ಪುಸ್ತಕ ಪರಿಚಯ

ಸಾರಾ ಶಗುಫ್ತಾ

(ಪಾಕಿಸ್ತಾನದ ಕವಯಿತ್ರಿ ಸಾರಾ ಶಗುಫ್ತಾ ಅವರ ಜೀವನ ಮತ್ತು ಕಾವ್ಯ  ಕುರಿತು ಅಮೃತಾ ಪ್ರೀತಂ ಬರೆದಿದ್ದಾರೆ . ಕನ್ನಡಕ್ಕೆ ಹಸನ್ ನಯೀಂ ಸುರಕೋಡ ಅನುವಾದಿಸಿದ್ದಾರೆ. ಲಡಾಯಿ ಪ್ರಕಾಶನ, ಗದಗ ಅದನ್ನು ಪ್ರಕಟಿಸಿದೆ. ಅದು ೨೮. ೫. ೨೦೧೬ರಂದು ಧಾರವಾಡದಲ್ಲಿ ಬಿಡುಗಡೆಯಾಗಿದೆ.)

ಸಾರಾ ಶಗುಫ್ತಾರವರ ಜೀವನ ಮತ್ತು ಕಾವ್ಯ ಕುರಿತ ವೃತಾಂತ ‘ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು’..!

ಹಾಲ ಮೇಲೆ ಆಣೆ…

ಆಸ್ಟ್ರೇಲಿಯಾದಲ್ಲಿ ಒಂದು ಕತೆ ಜನಜನಿತವಾಗಿದೆ. ಆ ದೇಶದಲ್ಲಿ ಒಮ್ಮೆ ಜನಿಸಿದ ಬಾತುಕೋಳಿಗಳಿಗೆ ಬಿಳಿಯ ರೆಕ್ಕೆಗಳಿದ್ದವು. ಆಗ ಅವು ಒಂದು ಪ್ರಚಂಡ ಬಿರುಗಾಳಿಗೆ ಸಿಲುಕಿಕೊಂಡವು. ಅವು ಹದ್ದುಗಳ ಗೂಡಿನಲ್ಲಿ ಆಶ್ರಯ ಪಡೆಯಬೇಕಾಯಿತು. ಹದ್ದುಗಳು ಸಾಯಂಕಾಲ ತಮ್ಮ ಗೂಡಿಗೆ ಮರಳಿದಾಗ ಅಲ್ಲಿ ಬಾತುಕೋಳಿಗಳಿದ್ದುದನ್ನು ಕಂಡವು. ಕೆರಳಿ ಕೆಂಡವಾದ ಹದ್ದುಗಳು ತಮ್ಮ ಚುಂಚದಿಂದ ಅವುಗಳ ರೆಕ್ಕೆಗಳನ್ನು ಎಳೆಯತೊಡಗಿದವು. ಬಾತುಕೋಳಿಗಳ ರೆಕ್ಕೆಗಳು ಇಲ್ಲವಾದವು. ಹದ್ದುಗಳು ಅವುಗಳನ್ನು ತಮ್ಮ ಉಗುರುಗಳಲ್ಲಿ ಹಿಡಿದುಕೊಂಡು ದೂರದ ಒಂದು ಕಾಡಿನಲ್ಲಿ ಎಸೆದವು..

ತಿನ್ನಲು ಮತ್ತು ಕುಡಿಯಲು ಏನೂ ಸಿಗದೆ ಬಾತುಕೋಳಿಗಳು ತಮ್ಮ ಸಾವನ್ನು ಎದುರು ನೋಡತೊಡಗಿದ್ದಾಗ ಕೆಲವು ಕಾಗೆಗಳು ಬಂದವು, ಅವುಗಳ ಬಗ್ಗೆ ಕನಿಕರಪಟ್ಟವು. ಬಾತುಕೋಳಿಗಳು ತಮ್ಮ ಗೋಳಿನ ಕತೆ ಹೇಳಿಕೊಂಡವು. ಕಾಗೆಗಳು “ಈ ಹದ್ದುಗಳು ನಮ್ಮ ವೈರಿಗಳು. ನೀವು ಸೇಡು ತೀರಿಸಿಕೊಳ್ಳಬೇಕು. ಅವು ಪಾಠ ಕಲಿಯುವಂತಾಗಬೇಕು. ಅವುಗಳಿಗೆ ಅದೇ ಗತಿಯಾಗಬೇಕು.” ಎಂದವು. ನೆರವಿನ ಸಂಕೇತವಾಗಿ ಕಾಗೆಗಳು ಅವುಗಳಿಗೆ ತಮ್ಮ ರೆಕ್ಕೆಗಳನ್ನು ನೀಡಿದವು. ಆ ಕಾರಣದಿಂದಾಗಿ ಆಸ್ಟ್ರೇಲಿಯನ್ ಬಾತುಕೋಳಿಗಳು ಇಂದಿಗೂ ಕಪ್ಪು ರೆಕ್ಕೆಗಳನ್ನು ಹೊಂದಿರುತ್ತವೆ…

