ಲಹರಿ

ಹೀಗೊಂದು ಕಾಲಕ್ಷೇಪ

Diwali Lamp Stock Photos And Images - 123RF

ರಾಮಸ್ವಾಮಿ ಡಿ.ಎಸ್.

ಹೀಗೊಂದು ಕಾಲಕ್ಷೇಪ

ಕಾಲ ಚಲಿಸುತ್ತಲೇ ಇದೆ. ಭೂಮಿ ಚಪ್ಪಟೆಯಾಗಿರದೆ ದುಂಡಗಿರುವ ಕಾರಣ, ಸಮಯ ಅನ್ನೋದು ಪೂರ್ವದಿಂದ ಸುರುವಾಗಿ ಪಶ್ಚಿಮಕ್ಕೆ ಹೋದ ಹಾಗೆ ಸೂರ್ಯನ ಚಲನೆಗೆ ತಕ್ಕಂತೆ ವ್ಯತ್ಯಾಸವಾಗುವುದು ಸಹಜ. ಪೂರ್ವದ ದೇಶಗಳನ್ನು ಬೆಳಗಿದ ಬೆಳಕಿನ ಎಂಜಲು ನಿಧಾನವಾಗಿ ಪಶ್ಚಿಮದ ದೇಶಗಳಿಗೆ ಬೀಳುತ್ತೆ. ಆದರೆ ಪಾಶ್ಚಿಮಾತ್ಯರ ಪ್ರಭಾವ ಅದ್ಯಾಕೋ ಪೂರ್ವದ ದೇಶಗಳ ಮೇಲೆ ಹೆಚ್ಚಾಗುತ್ತಿರುವ ಕಾರಣ ಪೂರ್ವದ ಕಾಲದಲ್ಲೇ ಹೊಳೆದ ಜ್ಞಾನವನ್ನು ಪೂರ್ವ ದೇಶದ ಜನ ಮರೆತು ಪಾಶ್ಚಿಮಾತ್ಯರ ರೀತಿ ರಿವಾಜು ಅನುಕರಿಸಿದ ಕಾರಣ ಅಪ್ಪ ಅಮ್ಮ ಬದುಕು ಜೀವನ ಮೌಲ್ಯ ಎಲ್ಲವೂ ಅರ್ಥಾಂತರ ಪಡೆಯುತ್ತಿವೆ.

ಅಪ್ಪನನ್ನು ಕಳೆದುಕೊಂಡ ನಾನು, ಚಿಕ್ಕಂದಿನಲ್ಲೇ ಅಮ್ಮನನ್ನು ಕಳೆದುಕೊಂಡ ಶಶಾಂಕ ಆಗೀಗ ಜೊತೆ ಸೇರಿಕೊಂಡು ಜೀವನದ ಅರ್ಥ, ಪೂರ್ವ ಸೂರಿಗಳ ಬದುಕಿನ ರೀತಿ, ಆಧುನಿಕರ ಮನೋಭಾವ ಕುರಿತು ವಿಷಾದ ಪಡುತ್ತಲೇ ಇರುತ್ತೇವೆ. ನಮ್ಮ ಮಾತಿನ ನಡುವೆ ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್, ಅಕ್ಕ ಮಹದೇವಿ, ಕುಂತಿ, ಸೀತೆ, ಅನಸೂಯೆ, ಅಹಲ್ಯೆಯರೂ ಹಾಜರಿ ಹಾಕುತ್ತಲೇ ಇರುತ್ತಾರೆ. ಮಾತಿನ ರೀತಿಯೂ ಅವತ್ತವತ್ತಿನ ರಾಜಕೀಯ, ಸಾಮಾಜಿಕ ಸನ್ನಿವೇಶಗಳ ಕಾರಣದಿಂದ ಬದಲಾಗುತ್ತಲೇ ಇರುತ್ತದೆ.

ಈಗಂತೂ ಕೋವಿಡ್ ಕಾರಣ ಕಂಪ್ಲೀಟ್ ಲಾಕ್ ಡೌನ್. ಇದರ ಪರಿಣಾಮ ಮನೆ ಮನೆಯಲ್ಲೂ ಓದುವ, ಸಿನಿಮಾ ನೋಡುವ, ಹಳೆಯದನ್ನು ನೆನೆದು ಹೊಸದನ್ನು ತೂಕಕ್ಕೆ ಹಾಕುವ ಕೆಲಸ ನಡೆಯುತ್ತಲೇ ಇದೆ. ಬುದ್ಧನ ಮಗ ರಾಹುಲ, ಮತ್ತು ಹಿರಣ್ಯ ಕಶ್ಯಪುವಿನ ಮಗ ಪ್ರಹ್ಲಾದ ಇವತ್ತು ನಮ್ಮ ಮಾತಿನ ಮಧ್ಯೆ ಹೇಗೋ ಬಂದು ತೂರಿಕೊಂಡರು. ಪರಸ್ಪರ ಮಾತಿಗೆ ಕೂತರು. ಅವರವರ ಮನದಾಳದ ಸಮಸ್ಯೆಯನ್ನು ಹಂಚಿಕೊಂಡರು.
*******************”**********************


