ಒಲವಿನ ಹಾಯಿದೋಣಿ- ಕೃತಿ ಅವಲೋಕನ

ಪುಸ್ತಕ ಸಂಗಾತಿ

ಪ್ರಬಾವತಿ ಎಸ್. ದೇಸಾಯಿ ಅವರ ಕೃತಿ

ಒಲವಿನ ಹಾಯಿದೋಣಿ

ಒಲವಿನ ಹಾಯಿದೋಣಿಯಲ್ಲಿ ಒಂದು ಸುತ್ತು..

 ಪ್ರತಿಯೊಂದು ಸುಂದರ ವಸ್ತುಗಳ ಹಿಂದೆಯೂ ಒಂದೊಂದು ರೀತಿಯ ನೋವು ಇರುತ್ತದೆ. ಇದು ಯಾವಾಗಲೂ ಭಾವನೆ ಮತ್ತು ಅರ್ಥದಿಂದ ಕೂಡಿದ್ದು, ಪ್ರತಿ ನೋವು ವ್ಯಕ್ತಿಗೆ ವಿಶಿಷ್ಟವಾಗಿ ಫೀಲ್ ಆಗುತ್ತದೆ. ಇಂದಿನ ನೋವು ಹಿಂದಿನ ಸುಖದೊಂದಿಗಿನ ಮಾಡಿಕೊಂಡ ಒಪ್ಪಂದವಲ್ಲದೇ ಬೇರೇನೂ ಅಲ್ಲ. ಯಾವುದೇ ನೋವನ್ನು ಅರ್ಥವಿರುವವರೆಗೂ ಸಹಿಸಲು ಸಾಧ್ಯ, ಕಾರಣ ನಾವು ಅನುಭವಿಸುವ ನೋವುಗಳು ಸಂದೇಶವಾಹಕಗಳಾಗಿವೆ. ನೋವಿನಿಂದ ಪಾರಾಗಲು ಮನುಷ್ಯ ಏನೆಲ್ಲಾ ಮಾಡಬಹುದು ಎಂಬುದನ್ನು ಅಮೇರಿಕಾದ ಕಾದಂಬರಿಕಾರ್ತಿ ಟಿಫಾನಿ ಡಿಬಾರ್ಟೊಲೊ ಅವರ ಮಾತುಗಳಲ್ಲೇ ಕೇಳಿ.


“ನೀವು ನಿಜವಾಗಿಯೂ ಸಾಯಲು ಬಯಸಿದ್ದೀರಾ?”
“ಯಾರೂ ಸಾಯಲು ಬಯಸಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.”
“ಹಾಗಾದರೆ ಅವರು ಅದನ್ನು ಏಕೆ ಮಾಡುತ್ತಾರೆ?”
“ಏಕೆಂದರೆ ಅವರು ನೋವನ್ನು ನಿಲ್ಲಿಸಲು ಬಯಸುತ್ತಾರೆ”.


ಈ ದಿಸೆಯಲ್ಲಿ ನಾವು ಬದುಕನ್ನು ನೋಡಿದಾಗ ಬದುಕು ‘ಸಿಹಿಯಾದ ಲೇಪನವುಳ್ಳ ಕಹಿ ಗುಳಿಗೆ’ ಎಂಬುದು ಮನವರಿಕೆಯಾಗುತ್ತದೆ. ಒಬ್ಬ ವ್ಯಕ್ತಿ ತನ್ನೊಳಗೆ ಹೇಳಲಾಗದ ಕಥೆಯನ್ನು ಹೊತ್ತುಕೊಳ್ಳುವುದಕ್ಕಿಂತ ದೊಡ್ಡ ಸಂಕಟ ಇನ್ನಾವುದೂ ಇಲ್ಲ. ಆ ಸಮಯದಲ್ಲಿ ಭಾವನೆಗಳ ಅಭಿವ್ಯಕ್ತಿಯ ಅನನ್ಯ ರೂಪವಾದ ‘ಸಾಹಿತ್ಯ’ವು ಆ ವ್ಯಕ್ತಿಯನ್ನು ಸಂತೈಸುತ್ತದೆ. ಅಂತೆಯೇ ಬರಹಗಾರರು ತಮ್ಮ ಬರವಣಿಗೆಯಲ್ಲಿ ಭಾವನೆಗಳನ್ನು ತುಂಬುತ್ತಾರೆ. ಅದು ಮಾನವನ ಸಂಕಟದ ಹಿಂದಿನ ದುಃಖ ಮತ್ತು ಜೀವನದ ಎಲ್ಲಾ ಮುಖಗಳಲ್ಲಿನ ಹೃದಯದ ನೋವನ್ನು ಕಟುವಾಗಿ ಗ್ರಹಿಸುತ್ತದೆ. ಸಾಹಿತ್ಯದಲ್ಲಿಯ ದುಃಖದ ಉಲ್ಲೇಖಗಳು ಯಾವಾಗಲೂ ನಮ್ಮ ಸ್ವಂತ ಅನುಭವಗಳಿಗೆ ಧ್ವನಿ ನೀಡುತ್ತವೆ. ಅಂತೆಯೇ ಬ್ರೆಜಿಲಿಯನ್ ಗೀತರಚನೆಕಾರ ಮತ್ತು ಕಾದಂಬರಿಕಾರ ಪಾಲೊ ಕೊಯೆಲೊ ಅವರ “ಕಣ್ಣೀರು ಬರೆಯಬೇಕಾದ ಪದಗಳು” ಎಂಬ ಮಾತು ತುಂಬಾ ಅರ್ಥವತ್ತಾಗಿದೆ. ಈ ಹೇಳಿಕೆ ಸಾಹಿತ್ಯದ ಇನ್ನಿತರ ಪ್ರಕಾರಗಳಿಗಿಂತಲೂ ‘ಗಜಲ್’ ಪ್ರಕಾರಕ್ಕೆ ಹೆಚ್ಚು ಅನ್ವರ್ಥಕವಾಗುತ್ತದೆ. ಒಬ್ಬ ಗಜಲ್ ಗೋ ತನ್ನ ಆಳವಾದ ಭಾವನೆಗಳನ್ನು ಎಷ್ಟು ಚೆನ್ನಾಗಿ ಮರೆಮಾಚಿ, ಅವುಗಳನ್ನು ಎಲ್ಲಿ ಇರಿಸಿದೆ ಎಂಬುದನ್ನು ಮರೆಯುವಷ್ಟು ಗಜಲ್ ಸಶಕ್ತವಾದ ಕಾವ್ಯ ಪ್ರಕಾರವಾಗಿದೆ. ಇದು ಕೇವಲ ಮೆರವಣಿಗೆಯ ಕಾವ್ಯವಲ್ಲ, ಅಬ್ಬರದ ಮೆರವಣಿಗೆಯ ನಡುವೆಯೂ ಮಿಡಿಯುವ ಮನಸ್ಸಿನ ಮಾತು. ಮೆರವಣಿಗೆಯ ಜನಸಾಗರದ ಮಧ್ಯೆ ನಡೆಯುತ್ತಲೆ ಏಕಾಂತದ ಕ್ಷಣಗಳನ್ನು ಕಂಡುಕೊಳ್ಳುವ ಸೂಕ್ಷ್ಮ ಸ್ತರ. “ನೋವು ಮುಗಿದಾಗ ಅದರ ನೆನಪು ಆಗಾಗ ಆನಂದವಾಗುತ್ತದೆ” ಎಂಬ ಆಂಗ್ಲ ಕಾದಂಬರಿಕಾರ್ತಿ ಜೇನ್ ಆಸ್ಟೆನ್ ರವರ ಮಾತನ್ನು ಗಜಲ್ ನಲ್ಲಿ ಹೇರಳವಾಗಿ ಕಾಣಬಹುದು.