ಆ ಕತೆಯ ಕಾಗೆಗಳು ನನಗೆ ನೆನಪಾಗುತ್ತಲೇ ಸಾರಾಳ ಒಂದು ಕವನ ಓದತೊಡಗಿದೆ…

ನೀ ಒಬ್ಬ ಕವಿ

ನಾನು ಗೂಡಿನಲ್ಲಿ ಕೊಳೆಯುತ್ತಿರುವ

ಕ್ಷುಲ್ಲಕ ಹೆಣ್ಣು

ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು

ಸೂಳೆಯಾದ ನಾನು ಒಲಿಸಿಕೊಳ್ಳಲಾಗಲಿಲ್ಲ ನಿನ್ನನ್ನು

ನನ್ನೆದೆಯಿಂದ ಜಾರಿದವು ಬರಿ ಖೊಟ್ಟಿ ನಾಣ್ಯ

ನೀನು ತಪ್ಪಿಸಿಕೊಂಡೆ ಮದುವೆಯನ್ನು

ಇಡೀ ನಾಲ್ಕು ದಿನ ಹೆಣೆದೆ ಅರ್ಧ ಹೊರಸು

ನೀನು ಮಲಗಿದೆ ನನ್ನ ಲಜ್ಜೆಯ ಹಾಸಿಗೆಯಲ್ಲಿ

ನಾನೊಬ್ಬ ಕ್ಷುಲ್ಲಕ ಹೆಣ್ಣು ಹಾಗಾಗಿ ಬೇಕಿದೆ ಪರಿಹಾರ

ನೀನು ಮರೆಯಲಾರೆ ಸಾವನ್ನು ನಾ ಮರೆಯಲಾರೆ ನೋವನ್ನು

ಖರೇ ನಾಣ್ಯವೆನಿಸಿಕೊಂಡಿತು ನನ್ನ ಖೊಟ್ಟಿ ನಾಣ್ಯ

ಬೇಕೆಂದಾಗ ನಾನು ನಿನ್ನನ್ನು ಖರೀದಿಸಬಲ್ಲೆ ಎಲ್ಲೇ ಆಗಲಿ

ಇಳಿಸಿಕೋ ಮುಸುಕಿನಲ್ಲಿ ನಿನ್ನ ಭಾರವನ್ನು

ನಿನ್ನಿಂದಲೇ ಶುರುವಾಗಲಿ ನನ್ನ ವ್ಯಾಪಾರ

ನಾನು ನರ್ತನದಿಂದ ಸವೆಸಿದೆ ನನ್ನ ಪೈಜಣದ ಗೆಜ್ಜೆಗಳನ್ನು

ನೀನು ಸರ್ವಸ್ವವನ್ನು ಕಳೆದುಕೊಂಡೆ ಮೌನದಲ್ಲಿ

ಗೂಡಿನಲ್ಲಿ ಕೂಡಿ ಹಾಕಲು ಒಂದು ಹೆಣ್ಣನ್ನು ಮದುವೆಯಾಗಿ

ಸೂಳೆಮಕ್ಕಳು ಮೀರಿದರು ಎಲ್ಲ ಮಿತಿಗಳನ್ನು

ಅದನ್ನೆಲ್ಲ ಅರಿತುಕೊಂಡೆ ಜೀವ ಪಣಕ್ಕೊಡ್ಡಿ

ನಿನ್ನೆಲ್ಲ ಪದಗಳು ನೆರವಾಗುತ್ತವೆ ಕುಂಟಲಗಿತ್ತಿಯರಾಗಿ

ನಿನ್ನಿಂದ ನಾ ತಿರುಗಿ ಪಡೆಯಲಾರೆ ಮೆಹರ್

ಅಷ್ಟೊಂದು ಮುಗ್ಗಲಗೇಡಿ ನಾನು

ಜನ ನನಗೆ ನೀಡುವರು ಕಾಣಿಕೆಯಾಗಿ ನನ್ನ ಮೆಹರ್

ಜನಜನಿತವಾಗಿದೆ ನಿನ್ನ ಬಳಲಿಕೆ

ಹೆಪ್ಪುಗಟ್ಟಿವೆ ನಿನ್ನ ಕೈಗಳು

ಏನಾಯಿತು ನಿನ್ನ ಸಮರಕಲೆಗಳಿಗೆ

ಆ ನಾಲ್ವರು ಹಿಜಡಾಗಳ ಅಣತಿ ಮೇರೆಗೆ

ಯಾವಾಗ ನಾನಾದೆ ನಿನ್ನ ಮಾನ-ಮರ್ಯಾದೆ