ಹರಿಯ ಧ್ಯಾನಕ್ಕೆ ಮನಸೋತು ಅಪ್ಪನನ್ನು ಅವನ ಹರನನ್ನೂ ವಿರೋಧಿಸಿ ಕಡೆಗೆ ಆ ಅಪ್ಪನನ್ನೇ ತಾನೇ ಸ್ವತಃ ಕೊಲ್ಲಿಸಿದ ಪ್ರಹ್ಲಾದ ಹಿರಣ್ಯಕಷಿಪುವಿನ ರಾಜ್ಯವನ್ನು ಆಳತೊಡಗಿದ ಮೇಲೂ ತನ್ನ ಹರಿಯ ಧ್ಯಾನದಲ್ಲೇ ಇದ್ದುಬಿಡುತ್ತಿದ್ದ. ಆಗೀಗ ಅಪರೂಪಕ್ಕೆ ರಾಜ್ಯದ ಜನತೆಯ ಕಷ್ಟ ಸುಖ ವಿಚಾರಿಸಿಕೊಳ್ಳಲು ತಾನೇ ಸ್ವತಃ ರಥ ಹತ್ತಿ ಊರೂರಿಗೆ ಹೋಗಿ ಜನರ ದೂರು ದುಮ್ಮಾನ ಕೇಳುತ್ತಿದ್ದ.

ಹಾಗೆ ಒಮ್ಮೆ ದೂರದೂರಿಗೆ ಹೋಗಿ ಹಿಂತಿರುಗುತ್ತಿದ್ದಾಗ
ರಥದ ಕುಲುಕಾಟದ ನಡುವೆಯೂ ನಿದ್ದೆಯ ಜೊಂಪಿನಲ್ಲಿದ್ದ ಪ್ರಹ್ಲಾದನನ್ನು ಕರೆದ ಸಾರಥಿ, “ಸ್ವಾಮಿ ಆಗಿನಿಂದ ಯಾರೋ ನಮ್ಮ ರಥವನ್ನು ಹಿಂಬಾಲಿಸುತ್ತಿದ್ದಾರೆ” ಎಂದ. ಪುರುಷ ಸಹಜ ಶೌರ್ಯದಿಂದ ಸಿಟ್ಟಾದ ಪ್ರಹ್ಲಾದ ರಥವನ್ನು ನಿಲ್ಲಿಸಲು ಹೇಳಿ, ತನ್ನ ಮೇಲೆ ದಾಳಿಗೆ ಬರುತ್ತಿರುವವನ ಮೇಲೆ ಪ್ರತಿ ದಾಳಿ ಮಾಡಲು ಸಿದ್ಧನಾದ. ರಥ ಹತ್ತಿರ ಬರುತ್ತಾ ಬರುತ್ತಾ ಇದು ಬುದ್ಧನ ಮಗ ರಾಹುಲ ಎನ್ನುವುದು ಅವನಿಗೆ ಖಾತ್ರಿಯಾಯಿತು.

ತನ್ನ ಶಸ್ತ್ರಾಸ್ತ್ರಗಳನ್ನು ಸಡಿಲ ಮಾಡಿ ಆರಾಮದಲ್ಲಿ ಕೂತ ಪ್ರಹ್ಲಾದ.ಪ್ರಹ್ಲಾದನ ಬಳಿಗೆ ಬಂದ ರಾಹುಲ
” ನಿನ್ನ ರಥದಲ್ಲಿ ನಾನೂ ಬರಲಾ?” ಎಂದು ಕೇಳಿದ ತಕ್ಷಣ ಪ್ರಹ್ಲಾದನಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ, ಇವನ ಈ ನಡೆಯಲ್ಲಿ ಯಾವುದಾದರೂ ಕುಟಿಲ ತಂತ್ರ ಇರಬಹುದೇನೋ ಎಂದು ಅನುಮಾನವಾಯಿತು. ಹುಬ್ಬು ಗಂಟಿಕ್ಕಿ ಯೋಚಿಸುವ ಹೊತ್ತಲ್ಲ. ರಾಹುಲನೇ ಮಾತು ಮುಂದುವರಿಸಿ “ಆಸೆಯೇ ದುಃಖಕ್ಕೆ ಮೂಲ ಎಂದವನ ಮಗ ನಾನು, ನಿನ್ನ ರಾಜ್ಯವನ್ನು ಪಡೆದುಕೊಂಡು ಏನು ಮಾಡಲಿ…….” ಎಂದು ಹೇಳುತ್ತಿದ್ದಾಗಲೇ ರಥದ ಬಾಗಿಲು ತೆರೆದ ಪ್ರಹ್ಲಾದ. ರಾಹುಲ ಕುಳಿತ ಪ್ರಹ್ಲಾದನ ರಥ ಮುಂದೆ ಹೋಗುತ್ತಿದ್ದರೆ, ರಾಹುಲ ಬಂದ ಅವನ ಸ್ವಂತದ ರಥ ಅದನ್ನು ಹಿಂಬಾಲಿಸುತ್ತಿತ್ತು.

“ಹೇಗಿದ್ದೀಯಾ? , ಪ್ರಜೆಗಳು ಸೌಖ್ಯವೇ? ” ಎಂದಾಗ, ಹೌದು ಎನ್ನುವಂತೆ ತಲೆಯಾಡಿಸಿ, “ನಿನ್ನ ರಾಜ್ಯದ ಕಥೆ ಏನು ?” ಎಂದು ಕಣ್ಣಲ್ಲೇ ಪ್ರಶ್ನಿಸಿದ ಪ್ರಹ್ಲಾದ.
“ಎಲ್ಲವೂ ಕ್ಷೇಮ” ಎಂದು ಕಣ್ಣಲೇ ಹೇಳಿದ ರಾಹುಲ
ಒಂದೆರಡು ನಿಮಿಷದ ಮೌನದ ನಂತರ ” ಪ್ರಹ್ಲಾದ ನಿನಗೆ ಯಾವತ್ತೂ ಅನಾಥ ಪ್ರಜ್ಞೆ ಕಾಡಲಿಲ್ಲವಾ?” ಎಂದು ಕೇಳಿದ ರಾಹುಲ.

ಇದಕ್ಕೆ ಏನು ಉತ್ತರ ನೀಡಬೇಕೆಂದೇ ಪ್ರಹ್ಲಾದನಿಗೆ ತಕ್ಷಣಕ್ಕೆ ಅರ್ಥವಾಗಲಿಲ್ಲ. ಒಂದೆರಡು ಕ್ಷಣದ ನಂತರ ಯೋಚಿಸಲು ಆರಂಭಿಸಿದ. ಅಪ್ಪ ಈಗ ಇಲ್ಲ, ನರಸಿಂಹ ಪ್ರತ್ಯಕ್ಷನಾಗಿ ಅಪ್ಪನನ್ನು ಕೊಲ್ಲುವುದಕ್ಕೆ ಮುನ್ನವೇ ಅಮ್ಮ ಪ್ರಾಣ ಬಿಟ್ಟಿದ್ದಳು. ಆದರೂ ತನಗೆ ಒಂದು ದಿನಕ್ಕೂ ಅನಾಥ ಪ್ರಜ್ಞೆ ಕಾಡಿರಲಿಲ್ಲ. ಸ್ವತಃ ಆತನ ಪತ್ನಿ ಲಕ್ಷ್ಮಿಯ ಮಾತಿನಿಂದಲೂ ಶಾಂತನಾಗದ ನರಸಿಂಹ, ನಾನು ಹೋಗಿ ಪ್ರಾರ್ಥಿಸಿದಾಗ ಶಾಂತ ಸ್ವರೂಪನಾದ. ಅದೇ ಕ್ಷಣಕ್ಕೆ ದೇವಾನು ದೇವತೆಗಳು ಹೂಮಳೆ ಸುರಿಸಿದ್ದರು. ಆ ಕ್ಷಣವನ್ನು ನೆನೆದಾಗಲೆಲ್ಲಾ ಪ್ರಹ್ಲಾದನಿಗೆ ಒಂಥರಾ ರೋಮಾಂಚನ. ಲಕ್ಷ ಲಕ್ಷ ವರ್ಷ ಜಪ ತಪಗಳನ್ನು ಮಾಡಿದವರಿಗೂ ದರ್ಶನ ನೀಡದ ಆ ಸ್ವಾಮಿ ತನ್ನ ಮುಂದೆ ಪ್ರತ್ಯಕ್ಷನಾದ ಕ್ಷಣವನ್ನು ಅವನ ನೆನಪಿನಲ್ಲಿ ಇಂದಿಗೂ ಹಸಿರಾಗಿತ್ತು. ಆದರೆ ಅಪ್ಪ ಅಮ್ಮ ಇಲ್ಲ ಎಂಬ ಅನಾಥ ಪ್ರಜ್ಞೆ ಯಾವತ್ತಿಗೂ ಕಾಡಿರಲಿಲ್ಲ. ಹರಿಯೇ ಅವನ ಪಾಲಿಗೆ ಸರ್ವಸ್ವವೂ ಆಗಿದ್ದ. ಹೀಗಿದ್ದೂ ರಾಹುಲ ಈ ಪ್ರಶ್ನೆ ಕೇಳಿದ ತಕ್ಷಣ ಅವನೊಳಗೆ ಸಾವಿರ ಪ್ರಶ್ನೆಗಳ ಅಲೆ ಒಮ್ಮೆಲೇ ಎದ್ದಿತು.
ರಾಹುಲ ಮತ್ತೆ ಕೇಳಿದ ” ಪ್ರಹ್ಲಾದ ನಿನಗೆ ಅನಾಥ ಪ್ರಜ್ಞೆ ಯಾವತ್ತಿಗೂ ಕಾಡಲಿಲ್ಲವಾ ?”
ಪ್ರಹ್ಲಾದ ಹೌದು ಇಲ್ಲ ಎಂಬ ಯಾವ ಉತ್ತರ ಕೊಡುವುದುಕ್ಕೂ ಸಾಧ್ಯವಾಗಲಿಲ್ಲ. ಆದರೆ ಪ್ರಹ್ಲಾದನ ಅಂತರಂಗಕ್ಕೆ ಮೊದಲಬಾರಿಗೆ ಗದೆಯಲ್ಲಿ ಬಲವಾಗಿ ಹೊಡೆದಂತೆ ಆಯಿತು.

