ಪುಸ್ತಕ ಸಂಗಾತಿ
ಡಾ. ಬಿ. ಪ್ರಭಾಕರ ಶಿಶಿಲರವರ
ಕಾದಂಬರಿ ಚಿದಗ್ನಿ ಒಂದು ಅವಲೋಕನ
ಕಾದಂಬರಿ; ಚಿದಗ್ನಿ
ಲೇಖಕರು: ಡಾ. ಬಿ. ಪ್ರಭಾಕರ ಶಿಶಿಲ
ಅವಲೋಕನ
ವಿಮಲಾರುಣ ಪಡ್ಡoