ಅಂಕಣ ಸಂಗಾತಿ

ಆತ್ಮ ಸಖಿ

ಭಾರತಿ ಅಶೋಕ್

ಮುಟ್ಟು – ಮುಟ್ಟದಿರೇಕೆ

ಅಮ್ಮ ಬೇಡಮ್ಮ ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡ್ತಿನಿ ಎಂದು ಗೋಗೆರೆವ ಮಗಳಿಗೆ (ರಾತ್ರಿ ಹತ್ತು ಗಂಟೆಗೆ) ಸ್ನಾನ ಮಾಡಿಯೇ ಮಲಗಬೇಕು, ಎಂದು ಗಟ್ಟಿ ದನಿಯಲ್ಲಿ ತಾಯಿ ಹೇಳಿತ್ತಿರುವುದಕ್ಕೆ ಕಾರಣ ಕೇಳಿದರೆ ನಿಜಕ್ಕು ಆಶ್ಚರ್ಯವಾಗುತ್ತದೆ

ಹೌದು ಏಳನೇ ತರಗತಿಯಲ್ಲಿ ಓದುತ್ತಿರುವ ೧೨/೧೩ ವರ್ಷದ ಹೆಣ್ಣು ಮಗು ಆ ಹೊತ್ತಿನಲ್ಲಿ ಯಾಕಾಗಿ ಸ್ನಾನ ಮಾಡಬೇಕು ಎಂದು ಕೇಳಿದರೆ ಇಲ್ಲ, ಆಕಿ ‘ಮುಟ್ಟಾಗ್ಯಾಳ’ ಅದಕ್ಕೆ ತಲೆ ಮೇಲಿಂದ ನೀರು ಹಾಕಿಕೊಂಡು ಮಲಗಬೇಕು, ಎನ್ನುತ್ತಾಳೆ ತಾಯಿ. ಮತ್ತೂ ಗಮನಿಸಿದರೆ, ಆ ಮಗುವನ್ನು ಮುಟ್ಟದೆ ಉಟ್ಟ ಬಟ್ಟೆಯಲ್ಲಿಯೇ ಮೇಲಿಂದ ತಲೆಗೆ ನೀರು ಸುರಿದು, ಅವಳಿಗೆ ಪ್ರತ್ಯೇಕವಾದ ಹಾಸಿಗೆ ಕೊಟ್ಟು ದೂರದಲ್ಲಿ ಮಲಗಲು ಹೇಳುವ ತಾಯಿ. ಆ ಮಗು ನೀರು ಹನಿಯುತ್ತಿದ್ದ ತಲೆಕೂದಲನ್ನೂ ಒರೆಸಿಕೊಳ್ಳದೇ ಅನಾಥ ಭಾವದಲ್ಲಿ ಒಂಟಿಯಾಗಿ ಮಲಗುವುದು. ಇದು ತಿಳುವಳಿಕೆ ಇರುವ ಸಮೂದಾಯಗಳಲ್ಲೂ ನಡೆಯುವ ದಿನನಿತ್ಯದ ಬದುಕಿನ ಪುನರಾವರ್ತನೆ. ಇದು ಕೇವಲ ಮುಟ್ಟಾದ ದಿನದ ಮುಟ್ಟದಿರುವಿಕೆಯಲ್ಲ. ಅದು ಮೂರರಿಂದ ಐದು ದಿನವೂ ಹಾಗೆ ಪ್ರತ್ಯೇಕವಾಗಿ ಇರಬೇಕು, ಮತ್ತು ಆಕೆ ಬಳಸುವ ತಟ್ಟೆ ಲೋಟ ಬಟ್ಟೆಗಳು ಪ್ರತ್ಯೇಕವಾಗಿಯೇ ಇರುತ್ತವೆ. ಸ್ವಲ್ಪ ಸುಧಾರಿಸಿದ ಕುಟುಂಬಗಳಲ್ಲಿ ಈ ಮಟ್ಟಿನ ಪ್ರತ್ಯೇಕತೆ ಇರದಿದ್ದರೂ ಮುಟ್ಟಾದವರು ಯಾವುದೇ ಶುಭ ಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ. ಪೂಜಾ ಗೃಹಕ್ಕೆ ಕಾಲಿಡುವಂತಿಲ್ಲ. ಪೂಜೆ, ಪುನಸ್ಕಾರಗಳನ್ನು ಮಾಡುವಂತಿಲ್ಲ. ಪೂಜಾ ಸಾಮಾಗ್ರಿಗಳನ್ನು ಮುಟ್ಟುವಂತಿಲ್ಲ. ಅಷ್ಟೇ ಅಲ್ಲದೇ ಬಹಳ ದಿನಗಳ ಕಾಲ ಸಂಗ್ರಹಿಸಿ ಇಡುವಂತಹ ಹಪ್ಪಳ, ಸಂಡಿಗೆ, ಉಪ್ಪಿನಕಾಯಿಗಳನ್ನು ತಯಾರಿಸುವಂತಿಲ್ಲ. ಹಾಗೇನಾದರೂ ಮುಟ್ಟಿದರೆ ಅವು ಬೇಗ ಹಾಳಾಗುತ್ತವೆ, ಕೆಟ್ಟು ಹೋಗುತ್ತವೆ ಎನ್ನುವ ಮಾತುಗಳನ್ನು ಹಿರಿಯರಿಂದ ಕೇಳಬೆಕಾಗುತ್ತದೆ. ಹೂ ತರಕಾರಿ, ಸಸಿಗಳನ್ನು ಮುಟ್ಟುವಂತಿಲ್ಲ ಒಣಗುತ್ತವೆ ಎನುತ್ತಾ ಅವಗಳನ್ನು ಮುಟ್ಟದಂತೆ ಜಾಗ್ರತೆ ವಹಿಸುತ್ತಾರೆ. .

