ಬದುಕು-ಬರಹ

ಅಮೃತಾ ಪ್ರೀತಮ್

ಜ್ಞಾನಪೀಠ ಪ್ರಶಸ್ತಿ ವಿಜೇತೆ, ಹೆಸರಾಂತ ಪಂಜಾಬಿ ಲೇಖಕಿ ಅಮೃತಾ ಪ್ರೀತಮ್..!

ಅಮೃತಾ ಪ್ರೀತಮ್ ಹೆಸರಾಂತ ಪಂಜಾಬಿ ಲೇಖಕಿ, ಕವಯಿತ್ರಿ, ಕತೆಗಾರ್ತಿ, ಕಾದಂಬರಿಗಾರ್ತಿ. ಜ್ಞಾನಪೀಠ ಪ್ರಶಸ್ತಿ ವಿಜೇತೆ.
ಅವಿಭಕ್ತ ಪಂಜಾಬಿನ ಲಾಹೋರಿನ ಬಳಿಯ ಗುಜರಾವಾಲೆಯಲ್ಲಿ 31ನೆಯ ಆಗಸ್ಟ್ 1919ರಂದು ಜನಿಸಿದರು.
ಇವರ ತಂದೆ ಕರ್ತಾರಸಿಂಹ ‘ಹಿತಕಾರಿ’ ಸಹ ಅಂದಿನ ಪ್ರಸಿದ್ದ ಲೇಖಕರಲ್ಲೊಬ್ಬರು. ಪ್ರೀತಮ್ ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ತಾಯಿ ರಾಜಕೌರ್ ಅವರನ್ನು ಕಳೆದುಕೊಂಡರು. ಅನಂತರ ತಂದೆಯ ಪೋಷಣೆಯಲ್ಲಿ ಬೆಳೆದು ಅವರ ಪ್ರೇರಣೆಯಿಂದಲೇ ಸಾಹಿತ್ಯ ರಚನೆಗೆ ತೊಡಗಿದವರು…

ಇಪ್ಪತ್ತನೆಯ ವಯಸ್ಸಿನಲ್ಲಿ (ಡಿಸೆಂಬರ್ 1939) ಪ್ರೀತಮ್‍ಸಿಂಗ್ ಕವಾತಡಾ ಅವರೊಡನೆ ಇವರ ಮದುವೆಯಾಯಿತು. ನೂರಕ್ಕೂ ಹೆಚ್ಚು ಕವನಗಳನ್ನುಳ್ಳ ಇವರ ಮೊದಲ ಕೃತಿ ಅಮೃತಾ ಲಹರಾರಿ 1936ರಲ್ಲಿ ಹೊರಬಂತು. 1938ರಲ್ಲಿ ಇವರು ನವೀದುನಿಯಾ ಎಂಬ ಸಾಹಿತ್ಯ ಪತ್ರಿಕೆಯನ್ನು ನಡೆಸತೊಡಗಿದರು. ಲಾಹೋರಿನ ಆಕಾಶವಾಣಿಗೆ ಕವನಗಳನ್ನು ಬರೆಯಲಾರಂಭಿಸಿದರು. ಇವರ ಆರಂಭದ ಬರೆವಣಿಗೆಯ ಮೇಲೆ ಪಂಜಾಬಿನ ಖ್ಯಾತ ಕವಿ ಮೋಹಸಿಂಗ್ ಮತ್ತು ಪ್ರಸಿದ್ಧ ಲೇಖಕ ಗುರುಬಕ್ಷ್‍ಸಿಂಗ್ ಅವರ ಪ್ರಭಾವ ಸಾಕಷ್ಟು ಬಿದ್ದಿರುವುದಾಗಿ ತೋರುತ್ತದೆ…

1947ರಲ್ಲಿ ಭಾರತದ ವಿಭಜನೆಯಾದ ಅನಂತರ ಇವರು ಲಾಹೋರನ್ನು ತೊರೆದು ದೆಹಲಿಗೆ ಬಂದು ನೆಲೆಸಿದರು. ವಿಭಜನೆಯ ಸಮಯದಲ್ಲಿ ಅಲ್ಲಿಯ ಪ್ರಜೆಗಳಿಗೆ ಉಂಟಾದ ಆರ್ಥಿಕ ಹಾಗೂ ಮಾನಸಿಕ ಕಷ್ಟನಷ್ಟಗಳು ಇವರ ಮೇಲೆ ತುಂಬಾ ಪರಿಣಾಮ ಬೀರಿ ಇವರ ಅನೇಕ ಕೃತಿಗಳಲ್ಲಿ ಮಾರ್ದನಿ ಪಡೆದವು…

