ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ

ವಿಶೇಷ ಲೇಖನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ

ಚಿತ್ರಕೃಪೆ-ಗೂಗಲ್, ನಿಜಶರಣ

ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ

ಕಂಡೆ ಕಾಣೆನೆಂಬುದು ಕಂಗಳ ಭ್ರಮೆ,
 ಕೂಡಿದೆನಗಲಿದೆನೆಂಬುದು ಕಾಯ ಭ್ರಮೆ,
ಅರಿದೆ ಮರೆದೆನೆಂಬುದು ಚಿದೋಹಂ ಭ್ರಮೆ,
ಓದು ವೇದಂಗಳ ಜಿನುಗು ಉದುಮನದ ಭ್ರಮೆ,
ಇಹ ಪರಂಗಳನಾಸೆಗೆಯ್ವುದು ಜೀವ ಭ್ರಮೆ,
 ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ.

                                                    ಆದಯ್ಯ

ಆದಯ್ಯ ಗುಜರಾತ ಮೂಲದ ಸೌರಾಷ್ಟ್ರದ ಬಣಜಿಗ ಬನಿಯಾ  ,ವ್ಯಾಪಾರಕ್ಕಾಗಿ ಲಕ್ಷ್ಮೇಶ್ವರಕ್ಕೆ ಬಂದು ,ಅಲ್ಲಿ ತನ್ನ ವ್ಯಾಪಾರ ಮಾಡುತ್ತಾ ,ಅದೇ ಊರಿನ ಜೈನ ಮೂಲದ ಪವಾಡಶೆಟ್ಟಿಯವರ ಮಗಳಾದ ಪದ್ಮಾವತಿಯನ್ನು ಜೈನರ ವಿರೋಧದ ಮಧ್ಯೆ ಮದುವೆಯಾಗಿ ,ಸೌರಾಷ್ಟ್ರದ ಸೋಮೇಶ್ವರನನ್ನು ಕರೆತಂದು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸ್ಥಾಪಿಸಿದ ಅನ್ನುವ ಕಥೆಯನ್ನು ಆದಯ್ಯನ ರಗಳೆಯಲ್ಲಿ ಹರಿಹರ ಚಿತ್ರಿಸುತ್ತಾನೆ.ಸೌರಾಷ್ಟ್ರ ಸೋಮೇಶ್ವರ’ ಅಂಕಿತದಲ್ಲಿ ವಚನ ಮತ್ತು ಸ್ವರವಚನಗಳನ್ನು ರಚಿಸಿದ್ಧಾನೆ. ೪೦೩ ವಚನಗಳು ದೊರೆತಿವೆ. ಶರಣ ಧರ್ಮ ತತ್ವಗಳ ವಿವೇಚನೆ ಅವುಗಳಲ್ಲಿ ವ್ಯಾಪಕವಾಗಿ ನಡೆದಿದೆ. ಸಾಹಿತ್ಯಿಕ ಸತ್ವ, ತಾತ್ವಿಕ ಪ್ರೌಢಿಮೆ ಎರಡೂ ಈತನ ವಚನಗಳಲ್ಲಿ ಮೇಳೈಸಿರುವುದು ವಿಶೇಷವೆನಿಸಿದೆ. ಇವನ ವಚನಗಳ ಮೇಲೆ ಬಸವಣ್ಣ – ಅಲ್ಲಮರ ಪ್ರಭಾವ ವಿಶೇಷವಾಗಿ ಆಗಿದೆ. ಶರಣ ಚಳುವಳಿಯ ಪ್ರಮುಖರಲ್ಲಿ ಆದಯ್ಯ ಒಬ್ಬ, ಶೈವಪ್ರಭೇದಗಳನ್ನು ಹೇಳಿ ಲಿಂಗಾಯತದ ವೈಶಿಷ್ಟ್ಯವನ್ನು ಚೆನ್ನಾಗಿ ತಿಳಿಯಪಡಿಸಿರುವನು, `ವೇದಗಳ ಹಿಂದೆ ಹೋಗದಿರು  ಎಂದು ಹೇಳುವ ಮೂಲಕ ಶರಣಧರ್ಮಕ್ಕೆ ಹೆಚ್ಚಿನ ಒತ್ತುಕೊಡುವ ಗಣಾಚಾರಿ . ಆದಯ್ಯನ ವಚನಗಳಲ್ಲಿ  ಬೆಡಗಿನ ಪ್ರತಿಮೆಗಳು  ಸಾಕಷ್ಟು ಬಳಕೆಗೊಂಡಿವೆ. ಅಲ್ಲಮರ ಸರಿಸಾಟಿ ಆಧ್ಯಾತ್ಮಿಕ ಚಿಂತನೆ ಮಾಡಿದ ಅತ್ಯಂತ ಕ್ರಿಯಾಶೀಲ  ಶರಣ.