” ನನ್ನಪ್ಪನಿಗೆ ನಡುರಾತ್ರಿಯಲ್ಲಿ ಜ್ಞಾನೋದಯವಾಗಿತ್ತು. ಹೆಂಡತಿ ಮಕ್ಕಳು ರಾಜ್ಯ ರತ್ನ ಎಲ್ಲವೂ ನಶ್ವರ ಎಂದು ಅರಿವಾಗಿತ್ತು. ಎಲ್ಲವನ್ನೂ ಬಿಟ್ಟು ಹೊರಟ. ಅವನಿಗೆ ಯಾರೂ ಬೇಡವಾಗಿತ್ತು. ನನಗೆ ಅಪ್ಪ ಬೇಕೆಂಬ ಆಸೆ, ಆದರೆ ಅಪ್ಪ ಆ ಆಸೆಯೇ ದುಃಖಕ್ಕೆ ಮೂಲ ಎನ್ನುತ್ತಾನೆ. ಅವನ ಎಲ್ಲ ಮಾತುಗಳು ನನಗೆ ಒಪ್ಪಿಗೆಯಾಗುವುದಿಲ್ಲ. ನಾನು ಯೋಚಿಸುವುದಕ್ಕೂ, ಅವನು ಯೋಚಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಅವನ ಅನುಭವ ನನಗಿಂತ ದೊಡ್ಡದು. ನಿಜ ಆದರೆ ಅವನ ವೈರಾಗ್ಯ ನನಗಿಲ್ಲ. ನನಗೆ ಎಲ್ಲವೂ ಬೇಕು. ಎಲ್ಲದೂ ಬೇಕು. ಆದರೆ ಅಪ್ಪ ಹೇಳುತ್ತಾನೆ ಆಸೆಯೇ ದುಃಖಕ್ಕೆ ಮೂಲ. ಎಲ್ಲ ಇದ್ದೂ ಏನೂ ಇಲ್ಲದ ಅನಾಥ ಪ್ರಜ್ಞೆ. ಬದುಕಿನ, ರಾಜ್ಯಾಡಳಿತದ ಕಠಿಣ ಸಮಸ್ಯೆ ಬಂದಾಗಲೆಲ್ಲಾ ಅಪ್ಪ ನೆನಪಾಗುತ್ತಾನೆ. ನನ್ನ ಬೆನ್ನಿಗೆ ನಿಂತು ಸಲಹೆ ನೀಡಿದರೆ ಹೇಗಿರುತ್ತಿತ್ತು ಎನಿಸುತ್ತದೆ. ಆದರೆ ಒಂದು ದಿನಕ್ಕೂ ನಾನು ಅಪ್ಪನೊಡನೆ ಹೀಗೆ ಕಾಲ ಕಳೆಯಲೇ ಇಲ್ಲ. ಅಪ್ಪ ಎಂದರೆ ಅದೇ ಪುರಾಣ, ಅದೇ ಗೊಡ್ಡು ವೇದಾಂತ”

