‘ಮುತ್ತಿನ ಮಂಜು’ ಕೃತಿ ಅವಲೋಕನ

ಕಾವ್ಯ ಸಂಗಾತಿ

ಪದ್ಮಜಾ ಜಯತೀರ್ಥ ಉಮರ್ಜಿ ಅವರ

ಮುತ್ತಿನ ಮಂಜು

ಕೃತಿ: ಮುತ್ತಿನ ಮಂಜು
ಲೇಖಕರು: ಪದ್ಮಜಾ ಜಯತೀರ್ಥ ಉಮರ್ಜಿ
ಪ್ರಕಾಶಕರು: ದಾಕ್ಷಾಯಿಣಿ ಪ್ರಕಾಶನ
#418/1 ವೀಣೆ ಶ್ಯಾಮಣ್ಣ ರಸ್ತೆ
ಮೈಸೂರು

ಪದ್ಮಜಾ ಉಮರ್ಜಿ,ವಿಶಿಷ್ಟ ದನಿಯ ಬರಹಗಾರ್ತಿ. ಉತ್ತರ ಕರ್ನಾಟಕದ ಹಿರಿಯ ಲೇಖಕಿ ಕಥೆಗಾರ್ತಿ ನಾಟಕಕಾರರಾಗಿ, ಸಂಘಟಕರಾಗಿ, ಕವಿಯಾಗಿ ಸಮಾಜದ ಚಿಂತನಶೀಲರಾಗಿ ಈಗಾಗಲೆ ನಾಡಿನಾದ್ಯಂತ ತಮ್ಮದೇ ಛಾಯೆಯನ್ನ ಕನ್ನಡ ಸಾರಸ್ವತ ಲೋಕದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.
ಎಲ್ಲಕ್ಕೂ ಮೊದಲು ಸಹೃದಯಿ, ಅವರ ವಿನಮ್ರತೆ,  ಸದಾ ಚೈತನ್ಯದಿ ಪುಟಿವ ಅವರ ನಡೆ ನುಡಿ ಸಂಸ್ಕಾರ,ಎಲ್ಲರನ್ನೂ ತನ್ನ ನಗುಮೊಗದಿಂದ ಆಧರಿಸುವ ಮಾತೃಹೃದಯಿ. ನುಡಿದಂತೆ ನಡೆವ ಶರಣರಂತೆ ಸರಳಸಜ್ಜನಿಕೆಯ ಮತ್ತು ಸದಾ ಒಂದಿಲ್ಲೊಂದು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳುತ್ತಾ  ಬದುಕನ್ನು ತಪಸ್ವಿಯಂತೆ ಮನೆ ಒಳಗು ಹೊರಗು ಎರಡನ್ನು ಸಮತೋಗಿಸಿ ನಡೆವ ಒಬ್ಬ ಆದರ್ಶ ಗೃಹಿಣಿಯಂತೆ ಮಾದರಿ ವ್ಯಕ್ತಿತ್ವ ಪದ್ಮಜಾ ಅವರದ್ದು.
   ಮೊದಲ ಭೇಟಿಯಲ್ಲೆ ಹಿರಿಕಿರಿಯರೆನ್ನದೇ ಎಲ್ಲರನ್ನು ತನ್ನ ವಿಶ್ವಾಸಕ್ಕೆ ಸೂಜಿಗಲ್ಲಿನಂತೆ ಆಕರ್ಷಿಸುವ ವ್ಯಕ್ತಿತ್ವ.
ಬದುಕಿನ ಎಲ್ಲ ಮಜಲುಗಳನ್ನ ಸಮಾಜದ ಆಗು ಹೋಗುಗಳನ್ನ ಪ್ರತಿನಿತ್ಯ ಅವಲೋಕಿಸುವ ಅವರ ಮನೋಧರ್ಮ ಮತ್ತು ಅವರ ಬರೆವ ಮನೋವಾಂಛಲ್ಯಕೆ   ಅದೆಲ್ಲವನ್ನ  ಎಳೆಎಳೆಯಾಗಿ  ಬಿಡಿಸಿ ಸರಳವಾಗಿ ಪರಿಣಾಮಕಾರಿಯಾಗಿ ಎಲ್ಲ ಓದುಗರ ಮನಮುಟ್ಟುವಂತೆ ಚಿತ್ರಿಸುವ ಅವರ  ನಿರೂಪಣ ಶೈಲಿ.ನೈಜವಾಗಿ ಹೆಣೆವ ಕಲಾತ್ಮಕತೆಯ ಬರಹ ಸಹಜವಾಗಿ ಓದಿಸಿಕೊಂಡು ಹೋಗುವ ಅವರ ಕಥೆ ಕವನ ಲೇಖನಗಳು ಅವರನ್ನ ಪ್ರಬುದ್ಧ ಬರಹಗಾರ್ತಿಯನ್ನಾಗಿಸಿವೆ.

