ಕಾಮದಹನ
ಗೌರಿ. ಚಂದ್ರಕೇಸರಿ
ಕಾಮ ದಹನ
ಒಡಲು ಬರಿದು ಮಾಡಿಕೊಂಡ
ಕಣ್ಣೀರ ಕಡಲು ಬತ್ತಿಸಿಕೊಂಡ
ನಿಟ್ಟುಸಿರಲ್ಲೇ ನೋವ ನುಂಗಿಕೊಂಡವಳ
ಜೋಳಿಗೆಗೆ ನ್ಯಾಯ ಬಂದು ಬಿದ್ದಿದೆ
ಅಂತೂ ಕಾಮ ದಹನವಾಯಿತು.
ಏಳು ವರುಷಗಳ ಹೋರಾಟ, ಗೋಳಾಟ
ಸುತ್ತಿ, ಸವೆಸಿದ ಮೆಟ್ಟುಗಳೆಷ್ಟೋ
ಹತ್ತಿ ಇಳಿದ ಮೆಟ್ಟಿಲುಗಳೆಷ್ಟೋ
ಕರುಣೆ ಬದುಕಿದೆ ಇನ್ನೂ
ಕಪ್ಪು ಪಟ್ಟಿಯ ಹಿಂದಿರುವ ಕಣ್ಣುಗಳಲಿ
ಅಂತೂ ಕಾಮ ದಹನವಾಯಿತು.
ಬಾಯ ಪಸೆ ಇಂಗುವವರೆಗೂ
ಎದೆಯ ಗೂಡ ಗಾಳಿ ಇರುವವರೆಗೂ
ನ್ಯಾಯಕ್ಕಾಗಿ ಅಂಗಲಾಚಬೇಕು
ದಶಕಗಳವರೆಗೆ ಕಾಯಬೇಕು
ಅಂತೂ ಕಾಮ ದಹನವಾಯಿತು
ತಮ್ಮ ತಾವು ದಹಿಸಿಕೊಳ್ಳಬೇಕು ಸೀತೆಯರು
ವನವಾಸ ಪಡಬೇಕು ದ್ರೌಪದಿಯರು
ಸಾಬೀತು ಪಡಿಸಲು ಅತ್ಯಾಚಾರಗಳನ್ನು
ದೇಹದ ಮೇಲಾದ ಹಲ್ಲಿನ ರುಜುಗಳ
ಕಾಪಿಟ್ಟುಕೊಳ್ಳಬೇಕು ಸಾಕ್ಷಿಗಾಗಿ
ಅಂತೂ ಇಂತೂ ಕಾಮ ದಹನವಾಯಿತು
*******