ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಬರೀ ಮಾತಿನ್ ಪುಟ್ನಂಜಿ..

ಬರಿ ಮಾತಿನ್ ಪುಟ್ನಂಜಿ ಬಾಯೆಲ್ಲಾ ಅಪರಂಜಿ”

ನಿಜ ಜೀವನದಲ್ಲಿ ಎಷ್ಟೆಲ್ಲಾ ಅನುಭವಗಳಾಗುತ್ತವೆ ಎಂತೆಲ್ಲಾ ಮನುಜರ ನಿಜ ಮುಖದ ಅನಾವರಣವಾಗುತ್ತದೆ . ಕೆಲವರು ಯಾವಾಗಲೂ ಒಂದೇ ರೀತಿ ….ಕೆಲವರದು ಒಂದೊಂದು ಸಮಯ ಒಂದೊಂದು ರೀತಿಯ ಜಾಣತನ.  

ಕೆಲವು ಜನ ಬಂಧುಗಳು ಮಿತ್ರರು ನಮ್ಮ ಮನೆಗೆ ಬರುತ್ತಾರೆ ಅಂದುಕೊಳ್ಳಿ . ನನ್ನದು ಇನ್ನಿಲ್ಲದ ಸಡಗರ ಅವರಿಗೇನಿಷ್ಟ ಅವರಿಗೆ ಅಪರೂಪದ ತಿಂಡಿ ಏನು ನಾನು ಮಾಡುವ ಯಾವ ರೀತಿಯ ತಿಂಡಿ ಅವರಿಗೆ ಇಷ್ಟ ಎಂದೆಲ್ಲಾ ಯೋಚಿಸಿ ಕೆಲವೊಮ್ಮೆ 3  _  4  ಜನ   ಬಂದರೆ ಪ್ರತಿಯೊಬ್ಬರಿಗೂ ಇಷ್ಟವಾಗುವ ಒಂದೊಂದು ಐಟಂ ತಯಾರಿಸಿ ಸತ್ಕರಿಸುವೆ.  ಅವರು ಇಷ್ಟಪಟ್ಟು ಖುಷಿಯಾಗಿ ತಿಂದಾಗ 1ರೀತಿಯ ಸಾರ್ಥಕ ಭಾವನೆ .  ಪಾಪ ಅವರೇನೋ ನನಗೆ ಇದು ಮಾಡು ಅದು ಮಾಡು ಎಂದು ಖಂಡಿತಾ ಹೇಳಿರುವುದಿಲ್ಲ.  ನನ್ನ ಖುಷಿಗೆ ನನ್ನ ತೃಪ್ತಿಗೆ ನಾನು ಮಾಡುವುದು. ಆದರೆ ಅದನ್ನೇ ಅವರಿಂದ ನಾವು ಖಂಡಿತ ಅಪೇಕ್ಷಿಸಬಾರದು . ಸಂಜೆಯ ಮೇಲೆ ಹೋದರೆ ರಾತ್ರಿ ಇಲ್ಲಿಯೇ ಊಟ ಮಾಡಿ ಹೋಗಬೇಕು ಎಂದು ಜುಲುಮೆ ಮಾಡುವವರು ಹಾಕುವುದು ಬರೀ ಅನ್ನ ಸಾರು .
ಕೆಲವೊಮ್ಮೆ ದೋಸೆ ಇಡ್ಲಿಯ ಹಿಟ್ಟುಇದ್ದರೆ ಅದಕ್ಕೆ ಚಟ್ನಿ ಮಾಡುವ ಶ್ರಮವನ್ನೂ ತೆಗೆದುಕೊಳ್ಳುವುದಿಲ್ಲ ಚಟ್ನಿಪುಡಿಯಲ್ಲಿ ಮುಗಿಸಿ ಸಾಗಿ ಹಾಕಿದವರೂ ಉಂಟು.   ಕೆಲವೊಮ್ಮೆ ನಮ್ಮ ಮನೆಗೆ ಬಂದಾಗ  ಆಗ ತಿಂಡಿ ತಿನ್ನಲು ಸಾಧ್ಯವಿಲ್ಲ ಎಂದರೆ ಕರಿದ ತಿಂಡಿಗಳಿದ್ದಾಗ ಕವರ್ ಗಳಲ್ಲಿ ತುಂಬಿ ಮನೆಗೆ ಕಳುಹಿಸಿಕೊಟ್ಟಿರುತ್ತೇನೆ.  ಡಬ್ಬ ಡಬ್ಬಗಟ್ಟಲೆ ತಿಂಡಿಗಳು ಇದ್ದರೂ ಸಹಿತ ನಮಗೆ ಮಾತ್ರ ಕೆಲವರಿಂದ ಸ್ವಲ್ಪವೂ ಬರುವುದಿಲ್ಲ . ಕೊಡಲು ತೋಚುವುದಿಲ್ಲವಂತೆ ಕೆಲವರಿಗಂತೂ . ಇದ್ದರೆ ಕೊಡದೆ ಇರಲು ಹೇಗೆ ಸಾಧ್ಯ ಅಂತ ನನಗಂತೂ ಅರ್ಥ ಆಗುವುದೇ ಇಲ್ಲ .  ಆಗೆಲ್ಲಾ ನನ್ನ ಪತಿರಾಯರು ನಿನ್ನದೇ ಅತಿ ಅಂತ ನನ್ನನ್ನೇ ಬಯ್ಯುವುದು.  ನೋಡಿ ಹೇಗಿದೆ.  ಆದರೂ ಹುಟ್ಟುಗುಣ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ.  