ಕಂಡೆ ಕಾಣೆನೆಂಬುದು ಕಂಗಳ ಭ್ರಮೆ,

 ಕಣ್ಣು  ಪಂಚೇಂದ್ರಿಗಳಲ್ಲಿ ಅತ್ಯಂತ ಪ್ರಭಾವಪೂರ್ಣವಾದ ಅಂಗ.ಎಲ್ಲವನ್ನೂ ನೋಡುವ ಕಾಣುವ ದೃಷ್ಟಿಯ ಶಕ್ತಿಶಾಲಿ ಭಾಗ .ಯೋಗದಲ್ಲಿ ಬರುವ ದೃಷ್ಟಿ ಯೋಗಕ್ಕೆ ಸಂಬಂಧ ಪಟ್ಟ ಹಾಗೆ ನೋಡಿ ನಿರೀಕ್ಷಿಸಿ ಶರೀರದ ಚೈತನ್ಯವನ್ನು ಇಮ್ಮಡಿಗೊಳಿಸುವ ಸಾಧನಕ್ಕೆ ಕಣ್ಣು ಬಹು ಮುಖ್ಯ . ದೈವೀ ಶಕ್ತಿಯನ್ನು ಕಂಡೆನು ಕಾಣೆನು ಎನ್ನುವುದು ವ್ಯಕ್ತಿಯ ತಾತ್ವಿಕ ಗೊಂದಲ ಮತ್ತು ವೈರುಧ್ಯ. ಕಣ್ಣಿನ ನಿರೀಕ್ಷೆಯಿಂದ ದೇವರು ಅಧ್ಯಾತ್ಮದ ಲೆಕ್ಕಾಚಾರ ಮಾಡುವುದು ,ಮತ್ತು ವಸ್ತುವನ್ನು ಕಂಡೆನು ಎನ್ನುವುದು,ದೈವೀಶಕ್ತಿಯನ್ನು ಕಾಣೆನು ಮತ್ತು ವಸ್ತು ತನ್ನ ಗೋಚರಕ್ಕೆ ಬರಲೇ ಇಲ್ಲ ಎನ್ನುವ ಕೊರಗೂ ಕೂಡ  ಕಣ್ಣಿನ ಭ್ರಮೆ ಮತ್ತು ಭ್ರಾಂತಿ.ಕರ್ಣ ಪಟಲದ ಮೇಲೆ ಗೋಚರಗೊಂಡ ಚಿತ್ರವೂ ಶಾಶ್ವತವಲ್ಲ ,ಕಾಣಲೇ ಇಲ್ಲ ಎನ್ನುವ ಗ್ರಹಿಕೆಯು ಕೂಡ ಅರ್ಥರಹಿತ ಎಂದು ಕಣ್ಣಿನ ಭ್ರಾಂತಿಯ ಭ್ರಮೆಯ ಬಗ್ಗೆ ವ್ಯಕ್ತಿಯ ಅನುಭವವನ್ನು ನೇರವಾಗಿ ಟೀಕಿಸಿದ್ದಾನೆ. ಭಕ್ತನು ತನ್ನ ಪಂಚೇದ್ರಿಗಳ ಮೂಲಕ ಎಲ್ಲವನ್ನೂ ಸಾಧಿಸ ಬಲ್ಲೆ ಎನ್ನುವುದು ತಪ್ಪು ಎಂದಿದ್ದಾನೆ.

