ಬಡವರ ಮನೆ ಆತಿಥ್ಯ ಯಾವಾಗಲೂ ಚೆಂದ

ಲೇಖನ ಸಂಗಾತಿ

ಬಡವರ ಮನೆ ಆತಿಥ್ಯ ಯಾವಾಗಲೂ ಚೆಂದ

ಸುಧಾ ಹಡಿನಬಾಳ

ಅಂತೂ ಇಂತೂ ಚುನಾವಣೆ ಮುಗೀತು ಅನ್ನುವ ಹೊತ್ತಿಗೆ ಮತ್ತೆ ಮತ್ತೊಂದು ಮಹಾ ಚುನಾವಣೆಯ ಅಬ್ಬರ ಶುರುವಾಗಲಿದೆ. ಚುನಾವಣಾ ರಾಜಕೀಯದಲ್ಲಿ ಉಂಡವನೇ ಜಾಣ! ಯಾರು ಯಾರು ಎಷ್ಷೆಷ್ಷು ದೋಚಿ ದೊಡ್ಡವರಾದ್ರೋ ಗೊತ್ತಿಲ್ಲ..

 ಸರ್ಕಾರಿ ನೌಕರರಿಗಂತೂ ಚುನಾವಣೆ ಬಂತೆಂದರೆ ಇಲ್ಲದ ಕಿರಿಕಿರಿ. ಎರಡು ಮೂರು ದಿನ ಚುನಾವಣಾ ಕಾರ್ಯದ ನಿಮಿತ್ತ ಯಾವುದೋ ತಾಲೂಕಿನ ಯಾವುದೋ ಹಳ್ಳಿ ಮೂಲೆಯ ಶಾಲೆಯಲ್ಲಿ ಎರಡು ದಿನ ಕಳೆಯುವುದು ಅದೂ ಬಳ‌ಬಳ ಸುರಿವ ಬಿಸಿಲ ಝಳದಲ್ಲಿ ತುಂಬಾ ಹಿಂಸೆ.. ಯಾಕಾದ್ರೂ ಚುನಾವಣೆಗಳು ಬರ್ತಾವೋ ಅಂದುಕೊಳ್ಳುತ್ತಾರೆ. ಕರ್ತವ್ಯ ನಿಭಾಯಿಸುವುದು ಬೇಸರದ ಸಂಗತಿಯಲ್ಲ;  ಯಾವ ಯಾವುದೋ ಜಿಲ್ಲೆ ,ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಬೇರೆ ಬೇರೆ ನೌಕರರು ಒಂದು ತಂಡದಂತೆ ತುಂಬಾ ಶಿಸ್ತಿನಿಂದ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತೇವೆ. ಆದರೆ ಎರಡು ದಿನ ಬಾತ್ರೂಮ್ ಇಲ್ಲದ ಶೌಚಾಲಯದಲ್ಲಿ  ಸ್ನಾನ ಮಾಡುವುದು, ಬಟ್ಟೆ ಬದಲಿಸುವುದು ಇವೆಲ್ಲ ಯಮ ಯಾತನೆ. ಹಿಂದಿಗಿಂತ ಇಂದು ಎಷ್ಟೋ ಶಾಲೆಗಳು ಮೂಲಭೂತ ಸೌಕರ್ಯ ಪಡೆದು ಚೆನ್ನಾಗಿಯೇ ಇವೆ. ಆದರೂ ಎಲ್ಲವೂ ಸರಿ ಇರುವುದಿಲ್ಲವಲ್ಲ.

