ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ 

ಗ್ರಾಮೀಣ ಭಾಗದ ಜೀವನಾಡಿಯಾಗಿರುವ

ಸೂಲಗಿತ್ತಿಯರ ನೆನಪುಗಳು…

ಅವರು ಅವಸರ ಅವಸರವಾ ಓಡಾಡುತ್ತಿದ್ದಾರೆ. ಮಗಳು ಹೆರಿಗೆಯ ನೋವಿನಿಂದ ನರಳುತ್ತಿದ್ದಾಳೆ. ಅವಳ ನೋವಿಗೆ ಮಿಡಿಯುವುದಾದರೂ ಯಾರು..?  ಆಸ್ಪತ್ರೆ  ಬೇರೆ ದೂರವಿದೆ. ತಕ್ಷಣ ನೆನಪಾದಳು ಸೂಲಗಿತ್ತಿ ಮಲ್ಲಮ್ಮ..!!

ಆ ಸಮಯಕ್ಕೆ ಸರಿಯಾಗಿ ಬಂದ ಸೂಲಗಿತ್ತಿ ಮಲ್ಲಮ್ಮ ಮಗು ಮತ್ತು ತಾಯಿಯನ್ನು ಆರೈಕೆ ಮಾಡಿ ಸಂರಕ್ಷಣೆ ಮಾಡಿದಳು..!!

ಈ ಹಿಂದೆ ಇಂತಹ ಹಲವು ಸನ್ನಿವೇಶಗಳು ಹಳ್ಳಿಗಳಲ್ಲಿರುವುದು ಸಾಮಾನ್ಯವಾಗಿತ್ತು.

ಒಂದು ಕಾಲದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ನಾವು ತುಂಬಾ ಹಿನ್ನಡೆಯನ್ನು ಅನುಭವಿಸುತ್ತಿದ್ದೆವು. ಗ್ರಾಮೀಣ ಭಾಗದಲ್ಲಿ ನಾಟಿ ವೈದ್ಯರು, ಸೋಲಗಿತ್ತಿಯರು, ಮಸಾಜ್ ಮಾಡುವವರು, ಉಳುಕು ತೆಗೆಯುವವರು, ಕಿರು ಗಂಟಲು ತೆಗೆಯುವವರು ಮುಂತಾದವರು ಸಹಜವಾಗಿ ನಮ್ಮ ಅಕ್ಕಪಕ್ಕದ ಸಂಬಂಧಿಕರೋ, ನೆರೆಹರೆಯವರೇ ಆಗಿರುತ್ತಿದ್ದರು. ಪ್ರತ್ಯೇಕವಾಗಿ ಯಾವುದೇ ಸೌಲಭ್ಯಗಳು ಇರುತ್ತಿರಲಿಲ್ಲ.  ಗರ್ಭಿಣಿ ಸ್ತ್ರೀಯರಿಗೆ ಹಾಗೂ ಮಗುವಿಗೆ ತೊಂದರೆಯಾದರೆ ಮನೆಯಲ್ಲಿ ಸಿಗುವ ವಿವಿಧ ರೀತಿಯ ದಿನಸಿಯ ವಸ್ತುಗಳನ್ನು,  ದವಸ ಧಾನ್ಯಗಳನ್ನು ಬಳಸಿಕೊಂಡೆ ಔಷಧಿಗಳನ್ನು ನೀಡುತ್ತಿದ್ದರು.  ತಕ್ಷಣಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು.

ನಗರದಿಂದ 50 ಕಿಲೋ ಮೀಟರ್ ದೂರವಿರುವ ಕುಗ್ರಾಮ ಹಳ್ಳಿಗಳಿಗೆ ಬಸ್ಸುಗಳಿಲ್ಲದ ಯಾವುದೇ ವಾಹನಗಳ ಸೌಕರ್ಯವಿಲ್ಲದೆ,  ಇತರರನ್ನು ಆಶ್ರಯಿಸಿಕೊಂಡು ಬದುಕುತ್ತಿದ್ದ ಕಾಲವೊಂದಿತ್ತು.  ಆ ಸಮಯದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಮಾಡಿಸಬೇಕಾದರೆ ಓಣಿಯ ನರಸಮ್ಮನೋ,  ಮಲ್ಲಮ್ಮನೋ, ನೀಲಮ್ಮನೋ ನಿಂಗಮ್ಮನಂತಹವರು ಶೂಲಗಿತ್ತಿಯಾಗಿ ಅಲ್ಲಿಯ ಕಾರ್ಯವನ್ನು ಮಾಡುತ್ತಿದ್ದರು. ಈ ಕೆಲಸಗಳನ್ನು  ಸುಮಾರು ಎಂಟು ದಿನಗಳ ಕಾಲ ಅವರು ಮಗುವಿನ ಬಾಣಂತಿಯ ಆರೈಕೆಯನ್ನು ಮಾಡುತ್ತಿದ್ದರು.