ಕೂಡಿದೆನಗಲಿದೆನೆಂಬುದು ಕಾಯ ಭ್ರಮೆ,

ಯೋಗ ಅಂದರೆ ಯುಜ್ ಅಂದ್ರೆ ಕೂಡುವಿಕೆ ,ಆತ್ಮ ಪ್ರಾಣ ಮತ್ತು ಶರೀರ ,ಇವುಗಳ ನಿರಂತರ ಬೆರೆಯುವಿಕೆ ಯೋಗ ಎಂದೆನ್ನುತ್ತದೆ ಯೋಗ ಶಾಸ್ತ್ರ. ಆತ್ಮ ಮತ್ತು ಪರಮಾತ್ಮನ ನಂಬಿಕೆ ದ್ವೈತ ಅದ್ವೈತ ಮತ್ತು ವಿಶಿಷ್ಟಾದ್ವೈತ ಸಿದ್ಧಾಂತಗಳನ್ನೊಳಗೊಂಡ ಅನೇಕ ಏಕ ಮುಖ ಸಿದ್ಧಾಂತಗಳನ್ನು ಭಾರತೀಯ ಮತ್ತು ಪೌರಾತ್ಯ ಪಾಶ್ಚಿಮಾತ್ಯ   ಧರ್ಮಗಳು  ಪ್ರತಿಪಾದಿಸಿವೆ.
ಆದರೆ ಇವುಗಳಿಗೆ ಸಂಪೂರ್ಣ ಭಿನ್ನವಾದ ಬಹುಮುಖ ಅಧ್ಯಾತ್ಮ ಧರ್ಮ ಸಾಮಾಜಿಕ ಹಲವು ಮುಖಗಳ ವೈಚಾರಿಕ ಸೃಷ್ಟಿ ಪರಿಸರ ಪ್ರಿಯ ಸಿದ್ಧಾಂತಗಳನ್ನು ಶರಣರು ಪಾಲಿಸಿದರು.  ಕೂಡಿದೆನೆಂಬುವದು ಮತ್ತು ಆಗಲಿದೆ ಎನ್ನುವುದು ಕಾಯದ ಶರೀರದ ಬಳಲಿಕೆ ಭ್ರಮೆ ಎನ್ನುತ್ತಾನೆ ಆದಯ್ಯ. ಕೂಡಿದೆನೆನ್ನುವುದು ಸುಳ್ಳು ಮತ್ತು ಅಗ್ಗಳಿಕೆ ಎನ್ನುವುದು ಕೂಡ ಭ್ರಮೆ ಎನ್ನುತ್ತಾನೆ.