ಪ್ರಹ್ಲಾದ ಸುಮ್ಮನೆ ಕೇಳುತ್ತಿದ್ದ
” ನಿನಗೆ ಈ ಗಣಪತಿ ಕಥೆ ಗೊತ್ತಾ ?”
” ಯಾವುದು ?”
” ಅದೇ ನಾರದ ಮಹರ್ಷಿ ಪ್ರಪಂಚವನ್ನು ಸುತ್ತಿ ಬರಲು ಸ್ಪರ್ಧೆ ಇಟ್ಟಾಗ ಗಣೇಶ ಅಪ್ಪ , ಅಮ್ಮನ್ನನ್ನೇ ಸುತ್ತಿದ ಕಥೆ”
” ಗೊತ್ತು “
” ನೀನ್ಯಾಕೆ ನಿಮ್ಮಪ್ಪನಲ್ಲೇ ದೇವರನ್ನು ಕಾಣಲಿಲ್ಲ “
” ಅಪ್ಪ ನಾನೇ ದೇವರು ಎನ್ನುತ್ತಿದ್ದ, ಹರಿ ನನ್ನ ವೈರಿ ಎನ್ನುತ್ತಿದ್ದ. ಹರಿ ಧ್ಯಾನ ಮಾಡಿದಕ್ಕೆ ನನ್ನನ್ನು ಕೊಲ್ಲಲು ಹೊರಟಿದ್ದ”
” ಅದೆಲ್ಲವನ್ನೂ ಒಪ್ಪಿದೆ, ನೀನು ನಿನ್ನಪ್ಪನಲ್ಲಿ ಎಂದಾದರೂ ದೇವರನ್ನು ನೋಡಿದೆಯಾ ?”
” ನಾನು ನಮ್ಮಪ್ಪನಿಗೆ ಹರಿ ಧ್ಯಾನ ಮಾಡಲು ಹೇಳಿದೆ “
” ನೀನು ನಿಮ್ಮಪ್ಪನಲ್ಲಿ ದೇವರನ್ನು ಕಂಡೆಯಾ ?
” ನನ್ನ ಪಾಲಿಗೆ ಹರಿಯೇ ಸಕಲವೂ ಆಗಿದ್ದ “
” ನೀನು ನಿಮ್ಮಪ್ಪನಲ್ಲಿ ದೇವರನ್ನು ಕಂಡೆಯಾ ?”
ಪ್ರಹ್ಲಾದನಿಗೆ ಇದಕ್ಕಿಂದಂತೆ ಸಿಟ್ಟು ಉಕ್ಕಿ ಬಂತು. ” ಇಲ್ಲ ನಾನು ಅಪ್ಪನನ್ನು ಎಂದೂ ದೇವರಂತೆ ಕಂಡಿಲ್ಲ, ಹರಿಯ ಸ್ಥಾನದಲ್ಲಿ ಅವನನ್ನಿಟ್ಟು ನೋಡುವುದು ನನಗೆ ಎಂದಿಗೂ ಸಾಧ್ಯವಿಲ್ಲಾ, ಹರಿಯನ್ನಷ್ಟೇ ನಾನು ದೇವರಾಗಿ ಕಂಡಿದ್ದು, ಬೇರೆಯವರು ಯಾರೂ ನನಗೆ ದೇವರಾಗಿ ಕಾಣಲಿಲ್ಲ “
” ನಾನು ನಿನ್ನನ್ನು ಹುಡುಕಿ ಬಂದ ಕಾರಣ ಗೊತ್ತಾ?” ಪ್ರಶ್ನಿಸಿದ ರಾಹುಲ. ತನ್ನೊಳಗೆ ನೆಡೆಯುತ್ತಿದ್ದ ಕೋಲಾಹಲವನ್ನು ತಡೆದು “ಏಕೆ ?” ಎಂದು ಕಣ್ಣಿನಲ್ಲಿಯೇ ಪ್ರಶ್ನಿಸಿದ ಪ್ರಹ್ಲಾದ, ರಾಹುಲನನ್ನು.
” ನಿನ್ನ ಬಗ್ಗೆ ನನಗೆ ತಿಳಿದಾಗಿನಿಂದ ಒಂದು ರೀತಿಯ ವಿಚಿತ್ರ ಕುತೂಹಲ. ನಿನ್ನ ಹರಿ ನರಸಿಂಹನ ರೂಪದಲ್ಲಿ ಬಂದು ನಿನ್ನಪ್ಪನನ್ನು ಕೊಲ್ಲುತ್ತಿದ್ದಾಗ ಕೂಡಾ ಅಪ್ಪನನ್ನು ರಕ್ಷಿಸಿಕೊಳ್ಳುವ ಬದಲಿಗೆ ಹರಿ ಧ್ಯಾನವನ್ನೇ ಮಾಡುತ್ತಿದ್ದೆಯಂತೆ. ಅಂಥ ಗಟ್ಟಿ ಮನಸ್ಸು ನಿನಗೆ ಹೇಗೆ ಬಂದಿದ್ದು. ಸಾಕಷ್ಟು ಭಿನ್ನಾಭಿಪ್ರಾಯದ ನಡುವೆ, ಆಸೆಯೇ ದುಃಖಕ್ಕೆ ಮೂಲ ಎಂದು ಅಪ್ಪನೇ ಹೇಳಿದ ಬಳಿಕ ಕೂಡಾ ಅವನ ಆಸರೆಯ ಬಯಕೆಯಾಗುತ್ತದೆ. ಈ ಬಯಕೆ ಬಾಲ್ಯದಿಂದ ಇಂದಿನವರೆಗೂ ಬೆನ್ನು ಬಿಡದೇ ಕಾಡುತ್ತಿದೆ. ಅಪ್ಪನನ್ನು ಹರಿ ಕೊಲ್ಲುತ್ತಿದ್ದಾಗಲೂ ನೀನು ಅವನದೇ ಧ್ಯಾನ ಮಾಡುತ್ತಾ ನಿಂತಿದ್ದೆಯಲ್ಲ. ಇದು ಸಾಧ್ಯವಾಗಿದ್ದು ಹೇಗೆ ?. ಹೃದಯವನ್ನು ಆ ಮಟ್ಟಕ್ಕೆ ಗಟ್ಟಿ ಮಾಡಿಕೊಳ್ಳುವ ಬಗೆಯನ್ನು ನನಗೂ ಹೇಳಿಕೊಡು “, ಪ್ರಹ್ಲಾದನಿಗೆ ರಾಹುಲ ಕೇಳಿದ.

