ದಮಯಂತಿ ನರೇಗಲ್ ಅವರ ಕಾದಂಬರಿ-ನಾನು ತಾಯಿ

ಪುಸ್ತಕ ಸಂಗಾತಿ

ದಮಯಂತಿ ನರೇಗಲ್ ಅವರ

ಕಾದಂಬರಿ-ನಾನು ತಾಯಿ

ಅವಲೋಕನಸುಜಾತಾ ರವೀಶ್

ನಾನು ತಾಯಿ _ ಕಾದಂಬರಿ
ಲೇಖಕಿ _  ದಮಯಂತಿ ನರೇಗಲ್
ಪ್ರಕಾಶಕರು _ ಅವನಿ ರಸಿಕರ ರಂಗ ಪ್ರಕಾಶನ
ಪ್ರಥಮ ಮುದ್ರಣ _ ೨೦೧೭

ಕನ್ನಡದ ಲೇಖಕಿಯರ ಪೈಕಿ ಸತ್ವಯುತ ಬರವಣಿಗೆಗೆ ಗುರುತಿಸಿಕೊಂಡಿರುವವರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಪ್ರೊಫೆಸರ್ ಡಾ ದಮಯಂತಿ ನರೇಗಲ್ ಅವರು . ಹತ್ತೊಂಬತ್ತು ನವೆಂಬರ್ ೧೯೩೭ ರಲ್ಲಿ ಜನಿಸಿದ ಇವರ ತಂದೆ ಓ ದುರ್ಗರಾವ್ ಹಾಗೂ ತಾಯಿ ಪುಷ್ಪವತಿ ಬಾರ್ಗಂಡಿ . ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ಮುಗಿಸುವ ಇವರು ಕಾಲೇಜು ಹಾಗೂ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ಕಾಲೇಜು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿ ಪಡೆಯುತ್ತಾರೆ.
೧೯೬೨ ರಲ್ಲಿ ಶ್ರೀ ಪ್ರಸನ್ನ ನರೇಗಲ್ ಅವರನ್ನು ವಿವಾಹವಾಗುವ ಇವರು ನಂತರ ತಮ್ಮ ಜೀವನದ ಸುದೀರ್ಘ ಮೂವತ್ತೈದು ವರ್ಷಗಳನ್ನು ಮುಂಬಯಿಯಲ್ಲಿ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಾ ಕಳೆಯುತ್ತಾರೆ ಇವರ ಮಾವನವರಾದ ಪ್ರಹ್ಲಾದ್ ನರೇಗಲ್ ಅವರು ಬೇಂದ್ರೆ ಹಾಗೂ ಗೋಕಾಕರ ಅವರ ಸ್ನೇಹಿತರ ಬಳಗದಲ್ಲಿ ಇದ್ದವರು ಎಂಬುದು ವಿಶೇಷ . ಸಂಖ್ಯಾಶಾಸ್ತ್ರ ಅಭ್ಯಸಿಸಿ  ಬೋಧಿಸಿದ ಇವರ ಬರವಣಿಗೆಗಳು ಗಣಿತದ ಸೂತ್ರಗಳಂತೆಯೇ ಸ್ಪಷ್ಟ ನಿಖರ ಹಾಗೂ ಕರಾರುವಕ್ಕು. ೧೯೯೯ ರಲ್ಲಿ ನಿವೃತ್ತಿಯಾಗಿ ಧಾರವಾಡದ ಸಾಧನಕೇರಿಯಲ್ಲಿ ನೆಲೆಸಿದ ಇವರು ಬರವಣಿಗೆ ಆರಂಭಿಸಿ ಸಾಧನಕೇರಿಯ ಸಾಧನೆಯ ಗರಿಯಾದರು. ಒಟ್ಟು 5ಕಾದಂಬರಿ 2ಕವನ ಸಂಕಲನ 7ನಾಟಕ 2ಜೀವನ ಚರಿತ್ರೆ ಹಾಗೂ 1ಅನುವಾದ ಕೃತಿಗಳನ್ನು ರಚಿಸಿರುವರು.ಇವರ ಯಯಾತಿ ಪ್ರಸಂಗ ಕಾದಂಬರಿ ಮಾಸ್ತಿ ಪ್ರಶಸ್ತಿ ಸಮಿತಿಯ ಬಹುಮಾನ ಪಡೆದಿದೆ ಇವರ ಇನ್ನೊಂದು ಕಾದಂಬರಿ ತ್ರಿವೇಣಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ದೊರಕಿದೆ . ಗಂಗಾವತರಣ ಗಂಗೂಬಾಯಿ ಹಾನಗಲ್ ಅವರ ಜೀವನ ಚರಿತ್ರೆ ಆದರೆ ಕಲಾತಪಸ್ವಿ ಪಿಬಿ ಹಾಲಭಾವಿ ಅವರ ಜೀವನ ಚರಿತ್ರೆಯು ಇವರ ಲೇಖನಿಯಿಂದ ಮೂಡಿ ಬಂದಿದೆ . ಮೂಲ ಅರವಿಂದ ಗಜೇಂದ್ರಗಡ ಅವರ ಕೃತಿ ಅನುವಾದಿಸಿ “ಏನು ಜನ ಎಂಥ ಗಾನ” ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದಿದ್ದಾರೆ .

ಕಾರಣಾಂತರಗಳಿಂದ ಎಂಭತ್ತರ ದಶಕದಲ್ಲಿ ಒಮಾನ್ ದೇಶದ ರಾಜಧಾನಿಯಾದ ಮಸ್ಕತ್ ಪಟ್ಟಣದಲ್ಲಿ ಒಂದೆರಡು ವರ್ಷ ವಾಸವಾಗುವ ಸಂಧರ್ಭದಲ್ಲಿ ಅಲ್ಲಿನ ಜನರ ಸಂಸ್ಕೃತಿಯ ಬಗ್ಗೆ ಅಲ್ಲಿದ್ದ ಅಸಂಖ್ಯಾತ ಭಾರತೀಯರ ಶೈಲಿಯ ಬಗ್ಗೆ ಹಾಗೂ ಅಲ್ಲಿನ ಅನುಭವಗಳ ಬಗ್ಗೆ 1ಪ್ರವಾಸ ಕಥನ ಬರೆಯಬೇಕೆಂದು ಇತ್ತಂತೆ . ಹಾಗೆಯೇ ಅಲ್ಲಿನ ವಿಚಿತ್ರ ಕಾನೂನು ಅತ್ಯಾಚಾರಕ್ಕೊಳಗಾಗಿ ಸಂಕಟಪಡುವ ಮಹಿಳೆಯರನ್ನೇ ಅಪರಾಧಿಗಳ ಕಟಕಟೆಯಲ್ಲಿ ನಿಲ್ಲಿಸುವ ವೈಚಿತ್ರ್ಯದ ಬಗ್ಗೆಯೂ ಮನಸ್ಸು ತಳಮಳಗೊಂಡಿತ್ತಂತೆ. ಇವೆರಡೂ ಎಳೆಗಳನ್ನು ಸೇರಿಸಿ ತಮ್ಮ ಕಲ್ಪನೆಯ ನೇಯ್ಗೆಯಲ್ಲಿ ಅಂದವಾಗಿ ಹೆಣೆದು  ಕನ್ನಡದ ಓದುಗರಿಗೆ ಕೊಟ್ಟ ಕಾದಂಬರಿ “ನಾನು ತಾಯಿ”.

ಬೇಂದ್ರೆಯವರು ಶ್ರೀಮಾತೆಯವರಿಗೆ ಹೇಳಿದ ಈ ನುಡಿಗಳು ಎಲ್ಲಾ ತಾಯಂದಿರಿಗೂ ಅನ್ವಯಿಸುವಂತೆ ಯೇ ಇದೆ .