ಇವು ಮೇಲ್ಜಾತಿಯ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಕಂಡು ಬರುವ ಸನ್ನಿವೇಷಗಳು. ಅಂದರೆ ಅಂಥ ಕುಟುಂಬದಲ್ಲಿ ಇಂಥ ಆಚರಣೆಗಳು ಈಗಲೂ ನಡೆದುಕೊಂಡು ಬರುತ್ತಿದೆ ಎನ್ನುವುದಕ್ಕೆ ನಿರ‍್ಶನ ಇದು. ಆದರೆ ಮೇಲ್ಜಾತಿಯಲ್ಲಿ ಇದ್ದಷ್ಟು ಇಂಥಹ ಅನಗತ್ಯ ಮಡಿವಂತಿಕೆಗಳು ಇಂದಿನ ಯುವ ಜನಾಂಗವನ್ನು ಬಿಡದೇ ಕಾಡುತ್ತಿರುವುದು ನಿಜಕ್ಕು ಶೋಚನೀಯ ಸಂಗತಿ. ಇನ್ನೊಂದು ವಿಚಾರ ಇಲ್ಲಿ ಸ್ಪಷ್ಟ. ಅದು ಏನೇಂದರೆ ಇಲ್ಲಿ ಆಚರಣೆಗಳನ್ನು ಹೇರುತ್ತಿರುವುದಾಗಲೀ ಅಥವಾ ಇದನ್ನು ಹೀಗೆ ಮಾಡಬೇಕು ಎನ್ನುವ ಒತ್ತಡವನ್ನು ಹಾಕುತ್ತಿರುವುದಾಗಲೀ ಪುರುಷರಲ್ಲ, ಇಲ್ಲಿ ಸ್ವತಃ ಹೆಂಗಳೆಯರೇ ತಮಗೆ ಇಷ್ಟವೋ ಅನಿಷ್ಟವೋ ಅದನ್ನು ತಾವೂ ಅನುಸರಿಸಿಕೊಂಡು ಈ ಹೊತ್ತಿನ ಪೀಳಿಗೆಗೂ ಮುಂದುವರಿಸುತ್ತಿದ್ದಾರೆ, ಅಷ್ಟೇ ಅಲ್ಲ ಒತ್ತಾಯದಿಂದ ಹೇರುತ್ತಿದ್ದಾರೆ.
ಇನ್ನು ಎಷ್ಟೋ ಬುಡಕಟ್ಟು ಸಮುದಾಯಗಳಲ್ಲಿ ಈ ‘ಮುಟ್ಟಿ’ನ ಬಗೆಗೆ ತೀರ ಕಡಿಮೆ ತಿಳುವಳಿಕೆ ಇದ್ದು ಅದು ಅವರ ದಿನನಿತ್ಯದ ಬದುಕಿನಂತೆ ಸಹಜ ಕ್ರಿಯೆಯಾಗಿದ್ದು, ಶುಚಿತ್ವದ ಕಲ್ಪನೆಯು ಇಲ್ಲದಂತೆ ಬದುಕುತ್ತಿವೆ ಮುಟ್ಟಾದಾಗ ಮಣ್ಣನ್ನು ಬಳಸಿ ಒರೆಸಿಕೊಳ್ಳುವ ಮತ್ತು ಮತ್ತು ಕಲ್ಲಿನಿಂದ ಸೊಪ್ಪಿನಿಂದ ಒರೆಸಿಕೊಳ್ಳುವ ಮಟ್ಟಿಗೂ ಇದೆ. ಅದರ ಅರಿವು ಮೂಡಿಸುವ ಕೆಲಸವನ್ನು ವಿಶ್ವ ವಿದ್ಯಾಲಯಗಳ ಬುಡಕಟ್ಟು ಅದ್ಯಯನ ವಿಭಾಗಗಳಲ್ಲಿನ ಸಂಶೊಧನಾರ್ಥಿಗಳು ಈ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇನ್ನು ಹಿಂದೆ ತಾಯಂದಿರು ತಮ್ಮ ಮುಟ್ಟಿನ ವೇಳೆಯಲ್ಲಿ ಬಳಸಿದ ಹಳೆಯ ಸೀರೆಯನ್ನು ತುಂಡರಿಸಿ ಅದಕ್ಕಾಗಿ ಬಳಸುತ್ತಿದ್ದರು, ಅದಾದ ನಂತರ ಇಂದು ಅದಕ್ಕಾಗಿ ಆಧುನಿಕ ಸೌಲಭ್ಯಗಳು ಬಳಕೆಯಲ್ಲಿವೆ.