ಈ ವರ್ಷದ ಚುನಾವಣೆ ಅತ್ಯಧಿಕ ಬಿಸಿಲ ತಾಪದ ಮೇ ತಿಂಗಳಲ್ಲಿ  ಬಂದಿದೆ.ಪಕ್ಕದ ತಾಲೂಕಿಗೆ ಒಂದು ದಿನದ ತರಬೇತಿ,  ಎರಡು ದಿನಗಳ ಕರ್ತವ್ಯ ಎಂದು ಹೋದದ್ದಾಯಿತು. ಊಟ, ತಿಂಡಿ  ಎಲ್ಲವೂ ಚೆನ್ನಾಗಿಯೇ ಇದ್ದವು;  ಆದರೆ ಚುನಾವಣೆಯ ಕರ್ತವ್ಯಕ್ಕೆ ನಿಗದಿಪಡಿಸಿದ ಶಾಲೆ ಮತ್ತೆ ‘ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ’  ಮನೆಯ ದಾರಿಯಿಂದಲೇ ಮತ್ತೆ 30 ಕಿಲೋಮೀಟರ್ ಸಾಗಿ ದಟ್ಟ ಕಾನನದ ತಪ್ಪಲಿನ ಚೆನ್ನಬೈರಾ ದೇವಿಯ ಕಾಲದ ಆಳ್ವಿಕೆಯನ್ನು ನೆನಪಿಸುವ ಗೇರುಸೊಪ್ಪೆಗೆ ಎಂದಾಗ ತುಂಬ ದೂರದ ಪ್ರಯಣವಾಯಿತಲ್ಲ ಎಂದೆನಿಸಿದರೂ  ಇಡೀ ಟೀಮ್ ಚೆನ್ನಾಗಿಯೇ ಇದ್ದುದರಿಂದಲೇ ಯಾವ ಸಮಸ್ಯೆ ಇರಲಿಲ್ಲ. ಸಾಮಾನ್ಯವಾಗಿ ಮಹಿಳಾ ಚುನಾವಣಾ ಅಧಿಕಾರಿಗಳು  ಶಾಲೆಯಲ್ಲಿಯೇ ರಾತ್ರಿ ತಂಗಲು ತುಸು ಬೇಸರಿಸುತ್ತಾರೆ ಕಾರಣ ಮೇಲೆ ಹೇಳಿದೆನಲ್ಲ. ಅಕ್ಕಪಕ್ಕದಲ್ಲಿರುವ  ಯಾವುದಾದರೂ ಮನೆಗೆ ಟೀಂ ಲೀಡರ್ ಅನುಮತಿ ನೀಡಿದರೆ ಹೋಗಿ ಮಲಗಿ ಸ್ನಾನ ಮುಗಿಸಿ ಮತ್ತೆ ಬೆಳಿಗ್ಗೆ 5:00 ಗಂಟೆಗೆಲ್ಲ ಸ್ವಸ್ಥಳದಲ್ಲಿ ಹಾಜರಿರುತ್ತಾರೆ.  ನಮ್ಮದೇ ಟೀಮ್ ನಲ್ಲಿ ಡಿ ಗ್ರೂಪ್ ನೌಕರರಾಗಿ  ಇದ್ದವರು ಅದೇ ಸ್ಥಳೀಯ ಪ್ರದೇಶದ ಶಾಲೆಯ ಪಕ್ಕದವರಾಗಿದ್ದರು. ಹೀಗಾಗಿ ಅಲ್ಲಿಯೇ ರಾತ್ರಿ ಹೋಗಲು ನಿರ್ಧರಿಸಿದೆವು ಅವರಿಗೆ ‘ನಿಮ್ಮ ಮನೆಗೆ ಬರುತ್ತೇವೆ ರಾತ್ರಿ ಹತ್ತು ಗಂಟೆಯ ಹೊತ್ತಿಗೆ ನಿಮಗೆ ತೊಂದರೆ ಇಲ್ಲದಿದ್ದರೆ”ಎಂದು ಹೇಳಿದಾಗ ತುಂಬಾ ಖುಷಿಯಿಂದ ಒಪ್ಪಿಕೊಂಡರು.  ಆದರೂ ಯಾಕೆ ಅವರಿಗೆ ತೊಂದರೆ ಕೊಡುವುದು, ನಾವು ಮೂವರು ಇದ್ದೇವಲ್ಲ ಎಂದು ಹಿಂದೆ ಮುಂದೆ ಯೋಚಿಸುತ್ತಿಸುತ್ತಿದ್ದಾಗ ಮತ್ತೆ ರಾತ್ರಿ 10:30ರ  ಹೊತ್ತಿಗೆ ನಮ್ಮನ್ನು ಕರೆಯಲು ಬಂದರು.  ‘ಇಲ್ಲಿಯೇ ಮಲಗುತ್ತೇವೆ ಸುಮ್ಮನೆ ನಿಮಗೆ ತೊಂದರೆ’ ಎಂದು ಹೇಳಿದಾಗ ‘ಇಲ್ಲ ಹಾಗೇನೂ ಇಲ್ಲ, ನಾನು ನೀವು ಬರುತ್ತಿರಿ ಎಂದು  ಹಾಸಿಗೆ ಹಾಸಿ  ಸ್ನಾನಕ್ಕೆ ಬಿಸಿ ನೀರು ಕಾಯಲು ಒಲೆಗೆ ಬೆಂಕಿ ಹಾಕಿ ಬಂದಿದ್ದೇನೆ’ ಎಂದರು. ಯಾಕೋ ಅವರ ಮನಸ್ಸು ನೋಯಿಸಲು ಬೇಸರವಾಗಿ ನಾವು ಮೂವರು ಅವರ ಮನೆಗೆ ಹೋದೆವು .ಆ ಪುಟ್ಟ ಕುಟುಂಬದಲ್ಲಿ ಅವರು ಮತ್ತು ಅವರ ಪತ್ನಿ ಮಾತ್ರವೇ ಇದ್ದರು; ಮಗಳು ಬೇರೆಲ್ಲೂ ಬಂಧುಗಳ ಮನೆಗೆ ಹೋಗಿದ್ದಳು. ನಮಗಾಗಿ ಹಾಸಿಗೆ ಹಾಸಿ ಸ್ಟ್ಯಾಂಡಿಂಗ್ ಫ್ಯಾನ್ ವ್ಯವಸ್ಥೆ ಮಾಡಿ, ನೀರು ಕಾಯಿಸಿ ಇಟ್ಟು ಬಂದಿದ್ದರು. ಅವರ ಅತಿಥಿ ಸತ್ಕಾರ ನೋಡಿ ನಮಗೆ ಮುಜುಗರವಾಯಿತು. ಮೇಲೆ ಸೀಲಿಂಗ್ ಫ್ಯಾನ್ ಇದ್ದರೂ ಪಕ್ಕದಲ್ಲಿಯೇ ಸ್ಟ್ಯಾಂಡಿಂಗ್ ಟೇಬಲ್ ಫ್ಯಾನ್ ಹಾಕಿ ಕೊಟ್ಟ ಅವರ ಉದಾರತೆಗೆ ಮನಸ್ಸು ತುಂಬಿ ಬಂದಿತು.
ಸುಡು ಧಗೆಯ ಬಿಸಿಲ  ದಿನದಲ್ಲೂ ಅದು ಹೇಗೋ ನನಗೆ ನೆಗಡಿ ಕೆಮ್ಮು  ಒಂದು ನಾಲ್ಕು ದಿನ ಮೊದಲೇ ಆರಂಭವಾಗಿತ್ತು. ರಾತ್ರಿ ಸುಮ್ಮನೆ ಯಾರಿಗೂ ನಿದ್ದೆ ಇರುವುದಿವಲ್ಲ ಎಂಬ ಬೇಸರ ನನಗೆ .ತಡರಾತ್ರಿ  ಒಂದು ಗಂಟೆ ಆಗುತ್ತಿದ್ದಂತೆ ಒಣ ಕೆಮ್ಮಿನ ಪ್ರತಾಪ ಶುರುವಾಯಿತು! ನನಗೆ ಇವರ ಮನೆಯವರು, ಜೊತೆಯಲ್ಲಿರುವ  ಸಂಗಡಿಗರಿಗೂ ನಿದ್ದೆ ಇಲ್ಲವಲ್ಲ ಎಂಬ ಬೇಸರ ಆದರೆ ನಮ್ಮ ಆತಿಥ್ಯ ವಹಿಸಿಕೊಂಡ  ಅವರು   ಒಂದಿನಿತು ಬೇಸರಿಸದೇ ರಾತ್ರಿಯೇ ಎದ್ದು ಒಳಗೆ ಹೋಗಿ ಶುದ್ಧ ಜೇನುತುಪ್ಪವನ್ನು ತಂದು ‘ಒಂದು ಚಮಚ ತಿನ್ನಿ ಕೆಮ್ಮು ಕಡಿಮೆಯಾಗುತ್ತದೆ ‘ ಎಂದು ಕೊಟ್ಟರು. ಅವರ ನಿಷ್ಕಲ್ಮಶ ಮಾನವೀಯತೆಗೆ ಮನಸ್ಸು ಹೃದಯ ಭಾರವಾಯಿತು. ಸುಮ್ಮನೆ ನನ್ನಿಂದ ಇವರಿಗೂ ತೊಂದರೆ ಎಂದು ಬೇಸರವೂ ಆಯಿತು. ಅವರದೇ ಮನೆಯಲ್ಲಿ ತೆಗೆದ ಹೆರೆ ಜೇನುತುಪ್ಪ ನನ್ನ ಕೆಮ್ಮನ್ನು ಉಪಶಮನಗೊಳಿಸಿತು.

