ಹನಿಬಿಂದು ಅವರ ಹೊಸ ಕವಿತೆ-ಏನು ಮಾಡಲಿ ನಾನು?

ಕಾವ್ಯ ಸಂಗಾತಿ

ಹನಿಬಿಂದು

ಏನು ಮಾಡಲಿ ನಾನು?

ನಾ ಹೇಳಿದನೆಂದು ಮೊಗ್ಗಾದ ಹೂವೆಂದೂ ಅರಳದು
ಬಲಿತು ಕಾಯಿ ತಕ್ಷಣವೇ ಬಿರಿದು ಹಣ್ಣಾಗದು
ಒಣ ಮರ ಹಸಿರ ಚಿಗುರೊಡೆದು ನಿಲ್ಲದು
ಭಯದ ನೆರಳಿನಲಿ ಮನದ ಪ್ರೀತಿ ಮೊಳೆಯದು

ಸೂರ್ಯ ಉದಯಿಸಿದವನು ಮತ್ತೆ ಮಂಕಾಗಲಾರ
ಚಂದಿರ ಹುಣ್ಣಿಮೆಯಲ್ಲದೆ ಪೂರ್ಣ ಕಾಣಲಾರ
ಪಕ್ಷಿಗಳು ಮಧ್ಯ ರಾತ್ರಿ ಎದ್ದು ಚಿಲಿಪಿಲಿ ಎನ್ನಲಾರವು
ರಾಗಿ ಕಾಳಿನ ಗಿಡದಿ ಗೋಧಿ ಬೆಳೆಯಲಾಗದು

ಮೌನ ವ್ರತ ಹಿಡಿದ ಗಿಳಿಯು ಮಾತನಾಡದು
ರೌರವ ನರಕದಲಿ ಸಂತಸ ಉಕ್ಕಿ ಹರಿಯದು
ಕೌರವನ ಹಾಗೆ ದ್ವೇಷ ಹೊತ್ತಿ ಉರಿಯದು
ಜವ್ವನ ಜಾರಿ ಹೋಗಿ ಮತ್ತೆ ವಯಸ್ಸು ತಿರುಗದು

ಭರವಸೆಯ ನೀರ ಝರಿಯಂತೆ ಹಾರಿ ಬೀಳದು
ಮರದೊಳಗಿನ ಜೀವ ಇಣುಕಿ ಮಾತನಾಡದು
ಕರದೊಳಗಿನ ನರನಾಡಿಗಳು ರಕ್ತ ಸುರಿಸದಿರದು
ಹೃದಯ ಬಡಿಯುವ ಸದ್ದು ಏರು ಪೇರಾಗದಿರದು

ನಾಯಿ ನರಿಗಳು ಊಳಿಡದೆ ಬದುಕವು
ಕಾಯಿ ಹಣ್ಣಾಗದೆ ಬೀಜ ಮೊಳಕೆ ಒಡೆಯದು
ಗಾಯ ಕೆಂಪಾಗದೆ ಹೊಸ ಜೀವಕೋಶ ಬಾರದು
ತಾಯ ಪ್ರೀತಿ ಕೊರತೆ ಕಂಡು ಅಳಿಯದು

ಮತ್ತೇಕೆ ನಾನು ನನ್ನದು ನಾನೇ ಎನುತ ಮೆರೆವೆ
ನರ ಮಾನವ ನೀ ಸಾಸಿವೆಗಿಂತ ಕೀಳಲ್ಲವೆ?
ವರ ನೀಡುವ ಭಗವಂತನ ನಂಬದಿಹರಿರುವರು
ಗರಿ ಉದುರಿತೆಂದು ಖಗ ಹಾರದೆ ಉಳಿವುದೇ?

———————
ಹನಿಬಿಂದು

Leave a Reply

Back To Top