ಸಾಹಿತ್ಯದ ಸದುದ್ದೇಶವೆ ಸಮಾಜದ ಸರ್ವಹಿತವನ್ನ ಬಯಸುವುದು.ಸಾಹಿತ್ಯ ಸಮಾಜದ ದಿಕ್ಸೂಚಿ ಮತ್ತು ಪ್ರೇರಣೆ ಕೂಡ. ಸರ್ವಕಾಲಕೂ ಚಿಂತಿಸುವಂತೆ  ಮಾಡುವ ಸಾಹಿತ್ಯ ಸಾರ್ವಕಾಲಿಕವಾಗಿ ನಿಲ್ಲುತ್ತದೆ. ಈ ಕೃತಿಯಲ್ಲಿಯು ಕೂಡ ಪದ್ಮಜಾ ಅವರು ತಮ್ಮ ಅನುಭವದ ಸಿರಿತನದಲ್ಲಿ
ಅರಳಿದ ಲೇಖನಗಳ ಗುಚ್ಛವನ್ನ ನಮಗೆ ಕೊಟ್ಟಿದ್ದಾರೆ.
ಅವರ ಬರವಣಿಗೆಯ ಸಮಗ್ರತೆ,   ತಾವು ಕಂಡುಂಡ ಘಟನೆಗಳು, ವ್ಯಕ್ತಿಗಳ ಬಗ್ಗೆ ಮತ್ತು  ಹೇಳುವ ಶೈಲಿ, ಎಲ್ಲವನ್ನು ಬರಹದ ಸೂಕ್ಷ್ಮತೆಯಲ್ಲಿ ಈ ಕೃತಿಯಲ್ಲಿ ಅರಳಿದೆ.
ಜೀವನವನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿ ಆಳವಾಗಿ ಗ್ರಹಿಸುವ ಪದ್ಮಜಾ ಅವರ ಬರಹಗಳು
ಸಮಾಜದ  ವಿಶಿಷ್ಟ ದನಿಯಾಗಿ ಹೊರಹೊಮ್ಮಿವೆ.ಅದು ವ್ಯಕ್ತಿ ಚಿತ್ರಣವಾಗಿರಬಹುದು. ನಾಡು‌ನುಡಿಯ ಬಗ್ಗೆ ಕಾಳಜಿ, ಲಘುಬರಹಗಳಿರಬಹುದು, ಹಾಸ್ಯಲೇಖನಗಳಿರಬಹುದು, ಹಬ್ಬ ಹರಿದಿನಗಳಿರಬಹುದು. ಘಟನೆಗಳಿರಬಹುದು , ಪ್ರತಿಯೊಂದನ್ನು ಗ್ರಹಿಸಿ ಒಂದಷ್ಟು ದಟ್ಟ ವಿವರಣೆಗಳೊಂದಿಗೆ ಓದುಗನೊಂದಿಗೆ ಸಂವಾಧಿಸುವ ಬಗೆ, ಇದದ್ದನ್ನು ಇದ್ದಂತೆ ಚಿತ್ರಿಸಿ ನಮ್ಮಲ್ಲೆ ಅರಿವಿನ ಬೀಜವನ್ನ ಬಿತ್ತುವ ಅವರ ಬರಹದ ತೀವ್ರತೆ ಸಾಮಾನ್ಯ ಎನಿಸುವ ಘಟನೆಗಳನ್ನು ಕೂಡ ಹೊಸ ಹೊಸ ನೋಟದಿಂದ ಹೊಸ  ವಿಚಾರಗಳಿಗೆ ಮನಸ್ಸನ್ನು ತೆರೆದಿಡುವ ಬರಹಗಳು. ತಮಗೆ ಅನಿಸಿದ್ದನ್ನ ತಮ್ಮ ನೋಟಕೆ ದಕ್ಕಿದೆಲ್ಲ ವಸ್ತು ವಿಷಯಗಳು ಅವರ ಭಾವನೆಗಳನ್ನ ಇಲ್ಲಿ ಲೇಖನಗಳ ಮೂಲಕ ಅತ್ಯಂತ ಸಹಜವಾಗಿ ಓದುಗರ ಅಂತರಂಗಕ್ಕೆ ತಲುಪಿಸಿದ್ದಾರೆ . ಇಡೀ ಲೇಖಗಳನ್ನ ಅವಲೋಕಿಸಿದಾಗ ನಮಗೆ ಅವರ ಬರಹ ಆಪ್ತವಾಗುತ್ತಾ ಹೋಗತ್ತೆ. ಒಂದು ತಾದಾತ್ಮ್ಯ ಬರಹದ ವಿಶೇಷಗಳೆಲ್ಲವು ಇಲ್ಲಿ ಮೇಳೈಸಿದೆ.