ಮುಟ್ಟು ಎಂದರೆ ಋತು ಚಕ್ರ. ಇದು ಸಾಮಾನ್ಯವಾಗಿ ಹೆಣ್ಣು ಮಕ್ಕಳ ಗರ್ಭಾಶಯದ ಒಳಪದರದಿಂದ ಯೋನಿಯ ಮೂಲಕ ಹೊರಬರುವ ರಕ್ತ ಮತ್ತು ಲೋಳೆ ಅಂಗಾಂಶದ ನಿಯಮಿತ ಸ್ರಾವ. ಸಾಮಾನ್ಯವಾಗಿ ಮೊದಲ ಋತುಕಾಲವು ಹನ್ನೊಂದರಿಂದ ಹದಿನೈದನೇ ವಯಸ್ಸಿನ ನಡುವೆ ಪ್ರಾರಂಭವಾಗುತ್ತದೆ. ಈ ಸಮಯವನ್ನು ಋತು ಚಕ್ರದ ಆರಂಭ ಎಂದು ಕರೆಯಲಾಗುತ್ತದೆ. ಆದರೆ ಸಾಂದರ್ಭಿಕವಾಗಿ ಋತುಕಾಲವು ಎಂಟು ವರ್ಷದಷ್ಟು ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಆರಂಭವಾಗಬಹುದು, ಆದರೂ ಇದನ್ನು ಸಾಮಾನ್ಯ ಎಂದೇ ಪರಿಗಣಿಸಬಹುದು,. ಈ ಋತುಕಾಲದ ಸರಾಸರಿ ವಯಸ್ಸು ಸಾಮಾನ್ಯವಾಗಿ ಅಬಿವೃದ್ದಿಶೀಲರಾಷ್ಟ್ರಗಳಲ್ಲಿ ತಡವಾಗಿರುತ್ತದೆ. ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬೇಗ ಇರುತ್ತದೆ.

ಮುಟ್ಟು ; ಹೆಣ್ಣಿಗೆ ಪ್ರಾಯದಲ್ಲಿ ಗರ್ಭಾಶಯದಿಂದ ಆಗುವ ರಕ್ತಸ್ರಾವವೇ ಮುಟ್ಟು.. ಮುಟ್ಟು ಎನ್ನುತ್ತಲೇ ಮುಟ್ಟದಿರುವ ಜನರು ನಮ್ಮ ಜೊತೆಯಲ್ಲೆ ಇದ್ದಾರೆ. ಇಂಥಹ ಸಂದರ್ಭದಲ್ಲಿ ಮುಟ್ಟಾದವರನ್ನು ಯಾರೂ ಮುಟ್ಟಬಾರದು ಎನ್ನುವ ಸಂಪ್ರದಾಯವನ್ನು ನಮ್ಮ ನಡುವೆ ಬದುಕುವವರು ಆಚರಿಸುತ್ತಾರೆ. ಹೆಣ್ಣು ಮುಟ್ಟಾದಾಗ ಆಕೆಯನ್ನು ಆ ಅಷ್ಟೂ ದಿನಗಳು ದೂರವಿರಿಸಿ ಆಕೆಯನ್ನು ಮುಟ್ಟದಂತೆ ಎಚ್ಚರ ವಹಿಸುತ್ತಾರೆ. ಇದಕ್ಕೆಲ್ಲಾ ಕಾರಣ ಮುಟ್ಟಿನ ಬಗೆಗೆ ಜನರಿಗಿರುವ ತಿಳುವಳಿಕೆಯ ಕೊರತೆ ಎನ್ನುವುದು. ಆದರೆ ಮುಟ್ಟು ಇಲ್ಲದೇ ಹುಟ್ಟಿಲ್ಲ ಎನ್ನುವ ಸತ್ಯ ಅರಿಯುವ ಮನಸ್ಸು ಅವರಿಗಿಲ್ಲ. ಬಂದ ದಾರಿಯನ್ನೇ ಕೀಳಾಗಿ ಕಾಣುವ ಮನುಷ್ಯರಿಗೆ ಅದನ್ನು ತಿರಸ್ಕರಿಸುವ ಜಾಣ್ಮೆಯನ್ನು ಮಾತ್ರ ಸಮಾಜ ಬೇಕಾದಷ್ಟು ಕೊಟ್ಟಿದೆ. ಹುಟ್ಟಿನ ಗುಟ್ಟು ಅರಿತರೆ ಮುಟ್ಟಿನ ಗುಟ್ಟು ಅರಿತಾನು ತಾ ಮನುಜ ಎನ್ನುವುದಕ್ಕೆ ತತ್ವ ಪದಕಾರರು ಈ ಅರಿವನ್ನು ಮೂಡಿಸಲು ಪ್ರಯತ್ನಿಸಿದ್ದಾರೆ ‘ಕಡಕೋಳ ಮಡಿವಾಳಪ್ಪ’ನವರ ಈ ತತ್ವ ಪದವನ್ನು ಗಮನಿಸೋಣ

ಮುಟ್ಟಾದ ಮೂರು ದಿನಕ ಹುಟ್ಟಿ ಬಂದಿದಿ ನೀನು ಮುಡಚಟ್ಟು ಎಲ್ಲ್ಯೆಂದ ಹೇಳಣ್ಣ ತೊಗಲೊಳಗೆ ತೊಗಲೊಕ್ಕು ತಗಲಿ ಬಂದವ ನೀನು ತಗಲು ಮಾತಾಡೋದ್ಯಾಕಣ್ಣ?

ಮುಷ್ಯನ ಹುಟ್ಟಿಗೆ ಕಾರಣವಾದ ಮುಟ್ಟನ್ನು ಕೇವಲವಾಗಿ ಕಾಣುವ ಸಮಾಜಕ್ಕೆ ಅದರ ಅರಿವನ್ನು ಮೂಡಿಸುವ ಈ ತತ್ವಪದ ಮುಟ್ಟಾದ ಮೂರು ದಿನಕ್ಕೆ ಫಲಿತಗೊಳ್ಳುವ ಯುಗ್ಮವು ಬ್ರೂಣವಾಗಿ ಬೆಳೆದು ಮಗುವಾಗುವ,ಮುಟ್ಟಿನಲ್ಲೆ ಹುಟ್ಟಿದ ನಿನಗೆ ಯಾವುದು ಹೊಲೆ(ಮೈಲಿಗೆ) ಹೇಳು, ಮೈಲಿಗೆ ಎಲ್ಲಿದೆ ಹೇಳು ಎಂದು ಸಾತ್ವಿಕ ಪ್ರಶ್ನೆಯನ್ನು ಎತ್ತುತ್ತಾರೆ, ದೇಹಗಳ ಸಂಪರ್ಕದಿಂದ ಹುಟ್ಟಿದವನು ನೀನು ಹುಟ್ಟಿದ್ದಕ್ಕೆ ಸುಳ್ಳು ನುಡಿಯದಿರು ಎಂದು ಸಾರುತ್ತದೆ. ಮುಟ್ಟು ಎಂಬ ರಕ್ತದೊಳಗೆ ಮೂಡುವ ಮೂಢ ನೀನು ನಿನ್ನ ಹುಟ್ಟಿನ ಗುಟ್ಟು ಅರಿಯದೇ ಮುಟ್ಟಿನ ಬಗೆಗೆ ಕೀಳು ಮಾತನಾಡಬೇಡ. ಅದು ನಿನಗೆ ಒಳಿತಲ್ಲ ಎಂಬ ತತ್ವದೊಂದಿಗೆ ಅರಿವನ್ನು ಮೂಡಿಸುತ್ತದೆ..
ಮೊದಲು ದರಿದ್ರ ಪಿಂಡ
ಮೇಲು ಕೀಳು ಅದೇಕೆ ಇಲ್ಲಿ
ನೀ ಹುಟ್ಟಿ ಬಂದದ್ದೇ ದಂಡ