ನಿನ್ನ ನೋಟವೇ ಹಾಲು
ತಾಯಿ ನೀನು
ಕಂಗಳಿಂದಲೇ ಕುಡಿವೆ
ಕೂಸು ನಾನು

ಕಂಗಳಿಂದಲೇ ನುಡಿವೆ
ತಾಯಿ ನೀನು
ನನ್ನ ಕಣ್ಣೇ ಕಿವಿಯು
ಕವಿಯು ನಾನು  

ಪ್ರಪಂಚದ ಎಲ್ಲಾ ಅನುಬಂಧಗಳಲ್ಲಿ ಶ್ರೇಷ್ಠವಾದದ್ದು ತಾಯಿ ಮಕ್ಕಳ ಸಂಬಂಧ ಬೇರೆಲ್ಲ ಸಂಬಂಧಗಳು ಜನನವಾದ ನಂತರ ಶುರುವಾದರೆ ಅದಕ್ಕಿಂತ 9 ತಿಂಗಳ ಮುಂಚೆಯೇ ಕರುಳಬಳ್ಳಿಯ ಬೆಸುಗೆ ಆರಂಭವಾಗಿರುತ್ತದೆ. ಮಾತೃತ್ವ ಎಂಬುದು ಹೆಣ್ಣಿಗೆ  ವಿಶಿಷ್ಟ ವರ; ಜೀವನದ ಸಾರ್ಥಕ್ಯದ ದ್ಯೋತಕ . ಅಂತಹ ತಾಯಿ ಮಕ್ಕಳ ಸಂಬಂಧದ ಬಗ್ಗೆ ತಮ್ಮದೇ ಆದ ಬಿಗಿ ಹಿಡಿತದ ಬರವಣಿಗೆಯಲ್ಲಿ ತುಂಬ ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ . ಹಾಗೆ ನೋಡಿದರೆ ಅಮ್ಮ ಮಗು ಎಂದಕೂಡಲೇ ಭಾವುಕತೆಯ ಅನಾವರಣ ಆಡಂಬರ ಅತಿರೇಕ ಇರಬಹುದು ಅನ್ನಿಸಿದರೂ ಅವುಗಳ ಸುಳಿವಿಲ್ಲದೆ ನೇರ ದಿಟ್ಟ ಶೈಲಿಯಲ್ಲಿ ಅನಾವಶ್ಯಕ ವಿವರ  ಸಂಭಾಷಣೆಗಳಿಲ್ಲದೆ  matter of fact ರೀತಿಯಲ್ಲಿ ಕಥೆ ಕಟ್ಟಿರುವ ರೀತಿ ಅಸದೃಶ ಅನನ್ಯ .

ಈ ಕಥೆಯಲ್ಲಿ ನಾಯಕಿ ಸುನೀತಾ, ಅವಳ ಗೆಳತಿಯರಾದ ಸಾಅ ಹಾಗೂ ರೇಣು ಸಹ ಈ ಮಾತೃತ್ವದ     ವೇದಿಕೆಯಲ್ಲಿ “ನಾನು ತಾಯಿ” ಎಂದು ತಮ್ಮನ್ನು ತಾವು ವ್ಯಾಖ್ಯಾನಿಸಿಕೊಳ್ಳುವ ಈ ರೀತಿ ಚಿತ್ರಣವಾಗಿದೆ. ಇದರ ಶೀರ್ಷಿಕೆ ಸಹ ವಿಭಿನ್ನ. ಹೆಣ್ಣು ನಾನು ತಾಯಿ ಎಂದು ಸಂತಸದಿಂದ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ ;ತನ್ನ ಕರ್ತವ್ಯಗಳನ್ನು ನಿಭಾಯಿಸುವ ಅಭಿಮಾನದಲ್ಲಿ ಹೇಳಿಕೊಳ್ಳುತ್ತಾಳೆ; ತನ್ನೆಲ್ಲಾ ಕೃತ್ಯಗಳನ್ನು ಅತಿಶಯಿಸುವ ಗೋಜಿಗೆ ಹೋಗದೆ ತನ್ನ ಧರ್ಮ ಅದುವೇ ಎಂದು ಹೇಳುವ ವಿನೀತ ಭಾವದಲ್ಲೂ ನುಡಿಯುತ್ತಾಳೆ . ಒಂದೇ ಪದಗುಚ್ಛ ಕೊಡುವ ಅರ್ಥಗಳು ಅನೇಕ .

 “ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ”  ಎಂಬ ಮಾತಿಗೆ ಪ್ರತ್ಯಕ್ಷ ಉದಾಹರಣೆ ಇಲ್ಲಿನ ಸ್ತ್ರೀ ಪಾತ್ರಗಳಾದ ಸುನೀತಾ ಸಾರಾ ಮತ್ತು ರೇಣು.  

