ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ.
ಹನಿಗಳು
- ಏಳು..!
ಕಾಮನಬಿಲ್ಲ ಬಣ್ಣಗಳೆಸಿದ್ದು
ಸಾಕು ಮೇಲೇಳು ಗೆಳೆಯ
ಬದುಕೀಗ ಬಣ್ಣಬಳಿವ ಸಮಯ.!
- ಮೌಲ್ಯ..!
ಕಂಬನಿಯಿಂದ ಬೆಳೆದ
ಇಳುವರಿಗಿಂತಲೂ
ಬೆವರಿನಿಂದ ಬೆಳೆದ
ಇಳುವರಿಯೇ ಅಧಿಕ.!
ಅನುಕಂಪದ ಫಸಲಿಗಿಂತ
ಪರಿಶ್ರಮದ ಫಸಲಿಗೆ
ಮೌಲ್ಯ ಅತ್ಯಧಿಕ.!
- ಮನವಿ.!
ಸೃಷ್ಟಿಸಬೇಡಿ ಕಣ್ಣೆದುರಿಗೆ
ಕನಸುಗಳ ಭ್ರಮಾಲೋಕ
ಕೊಟ್ಟುಬಿಡಿ ಖಾಲಿಕೈಗಳಿಗೆ
ದುಡಿಯಲಿಷ್ಟು ಕಾಯಕ.!
ಕೂಳು ನೀಡಿ ಸಲಹುವ
ವೈಶಾಲ್ಯತೆಗಿಂತಲೂ
ಕೂಳು ಗಿಟ್ಟಿಸುವಂತಹ
ಕೆಲಸ ನೀಡಿ ಪೊರೆವ
ವಿವೇಕ ಅಭಿನಂದನೀಯ.!
ಹಸಿವಿಂಗಿಸುವನಿಗಿಂತ
ಹೊಟ್ಟೆ ಹೊರೆವ ದಾರಿ
ತೋರಿಸುವವ ಪೂಜ್ಯನೀಯ.!
- ಅಕ್ಷಮ್ಯ.!
ನಿಮ್ಮ ಸ್ವಾರ್ಥ ಗುರಿ ಸಾಧನೆಗಳಿಗೆ
ಜನರ ಭಾವಗಳೊಂದಿಗೆ ಆಡಿದರೆ
ಕಾಲ ಕ್ಷಮಿಸೀತೇನೋ ಕೆಲಕಾಲ..
ಭವಿಷ್ಯಗಳೊಂದಿಗೆ ಚೆಲ್ಲಾಟವಾಡಿ
ಬದುಕು ಭರವಸೆಗಳ ದಿಕ್ತಪ್ಪಿಸಿದರೆ
ಕಾಲ ಕ್ಷಮಿಸದು ನಿಮ್ಮನನುಗಾಲ.!
- ವೇದ್ಯ..!
ದುಡಿವವನ ತಟ್ಟೆಯಿಂದೆತ್ತಿ
ಮಲಗಿದ್ದವನ ಬಾಯಿಗಿಟ್ಟರೆ
ಸಂಘರ್ಷಕ್ಕೆ ಬುನಾದಿ.!
ಮಲಗಿದ್ದವನ ಮೇಲೆಬ್ಬಿಸಿ
ದುಡಿಯಲು ಹಚ್ಚಿದರಷ್ಟೇ
ಸಮಾನತೆಗೆ ನಾಂದಿ..!!
ಎ.ಎನ್.ರಮೇಶ್. ಗುಬ್ಬಿ.