ಜಯಶ್ರೀ ದೇಶಪಾಂಡೆ ಕವಿತೆ-ಲೈಫು ಇಷ್ಟೇ!

ಕಾವ್ಯ ಸಂಗಾತಿ

ಜಯಶ್ರೀ ದೇಶಪಾಂಡೆ

ಲೈಫು ಇಷ್ಟೇ!

ಎದೆಯುದ್ದ ಬೆಳೆದವನಿಗೆ
ಎದೆಹಾಲಿನ ಕತೆಗಿತೆ…
ಮರುಳೆ ನಿನಗೆ?ರಬ್ಬಿಶ್!
ಹಳೆ ನೀರು ನೋಡಿ ಹೊಸನೀರಿಗೆ
ನಗೆಯಂತೆ!

ಈ ಗಿಳಿಗೆ ಬಲು ಮಾತು…
‘ಹಕ್ಕಿಗಳಿಗುಂಟೆ ಹಕ್ಕುಗಳ ಗೊಡವೆ?
ತತ್ತಿಗಿಟ್ಟ ಕಾವಿಗಿಟ್ಟಿತೆ ಲೆಕ್ಕ…
ಕೊಕ್ಕಿನ ತುತ್ತಿಗಿಟ್ಟಿತೆ?
ರೆಕ್ಕೆ ಬಲಿಸಿ
ಕ್ಷಣ ತೋರಿ ಅಕಾಶ ಹೊರಳಿ
ಹಾರುವುದ ಕಲಿಸಿದ್ದು ಪಾಠವಲ್ಲವೋ? ‘
ಬುದ್ಧಿಗಿಷ್ಟು ಹಿಡಿ ಸಾಣೆ.

ಆಡಿ ಮಾಡಿ ಹಾರಿ ಹೋದವನಿಗೆ
ಉಡಾಫೆಯದಲ್ಲವಂತೆ!
ಮುಗಿಲ ಹಿಂದೆ ನೆಟ್ಟ ದೃಷ್ಟಿ,
ಇಲ್ಲೆಲ್ಲ ಬರೀ ನೆಲಧೂಳು?
ಇಂದಲ್ಲ -ಬಿಡು
ಬಂದೇನು ಒಮ್ಮೆ,
ಶ್ಯೋ! ಏನದು ಕಿರಿಕಿರಿ.
ಸುಮ್ಮನಿರಬಾರದೆ?

ಕಾಯಿ ಹಣ್ಣಾಗಿ ಕೊಳೆತು ಮಣ್ಣಾಗಿ
ಮತ್ತೆ ಚಿಗುರಿದ ಹಸಿ ರೆಂಬೆಗೆ ನೇತಾಡಿದ ಹೊಸಮರಿಗೆ
ಉಕ್ಕೇರಿದ ಹುಕಿ…
ಇತಿಹಾಸಕ್ಕೆ ಮರುಕಳಿಸುವ ಹುಚ್ಚಂತೆ.

ಹಣ್ಣೆಲೆ ಹಾಡ ಹೇಳುತ್ತ ಇದಿಗೋ ವಟವಟದ
ಮನೆಮೂಳ!
ಕೈಚಾಚಿ ಕಣ್ಣಂಚಿನ
ಹನಿ ಕರೆದವಗೆ
ಹಳೆಪಾಠ ಹೇಳಿ,
ಹೊಸಮರಿ ಹೊರಟಾಗ…
ಮನದಲ್ಲೊಡೆದ
ಮೋಡ ಬಿರಿದು ಕವುಚಿದ್ದು
ಅಂದಂದಿನ ವತ೯ಮಾನಕ್ಕೆ
ಸುರಿದ ಭೂತದ ಕಣ್ಣೀರು!–

———————————

Leave a Reply

Back To Top