ಮಾಯಾನಗರಿ ಮುಂಬಯಿಯಲ್ಲಿ 1ಮನೆ ಮಾಡುವ ಕನಸು ಪ್ರತಿಯೊಬ್ಬ ಮಧ್ಯಮವರ್ಗದ ದಂಪತಿಗಳದು .ಕೆಲವೊಮ್ಮೆ ಮದುವೆಯಾಗಲು ಸಹ ಮನೆ ಇಲ್ಲದ್ದು ಅಡ್ಡಿಯಾಗುತ್ತದೆ. ಈ ಬವಣೆ ಅನುಭವಿಸುವ ಜೋಡಿಗಳು ಸುನೀತಾ ಪ್ರಭಾಕರ ಹಾಗೂ ಸಾರಾ ಮತ್ತು ಮುರಳಿ .
ಸಾರಾ ಮತ್ತು ಮುರಳಿ ಮಸ್ಕತ್ನಲ್ಲಿ ದುಡಿಯಲು ನಿರ್ಧರಿಸಿ  ಮುರಳಿಗೆ ಅವಕಾಶ ಸಿಗದೆ ಸಾರಾ ಒಬ್ಬಳೇ ಅಲ್ಲಿಗೆ ಹೋಗಬೇಕಾಗುತ್ತದೆ . ಗೆಳೆಯನ ಫ್ಲ್ಯಾಟ್ ಒಂದರ ಸೌಲಭ್ಯ ಬಳಸಿಕೊಂಡು  ಪ್ರಭಾಕರ್ ಮತ್ತು ಸುನೀತಾ ಮದುವೆಯಾದರೂ 1ವರ್ಷದಲ್ಲೇ ಅದನ್ನು ಖಾಲಿ ಮಾಡಬೇಕಾದ ಪರಿಸ್ಥಿತಿ ಒದಗಿ ಮತ್ತೆ ಮನೆ ಹುಡುಕುವ ಬವಣೆಗೆ ಸಿಲುಕುತ್ತಾರೆ . ಕಡೆಗೆ ಹಣ ಒಟ್ಟು ಮಾಡುವ ಯತ್ನದಿಂದ ಪ್ರಭಾಕರನು ಮಸ್ಕತ್ನಲ್ಲಿ ದುಡಿಯಲು ಹೊರಡುತ್ತಾನೆ .  ಅವನ ಅಕ್ಕ ವೈದ್ಯೆ ವಂದನಾಳ ಸಂಸಾರ ಈಗಾಗಲೇ  ಅಲ್ಲಿರುತ್ತದೆ.  ನಾಲ್ಕೈದು ತಿಂಗಳ ಬಳಿಕ ಶಾಲೆಗೆ ರಾಜಿನಾಮೆ ನೀಡಿ ಸುನಿತಾಳು ಅಲ್ಲಿಗೆ ಹೋಗುತ್ತಾಳೆ . ಅಲ್ಲಿನ ಕಷ್ಟ ಏಕಾಂತ ಈ ಎಲ್ಲಾ ಗೊಂದಲಗಳ ಪರಿಪಾಟಲಲ್ಲೇ ಪ್ಲ್ಯಾನಿಂಗ್ ನ್ನು ನಿಲ್ಲಿಸಿ ಮಗುವಿನ ಆಗಮನಕ್ಕೆ ಸಜ್ಜಾಗಿರುತ್ತಾರೆ.
ಸುನೀತಾಳು ಅವರ ಫ್ಲ್ಯಾಟ್ ನ ಎದುರಿಗಿನ ಹೋಟೆಲ್ಲಿನಲ್ಲಿ ಒಬ್ಬ ನೀಗ್ರೋ ಝೆಂಜೋಬಾರಿ  ಜನಾಂಗದವನು ಇವಳನ್ನು ಕೆಟ್ಟ ನೋಟದಲ್ಲಿ ನೋಡುತ್ತಾ ಹಿಂಬಾಲಿಸಿ ಕಾಟ ಕೊಡುತ್ತಿರುವುದನ್ನು ಪ್ರಭಾಕರನ ಗಮನಕ್ಕೆ ತಂದಿದ್ದರೂ ಆ ದೇಶದ ಕಾನೂನಿನ ತೊಡಕಿನಿಂದ ಏನೂ ಮಾಡಲಾಗಿರಲಿಲ್ಲ . ಏತನ್ಮಧ್ಯೆ ಆ ಮನುಷ್ಯ ಫ್ಲಾಟ್ ಗೆ ನುಗ್ಗಿ ಸುನೀತಾಳ ಮೇಲೆ ಅತ್ಯಾಚಾರವೆಸಗುತ್ತಾನೆ . ಪ್ರಜ್ಞಾಹೀನ ಸ್ಥಿತಿಯಲ್ಲಿ ಸುನೀತಾಳನ್ನು ಭಾರತಕ್ಕೆ ಕರೆ ತರಲಾಗುತ್ತದೆ 3_ 4 ತಿಂಗಳಲ್ಲಿ ಮನೆಯವರ ಪರಿಶ್ರಮದಿಂದ ಅವಳು ಮಾಮೂಲು ಆಗುತ್ತಾಳೆ ಅಷ್ಟರೊಳಗೆ ಗರ್ಭಿಣಿಯೆಂದು ತಿಳಿದು ಅವಳ ಚೇತರಿಕೆ ಮತ್ತಷ್ಟು ಚುರುಕಾಗುತ್ತದೆ . ಆದರೆ ಪ್ರಭಾಕರನ ಮನೆಯವರೆಲ್ಲರ ಹೆದರಿಕೆ ಅಕಸ್ಮಾತ್ ಆ ಮಗು ಅತ್ಯಾಚಾರದ ಫಲವಾಗಿದ್ದರೆ ಎಂದು. ಹಾಗಾಗಿ ಆ ಮಗುವನ್ನು ತೆಗೆಸುವ ಯೋಜನೆ ಮಾಡಿದರೂ ಸುನೀತಾಳ ಹಠ ಹಾಗೂ ಅವಳ ಮಾನಸಿಕ ಸ್ಥಿತಿಯ ಅರಿವಿದ್ದ ವೈದ್ಯರ ನಕಾರದಿಂದ ಅದು ಸಾಧ್ಯವಾಗುವುದಿಲ್ಲ . ಕಡೆಗೆ ಅವಳು ಜನ್ಮಕೊಟ್ಟ ಮಗು ಅತ್ಯಾಚಾರದ ಫಲವೇ ಆಗಿದ್ದು ಆ ವ್ಯಕ್ತಿಯ ರೂಪವನ್ನೇ ಹೊತ್ತು ಹುಟ್ಟಿರುತ್ತದೆ. ಸ್ವೀಕರಿಸಲು ಮನಸ್ಸಿಲ್ಲದ ಪ್ರಭಾಕರ ಅವಳಿಗೆ ಡೈವೋರ್ಸ್ ಕೊಡುತ್ತಾನೆ.  ತಾಯಿಯ ಮನೆಯಲ್ಲಿ ಮಗುವಿಗೆ ಸ್ಥಾನವಿಲ್ಲವೆಂದು ಅರಿತು ಅವಳೇ ದೂರಾಗಿ 1 ಶಾಲೆಯಲ್ಲಿ ಕೆಲಸ ಹಿಡಿದು ಮಗುವನ್ನು ಸಾಕುತ್ತಾಳೆ . ಅಲ್ಲಿನ ರಾಜಕೀಯ  ಇವಳ ಬಗ್ಗೆ ಹರಡುವ ಆರೋಪಗಳು ಇವುಗಳಿಂದ ಮತ್ತೊಂದು ಶಾಲೆಗೆ ಸ್ಥಳಾಂತರಗೊಳ್ಳಬೇಕಾಗುತ್ತದೆ ಅಲ್ಲಿನ ಸಹೃದಯಿ ಅಧ್ಯಾಪಕ ಅಜಯಕುಮಾರ್ ಇವಳಿಗೆ ಪೂರ್ತಿ ಬೆಂಬಲ ನೀಡಿ ಇವಳ ಮಗ ನವೀನನಿಗೆ ಒಳ್ಳೆಯ ಗೆಳೆಯರಾಗುತ್ತಾರೆ . ಮುಂದೆ ಆ ಶಾಲೆಯಲ್ಲಿ ಇವಳ ಬಗ್ಗೆ ಪಾಲಕರು ದೂರು ಸಲ್ಲಿಸುವಾಗ ಶಾಲೆಯ ಸಂಸ್ಥಾಪಕಿ ಅವರು ಅಜಯ್ ಕುಮಾರ್ ಹಾಗೂ ಸುನೀತಾಳನ್ನು ಮದುವೆಯಾಗಲು ಸೂಚಿಸುತ್ತಾರೆ . ಅದಕ್ಕೆ ನವೀನನ ಬೆಂಬಲವೂ ಇರುತ್ತದೆ . ಆದರೆ ಅಮೇರಿಕೆಯಲ್ಲಿ ನೆಲೆಸಿರುವ ಅಜಯಕುಮಾರ್ ಅವರ ತಾಯಿ ಇಲ್ಲಿಗೆ ಬಂದಾಗ ಅಪಸ್ವರ ಏಳುತ್ತದೆ. ಮುಂದೇನಾಯಿತು ನವೀನನಿಗೆ ಅವನ ಜನ್ಮ ರಹಸ್ಯ ತಿಳಿಯಿತೆ ಸುನೀತಾ ಜಯಕುಮಾರ್ ಅವರ ವಿವಾಹವಾಗುತ್ತದೆಯೇ ಇವೆಲ್ಲವನ್ನು ತಿಳಿಯಲು ನೀವು ಕಾದಂಬರಿ ಓದಲೇಬೇಕು.