ಮರುದಿನ  ನಾಲ್ಕು ಗಂಟೆಗೆ ಎದ್ದು ಶಾಲೆಗೆ ಹೋಗಿ ಅಲ್ಲಿರುವ ಉಳಿದ ಪುರುಷ ಅಧಿಕಾರಿಗಳ ಸ್ನಾನಪಾನಕ್ಕೆ ವ್ಯವಸ್ಥೆ ಮಾಡಿ ಮನೆಗೆ ಬಂದು ‘  ಒಂದು ಕಪ್ ಬೆಡ್ ಟೀ ಕುಡಿಯಿರಿ’  ಎಂದು ತುಂಬಾ ಒತ್ತಾಯಿಸಿದರು. ನಮ್ಮಲ್ಲಿ ಯಾರಿಗೂ ಆ ರೂಢಿ ಇರಲಿಲ್ಲ ಮತ್ತೆ  ನಮಗೆ ಈ ಪರಿಯ  ಆದರಾತಿಥ್ಯ ಬೇಕಿರಲಿಲ್ಲ .ಕೇವಲ ಮಲಗಲು,  ಸ್ನಾನಕ್ಕೆ ಶುಚಿಯಾದ ಜಾಗ  ಇಷ್ಟೆ ಸಾಕಾಗಿತ್ತು. ಅವರ ನಿರ್ಮಲ ಮನಸ್ಸಿನ ಸೇವೆಗೆ  ಧನ್ಯವಾದ ಹೇಳಿ ನಮ್ಮ ಕಾರ್ಯಕ್ಷೇತ್ರಕ್ಕೆ ಹಾಜರಾದೆವು