        “I am not a product of my circumstances. I am a product of my decisions”ಎಂಬ ಅಮೇರಿಕನ್ ಶಿಕ್ಷಣ ತಜ್ಞ ಹಾಗೂ ಕವಿ ಸ್ಟೀಫನ್ ಕೋವಿಯವರ ಮಾತುಗಳನ್ನು ಗಜಲ್ ಗೋ ಶ್ರೀಮತಿ ಪ್ರಭಾವತಿ ಎಸ್. ದೇಸಾಯಿಯವರ ಗಜಲ್ ಗಳಲ್ಲಿ ಕಾಣಬಹುದು. ಶ್ರೀಮತಿ ದೇಸಾಯಿಯವರು ಕಳೆದ ಒಂದುವರೆ ದಶಕದಿಂದ ಗಜಲ್ ಲೋಕದಲ್ಲಿ ಸಕ್ರಿಯವಾಗಿದ್ದು, ಕನ್ನಡ ಗಜಲ್ ಸಂಸಾರದಲ್ಲಿ ‘ಅಮ್ಮ’ನ ಸ್ಥಾನವನ್ನು ತುಂಬಿದ್ದಾರೆ‌. ಇವರು ಇಲ್ಲಿಯವರೆಗೆ ೭ ಗಜಲ್ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವುಗಳೊಂದಿಗೆ ‘ಒಳನೋಟ’ ಎಂಬ ಗಜಲ್ ಸಂಕಲನಗಳ ವಿಶ್ಲೇಷಣಾತ್ಮಕ ಕೃತಿಯು ಕನ್ನಡ ಸಾಹಿತ್ಯ ಲೋಕದ ಕದ ತಟ್ಟಲು ಸಿದ್ಧವಾಗುತ್ತಿದೆ! ಗಜಲ್ ಕುರಿತು ವಿಶೇಷ ಒಲವನ್ನು ಹೊಂದಿರುವ ಇವರ ಗಜಲ್ ಗಳನ್ನು ಓದುವುದೇ ಒಂದು ಖುಷಿ. ಇವರು ಬಳಸುವ ರದೀಫ್ ಹಾಗೂ ತಖಲ್ಲುಸ್ ನಾಮ ಇವರ ಗಜಲ್ ಗಳು ಇನ್ನಿತರರ ಗಜಲ್ ಗಳಿಗಿಂತಲೂ ಭಿನ್ನವಾಗಿ ನಿಲ್ಲುವಂತೆ ಮಾಡಿವೆ. ಪ್ರತಿ ಗಜಲ್ ಗೊಂದು ಹೊಸ ರದೀಫ್ ಬಳಸುವ ಇವರ ರದೀಫ್ ಪ್ರೀತಿಗೆ ತಲೆಬಾಗಲೇ ಬೇಕು. ಇದಕ್ಕೆ ‘ಒಲವ ಹಾಯಿದೋಣಿ’ ಗಜಲ್ ಸಂಕಲನದ ಕೆಲವು ಗಜಲ್ ಗಳನ್ನು ಗಮನಿಸಬಹುದು.

“ಅಜ್ಞಾನ ಅಂಧಕಾರದ ಮುಸುಕು ಕಿತ್ತಿ ಎಸೆದಾತಂಗೆ ಶರಣು
ಎಲ್ಲೆಡೆ ಸಮಾನತೆಯ ಸುಜ್ಞಾನ ಸುಧೆ ಹರಿಸಿದಾತಂಗೆ ಶರಣು”

“ಚಂದಿರ ಸರಿದು ರವಿ ಉದಯಿಸಿದರೂ ಮುತ್ತಿನ ಅಮಲು ಇಳಿದಿಲ್ಲ
ಹುಣ್ಣಿಮೆ ಕಳೆದು ಅಮಾವಾಸ್ಯೆ ಬಂದರೂ ಉಕ್ಕಿದ ಕಡಲು ಇಳಿದಿಲ್ಲ”

“ಅಲ್ಲೊಂದು ಕಟ್ಟಿದ ಕರಿ ಮೋಡಕೆ ಭಾರ ಇಳಿಸುವ ಅವಸರ
ಇಲ್ಲೊಂದು ಊರಿದ ಬೀಜಕೆ ಮೊಳಕೆ ಒಡೆದು ಚಿಗುರುವ ಅವಸರ”  

ಮೇಲಿನ ಅಶಅರ್ ನಲ್ಲಿ ಕ್ರಮವಾಗಿ ‘ಶರಣು’, ‘ಇಳಿದಿಲ್ಲ’ ಹಾಗೂ ‘ಅವಸರ’ ಎನ್ನುವ ಶಬ್ದಗಳು ‘ರದೀಫ್’ ಆಗಿ ಬಳಕೆಯಾಗಿವೆ. ಇಲ್ಲಿಯ ರದೀಫ್ ಗಳನ್ನು ತೆಗೆದರೆ ಆ ಅಶಅರ್ ಅಪೂರ್ಣವಾಗಿ ತಮ್ಮ ಅರ್ಥಗಳನ್ನು ಕಳೆದುಕೊಳ್ಳುತ್ತವೆ. ಇವುಗಳನ್ನು ಕಾಫಿಯಾನ ಗಜಲ್ ಗಳನ್ನಾಗಿಯೂ ಬರೆಯಲಾಗುವುದಿಲ್ಲ. ಇಲ್ಲಿ ಕವಾಫಿ ಹಾಗೂ ರದೀಫ್ ಒಂದಕ್ಕೊಂದು ಪೂರಕವಾಗಿವೆ. ‘ರದ್’ ಅಂದರೆ ಹಿಂದೆ ಕುಂತವರು, ಹಿಂದೆ ಹೋಗುವವರು ಎಂದರ್ಥ. ರದೀಫ್ ಎಂಬುದೊಂದು ಸ್ತ್ರೀಲಿಂಗವಾಗಿದ್ದು, ಕುದುರೆ/ಒಂಟೆಯ ಹಿಂಭಾಗದಲ್ಲಿ ಕುಳಿತಿರುವ ವ್ಯಕ್ತಿ ಎಂದಾಗುತ್ತದೆ. ಇಂಥಹ ಹತ್ತಾರು ಉದಾಹರಣೆಗಳನ್ನು ಈ ಸಂಕಲನದಲ್ಲಿ ಗಮನಿಸಬಹುದು.