ಈಗಾಗಲೇ ನಾಡಿನಾದ್ಯಂತ ವಿವಿದ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳೆಲ್ಲವನ್ನು ಸೇರಿಸಿ ಒಂದು ಕೃತಿಯಾಗಿಸಿ ಸಹೃದಯ ಓದುಗರಿಗೆ ತಲುಪಿಸುವ ಅವರ ಜೀವನ ಪ್ರೀತಿಗೆ ಆ ಉತ್ಸಾಹಕ್ಕೆ ಎಂಥವರು ತಲೆಬಾಗಲೇಬೇಕು.
ಈ ಕೃತಿಯಲ್ಲಿ ಒಟ್ಟು ೧೩೪ ವಿಭಿನ್ನ ಲೇಖನಗಳಿವೆ.
 ಆದ್ಯಾತ್ಮಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಸಾಹಿತ್ಯವಾಗಿ ಸಂಸ್ಕೃತಿಕವಾಗಿ   ಕುರಿತ ಲೇಖನಗಳು ಕೆಲವು ಧೀರ್ಘವಾಗಿದ್ದರೆ, ಕೆಲವು ಲಘು ಬರಹಗಳಾಗಿವೆ. ಕೆಲವು ಹಾಸ್ಯ ಲೇಖನಗಳಿವೆ. ಅನುಭವಿಸಿದ ಅನುಭಾವಕ್ಕೆ ಬಂದ ಎಲ್ಲವನ್ನ ಇಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ ಬರೆದ ಲೇಖನಗಳನ್ನೊಳಗೊಂಡ ಈ  ಕೃತಿ ಸಂಗ್ರಾಹ್ಯವಾಗಿವೆ.

ಕೆಲವು ವ್ಯಕ್ತಿ ವಿಶೇಷ ಲೇಖನಗಳು ಮಹತ್ವದೆನಿಸುತ್ತವೆ.  ಮದರ್ ತೆರೆಸಾ, ವಿವೇಕಾನಂದ,  ಮೋದಿಜಿ, ಗಾಂಧಿಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ,  ಡಾ ಅಬ್ದುಲ್ ಕಲಾಂ  ಗಂಗೂಬಾಯಿ ಹಾನಗಲ್ ಡಾ. ಅಂಬೇಡ್ಕರ್,
ಡಾ. ರಾಜ್ಕುಮಾರ್ ,ಕಲ್ಪನಾ , ಮಂಜುಳಾ, ಎಸ್ ಪಿ ಬಿ    ಹೀಗೆ ಅನೇಕ ಮಹನೀಯರನ್ನ ಸ್ಮರಿಸಿದ್ದಾರೆ. ಸಾಧನೆಯೆಂಬುದು ಸಾಧಕನ ಸೊತ್ತು. ಅವರ ಸಾಧನೆಗಳು ಸಿದ್ಧಿಸಿದಾಗ  ಅವರ ಸಾಧನೆಗಳೆ ಅವರನ್ನ ಗುರುತಿಸಿದ ಬಗೆ , ಮತ್ತು ನಿರಂತರ ಪರಿಶ್ರಮದಿಂದ ಛಲಬಿಡದೆ ಗುರಿಯತ್ತ ಪಯಣಿಸಿ ಅಂತರಾಷ್ಟ್ರೀಯ ಮಟ್ಟಿಗೆ ಖ್ಯಾತಗೊಳಿಸಿದ ಬಗ್ಗೆ, ಅವರೆಲ್ಲರ ಪ್ರಮಾಣಿಕತೆಯ ಪ್ರಯತ್ನ ಸತ್ಯತೆಯ ಬಗ್ಗೆ, ಸೋತರು ನಿರಾಶರಾಗದೆ ಸೋಲೆ ಗೆಲುವಿನ ಸೋಪಾನವಾಗಿಸಿ ಯಶಸ್ವಿಯಾಗಿದ ಬಗೆ ಸುಮೌಲ್ಯಗಳಲನ್ನ ಮೈಗೂಡಿಸಿ  ಎಲ್ಲರಿಗು  ಸ್ಪೂರ್ತಿಯಾದ ವ್ಯಕ್ತಿತ್ವದ ವ್ಯಕ್ತಿ ವಿಶೇಷ ಚಿತ್ರಣದಲ್ಲಿ ಲೇಖನಗಳು ಸಹೃದಯ ಓದುಗನಿಗೆ ಮನಮುಟ್ಟುವಂತೆ ಮೂಡಿಬಂದಿವೆ.

