ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ಇಂದಿಗೂ ಡ್ರೈವಿಂಗ್ ಕಲಿಯಲು ಭಯ..
ನಾವಾಗ ಕುದುರೆಮುಖದ ಬಳಿಯ ಜೆಪಿ ಎಂಬಲ್ಲಿ ವಾಸವಾಗಿದ್ದೆವು. ಅಲ್ಲಿಂದ ಟೌನ್ ಗೆ ಕೇವಲ ಐದೆ ಕಿಲೋಮೀಟರ್. ಆದರೆ ಶನಿವಾರ ನಮಗೆ ಬೆಳಗ್ಗೆ ಮೊದಲ ಬಸ್ಸು 9.00ಗಂಟೆಗೆ. ಶಾಲೆ 8.00ಗಂಟೆಗೆ ಪ್ರಾರಂಭ. ಹಾಗಾಗಿ ಆರು ಗಂಟೆಗೆ ಮನೆ ಬಿಟ್ಟು ಆ ಐದು ಕಿಲೋ ಮೀಟರ್ ದೂರ ನಡೆದು ಹೋಗುವ ಅನಿವಾರ್ಯತೆ. ಮಧ್ಯೆ ಯಾವುದಾದರೂ ಉತ್ತರ ಭಾರತದಿಂದಲೋ, ಮುಂಬೈಯಿಂದಲೋ ಕಬ್ಬಿಣದ ಅದಿರಿನ ಕಾರ್ಖಾನೆಗಾಗಿ ಬಿಡಿ ಭಾಗಗಳ ತರುವ ಉದ್ದ ಉದ್ದದ ಲಾರಿ, ಟ್ರಕ್ ಗಳು ಬಂದರೆ ಆ ತಿಂಗಳುಗಟ್ಟಲೆ ಪ್ರಯಾಣ ಮಾಡಿ ಬಂದ ಕಂಡಕ್ಟರ್ ಡ್ರೈವರ್ ಗಳು ಮಕ್ಕಳಾದ ನಮ್ಮನ್ನೆತ್ತಿ ಲಾರಿಗಳ ಒಳಗೆ ಕುಳ್ಳಿರಿಸಿ ಕರೆದುಕೊಂಡು ಹೋಗುತ್ತಿದ್ದರು. ಆಗ ಈಗಿನ ಹಾಗೆ ಮೊಬೈಲ್ ಇನ್ನೂ ಹಳ್ಳಿಗಳಿಗೆ ಬಂದಿರದ ಕಾರಣ ಹೆಣ್ಣು ಮಕ್ಕಳಿಗೆ ಸೇಫ್ಟಿ ಇತ್ತು. ವಿದ್ಯಾರ್ಥಿ, ಮಕ್ಕಳನ್ನು ಹೆಚ್ಚಿನ ಜನ ಈಗಿನ ಹಾಗೆ ಕಾಮದ ದೃಷ್ಟಿಯಲ್ಲಿ ನೋಡುವ ಕಾಲ ಅದಾಗಿರಲಿಲ್ಲ.
ಈಗ ಪ್ರೌಢ ಶಾಲೆ ಅಲ್ಲ, ಪ್ರಾಥಮಿಕ ಶಾಲೆಯ ಹೆಣ್ಣು ಮಗುವಿಗೂ ಈ ದೇಶದ ಯಾವುದೇ ಮೂಲೆ ಸೇಫ್ ಅಲ್ಲ. ಕಾರಣ ಅವಿದ್ಯಾವಂತರಿಗಿಂತ ಹೆಚ್ಚಾಗಿ ವಿದ್ಯಾವಂತರೇ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಬದಲಾಗಿದೆ. ತಂದೆ, ಚಿಕ್ಕಪ್ಪ, ಅಣ್ಣ, ಮಾವ, ಅಜ್ಜ, ಭಾವ, ದೊಡ್ಡಪ್ಪ, ಗುರು, ಶಿಷ್ಯ, ಪಿ ಎ ಹೀಗೆ ಯಾವ ಸಂಬಂಧಗಳೂ ಇಲ್ಲ ಅಲ್ಲಿ ಒಂದು ಹೆಣ್ಣಿದ್ದರೆ! ಆ ಸಮಯ, ಎಂಜಾಯ್ಮೆಂಟ್, ದೈಹಿಕ ತೃಪ್ತಿ, ಸಿಕ್ಕಿದ ಅವಕಾಶ ಅಷ್ಟೇ! ಈಗೆಲ್ಲಾ ಜನ ಕಾಮ ಪಿಪಾಸುಗಳ ಹಾಗೆಯೇ ಕಾಣುತ್ತಾರೆ. ಹೆಣ್ಣಿನ ಬಟ್ಟೆ ಹಾಕಿದ್ದರೆ ಸಾಕು ತೃತೀಯ ಲಿಂಗಿಗಳನ್ನೂ ಬಟ್ಟೆ ಬಿಚ್ಚಿಸಿ ನೋಡುವ ಈ ಕಾಲದಲ್ಲಿ ಇನ್ನು ಹೆಣ್ಣು ಮಕ್ಕಳ ಮಾನ ರಕ್ಷಣೆಯ ದಾರಿ ಆ ದೇವರಿಗೂ ತಿಳಿಯದೆಯೋ ಇಲ್ಲವೋ.