       ಗಜಲ್ ರಚನೆಯಲ್ಲಿ ‘ತಖಲ್ಲುಸ್ ನಾಮ’ ತನ್ನದೇಯಾದ ಮಹತ್ವವನ್ನು ಹೊಂದಿದೆ. ಇದೊಂದು ಅರೆಬಿಕ್ ಪದವಾಗಿದ್ದು ಗಜಲ್ ಕಾರ ಅಥವಾ ಗಜಲ್ ಕಾರರ ಉಪನಾಮವನ್ನು ಗಜಲ್‌ನಲ್ಲಿ ಬರೆಯುವ ಕ್ರಿಯೆಯಾಗಿದೆ. ಗಜಲ್ ಕಾರ ತನ್ನ ಗಜಲ್ ನಲ್ಲಿ ಬಳಸುವ ಸಂಕ್ಷಿಪ್ತ ಹೆಸರಾಗಿದೆ. ಇದರೊಂದಿಗೆ ಗಜಲ್ ನ ಉದ್ದೇಶದ ಸಾರಾಂಶ, ಒಂದು ವಿಷಯದಿಂದ ಇನ್ನೊಂದಕ್ಕೆ ಚಲಿಸುವುದನ್ನು ಪ್ರತಿಧ್ವನಿಸುತ್ತದೆ. ಹಿರಿಯ ಸುಖನವರ್ ಆದ ಶ್ರೀಮತಿ ಪ್ರಭಾವತಿ ಎಸ್. ದೇಸಾಯಿಯವರು ತಮ್ಮ ಗಜಲ್ ಗಳಲ್ಲಿ ಬಳಸುವ ‘ಪ್ರಭೆ’ ಎಂಬ ‘ತಖಲ್ಲುಸ್ ನಾಮ’ ವಿಶೇಷ ಹಾಗೂ ಅನುಪಮವೆನಿಸುತ್ತದೆ. ಇದಕ್ಕೆ ಕೆಲವೊಂದು ಮಾದರಿಗಳನ್ನು ಗಮನಿಸಿ ಮುಂದೆ ಸಾಗೋಣ.

‘ನೊಂದ ಜೀವಿಗೆ ಸುಖದ ‘ಪ್ರಭೆ’ಯಾದರೂ ಇರುಳಿಗೆ ಇರಲಿ’

‘ಸೂರ್ಯ ‘ಪ್ರಭೆ’ಗೆ ಸುಮ ಅರಳುತಿದೆ ನಲಿವನ್ನಾದರೂ ನೀಡು’

‘ಶಿವ ‘ಪ್ರಭೆ’ಯಲಿ ಒಂದಾಗಲು ಕದಳಿಗೆ ನಡೆದ ಶರಣೆ’

ಈ ಮೇಲಿನ ಮಿಸರೈನ್ ನಲ್ಲಿ ತಖಲ್ಲುಸ್ ನಾಮ ತುಂಬಾ ಸರಳವಾಗಿ ಭಾವದೊಂದಿಗೆ ಬೆರತು ಹೋಗಿದೆ. ಎಲ್ಲಿಯೂ ಅನಗತ್ಯವಾಗಿ ತುರುಕಿದಂತೆ ಭಾಸವಾಗುವುದಿಲ್ಲ. ಇಂಥಹ ಅನೇಕ ಮಾದರಿಗಳನ್ನು ಸಂಕಲನದಲ್ಲಿ ಕಾಣಬಹುದು. ಇದರೊಂದಿಗೆ ಕೆಲವು ಕಡೆ ತಖಲ್ಲುಸ್ ನಾಮ ‘ವ್ಯಕ್ಯಿ’ವಾಚಕವಾಗಿಯೂ ಬಳಕೆಯಾಗಿದೆ.

        ‘ಒಲವ ಹಾಯಿದೋಣಿ’ ಗಜಲ್ ಸಂಕಲನವು ೭೫ ಗಜಲ್ ಗಳ ಪ್ರೇಮಲೋಕವಾಗಿದೆ. ಇಲ್ಲಿಯ ಗಜಲ್ ಗಳು ೫, ೬ ಹಾಗೂ ೭ ಅಶಅರ್ ಹೊಂದಿದ್ದು, ರದೀಫ್ ಸಹಿತ ಮತ್ತು ರದೀಫ್ ರಹಿತ (ಕಾಫಿಯಾನ) ಗಜಲ್ ಗಳಾಗಿವೆ. ಜೊತೆಗೆ ಸಂಪೂರ್ಣ ಮತ್ಲಾ ಗಜಲ್ ಗಳು ಓದಲು ದೊರೆಯುತ್ತವೆ. ವಿಷಯದ ಹರಹು ನೋಡಿದಾಗ ಹೆಚ್ಚಿನ ಗಜಲ್ ಗಳು ಗಜಲ್ ನ ಮೂಲ ಸ್ಥಾಯಿ ಭಾವವನ್ನು ಉಸಿರಾಗಿಸಿಕೊಂಡಿರುವುದು ಮನವರಿಕೆಯಾಗುತ್ತದೆ. ಪ್ರೀತಿ, ಕನವರಿಕೆ, ಮುನಿಸು, ವಿರಹ, ಭಗ್ನ, ತ್ಯಾಗ, ಪ್ರಣಯದ ಅನುಭೂತಿ, ಸೌಂದರ್ಯದ ಆಸ್ವಾದನೆ, ನೆನಪುಗಳ ಮೆರವಣಿಗೆ… ಎಲ್ಲವೂ ನಮ್ಮನ್ನು ತಡೆದು ನಿಲ್ಲಿಸುತ್ತವೆ. ಇವುಗಳೊಂದಿಗೆ ಮನುಷ್ಯನ ಜೀವನದ ಅವಲೋಕನ, ಅಹಂಕಾರ, ಅಲೌಕಿಕತೆಯ ಜ್ಯೋತಿ, ಪ್ರಸ್ತುತ ಸಮಾಜದ ಚಿತ್ರಣ, ಸ್ತ್ರೀ ಸಂವೇದನೆಯ ಕೋಮಲತೆ, ಮೌಢ್ಯತೆಯ ಖಂಡನೆ, ಪ್ರಕೃತಿಯ ಸೊಬಗು, ಹೆತ್ತವರ ತೊಳಲಾಟ, ಕನ್ನಡ ಭಾಷಾಭಿಮಾನ… ಇವುಗಳು ಸಹೃದಯಿಗಳೊಂದಿಗೆ ಸಂವಾದಕ್ಕಿಳಿಯುತ್ತವೆ. ವ್ಯಕ್ತಿಗತ ನೆಲೆಯಲ್ಲಿ ಬುದ್ಧ, ಬಸವ, ಅಕ್ಕಮಹಾದೇವಿ, ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಸಾಧನೆಯ ಸೆಲೆಯಲ್ಲಿ ಕೆಲ ಗಜಲ್ ಗಳು ರೂಪುಗೊಂಡಿವೆ.

