ಕಾವ್ಯಯಾನ

ವಸಂತನಾಗಮನ

Yellow Buttercup Flowers on Grey Surface

ವಿಜಯ ನಿರ್ಮಲ

ವಸಂತನಾಗಮನ

ವನರಾಣಿ ನವಕನ್ಯೆಯಾಗಿಹಳು
ಹರೆಯದಿ ಮೈದುಂಬಿ ನಗುತಿಹಳು
ಭೂದೇವಿ ಸಂಭ್ರಮದಿ ನಲಿದಿಹಳು
ವನಬನಗಳೆಲ್ಲ ಹೊಸ ಚಿಗುರು ತುಂಬಿ

ಗಿಡಮರಗಳೆಲ್ಲ ಬಣ್ಣ ಬಣ್ಣದ ಹೂ
ಗುಚ್ಛದಲಿ ತುಂಬಿ ತುಳುಕುತಿವೆ
ಮಾವು ಬೇವು ಜೊತೆಯಾಗಿ ತೋರಣ
ಕಟ್ಟಿ ವನವನೆಲ್ಲ ಸಿಂಗರಿಸುತಿದೆ

ಮಾಮರದಂದಕೆ ಮನಸೋತ ಕೋಗಿಲೆ
ಮಧುರವಾಗಿ ಕುಹೂ ಕುಹೂ ಎನುತಿದೆ
ಕಾನನವೆಲ್ಲ ಹಚ್ಚ ಹಸುರಾಗಿ ಸೌಂದರ್ಯ
ತುಂಬಿಕೊಂಡು ಹೊಸ ಗಾನಕೆ ತಲೆದೂಗಿವೆ

ಹಕ್ಕಿ ಪಕ್ಷಿಗಳು ಇಂಪಾದ ದನಿಯಲಿ
ಕೂಗಾಡುತ ತಮ್ಮ ಗೂಡುಗಳಲಿ
ಸಂತಸದಿ ಮೆರೆಯುತ ಹಬ್ಬಕೆ
ಸಜ್ಜಾಗುತಿವೆ ತಮ್ಮದೇ ಶೈಲಿಯಲಿ

ಶಿಶಿರದಲಿ ಸೋತು ಹಣ್ಣೆಲೆಗಳೆಲ್ಲ
ಉದುರಿ ಮರಗಳೆಲ್ಲ ಬೋಳಾಗಿ
ತುಂತುರು ಹನಿಗಳ ಸಿಂಚನದಲಿ
ಮತ್ತೆ ಹೊಸ ಹಸಿರು ಚಿಗುರಲು

ಬಂದ ನೋಡಿ ಋತುಗಳ ರಾಜ
ವಸಂತ ಹೊತ್ತು ತಂದ ಮತ್ತೆ ಚೈತ್ರ
ವನು ಧರೆಗೆಲ್ಲ ನೀಡಿ ಚೈತನ್ಯವನು
ವನ ಬನವೆಲ್ಲ ಚಿಗುರಿ ಸಿಂಗಾರದಲಿ

ಸೆಳೆಯುತಿದೆ ನೋಡಲಿ ಪ್ರಕೃತಿಯ
ಮಡಿಲು ಪ್ರತಿ ಜೀವದಲ್ಲೂ ಆರಾಧನೆ
ತುಂಬುತ ರಸಿಕ ಮನಗಳಲಿ ಹೊಸ
ಬಯಕೆಗಳ ಸ್ಪುರಿಸುತಿದೆ ನೋಡಲ್ಲಿ

ಸೃಷ್ಟಿ ಪಾಲಕನ ಆಗಮನವೇ ವಸಂತ
ನಳನಳಿಸುತಿದೆ ವನವೆಲ್ಲ ತುಂಬಿ
ಹೂಗಳಿಂದ
ಮಲ್ಲಿಗೆ ಸಂಪಿಗೆ ಹೂಗಳರಲಿ ಚೆಲ್ಲಿದೆ
ಕಂಪನು ಹರಡುತಿದೆ ವನದ ತುಂಬೆಲ್ಲ

ಜನಮನದಲಿ ತುಂಬುತ ಹೊಸ
ನವೋಲ್ಲಾಸವನು ಆಸ್ವಾದಿಸುತ್ತಾ
ತೊಡಗಲು ಪ್ರೇರೇಪಿಸುವಂತಿದೆ ಪ್ರೇಮೋಲ್ಲಾಸದಲಿ ಪ್ರೇಮಿಗಳನು

ಮೂಡುತಿದೆ ಹೊಸ ಚಿಗುರಿನಂದದಿ
ಕವಿ ಮನದಲಿ ಹೊಸ ಬಗೆಯ ನವ
ಕಾವ್ಯದ ಸೃಷ್ಟಿಗೆ ಹಾಕಿ ಮುನ್ನುಡಿಯನು
ವರ್ಣಿಸಿ ಪದಗಳಲಿ ವಸಂತನಾಗಮನವನು

***********

Leave a Reply

Back To Top