ಇನ್ನು ಸಾರಾ ಎಷ್ಟು ದುಡಿದರೂ ತವರುಮನೆಯವರ ಅತಿಯಾಸೆ ಪೂರೈಸಲು ಸಾಧ್ಯವಾಗುವುದಿಲ್ಲ.  ಮಸ್ಕತ್ ನಲ್ಲೂ ಅವಳು ಶಾಲೆಯ ಕೆಲಸ ಕಳೆದುಕೊಂಡು ಕೆಲಸದವಳಾಗಿ  ದುಡಿಯಬೇಕಾಗುತ್ತದೆ.ಅಷ್ಟರಲ್ಲಿ ಮುರಳಿ ಇಲ್ಲಿ ಬೇರೆ ಮದುವೆಯಾಗಿ ಅಲ್ಲೂ ಸಹ ನೆಟ್ಟಗೆ ಬಾಳದೆ ಕುಡುಕನಾಗಿ ಪರಿವರ್ತಿತನಾಗಿರುತ್ತಾನೆ.  
ಜೀವನದಲ್ಲಿ ಬೇಸತ್ತ ಸಾರಾ ಚರ್ಚ್ ವೊಂದರಲ್ಲಿ ಕೆಲಸಕ್ಕೆ ಸೇರುತ್ತಾಳೆ . ನಂತರದ ದಿನಗಳಲ್ಲಿ ಮತ್ತೊಬ್ಬ ವಿಧುರ ಇಬ್ಬರು ಮಕ್ಕಳ ತಂದೆಯನ್ನು ಚರ್ಚ್ ನ ಫಾದರ್ ಅವರ ಸಲಹೆಯ ಮೇಲೆ ಮದುವೆಯಾಗಿ ಆ ಮಕ್ಕಳಿಗೆ ತಾಯಿಯಾಗಿ ಸುಖಜೀವನ ನಡೆಸುತ್ತಾಳೆ.ಕಾದಂಬರಿಯುದ್ದಕ್ಕೂ ಸುನೀತಾ ಸಾರಾ ಅವರ ಸ್ನೇಹ ತುಂಬಾ ಹೃದಯಂಗಮವಾಗಿ ಮೂಡಿಬಂದಿದೆ ಒಬ್ಬರೊಬ್ಬರ ಸಂತಸದಲ್ಲಿ ದುಃಖದಲ್ಲಿ ಭಾಗಿಗಳಾಗುವ ಅರ್ಥ ಮಾಡಿಕೊಳ್ಳುವ ಪ್ರಸಂಗ ಬಂದಾಗ ಹೆಗಲಾಗುವ ರೀತಿ ಸ್ನೇಹ ಎಂದರೆ ಹೇಗಿರಬೇಕು ಎಂದೆನಿಸುತ್ತದೆ .

ಮಸ್ಕತ್ ಗೆ ಹೋಗುವಾಗ ಪ್ರಭಾಕರನ ಸಹೋದ್ಯೋಗಿ ವಿನೋದ್ ನ ಪತ್ನಿ ರೇಣು ಆತ್ಮೀಯಳಾಗುತ್ತಾಳೆ. ಅವಳ ಮಗು ಬಂಟಿಯನ್ನು ತುಂಬ ಹಚ್ಚಿಕೊಳ್ಳುವ ಸುನೀತಾ ಅಲ್ಲಿರುವಷ್ಟು ದಿನ ಅವರೊಡನೆ ತುಂಬ ಆತ್ಮೀಯಳಾಗಿರುತ್ತಾಳೆ.  ನಂತರ ಬಂಟಿ ಮಾದಕವಸ್ತು ದುರ್ವ್ಯಸನಿಯಾಗಿ ಆತ್ಮಹತ್ಯೆ ಮಾಡಿಕೊಂಡ ನಂತರ ರೇಣು
ಜರ್ಜರಿತಳಾಗಿ ಚೇತರಿಸಿಕೊಳ್ಳದೆ ಕ್ಯಾನ್ಸರ್ ಗೆ ಬಲಿಯಾಗುವ ದಾರುಣ ಕಥೆಯೂ ದುಃಖ ತರಿಸುತ್ತದೆ.

ಪ್ರಭಾಕರನ್ ನ ಅಕ್ಕ ವಂದನಾಳ ಪಾತ್ರಚಿತ್ರಣವು ಅಷ್ಟೆ ತುಂಬಾ ಸಂಯಮ ವಾಗಿ ಮೂಡಿಬಂದಿದೆ.  ತಮ್ಮ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ತಂದೆತಾಯಿಯರನ್ನು ಒಪ್ಪಿಸುವುದು, ಮುಂದೆ ಸಾರಾ ಕಷ್ಟ ಹೇಳಿಕೊಂಡು ಬಂದಾಗ ಅವಳಿಗೆ ಸಹಾಯ ಮಾಡುವುದು. ನಂತರ ಸುನೀತಾ ಅತ್ಯಾಚಾರಕ್ಕೆ ಒಳಗಾದ ವಿವೇಚನೆಯಿಂದ ಕಾರ್ಯನಿರ್ವಹಿಸಿ ಅವಳನ್ನು ಭಾರತಕ್ಕೆ ಕರೆತರುವುದು ಇವೆಲ್ಲ ಅವಳ ವೃತ್ತಿಪರ ಮನೋಭಾವ ಹಾಗೂ ಮಾನವೀಯ ಗುಣಗಳ ದ್ಯೋತಕವಾಗಿದೆ. ಇಷ್ಟೆಲ್ಲಾ ಇದ್ದು ಮಗಳು ಮೋನಾಳ ಪ್ರೀತಿ ಪ್ರಸಂಗದಲ್ಲಿ ಮಾಮೂಲಿ ಪೋಷಕರಂತೆ ವರ್ತಿಸಿ ಪರಿಸ್ಥಿತಿ ಕೈ ಮೀರಿದಾಗ ಸಾರಾಳ ಮಧ್ಯಸ್ಥಿಕೆಯಿಂದ ಸುಖಾಂತ್ಯವಾಗುವುದು
ವಿಶೇಷ.

