ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ಡಾ. ಶರೀಫ್ ಹಸಮಕಲ್ ಅವರ ಗಜಲ್ ಗಳಲ್ಲಿ ಪ್ರೀತಿಯ ಸಿಂಚನ

ಗಜಲ್’ ಎಂಬುದೊಂದು ಮನುಷ್ಯನ ಮನದಲ್ಲಿ ಪ್ರೀತಿಯನ್ನು ಬಿತ್ತುವ ಕಾವ್ಯ ಪ್ರಕಾರ. ಹೃದಯಗಳ ಬಡಿತ, ಮನಸುಗಳ ಕನವರಿಕೆ, ಪಿಸುಮಾತುಗಳ ಕಾರವಾನ್, ನೋವಿನ ಜಾದೂ ಕೀ ಛಪ್ಪಿ… ಎಲ್ಲವೂ ಮುಂಗಾರು ಮಳೆಯಂತೆ ಅನುರಣಿಸುತ್ತದೆ. ಇಂಥಹ ಗಜಲ್ ಗುಲ್ಜಾರ್ ನಲ್ಲಿ ವಿಹರಿಸಲು, ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರಲು ಖುಷಿಯೆನಿಸುತ್ತದೆ. ಅಂತೆಯೇ ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಸುಖನವರ್ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ಬಂದಿರುವೆ. ಬನ್ನಿ.. ಷೇರ್ ನೊಂದಿಗೆ ರಿಬ್ಬನ್ ಕಟ್ ಮಾಡೋಣ…!!

“ಜನ ಹೇಳ್ತಾರೆ ನೀನಿನ್ನೂ ನನ್ನ ಮೇಲೆ ಕೋಪಗೊಂಡಿದ್ದೀಯಾ ಎಂದು
ನಿನ್ನ ಕಣ್ಣುಗಳು ಮಾತ್ರ ಬೇರೆ ಏನನ್ನೊ ಹೇಳುತ್ತಿವೆ ನನಗೆ”
– ಜಾನಿಸರ್ ಅಕ್ತರ್