ನಿನ್ನ ಮಕ್ಕಳನ್ನು ಮರೆ ಮಾಚುವುದು ನಿನ್ನ ಸ್ವಾಭಿಮಾನ

ರಮಿಸೀತು ಹೇಗೆ ಅದು ನನ್ನ ಚೂರಾದ ಮನಸ್ಸನ್ನು?

ನನ್ನ ಕೊನೆಯ ಮನುಷ್ಯ ಸತ್ತು ಹೋದ

ಅವನ ಮಡದಿಯಾಗಿದ್ದೆ ಇಲ್ಲಿ ತನಕ

ನನ್ನ ಬಳೆಗಳೆ ಬದಲಾಗಿವೆ ಈಗ ಬರ್ಚಿಗಳಾಗಿ

ಬರ್ಚೆಗಳಿಂದಲೇ ಬರೆಯುವೆ ನನ್ನ ಕತೆಯನ್ನು…

ಕಡೆಗೂ ಸಾರಾ ತನ್ನ ಇಡೀ ಕತೆ ನನಗೆ ನಿರೂಪಿಸಿದಳು–

“ಅಮೃತಾ, ದಿನಾಲು ನಿನ್ನ ತಲೆ ತಿನ್ನಲು ಬರುತ್ತಿದ್ದೇನೆ. ಅಷ್ಟಕ್ಕೂ ನಾನು ಹೋಗುವುದಾದರೂ ಎಲ್ಲಿ? ಹೌದಲ್ಲ, ನಾನು ಇಲ್ಲಿಯವರೆಗೆ ಕಾವ್ಯ ರಚನೆಗೆ ಹೇಗೆ ತೊಡಗಿದೆಯೆನ್ನುವುದನ್ನೇ ನಿನಗೆ ಹೇಳಲಿಲ್ಲ. ಐದು ವರ್ಷಗಳ ಹಿಂದೆ, ನನ್ನೊಂದಿಗೆ ಕುಟುಂಬ ಯೋಜನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ, ತನ್ನನ್ನು ಕವಿ ಎಂದುಕೊಂಡಿದ್ದ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಬಂದ. ಆಗ ನಾನೊಬ್ಬ ವಿಚಿತ್ರ ಸಾಂಪ್ರದಾಯವಾದಿ ಯುವತಿಯಾಗಿದ್ದೆ. ಮನೆಯಿಂದ ಆಫೀಸಿಗೆ ನಡೆದುಕೊಂಡು ಬರುವುದನ್ನೇ ಬಹಳ ಕಷ್ಟಪಟ್ಟು ಕಲಿತುಕೊಂಡಿದ್ದೆ. ಯಾವುದೇ ಬಗೆಯ ಸೃಜನಶೀಲತೆಯಲ್ಲಿ ನನಗ ಆಸಕ್ತಿ ಇದ್ದಿರಲಿಲ್ಲ. ಆದಾಗ್ಯೂ ಕವಿಗಳು ಬಹಳ ದೊಡ್ಡ ವ್ಯಕ್ತಿಗಳೆಂದು ನನಗೆ ಅನಿಸಿತ್ತು.

ಒಂದು ದಿನ ಕವಿ ಮಹಾಶಯ “ನಾನು ಒಂದು ಮಹತ್ವಪೂರ್ಣ ವಿಷಯ ಕುರಿತು ಮಾತಾಡಬೇಕಿದೆ.”ಎಂದ. ನಾವು ರೆಸ್ಟಾರೆಂಟೊಂದರಲ್ಲಿ ಭೇಟಿಯಾದೆವು. “ನೀನು ನನ್ನನ್ನು ಮದುವೆಯಾಗುವೆಯಾ?” ಎಂದು ಆತ ಕೇಳಿದ. ಮರುದಿನವೇ ನಮ್ಮ ಮದುವೆ ನಿಶ್ಚಿತಾರ್ಥವಾಯಿತು. ಕಾಜಿಗೆ ಕೊಡುವುದಕ್ಕೆ ನಮ್ಮ ಬಳಿ ಹಣವಿದ್ದಿರಲಿಲ್ಲ. “ಅರ್ಧ ಹಣ ನೀವು ವ್ಯವಸ್ಥೆ ಮಾಡಿರಿ, ಇನ್ನರ್ಧ ನಾನು ಕೊಡುವೆ.” ಎಂದೆ…