ಮುಂಬಯಿ ಜೀವನದ ಲೋಕಲ್ ರೈಲುಗಳ ಓಡಾಟ ಮನೆಗಾಗಿ ಪಡುವ ಬವಣೆ ಫ್ಲ್ಯಾಟ್ ಗಳ ವಿವರ ಇವೆಲ್ಲವೂ ಮಾಯಾನಗರಿಯ ವಾಸ್ತವತೆಯನ್ನು ಬಿಚ್ಚಿ ತೋರಿಸುತ್ತದೆ .     ಶಿಕ್ಷಕಿಯಾಗಿ ಸುನೀತಳ ಅನುಭವವೂ ಅಷ್ಟೇ . ಲೇಖಕಿಯವರ ಸುಧೀರ್ಘ ಮುಂಬಯಿ ವಾಸ ಹಾಗೂ ಪ್ರಾಧ್ಯಾಪಕಿಯ ಅನುಭವ ಇಲ್ಲಿ ದಟ್ಟವಾಗಿ ವ್ಯಾಪಿಸಿರುವುದನ್ನು ಕಾಣಬಹುದು. ಪ್ರಾಯಶಃ ಯಶವಂತ ಚಿತ್ತಾಲರ ವಾತ್ಸಲ್ಯ ಪಥ ದಲ್ಲಿ ಮುಂಬಯಿಯ ವಾಸವನ್ನು ಕಂಡಿದ್ದ ನನಗೆ ಮತ್ತೆ ಇಲ್ಲಿ ಅದರ ನೈಜ ಚಿತ್ರಣ ಸಿಕ್ಕಿತು .   ನಂತರ ಮಸ್ಕತ್ ವಾಸವನ್ನು ಮಾಮೂಲಿ ಪ್ರವಾಸ ಕಥನವಾಗಿ ಬರೆದಿದ್ದರೆ ಸ್ವಲ್ಪ ಒಣ ಒಣ ಬೋರು ಎನಿಸುತ್ತಿತ್ತೋ ಏನೋ ಇಲ್ಲಿ ಕಾದಂಬರಿಯಲ್ಲಿ ಅದು ಹಾಸುಹೊಕ್ಕಾಗಿರುವ ಬಗ್ಗೆ ತುಂಬ ಪರಿಣಾಮಕಾರಿಯಾಗಿ ಮೂಡಿಬಂದಿದೆ . ಅಲ್ಲಿನ ಧಗೆ,ಮಾಲ್ ಗಳು ಸಮುದ್ರ ತೀರದ ವರ್ಣನೆ ಸೊಗಸಾಗಿದೆ .ಪಿಕ್ನಿಕ್ ಹೋಗುವ ಜಾಗಗಳ ವರ್ಣನೆ ಮೂಲಕ ಅಲ್ಲಿನ ಪ್ರವಾಸಿ ಸ್ಥಳಗಳ ಬಗ್ಗೆ ಹೇಳುವುದು “ನಿಜ್ವಾ”
ದ ಕೋಟೆ ಸಲಾಲಾ ಒಮಾನ್ ನ ದಕ್ಷಿಣ ಭಾಗದ ರಾಜಧಾನಿಯ ವಿವರ ಹಾಗೂ ಕುರಿಯಾತ್ ಸ್ಥಳಗಳ ವಿವರಣೆ ಚೆನ್ನಾಗಿ ಮೂಡಿಬಂದಿದೆ . ಒಮಾನ್ ನ ರಾಷ್ಟ್ರೀಯ ದಿನಾಚರಣೆ ಹಾಗೂ ಅರ್ಧ ಗಂಟೆ ಕಾಲ ಮಳೆ ಬಂದರೂ ಅದು ಮಾಡಿ ಹೋಗುವ ಅವಾಂತರಗಳ ಬಗೆಗೆ ಚಿತ್ರಣವಾಗಿದೆ . ಮಳೆಯ ರಭಸಕ್ಕೆ ಗುಡ್ಡದ ಮೇಲಿನ ಮರ್ಸಿಡಸ್ ಗಳೆಲ್ಲ ಜಾರಿ ನಜ್ಜುಗುಜ್ಜಾಗಿ ಸಾಗರ ಸೇರುವುದಂತೂ ನಿಜಕ್ಕೂ ಆಶ್ಚರ್ಯವೇ . ಹೀಗಾಗಿಯೇ ಕಾದಂಬರಿಗಳು ಅಂದಂದಿನ ಸಮಾಜದ, ಕಾಲಮಾನದ, ಸನ್ನಿವೇಶಗಳ ವರ್ಗತಾರತಮ್ಯಗಳ ಬಗ್ಗೆ ವಿವರಣೆ ಇದೆ .
ಅಲ್ಲಿ ಒಂಟಿಯಾಗಿ ಬಂದು ದುಡಿಯುವ ಕೂಲಿಕಾರರ ಬಗ್ಗೆ ವಾಸ್ತವ ಚಿತ್ರಣ ಹಾಗೂ ಅವರ ಮನೋಭಾವ ಅರಿಯುವ ಆಯಾಮವನ್ನು ಇಲ್ಲಿ ತೋರಿಸಲಾಗಿದೆ . ಸುನೀತಾಳ ಮಾತುಗಳಲ್ಲೇ ಹೇಳುವುದಾದರೆ
“ಅವರಲ್ಲಿ ಕೆಲವರ ಕಣ್ಣುಗಳಲ್ಲಿ ಮಡುಗಟ್ಟಿನಿಂತ ಒಂಟಿತನದ ಆಳವಾದ ನೋವು ಕಂಡು ಅವರಿಗಾಗಿ ಮನ ಮರುಗುತ್ತಿದ್ದರೆ ಇನ್ನೂ ಹಲವಾರು ಕಣ್ಣುಗಳಲ್ಲಿ ಕಣ್ಣಿಗೆ ಬಿದ್ದ ಸ್ತ್ರೀ ದೇಹವನ್ನು ಇಡಿಯಾಗಿ ನುಂಗುವ ಹಸಿವನ್ನು ಕಂಡು ಹೆದರಿಕೆಯಾಗುತ್ತಿತ್ತು.  ಒಂದು ದಿನ ಈ ಜನರೆಲ್ಲರ ಹಸಿವು ಒಟ್ಟುಗೂಡಿ ದಡಮೀರಿ ಹರಿದರೆ ಈ ಶಹರದ ಸುಖಶಾಂತಿ ಎಲ್ಲ ಕೊಚ್ಚಿಕೊಂಡು ಹೋದೀತು ಎನ್ನಿಸುತ್ತಿತ್ತು “. ಆದರೆ ಒಬ್ಬ ಮನುಷ್ಯನ ಹಸಿವು ಇವಳ ಬಾಳನ್ನೇ ಆಪೋಶನ ತೆಗೆದುಕೊಂಡಿದ್ದು ಮಾತ್ರ ನಿಜ.  

ಇಲ್ಲಿ 3 ಭಾಗಗಳಲ್ಲಿ ಕಾದಂಬರಿಯನ್ನು ಬರೆದದ್ದು ಮೊದಲ ಭಾಗ  ಸ್ವಗತ ದಲ್ಲಿದ್ದು ಪ್ರಭಾಕರನ ಗೆಳೆತನವಾದಾಗಿನಿಂದ ಆ ದಾರುಣ ಅತ್ಯಾಚಾರಕ್ಕೆ ಸಿಲುಕುವ ವರೆಗೆ
ಕಥನವಿದೆ. ಮೂರನೆಯ ಭಾಗದಲ್ಲಿ ಪ್ರಭಾಕರನ ಸ್ವಗತದಲ್ಲಿ ಮುಂದಿನ ಕಥೆ ನಡೆದಿದ್ದು ಸುನೀತಾ ಶೀರ್ಷಿಕೆಯಾಗಿ ಮಗುವನ್ನು ಸ್ವೀಕರಿಸದೆ ಅವನು ಮತ್ತೆ ದುಬಾಯಿನಲ್ಲಿದ್ದ ತನ್ನ ಹೊಸ ಕೆಲಸಕ್ಕೆ ನಡೆಯುವವರೆಗೆ ಚಿತ್ರಣವಿದೆ . ಮೂರನೆಯ ಭಾಗದಲ್ಲಿ ಮತ್ತೆ ಸುನೀತಾ ತನ್ನ ಮಗುವಿನ ಜನನದ ನಂತರದ ಕಥೆಯನ್ನು ಹೇಳುತ್ತಾ ಹೋಗಿ ಕಡೆಗೆ ಕಥೆ ಅಂತ್ಯ ಕಾಣುತ್ತದೆ. ಈ ಶೈಲಿಯು ತುಂಬಾ ಅಪರೂಪತೆ ಅನ್ನಿಸುತ್ತೆ . ಅಲ್ಲದೆ ಅವರವರ ವಿಚಾರ ಧಾಟಿಯ ಮೇಲೆ ಬೆಳಕು ಬೀರುವ ಪರಿ ನಿರೂಪಣೆಯಲ್ಲಿ ಸಫಲವಾಗಿದೆ.

ಇಲ್ಲಿ ಇಡೀ ಸುನೀತಾಳ ಬದುಕಿಗೆ ಬದುಕು ತಿರುವು ತೆಗೆದುಕೊಳ್ಳುವುದು ಅತ್ಯಾಚಾರದ ಘಟನೆಯಿಂದಾದರೂ ಅದನ್ನು ಎಲ್ಲಿಯೂ ವೈಭವೀಕರಿಸಿಲ್ಲ . ಸೂಕ್ಷ್ಮವಾಗಿ ಹೇಳಿ ಮುಂದೆ ಹೋಗುವ ಸಂಯಮದ ಪರಿ
ಮೆಚ್ಚುಗೆಯಾಯಿತು.