      ಹಿಂದೆಂದಿಗಿಂತಲೂ ಇಂದು ಮನುಷ್ಯ ಹೆಚ್ಚೆಚ್ಚು ಬುದ್ದಿವಂತನಾಗಿದ್ದಾನೆ, ಆಗುತಿದ್ದಾನೆ ಎಂಬುದರಲ್ಲಿ ಕಿಂಚಿತ್ತೂ ಸಂಶಯವಿಲ್ಲ. ಆದರೆ…
ಆದರೆ ಆ ಬುದ್ದಿವಂತಿಕೆ ಸಮಷ್ಟಿ ಪ್ರಜ್ಞೆಯತ್ತ ಚಲಿಸದೆ ವ್ಯಕ್ತಿ ಪ್ರಜ್ಞೆಯಲ್ಲಿಯೇ ಸಿಲುಕಿಕೊಂಡಿದೆ ಎಂಬುದೇ ಆತಂಕಕಾರಿ ವಿಷಯವಾಗಿದೆ. “ಜಾತಿ ಎಂಬುದೇ ಇಲ್ಲ ಯಾವುದೂ. ಕೇವಲ ಮಾನವ ಜನಾಂಗವಿದೆ – ವೈಜ್ಞಾನಿಕವಾಗಿ, ಮಾನವಶಾಸ್ತ್ರೀಯವಾಗಿ” ಎಂಬ ಅಮೇರಿಕನ್ ಕಾದಂಬರಿಕಾರ ಟೋನಿ ಮಾರಿಸನ್ ರವರ ಮಾತು ಬುದ್ಧಿವಂತಿಕೆ ಹೇಗೆ ತಾರತಮ್ಯದ ವಿಷವನ್ನು ಉಣಬಡಿಸುತ್ತಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ನಾವು ಇತಿಹಾಸ ಮತ್ತು ನಾಗರಿಕತೆಯಲ್ಲಿ ಸಮಾನತೆಯ ಬಗ್ಗೆ ಕಲಿಯುತ್ತೇವೆ. ಆದರೆ ಜೀವನವು ನಿಜವಾಗಿಯೂ ಹಾಗೆ ಇಲ್ಲ. ಒಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ಕಾಳಜಿಗಳ ಕಿರಿದಾದ ಮಿತಿಗಳನ್ನು ಮೀರಿ ಎಲ್ಲಾ ಮಾನವೀಯತೆಯ ವಿಶಾಲ ಕಾಳಜಿಗಳಿಗೆ ಏರುವವರೆಗೂ ಆತನು ಸಮಾಜಮುಖಿಯಾಗಿ ಬದುಕಲು ಪ್ರಾರಂಭಿಸಿಲ್ಲ ಎಂದೇ ಅರ್ಥ. ‘ಸಮಾನತೆ’ ಎಂಬುದು ಮುಟ್ಟಿದರೆ ಮುನಿ ಇದ್ದಂತೆ! ಎಲ್ಲರೂ ಸಮಾನತೆ ಬಯಸುತ್ತಾರಾದರೂ ತಾವು ಅನುಭವಿಸುತ್ತಿರುವಾಗ ಇತರರಿಗೂ ಅದು ಬೇಕು ಎಂಬುದನ್ನು ಮರೆಯುತ್ತಾರೆ. ಇದು ಎಲ್ಲ ವಿಷಯಗಳ ಬಗ್ಗೆ ಒಂದೇ ರೀತಿ ಇರುವುದಿಲ್ಲ. ಸಮಾನತೆಯು ವಿಭಿನ್ನ ವಿಷಯಗಳನ್ನು ವಿಭಿನ್ನವಾಗಿ ಪರಿಗಣಿಸುತ್ತದೆ. ಹಾಗಂತ ಸಮಾನತೆಯು ಪ್ರತ್ಯೇಕತೆಯ ಕೀಲಿ ಕೈ ಅಲ್ಲ, ಆಗಬಾರದು ಸಹ! ಈ ಹಿನ್ನೆಲೆಯಲ್ಲಿ ಅಮೇರಿಕನ್ ಗಿಟಾರ್ ವಾದಕ, ಗಾಯಕ ಮತ್ತು ಗೀತರಚನೆಕಾರ ಟ್ರೇ ಅನಸ್ತಾಸಿಯೊ ರವರ
“ಸಮಾನತೆಯು ಪ್ರತ್ಯೇಕತೆಯನ್ನು ಸೂಚಿಸುತ್ತದೆ” ಈ ಮಾತು ನಮ್ಮನ್ನು ಎಚ್ಚರಿಸುತ್ತದೆ. ಒಬ್ಬರ ದುಃಖದಿಂದ ಮತ್ತೊಬ್ಬರ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಒಂದು ವೇಳೆ ಸಾಧ್ಯವಾಗುವುದೆ ಆದರೆ ಅದು ಅನಾಗರಿಕತೆ, ವಿಕೃತ ಎನಿಸಿಕೊಳ್ಳುತ್ತದೆ. ಈ ನೆಲೆಯಲ್ಲಿ ‘Before literature, we are all equally wise and equally foolish’ ಎಂದು ಹೇಳಬಹುದು. ಪ್ರಸ್ತುತವಾಗಿ ಸಾಹಿತ್ಯದ ರಚನೆಯಲ್ಲಾಗಲಿ ಅಥವಾ ಸಾಹಿತ್ಯವನ್ನು ಸವಿಯುವ ವಿಷಯದಲ್ಲಾಗಲಿ ಯಾವುದೇ ತಾರತಮ್ಯದ ಕಂದಕಗಳು ಇಲ್ಲಿ. ಅವರವರ ಆಸಕ್ತಿ, ಅಭಿರುಚಿ ಹಾಗೂ ಸಾಮರ್ಥ್ಯದ ಮೇಲೆ ಇಲ್ಲಿ ಎಲ್ಲವೂ ಸಾಧ್ಯ. ಇಂದು ‘ಗಜಲ್’ ಎಂಬ ಒಲವಿನ ಮಧುಬಟ್ಟಲು ಭಾಷಾತೀತವಾಗಿ ಎಲ್ಲರನ್ನೂ ಕೈಬೀಸಿ ಕರೆಯುತಿದೆ. ಪ್ರೀತಿಯಿಂದ ರೆಡ್ ಕಾರ್ಪೆಟ್ ಹಾಸಿ ಆಲಂಗಿಸುತ್ತಿದೆ. ಅಂತೆಯೇ ಕನ್ನಡ ಸಾರಸ್ವತ ಲೋಕದಲ್ಲಿ ಎಣಿಕೆಗೆ ಸಿಗದಷ್ಟು ರಸಿಕರು ಗಜಲ್ ಅನ್ನು ಬರೆಯುತ್ತಿದ್ದಾರೆ. ಅವರುಗಳಲ್ಲಿ ಡಾ. ಶರೀಫ್ ಹಸಮಕಲ್ ರವರೂ ಒಬ್ಬರು.