ಆದರೆ ನಾನು ಹೇಳಲು ಹೊರಟಿರುವುದು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಆಗಲೂ ಈಗಿನಂತಹ ಜನ ಇರಲಿಲ್ಲ ಎಂದಲ್ಲ. ಕೋರ್ಟು ಕೇಸು ಪೊಲೀಸ್ ಎಂದರೆ ಭಯ ಇತ್ತು, ಸಮಾಜಕ್ಕೆ ಹೆದರುತ್ತಿದ್ದರು. ಆದರೆ ಕೈಯಲ್ಲಿ ಆಂಡ್ರಾಯ್ಡ್ ಎಂಬ ಉಜ್ಜುವ ಫೋನ್ ಬಂದು ಯಾವಾಗ ಎಲ್ಲವನ್ನೂ ಓಪನ್ ಆಗಿ ಬಿಚ್ಚಿ ಎಲ್ಲರಿಗೂ ಪ್ರಪಂಚ ಇಷ್ಟೇ,ಬದುಕು ಇಷ್ಟೇ ಎಂದು ಪ್ರಪಂಚದಾದ್ಯಂತ ಜನ ಹಗಲು – ರಾತ್ರಿ ಮಾಡುವ ಕಾರ್ಯಗಳನ್ನು ಸಾರಾ ಸಗಟಾಗಿ ಯಾವ ಅಡೆ ತಡೆಗಳು ಇಲ್ಲದೆ ಯಾವ ವಯಸ್ಸಲ್ಲಿ ಏನು ಕಲಿಯಬೇಕು ಅದಕ್ಕಿಂತ ಹೆಚ್ಚು ತೋರಿಸಲು ಅಡಿ ಇಟ್ಟಿತೋ ಅಂದಿನಿಂದ ಸಮಾಜ ಕೊಳಕುಗಳ ಬೀಡಾಯಿತು. ಮುದುಕಿ, ವಿದ್ಯಾರ್ಥಿನಿ,ಹೆಣ್ಣು ಮಗು, ಮಹಿಳೆ, ಕನ್ಯೆ, ಬೆಡಗಿ, ಅಜ್ಜಿ ಎಲ್ಲರೂ ತೃಷೆ ತೀರಿಸಿಕೊಳ್ಳುವ ಶೋಕಿ ವಸ್ತುಗಳಾದರು. ಜೊತೆಗೆ ಜನರ ತಪ್ಪನ್ನು ತಿದ್ದಿ ಸರಿಪಡಿಸಬೇಕಾದ ಮಾಧ್ಯಮಗಳು ಖಾಸಗಿಯಾಗಿ ಹೆಚ್ಚಿ ತಮ್ಮ ಟಿ ಆರ್ ಪಿ ಗಾಗಿ ಸಾಯುತ್ತಿರುವ, ಸತ್ತ, ರೇಪ್ ಕೇಸ್ ಕೂಡಾ ಲೈವ್ ಆಗಿ ತೋರಿಸುವ (ಮೊದಲು ಹೀಗೆ ಇರಲಿಲ್ಲ) ಕೆಳ ಮಟ್ಟಕ್ಕೆ ಇಳಿದಾಗ ಜನರಿಗೂ ಅದರಲ್ಲೂ ಮಕ್ಕಳಿಗೂ ಬದುಕು ಬೇಡ ಎಂದು ಆದಾಗ ಹೇಗೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಅಂಶಗಳನ್ನು ಕಲಿಯಲು ಸುಲಭ ಮಾರ್ಗ ಸಿಕ್ಕಿ, ಒಹೋ ಬದುಕು ಬೇಡ ಎಂದರೆ ಸಾಯುವುದು ಇಷ್ಟು ಸುಲಭ ಅನ್ನಿಸಿಬಿಟ್ಟಿತು. ಈಗಂತೂ ಎರಡನೇ ತರಗತಿಯ ಮಗು ಒಂದು ನನಗೆ ಬದುಕು ಬೇಡ ನಾನು ಸಾಯಬೇಕು ಅನ್ನುವ ಮಟ್ಟಕ್ಕೂ ಬದುಕು ನಿಂತು ಬಿಟ್ಟಿದೆ.