ಅರಿದೆ ಮರೆದೆನೆಂಬುದು ಚಿದೋಹಂ ಭ್ರಮೆ

ಅರಿವು ಮರೆವು ಎನ್ನುವದು ಕೂಡ ಸಹಜ ವಾಡಿಕೆ.ಚಿತ್ ಚೇತನವು ಜೈವಿಕ ವಿಕಾಸದ ಚಿತ್ಕಳೆ .
 ಸೃಷ್ಟಿ ಮತ್ತು ಬಯಲು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಜೈವಿಕ ವಿಕಾಸದ ಮೂಲ ಬೀಜ ಅದುವೇ ಲಿಂಗ  ಜೈವಿಕ ಜೀವಿಗಳ ಉಗಮ ವಿಕಾಸ  ಬೇರೆ ಬೇರೆ ಪ್ರಾಣಿ ಪಕ್ಷಿ ಜಲಚರ ಹೀಗೆ ಅನಾದಿ ಕಾಲದ ಜೀವ ಚೈತನ್ಯದಲ್ಲಿ ಲಿಂಗ ಪ್ರಜ್ಞೆಯ ಕಂಡು ಪರಿಸರವಾದಿ ಶರಣನು ಪಂಚ ಮಹಾಭೂತಗಳ ಶಕ್ತಿಯಿಂದ   ಪರಿಸರ ಮತ್ತು ಭಕ್ತ  ವ್ಯಕ್ತಿಯ ಸಂಬಂಧವನ್ನು ಅನಾದಿ ಕಾಲದಿಂದಲೂ ಕಾಣುತ್ತಾನೆ. ಇಂತಹ ಅಪ್ರತಿಮ ಆಧ್ಯಾತ್ಮಿಕ ಜೈವಿಕ ವಿಕಾಸದ ಚಿಂತನೆಯಲ್ಲಿ ಅರಿತೆನೆಂಬುದು ಅಹಂ ಭಾವ ಮರೆತೆನೆನ್ನುವುದು ಅಜ್ಞಾನ. ಅರಿತು ಮರೆತೆನೆನ್ನುವುದು ಚಿದೋಹಂ ಭ್ರಮೆ ಮನಸ್ಸಿನ ಮೆದುಳಿನ ಭ್ರಮೆ ಎನ್ನುತ್ತಾನೆ ಆದಯ್ಯ.



ಓದು ವೇದಂಗಳ ಜಿನುಗು ಉದುಮನದ ಭ್ರಮೆ,

ಆದಯ್ಯನು ಅತ್ಯಂತ ಉಗ್ರವಾಗಿ ವೇದ ಆಗಮ ಶಾಸ್ತ್ರಗಳನ್ನು ವಿರೋಧಿಸಿದನು.ವೈದಿಕ ಕರ್ಮಕಾಂಡಗಳ ಬೆನ್ನು ಹತ್ತಿದವನ ಕಂಡು ಮುಮ್ಮಲ ಮರುಗುವ ಆದಯ್ಯ ಈ ರೀತಿ ತನ್ನ ವಚನಗಳಲ್ಲಿ ಹೇಳಿದ್ದಾನೆ.

ವೇದಂಗಳ ಹಿಂದೆ ಹರಿಯದಿರು ಹರಿಯದಿರು.
ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು.
ಪುರಾಣಂಗಳ ಹಿಂದೆ ಬಳಸದಿರು ಬಳಸದಿರು.
ಆಗಮಂಗಳ ಹಿಂದೆ ತೊಳಲದಿರು ತೊಳಲದಿರು.
ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು
ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು.

ವೇದಗಳ  ಹಿಂದೆ  ಹರಿಯದಿರು ಹರಿಯದಿರು ಮತ್ತೆ ಮತ್ತೆ ಅರ್ಥವಿಲ್ಲದ ವೇದಗಳ   ಹೋಗುವ ಕಾರಣವನ್ನು ಕೇಳುತ್ತಾನೆ ಆದಯ್ಯ. ಸುಳ್ಳು ಹೇಳುವ ಶಾಸ್ತ್ರದ
ಹಿಂದೆ ಸುಳಿಯದಿರು ಎಂದಿದ್ದಾನೆ  . ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು ಎಂದು ಹೇಳುತ್ತಾ ಶಾಸ್ತ್ರಗಳ ಬಳಕೆಯನ್ನು ಖಂಡಿಸುತ್ತಾನೆ.
ಪುರಾಣಂಗಳ ಹಿಂದೆ ಬಳಸದಿರು ಬಳಸದಿರು.-  ಜೊಳ್ಳು ಕಥೆ ಹೇಳುವ ಪುರಾಣಗಳಿಗೆ ಆಂಟಿ ಬೀಳದಿರು ಎಂದಿದ್ದಾನೆ .ಆಗಮಂಗಳ ಹಿಂದೆ ತೊಳಲದಿರು ತೊಳಲದಿರು.-ಅನವರತ ಚಿಂತನೆಗಳ ಅನುಭಾವವಿರುವಾಗ ಆಗಮಗಳ ಹಿಂದೆ ಹೋಗಿ ತೊಳಲುವ ಕಾರಣವೇನು ಎಂದು ಪ್ರಶ್ನಿಸಿದ್ದಾನೆ.
ಇಷ್ಟಾಗಿಯೂ ವೇದಗಳೇ ಪ್ರಮಾಣವೆಂದು ಓದುವವರು ಅದು ಸೃಷ್ಟಿಯ ಜ್ಞಾನವನ್ನು ಕೊಡುವದಿಲ್ಲ ಮೇಲಾಗಿ ಉದಮನದ ವಿಕಾಸದ ಭ್ರಮೆ ಎಂದು ಲೇವಡಿ ಮಾಡಿದ್ದಾನೆ ಆದಯ್ಯ.