        ಶ್ರೀ ಖಾನಸಾಬ್ ಮತ್ತು ಶ್ರೀಮತಿ ಫಾತೀಮಾ ದಂಪತಿಗಳ ಪುತ್ರರಾಗಿ ಡಾ. ಶರೀಫ್ ಹಸಮಕಲ್ ಅವರು ೧೯೮೫ ರ ಜುಲೈ ೨೦ ರಂದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಜನಿಸಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಸಮಕಲ್ ನಲ್ಲಿ, ಪದವಿ ಪೂರ್ವ ಮತ್ತು ಪದವಿ ಸಿಂಧನೂರಿನಲ್ಲಿ ಪೂರೈಸಿದ್ದಾರೆ. ಎಂ.ಎ ಕನ್ನಡ ಸ್ನಾತಕೋತ್ತರ ಪದವಿಯ ನಂತರ “ಇತ್ತೀಚಿನ ಕನ್ನಡ ಕಾವ್ಯ ತಾತ್ವಿಕ ನೆಲೆಗಳು” ಎನ್ನುವ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಹಂಪಿಯ ಕನ್ನಡ ವಿಶ್ವ ವಿದ್ಯಾಲಯದಿಂದ ಪಡೆದಿದ್ದಾರೆ. ಇವರು ತಮ್ಮ ಪದವಿಯ ಹಂತದಿಂದಲೇ ಸಾಹಿತ್ಯ ಕುರಿತು ವಿಶೇಷ ಒಲವನ್ನು ಹೊಂದಿದ್ದು, ಕಾವ್ಯ, ನಾಟಕ, ಸಂಶೋಧನೆ, ವಿಮರ್ಶೆ, ಗಜಲ್.. ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ, ಬರುತ್ತಿದ್ದಾರೆ. “ಚಿಲ್ಲರೆಗೆ ಕದಲದ ಜಾಗ” ಎಂಬ ಕವನ ಸಂಕಲನ, “ಅಕ್ಷರ ಅರಿವು” ಎಂಬ ಮಕ್ಕಳ ನಾಟಕ ಹಾಗೂ “ಕಣ್ಣ ಬೊಗಸೆಯಲ್ಲಿ” ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ವಾಙ್ಮಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸದ್ಯ ಶ್ರೀಯುತರು ಸಿಂಧನೂರಿನ ವಿಸಡಮ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದಾರೆ‌.

