವುದಿಲ್ಲ; ಪರಸ್ಪರ ಮಾಗುವಿಕೆ, ಗೌರವ, ಹುಡುಕಾಟ, ಸಮರ್ಪಣೆ, ಬದ್ಧತೆ ಇರುತ್ತದೆ.‌ ಇದು ಭಾವನೆಗಳ ಕ್ಷಿತಿಜವನ್ನು ತೆರೆಯುವ, ಭರವಸೆಯನ್ನು ಹುಟ್ಟುಹಾಕುವ  ಶಕ್ತಿಯನ್ನು ಹೊಂದಿದೆ. ಇದು ಬಲವಾದ ವಾತ್ಸಲ್ಯ ಮತ್ತು ತಾಳ್ಮೆಯಿಂದ ಮಾಡಲ್ಪಟ್ಟಿದೆ. ಇಂಥಹ ಪ್ರೀತಿಯನ್ನು ತನ್ನ ಅಶಅರ್ ನಲ್ಲಿ ಹಿಡಿದಿಟ್ಟುಕೊಂಡು ಇಡೀ ಮನುಕುಲಕ್ಕೆ ಹಂಚುತ್ತಿರುವ ಗಜಲ್ ಎಂದರೆ ಸಹೃದಯ ರಸಿಕರಿಗೆ ತುಂಬಾ ಅಚ್ಚುಮೆಚ್ಚು. ಇದು ಪ್ರೀತಿ, ಕಾಳಜಿ, ಬಯಕೆ ಮತ್ತು ನಿರೀಕ್ಷೆಗಳ ಸಂಯುಕ್ತ ಮಿಶ್ರಣವಾಗಿ ರೂಪುಗೊಂಡ ಭಾವನೆಗಳ ಸಮೂಹವಾಗಿದೆ. ಪ್ರೀತಿಯ ನೈಜ ದೃಢತೆಯನ್ನು ಉತ್ತಮವಾಗಿ ಮನ ಮುಟ್ಟಿಸುವ ಗಜಲ್ ಬಿಟ್ಟು ಬೇರೊಂದು ಕಾವ್ಯ ಪ್ರಕಾರ ಇಲ್ಲವೆಂದರೆ ಅತಿಶಯೋಕ್ತಿಯಾಗದು! ವಾತ್ಸಲ್ಯವಿಲ್ಲದ ಜೀವನವು ಹೂವು ಅಥವಾ ಹಣ್ಣುಗಳಿಲ್ಲದ ಮರದಂತೆ ನಿರರ್ಥಕ ಎಂಬಂತೆ ಇಂದು ಗಜಲ್ ಸಾಹಿತ್ಯ ಲೋಕವನ್ನು ಆವರಿಸಿದೆ. ಈ ನೆಲೆಯಲ್ಲಿ ಗಜಲ್ ಗೋ ಶಿವಕುಮಾರ ಕರನಂದಿ ಅವರ ‘ನೆರಳಿಗಂಟಿದ ನೆನಪು’ ಗಜಲ್ ಸಂಕಲನವನ್ನು ಗಮನಿಸಿದಾಗ ಅಲ್ಲಿ ಮನಸುಗಳ ನಡುವಿನ ಕಸಿವಿಸಿ, ಪ್ರೀತಿಯ ತುಮುಲ, ಕಾಡುವ ವಿರಹ, ಮಾತು ತಪ್ಪಿದ ಪ್ರಿಯತಮೆ, ಕರಗಿ ಹೋದ ಕಾಲದ ನೆನಪುಗಳು, ಏಕಾಂತದ ಅಳಲು, ವಿರಹದ ನೆರಳು, ಬೆವರಿಳಿಸುವ ಮುಖವಾಡಗಳು, ಸಾಮಾಜಿಕ ವ್ಯವಸ್ಥೆ, ರಾಜಕೀಯ ಅರಾಜಕತೆ, ಸೌಹಾರ್ದತೆಯ ಹಂಬಲ…. ಎಲ್ಲವನ್ನೂ ಇಲ್ಲಿ ಗಮನಿಸಬಹುದು.

“ನೀರಿಗೆ ಕಲ್ಲು ಕರಗಿದರೂ ನಿನ್ನಲ್ಲಿರುವ ನೀನು ಕರಗಲಿಲ್ಲ
ಸೂರ್ಯ ಮುಳುಗಿದರೂ ನಿನ್ನ ಕೋಪ ಮುಳುಗಲಿಲ್ಲ”