ಇಹ ಪರಂಗಳನಾಸೆಗೆಯ್ವುದು ಜೀವ ಭ್ರಮೆ,

ಇಹ ಮತ್ತು ಪರದ ಇಷ್ಟಾರ್ಥಗಳನ್ನು ಪೂರೈಸಿ ಮುಕ್ತಿಯನ್ನು ಹೊಂದುತ್ತೇನೆ ಎನ್ನುವುದು ಭಕ್ತನ ಜೀವ ಭ್ರಮೆ. ಪ್ರಾಪಂಚಿಕ ಮತ್ತು ಪಾರಮಾರ್ಥಿಕ ಮೋಕ್ಷವನ್ನು ಪೂರೈಸುವೆ ಎನ್ನುವುದು ಬದುಕಿನ ಮರೀಚಿಕೆ ಎನ್ನುತ್ತಾನೆ ಆದಯ್ಯ. ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುವ ಆಧ್ಯಾತ್ಮಿಕವಾದಿಗಳಿಗೆ ಚಾಟಿ ಏಟು . ಇಹ ಇದು ವ್ಯಕ್ತಿಗತ ಪರ ಇದು ಪಾರಮಾರ್ಥಿಕ ಭಕ್ತ ಬೇರೆ ದೈವ ಬೇರೆ ಎನ್ನುವ ಮತ್ತು ಸಂಸಾರದಲ್ಲಿದ್ದು ಕೊಂಡು ಆಧ್ಯಾತ್ಮಿಕ
ಏಕಾಂಗಿತನಕ್ಕೆ ಹಂಬಲಿಸುವುದು ಜೀವ ಭ್ರಮೆ. ಅದು ಬದುಕಿನ ಬಳಲಿಕೆ ಎನ್ನುತ್ತಾನೆ ಆದಯ್ಯ.

   ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ.