ತುಂಬ ಒತ್ತಡದ ಸಾವಿರಕ್ಕೂ ಮಿಗಿಲಾದ ಸಂಖ್ಯೆಯ ಮತದಾರರಿರುವ ಮತ ಕೇಂದ್ರದಲ್ಲಿ ಕೆರೆದುಕೊಳ್ಳಲು ಪುರುಷತ್ತಿಲ್ಲ! . ನಮ್ಮ  ಕೆಲಸದಲ್ಲಿ ನಮಗೆ ಬೇಕಾದ ಎಲ್ಲ ವ್ಯವಸ್ಥೆ, ನೀರು ತಂದುಕೊಟ್ಟು ಆಚೀಚೆ ಓಡಾಡಿಕೊಂಡಿದ್ದ ಈ ವ್ಯಕ್ತಿಯ ಸಹಾಯ ಮತ್ತು ಅಡಿಗೆ ಸಿಬ್ಬಂದಿಗಳ ಶುಚಿ ರುಚಿಯಾದ ಊಟ ತಿಂಡಿ ದಣಿವಾರಿಸಿತ್ತು.

 ಕರ್ತವ್ಯಕ್ಕಿಂತ ಸೇವೆಯೇ ಮಿಗಿಲಾಗಿ ದುಡಿದ ಬಡ ಅಡುಗೆಯವರಿಗೆ ಸಣ್ಣ ಮೊತ್ತದ ಗೌರವಧನವನ್ನು ನಾವೇ ಟೀಮ್ ನೌಕರರು ಕೊಟ್ಟು ಬರುವುದು ಒಂದು ಸೌಜನ್ಯದ ವಾಡಿಕೆ .ಕೊಡದೆ ಇರುವವರೂ ಇದ್ದಾರೆ , ಇಲ್ಲವೆಂದಲ್ಲ! ನಮ್ಮ ಟೀಮಿನಲ್ಲಿ ನಾವು ಮೂವರು ಅಡುಗೆಯವರಿಗೆ ಒಂದು ಸಣ್ಣ ಮೊತ್ತದ ಹಣ ಸಂದಾಯ ಮಾಡಿ, ವೈಯಕ್ತಿಕವಾಗಿ ನಾನು ರಾತ್ರಿ ಹೊತ್ತು ಎದ್ದು ನನ್ನ ಕೆಮ್ಮಿಗೆ ಸ್ಪಂದಿಸಿದ ಆ  ಬಡ ನೌಕರನಿಗೆ ಸಣ್ಣ ಗೌರವವನ್ನು ಕೊಡಲು ಹೋದೆ.’ ಖಂಡಿತ ಬೇಡ ಮೇಡಂ. ನಾನು ಪ್ರೀತಿಯಿಂದ ನಿಮಗೆ ಮನೆಗೆ ಕರೆದಿದ್ದೇನೆ ;ನಮಗೆ ದೇವರು ಎಲ್ಲಾ ಕೊಟ್ಟಿದ್ದಾನೆ ‘ಎಂದು ನಿರಾಕರಿಸಿದರು .’ಮಗಳಿಗೆ ಏನಾದರೂ ತಿಂಡಿ ಒಯ್ರಿ’ ಎಂದರೂ ಸುತಾರಂ ಒಪ್ಪಲಿಲ್ಲ. ಅವರ ಹೃದಯ ಶ್ರೀಮಂತಿಕೆ, ಪ್ರಾಮಾಣಿಕತೆ, ಮುಗ್ಧ ಸ್ನೇಹಪರ ನಡವಳಿಕೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತು.
ಸಮಾಜದಲ್ಲಿ ವಿದ್ಯಾವಂತರು, ಬುದ್ಧಿಜೀವಿಗಳು ಎಂದು ದೊಡ್ಡ ಮೊತ್ತದ ಸಂಬಳ, ಸರ್ಕಾರದ ಸೌಲಭ್ಯ ಪಡೆಯುವ ಅಧಿಕಾರಿಗಳು ನೌಕರರೇ ಐವತ್ತು, ನೂರು ರೂಪಾಯಿಗಳಿಗೆಲ್ಲ ಬಾಯಿ ಬಾಯಿ  ಬಿಡುವಾಗ ಈ ಬಡ ನೌಕರನ ಆದರ್ಶ  ನಾವೆಲ್ಲ ಕಲಿಯಬಹುದಾದ ಬಹುದೊಡ್ಡ ಪಾಠವಲ್ಲವೇ?  ಅದಕ್ಕೆ ಹಿರಿಯರು ಹೇಳಿದ್ದು ‘ಬಡವರ ಮನೆಯ ಊಟ ಚೆಂದ ದೊಡ್ಡವರ ಮನೆಯ ನೋಟ ಚಂದ’  ಎಂದು ಇರಬೇಕಲ್ಲವೇ?

 ಇವರ ಹೆಸರು ಜಾನ್ ದಿಕ್ಕುನ್ನಾ ನಾಗಂತೂರು ; ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಮುಗ್ಧ ವ್ಯಕ್ತಿ. ಇವರಿಗೆ ಶರಣು…


ಸುಧಾ ಹಡಿನಬಾಳ

Leave a Reply

Back To Top