ಇಲ್ಲಿನ ಪುರುಷ ಪಾತ್ರಧಾರಿಗಳಲ್ಲಿ ಅಜಯಕುಮಾರ್ ಅವರೊಬ್ಬರೇ ಧನಾತ್ಮಕ ಗಟ್ಟಿ ಗುಣಗಳಿರುವನಾದರೆ ವಿನೋದ್ ನ
ನಡವಳಿಕೆ ಸಾಮಾನ್ಯವಾದದ್ದು ಆದರೆ ಪ್ರೀತಿಸಿದವಳಿಗಾಗಿ ಕಾಯದೆ ನಂತರ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುವ ಮುರಳಿ ದುರ್ಬಲ ಮನಸ್ಕ. ಪ್ರೀತಿಸಿ ಮದುವೆಯಾದರೆ ಪ್ರಭಾಕರ ಹೆಂಡತಿಯ ಕಷ್ಟದ ಕಾಲದಲ್ಲಿ ಜತೆಗೆ ನಿಲ್ಲದೆ ಪಲಾಯನವಾದ ಕೈಗೊಳ್ಳುತ್ತಾನೆ.  

ದಮಯಂತಿಯವರ ಸ್ತ್ರೀ ಪಾತ್ರಗಳು ತುಂಬಾ ನೈಜವಾಗಿ ಗಟ್ಟಿ ವ್ಯಕ್ತಿತ್ವದಿಂದ ಮೆರುಗುಗಟ್ಟುತ್ತವೆ.  ಯಾರೂ ದುರ್ಬಲರಲ್ಲ ನಿಸ್ಸಹಾಯಕರಲ್ಲ ಪರಿಸ್ಥಿತಿಯ ಒತ್ತಡಗಳನ್ನು ತಡೆದು ನಿಲ್ಲುವ ಶಕ್ತಿ ಛಾತಿ ಉಳ್ಳವರು .ಅದನ್ನು ಸುನೀತಾ ಹಾಗೂ ಸಾರಾ ಅವರ ಪಾತ್ರದ  ಚೆನ್ನಾಗಿ ನೋಡಬಹುದು . ಮೊದಲ 4ತಿಂಗಳಲ್ಲಿ ಯಾವುದರ ಅರಿವು ಇಲ್ಲದಿದ್ದರೂ ಸುನೀತಾಳಿಗೆ ಕಡೆಕಡೆಯಲ್ಲಿ ಈ ಮಗು ಏನಾದರೂ ಅತ್ಯಾಚಾರದ ಫಲವಾಗಿ ಇರಬಹುದೇ ಎಂಬ ಶಂಕೆ ಬರುತ್ತದೆ . ಆದರೆ ಅದು ನಿಜವಾದರೂ ಮಗುವಿನ ಮೇಲಿನ ಪ್ರೀತಿ ಅವಳಿಗೆ ಕಡಿಮೆಯಾಗುವುದಿಲ್ಲ . ಸ್ವತಃ ತಾಯಿಯನ್ನೊಳಗೊಂಡ ಎಲ್ಲರೂ ಆ ಮಗುವನ್ನು ಅನಾಥಾಶ್ರಮಕ್ಕೆ ಕಳಿಸು ಎಂದು ಹೇಳಿದರೂ ಅವಳು ಬಗ್ಗುವುದಿಲ್ಲ .ಒಂಟಿಯಾಗಿಯೇ ತನ್ನ ಮಗುವನ್ನು ಬೆಳೆಸಲು ಹೊರಡುತ್ತಾಳೆ ಮುಂದೆ ಬರುವ ಸುನಾಮಿಯ ಅರಿವಿದ್ದರೂ …..ಅವಳ ಯೋಚನಾ ಲಹರಿ ಅವಳ ಮಾತುಗಳಲ್ಲೇ

“ಸಮಾಜ ನನ್ನಿಂದ ಏನು ಅಪೇಕ್ಷಿಸಿತ್ತು ಹುಟ್ಟಿದ ಮಗುವನ್ನು ಬೀದಿಪಾಲು ಮಾಡಬೇಕಿತ್ತೇ “

ತನ್ನ ವೈವಾಹಿಕ ಜೀವನ ಇಲ್ಲಿಗೆ ಅಂತ್ಯ ಕಾಣುವುದು ಎಂದು ತಿಳಿದರೂ ಮಗುವಿನ ಮೇಲಿನ ಪ್ರೀತಿ ಅವಳನ್ನು ಮಗುವನ್ನು ತೆರೆಯಲು ಬಿಡಲಿಲ್ಲ . ಇಲ್ಲಿ ಅವಳು ನಾನು ತಾಯಿ ಎಂಬ ಕರ್ತವ್ಯವನ್ನು ಪ್ರೀತಿಯನ್ನು ತೋರಿಸಿ ಮಾತೃತ್ವದ ಗುಣ ಮೆರೆದಿದ್ದಾಳೆ ಅನ್ನಿಸುತ್ತೆ . ಈ ನಿರ್ಧಾರದ ಬಗ್ಗೆ ಅವಳಿಗೆ ಕೆಲವೊಮ್ಮೆ ಸಂಶಯವೂ ದ್ವಂದ್ವವೂ ಕಾಡುತ್ತದೆ . ನೀಗ್ರೋ ರೂಪದಿಂದಾಗಿ ಬೇರೆ ಮಕ್ಕಳು ತನ್ನೊಂದಿಗೆ ತೆರೆಯಲು ಬಾರದಿದ್ದುದನ್ನು ಕಂಡು ತುಂಬಾ ಬೇಸರಗೊಳ್ಳುವ ಮಗುವನ್ನು ಕಂಡಾಗ ಇದನ್ನು ಭೂಮಿಗೆ ತಂದು ನಾನು ತಪ್ಪು ಮಾಡಿದೆನಾ ಎಂದು ಅಲವತ್ತುಕೊಳ್ಳುವ
ಪ್ರಸಂಗವೂ ಬರುತ್ತದೆ . ಎಷ್ಟೆಲ್ಲಾ ಅಡೆ ತಡೆಗಳ ಮಧ್ಯೆ ತನ್ನ ಮೇಲೆ ಬರುವ ಅಪವಾದದ ಅರಿವಿದ್ದರೂ ಅವಳು ಮಗುವಿನ ಜೊತೆ ಬಿಡುವುದಿಲ್ಲ. ನಾನು ಅವನ ತಾಯಿ ಎಂಬ ಸ್ಥಾಯೀ ಕರ್ತವ್ಯಪ್ರಜ್ಞೆ ಮಮತೆ ಅವಳನ್ನು ಬೇರೆ ಯೋಚನೆಗೆ ಬಿಡದೆ ಬಾಳಿನುದ್ದಕ್ಕೂ ಅಗ್ನಿ ಪರೀಕ್ಷೆಗೆ ಒಡ್ಡುತ್ತಲೇ ಇರುತ್ತದೆ. ಆದರೆ ಕಾಲ ಕಾಲಕ್ಕೆ ತಕ್ಕಂತೆ ಒಳ್ಳೆಯ ಸ್ನೇಹಿತರ ಬೆಂಬಲ ದೊರೆಯುವುದರಿಂದ ಬಾಳು ಕೊಂಚ ಸಹನೀಯವೆನ್ನಿಸುತ್ತದೆ .ಇಲ್ಲಿ ಸುನೀತಾ ಶಿಕ್ಷಕಿಯಾಗಿ ಕೆಲಸ ಮಾಡಿದವಳು; ಅಣ್ಣನ ಮಗ ನಂತರ ಬಂಟಿ ಇವರನ್ನು ಪ್ರೀತಿಯಿಂದ ಕಾಣುವ ಮಮತಾಮಯಿ.  ತನ್ನದೇ ಮಗು ಬೇಕೆಂಬ ಕನಸು ಕಟ್ಟಿಕೊಂಡಿರುವ ಸಮಯದಲ್ಲಿ ಹೀಗಾದರೂ ಹುಟ್ಟುವ ಮಗು ನನ್ನದೇ ನನ್ನೊಬ್ಬಳದೇ ಎಂಬ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಪರಿ ತುಂಬಾ ಸ್ತುತ್ಯಾರ್ಹ. ತಾಯ್ತನ ಎನ್ನುವುದು ಯಾವುದೇ ಅರ್ಹತೆ ಪರೀಕ್ಷೆಗಳ ಫಲವಲ್ಲ: ಅದು ತನ್ನಿಂತಾನೇ ಬರುವ ಸಹಜ ಭಾವ .
ಏನೆಲ್ಲ ಎಡರು ತೊಡರು ಅಡೆತಡೆಗಳು ಬಂದರೂ ನಾನು ತಾಯಿ ಎಂಬ ಅವಳ ದೃಢ ನಿರ್ಧಾರ ತಾಯಿಯ ಕರ್ತವ್ಯಗಳ ನಿಭಾವಣೆಯ ನಿರೂಪಣೆ ಕಾದಂಬರಿಯನ್ನು ತುಂಬ ವಿಶಿಷ್ಟವೆನಿಸುತ್ತದೆ . ಅಂತೆಯೇ ಅವಳು ಪ್ರಭಾಕರನ ಈ ನಡೆ ಮನುಷ್ಯ ಸಹಜ ಎಂಬಂತೆ ಭಾವಿಸಿ ಅವನನ್ನು ದೂರದೆ ತನ್ನ ತವರನ್ನು ಸಹ ದೂರದೆ ತನ್ನದೇ ಆದ ಬದುಕು ಕಟ್ಟಿಕೊಳ್ಳುತ್ತಾ ಅವರಿಂದ ದೂರವಾಗುತ್ತಾಳೆ . ಕಹಿ ಕಲ್ಮಶ ಉಳಿಸಿಕೊಳ್ಳದ ಇಂತಹ ಹೆಣ್ಣು ಅಪರೂಪವೇ…..
ಇನ್ನೂ ಸಾರಾ ಹಾಗೆ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿನ ಬಂಟಿಗೆ ತಾಯಾಗುತ್ತಾಳೆ . ವಂದನಾಳ ಮಗಳು  ಮೋನಾಳಿಗೆ ಸೂಕ್ತ ಸಮಯದಲ್ಲಿ ಕೌನ್ಸಲ್ ಮಾಡುವ ಮೂಲಕ ಅವಳ ಜೀವನ ಸರಿ ಪಡಿಸುತ್ತಾಳೆ .ನಂತರ ತಾನು ಮದುವೆಯಾದ ಮೇಲೆ ಮಲಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಂಡು ಸಮರ್ಥ ತಾಯಿಯಾಗುತ್ತಾಳೆ .