ವಾರಸ್‍ಶಾಹ್ ಎಂಬ ಇವರ ಕವನ ಈ ನಿಟ್ಟಿನಲ್ಲಿ ತುಂಬಾ ಪ್ರಸಿದ್ಧವಾಗಿರುವ ಕೃತಿ. ಇವರ ಕೃತಿಗಳಲ್ಲಿ ಪಂಜಾಬಿನ ಜನಜೀವನದ ಹಲವಾರು ಮುಖಗಳ ಪರಿಚಯವಾಗುತ್ತದೆ. ಹಿಂದಿ ಸಾಹಿತ್ಯ ಕ್ಷೇತ್ರದಲ್ಲೂ ಇವರು ಜನಪ್ರಿಯ ಕಾದಂಬರಿಕಾರ್ತಿಯೆಂದು ಹೆಸರುವಾಸಿಯಾಗಿದ್ದಾರೆ.
ಹೆಣ್ಣಿನ ಅಸಹಾಯಕತೆ, ಅವಳ ಮೇಲೆ ಸಮಾಜ ನಡೆಸುವ ದೌರ್ಜನ್ಯ, ಸಾಮಾಜಿಕ ಕಟ್ಟುಪಾಡುಗಳು ಇವರ ಆರಂಭಿಕ ಕಾದಂಬರಿಗಳ ತಿರುಳು. ಈಚಿನ ರಚನೆಗಳಲ್ಲಿ ಸಾಮಾಜಿಕ ಹಾಗೂ ಮನೋವೈಜ್ಞಾನಿಕ ಸಮಸ್ಯೆಗಳನ್ನು ಎತ್ತಿಕೊಂಡಿದ್ದಾರೆ…

ಇವರ ಕೆಲವು ಕೃತಿಗಳು ಹೀಗಿವೆ–


ಲಾಮಿಯಾವತನ್ (1948); ಸುನಹರ್ (1956) ಕವನ ಸಂಗ್ರಹಗಳು…

ಪಿಂಜರ್ (1950), ಆಲನಾ (1952), ಬಂದ್ ದರ್‍ವಾಜಾ (1962), ರಂಗ್ ಕಾ ಪತ್ತಾ (1962), ವಾಕ್ ಥೀ ಅನೀತಾ (1963), ಧರತೀ, ಸಾಗರ್ ಔರ್ ಸೀಪಿಯಾಂ (1966), ದಿಲ್ಲೀ ಕಿ ಗಲಿಯಾಂ (1967), ಎಸ್ಕಿಮೋ ಸ್ಟೈಲ್ ತಥಾ ಏರಿಯಲ್ (1967), ಜಲಾವತನ್ (1969), ಜೇಬ್ ಕತರೇ (1970) ಕಾದಂಬರಿಗಳು…

ಅಖರೀಖತ್ (1956). ಏಕ್ ಲಡಕೀ ಏಕ್ ಶಾಪ್ (1967) ಸಣ್ಣಕತೆಗಳ ಸಂಗ್ರಹ…

ಇಕ್ಕೀಸ್ ಪತ್ತಿಯೋಂಕಾ ಗುಲಾಬ್ (1968) ಎಂಬುದು ಇವರ ಬಲ್ಗೇರಿಯ, ಸೋವಿಯತ್ ರಷ್ಯ, ಯುಗೋಸ್ಲಾವಿಯ, ಹಂಗೇರಿ, ರುಮೇನಿಯ ಮತ್ತು ಜರ್ಮನಿ ಪ್ರವಾಸದ ದಿನಚರಿ ಅತೀತ್ ಕೀ ಪರಛಾಯಿಯಾಂ (1962) ಕೃತಿಯಲ್ಲಿ ತಮ್ಮ ಬದುಕು ಹಾಗೂ ಸಾಹಿತ್ಯ, ದೇಶವಿದೇಶಗಳ ಬರಹಗಾರರ ಬದುಕು ಮತ್ತು ಸಾಹಿತ್ಯವನ್ನು ಕುರಿತಂತೆ ನೆನಪಿನ ಚಿತ್ರಗಳನ್ನು ಬಿಡಿಸಿದ್ದಾರೆ.
‘ರಸೀದಿ ಟಿಕೆಟ್’ ಇವರ ಆತ್ಮಕಥಾನಾತ್ಮಕ ಕೃತಿಯಾಗಿದೆ…