ಪ್ರಹ್ಲಾದನ ಬಳಿ ಈ ಮಾತಿಗೆ ಉತ್ತರವೇ ಇರಲಿಲ್ಲ. ಕುದುರೆಯ ಖುರಪುಟದ ಸದ್ದಿನ ಹೊರತಾಗಿ ಉಳಿದೆಲ್ಲ ಕಡೆ ಬರೀ ನಿಶಬ್ದವೇ ತುಂಬಿತ್ತು.
“ನಿನಗೆ ಅಪ್ಪನ ಮಾತಿನಂತೆ ತಾಯಿಯ ತಲೆ ಕಡಿದ ಪರುಶುರಾಮನ ಕಥೆ ಗೊತ್ತಾ ?”
ಹೌದೆಂದು ತಲೆಯಾಡಿಸಿದ ಪ್ರಹ್ಲಾದ.
” ನಿನಗೆ ಏನು ಬೇಕು ಎಂದು ನಿನ್ನ ಹರಿ ಕೇಳಿದಾಗ ಏನು ವರ ಬೇಡಿದೆ ? “
” ಈ ನಶ್ವರ ಜಗತ್ತಿನಲ್ಲಿ ಭಗವಂತನನ್ನು ಏನು ಕೇಳುವುದು, ನನಗೆ ಏನೂ ಕೇಳಬೇಕೆಂದೇ ಅನ್ನಿಸಲಿಲ್ಲ. ಅದಕ್ಕೆ ನನಗೆ ಏನೂ ಬೇಡ, ಆದರೆ ನಿನ್ನನ್ನು ಎಂದೂ ಏನನ್ನೂ ಕೇಳದಂಥ ಸ್ಥಿತಿಯಲ್ಲಿಡು” ಎಂದು ಕೇಳಿದೆ.
” ಪರುಶುರಾಮ ತನ್ನ ತಾಯಿಯನ್ನು ಬದುಕಿಸಿಕೊಡುವಂತೆ ಕೇಳಿದ ಹಾಗೆ ನೀನು ನಿನ್ನ ಹರಿ ಬಳಿ ನಿನ್ನ ತಂದೆಯನ್ನು ಬದುಕಿಸಿ ಕೊಡುವಂತೆ ಕೇಳಬಹುದಿತ್ತು. ನೀನೇಕೆ ಕೇಳಲಿಲ್ಲ ? “
ಪ್ರಹ್ಲಾದ ಏನೋ ಹೇಳಲು ಪ್ರಯತ್ನಿಸಿದ. ಏನೂ ಹೊಳೆಯದೇ ಸುಮ್ಮನಾದ.
************************************