ಪಂಚೇಂದ್ರಿಯಗಳೊಂದಿಗೆ ಹುಟ್ಟುವ ಮನುಷ್ಯ ಅರಿಷಡ್ವರ್ಗಗಳ ಮಾರ್ಗವಾಗಿ ಬೆಳೆಯುತ್ತಾನೆ. ಎಲ್ಲವೂ ಸಾಮಾನ್ಯ ಎನ್ನುವವ ಏನನ್ನೂ ಸಾಧಿಸದೇ ಸಾಮಾನ್ಯನಾಗಿಯೇ ಅಸುನೀಗುತ್ತಾನೆ. ಆದರೆ ತಪ್ಪುಗಳನ್ನು ಅರಿತು ತಿದ್ದಿಕೊಂಡು ಸಾಗುವವನು ಜನಮಾನಸದಲ್ಲಿ ಉಳಿಯುತ್ತಾನೆ. ಇಲ್ಲಿ ಶಾಯರ್ ಶಿವಕುಮಾರ ಕರನಂದಿ ಅವರು ಮನುಷ್ಯನಲ್ಲಿ ಬೇರೂರಿವ ಅಹಂಕಾರ, ಕೋಪಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಕರಗಲಿಲ್ಲ, ಮುಳುಗಲಿಲ್ಲ ಎನ್ನುವ ಕವಾಫಿ ನಕಾರಾತ್ಮಕವಾಗಿ ಕಂಡರೂ ಅವುಗಳ ಒಡಲಲ್ಲಿ ಸಕಾರಾತ್ಮಕ ಧ್ವನಿಯಿದೆ. ಬದಲಾವಣೆಯ ಹಂಬಲವಿದೆ. ಅರಿಷಡ್ವರ್ಗಗಳನ್ನು ಮೀರಿ ಬೆಳೆಯಬೇಕು ಎಂಬ ಕಳಕಳಿ ಇಲ್ಲಿದೆ.

“ಪ್ರೀತಿಯು ತುಂಬಿದ ಕೊಳದಂತೆ ಚೆಲುವೆ
ಮೊಗೆದಷ್ಟು ಹುಟ್ಟುವ ಒರತೆಯಂತೆ ಚೆಲುವೆ”

ಒಬ್ಬರ ಹೃದಯದಲ್ಲಿ ಸ್ಥಾನ ಪಡೆಯುವುದೆಂದರೆ ಸ್ವರ್ಗದಲ್ಲಿ ನೆಲೆಸಿದಂತೆಯೇ ಸರಿ. ನಾಕವನ್ನೂ ತನ್ನಲ್ಲಿಟ್ಟುಕೊಂಡು ಉಸಿರಾಡುತ್ತಿರುವ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಇಲ್ಲಿ ಗಜಲ್ ಗೋ ಕರನಂದಿಯವರು ‘ಚೆಲುವೆ’ ಎನ್ನುವ ರದೀಫ್ ಬಳಸಿಕೊಂಡು ಪ್ರೀತಿಯ ಸಾಫಲ್ಯವನ್ನು ವಿವರಿಸಿದ್ದಾರೆ. ದುನಿಯಾದಲ್ಲಿ ಅಕ್ಷಯಪಾತ್ರೆ ಎಂಬುದೇನಾದರೂ ಇದ್ದರೆ ಅದು ಪ್ರೀತಿ ಎಂಬುದು ಸರ್ವವಿಧಿತ.

    ಕರಗಿ ಹೋದ ಕಾಲದ ನೆನಪುಗಳು ಯಾವುದೋ ಒಂದು ಸಂದರ್ಭದಲ್ಲಿ ಒಂದು ಸಣ್ಣ ಸ್ಪರ್ಶಕ್ಕೆ ನುಡಿಯಾಗಿ, ಷೇರ್ ಆಗಿ ಅರಳುವುದೇ ಗಜಲ್. ಪಾಂಡಿತ್ಯದ ಸೆಲೆಗಿಂತ ಪ್ರಾಮಾಣಿಕತೆಯ ನೆಲೆಯಲ್ಲಿ ಚಿಗುರೊಡೆಯುವ ಗಜಲ್ ಬೌದ್ಧಿಕತೆಯನ್ನು ದಾಟಿ ಹೃದಯವನ್ನು ಸ್ಪರ್ಶಿಸುತ್ತದೆ. ಇಂಥಹ ಗಜಲ್ ಕಾರವಾನ್ ಕರುನಾಡಿನಲ್ಲಿ ನಡೆಯುತ್ತಿದೆ. ಸುಖನವರ್ ಶಿವಕುಮಾರ ಕರನಂದಿ ಅವರಿಂದ ಕನ್ನಡ ಗಜಲ್ ಲೋಕ ಮತ್ತಷ್ಟು ಮೊಗೆದಷ್ಟೂ ಶ್ರೀಮಂತವಾಗಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.

“ಅಸಹಾಯಕತೆಯಲಿ ಬದುಕಿನ ದಿನಗಳನ್ನು ಕಳೆದಿರುವೆ ಗೆಳೆಯ
ಅವಳು ನಿನ್ನ ನೆನಪಿನಲ್ಲಿ ಇದ್ದಾಳೊ ಅಥವಾ ನಿನ್ನ ಮರೆಯುತಲಿದ್ದಾಳೊ”
-ಫಿರಾಕ್ ಗೋರಕಪುರಿ

ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ವಿಶೇಷವಾಗಿ ಗಜಲ್ ನ ಪರಂಪರೆ ಬಗ್ಗೆ ಬರೆಯುತಿದ್ದರೆ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಕಾಲದ ಮುಂದೆ ಮಂಡಿಯೂರಲೆಬೇಕಲ್ಲವೇ.‌ ಅಂತೆಯೇ ಈ ಲೇಖನಿಗೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ, ರಾವೂರ 

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top