      ಕ್ರಿಯಾಶೀಲ ವ್ಯಕ್ತಿತ್ವವುಳ್ಳ ಹಸಮಕಲ್ ಅವರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡವರು. “ಅಕ್ಷರ ಅರಿವು” ಎಂಬ ಇವರ ಮಕ್ಕಳ ನಾಟಕವು ನಾಟಕ ಅಕಾಡೆಮಿಯಿಂದ ರಾಯಚೂರಿನಲ್ಲಿ ಹತ್ತು ಹಲವಾರು ಪ್ರದರ್ಶನಗಳನ್ನು ಕಂಡಿದೆ. ಇವರ ಬರವಣಿಗೆಯ ಹಲವು ಪ್ರಕಾರಗಳು ನಾಡಿನ ಬಹಳಷ್ಟು ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. ಇವರು ಅನೇಕ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ಸಾರಿದ್ದಾರೆ. ಇವರ ಸಾಹಿತ್ಯ ಸೇವೆಗೆ ನಾಡಿನ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿ ಪ್ರಶಸ್ತಿ, ಸಂಚಯ ಕಾವ್ಯ ಬಹುಮಾನ, ‘ಸೃಷ್ಟಿ ಕಾವ್ಯ’ ಪ್ರಶಸ್ತಿಗಳು ಪ್ರಮುಖವಾಗಿವೆ.

       ‘ಗಜಲ್’ ಎಂಬುದು ಕೋಮಲತೆ, ಮೃದು, ಪ್ರೀತಿ ಮತ್ತು ಸೌಂದರ್ಯದ ಅನ್ವರ್ಥಕವಾದ ಹೆಣ್ಣಿನ ರೂಪ. ಗಜಲ್ ಲತೆಯಂತೆ ಮೊಳಕೆಯೊಡೆದು ರಸಿಕರ ಮನಸ್ಸಿನಲ್ಲಿ ಉದ್ಯಾನವನ್ನು ಸೃಷ್ಟಿಸುತ್ತದೆ. ಅಂತೆಯೇ ಗಜಲ್ ಪುಷ್ಪಗಳಂತೆ ಸರಿಯಾದ ಸಮಯ ಬಂದಾಗ ಮಾತ್ರ ಚಿಗುರುತ್ತದೆ. ಹೇಗೆ ಕುಸುಮವು ತನ್ನ ಸಂತೋಷಕ್ಕಾಗಿ ಅರಳುತ್ತದೆಯೋ ಹಾಗೆಯೇ ಗಜಲ್ ಕೂಡ. ಇಲ್ಲಿ ಒತ್ತಾಯ ಸಲ್ಲದು. ಗಜಲ್ ಮಾತನಾಡುವುದಿಲ್ಲ, ಮಾತನಾಡಬಾರದು. ಕಾರಣ, ಗಜಲ್ ಮೃದುಭಾಷಿಣಿ, ಮೌನದ ಕಡಲು. ಅದೇನಿದ್ದರೂ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ, ಅಭಿವ್ಯಕ್ತಿಸುತ್ತದೆ. ಸಭ್ಯತೆಯು ಮಾನವೀಯತೆಯ ಹೂವು ಆಗಿರುವಂತೆ ಗಜಲ್ ಸಾರಸ್ವತ ಲೋಕದ ಶೀಲವನ್ನು ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಲ್ಲಿ ಶರೀಫ್‌ ಹಸಮಕಲ್ ಅವರ ‘ಕಣ್ಣ ಬೊಗಸೆಯಲ್ಲಿ’ ಗಜಲ್ ಸಂಕಲನದಲ್ಲಿ ಪ್ರೀತಿ, ವಿರಹದ ಯಾತನೆ, ಮಧುಬಟ್ಟಲಿನ ಘಮಲು, ಕನಸಿನ ಪಕಳೆ, ಮಳೆಬಿಲ್ಲ ಸೊಬಗು, ಪೈಜಾಣದ ಇಂಪು, ಬೆಚ್ಚನೆಯ ಸ್ಪರ್ಷದಂತಹ ನವಿರು ಭಾವಗಳಿವೆ. ಇವುಗಳೊಂದಿಗೆ ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ತಾತ್ವಿಕ ಚಿಂತನೆ, ಅರಿವಿನ ಬೆಳಕು, ಧಾರ್ಮಿಕ ಡಾಂಭಿಕತೆ, ಕೋಮು ಸಾಮರಸ್ಯದ ಹಂಬಲ… ಮುಪ್ಪರಿಗೊಂಡಿವೆ. ಪ್ರತಿಮೆ, ರೂಪಕ, ನೆಲದ ಭಾಷೆ, ಹೊಸ ನೋಟವನ್ನು ದಕ್ಕಿಸಿಕೊಳ್ಳುವ ಹುರುಪು ಸಹೃದಯಿಗಳ ಗಮನವನ್ನು ಸೆಳೆಯುತ್ತದೆ.