ಇದಕ್ಕೆ ತುಂಬಾ ಗಟ್ಟಿತನ ಬೇಕು.ತಾನು ಕಂಡುಂಡ ದೈವತ್ವವನ್ನು ಕೂಡ ಸಕಲ ಭ್ರಮೆ ಎಂದೆನ್ನುವುದು ಅಷ್ಟು ಸರಳದ ಮಾತಲ್ಲ. ಭೂಮಂಡಲ ಆಕಾಶ ಕಾಯ ಗುಣಗಳ ಅನುಭವವನ್ನು  ತನ್ನ ಪ್ರಸಾದ ರೂಪದಲ್ಲಿ ಕಂಡು ಅಂತಹ ಪ್ರಸಾದ ಗುಣದ ಪರಿಣಾಮದಲ್ಲಿ ಸ್ಥಿತ ಪ್ರಜ್ಞೆ ಹೊಂದಿ  ತೊಳಗಿ ಬೆಳಗುವ ಮೂಲಕ ಅಂಗ ಲಿಂಗಮಯ ಮಾಡುವ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣನು ಎಂದು ಅನೇಕ ವಚನಗಳಲ್ಲಿ ಹೇಳಿದ್ದಾನೆ ಆದಯ್ಯ  . ದೇವರ ಪರಿಕಲ್ಪನೆಯನ್ನು ಅತ್ಯಂತ ಸಹಜದತ್ತವಾಗಿ ಸೃಷ್ಟಿ ಪ್ರಕೃತಿ ಬಯಲು ಎಂಬರ್ಥದಲ್ಲಿ ಕಂಡು ಅದುವೇ ಲಿಂಗ ಜೀವ ಜಾಲದ  ಗಟ್ಟಿ ಮುಟ್ಟಾದ ಸಂಕೇತ ನಿರಾಳ ನಿರ್ಗುಣ ಅರುಹಿನ ಕುರುಹು ಅಂತಪ್ಪ ಪ್ರಸಾದವ ಕರುಣಿಸಿ ಸೌರಾಷ್ಟ್ರ ಸೋಮೇಶ್ವರಾ  ನಿಮ್ಮ ಶರಣ ಎಂದಿರುವ . ಸೌರಾಷ್ಟ್ರ ಸೋಮೇಶ್ವರ ಇಲ್ಲಿ ಅಂಕಿತ ನಾಮ ಅದು ಆದಯ್ಯನವರು ಗುಜರಾತದ ಸೌರಾಷ್ಟ್ರ ಸೋಮೇಶ್ವರ ಮತ್ತು ದ್ವಾರಕಾನಗರದವರು ಎಂದು ತಿಳಿದು ಬಂದಿದೆ
ಒಟ್ಟಾರೆ ಬಸವಾದಿ ಶರಣರ ಆಶಯದಂತೆ ನಿರಾಕಾರ ನಿರ್ಗುಣ ಪರಬ್ರಹ್ಮ ಸ್ವರೂಪ ಲಿಂಗ ಅದುವೇ ಪ್ರಕೃತಿ ಎಂದು ನಂಬಿದ್ದಾರೆ ಆದಯ್ಯ ಶರಣರು.
 ಮಣ್ಣು ಬಿಟ್ಟು ಮಡಿಕೆ ಇಲ್ಲ ತನ್ನ ಬಿಟ್ಟು ದೇವರಿಲ್ಲ ಎನ್ನುವ ಜಾನಪದ ವಾಣಿಯಂತೆ ತಾ ದೇವನಾಗಬಲ್ಲದೇ ನೀ ದೇವನಾಗಬಲ್ಲೆಯಾ ಎನ್ನುವ ಅಪರಿಮಿತ ವಿಶ್ವಾಸ ನಂಬಿಕೆ ಶರಣರನ್ನು ಬಿಟ್ಟು ಅದರಲ್ಲೂ ಅಲ್ಲಮ ಆದಯ್ಯ ಮನಸಂದ ಮಾರಿ ತಂದೆ ಅರಿವಿನ ಮಾರಿತಂದೆ ಅಂತಹ ಅಪ್ರತಿಮ ದಾರ್ಶನಿಕರಿಗೆ ಮಾತ್ರ ಸಾಧ್ಯ.
 ಆದಯ್ಯ ಒಬ್ಬ ಶ್ರೇಷ್ಠ ವಚನಕಾರನು ಚಿಂತಕ ಹೊರೆಯಾಟಗಾರ ಬಂಡಾಯಗಾರ


ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

6 thoughts on “ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ

  1. ಉತ್ತಮ ಕಾರ್ಯ ಸರ್
    ನಿಮ್ಮ ವಚನ ವಿಶ್ಲೇಷಣೆ ಓದುವುದೇ ಸೌಭಾಗ್ಯ

  2. ಅತ್ಯಂತ ಮನೋವೈಜ್ಞಾನಿಕ ಸುಂದರ ಭಾವ ಕಿರಣ ವಚನ ವಿಶ್ಲೇಷಣೆಯಲ್ಲಿ ಕಂಡು ಬಂದಿದೆ.

  3. ವಚನ ಅಧ್ಯಯನ ವೇದಿಕೆ ಅಕ್ಕನ ಅರಿವು ಸಂಘಟನೆಯ ನಿರಂತರ ವಚನ ವಿಶ್ಲೇಷಣೆ ಪರಿಣಾಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್

Leave a Reply

Back To Top