“ನನ್ನ ತಂದೆತಾಯಿಯರಿಗೆ ನನ್ನ ನಿರ್ಧಾರ ಇಷ್ಟವಾಗಿಲ್ಲ. ಅವರು ಮದುವೆಗೆ ಹಾಜರಾಗುವುದಿಲ್ಲ. ನನ್ನ ಪರವಾಗಿ ನೀವೇ ಸಾಕ್ಷಿಗಳನ್ನು ಕರೆ ತರುವ ವ್ಯವಸ್ಥೆ ಕೂಡ ಮಾಡಬೇಕು.” ಎಂದೂ ಅವನಿಗೆ ಸೂಚಿಸಿದೆ…

ನನ್ನೊಬ್ಬ ಗೆಳತಿಯ ಬಟ್ಟೆಗಳನ್ನು ಎರವಲು ತಂದು ವಿವಾಹ ಸ್ಥಳ ತಲುಪಿದೆ. ನಮ್ಮ ಮದುವೆ ನೆರವೇರಿತು. ಕಾಜಿ ತನ್ನ ಶುಲ್ಕ ಮತ್ತು ಮಿಠಾಯಿಯ ಬಾಕ್ಸ್ ಸ್ವೀಕರಿಸಿದ. ನಮ್ಮ ಬಳಿ ಕೇವಲ ಆರು ರೂಪಾಯಿ ಉಳಿದಿತ್ತು. ನಾವು ನಮ್ಮ ಗುಡಿಸಲು ತಲುಪಿದಾಗ ನಮ್ಮ ಬಳಿ ಉಳಿದದ್ದು ಎರಡು ರೂಪಾಯಿ…

ಕಂದೀಲ ಬೆಳಕಿನಲ್ಲಿ ಬುರ್ಖಾ ತೊಟ್ಟು ನಾನು ಕುಳಿತುಕೊಂಡೆ. ಕವಿ ಮಹಾಶಯ “ನಿನ್ನ ಬಳಿ ಎರಡು ರೂಪಾಯಿ ಇದೆಯೆ?” ಎಂದು ಕೇಳಿದ. ತನ್ನ ಗೆಳೆಯರ ಮರುಪ್ರಯಾಣಕ್ಕೆ ಅದು ಬೇಕಿತ್ತು. ನಾನು ನನ್ನ ಕಡೆಯ ಎರಡು ರೂಪಾಯಿ ಸಹ ಕೊಟ್ಟುಬಿಟ್ಟೆ…

ಕೆಲ ದಿನಗಳ ನಂತರ “ನನ್ನ ಮನೆತನದಲ್ಲಿ ಹೆಂಡತಿ ಕೆಲಸ ಮಾಡುವುದಿಲ್ಲ.” ಎಂದು ಅವನು ಹೇಳಿದ. ನಾನು ಕೆಲಸ ಬಿಟ್ಟೆ. ಪ್ರತಿ ದಿನ ತಮ್ಮನ್ನು ಸುಪ್ರಸಿದ್ಧ ಕವಿಗಳೆಂದು ಭಾವಿಸಿದ್ದ ಕೆಲವು ಸೋಮಾರಿಗಳು ನಮ್ಮ ಮನೆಗೆ ಬರತೊಡಗಿದರು…

ಹಿಂಸೆ ನನ್ನ ರಕ್ತದಲ್ಲಿಲ್ಲ. ಆದರೆ ಹಸಿವೆಯನ್ನು ಮಾತ್ರ ತಾಳಿಕೊಳ್ಳಲಾರೆ. ಪ್ರತಿ ದಿನ ‘ಮಹಾನ್’ ವಿಚಾರಗಳ ಕುರಿತು ಚರ್ಚೆಯಾಗುತ್ತಿತ್ತು. ನಮ್ಮ ಮನೆಯಲ್ಲಿ ಚಿಂತನ-ಮಂಥನ ನಡೆಯುತ್ತಿತ್ತು. ಇಷ್ಟರ ಹೊರತಾಗಿ ನನ್ನ ಗಂಡ ಬೇರೆ ಏನೂ ಮಾಡುತ್ತಿರಲಿಲ್ಲ…