“ಜಗತ್ತಲ್ಲಿ ನಾನೇಕೆ ಬಡವ ಆ ನಿನ್ನ ಒಲುಮೆ ಇರುವ ತನಕ
ನಿನ್ನಾ ಸಾಂಗತ್ಯಯೊಂದೆ ಸಾಕು ಸದಾ ಕುಣಿವೆ ಬದುಕಿರುವ ತನಕ”

ಪ್ರೀತಿ ಎನ್ನುವುದು ಒಂದು ಯೂನೀಕ್ ಭಾವ. ಕಣ್ಣಿಗೆ ಕಾಣಿಸದಾದರೂ ಅನುಭವದ ರೂಪದಲ್ಲಿ ಮುದ ನೀಡುತ್ತದೆ. ಸಿರಿತನ, ಬಡತನ ಎಂಬ ತಾರತಮ್ಯ ಇಲ್ಲಿ ನಗಣ್ಯ. ಪ್ರೀತಿ ಯಾವತ್ತೂ ತಾಜಮಹಲ್ ನ ಪ್ರತೀಕ. ಇಲ್ಲಿ ಗಜಲ್ ಗೋ ಶರೀಫ್ ಹಸಮಕಲ್ ಅವರು ಪ್ರೀತಿಯ ಸಿಂಚನ ಹೇಗೆ ಪ್ರೇಮಿಗಳನ್ನು ಬಡತನದಿಂದ ಪಾರುಮಾಡುತ್ತದೆ ಎಂಬುದನ್ನು ಸೂಚ್ಯವಾಗಿ ಅರುಹಿದ್ದಾರೆ. ಈ ಕಾರಣಕ್ಕಾಗಿಯೇ ಅನಿಸುತ್ತದೆ ಪ್ರೀತಿ ಯಾವತ್ತೂ ಅಮರ, ಶಾಶ್ವತ ಎಂದು.

       ರೈತನನ್ನು ‘ಭೂಮಿ ತಾಯಿಯ ಚೊಚ್ಚಲು ಮಗ’ ಎಂದು ಪ್ರೀತಿ, ಅಭಿಮಾನದಿಂದ ಕರೆಯಲಾಗುತ್ತದೆ. ಇತಿಹಾಸ, ಪರಂಪರೆಗಳಲ್ಲಿ ಪೂಜಿಸಲಾಗುತ್ತಿದೆ, ಗೌರವಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ….! ಎಲ್ಲವನ್ನೂ ಹಣದ ಮೂಲಕ ಅಳೆಯುವ ಭೋಗ ಸಂಸ್ಕೃತಿಯ ಜಮಾನದಲ್ಲಿ ನಾವಿದ್ದೇವೆ. ಮಾನ್ಸೂನ್ ಮಳೆಯೊಂದಿಗೆ ಜೂಜು ಆಡುವ ರೈತನನ್ನು ನಮ್ಮ ಸಾಮಾಜಿಕ ವ್ಯವಸ್ಥೆ ಅವಮಾನಿಸಿದ್ದೆ ಹೆಚ್ಚು. ಸುಖನವರ್ ಹಸಮಕಲ್ ಅವರು ತಮ್ಮ ಈ ಷೇರ್ ನಲ್ಲಿ ರೈತನ ಬವಣೆಯನ್ನು ಕುರಿತು ವಿಷಾದಿಸಿದ್ದಾರೆ. ಒಕ್ಕಲಿಗನಿಗೆ ‘ಮಳೆ’ಯೇ ಸಂಜೀವಿನಿ. ಮಳೆಯಿದ್ದರೆ ಬೆಳೆ, ಬೆಳೆಯಿದ್ದರೆ ಬಾಳು ಎಂಬುದನ್ನು ಸಾರುತ್ತ, ಇಂದಿನ ಕೃಷಿ ವಿಧಾನ ವೈಜ್ಞಾನಿಕ ದಾರಿಯಲ್ಲಿ ಸಾಗಬೇಕು ಎಂಬ ಆಶಯವನ್ನೇ ವ್ಯಕ್ತಪಡಿಸಿದ್ದಾರೆ.