     ಬ್ರಹ್ಮಾಂಡದಲ್ಲಿ ಸತ್ಯವಾದುದು ಏನಾದರೂ ಇದ್ದರೆ ಅದು ಪ್ರೀತಿ ಮಾತ್ರ. ಇದು ಗಜಲ್ ಗೆ ಜನ್ಮ ನೀಡಿ ಸುಖನವರ್ ಭಾವನೆಯೊಳಗೆ ಸಿಕ್ಕಿ ಹಾಕಿಕೊಂಡ ಶಾಶ್ವತತೆಯನ್ನು ಸಾರುತ್ತದೆ. ಇಂಥಹ ಭಾವ ಮೂಡಿಸುವ ಹಲವು ಪ್ರೀತಿಯ ಹೆಜ್ಜೆ ಗುರುತುಗಳನ್ನು ಇಲ್ಲಿಯ ಹಲವಾರು ಗಜಲ್ ಗಳಲ್ಲಿ ಗ್ರಹಿಸಬಹುದು. ಕನವರಿಸುವ ಮನಸ್ಸಿನ ತುಡಿತ, ಪ್ರಣಯದ ಬೆಚ್ಚಗಿನ ಭಾವ, ಮಧುಶಾಲೆಯ ಅಪ್ಯಾಯಮಾನತೆ, ಕನಸಿನ ಲೋಕ, ಮುನಿಸಿನ ಮುಂಗಾರು ಮಳೆ, ವಿರಹದ ದಳ್ಳುರಿ, ನಂಬಿಕೆಯ ಬೆಸುಗೆ, ಅಪನಂಬಿಕೆಯ ಅನಾಹುತ, ಬಿಟ್ಟುಕೊಡುವಲ್ಲಿನ ತ್ಯಾಗದ ಮನೋಲಹರಿ, ಬಿಟ್ಟೆನೆಂದರೂ ಬಿಡದ ಪ್ರೀತಿಯ ಆಲಿಂಗನ…. ಎಲ್ಲವೂ ಇಲ್ಲಿ ಹದವರಿತು ರಸಿಕರ ಹೃದಯದ ಕದ ತಟ್ಟುವಲ್ಲಿ ಯಶಸ್ವಿಯಾಗಿವೆ.

“ಕನಸಿಗೆ ರೆಕ್ಕೆಗಳ ಹಚ್ಚಿ ಬಿಟ್ಟಿರುವೆ ಅವನ ಹುಡುಕಲು
ಜಗದ ತುಂಬ ಮಿಂಚುಹುಳು ಕಳುಹಿಸಿರುವೆ ಅವನ ಹುಡುಕಲು”

“ಹ(ಅ)ವಳ ಕೆಂಪಿನ ಅಧರ ಅಮೃತ ಹೀರಿದಾಗ ಮನ ಹಗುರಾಯಿತು
ಸಂಜೆ ಸೊಬಗಿನಲಿ ಮಧುಶಾಲೆಗೆ ನಡೆದಾಗ ಮನ ಹಗುರಾಯಿತು”

“ಬೇಸರ ಕಳೆಯಲು ಮಧುಶಾಲೆಯಲಿ ಸಾಕಿಕೊಟ್ಟ ಮಧು ಕುಡಿದೆ
ಯೌವನದ ಅಮಲಿನಲಿ ಅಪ್ಪಿ ಮುದ್ದಾಡಿದಂತೆ ಕನಸು ಕಂಡೆ”

“ಮಧುಶಾಲೆಯಲಿ ನೆಮ್ಮದಿ ಹುಡುಕುತ್ತಿರುವೆ ತಡೆಯಬೇಡ
ಸುಖ ಪಡೆಯುವ ಸರದಿಯು ಬಂದಿಲ್ಲ ಸಾವೇ ದೂರವಿರು”

“ಮಧುಶಾಲೆಯಲಿ ಕೈ ಜಾರಿ ಮಧುಬಟ್ಟಲು ಮುಕ್ಕಾಗಿದೆ
ಸಾಕಿಯ ಪ್ರೀತಿಯಿಲ್ಲದೆ ಹೃದಯ ಚೂರು ಚೂರಾಗಿದೆ”

“ಪ್ರೀತಿಯೇ ಇಲ್ಲದ ಮೇಲೆ ಜೊತೆಯಲಿ ಬಾಳಿದರೇನು ಫಲ
ಪರಿಮಳವೇ ಇಲ್ಲದ ಹೂವು ಮುಡಿಯಲಿ ಮುಡಿದರೇನು ಫಲ”

“ನನ್ನ ಜೊತೆ ಬದುಕುವುದು ಕಷ್ಟವಾದರೆ ಹೇಳಿ ಹೋಗು ಕಾರಣ
ಅವಳ ಜೊತೆ ಇರುವುದು ಬಯಸುವುದಾದರೆ ಹೇಳಿ ಹೋಗು ಕಾರಣ”

“ಎದೆ ಗುಂಡಿಗೆ ಒಡೆದು ಹೋಳಾದರೂ ಮಿಡಿಯುವುದು ನಿನಗಾಗಿ
ಒಡಕು ದರ್ಪಣ ಚೂರಲ್ಲೂ ಬಿಂಬ ತೋರುವುದು ನಿನಗಾಗಿ”