ಒಂದು ದಿನ ನಮ್ಮ ಬಾಡಿಗೆ ಗುಡಿಸಿಲಿನಿಂದ ಹೊರ ದಬ್ಬಲಾಯಿತು. ಅನಂತರ ಇದರರ್ಧದಷ್ಟು ಮನೆಯನ್ನು ಬಾಡಿಗೆಗೆ ಪಡೆದೆವು. ಹಾಸಿಗೆ ಮೇಲೆ ಮಲಗಿಕೊಂಡು ನಾನು ಗೋಡೆಗಳನ್ನು ದಿಟ್ಟಿಸುತ್ತಿದ್ದೆ. ಎಷ್ಟೋ ಸಲ ನಾನು ನನ್ನವೇ ಮೂರ್ಖ ಯೋಚನೆಗಳಿಗೆ ಬಲಿಯಾಗುತ್ತಿದ್ದೆ…

ನಾನು ಏಳು ತಿಂಗಳ ಗರ್ಭಿಣಿಯಾಗಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ನನಗೆ ಪ್ರಸವ ವೇದನೆ ಶುರುವಾಯಿತು. ಕಾವ್ಯ ಪ್ರತಿಭೆಯ ಹಮ್ಮಿನ ಅಮಲೇರಿಸಿಕೊಂಡು ಕವಿ ಮಹಾಶಯ ತನ್ನ ಗೆಳೆಯರೊಂದಿಗೆ ಹೊರಗೆ ಹೋಗಿಬಿಟ್ಟ ನನ್ನತ್ತ ಕಣ್ಣೆತ್ತಿಯೂ ನೋಡದೆ…

ನನಗೆ ನೋವು ಅಸಹನೀಯವಾದಾಗ ನನ್ನ ಮನೆಯೊಡತಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ದಳು. ನನ್ನ ಕೈಯಲ್ಲಿ ಬರೀ ಐದು ರೂಪಾಯಿ ಇತ್ತು. ಸ್ವಲ್ಪ ಹೊತ್ತಿನ ನಂತರ ನನಗೆ ಗಂಡು ಮಗುವಾಯಿತು. ಚಳಿ ಇತ್ತು. ಕೂಸಿಗೆ ಹೊದಿಸಲು ಒಂದು ಟಾವೆಲ್ ಸಹ ಇದ್ದಿರಲಿಲ್ಲ. ಮಗುವು ಐದು ನಿಮಿಷದ ಮಟ್ಟಿಗೆ ಕಣ್ಣು ತೆರೆಯಿತು. ನಂತರ ತನ್ನ ಕಫನ್ ಅರಸಿಕೊಂಡು ಹೋಯಿತು…

ಆ ಕ್ಷಣದಿಂದ ಮೈ ತುಂಬ ಕಣ್ಣಾದೆ…

ನರ್ಸ್ ನನ್ನನ್ನು ಬೇರೊಂದು ವಾರ್ಡ್‍ಗೆ ಕರೆದೊಯ್ದಳು. ಅಲ್ಲಿ ನನಗೆ ಒರಗಲು ನೆರವಾದಳು. ನಾನು ಮನೆಗೆ ಹೋಗಬೇಕೆಂದಿದ್ದೇನೆ ಎಂದು ಅವಳಿಗೆ ಹೇಳಿದೆ. ಏಕೆಂದರೆ ಮನೆಯಲ್ಲಿ ಯಾರೊಬ್ಬರಿಗೂ ಏನು ನಡೆದಿದೆ ಎನ್ನುವುದು ಗೊತ್ತಿರಲಿಲ್ಲ. ಅಪಾರ ಕಾಳಜಿಯಿಂದ ಅವಳು ನನ್ನತ್ತ ದೃಷ್ಟಿ ಬೀರಿದಳು. “ನಂಜೇರುವ ಎಲ್ಲ ಸಾಧ್ಯತೆ ಇದೆ. ಅದಕ್ಕಾಗಿ ಹಾಸಿಗೆಯಲ್ಲಿ ಮಲಗಿರು.” ಎಂದು ಹೇಳಿದಳು…