ಮುಟ್ಟನ್ನು ಮೈಲಿಗೆ ಎನ್ನುವುದಾದರೆ ಆ ಮೈಲಿಗೆಯಲ್ಲಿ ಹುಟ್ಟಿದವನು ನೀನು ಮುಟ್ಟನ್ನು ಹೀಯಾಳಿಸುವ ಧರಿದ್ರ ನೀನು ಎಂಬ ತತ್ವವನ್ನು ಸಾರುವ ಕವಿತೆಯ ಈ ಸಾಲುಗಳು ಸಹ ಮುಟ್ಟನ್ನು ಅಲ್ಲಗಳೆಯುವವನು ಅಲ್ಲಿ ಹುಟ್ಟಿದ್ದೇ ಭೂಮಿಗೆ ದಂಡ ಎನ್ನುವ ಆಶಯವನ್ನು ಸಾರುತ್ತದೆ.

ಹುಟ್ಟಿದ್ದೇ ಮರೆತೋದಿ ಗಟ್ಟಿ ಆದರೆ ಕೈ ಕಾಳು ಪಕ್ಕೆಲುಬುಗಳ ಪೆಟ್ಟು ತಿಂದದ್ದು ಹೆಣ್ಣು

ನೀನು ಹುಟ್ಟಿ ಬಂದ ಹಾದಿಯನ್ನು ಮರೆತು ಬೆಳೆದು ದೊಡ್ಡವನಾದಾಗ ನಿನಗೆ ಅರಿವಿರುವುದಿಲ್ಲ ಹೆತ್ತವಳ ಕರುಳ ಬೇನೆ. ಅವಳು ತನ್ನ ಸರ‍್ವಸ್ವವನ್ನು ಬಸಿದು ನಿನಗೆ ಜನ್ಮವಿತ್ತಳು ನೀನು ಅವಳ ಮುಟ್ಟಿಗೆ ಮೈಲಿಗೆ ಇಟ್ಟೆ ಎನ್ನುವ ಮಾರ್ಮಿಕ ನುಡಿಗಳು.ಹೆಣ್ಣಿನ ಮುಟ್ಟು ಅದರ ಫಲವತ್ತತೆ ಇವುಗಳನ್ನು ಅರಿಯದೇ ಮುಟ್ಟನ್ನು ಮೈಲಿಗೆ ಎಂದು ದೂರ ನಿಲ್ಲುವುದು ತರವಲ್ಲ.
ಮುಟ್ಟು ಅದೊಂದು ಸಹಜ ಕ್ತಿಯೆ ಅದು ಎಲ್ಲಾ ವಯಸ್ಕ ಹೆಣ್ಣು ಮಕ್ಕಳಲ್ಲಿ ನಡೆಯುವ ಸಹಜ ಪ್ರಕ್ರಿಯೆ ಎಂದು ಅದನ್ನು ಹಾಗೆ ಗ್ರಹಿಸುವ ಮನೋಭಾವ ಬೆಳೆದು ಅದನ್ನು ಸಹಜವಾಗಿ ನೋಡುವಂತಾಬೇಕು. ಮುಟ್ಟಾದಾಗ ಅವಳನ್ನು ತುಂಬಾ ಆತ್ಮೀಯವಾಗಿ ನೋಡಿಲೊಳ್ಳುವ, ಆ ಸಮಯದಲ್ಲಿ ರಕ್ತಸ್ರಾವದಿಂದ ದೇಹ ಶಕ್ತಿಯನ್ನು ಕಳೆದುಕೊಂಡಿರುತ್ತದೆ ಅದಕ್ಕಾಗಿ ಪೌಷ್ಟಿಕ ಆಹಾರವನ್ನು ಕೊಟ್ಟು ಅವಳನ್ನು ಆಪ್ತವಾಗಿ ಮಾತನಾಡಿಸಿ ಮೈ ದಡವಿದರೆ ಅವಳಿಗೆ ಮುಟ್ಟಿನ ಪ್ರಾಯಾಸವು ನೀಗುವುದು. ಅವಳ ಆ ಸಮಯದಲ್ಲಿನ ಮಾನಸಿಕ ದರ‍್ಬಲ್ಯವು ಕಡಿಮೆಯಾಗಿ ಹೆಣ್ತನಕ್ಕೆ ಹೆಮ್ಮೆ ಪಡುವಂತಾಗಬಹುದು. ಇಷ್ಟನ್ನು ಮಾಡಲು ಪುರುಷನಾದರೂ ಸರಿ, ಮಹಿಳೆಯಾದರೂ ಸರಿಯೆ. ಒಟ್ಟಿನಲ್ಲಿ ಅವಳನ್ನು ಆ ನೋವಿನಿಂದ ದೂರ ಇರಿಸುವಂತಾದರೆ ಸಾಕು ಅದು ನಿಜಕ್ಕು ನಾವು ಸಮಾಜದಲ್ಲಿ ನಿರೀಕ್ಷಿಸುವ ಕೊಂಚ ಮಟ್ಟಿನ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯ. ಹೆಣ್ಣು ಮಕ್ಕಳಿಗ ಈ ಮುಟ್ಟು ಎನ್ನುವುದು ಸಹಜವಾದುದು, ಅದು ನನ್ನ ಶಕ್ತಿ, ಫಲವತ್ತತೆಯ ಸಂಕೇತ ಎಂದು, ಹೆಣ್ಣು ಎಂದರೆ ಸೃಷ್ಟಿಯ ಶಕ್ತಿ ಫಲವತ್ತತೆ ಎನ್ನುವುದು ಹೆಮ್ಮೆ ಎನ್ನಿಸುತ್ತದೆ.