ಈ ಮೇಲಿನ ಅಶಅರ್ ಪ್ರೀತಿಯ ವಿವಿಧ ಆಯಾಮಗಳನ್ನು ಪರಿಚಯಿಸುವ ಕೆಲಸ ಮಾಡುತ್ತವೆ. ಪ್ರೀತಿಸಬೇಕಾದರೆ ಯಾವುದೇ ಅಜೆಂಡಾ ಇಲ್ಲದೆ ಪ್ರೀತಿಸಬೇಕು ಎನ್ನುವುದನ್ನು ಸಾರುತ್ತ ಪ್ರೀತಿ ಪರಸ್ಪರರಲ್ಲಿ ಇದ್ದರೆ ಪ್ರೇಮಿಗಳ ಹೃದಯ ಮೃದುವಾಗುತ್ತದೆ, ಇಲ್ಲದಿದ್ದರೆ ಹೃದಯವು ಬಲಗೊಳ್ಳುತ್ತದೆ. ಯಾವುದೇ ರೀತಿಯಲ್ಲಿ ಪ್ರೀತಿಯ ಕ್ರಿಯೆಯಲ್ಲಿ ವೈಫಲ್ಯವೆಂಬುದಿಲ್ಲ ಎಂಬುದನ್ನು ಅರಹುತ್ತವೆ.  ಪ್ರೀತಿಸಿದ ಹೃದಯಕ್ಕೆ ಯಾವತ್ತೂ ಪ್ರೀತಿಯನ್ನು ಮರೆಮಾಚಲು ಸಾಧ್ಯವಿಲ್ಲ. ಪ್ರೀತಿ ಅಸ್ತಿತ್ವದಲ್ಲಿರಲು ಕಾರಣ ಅಥವಾ ಅಡಿಪಾಯದ ಅಗತ್ಯವಿಲ್ಲ. ಪ್ರೀತಿಗೆ ಪ್ರೀತಿಯೇ ಸಾಟಿ. ಈ ನಿಟ್ಟಿನಲ್ಲಿ ಮೇಲಿನ ಅಶಅರ್ ತುಂಬಾ ಮುಖ್ಯವೆನಿಸುತ್ತವೆ.

      ಪ್ರಕೃತಿಯೊಂದಿಗಿನ ಪ್ರತಿಯೊಂದು ನಡಿಗೆಯಲ್ಲಿ ನಾವು ಬಯಸುವುದಕ್ಕಿಂತ ಹೆಚ್ಚಿನದನ್ನು ಪಡೆಯುತ್ತೇವೆ. ಇದು ನಮ್ಮ ಎಲ್ಲಾ ತೊಂದರೆಗಳಲ್ಲಿ ಸಾಂತ್ವನವನ್ನು ತರುತ್ತದೆ. ಪ್ರಕೃತಿಯು ಯಾವತ್ತೂ ಆತುರಪಡುವುದಿಲ್ಲ, ಆದರೂ ಎಲ್ಲವನ್ನೂ ಸಾಧಿಸುತ್ತದೆ. ಮನುಷ್ಯರು ವಾದಿಸುತ್ತಾರೆ, ಆದರೆ ಪ್ರಕೃತಿ ಮೌನವಾಗಿಯೇ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ಷೇರ್ ಪ್ರತಿಧ್ವನಿಸುತ್ತದೆ.

“ಬಿತ್ತಿದ ಬೀಜವು ಮೊಳಕೆ ಒಡೆದಾಗ ವಸುಂಧರೆಗೆ ಸಂತಸ
ಚೈತ್ರದ ಇರುಳು ಜೊನ್ನ ಸ್ಪರ್ಶ ಬಿರಿದ ನೈದಿಲೆಗೆ ಸಂತಸ”

ಪ್ರಕೃತಿಯ ಮಡಿಲಲ್ಲಿ ಕಳೆಯುವ ಸಮಯ ಎಂದಿಗೂ ವ್ಯರ್ಥವಾಗುವುದಿಲ್ಲ. ಅದು ಮರಗಳ ನಡುವೆಯಾಗಲಿ, ಬೆಳದಿಂಗಳ ರಾತ್ರಿಯಾಗಿರಲಿ, ಸಮುದ್ರದ ದಡವಾಗಿರಲಿ ಎಂಬ ಸಂದೇಶವನ್ನು ಮೇಲಿನ ಷೇರ್ ಸಾರುತ್ತದೆ.

     ಮನುಷ್ಯ ವೈಜ್ಞಾನಿಕವಾಗಿ ಏನೆಲ್ಲ ಸಾಧಿಸಿದ್ದರೂ ಹಲವು ಬಾರಿ ನಿರ್ಸಗದ ಮುಂದೆ ಅಸಹಾಯಕನಾಗಿ ನಿಲ್ಲುತ್ತಾನೆ. ಅದಕ್ಕೊಂದು ತಾಜಾ ಉದಾಹರಣೆಯೆಂದರೆ ಕೋವಿಡ್ ಕಾಲಘಟ್ಟ. ಆ ಸಮಯದಲ್ಲಿ ಮರಣ ಮೃದಂಗದ ಸದ್ದು ಇಡೀ ಮನುಕುಲವನ್ನೇ ಕಂಗೆಡಿಸಿತ್ತು. ಈ ಸಾವಿನ ಸೂತಕವನ್ನು ಗಜಲ್ ಗೋ ಪ್ರಭಾವತಿ ದೇಸಾಯಿಯವರು ಕಣ್ಣಿಗೆ ಕಟ್ಟುವಂತೆ ತುಂಬಾ ಸರಳವಾಗಿ ತಮ್ಮ ಗಜಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅದಕ್ಕೊಂದು ಉತ್ತಮ ನಿದರ್ಶನ ಈ ಕೆಳಗಿನ ಷೇರ್.

“ಹಣ್ಣೆಲೆಗಳ ಮೆರವಣಿಗೆ ಸ್ಮಶಾನದ ಕಡೆ ಸಾಗಿದೆ ಇಂದು
ಚಿಗುರಿನ ಉಸಿರನು ನುಂಗಲು ಹೊಸ ವೈರಾಣು ಬಂದಿದೆ ಇಂದು”

       ಮನುಷ್ಯ ತನ್ನ ಮನಸ್ಸಿಗೆ ಯಾವುದು ಅರ್ಥವಾಗುವುದಿಲ್ಲವೋ ಅದನ್ನು ಪೂಜಿಸಲು ಆರಂಭಿಸುತ್ತಾನೆ, ಮುಂದುವರಿದಂತೆ ಭಯ ಪಡುತ್ತಾನೆ. ಈ ಭಯವೇ ಮೂಢನಂಬಿಕೆಯ ಮುಖ್ಯ ಮೂಲವಾಗಿದೆ ಮತ್ತು ಕ್ರೌರ್ಯದ ಮುಖ್ಯ ಮೂಲಗಳಲ್ಲಿ ಒಂದಾಗಿದೆ. ಇದನ್ನು ಹೋಗಲಾಡಿಸಲು ಹಲವಾರು ಸಮಾಜ ಸುಧಾರಕರು ಪ್ರಯತ್ನ ಮಾಡಿದ್ದರಾದರೂ ಅದು ಸಂಪೂರ್ಣವಾಗಿ ನಿರ್ನಾಮವಾಗಿಲ್ಲ. ವಿಪರ್ಯಾಸವೆಂದರೆ ವಿದ್ಯಾವಂತರಲ್ಲಿಯೇ ಇದು ಹೆಚ್ಚಾಗಿ ಕಂಡು ಬರುತ್ತಿದೆ. ಮನುಷ್ಯನ ಯಶಸ್ಸು ಆತನ ವಿಚಾರವಂತಿಕೆ, ಪ್ರಯತ್ನದಲ್ಲಿ ಇದೆಯೇ ಹೊರತು ಹಣೆಬರಹ, ದೇವರು-ದಿಂಡರ ಪೂಜೆಯಲ್ಲಿ ಇಲ್ಲ ಎಂಬುದನ್ನು ಹಿರಿಯರಾದ ದೇಸಾಯಿಯವರು ತಮ್ಮ ಈ ಷೇರ್ ನಲ್ಲಿ ದಾಖಲಿಸಿದ್ದಾರೆ. ‘ಬದುಕು ಉಳಿಯಲಿಲ್ಲ’ ಎಂಬ ರದೀಫ್ ಇಡೀ ಗಜಲ್ ನ ಧ್ವನಿಯಾಗಿದೆ.

“ಸೆಟಿಗೆವ್ವ ರಾಜಪಟ್ಟ ಬರೆದರೂ ಬದುಕು ಉಳಿಯಲಿಲ್ಲ
ಎಲ್ಲಾ ದೈವಕ್ಕೆ ಕೈ ಮುಗಿದರೂ ಬದುಕು ಉಳಿಯಲಿಲ್ಲ”

    ನಮ್ಮ ಸಮಾಜದಲ್ಲಿ ಮಾನವೀಯತೆ ಇತ್ತು, ಇದೆ ಹಾಗೂ ಇರುತ್ತದೆ. ಆದರೆ ಅದರ ಪ್ರಮಾಣವೆಷ್ಟು ಎಂಬುದು ಮುಖ್ಯವಾಗುತ್ತದೆ. ಇಂದು ಮಾನವೀಯತೆ ಕಡಿಮೆಯಾಗುತ್ತಿದೆ. ಕಾರಣ, ಸಮಾಜವನ್ನು ರಚಿಸಲಾಗಿದೆ. ಅಧಿಕಾರದಲ್ಲಿರುವ ಜನರು ಸಮಾಜದ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯೂ ಒಬ್ಬರಿಗೊಬ್ಬರು ವಿನಮ್ರರಾಗಿದ್ದರೆ ಅಲ್ಲಿ ಸಮಾಜದ ಅಗತ್ಯವೇ ಇರುವುದಿಲ್ಲ. ಆದಾಗ್ಯೂ ನಾವೆಲ್ಲ ಸಮಾಜದ ಒಂದು ಭಾಗವಾಗಿದ್ದೇವೆ. ಸೂಕ್ಷ್ಮ ಸಂವೇದನಾಶೀಲತೆಗೆ ಕನ್ನಡಿಯಾಗಿರುವ ಸಾಹಿತ್ಯದಲ್ಲಿ ಸಾಮಾಜಿಕ ವ್ಯವಸ್ಥೆಯ ಛಾಯೆ ಇರುತ್ತದೆ. ಈ ಸಂಕಲನದಲ್ಲೂ ನಮ್ಮ ವ್ಯವಸ್ಥೆಯ ಅಂಕುಡೊಂಕು, ಮನುಷ್ಯನ ಮುಖವಾಡ, ದಾನವನ ಅಟ್ಟಹಾಸ, ಅಧಿಕಾರದ ದರ್ಪ, ಮೌಲ್ಯಗಳ ಅಧಃಪತನ, ಬಂಡವಾಳಶಾಹಿಯ ದೌಲತ್ತು, ಸಾಂಸ್ಕೃತಿಕ ರಾಜಕೀಯ… ಮುಂತಾದವುಗಳನ್ನು ಕಾಣುತ್ತೇವೆ. ಈ ದಿಸೆಯಲ್ಲಿ ಸುಖನವರ್ ಶ್ರೀಮತಿ ಪ್ರಭಾವತಿ ದೇಸಾಯಿಯವರ ಕೆಲವು ಅಶಅರ್ ಅನ್ನು ಗಮನಿಸೋಣ.

“ಲೋಕದ ಮನಸುಗಳು ದ್ವೇಷದಲಿ ಉರಿಯುತಿವೆ ಇಂದು
ಅನುರಾಗದ ಜಲವನು ಸುರಿಸುವವರು ಯಾರೂ ಇಲ್ಲ”

“ನೆರಳಿರದ ಹಾದಿಯಲಿ ಬದುಕಿನ ಡಿ ಸಾಗಿದೆ ಅನವರತ
ಬಾಳಿನ ಕಹಿ ನೆನಪಿನ ದಿನಗಳು ಮರೆಯಾಗಲಿ ಕಾಡುವ ಮುನ್ನ”

“ಕುರುಡು ಕಾಂಚಾಣವು ತಿಪ್ಪೆಯಲಿ ಬಿದ್ದು ಒದ್ದಾಡುತಿದೆa
ಹಸಿವು ಅಡಗಿಸುವ ಶಕ್ತಿಯನು ನೇಗಿಲಿಗೆ ಕೊಟ್ಟಿರುವೆ ಶಿವ”

“ಭೂಮಂಡಲವನೇ ಆಳುವ ಚಕ್ರವರ್ತಿಯಂತೆ ಬಾಳಿದೆ
ಆರು ಮೂರು ಅಡಿಯ ಒಡೆಯನೆಂಬುದ ಅರಿಯಲಿಲ್ಲ ನೀನು”

“ವಲಸೆಗಾರರ ನುಡಿಯ ದಬ್ಬಾಳಿಕೆಯು ಹೆಚ್ಚಾಗಿದೆ ಇಂದು
ಭುವನೇಶ್ವರಿಯ ನಾಡಲಿ ಕನ್ನಡ ನುಡಿಯ ದೀಪ ಹಚ್ಚೋಣ”