 ಪ್ರತಿದಿನ ಬೆಳಿಗ್ಗೆ 6:00 ಗೆ ಮತ್ತು ಸಂಜೆ 7 ಗಂಟೆಗೆ ಬಂದು ಮಗು ಮತ್ತು ಬಾಣಂತಿಯನ್ನು ನೀರು ಹಾಕುವುದರಿಂದ ಮಗುವಿನ ಅಭ್ಯಂಜನ ಸ್ನಾನವನ್ನು ಮಾಡಿಸುತ್ತಿದ್ದರು.  ಗಲ್ಲ, ಮುಖ, ಮೂಗು, ಕೆನ್ನೆ ,ಕಾಲು, ಬೆರಳು , ಕೈ ಎಲ್ಲವನ್ನು ಎಣ್ಣೆಯಿಂದ ಮಜ್ಜನ ಮಾಡಿಸಿ  ನಯವಾಗಿ ತಿದ್ದಿ ತೀಡುತ್ತಿದ್ದರು. ಹಳ್ಳಿಗಳಲ್ಲಿ ಇಂತಹ ಸುಲಗಿತ್ತಿಯರು ಸರ್ವೇಸಾಮಾನ್ಯರಾಗಿದ್ದರು.  ಅವರು ದೂರದ ಸಂಬಂಧಿಯೋ, ಓಣಿಯ ನೆರೆಹೊರೆಯವರೋ ಆಗಿದ್ದು,  ಕರೆದ ತಕ್ಷಣವೇ ಬಂದು ಆರೈಕೆಯ ಕಾರ್ಯವನ್ನು ಮಾಡುತ್ತಿದ್ದರು. ಯಾವುದೇ ಸ್ವಾರ್ಥವಿಲ್ಲದೆ

ಯಾವುದೇ ಫಲಾಫೇಕ್ಷವನ್ನು ನಿರೀಕ್ಷಿಸದೆ, ತಮ್ಮ ಪಾಡಿಗೆ ತಾವು ದಿನಾಲು ಆರೈಕೆ ಕೆಲಸವನ್ನು ಮಾಡುತ್ತಿದ್ದರು. ಅದು ಹಳ್ಳಿಗಳಲ್ಲಿರುವ ನಿಸ್ವಾರ್ಥ ಸೇವೆಯ ಪ್ರತಿರೂಪವೆಂದೇ ಹೇಳಬಹುದು.

 ಗ್ರಾಮೀಣ ಭಾಗದಲ್ಲಿ ‘ನಮ್ಮವರು’ ಎನ್ನುವ ವಾತ್ಸಲ್ಯಪೂರಿತ ಬಾಂಧವ್ಯವೇ ಇಂತಹ ಸೇವೆಗೆ ಬುನಾದಿ ಎಂದು ಹೇಳಬಹುದು. ಸೇವೆಯನ್ನು ಮಾಡಿಸಿಕೊಂಡ ಮನೆಯವರು ಕೂಡ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದರು. ಹಣದ ರೂಪದಲ್ಲಿಯೋ, ವಸ್ತುವಿನ ರೂಪದಲ್ಲಿಯೋ ದವಸ ಧಾನ್ಯದ ರೂಪದಲ್ಲಿಯೋ ಅವರಿಗೆ ನೀಡಿ ಅವರಿಗೆ ‘ಉಡಿಯಕ್ಕಿ’ ಹಾಕಿ, ಹೊಸ ಸೀರೆಯನ್ನುಡಿಸುತ್ತಿದ್ದರು. ತಮ್ಮ ಮನೆಯ ಮಗಳಂತೆ ಅವರನ್ನು ಗೌರವಿಸುತ್ತಿದ್ದರು.  ಇದು ಹಿಂದಿನಿಂದಲೂ ಹಳ್ಳಿಗಳಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ಸಂಪ್ರದಾಯವು ಇವತ್ತಿಗೂ ಹಳ್ಳಿಗಳಲ್ಲಿ ನಾವು ನೋಡಬಹುದಾಗಿದೆ.