ದಶಾವತಾರದ ಎಲ್ಲ ಕತೆಗಳೂ ಗೊತ್ತಿರುವ ನಿಮಗೆ ನರಸಿಂಹಾವತಾರದಲ್ಲಿ ಬರುವ ಪ್ರಹ್ಲಾದ , ಬೌದ್ಧಾವತಾರದಲ್ಲಿ ಬರುವ ಬುದ್ಧನ ಮಗ ರಾಹುಲ ಪರಿಚಿತರೇ. ಕತೆಗಳ ಮೂಲಕ ಪುರಾಣದ ಮೂಲಕ ಬದುಕಿನ ಹಲವು ಮಗ್ಗಲುಗಳನ್ನು ಶೋಧಿಸಿದ ಕಾಲಕ್ಕೆ ತಕ್ಕ ಉತ್ತರವನ್ನೂ ಕೊಟ್ಟ ನಮ್ಮ ಪೂರ್ವ ಸೂರಿಗಳ ಜ್ಞಾನ ಅರಿವು ಮತ್ತು ಬದುಕನ್ನು ಹೇಗೆ ಸ್ವೀಕರಿಸಬೇಕು ಎಂದು ತಿಳಿ ಹೇಳಿದ ಅವರನ್ನು ಮರೆತ ನಾವು ಈ ಕೋವಿಡ್ ಕೊಟ್ಟ ಬಿಗ್ ಬ್ರೇಕಲ್ಲಿ ಯುಟ್ಯೂಬಲ್ಲಿ ಅಥವ ಅಮೆಜಾನ್ ಪ್ರೈಮಲ್ಲಿ ಸಿನಿಮಾ ನೋಡುತ್ತ ಸೀರೆ ಉಟ್ಟು ಪಂಚೆ ಕಟ್ಟಿ ಪಟ ತೆಗೆದು ಫೇಸ್ಬುಕ್ಕಲ್ಲಿ ಹಾಕುತ್ತ ಇದ್ದೇವಲ್ಲ, ನಾವೆಲ್ಲ ನಮ್ಮ ಹಿರೀಕರು ಹೊತ್ತು ಹೊತ್ತಿನ ಹಿಟ್ಟಿಗೆ ಎಷ್ಟೆಲ್ಲ ಕಷ್ಟ ಪಡುತ್ತಿದ್ದರು ಅನ್ನೋದನ್ನು ಮರೆತಿದ್ದೇವೆ. ಎಷ್ಟೋ ಬಾರಿ ಅಡುಗೆ ಮನೆಯಲ್ಲಿ ಸಾರಿಸಿ ಇಟ್ಟ ಒಲೆಯ ರಂಗೋಲಿ ಅಳಿಸಿಲ್ಲ ಹೊಸ ಬೂದಿ ಆಗಿಲ್ಲ ಅಂದರೆ ಅವತ್ತು ಆ ಮನೆಯಲ್ಲಿ ಉಪವಾಸ ಇದ್ದಾರೆ ಅನ್ನೋದು ಗೊತ್ತಾಗುತ್ತಿತ್ತು. ಈ ಕಾಲದ ಮೈಕ್ರೋ ಓವನ್ ಗ್ಯಾಸ್ ಒಲೆ ಕಾಯಿಲ್ ಒಲೆಗಳಲ್ಲಿ ಬೇಯಿಸಿದ್ದು ಬೇಯಿಸದೇ ಇದ್ದದ್ದೂ ಗೊತ್ತಾಗಲ್ಲ. ಬೀದಿಯಲ್ಲಿ ಹೆಣ ಬಿದ್ದರೆ ಆ ಬೀದಿಯ ಯಾರ ಮನೇಲೂ ಊಟ ತಿಂಡಿ ಎಲ್ಲ ಬಂದ್ ಆಗ್ತಿತ್ತು. ಈಗ ಬಿಡಿ ಕೆಳಗಿನ ಮನೆಯಲ್ಲಿ ಹೆಣ ತಂದ ಅಂಬ್ಯುಲೆನ್ಸ್ ನಿಂತಿದ್ದರೆ ಮೇಲಿನ ಮನೆಯಲ್ಲಿ ನಿಶ್ಚಿತಾರ್ಥ ಸಾಂಗವಾಗಿ ನಡೆಯುತ್ತಿರುತ್ತೆ.