ಮಹಿಳಾ ಸಂವೇದನೆ ಕುರಿತು ಅನೇಕ ಪ್ರಬಂಧಗಳು ಇಲ್ಲಿವೆ. ಸಮಾಜಮುಖಿ ಮಹಿಳೆ ಲೇಖನದಲ್ಲಿ , ಮಹಿಳೆಯ ಕುರಿತು ಆಳವಾದ ಚಿಂತನ ಮಂಥನದಿಂದ ಕೂಡಿದ ಲೇಖನ ಇದಾಗಿದೆ.  ಮಹಿಳೆ ಹೇಗೆ ತನ್ನ ಧರ್ಮವನ್ನ ಉಳಿಸಿ ಬೆಳೆಸುವುದರ ಜೊತೆಗೆ ಪುರುಷನಿಗೆ ಸಮನಾಗಿ ನಡೆಯುವಂತೆ ಸವಿವರವಾಗಿ ತಿಳಿಸಿದ್ದಾರೆ ಮನುಕುಲದ ಉಧ್ದಾರಕ್ಕೆ ಸ್ತ್ರೀ ಪುರುಷರಿಬ್ಬರು ಸಂಸಾರದ ಎರಡು ಗಾಲಿಗಳ ರೀತಿ ಯಲ್ಲಿ ಸಮಾನಂತರವಾಗಿ ಸಾಗಬೇಕು .ಇಂದಿನ ಜಾಗತೀಕರಣದಲ್ಲಿ ಇಬ್ಬರು ಆದರ್ಶಪ್ರಾಯರೆ ಒಬ್ಬರಿಗೊಬ್ವರು ಪೂರಕವಾಗಿ ಪ್ರೇರಕವಾಗಿರಬೇಕು. ಸಂಸಾರ ರಾಜ್ಯಕ್ಕೆ ಗಂಡು ರಾಜನಾದರೆ ಹೆಣ್ಣು ಮಂತ್ರಿಯಿದ್ದಂತೆ ಎಂದು ಹೇಳುತ್ತಾರೆ. ಹೆಣ್ಣಿಗೆ ವಿವಾಹವೇ ಅಂತಿಮವಲ್ಲ ಅವಿವಾಹಿತೆಯರು ಸಾಧನೆಯ ಶಿಖರವನ್ನ ಏರಿರುವ ಬಗೆ ಅನೇಕ ಉದಾಹರಣೆಗಳೊಟ್ಟಿಗೆ ವಿವರಿಸಿ. ವಿವಾಹ ಕೂಡ ಸಾಧನೆಗೆ ಮುಳ್ಳಾಗಬಾರದು ಅಂತ ಲೇಖನದಲ್ಲಿ ಎಚ್ಚರಿಸರ್ತಾರೆ. ಹಾಗೆ ಅನೇಕ ಸಾಧಕಿಯರ ಹೆಸರನ್ನ ಉಲ್ಲೇಖಿಸುತ್ತ ಹೆಣ್ಣಿನ ಜೀವನದ ಮಹತ್ತಮವನ್ನ  ಜೀವನದಲ್ಲಿ ಬರುವ ಎಲ್ಲ ಪಾತ್ರಗಳನ್ನ ಅವಳು ಸಮರ್ಥವಾಗಿ ನಿಭಾಯಿಸಿ ಸಮಾಜದ ಕಣ್ಣಾಗಿ ದೇಶದ ಪ್ರಗತಿ ಕಾರಣಳು ಎಂದು ಸಾಕ್ಷಿಕರಿಸುವ  ದೀರ್ಘ ಲೇಖನವನ್ನ ನಮಗೆ ಆಪ್ತವಾಗತ್ತೆ.

ಓದುವ ಹವ್ಯಾಸ ಹೇಗೆ ಹಣೆಬರಹವನ್ನೆ ಬದಲಾಸುತ್ತದೆ ಎಂದು
ತಮ್ಮ  ಬರವಣೆಗೆಯ ಹವ್ಯಾಸಕ್ಕೆ ಎಂ ಕೆ ಇಂದಿರಾ ಅವರ ಕಾದಂಬರಿ  ಹೆಗೆಲ್ಲ ಸ್ಪೂರ್ತಿ ಪಡೆಯಿತು. ತಮ್ಮಲ್ಲಿ ಸುಪ್ತವಾಗಿದ್ದ ಸಾಹಿತ್ಯ ಸಸಿಗೆ ಹೇಗೆ ನೀರೆರೆದು ಪೋಷಿಸಿದ ಸದಾನಂದ ಕಾದಂಬರಿಯ ಸಹಜತೆ ಸರಳ ನಿರೂಪಣ ಶೈಲಿ ತಾನು ಬರೆಯಬಲ್ಲೆ ಅನ್ನುವ ಆತ್ಮವಿಶ್ವಸಕ್ಕೆ ಪ್ರೇರಣೆ ಆಯ್ತು ಎನ್ನುವ ಪುಟ್ಟ ಲೇಖನ ಓದುಗರಲ್ಲೂ ಬರೆವ ಹಂಬಲಕೆ ಸ್ಪೂರ್ತಿಯಾಗಿದೆ.