ಆಗ ನನ್ನ ಬಳಿ ಸತ್ತ ಕೂಸು ಮತ್ತು ಐದು ರೂಪಾಯಿ ಇತ್ತು. “ಆಸ್ಪತ್ರೆ ಬಿಲ್ ಕೊಡಬೇಕೆಂದರೆ ನನ್ನ ಬಳಿ ಹಣವಿಲ್ಲ. ನಾನು ಒಂದಷ್ಟು ಹಣ ತರುವೆ. ಇನ್ನು ಹೆಚ್ಚು ಕಾಲ ಹಾಸಿಗೆಯಲ್ಲಿ ಮಲಗಿರುವುದು ನನಗೆ ಸಾಧ್ಯವಾಗಲಾರದು. ನೀವು ನನ್ನ ಮಗುವನ್ನು ಭದ್ರತೆ ಎಂದು ಇಟ್ಟುಕೊಳ್ಳಿರಿ. ನಾನು ಬರುವೆ. ಓಡಿ ಹೋಗುವುದಿಲ್ಲ.” ಎಂದು ನರ್ಸ್‍ಗೆ ಮೊರೆ ಇಟ್ಟೆ…

ನಾನು ನೆಲ ಮಹಡಿಗೆ ಹೋದೆ. ನನಗೆ ವಿಪರೀತ ಜ್ವರವಿತ್ತು. ನಾನು ಬಸ್ ಹತ್ತಿದೆ. ಹೇಗೋ ಮನೆ ತಲುಪಿದೆ. ನನ್ನ ಸ್ತನಗಳು ಹಾಲಿನಿಂದ ಬಿಗಿದುಕೊಂಡಿದ್ದವು. ನಾನು ಪಾತ್ರೆಯಲ್ಲಿ ಹಾಲು ಹಿಂಡಿದೆ. ಈ ಮಧ್ಯ ಕವಿ ಮಹಾಶಯ ತನ್ನ ಎಂದಿನ ಗೆಳೆಯರ ತಂಡದೊಂದಿಗೆ ಪ್ರವೇಶಿಸಿದ…

ನಾನಂದೆ “ಗಂಡು ಮಗುವು ಆಗಿತ್ತು. ಸತ್ತು ಹೋಯಿತು.” ತುಂಬ ಮಾಮೂಲು ಎನ್ನುವಂತೆ ಅವನು ಕೇಳಿಸಿಕೊಂಡ. ತನ್ನ ಗೆಳೆಯರಿಗೆ ಸುದ್ದಿ ತಲುಪಿಸಿದ. ಆ ಮೇಲೆ ಏನೂ ನಡೆದೇ ಇಲ್ಲವೆನ್ನುವಂತೆ ಚರ್ಚೆಯನ್ನು ಎಲ್ಲಿಗೆ ಬಿಟ್ಟಿದ್ದರೋ ಅಲ್ಲಿಂದ ಮುಂದುವರಿಸಿದರು…

… ಫ್ರೈಡ್ ಬಗ್ಗೆ ಏನಂತೀರಾ?

… ರಿಂಬಾ ಏನು ಹೇಳಿದ್ದಾನೆ?

… ಶಾಹಿದ್ ಹೇಳಿದ್ದೇನು?

… ವಾರಿಸ್ ಶಾಹ್ ಬಹಳ ದೊಡ್ಡ ವ್ಯಕ್ತಿ.

ಈ ವಿಷಯ ನಾನು ನಿತ್ಯವೂ ಕೇಳುತ್ತಿದ್ದೆ. ಆದರೆ ಆ ದಿನ ಶಬ್ದಗಳ ಅಬ್ಬರ ಜೋರಾಗಿತ್ತೆಂದು ಅನಿಸಿತು. ಈ ಎಲ್ಲ ಮಹಾನ್ ವ್ಯಕ್ತಿಗಳು ಈಗಾಗಲೇ ನನ್ನ ರಕ್ತದಲ್ಲಿದ್ದಾರೆ, ನನ್ನ ಎದೆ ಹಾಲಿನಲ್ಲಿದ್ದಾರೆ ಎಂದು ಅನಿಸಿತು. ರಿಂಬಾ ಮತ್ತು ಫ್ರೈಡ್ ನನ್ನ ಮಗುವನ್ನು ಕಿತ್ತುಕೊಳ್ಳುತ್ತಿದ್ದಾರೇನೋ, ಜಜ್ಜಿ ಹಾಕುತ್ತಿದ್ದಾರೇನೋ ಎಂದು ಅನಿಸಿತು…

ಅಮೃತಾ, ಜ್ಞಾನಾರ್ಜನೆ ನನ್ನನ್ನು ಅಣಕಿಸುತ್ತಿತ್ತು ಎಂದು ನಿನಗೆ ಅನಿಸಬಹುದಲ್ಲವೆ? ಆ ದಿನ ಜ್ಞಾನ ನನ್ನ ಸ್ಥಳಕ್ಕೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟಿತೇನೋ. ಹೀಗಿತ್ತು ನನ್ನ ಮಗುವಿನ ಜನನ…

ಅದೇನೇ ಇರಲಿ ಅವರ ಚರ್ಚೆ ಮತ್ತಷ್ಟು ಹೆಚ್ಚು ಕಾಲು ಮುಂದುವರಿಯಿತು. ಅಷ್ಟೂ ಕಾಲ ಮೌನ ತನ್ನ ದುರ್ಬಲ ಕಣ್ಣುಗಳಿಂದ ನನ್ನನ್ನೇ ದಿಟ್ಟಿಸುತ್ತಿತ್ತು…

ನಂತರ ಈ ಜನ ಹೊರಟು ಹೋದರು. ತಮ್ಮ ಚಿಂತನೆಗಳ ಅಮಲೇರಿಸಿಕೊಂಡು…

ನಾನು ಒಂದು ಚೀತ್ಕಾರದಂತೆ ಮೆಟ್ಟಲಿಳಿದು ಹೋದೆ. ಆಗ ನನ್ನ ಕೈಯಲ್ಲಿ ಕೇವಲ ಮೂರು ರೂಪಾಯಿ ಇತ್ತು. ನಾನು ನನ್ನ ಗೆಳತಿಯ ಮನೆಗೆ ಹೋದೆ. ಮುನ್ನೂರು ರೂಪಾಯಿ ಸಾಲ ಕೇಳಿದೆ. ಅವಳು ಹಣ ನೀಡಿದಳು. ಆದರೆ ನನ್ನತ್ತ ನೋಡುತ್ತ “ಮೈಯಲ್ಲಿ ಹುಷಾರಿಲ್ಲವೆ?” ಎಂದು ಕೇಳಿದಳು. “ಸ್ವಲ್ಪ ಜ್ವರವಿದೆ. ನಾನು ನಿಲ್ಲುವಂತಿಲ್ಲ. ನನ್ನ ಮಾಲೀಕನಿಗೆ ಹಣ ಕೊಡಬೇಕಿದೆ. ಅವನು ನನಗಾಗಿ ದಾರಿ ನೋಡುತ್ತಿದ್ದಾನೆ”…

ನಾನು ಆಸ್ಪತ್ರೆ ತಲುಪಿದೆ. ಬಿಲ್ ಎರಡು ನೂರ ತೊಂಬತ್ತೈದು ಆಗಿ ಬಿಟ್ಟಿತ್ತು. “ದಯವಿಟ್ಟು ನನ್ನ ಮಗುವಿಗೆ ಕಫನ್ ವ್ಯವಸ್ಥೆ ಮಾಡಿ ಎಲ್ಲಾದರೂ ಅದನ್ನು ದಫನ್ ಮಾಡಿರಿ.” ಎಂದು ಡಾಕ್ಟರ್‍ಗೆ ಮನವಿ ಮಾಡಿಕೊಂಡೆ…

ನಿಜವಾದ ಗೋರಿ ನನ್ನ ಹೃದಯದಲ್ಲಿ ಆಗಲೇ ನಿರ್ಮಾಣಗೊಂಡಿತ್ತು.–

ಆಗ ನಾನು ಜೋರಾಗಿ ಕಿರುಚಿಕೊಂಡೆ. ಮಗುವನ್ನು ಕಳೆದುಕೊಂಡಿದ್ದರಿಂದ ನಾನು ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿರಬೇಕೆಂದು ಡಾಕ್ಟರ್ ಭಾವಿಸಿದರು. ಬರಿಗಾಲಲ್ಲೇ ಓಡುತ್ತಾ ಬಸ್ ಹತ್ತಿದೆ. ಕಂಡಕ್ಟರ್ ನನಗೆ ಟಿಕೆಟ್ ಕೊಡುವ ಗೊಡವೆಗೆ ಹೋಗಲಿಲ್ಲ. ಕಾರಣ ನನ್ನ ಬಟ್ಟೆಯೆಲ್ಲ ರಕ್ತಸಿಕ್ತವಾಗಿತ್ತು. ನನ್ನ ಸ್ಟಾಪ್ ಬರುತ್ತಲೇ ಬಸ್ ಇಳಿದೆ. ಐದು ರೂಪಾಯಿ ನೋಟನ್ನು ಕಂಡಕ್ಟರ್ ಕೈಗೆ ತುರಿಕಿ ಹೊರಟು ಹೋದೆ…

ಹೋಮ್… ಹೋಮ್… ಸ್ವೀಟ್ ಹೋಮ್… ಈಗ ನಾನು ಮನೆ ತಲುಪಿದೆ.