ಇನ್ನೂ ಕೆಲವೊಂದು ಸಂದರ್ಭಗಳಿಗೆ ಕೊಡುವ ಉಡುಗೊರೆಗಳು ಆಗಲಿ ಅಥವಾ ಮನೆಗೆ ಬಂದಾಗ ಕುಂಕುಮದ ಜೊತೆ ಇಟ್ಟುಕೊಡುವ ಬಾಗಿನದ ಸಾಮಾನುಗಳೇ ಆಗಲಿ ವಿಶಿಷ್ಟವಾಗಿ ಇರಬೇಕು ಬೇರೊಬ್ಬರಿಗೆ ದಾಟಿ  ಅವರೇ ಬೆಳೆಸುವಂತಿರಬೇಕು ಎಂದೆಲ್ಲ ಗಮನದಲ್ಲಿಟ್ಟುಕೊಂಡು ತಂದಿಟ್ಟು ಕೊಡುತ್ತೇನೆ ನಾನು.  ಆದರೆ ನನಗೆ ಮಾತ್ರ ಕೆಲವರ ಮನೆಗೆ ಹೋದಾಗ ಬರೀ ೨ ಬಾಳೆಹಣ್ಣು ಅಥವಾ ಯಾರಿಂದಲೋ ದಾಟಿ ಬಂದ ಬ್ಲೌಸ್ಪೀಸ್ಗಳು.
ಉಡುಗೊರೆಗಳಂತೂ ಅದು ಕೊಡುವೆ ಇದು ಕೊಡುವೆ ಏನು ಬೇಕು ಎಂದು ಹೇಳುವುದರಲ್ಲೇ ಮುಗಿದುಹೋಗುತ್ತದೆ. ಆಗೆಲ್ಲ ನನಗೆ ಬರುವುದು ಇದೇ ಮಾತಿನ ನೆನಪು .