ನಾ ತಿರುವಿನ ವಿಚಾರಕ್ಕೆ ಬರಬೇಕಲ್ಲ, ವಿಷಯಾಂತರ ಆಯ್ತೇನೋ. ಅದೇ ಘಾಟ್ ಸೆಕ್ಷನ್. ಮಾಳ ಘಾಟಿ ಕಳೆದು ದಕ್ಷಿಣ ಕನ್ನಡ ಬಿಟ್ಟು ಚಿಕ್ಕಮಗಳೂರು ಪ್ರವೇಶಿಸುವುದು ಕುದುರೆಮುಖದ ದಾರಿಯಲ್ಲೇ. ಅದೇ ಈ ಜಿಲ್ಲೆಯ ಒಂದು ಬದಿಯ ಹೆಬ್ಬಾಗಿಲು. ಅಂದದ ಹಸಿರಿನ ಪರಿಸರದ ಸವಿ ಸವಿಯಲು ಬರುವ ಪ್ರವಾಸಿಗರು ಅದೆಂತೋ. ಆ ದಾರಿಯಲ್ಲಿ ಗಾಡಿ ಓಡಿಸುವುದು ಕೂಡಾ ಒಂದು ಥ್ರಿಲ್ಲಿಂಗ್. ದೂರದ ಉತ್ತರ ಭಾರತದಿಂದ ನಿಟ್ಟೆ ಕಾಲೇಜಿನಲ್ಲಿ ಬಂದು ಓದುತ್ತಿದ್ದ ಅದೆಷ್ಟೋ ಹೆಣ್ಣು ಗಂಡು ಮಕ್ಕಳು ಬೈಕ್, ಕಾರು ಹತ್ತಿ ಜಾಲಿ ರೈಡ್, ಲಾಂಗ್ ಡ್ರೈವ್ ಅಂತೆಲ್ಲಾ ಹೆಣ್ಣುಗಳನ್ನು ಕರೆದುಕೊಂಡು ಕುದುರೆಮುಖದ ತಿರುವುಗಳಲ್ಲಿ ಫಾಸ್ಟ್ ಬಂದು ಅದೆಷ್ಟು ಅಪಘಾತ, ಅದೆಷ್ಟು ಪ್ರಾಣ ಹಾನಿ, ಜೊತೆಗೆ ಅಲ್ಲಿರುವ ಭದ್ರಾ ನದಿಗೆ ಖುಷಿಗಾಗಿ ಈಜಲು ಹೋಗಿ ನದಿಗೆ ಬಿದ್ದು ಅದೆಷ್ಟು ಜನರ ಪ್ರಾಣ ಹೋಗಿದೆಯೋ ದೇವರಿಗೇ ಗೊತ್ತು.