ದೆಹಲಿಯ ಆಕಾಶವಾಣಿಯಲ್ಲಿ ಇವರು ಅನೇಕ ವರ್ಷ ಕೆಲಸ ಮಾಡಿದರು. ಮುಂಬಯಿಯ ಚಲನಚಿತ್ರ ಪ್ರಪಂಚಕ್ಕೂ ಹೆಜ್ಜೆಯಿಟ್ಟ ಇವರು ಆ ಕ್ಷೇತ್ರ ಒಗ್ಗದೇ ಮರಳಿದರು. ಇವರ ಅನೇಕ ಕೃತಿಗಳು ಭಾರತೀಯ ಭಾಷೆಗಳಲ್ಲೇ ಅಲ್ಲದೆ ಇಂಗ್ಲಿಷ್, ರಷ್ಯನ್, ಬಲ್ಗೇರಿಯನ್. ಹಂಗೇರಿಯನ್, ಜಪಾನಿ ಭಾಷೆಗಳಿಗೆ ಅನುವಾದಗೊಂಡಿವೆ…

ಇವರ ಸಾಹಿತ್ಯ ಸೇವೆಯನ್ನು ಗಮನಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ 1956ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ಅದನ್ನು ಪಡೆದ ಮಹಿಳೆಯರಲ್ಲಿ ಇವರೇ ಮೊದಲಿಗರು. 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತು. ದೆಹಲಿ ವಿಶ್ವವಿದ್ಯಾಲಯ 1973ರಲ್ಲಿ ಗೌರವ ಡಿ.ಲಿಟ್ ಪ್ರಶಸ್ತಿ ನೀಡಿ ಗೌರವಿಸಿತು. ಬಲ್ಗೇರಿಯಾದ ಪ್ರಶಸ್ತಿಗೂ ಪಾತ್ರರಾದರು.


1966ರಿಂದೀಚೆಗೆ ಅಮೃತಾ ಪ್ರೀತಮ್ ಅವರು ನಾಗಮಣಿ ಎಂಬ ಪಂಜಾಬಿ ಪತ್ರಿಕೆಯ ಸಂಪಾದಕ ಪ್ರಕಾಶಕರಾಗಿದ್ದಾರೆ.


ಇತ್ತೀಚೆಗೆ ಅಮೆರಿಕೆಯ ಮಿಚಿಗನ್ ವಿಶ್ವವಿದ್ಯಾಲಯದ ನಿಯತಕಾಲಿಕ ಮೆಹಫಿಲ್ ಇವರ ಕೃತಿಗಳನ್ನು ಕುರಿತಂತೆ ಒಂದು ಸಂಚಿಕೆಯನ್ನೂ ಹೊರತಂದಿದೆ…

ಜ್ಞಾನಪೀಠ ಪ್ರಶಸ್ತಿ ಪಡೆದ ಇವರ ಕಾಗದ ಮತ್ತು ಕ್ಯಾನ್‍ವಾಸ್ ಕವನ ಸಂಗ್ರಹದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ.
ಜನಪದ ಛಂದಸ್ಸು, ಲಾವಣೆಮಟ್ಟು, ಮುಕ್ತಛಂದಸ್ಸು ಇವುಗಳನ್ನು ವಿಧವಿಧವಾಗಿ ಬಳಸಿದ್ದಾರೆ. ಇವರ ಮೂಲಕ ಈ ಪ್ರಶಸ್ತಿ ಪಂಜಾಬಿಗೆ ಮೊದಲ ಸಲಕ್ಕೆ ಲಭಿಸಿದೆ. ಉನ್ನತ ಪ್ರಶಸ್ತಿ ಪಡೆದ ಮಹಿಳೆಯರಲ್ಲಿ ಈಕೆ ಎರಡನೆಯವರಾಗಿದ್ದಾರೆ.
ಇಂತಹ ಅಮೃತಾ ಪ್ರೀತಮ್ ಅವರು ಅಕ್ಟೋಬರ್ 31, 2005ರಂದು ನಿಧನರಾದರು…


‌‌ ‌‌‌‌‌‌ ‌ *************

ಕೆ.ಶಿವು ಲಕ್ಕಣ್ಣವರ

Leave a Reply

Back To Top