ಇಂದಿನ ಕಾಲಕ್ಕೆ ಕುವೆಂಪು ಅವರ ವಿಚಾರ ಪ್ರಸ್ತುತತೆ’  ಲೇಖನ ಗಮನ ಸೆಳೆಯತ್ತೆ.
ಕುವೆಂಪು ಈ ಯುಗದ ಜಗದ ಕವಿ.ಸರ್ವೋದಯ ಸಂಕ್ರಾಂತಿಯನ್ನ ದರ್ಶಿಸಿದ ಮಾನವೀಯಧರ್ಮ ನೆಲೆಯಲ್ಲಿ  ಆಧ್ಯಾತ್ಮಿಕ ಮತ್ತು ಸಾಹಿತ್ಯಿಕವಾಗಿ  ನಮಗೆ ವೈಚಾರಿಕ  ನೆಲೆಗಟ್ಟಿನಲ್ಲಿ ಮೂಡಿರುವ ಅವರ ಕೃತಿಗಳು ನಮಗೆ ಸರ್ವದ ಆಧುನಿಕ ಕನ್ನಡದ ಅಥ್ಛರ್ಯವೂ ಪ್ರತಿನಿಧಿಯೂ ಹೌದು.
ಕಾಲದ ಹಂಗಿಲ್ಲದೆ ಕುವೆಂಪು ಅವರ ಅಲೋಚನೆಗಳು ಇಂದಿಗೂ ನಿತ್ಯಸತ್ಯತೆಯ ಕುರಿತು ಲೇಖನ ನಿಜಕ್ಕೂ ಪ್ರೇರಣಾದಾಯಕ.

ಬಸವ ತತ್ವ ಆಶಯ ವಾಸ್ತವ ಮತ್ತು ಅನುಷ್ಟಾನ ಒಂದು ಸುಧೀರ್ಘ ಲೇಖನದಲ್ಲಿ ಹೇಗೆಲ್ಲ ಬಸವಧರ್ಮ ತನ್ನ ಮೂಲಸ್ವರೂಪವನ್ನ ಕಳೆದುಕೊಂಡು ಮತಾಂಧತೆ, ಜ್ಯಾತ್ಯಾಂಧತೆ ಆಗಿದೆ. ಬಸವ ಧರ್ಮದವಾರಿವಿನ ಜ್ಯೋತಿಯನ್ನು ಬೆಳಗಬೇಕು ವಸುದೇವ ಕುಟುಂಬಕಂ ಎಂಬ ತತ್ವದಲ್ಲಿ  ಎಲ್ಲರು ಶ್ರಮವಹಿಸಿ ಸಮಬಾಳು ಸಮಪಾಲು ಸಹಬಾಳ್ವೆ ನಡೆಸುವ ಗುಣ ಹೊಂದಬೇಕು. ತತ್ವಕ್ಕೆ ತಕ್ಕಂತೆ ಬಾಳ್ವೆ ನಡೆಸಬೇಕು ,ತತ್ವದ ಜ್ಞಾನವಾಗಲಿ ,ಧರ್ಮವಾಗಲಿ ಜೀವಂತವಾಗಿರಬೇಕಾದರೆ ಅದು ಪರಂಪರೆಯಾಗಿ ಸಾಗಿಬರಬೇಕು.ಬಸವಣ್ಣನ ಮಾನವಧರ್ಮದ ಸಂಸ್ಕಾರ ನಮ್ಮಲ್ಲಿ ಬಿತ್ತುವಂತೆ , ತತ್ವಗಳ ಷಡಾಚಾರಗಳ ಬಗ್ಗೆ  ಸವಿವರವಾಗಿ ತಿಳುಸಿದ್ಧಾರೆ.ಶರಣರ ಜೀವನ ಪರಿಶುದ್ಧ ಜೀವನ. ಪ್ರಚಾರ ಪ್ರಶಸ್ತಿಗೆ ಬೆನ್ನುಹತ್ತದೆ ಕಾಯಕಕ್ಕೆ ಒತ್ತು ನೀಡಿದ ಬಸವಣ್ಣನವರು ಅಲ್ಮಪ್ರಭುಗಳು ಅಕ್ಕಮಹಾದೇವಿ ಹೆಳವನಕಟ್ಟೆ ಗಿರಿಯಮ್ಮ ಎಲ್ಲ ಮೋಹ ಮಾಯೆ ಮಮಕಾರಗಳನ್ನ ಜಯಿಸಿದವರನ್ನ ಈ ಕೃತಿಯಲ್ಲಿ ಲೇಖನಗಳಲ್ಲಿ ಬಿಂಬಿಸಿದ್ಧಾರೆ. ನಿಜದ ಸಿರಿವಂತಿಕೆಯ ಇರುವುದು ಮನೆಯಲಿಲ್ಲ ಮನದಲ್ಲಿ ಮನ ಉದಾರವಾದಾಗ ಮನುಷ್ಯ ನೆಮ್ಮದಿಯಿಂದ ಮೌಲ್ಯಗಳೊಂದಿಗೆ ಸಿರಿವಂತನಾಗ್ತಾನೆ , ಹಾಗೆ ಶರಣರು ಸರಳತನದಲಿ ಹಿರಿತನವನ್ನ ಕಂಡ ಬಗೆ ಅನೇಕ ವಚನಗಳ ಸಾರವನ್ನ ಉಲ್ಲೇಖಸಿ ಬರೆದ ಒಂದು ಪ್ರಬುಧ್ದ ಪ್ರಬಂಧ ಇದಾಗಿದೆ.