ಕಾಲದ ಮಹಿಮೆಯೇ ಅಂಥದು. ಈಗ ನನಗೆ ೫೪. ೪೦ ವರ್ಷಗಳ ಹಿಂದೆ ಜಾತಿಗೊಂದು ಬೀದಿ ಇದ್ದಾಗಲೂ ಶಾಲೆಗೆ ಹೋಗುವಾಗ, ಆಟ ಆಡುವಾಗ, ಕದ್ದು ಮುಚ್ಚಿ ಈಜಲು ಹೋದಾಗ, ಕ್ರಿಕೆಟ್ ಆಡಕ್ಕೆ ತೆಂಗಿನ ಮೊಟ್ಟೆ ಹಿಡಿದು ಸ್ಮಶಾನದ ವಿಶಾಲ ಜಾಗಕ್ಕೆ ಹೋದಾಗ ನಮಗೆ ಈ ಜಾತಿ ಧರ್ಮ ಕಾಡಲೇ ಇಲ್ಲ. ಅಲಾಬಿ ಹಬ್ಬಕ್ಕೆ ಸಕ್ಕರೆ ನಾವು ಓದಿಸಿದರೆ ಕಾಮನ ಹಬ್ಬದ ಕುರುಳಿಗೆ ಸಾಬರ ಮನೆಯೇ ಆಗುತ್ತಿತ್ತು. ಆಟವಾಡಿ ಸುಸ್ತಾದಾಗ ಮೊದಲು ಯಾರ ಮನೆ ಸಿಕ್ಕತ್ತೋ ಅವರ ಮನೇಲೇ ನಮ್ಮೆಲ್ಲರ ಊಟವೋ ತಿಂಡಿಯೋ ಆಗುತ್ತಿತ್ತು. ಈಗ ನೋಡಿ. ಅವರಿವರ ಜೊತೆ ಸೇರಿದರೆ ತಾನೆ ಆಟವೋ ನೋಟವೋ ಜಗಳವೋ ಆಗಬಹುದು. ನಮ್ಮ ನಮ್ಮ ದ್ವೀಪದಲ್ಲಿ ನಾವು ನಾವು ಬಂಧಿ. ಇಂಥ ಹೊತ್ತಲ್ಲಿ ಪ್ರಹ್ಲಾದನೋ ರಾಹುಲನೋ ನೆನಪಿಗೇ ಬರಲ್ಲ. ಇವತ್ತು ರಾತ್ರಿ ೯ಕ್ಕೆ ದೀಪ ಹಚ್ಚಿ ಅಂದ ಪ್ರಧಾನಿಗಳ ಮಾತನ್ನು ನಮ್ಮ ನಮ್ಮ ಅನುಕೂಲಕ್ಕೆ ನಮ್ಮ ನಮ್ಮ ಸಿದ್ಧಾಂತಕ್ಕೆ ತಕ್ಕಂತೆ ಬಳಸುತ್ತ ಇದ್ದೀವಲ್ಲ ನಮಗೆಲ್ಲ ಮತ್ತೆ ಮತ್ತೆ ನಮ್ಮ ಹಿರೀಕರು ಬಿಟ್ಟುಹೋದ ರಾಮಾಯಣ ಮಹಾಭಾರತದ ಎಷ್ಟೋ ಪಾತ್ರಗಳು ನಿಜವಾದ ಸಮಾಧಾನ ಮತ್ತು ಎಂಥದೇ ದುಸ್ತಿತಿಯಲ್ಲೂ ಋಜು ಮಾರ್ಗ ತೋರಿಸುತ್ತಾರೆ ಅನ್ನೋದನ್ನು ಮೊದಲು ನಂಬಬೇಕು. ಚಾರ್ವಾಕ ಸಿದ್ಧಾಂತ ಇವತ್ತಿನ ಲೆಫ್ಟಿಸ್ಟ್ ಮಾದರಿಯಾಬೇಕು. ಕರ್ಮಠರಿಗೆ ಬಸವನ ಕಲ್ಯಾಣದಲ್ಲಿ ನಡೆದ ಕ್ರಾಂತಿಗೆ ಕಾರಣವಾದ ಅಂಶಗಳು ನೆನಪಾಗಬೇಕು. ಕಡೆಗೂ ರಾಮ ರಾಜ್ಯ ಆಳಿದರೂ ರಾಗಿ ಬೀಸೋದು ತಪ್ಪುಲ್ಲ ಅನ್ನೋ ಮಾತು ಮತ್ತೆ ಮತ್ತೆ ಅರ್ಥ ಆಗಬೇಕು!!

(ನಾ‌ನು ಆಮ್ಲಜನಕ ಹೆಸರಿನ ಶಶಾಂಕನ ಬರಹದ ಸ್ಪೂರ್ಥಿಯಿಂದ)

*******************************

Leave a Reply

Back To Top