“ಮುನಿಸಿಕೊಂಡ ಮಳೆರಾಯ ಬರುತ್ತಿಲ್ಲ ಮುತ್ತಂತ ಜ್ವಾಳ ಬಿತ್ಯಾರ
ಕಾಲಕಾಲಕ್ಕೆ ಹನಿಯಾದ್ರ ಬಸವಣ್ಣ ಹೊತ್ತ ನೇಗಿಲ ಚಿತ್ತಾರ”

          ಪ್ರೀತಿಯು ಕಾಡುಹೂವಿನಂತೆ; ಇದು ಹೆಚ್ಚಾಗಿ ಅಸಂಭವ ಸ್ಥಳಗಳಲ್ಲಿ ಕಂಡುಬರುತ್ತದೆ. ಒತ್ತಡಗಳ ಮಧ್ಯೆಯೇ ಗಜಲ್ ರೂಪ ತಾಳುತ್ತದೆ, ತನ್ನ ಅಸ್ಮಿತೆಯನ್ನು ಸಾರುತ್ತದೆ. ಅನುರಾಗದ ಹೂರಣವನ್ನು ಉಣಬಡಿಸುತ್ತದೆ. ಸುಖನವರ್ ಡಾ. ಶರೀಫ್ ಹಸಮಕಲ್ ಅವರಿಂದ ಗಜಲ್ ಗಳು ರಚನೆಯಾಗಲಿ, ಸಹೃದಯಿಗಳ ಮನವನ್ನು ತಣಿಸಲಿ ಎಂದು ಪ್ರೀತಿಯಿಂದ ಶುಭ ಹಾರೈಸುತ್ತೇನೆ.

“ನಾನು ಹತಾಶನಾಗಿದ್ದರೆ ಅವಳಿಗೆ ಸಂತೋಷವಾಗುತ್ತದೆ ಎಂದಾದರೆ
ಅವಳಿಗಾಗಿ ನಾನೇಕೆ ನನ್ನ ಬಾಳನ್ನು ಹಾಳು ಮಾಡಿಕೊಳ್ಳಬಾರದು”
-ಗುಲಾಮ್ ಹುಸೇನ್ ಸಾಜಿದ್

ಗಜಲ್ ಗುಂಗು ಎಂಬುದು ಎಂಥಹ ಮನಸ್ಸಿಗಾದರೂ, ಯಾವ ಸಮಯದಲ್ಲಾದರೂ ಮುದ ನೀಡದೆ ಇರದು! ಆದರೆ ಏನು ಮಾಡುವುದು, ಸಮಯ ಯಾರ ಅಪ್ಪನ ಸ್ವತ್ತಲ್ಲ; ಅದರ ಮೌನಾಜ್ಞೆಯನ್ನು ಮೀರಲಾದಿತೆ? ನನಗೂ ಹೋಗಲು ಇಷ್ಟವಿಲ್ಲ, ಬೇಸರ ಮಾಡಿಕೊಳ್ಳಬೇಡಿ. ಇವಾಗ ತೆರಳಿ ಮತ್ತೇ ಮುಂದಿನ ಗುರುವಾರದಂದು ತಮ್ಮ ಮುಂದೆ ಹಾಜರಿರುವೆ. ಹೋಗಿ ಬರುವೆ, ಬಾಯ್, ಸಿಯುವ್…!!
ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ,

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top