      ಸಮಾಜದಲ್ಲಿ ಕೋಪ, ದ್ವೇಷ, ಅಸೂಯೆ, ಅಹಂಕಾರ, ಅರಾಜಕತೆ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರೀತಿ, ಮಮತೆ, ಕರುಣೆ, ಸಹಾನುಭೂತಿ ಹಂಚುವ ಕೆಲಸ ಆಗಬೇಕಾಗಿದೆ. ಆದರೆ ಸಮಾಜ ಮಾತ್ರ ಯಾವಾಗಲೂ ಇತರರನ್ನು ಜಡ್ಜ್ ಮಾಡುತ್ತಾರೆ ಇದೆ! ಶ್ರೀಮಂತರ ಸಮಾಜವು ಯಾವಾಗಲೂ ಬಡವರ ಸಮಾಜವನ್ನು ತುಳಿಯುತ್ತಲೇ ಇರುತ್ತದೆ. ಅಧಿಕಾರ ಮತ್ತು ಸಂಪತ್ತು ಇದ್ದರೆ ಮಾತ್ರ ಸಮಾಜವು ಗೌರವಿಸುತ್ತದೆ, ಇಲ್ಲದಿದ್ದರೆ ಇಲ್ಲ ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ. ಇದನ್ನು ದೇಸಾಯಿಯವರು ತಮ್ಮ ಗಜಲ್ ನಲ್ಲಿ ತುಂಬಾ ನಾಜೂಕಾಗಿ ನಿರೂಪಿಸಿದ್ದಾರೆ. ಹಸಿವು ಅಡಗಿಸುವ ಶಕ್ತಿಯನ್ನು ನೇಗಿಲಲ್ಲಿ ಕಂಡಿರುವುದು ಅವರು ಸಮಾಜವನ್ನು ಕಂಡಿರುವ ಪರಿಯ ದ್ಯೋತಕವಾಗಿದೆ. ನಾಗರಿಕ ಸಮಾಜಗಳನ್ನು ಇತಿಹಾಸ ಪುಸ್ತಕಗಳಲ್ಲಿ ಮಾತ್ರ ಕಾಣಬಹುದು ಎಂಬುದು ನಕಾರಾತ್ಮಕ ಅನಿಸಿದರೂ ವಾಸ್ತವವಾಗಿದೆ. ಇತ್ತೀಚೆಗಂತೂ ಭಾಷಾ ರಾಜಕೀಯ ಮುಗಿಲುಮುಟ್ಟುತ್ತಿದೆ. ಅನ್ಯರ, ಪರಕೀಯರ, ವಲಸಿಗರ ಭಾಷಾ ದಬ್ಬಾಳಿಕೆ ಹೆಚ್ಚಾಗಿರುವುದನ್ನು ಗುರುತಿಸಿ ನಮ್ಮ ಮಾತೃಭಾಷೆ ಪ್ರಜ್ವಲಿಸಬೇಕು ಎಂಬ ಸದಾಶಯವನ್ನು ಶಾಯರ್ ರವರು ವ್ಯಕ್ತಪಡಿಸಿದ್ದಾರೆ.

      ಭಾವನಾಜೀವಿಯಾದ ಮನುಷ್ಯ ತನ್ನ ಭಾವನೆಗಳ ಕತ್ತು ಹಿಸುಕಿ ಮಟೇರಿಯಲಿಸ್ಟಿಕ್ ಆಗುತಿದ್ದಾನೆ. ಜಾಗತಿಕ ಸೆಲೆಯಲ್ಲಿ ಕೌಟುಂಬಿಕ ಪರಿಧಿಯನ್ನು ದಾಟಿ ಮುಂದೆ ಹೋಗಿದ್ದಾನೆ. ತನ್ನ ಹೆತ್ತವರನ್ನು ಕಾಲ ಕಸದಂತೆ ಕಾಣುತ್ತಿರುವುದು ಶೋಚನೀಯ. ಈ ಮುಂದಿನ ಷೇರ್ ಇದನ್ನೇ ಒಳಗೊಂಡಿದೆ.

“ಮಂಗಳಕೆ ಇಟ್ಟ ಕಾಲು ಅಂಗಳಕೆ ಇಡಲು ಹಿಂಜರಿಯುತಿದೆ
ಒಲವು ಕೊಟ್ಟ ಹೆಗಲಿಗೆ ಇಂದು ಹೆಗಲು ಕೊಡಲು ಹಿಂಜರಿಯುತಿದೆ”

       ಮನುಷ್ಯ ಏನೆಲ್ಲಾ ಸಂಪಾದಿಸಿದರೂ ಹೋಗುವಾಗ ಯಾವುದನ್ನೂ ಹೊತ್ತುಕೊಂಡು ಹೋಗುವುದಿಲ್ಲ. ‘ಕಂಡವರಾರು’, ‘ಅಳೆದವರಾರು’ ಎಂಬ ಕವಾಫಿ ಬದುಕಿನ ಅನಿಶ್ಚಿತತೆಯನ್ನು ಓದುಗರಿಗೆ ಮನದಟ್ಟಾಗುತ್ತದೆ. ಮರಣದ ಮೂಲ ಸೆಲೆ ಕಂಡು ಹಿಡಿಯುವಲ್ಲಿ ಸೋತಿದ್ದಾರೆ. ಗಟ್ಟಿಯಾದ ಅನುಭವ ಹೊಂದಿರುವ ಸುಖನವರ್ ಶ್ರೀಮತಿ ಪ್ರಭಾವತಿ ದೇಸಾಯಿಯವರು ಅಲೌಕಿಕದ ಸೆಲೆಯಲ್ಲಿ ಈ ಗಜಲ್ ಅನ್ನು ಕಟ್ಟಿಕೊಟ್ಟಿದ್ದಾರೆ.

“ಜನನ ಮರಣದ ಕಾಲವ ಕಂಡವರಾರು ಜಗದಲಿ
ಕಂಬನಿಯ ಆಳ ಹರವು ಅಳೆದವರಾರು ಜಗದಲಿ”