ಭಾರತಿ ಅಶೋಕ್

ಅವಿಭಜಿತ ಬಳ್ಳಾರಿ( ಈಗ ವಿಜಯನಗರ) ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಸೋಗಿ ಗ್ರಾಮದಲ್ಲಿ (ಜುಲೈ1ರಂದು )ಜನಿಸಿದ ಇವರು, ಪ್ರಸ್ತುತ ಹೊಸಪೇಟೆಯಲ್ಲಿ ವಾಸವಾಗಿರುವ ಇವರು ಕನ್ನಡ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು , ಅಲ್ಲಿಯೇ “ಕನ್ನಡ ಹಾಸ್ಯ ಸಾಹಿತ್ಯದಲ್ಲಿ ವಿಡಂಬನೆಯ ತಾತ್ವಿಕ ನೆಲೆಗಳು” ಎನ್ನುವ ವಿಷಯದ ಮೇಲೆ ಸಂಶೋಧನೆಯನ್ನು ಕೈಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಸ್ಥಳೀಯ ಖಾಸಗೀ ಹೈಸ್ಕೂಲಿನಲ್ಲಿ ಮುಖ್ಯ ಶಿಕ್ಷಕಿಯಾಗಿ ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದರು, ಪದವಿಪೂರ್ವ ನಂತರ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಾ ತನ್ನಿಷ್ಟದ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಕಾವ್ಯದ ವಸ್ತುವೆಂದರೆ ಹೆಣ್ಣಿನ ಬದುಕನ್ನು ತಲ್ಲಣಗೊಳಿಸುವ, ಸಮಾಜಕ್ಕೆ ಮಾರಕ ಎನ್ನುವ ಸೂaಕ್ಷ್ಮ ವಿಷಯಗಳು, ಹೆಣ್ತನಕ್ಕಾಗಿ ಕೃತಜ್ಞತೆ ಹೊಂದಿರುವ ಈಕೆ ಅದನ್ನು ಅದ್ಬುತವಾಗಿ ಅನುಭವಿಸುವ ಸಂವೇದನಾಶೀಲೆ.

3 thoughts on “

  1. Technology ಇಸ್ಟ್ ಬೆಳದರೂ ಈ ಮೂಢನಂಬಿಕೆ ಇನ್ನೂ ಹೋಗಿಲ್ಲ ಅಂದ್ರೆ ಎನು ಅರ್ಥ?, ಉತ್ತಮ ಲೇಖನ .

  2. ಎಷ್ಟು ಕಡಿಮೆಯಾಗಿದೆ ಆದರೆ ಇನ್ನೂ ಇದ್ದೆ ಇದೆ

Leave a Reply

Back To Top