 ಆದರೆ ಇತ್ತೀಚಿನ ದಿನಗಳಲ್ಲಿ ಸಂಪರ್ಕ ಸಾಧನಗಳು ಹೆಚ್ಚಾದಂತೆ, ಆರೋಗ್ಯ ಕ್ಷೇತ್ರದ ಹರವು ಹೆಚ್ಚಾದಂತೆ ವಿವಿಧ ರೀತಿಯ ಸಂಶೋಧನೆಗಳಾದವು ಅವು ತಾಯಿ ಮಗುವಿನ ಆರೋಗ್ಯ ರಕ್ಷಣೆಯಲ್ಲಿ ತುಂಬಾ ಸಹಾಯ ಮಾಡುತ್ತವೆ.

ಇಂದು ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ, ಕಿರಿಯ ಆರೋಗ್ಯ ಪ್ರಾಥಮಿಕ ಕೇಂದ್ರಗಳು, ಹಾಗೆಯೇ ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯೊಳಗೆ ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ಸಾಮಾನ್ಯವಾಗಿ ಜಿಲ್ಲೆಗೆ ಒಂದರಂತೆ, ಮೆಡಿಕಲ್ ಕಾಲೇಜುಗಳು ಹೀಗೆ ವಿವಿಧ ಆರೋಗ್ಯ ಕ್ಷೇತ್ರದ ಸುಧಾರಣಾ ಸೌಲಭ್ಯಗಳು ಹೆಚ್ಚಾಗಿರುವುದು ಅಭಿನಂದನೀಯ.  ಮತ್ತು ಆರೋಗ್ಯ ಕ್ಷೇತ್ರದ ಸೂಚನೆ ಸಲಹೆ ಗಳಿಗನುಗುಣವಾಗಿ ‘ಆಶಾ ಕಾರ್ಯಕರ್ತೆಯರು’ ಆರೋಗ್ಯ ಇಲಾಖೆ ಮತ್ತು ಗರ್ಭಿಣಿಯರ ಮಗುವಿನ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಅವರಿಗೆ ತಲುಪಿಸುವಲ್ಲಿ ನಿರಂತರವಾಗಿ ಪರಿಶ್ರಮ ಪಡುತ್ತಿದ್ದಾರೆ. ಒಂದು ರೀತಿಯಲ್ಲಿ ಸೂಲಗಿತ್ತಿಯರ ಕೆಲಸವಂತೂ ಕಡಿಮೆ ಮಾಡಿದ್ದಾರೆ  ಎನ್ನಬಹುದು.  

ಆದರೂ..

ಸಾಕಷ್ಟು ಹಳ್ಳಿಗಳಲ್ಲಿ ಇಂದಿಗೂ ಸೋಲಗಿತ್ತಿಯರು ಸಮಯಕ್ಕೆ ಸರಿಯಾಗಿ ಹೆರಿಗೆಯನ್ನು ಮಾಡಿಸಿಕೊಂಡು ಮಗು ಮತ್ತು ತಾಯಿಯ ಜೀವವನ್ನು ಉಳಿಸುವಲ್ಲಿ ಅವರ ಪಾತ್ರ ಹಿರಿದಾದುದು. ದುರಾದೃಷ್ಟವಶಾತ್ ಸರ್ಕಾರದ ಗಮನಕ್ಕಾಗಲಿ, ಸಾರ್ವಜನಿಕರ ಪ್ರೋತ್ಸಾಹವಾಗಲಿ ಇಂತಹ ಸೂಲಗಿತ್ತಿಯರ ಸೇವೆಯನ್ನು ಪರಿಗಣಿಸದಿರುವುದು ವಿಷಾದನೀಯ ಎಂದೇ ಹೇಳಬಹುದು. ಸೂಲಗಿತ್ತಿ ನರಸಮ್ಮನಂಥವರ ಸಾಕಷ್ಟು ಸೇವೆಯನ್ನು  ಗುರುತಿಸಿ ಸರ್ಕಾರದ ಪ್ರೋತ್ಸಾಹದ ಬಹುಮಾನವನ್ನು ಪಡೆದಿರುವುದು ನಮ್ಮ ನಡುವಿನ ಅವರು ಹೆಮ್ಮೆ ಎಂದೇ ಹೇಳಬಹುದು. ಇಂದು ಸಂಕಷ್ಟದಲ್ಲಿರುವ ಸೂಲಗಿತ್ತಿಯರ ಬದುಕಿಗೆ ನಾವೇಲ್ಲ ಆಸರಾಗಬೇಕಾಗಿದೆ.  ಸಮಾಜದಲ್ಲಿ ಅವರ ಬದುಕು ಹಸನಾಗಲೆಂದು ಶುಭ ಹಾರೈಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕವಾಗಿವೆ.

——————————

Leave a Reply

Back To Top