ಹರಿದಾಸರ ಪರಂಪರೆಯಲ್ಲಿ ಆದ್ಯಾತ್ಮಕ ಚಿಂತಕರ ಕುರಿತು ಹಲವು ಲೇಖನಗಳು ಇಲ್ಲಿವೆ. ಶಂಕರಚಾರ್ಯರು, ಶ್ರೀ ಮೋಹನದಾಸರು, ಜಗನ್ನಾಥ ದಾಸರು, ಪುರಂದರದಾಸರು, ಕನಕದಾಸರು ,ಗೋಪಾಲದಾಸರು.ಹೀಗೆ ಸಂಗೀತ ಸಾಹಿತ್ಯದ ಮೂಲಕ ಭಕ್ತಿಮಾರ್ಗದಲಿ ತಾವು ನಡೆದು ನಮ್ಮನು ಭಕ್ತಿಯ ಸನ್ಮಾರ್ಗದಲಿ ನಡೆವಂತೆ ಮಾಡಿದ ದಾಸ ಶ್ರೇಷ್ಠರನ್ನ ಕುರಿತು ಲೇಖನಗಳು ಗಮನಸೆಳೆಯುತ್ತವೆ.ಕನ್ನಡನಾಡಿನಲ್ಲಿ ಹರಿದಾಸರ ಪರಂಪರೆ ಶ್ರೇಷ್ಠವಾಗಿದ್ದು ಅದು ಧರ್ಮ, ತತ್ವಜ್ಞಾನ, ಸಾಹಿತ್ಯ, ಸಮಾಜಭೋಧೆ, ಸಂಗೀತ ಸಂಸ್ಕೃತಿಗಳ ವಿವಿಧ ಆಯಾಮಗಳಿಂದ ಜನಸಾಮಾನ್ಯರಲ್ಲೂ ಭಕ್ತಿಮಾರ್ಗದ ಪರವಶತೆಗೆ ದಿನನಿತ್ಯ ಕಾಯಕದಲ್ಲೂ ಹೇಗೆಲ್ಲ ಪರಮಾತ್ಮನನ್ನು ನೆನೆಯುವುದು ಸಾಧ್ಯ .ಹಾಲಿನಲ್ಲಿ ಸಕ್ಜರೆ ಬೆರೆವಂತೆ ನಿತ್ಯ ವ್ಯವಹಾರದಲ್ಲಿ ಆಧ್ಯಾತ್ಮವನ್ನ ಹೇಗೆಲ್ಲ ಸಮನ್ವಯ ಮಾಡಬಹುದು ಎಂದು ದಾಸರು ಪ್ರತಿಪಾದಿಸಿದ ಬಗೆಗೆಗಿನ ಲೇಖನಗಳು ಉತ್ಕೃಷ್ಟ ವಾಗಿವೆ.
 ಚುನಾವಣೆಗಳು ಜನಸಾಮಾನ್ಯರ ಬಾಳಿನಲ್ಲಿ ವಹಿಸುವ ಪಾತ್ರಗಳ ವಿಶ್ಲೇಷಣೆ ಮಾರ್ಮಿಕವಾಗಿ ಮೂಡಿದ ಲೇಖನವಿದೆ. ಪರಿಸರ ಮಾನವನ ಆಸೆಯನ್ನ ತಣಿಸಬಲ್ಲದು ದುರಾಸೆಯನ್ನಲ್ಲ ನಾವೆಲ್ಲ ಭೂಮಿಯ ಮೇಲಿನ ಬಾಡಿಗೆದಾರರು. ಪರಿಸರ ಕಾಳಜಿ ಪ್ರಜ್ಞೆ ಬರಿ ಸರಕಾರದಿಂದ ಮಾತ್ರವಲ್ಲ ಜನಸಾಮಾನ್ಯರು ಕೂಡ ಹೇಗೆಲ್ಲ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬಹುದು ಅಂತ ತಿಳಿಸಿದ್ದಾರೆ.
ದಯಾ ಮರಣ ಎಷ್ಟು ಸಮಂಜಸ ಎನುವ ಲೇಖನದಲ್ಲಿ ಜೀವದಾತನ ಆಜ್ಞಾನುಸಾರವೇ ಸಹಜ ಸಾವು ಬರುವವರೆಗೆ ಸಹನೆಯಿಂದ ಕಾಯಬೇಕು ಎಂಬ ನಿಲುವಿನಲ್ಲಿ ಮೂಡಿದೆ.