       ಕಾಫಿಯ, ಕವಾಫಿ ಬಳಕೆ ಗಜಲ್ ನ ಹೃದಯವಾಗಿದೆ. ಪ್ರತಿ ಕಾಫಿಯಾ ಬಿಡಿ ಶಬ್ಧವಾಗಿದ್ದು, ಪ್ರತ್ಯೇಕ ಅರ್ಥ ಹೊಂದಿರಬೇಕು. ಇದರ ಕೊನೆಯ ಅಕ್ಷರಕ್ಕೆ ‘ರವಿ’ ಎಂದು ಕರೆಯುತ್ತೇವೆ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಕಾಫಿಯಾದ ಕೊನೆಯಲ್ಲಿ ಪುನರಾವರ್ತನೆ ಆಗುವ ಅಕ್ಷರಗಳಿಗೆ ‘ರವೀಶ್’ ಎನ್ನುತ್ತೇವೆ. ಈ ರವೀಶ್ ಗಜಲ್ ನ ಉದ್ದಕ್ಕೂ ಕಾಪಾಡಿಕೊಂಡು ಬಂದರೆ ಗಜಲ್ ನ ಸೌಂದರ್ಯ ಮತ್ತಷ್ಟು ಇಮ್ಮಡಿಯಾಗುತ್ತದೆ. ಇದರೊಂದಿಗೆ ಅಲಾಮತ್ ಕಡೆಗೆ ಗಮನ ಹರಿಸಿದರೆ ಗಜಲ್ ಮುಖಮ್ಮಲ್ ಆಗುವುದರಲ್ಲಿ ಸಂಶಯವೇ ಇಲ್ಲ. ಈ ಸಂಕಲನದ ಒಂದು ಗಜಲ್ ನಲ್ಲಿ  ‘ನೆನಪಾಯಿತೆಂದು’, ‘ಉಳಿಯಿತೆಂದು’, ‘ಮುರಿಯಿತೆಂದು’, ‘ಚೂರಾಯಿತೆಂದು’, ಎಂಬ ಕವಾಫಿ ಇವೆ. ಇಲ್ಲಿ ‘ಯಿತೆಂದು’ ಎಂಬುದು ‘ರವೀಶ್’ ಆಗಿದೆ. ಉಳಿದ ಕವಾಫಿ ಯಲ್ಲೂ ಇದೆ ರವೀಶ್ ಮುಂದುವರಿಯಬೇಕಾಗಿತ್ತು. ಆದರೆ ‘ಆರಿತೆಂದು’, ‘ಕೊನೆಯಿಲ್ಲವೆಂದು’ ಬಂದಾಗ ರವೀಶ್ ಬದಲಾಗುತ್ತದೆ, ಜೊತೆಗೆ ಗಜಲ್ ನ ರಿದಂ ಏರುಪೇರಾಗುತ್ತದೆ. ಸಾಮಾನ್ಯ ಗ್ರಹಿಕೆಯಲ್ಲಿ ಇದು ಕಾಣದಾದರೂ ಪರಿಪೂರ್ಣತೆಯ ಹುಡುಕಾಟದಲ್ಲಿರುವವರಿಗೆ ಎದುರಾಗುತ್ತದೆ. ಅಲ್ಲಲ್ಲಿ ಇಂಥಹ ಕವಾಫಿ ಓದುಗರಿಗೆ ಗೋಚರಿಸುತ್ತವೆ. ಹಾಗಂತ ಪರಿಪೂರ್ಣ ಕವಾಫಿ ಇಲ್ಲವಂತೆನಿಲ್ಲ. ‘ಕನಸುಗಳು’, ‘ಅಲೆಗಳು’, ‘ಹೂವುಗಳು’, ‘ಮೋಡಗಳು’, ‘ನಕ್ಷತ್ರಗಳು’, ‘ರಾಗಗಳು’ ಕವಾಫಿಯಲ್ಲಿ ‘ಗಳು’ ರವೀಶ್ ಆಗಿದ್ದು, ಅದರ ಹಿಂದಿನ ಅಕ್ಷರ ‘ರೌಫ್’ನಲ್ಲಿ ಉ,ಎ,ಉ,ಅ,ಅ,ಅ ಸ್ವರ ಬಂದಿವೆ. ಒಂದೆರಡು ಕಡೆ ಕಾಫಿಯಾದ ಪಾಲನೆಯಾಗಿಲ್ಲ. ‘ಮಾಸಿಹೋಗಿದೆ’ ‘ಸೋರಿಹೋಗಿದೆ’, ‘ಹಾರಿಹೋಗಿದೆ’, ‘ಬಾಡಿಹೋಗಿದೆ’, ‘ಜಾರಿಹೋಗಿದೆ’, ‘ಆರಿಹೋಗಿದೆ’ ಹಾಗೂ ‘ಕರಗಿಹೋಗಿವೆ’ ಮತ್ತು ‘ಕಳೆದುಹೋಗಿವೆ’, ಇಂಥಹ ಕವಾಫಿ ಬಳಕೆ ಕಾಫಿಯಾ ದೋಷ ಅನಿಸಿಕೊಳ್ಳುತ್ತದೆ. ವೈಯಾಕರಣಿ ಕೇಶಿರಾಜನ ನೆಲೆಯಲ್ಲಿ ಗಮನಿಸಿದಾಗಲೂ ಇವು ‘ಸಂಧಿ ದೋಷ’ ಎನಿಸಿಕೊಳ್ಳುತ್ತವೆ. ಇವುಗಳ ಹೊರತಾಗಿ, ಇವುಗಳನ್ನು ಬದಿಗೊತ್ತಿ ‘ಒಲವ ಹಾಯಿದೋಣಿ’ಯಲ್ಲಿ ಪ್ರಯಾಣಿಸಿದಾಗ ಮನಸ್ಸಿಗೆ ಒಂಥರಾ ಖುಷಿ ಸಿಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಇಲ್ಲಿಯ ಗಜಲ್‌ಗಳು ನಮ್ಮ ಮನವೊಲಿಸುತ್ತವೆ. ಪ್ರೀತಿಯು ತನ್ನನ್ನು ತಾನು ಅತ್ಯಂತ ಸ್ಪಷ್ಟವಾದ ರೀತಿಯಲ್ಲಿ ಬಹಿರಂಗಪಡಿಸುವ ಮಾರ್ಗವನ್ನು ಇಲ್ಲಿಯ ಗಜಲ್ ಗಳು ಹೊಂದಿವೆ. ಪ್ರೀತಿಸಲು ನಮಗೆ ಕಾರಣಗಳೆ ಬೇಕಾಗಿಲ್ಲ, ಸ್ವತಃ ಪ್ರೀತಿಯೇ ಕಾರಣ. ಪ್ರೀತಿಸಲು ಋತುವಿನ ಅಗತ್ಯವೂ ಇಲ್ಲ, ಏಕೆಂದರೆ ಪ್ರೀತಿಯೇ ಒಂದು ಋತುವಾಗಿದೆ. ಈ ಸಂದೇಶವನ್ನು ‘ಒಲವ ಹಾಯಿದೋಣಿ’ ಸಂಕಲನವು ಸಹೃದಯ ಓದುಗರ ಎದೆಗೆ ರವಾನಿಸುತ್ತದೆ.

“ಯಾವತ್ತೂ ಬರೆಯಲಾಗದ ಅಪೂರ್ಣ ಪುಸ್ತಕ ನೀನು
ಯಾವತ್ತೂ ಪೂರ್ಣಗೊಳ್ಳದ ಅಪೂರ್ಣ ಕನಸು ನೀನು”
-ರೆಹಾನ್ ಕತ್ರಾವಾಲೆ



ಡಾ. ಮಲ್ಲಿನಾಥ ಎಸ್. ತಳವಾರ, 

Leave a Reply

Back To Top