ನಮ್ಮ ಮನೆಯ ಮೊದಲು ಹೆಚ್ಚು ಕಮ್ಮಿ ಅರ್ಧ ಕಿಲೋ ಮೀಟರ್ ದೂರದಲ್ಲಿ ಒಂದು ಬಾರ್ ಇತ್ತು. ಸಿಂಗ್ಸಾರ್ ಎಂದು ಹೆಸರು ಅಲ್ಲಿಗೆ. ಕುದುರೆಮುಖ ಕೇಂದ್ರ ಸರಕಾರದ ಒಡೆತನದಲ್ಲಿ ಇದ್ದುದರಿಂದ ಅಲ್ಲಿನ ಕಾರ್ಖಾನೆ ಕೆಲಸಗಾರರಿಗೆ ಊರಿನ ಜನರ ಹೆಚ್ಚು ಪರಿಚಯ ಇಲ್ಲ. ಅವರು ತುಂಬಾ ಸಂಬಳ ಪಡೆಯುವವರು, ಊರಿನವರು ಕೂಲಿ ಮಾಡಿ ತಿನ್ನುವ ಬಡವರು. ಹಾಗಾಗಿ ಊರಿನ ಜನ ಅವರಿಗೆ ಜೇನುತುಪ್ಪ, ತುಪ್ಪ ಹಾಲು, ಮೊಸರು, ಮಜ್ಜಿಗೆ, ಮಾವಿನ ಕಾಯಿ ಇದನ್ನೆಲ್ಲ ಮಾರಿ ಒಂದಷ್ಟು ದುಡ್ಡು ಗಳಿಸಿಕೊಳ್ಳುತ್ತಿದ್ದರು. ಸ್ವಲ್ಪ ಕಂಪನಿಯ ಸಹಾಯವೂ ಸಿಗುತ್ತಿತ್ತು. ಕೆ ಐ ಓ ಸಿ ಎಲ್ ಆಗ ಕುದುರೆಮುಖದಲ್ಲೂ ಇದ್ದು, ಈಗ ಮಂಗಳೂರಿನಲ್ಲಿ ಮಾತ್ರ ಇದೆ. ಕುದುರೆಮುಖ ಹಿಲ್ ಸ್ಟೇಷನ್ ಆಗಿದ್ದು, ಚಳಿ ಮಳೆ ಹೆಚ್ಚೆಂಬ ಅಂಶ ಬಿಟ್ಟರೆ ಉತ್ತಮ ಪ್ರಕೃತಿಯ ಸೌಂದರ್ಯದ ಬೀಡು. ಬದುಕಲು ಕೇಂದ್ರ ಸರಕಾರದ ಕೆಲಸ, ಇರಲು ಕ್ವಾಟ್ರಸ್ ಗಳು, ಮಕ್ಕಳ ಓದಿಗೆ ಉತ್ತಮ ಶಾಲೆಗಳು, ಅವರವರ ಲೆವೆಲ್ ಗೆ ತಕ್ಕಂತೆ ಓದಿಸಬಹುದಿತ್ತು. ಅಲ್ಲಲ್ಲಿ ಬೇಕಾದ್ದು ತೆಗೆದುಕೊಳ್ಳಲು ಮಾರ್ಕೆಟ್ ಗಳು. ಹೆಚ್ಚಿನ ಶಾಪಿಂಗ್ ಗೆ ಮಂಗಳೂರು, ಉಡುಪಿ, ಕಳಸ, ಚಿಕ್ಕಮಗಳೂರು, ಮೂಡಿಗೆರೆ ಅಂತ ಜನ ಓಡಾಡುತ್ತಿದ್ದರು. ಶಿಸ್ತಿನ ಬದುಕು. ತಾಯಿ ಮಕ್ಕಳನ್ನು ಸಾಕುವ ರೀತಿ ಕಂಪನಿ ತನ್ನ ಕೆಲಸಗಾರರು ಹಾಗೂ ಅವರ ಕುಟುಂಬವನ್ನು ಕಾಯುತ್ತಿತ್ತು. ಕೆಲಸ ಇಲ್ಲದ ಅಕ್ಕ ಪಕ್ಕದ ಹಳ್ಳಿಯ ಜನರು ವಿದ್ಯೆಯೂ ಇಲ್ಲದೆ ಕಷ್ಟ ಪಡುತ್ತಲೇ ಇದ್ದರು. ಮನೆಗೆ ಒಬ್ಬರಿಗೆ ಊರಿನಲ್ಲಿ ಕೆಲಸ ಕೊಟ್ಟರೂ ಕೆಲವೊಂದು ಮನೆಗಳ ಜನರು ಅಜ್ಞಾನದಿಂದಾಗಿ ಮಿಸ್ ಆಗಿದ್ದರು. ಅವರ ಬದುಕು ಅಸಹನೀಯವಾದ ಸ್ಥಿತಿಯಲ್ಲಿ ಇತ್ತು. ಇದಕ್ಕೆ ನಾವೂ ಹೊರತಾಗಿ ಇರಲಿಲ್ಲ. ಒಂದೊಂದು ಪೈಸೆ ದುಡ್ಡಿಗೂ ಕಷ್ಟ ಪಡುವ, ಪರದಾಡುವ ಕಷ್ಟ ನಮ್ಮದಾಗಿತ್ತು. ಬೆಳಗ್ಗೆ ಶಾಲೆಗೆ ಹೋಗಲು ಒಬ್ಬರಿಗೆ ಎಪ್ಪತ್ತ ಐದು ಪೈಸೆ ಬಸ್ ಚಾರ್ಜ್. ಮೂರು ಜನಕ್ಕೆ ಎರಡು ರೂಪಾಯಿ ಇಪ್ಪತ್ತೈದು ಪೈಸೆ. ಮತ್ತೆ ಹಿರಿಯರಿಗೆ ಒಂದೂವರೆ ರೂಪಾಯಿ. ಅಲ್ಲಿಗೆ ಮೂರು ರೂಪಾಯಿ ಎಪ್ಪತ್ತೈದು ಪೈಸೆ. ಪ್ರತಿ ದಿನ ಇದಕ್ಕಾಗಿ ಪರದಾಡಿದ ಆ ಕಷ್ಟ ಅದೆಷ್ಟೋ. ಅದರ ಜೊತೆಗೆ ಸಂಜೆಯ ಮೂರು ರೂಪಾಯಿ ಎಪ್ಪತ್ತೈದು ಪೈಸೆ. ದಿನಕ್ಕೆ ಏಳೂವರೆ ರೂಪಾಯಿಯ ಹಾಗೆ ತಿಂಗಳಿಗೆ ಇನ್ನೂರ ಇಪ್ಪತ್ತ ಐದು ರೂಪಾಯಿ, ಆದಿತ್ಯವಾರ ಹೊರತುಪಡಿಸಿದರೆ ಇನ್ನೂರ ಇಪ್ಪತ್ತು ರೂಪಾಯಿ. ಅದನ್ನು ಹೊಂದಿಸಲು ನಾವು ರಸ್ತೆಯಲ್ಲಿ ನಿಂತು ಬಂದ ಹೋದ ಟೂರಿಸ್ಟ್ ವಾಹನಗಳಿಗೆ ಪೇರಳೆ ಹಣ್ಣು ಮಾರುವುದು, ರಜಾ ದಿನಗಳಲ್ಲಿ ಸಣ್ಣಪುಟ್ಟ ಕೆಲಸಕ್ಕೆ ಹೋಗುವುದು, ದಾರಿಯುದ್ದಕ್ಕೂ ಬಿದ್ದ ಸೆಗಣಿ ಹೆಕ್ಕಿ ಸಂಗ್ರಹಿಸಿ ತೋಟದ ಮಾಲೀಕರಿಗೆ ಬುಟ್ಟಿ, ಟ್ರಾಕ್ಟರ್, ಲೋಡ್ ಲೆಕ್ಕದಲ್ಲಿ ಮಾರಾಟ ಮಾಡುವುದು, ಗುಜಿರಿ (ಹಳೆಯ ಬಾಟಲಿ, ಕಬ್ಬಿಣ, ಪ್ಲಾಸ್ಟಿಕ್, ಪುಸ್ತಕ) ಇವನ್ನೆಲ್ಲ ಹೆಕ್ಕಿ ತಂದು ಸ್ಟಾಕ್ ಇಟ್ಟು ಅದನ್ನು ಮಾರುವುದು, ಇವೆಲ್ಲ ನಮ್ಮ ಸೈಡ್ ಇನ್ ಕಮ್ ದಾರಿಗಳು. ಆಗ ನಾಚಿಕೆ ಗಿಂತಲೂ ದೊಡ್ಡದಾದ ಅನಿವಾರ್ಯತೆ ಎಂಬ ಅಂಶದ ಜೊತೆಗೆ ಬಡತನ ಎಂಬ ಭೂತ ನಮ್ಮನ್ನು ಕಾಡುತ್ತಲೇ ಇತ್ತು. ಕುಟುಂಬದ ಆಧಾರಕ್ಕೆ ಒಂದಷ್ಟು ದನಗಳು. ಕಷ್ಟಪಟ್ಟು ಅವುಗಳ ಹಾಲು ತೆಗೆದು ಮಾರಿದರೆ ಅರ್ಧ ಹಣ ಅವುಗಳ ಆಹಾರಕ್ಕೆ, ಇನ್ನರ್ಧ ಹಣ ಅವುಗಳ ಡಾಕ್ಟರ್ ಗೆ, ಉಳಿದರೆ ಮಾತ್ರ ನಮ್ಮ ಹೊಟ್ಟೆ ತುಂಬುತ್ತಿತ್ತು. ಹಲವಾರು ಹೊತ್ತು ಪೇರಳೆ ಹಣ್ಣುಗಳೆ ನಮ್ಮ ಆಹಾರ. ಅದಲ್ಲದೆ ಆ ಗುಡ್ಡದಲ್ಲಿ ಸಿಗುವ ಈಚಲ ಹಣ್ಣುಗಳು, ಸಕ್ಕರೆ ಹಣ್ಣು, ಹಲಸಿನ ಹಣ್ಣು, ಮಾವಿನ ಹಣ್ಣು ನಮ್ಮ ಹಸಿವನ್ನು ಇಂಗಿಸುವ ವಿವಿಧ ಆಹಾರಗಳು. ಈಗಿನಂತೆ ಚೇಂಜ್ , ಟೈಮ್ ಪಾಸ್ ಗಾಗಿ ಹೋಟೆಲ್ ನಲ್ಲಿ ತಿನ್ನಲು ಹೋಟೆಲ್ ಗಳೂ ಇರಲಿಲ್ಲ, ದುಡ್ಡು ಕೂಡಾ ಇರಲಿಲ್ಲ. ನಾವು ಆ ಸಂಸ್ಕೃತಿಯಲ್ಲಿ ಬೆಳೆಯಲೂ ಇಲ್ಲ. ಕಷ್ಟಪಡು, ಓದು, ಏನಾದರೂ ಸಾಧಿಸು ಅಷ್ಟೇ.
ಆ ದಾರಿ ತಿರುವು ಮುರುವು ಆದ್ದರಿಂದ ನಮ್ಮ ಮನೆಯ ಸ್ವಲ್ಪ ದೂರದ ಸಿಂಗ್ಸಾರ್ ನಲ್ಲಿ ಇದ್ದ ಬಾರ್ ನಲ್ಲಿ ಕುಡಿದು ಟೈಟ್ ಆಗಿ ನೆಟ್ಟಗೆ ಗಾಡಿ ಓಡಿಸಿಕೊಂಡು ಬಂದು ನಮ್ಮ ಮನೆಯ ಎಡ ಬದಿಯಲ್ಲಿ ಇದ್ದ ದೊಡ್ಡ ತಿರುವು (ಟರ್ನ್) ಬಳಿ ಒಮ್ಮೆಲೆ ಗಾಡಿಯನ್ನು ಎತ್ತರಕ್ಕೆ ಏರಿಸಲು ಆಗದೆ ಪಕ್ಕದ ದೊಡ್ಡ ಚರಂಡಿಗೆ ಗಾಡಿ ಸಮೇತ ಬೀಳುವವರ ಸಂಖ್ಯೆ ಏನೂ ಕಡಿಮೆ ಆಗಿರಲಿಲ್ಲ! ಬಾರ್ ಪಕ್ಕದಲ್ಲೇ ಜನರಿಗೆ ಬೇಕಾದ ಎಲ್ಲಾ ಐಷಾರಾಮಿ ವ್ಯವಸ್ಥೆಗಳೂ ಇರುತ್ತವೆ ಅಲ್ವಾ..ಹಾಗೆ ಅಲ್ಲಿ ಹೋಗಿ ಖುಷಿಯಲ್ಲಿ ಬಂದವರು ಅದೆಷ್ಟೋ ಜನ ಈ ತಿರುವಿನಲ್ಲಿ ಬಿದ್ದು ನೇರವಾಗಿ ಸ್ವರ್ಗಕ್ಕೆ ಹೋದ ದಾಖಲೆಗಳು ಅಲ್ಲಿವೆ. ಆದರೆ ಅವರಿಗೆಲ್ಲ ನೀರು ಕೊಡುವ ಕಾರ್ಯ ನಮ್ಮ ಕುಟುಂಬದ್ದು ಆಗಿರುತ್ತಿತ್ತು. ಕಾರಣ ಅಲ್ಲಿ ಬೇರೆ ಯಾವುದೇ ಮನೆಗಳು ಇರಲಿಲ್ಲ. ಕರೆದು ಕೇಳುವವರೂ ಇರಲಿಲ್ಲ. ಹೀಗೆ ಹಲವಾರು ಅಪಘಾತಗಳನ್ನು ಕಣ್ಣಾರೆ ಕಂಡ ನನಗೆ ಕಾರ್ ಗಳ ಕ್ರೇಜ್ ಇದ್ದರೂ ಆ ಭಯ ಇನ್ನೂ ಇದೆ. ನಾ ಕಾರ್ ಡ್ರೈವಿಂಗ್ ಕಲಿತರೂ ಒಮ್ಮೆಯೂ ಕಾರ್ ಓಡಿಸಲಿಲ್ಲ, ಬಿಡಿ ಟೂ ವೀಲರ್ ಕೂಡಾ ಭಯವೇ ನನಗೆ. ಅದೆಷ್ಟೋ ಗೆಳೆಯರು ನೀನು ವೇಸ್ಟ್ ಎಂದರೂ ಚಿಕ್ಕಂದಿನಿಂದ ನೋಡಿದ ಆ ಭಯ ಹೋಗದು. ಆ ತಿರುವಿನಲ್ಲಿ ಇದ್ದ ಒಂದು ಮರವನ್ನು ಕಡಿದ ಬಳಿಕ ರಸ್ತೆ ಸರಿಯಾಗಿ ಕಂಡು ಅಲ್ಲಿ ಅಪಘಾತ ಕಡಿಮೆ ಆಯಿತು. ಮರ ಕಡಿದ ಅಪ್ಪನಿಗೆ ಒಂದು ವಾರ ಜ್ವರ ಬಂತು ಎಂಬ ಅಮ್ಮ ಹೇಳಿದ ಮಾತು ಈಗಲೂ ನೆನಪಿದೆ. ಅದೇ ಟರ್ನ್ ನಲ್ಲಿ ನನ್ನ ತಮ್ಮ ಮೂರೋ ನಾಲ್ಕೋ ವರ್ಷದವ ಇರುವಾಗ ಲೂನಾ ಬರುವಾಗ ಅಡ್ಡ ಓಡಿ ಅದರ ಅಡಿಗೆ ಬಿದ್ದು ಕಾಲು ಫ್ರಾಕ್ಚರ್ ಆಗಿದ್ದು ಕೂಡಾ ಇನ್ನೂ ನೆನಪಿದೆ.
ಆ ತಿರುವಿನಲ್ಲಿ ಹೋದ ಜೀವಗಳು ಅದೆಷ್ಟೋ. ಕೈ ಕಾಲು ಕಳೆದುಕೊಂಡವರು ಎಷ್ಟೋ. ಸ್ವಲ್ಪ ಮುಂದೆ ಅಪ್ ನಲ್ಲಿ ಇದ್ದ ಜೇಪಿಯ ಶಿವ ದೇವಸ್ಥಾನಕ್ಕೆ ಆಗಾಗ ಹೋಗಿ ಪರಿಸರ, ಬೆಟ್ಟಗಳ ವೀಕ್ಷಣೆ ನನ್ನ ಇಷ್ಟದ ಹವ್ಯಾಸಗಳಲ್ಲಿ ಒಂದಾಗಿತ್ತು. ಅಲ್ಲಿ ಶಿವನ ಬಳಿ ಯಾರಿಗೂ ಮುಂದೆ ಅಪಘಾತ ಆಗಬಾರದು ಎಂದು ಕೇಳಿಕೊಂಡಿದ್ದು ಅದೆಷ್ಟು ಬಾರಿಯೋ. ಬೆಳಿಗ್ಗೆ ಅಲ್ಲಿಂದ ಬರುವ ಓಂ ಜೈ ಜಗದೀಶ ಹರೇ… ಹಾಡೆ ನಮ್ಮನ್ನು ಎಬ್ಬಿಸುವ ಅಲಾರಂ.
ಆ ತಿರುವಿನ ಅಪಘಾತಗಳ ನೋಡಿ, ಅಲ್ಲಿನ ಭೂತಗಳ ಕಥೆಗಳ ಕೇಳಿ ಸತ್ಯವೋ ಸುಳ್ಳೋ ಅರ್ಥ ಆಗದೆ ಹೆದರಿ ರಸ್ತೆ ದಾಟಲು ಕೂಡಾ ಅಲ್ಲಿ ಹೆದರುತ್ತಿದ್ದುದು ನೆನೆಸಿದಾಗ ಈಗಲೂ ನಗು ಬರುತ್ತದೆ. ವಿದ್ಯಾರ್ಥಿ ಜೀವನದ ನೆನಪುಗಳು ಅದೆಷ್ಟು ಗಾಢ ಅಲ್ಲವೇ? ನೀವೇನಂತೀರಿ?
—————————–
ಹನಿಬಿಂದು
ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.