ರಾಷ್ಟ್ರೀಯ ಶಿಕ್ಷಣದ ಸಾಧಕ ಬಾಧಕಗಳ ಕುರಿತು ಲೇಖನದಲ್ಲಿ ಹೊಸ ಶಿಕ್ಷಣ ನೀತಿಯ ಪರಿಚಯ ಜೊತೆಗೆ ಒಂದು ಹೊಸ ದೃಷ್ಟಿಕೊನದಿಂದ ಗುರುಕುಲ ಪದ್ಧತಿ ಹಾಗು ಇಂದಿನ ಶಿಕ್ಷಣದ ಮಹತ್ವ ಕುರಿತು ಅವಲೋಕಿಸಿದ ಲೇಖನ ಗಮನಸೆಳೆಯತ್ತೆ. ಇನ್ನೂ ಅನೇಕ ಲೇಖನಗಳು , ಕವಿ ಪ್ರಪಂಚದ ಅನಧಿಕೃತ ಶಾಸನಕಾರರು, ಹೇಗೆಲ್ಲ ಸಮಾಜವನ್ನ ತಿದ್ದುವ ಕಾರ್ಯವನ್ನ ಸಾಹಿತ್ಯದ ಮೂಲಕ ಮಾಡ್ತಾರೆ ಅದು ಕವಿ ಸೃಷ್ಟಿ ಬ್ರಹ್ಮ ಸೃಷ್ಟಿ ಲೇಖನದಲ್ಲಿ ಮೂಡಿದೆ. ಹಾಗೆ ಹಿರಿಯರನ್ನ ವೃದ್ಧಾಶ್ರಮಕ್ಕೆ  ಸೇರಿಸುವುದು ಸರಿಯಲ್ಲ ಎನುವ ತಮ್ಮ ನಿಲುವನ್ನ ಇಲ್ಲಿ ಸ್ಪಷ್ಟಪಡಿಸಿದ್ದಾರೆ.ಕಪ್ಪು ಹಣ,ಸರ್ಕಾರ ಮತ್ತು ಸಮಾಜ, ಅತ್ಯಾಚಾರ ಸ್ತ್ರೀ ಸಂವೇದನೆಯ ಅನೇಕ ಲೇಕನಗಳು ಪ್ರಬಂಧಗಳು ಗಮನ ಸೆಳೆಯುತ್ತವೆ. ಆಧುನಿಕ ತಾಂತ್ರಕತೆಯ ಸಾಧಕ ಭಾದಕಗಳು, ಜನಸಂಖ್ಯೆ ಕುರಿತು ಚಿಂತನೆ, ಕ್ಷೇತ್ರ‌ಮಹಿಮೆಗಳ ಕುರಿತು ಲೇಖನಗಳು,. ಕನ್ನಡ ನಾಡುನುಡಿಯ ಕುರಿತು ಚಿಂತನ ಲೇಖನಗಳು ಇಲ್ಲಿವೆ. ಕನ್ನಡಿಗ ನಾನೆಂಬ ಅಭಿಮಾನದ ಜೊತೆಗೆ ಅನ್ಯಭಾಷಿಗರಿಗೆ ಕನ್ನಡ ಕಲಿಸುವ ಗರಿಮೆ ಭಾವ ಇರಬೇಕು. ಬೇರೆ ಭಾಷೆಗಳು ಲೈಟಿದ್ದಂತೆ ನಮ್ಮ ಕನ್ನಡ ಭಾಷೆ ಗರ್ಭಗುಡಿಯ ನಂದಾದೀಪವಿದ್ದಂತೆ . ಎನುವ ಸಾಲು ಮನಸೆಳೆಯತ್ತೆ ಹಾಗೆ ಕನ್ನಡದ ಧೀಶಕ್ತಿಃಯನ್ನ ತಮ್ಮ ಭಾವದಲ್ಲಿ ಅಭಿವ್ಯಕ್ತಗೊಳಿಸಿದ ಲೇಖನ.
ಹಬ್ಬಹರಿದಿನಗಳ ಕುರಿತಾದ ಲೇಖನಗಳು,
ಹೀಗೆ ಇಲ್ಲಿ ಆಡುಮುಟ್ಟದ ಸೊಪ್ಪಿಲ್ಲ ಎನುವಂತೆ ಪದ್ಮಜಾ ಅವರು ಮುಟ್ಟದ ವಸ್ತು ವಿಷಯಗಳಿಲ್ಲ. ಎಲ್ಲ ವಿಷಯಗಳು ವಿಶಿಷ್ಡವಾಗಿ ಲೇಖನದ ಮೂಲಕ ಲಘುಬರಹದ ಮೂಲಕ ಪ್ರಬಂಧಗಳ ಮೂಲಕ ತಮ್ಮದೇ ಮಹತ್ವವನ್ನ ಬಿಂಬಿಸುತ್ತವೆ.

