ಹಿಂದಿ ಮೂಲ: ಅದ್ನಾನ್ ಕಾಫೀಲ್ ದರ್ವೇಶ್
ಪರಿಚಯ:
ಕವಿ ಅದ್ನಾನ್ ಕಾಫೀಲ್ ದರ್ವೇಶ್ ಉತ್ತರ ಪ್ರದೇಶದ ಬಾಲಿಯಾದವರು. ಪ್ರಸ್ತುತ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧಕರು. ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಬರೆಯುತ್ತಾರೆ. ಹಿಂದಿಯ ಪ್ರಖ್ಯಾತ ಪತ್ರಿಕೆಗಳಲ್ಲಿ ಅವರ ಕವನಗಳು ಬೆಳಕು ಕಂಡಿವೆ. ಅವರು ಅನುವಾದದಲ್ಲಿಯೂ ತೊಡಗಿಕೊಂಡಿದ್ದಾರೆ. ಅವರ ಕಾವ್ಯಕ್ಕೆ ಈಗಾಗಲೇ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.
ಕನ್ನಡಕ್ಕೆ: ಕಮಲಾಕರ ಕಡವೆ
ಪರಿಚಯ:
ಕಮಲಾಕರ ಕಡವೆ, ಮೂಲತಃ ಉತ್ತರಕನ್ನಡದ ಶಿರಸಿಯ ಕಡವೆ ಗ್ರಾಮದವರು, ಈಗ ಮಹಾರಾಷ್ಟ್ರದ ಅಹಮದನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ ಭಾಷೆಗಳಲ್ಲಿ ಬರವಣಿಗೆ, ಅನುವಾದ ನಡೆಸುವ ಅವರು ಇವರೆಗೆ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ: ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017). ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ (ಕುವೆಂಪು ಭಾಷಾ ಭಾರತಿ, 2018). ಕನ್ನಡದ ಸಮಕಾಲೀನ ಕಾವ್ಯದ ಇಂಗ್ಲೀಷ ಅನುವಾದಗಳ ಪುಸ್ತಕವೊಂದರ ತಯಾರಿಯಲ್ಲಿ ಇದ್ದಾರೆ.
ಸಾವಿಗೀಡಾದ ಕವಿ
ದುಃಖ ಯಾವಾಗ ನನ್ನ ಅಂತರಂಗದ
ಸಂದುಗೊಂದುಗೊಳಗಿಂದೆಲ್ಲ ಜಿನುಗುತ್ತಿತ್ತೋ
ನಾನು ಹುಚ್ಚನಂತೆ ತಲೆ ಚಚ್ಚಿಕೊಳ್ಳುತ್ತಿದ್ದೆ
ಕನಸಿನಲ್ಲೂ ಎಲ್ಲೆಲ್ಲೋ ಓಡುತ್ತಿದ್ದೆ
ಆಗಾಗ ಅಲ್ಲಿಲ್ಲಿ ಬೀಳುತ್ತಿದ್ದೆ
ಕಗ್ಗತ್ತಲ ದ್ವೀಪದ ಕಿನಾರೆಯಲ್ಲಿ ನಿಂತು ನರಳುತ್ತಿದ್ದೆ
ಗೊತ್ತಿತ್ತು ನನಗೆ ನನ್ನ ಈ ನರಕದ ಅಂತ
ನಿನಗೆ ತಿಳಿಯ ಬೇಕಿರುವುದು ಇದು ಮಾತ್ರ:
ನಾನೊಬ್ಬ ಕವಿ
ಮತ್ತು ಕಾವ್ಯದ ಅನಂತ ಏಕಾಂತದಲ್ಲಿ
ಸಾವಿಗೀಡಾಗಿದ್ದೆ
=========================
ನಗುತಿರುವೆ ನಾನೀಗ ದೂರು ಇನಿತಿಲ್ಲ
ನೋಡು ನಿನ್ನ ಮೇಲೆ ಕೋಪವೂ ಇನಿತಿಲ್ಲ
ನಿಷ್ಠೆಯೂ ಇಲ್ಲ, ನೇಮವೂ ಉಳಿದಿಲ್ಲ
ಈಗ ನಿನ್ನಿಂದಾಗಿ ಶಿಕ್ಷೆಯೂ ಇನಿತಿಲ್ಲ
ಅವಳು ನನ್ನ ಜೊತೆಗೀಗ ಇಲ್ಲವೇನೋ ಹೌದು
ನಿಜವೆಂದರೆ ನಮ್ಮ ನಡುವೆ ದೂರವೂ ಇನಿತಿಲ್ಲ
ಸೊರಗಿ ಹೋದೆ ಉಸಿರೇ ನಿಂತಂತೆ
ಅವಳ ಪವಾಡವೇ! ನನ್ನ ಚಲನೆಯೂ ಇನಿತಿಲ್ಲ
ಎರಡೂ ಬದಿ ಶವವೊಂದು ಬಿದ್ದಿದೆ
ಉಸಿರು ನಿಂತ ಗುರುತೂ ಇನಿತಿಲ್ಲ
ತಲೆ ಚಚ್ಚಿ ಕೊಳುವ ದಿನಗಳು ಕಳೆದವು
ದರವೇಶನಿಗೆ ದೇವದಯೆಯೂ ಇನಿತಿಲ್ಲ.
==============================
ಕಮಲಾಕರ ಕಡವೆ