ಹಾಲು ಇನ್ನೂ ಪಾತ್ರೆಯಲ್ಲಿತ್ತು. ಆದರೆ ಅದು ಕಫನ್‍ಗಿಂತಲೂ ಶುಭ್ರವಾಗಿತ್ತು.

ನಾನು ಹಾಲ ಮೇಲೆ ಆಣೆ ಇಟ್ಟು ಹೇಳುತ್ತೇನೆ: ನಾನು ಕವನ ಬರೆಯುತ್ತೇನೆ. ನಾನೊಬ್ಬ ಕವಯತ್ರಿಯಾಗುತ್ತೇನೆ. ಹಾಲು ಹುಳಿಯಾಗುವುದಕ್ಕೆ ಮುನ್ನ ನಾನು ಕವನ ಬರೆದೆ…

ಆದರೆ ಇನ್ನೊಂದು ಮಾತು ಸುಳ್ಳಾಗಿತ್ತು. ಯಾರೂ ನನ್ನನ್ನು ಕವಯಿತ್ರಿ ಎನ್ನಲಿಲ್ಲ. ಪ್ರಾಯಶಃ ಒಂದಿಲ್ಲೊಂದು ದಿನ ನಾನು ನನ್ನ ಮಗುವಿಗೊಂದು ಕಫನ್ ಕೊಳ್ಳುತ್ತೇನೆ…

ಅಮೃತಾ, ಈಗ ಕಫನ್‍ನ ಬೆಲೆ ಚುಕ್ತಾ ಮಾಡಿರದಿದ್ದರೂ ಎಲ್ಲೆಡೆಯಿಂದ ನನ್ನನ್ನು ಕವಯತ್ರಿ ಎಂದು ಕರೆಯುವುದನ್ನು ಕೇಳುತ್ತಿದ್ದೇನೆ…

ಅವನು ಬೆಂಕಿಗೆ ಗಾಳಿ ಹಾಕುತ್ತಲೇ ಇದ್ದಾನೆ. ನಾನು ಬೂದಿಯ ಹಾಸಿಗೆ ಮೇಲೇ ಬಿದ್ದುಕೊಂಡಿದ್ದೇನೆ. ಅವನ ಕೋಣೆಯೊಳಗಿಂದ ಒಂದು ಆತ್ಮ ನಿರ್ಗಮಿಸಿತೆಂದು ಅವನಿಗೆ ನಾನೆಂದೂ ಹೇಳಲಿಲ್ಲ…

ನಾನು ದೇವರಿಗಿಂತಲೂ ಮೌನಿಯಾದೆ…

ಅವನು ನನ್ನೊಂದಿಗೆ ಮಲಗಿದಾಗ ನನ್ನ ಇನ್ನೊಂದು ಮಗುವು ಕಫನ್‍ಗೆ ಗತಿಯಿಲ್ಲದೆ ಮಣ್ಣುಗೂಡಲಿದೆಯೆನಿಸುತ್ತಿತ್ತು…

ಹದ್ದುಗಳ ಮತ್ತು ಬಾತುಕೋಳಿಗಳ ಕತೆ ಎಷ್ಟು ಹಳೆಯದೋ ದೇವರೇ ಬಲ್ಲ. ಅವುಗಳ ಕತೆ ಯಾವಾಗ ಜಾನಪದ ಸಂಸ್ಕøತಿಯ ಭಾಗವಾಯಿತೋ ಯಾರೂ ಅರಿಯರು…

ಸಾರಾಳ ಆತ್ಮ ಬಿಳಿ ಬಾತುಕೋಳಿಗಳ ರೆಕ್ಕೆಯಷ್ಟೇ ಸುಂದರವಾಗಿದೆಯೆನ್ನುವುದು ನನಗೆ ಮಾತ್ರ ಗೊತ್ತು. ಆ ಸುಂದರ ರೆಕ್ಕೆಗಳನ್ನು ಕಿತ್ತ ಮೇಲೆ ಅವಳು ಮನುಷ್ಯನ ವಿಷಪೂರಿತ ರೆಕ್ಕೆಗಳನ್ನು ಬೆಳೆಸಿಕೊಂಡಳು…

*********************************************

ಕೆ.ಶಿವು.ಲಕ್ಕಣ್ಣವರ

     —

Leave a Reply

Back To Top