ರೇಣುವಂತೂ ಮಗ ಆತ್ಮಹತ್ಯೆ ಮಾಡಿಕೊಂಡ ಮೇಲೆ ಪೂರ್ತಿ ಕುಸಿದು ಅವನಿಲ್ಲದೆ ಜೀವನವಿಲ್ಲವೆಂದು ತಾನು ಅವನ ಹಾದಿಯನ್ನೇ ಹಿಡಿಯುವುದಂತೂ ಖಂಡಿತ ದುರಂತ. ಆದರೆ “ಪುತ್ರ ಶೋಕಂ ನಿರಂತರಂ” ಎಂಬ ಮಾತೇ ಇದೆಯಲ್ಲ .

ಮಾನವ ಸ್ವಭಾವದ ವೈರುಧ್ಯವನ್ನು ಇಲ್ಲಿ ಅಜಯಕುಮಾರರ ತಾಯಿಯ ಮೂಲಕ ಚೆನ್ನಾಗಿ ತೋರಿಸಿದ್ದಾರೆ ವಿದೇಶದಲ್ಲಿ ನೆಲೆಸಿ ಅಲ್ಲಿನ ಸಂಸ್ಕೃತಿ ಮೈಗೂಡಿಸಿಕೊಂಡು ವೇಷಭೂಷಣಗಳನ್ನು ಅಲ್ಲಿಯದೇ ಪಾಲಿಸುತ್ತಾ ಇರುವ ಆಕೆಗೆ ಅಲ್ಲಿಯವರ ಗುಣಸ್ವಭಾವಗಳನ್ನು, ವಿಶಾಲ ಮನೋಭಾವವನ್ನು ಮಾತ್ರ ಅನುಕರಿಸಲು ಆಗದೆ ಸಂಕುಚಿತ ಮನೋಭಾವ ತೋರುತ್ತಾಳೆ.  ಎಂತಹ ವಿಪರ್ಯಾಸ ?

ಇಲ್ಲಿ ಉಪಯೋಗಿಸಿರುವ ಧಾರವಾಡದ ಭಾಷೆಯೂ ಹಾಗೇ ತುಂಬಾ ಆತ್ಮೀಯ ವೆನಿಸಿ ಕಥೆಯ ಓಟಕ್ಕೆ ಮಧ್ಯೆಮಧ್ಯೆ ಹಾಲಿನಲ್ಲಿನ ಜೇನಿನಂತೆ ಬೆರೆಯುತ್ತದೆ. ಸುನೀತಾಳ ಸ್ವಭಾವದ ಗಟ್ಟಿತನ ದಿಟ್ಟತನ ಅವಳು ಕಾನೂನುಬಾಹಿರವಾಗಿ ಶಿಕ್ಷಕಿಯಾಗಿ ಕೆಲಸ ಮಾಡಲು ಒಪ್ಪಿಕೊಳ್ಳದಿರುವುದರಲ್ಲಿಯೇ ತಿಳಿಯುತ್ತದೆ; ನಂತರವೂ ಅಷ್ಟೇ . ತನ್ನ ಸ್ವಂತ ಸುಖಕ್ಕಾಗಿ ಮಗುವನ್ನು ತ್ಯಜಿಸಲು ಒಪ್ಪದೆ ಮುಂದೆ ಬರುವ ಕಷ್ಟಗಳನ್ನು ನಿರ್ವಹಿಸುವ ರೀತಿ ಅವಳ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ . ಎಲ್ಲಿಯೂ ಅವಳು ತನ್ನ ಅಸ್ಮಿತೆ ಬಿಟ್ಟುಕೊಡದೆ ವರ್ತಿಸುವ ರೀತಿ ಅತ್ಯಪೂರ್ವ.