ಕೆಲವರು ಬಹಳ ಆಪ್ತರು ಎಂದುಕೊಂಡಿರುತ್ತೇವೆ ನಮ್ಮ ಮನೆಯ ಸಮಾರಂಭಗಳಲ್ಲಿ ನಮ್ಮ ಅಕ್ಕ ತಂಗಿಯರಿಗೆ ತಂದಂತೆಯೇ ಉಡುಗೊರೆ ಆತ್ಮೀಯತೆ ಪ್ರತಿ ಘಟ್ಟದಲ್ಲೂ ಅವರ ಇರುವಿಕೆಯನ್ನು ಬಯಸಿರುತ್ತೇವೆ.  ಆದರೆ ಅದೇ ಮಟ್ಟದ ಆಪ್ತತೆ ಅವರಲ್ಲಿ ಕಾಣುವುದಿಲ್ಲ. ನಾಮಕಾವಸ್ಥೆ ಪ್ರೆಸೆಂಟೇಷನ್ ಕೊಟ್ಟು ಮುಗಿಸಿರುತ್ತಾರೆ . ಆದರೆ ಮಾತಿನ ತುಂಬಾ ಜೇನಿನ ಸಿಹಿ ಇವರನ್ನು ಬಿಟ್ಟರೆ ಇಲ್ಲ ಎಂದು ಎಲ್ಲರೂ ಅಂದುಕೊಂಡು ಬಿಡುವ ಹಾಗೆ.ಹೋಗಲಿ ಅವರ ಮನೆಯ ಸಮಾರಂಭಗಳಲ್ಲಿ ಕೆಲಸಕ್ಕೆ ಮಾತ್ರ ನಾವು.   ಬೇರೆಲ್ಲಾ ಗುಟ್ಟುಗುಟ್ಟಾಗಿ ಮಾಡಿಕೊಳ್ಳುವುದು…  ಕೊಡಬೇಕಲ್ಲಾ ಅಂತ ಏನೋ 1 ಕೊಟ್ಟು ಮುಗಿಸುವುದು. ಆಗೆಲ್ಲ ನಾನು ಅವರ ಬಾಯುಪಚಾರದ ಪ್ರೀತಿ ಆಪ್ತತೆ ಅರಿಯುವ ಬುದ್ದಿವಂತಿಕೆ ನನಗಿಲ್ಲ ಅಷ್ಟೇ ಎಂದು.ಎಲ್ಲರೂ ನಮ್ಮ ಹಾಗೆ ಅಂದುಕೊಳ್ಳುವ ದಡ್ಡಿ ನಾನು ಎಂದು.

ನಮ್ಮಲ್ಲಿಗೆ ಬಂದಾಗ ತೋರುವ ಆತ್ಮೀಯತೆ ಅವರ ಮನೆಗಳಿಗೆ ಹೋದಾಗ ಕಾಣುವುದಿಲ್ಲ ಏಕಾದರೂ ಹೋದೆವೋ ಅನ್ನಿಸುವಂತೆಯೂ
ಆಗಿಬಿಡುತ್ತದೆ. ಬರೀ ಮಾತಿನಲ್ಲೇ ಮಂಟಪ ಕಟ್ಟಿಬಾಯುಪಚಾರದಲ್ಲೇ ಮುಗಿಸುವ ಇಂತಹವರನ್ನು ಕಂಡಾಗ ಈ ಗಾದೆ ಅನ್ವರ್ಥ ಎಂದೆನಿಸಿಬಿಡುತ್ತದೆ.  ಆದರೂ ಬಾಯೆಲ್ಲಾ ಅಪರಂಜಿಯಾಗಿರುವ ಈ ಬರೀ ಮಾತಿನ ಪುಟ್ನಂಜಿಯರ ಮಾತಿನ ಜಾಣ್ಮೆಗೆ ಮತ್ತೆ ಮತ್ತೆ
ಮರುಳಾಗುತ್ತಲೇ ಇರ್ತೀನಿ  ಮನೆಯವರ ಬಳಿ
ಬೈಸಿಕೋತಾನೇ ಇರ್ತೀನಿ.

ತಿದ್ದಿಕೊಳ್ಳದೆ ಅಥವಾ ಬೇರೆ ಬೇರೆಯವರ ಇಂತಹ ಮಾತಿನ ಬಲೆಗೆಗೆ ಸಿಗುವ ಜೇಡ ನಾನಾಗುತ್ತಾ  ಇರುತ್ತೇನೆ …ನೀವೂ ಹಾಗೇನಾ?


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

Leave a Reply

Back To Top