ಹಿಂದೂ ವಿಧವೆಗೆ ಆಸ್ತಿ ನ್ಯಾಯ ಸಮ್ಮತವಾದದ್ದು. ಅನುವಂಶೀಯ ಆಸ್ತೀಯ ಪೂರ್ಣ ಒಡೆತನವನ್ನ ಸಮಂಜಿಸಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸಮ್ಮತಿಸಿದ ಲೇಖನ ಕೂಡ ಪ್ರಸ್ತುತತೆಗೆ  ಒತ್ತು ಕೊಡುವಂತಿದೆ.

ಅವಲಕ್ಕಿ ಬಗ್ಗೆ ಒಂದು ಪುಟ್ಟ ಲೇಖನ ವಿಶೇಷವಾಗಿ ಗಮನಸೆಳೆಯತ್ತೆ. ಕುಚೇಲನನ್ನು ಕುಬೇರನನ್ನಾಗಿಸಿದ್ದು  ಒಂದು ಹಿಡಿ ಅವಲಕ್ಕಿ ‌. ಅದು ಪವಿತ್ರ ಸ್ನೇಹದ ಸಂಕೇತ  ಬಡವರ ಬಂಧು ಅವಲಕ್ಕಿ . ಅವಲಕ್ಕಿ ಗೆ ಮನಸೋಲದವರಿಲ್ಲ ಅಂತ ಹೇಳಿ ಅವಲಕ್ಕಿ ಬಗೆಗಿನ ಲೇಖನ ಅವಲಕ್ಕಿಯಂತೆ ಗರಿಗರಿಯಾಗಿ ಮೂಡಿದೆ.

ಎಲ್ಲಕ್ಕೂ ಕಳಸವಿಟ್ಟಂತೆ ಹಾಸ್ಯಲೇಖಗಳ ತೂಕವೇ ಒಂದೆಂಬಂತೆ ಅನೇಕ ಹಾಸ್ಯ ಲೇಖನಗಳು ಮನಸೆಳೆಯುತ್ತವೆ. ಹೊಡಿರಿ  ಬಡಿರಿ,ಸನ್ಮಾನ ನಗೆಬರಹ ,ಮದುವೆ ವಾರ್ಷಿಕೊತ್ಸವ, ಫೇಸ್ ಬುಕ್ನಲ್ಲಿ ಚೇಸ್ ಮಾಡಿದ ಫೇಸ್ ಗಳು,ಮರೆವು ತಂದ ಮೋಜು, ಕಾಡುವ ನೆನಪುಗಳು,ಕಮಲಿಯ ವ್ಯಾಪಾರ,ಮದುವೆ ಪ್ರಸಂಗ, ಹೀಗೆ ಹಾಸ್ಯಬರಹಗಳಲ್ಲೂ ಒಂದು ನೀತಿಭೋದೆಯನ್ನ ಲೇಖನಗಳಲ್ಲಿ ನೋಡಬಹುದು.ಕೆಲವು ನಗೆಬರಹಗಳು ಅನುಭವದ ಮೂಸೆಯೊಂದಿಗೆ ಓದುಗರೊಡನೆ ಮಾತಿಗಿಳಿದಿವೆ.ಹದವಾದ ಹಾಸ್ಯದೊಂದಿಗೆ ಕಂಡುಂಡ ನಗೆಬಗೆಗಳನ್ನ ಬರಹದ ಮೂಲಕ ವ್ಯಕ್ತಪಡಿಸಿದ ಬಗೆ ಅನೋನ್ಯವಾಗಿದೆ.

ಹೀಗೆ ಈ ಕೃತಿಯಲ್ಲಿನ ಎಲ್ಲ ಲೇಖನಗಳು ಸಂಗ್ರಹ ಯೋಗ್ಯ.ಅನೇಕನೇಕ ವಿಷಯಗಳ ಮೇಲೆ ಬರೆದ ಲೇಖನಗಳ ಒಟ್ಟು ಗುಚ್ಛದ ಕೃತಿ ವಿಶೇಷವಾಗಿ ಮೂಡಿಬಂದಿದೆ.ಮತ್ತಷ್ಟು ಕೃತಿಗಳು ಕನ್ನಡ ಸಾರಸ್ವತಲೋಕದ ಮಡಿಲಿಗೆ ಅರ್ಪಿತವಾಗಲಿ. ಸದಾ ಶುಭವೇ ಶೋಭಿಸಲಿ, ಶುಭದ ಹಾರೈಕೆಯೊಂದಿಗೆ.

ಕನ್ನಡವೇ ಸತ್ಯ ಕನ್ನಡವೇ ನಿತ್ಯ


ಶಾಲಿನಿ ರುದ್ರಮುನಿ ಹುಬ್ಬಳ್ಳಿ

Leave a Reply

Back To Top