ಇಲ್ಲಿ ಮತ್ತು ಚಿಂತನೆಗೆ ಹಚ್ಚುವ ವಿಷಯ ಅಲ್ಲಿನ ಕಾನೂನು ಅದನ್ನು ಶ್ರೀ ರಾವ್  ಅವರು ಜೈಲಿಗೆ ಹೋಗುವ ಸಂದರ್ಭದಲ್ಲಿ ಒಮ್ಮೆ ವಿವರಿಸುತ್ತಾರೆ . ಮತ್ತೆ ಆ ಝಾಂಜೀಬಾರೀ ಜನಾಂಗದ ಮನುಷ್ಯನ ವಿರುದ್ಧ ದೂರು ಕೊಡಲು ಸಹ ಅಲ್ಲಿಯದೇ ನ್ಯಾಯವಿಧಾನ ಅಡ್ಡಿ ಬರುತ್ತದೆ . ಪುರುಷರ ಬೆಂಗಾವಲಿಲ್ಲದೇ ಒಬ್ಬಂಟಿಯಾಗಿ ಓಡಾಡುವ ಹೆಣ್ಣುಗಳೆಲ್ಲ ನಡತೆಗೆಟ್ಟವರು ಎಂಬ ದೃಷ್ಟಿ ಅಲ್ಲಿನ ಕಾನೂನಿನಲ್ಲಿ . ಅತ್ಯಾಚಾರದ ವಿರುದ್ಧ ದೂರು ದಾಖಲಿಸಲು ಹೋದರೆ ಮೊದಲಿಗೆ ಅತ್ಯಾಚಾರಕ್ಕೊಳಗಾದ ಹೆಣ್ಣನ್ನೇ ನಡತೆಗೆಟ್ಟವಳು ಎಂದು ತೀರ್ಮಾನಿಸಿ ಕಟಕಟೆಯಲ್ಲಿ ನಿಲ್ಲಿಸುತ್ತಾರೆ . ಎಷ್ಟು ಅಮಾನವೀಯ ಪದ್ಧತಿಗಳು. ಗಾಯದ ಮೇಲೆ ಬರೆ ಎಳೆದಂತಹ ಪರಿಸ್ಥಿತಿ . ಆದರೆ ಇದೆಲ್ಲ ನಡೆವಾಗ ಎಲ್ಲಿಂದ ಎಲ್ಲಿ ಹೋದರೂ ಹೆಣ್ಣನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿ ನೋಡುತ್ತಲೇ ಇರುವ ಪರಿಸ್ಥಿತಿ ಅನುಭವಕ್ಕೆ ಬರುತ್ತದೆ .

ಭಿನ್ನವಾಗಿ ಹುಟ್ಟಿ ಸುತ್ತಲಿನ ಸಮಾಜದ ಅವಹೇಳನ ತಿರಸ್ಕಾರಕ್ಕೆ ಗುರಿಯಾಗುವ ತನ್ನ ಹುಟ್ಟಿನ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಲಾಗದ ಮುಗ್ಧ ಮಗು ನವೀನ ಇವೆಲ್ಲದರ ಮಧ್ಯೆಯೇ ಸೂಕ್ಷ್ಮ ಸಂವೇದನೆಯ ಪ್ರಬುದ್ಧ ಹದಿಹರೆಯ ದವನಾಗಿ ಬೆಳೆಯುವುದು ಅವನ ತಾಯಿ ನೀಡಿದ ಸಂಸ್ಕಾರದ ಫಲವೇ.  ಆದರೂ ಅವನ ಮನದಾಳದ ಒಳತೋಟಿಯ ಬಗ್ಗೆ ಇನ್ನೂ ಸ್ವಲ್ಪ ಹೆಚ್ಚಿನ ವಿವರ ಬೇಕಿತ್ತು ಅನ್ನಿಸುತ್ತದೆ. ಅವನದೇ ಒಂದು ಸ್ವಗತದ ಅಧ್ಯಾಯ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

ಒಟ್ಟಿನಲ್ಲಿ ದೇಶ ಬಿಟ್ಟು ದೇಶಕ್ಕೆ ವಲಸೆ ಹೋಗುವ ಜನರ ಗೋಳು ಸಂಕಟಗಳು ಮನದಾಳದ ಮಿಡಿತ ತುಡಿತಗಳು ಅನಾಥ ಪ್ರಜ್ಞೆ ಹಾಗೂ ದೇಶದಲ್ಲಿರುವ ಅವರ ಸ್ವಂತ ಬಂಧುಗಳ ನಿರೀಕ್ಷೆಗಳು ಇವೆಲ್ಲವನ್ನು ತುಂಬ ಪ್ರಭಾವಶಾಲಿಯಾಗಿ ಕಟ್ಟಿಕೊಟ್ಟಿರುವ ಕಥಾನಕ . ಚರ್ವಿತ ಚರ್ವಣ ಕಥೆಗಳಲ್ಲದೆ ಹೊಸ ಕಥಾವಸ್ತು ಹೊಸ ರೀತಿಯ ನಿರೂಪಣೆ ನಿಜಕ್ಕೂ ಮನಸ್ಸಿಗೆ ಹಿತ ನೀಡುತ್ತದೆ . ಸತ್ವಯುತ ಕಾದಂಬರಿಗಳ ಸಾಲಿನಲ್ಲಿ ಸೇರುವ ಇದು ಮನುಜ ಸ್ವಭಾವಗಳ ವಿವಿಧ ಮುಖಗಳ, ಪ್ರತಿಕೂಲ ಪರಿಸ್ಥಿತಿಗಳಲ್ಲಿ  ಬಿಚ್ಚಿಕೊಳ್ಳುವ ಮುಖವಾಡಗಳ ಬಗ್ಗೆ ಮನಸ್ಸನ್ನು ವಿಚಾರ ಮಾಡಲು ಹಚ್ಚುತ್ತವೆ . ಓದಿ ನಾಲ್ಕೈದು ದಿನಗಳು ಕಳೆದರೂ ಇದರ ಗುಂಗಿನಿಂದ ಹೊರ ಬರಲಾರದಷ್ಟು ಮನಸ್ಸು ಮುಟ್ಟಿದ ತಟ್ಟಿದ ಕಾದಂಬರಿ . ಶಬ್ದಾಡಂಬರಗಳ ಸೋಗಿಲ್ಲದೆ ಭಾವನೆಗಳ ಮೆರೆತವನ್ನೇ ಮುಖ್ಯವಾಗಿಸದೆ ಸರಾಗ  ಸಲಿಲವಾಗಿ ಹರಿದುಹೋಗುವ ಕಥಾನಕ .  ವಿಶಾಲ ಹರಿವಿನಲ್ಲಿ ಗಂಭೀರವಾಗಿ ಹರಿಯುವ ವಿಸ್ತಾರ ನದಿಪಾತ್ರದಂತೆ  ಇದು. ಜಲಪಾತಗಳ ಆರ್ಭಟವಿಲ್ಲ, ಕಣಿವೆ ಹಳ್ಳಗಳ ಕೊರಕಲಿಲ್ಲ .  ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ .

ಕನ್ನಡದ ಓದುಗರಿಗೆ ಇಷ್ಟೆಲ್ಲಾ ಒಳ್ಳೆಯ ಸಾಹಿತ್ಯದ ರಸಗವಳ ಬಡಿಸಿದ ಪ್ರೊಫೆಸರ್ ದಮಯಂತಿ ನರೇಗಲ್ ಮೇಡಮ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು . ಮುಂದೆಯೂ ಇದೇ ತರಹದ ಸಾಹಿತ್ಯ ಸೇವೆ ಅವರಿಂದ ಕನ್ನಡಮ್ಮನಿಗೆ ದೊರಕಲಿ ಎಂಬ ಹಾರೈಕೆ .

ನಾಸ್ತಿ ಮಾತೃ ಸಮಾಛಾಯಾ ನಾಸ್ತಿ ಮಾತ್ರ ಸಮಾ ಗತಿಃ
ನಾಸ್ತಿ ಮಾತೃಸಮಂ  ಋಣಾ ನಾಸ್ತಿ ಮಾತೃ ಸಮಂ ಪ್ರಪಾ

ತಾಯಿಯ ಆಸರೆಗೆ ಸಮನಾದುದಿಲ್ಲ. ತಾಯಿಯೇ ಎಲ್ಲದಕ್ಕೂ ಆಧಾರ.  ಅಮ್ಮನ ಋಣಕ್ಕೆ ಯಾವುದೂ ಸಾಟಿಯಿಲ್ಲ.  ತಾಯಿಯಂತೆ ಅಂತಃಕರಣ ಇನ್ಯಾರದಿಲ್ಲ  ಅಂದರೆ ಅಮ್ಮನೇ ಎಲ್ಲ .

————————

 

ಸುಜಾತಾ ರವೀಶ್

Leave a Reply

Back To Top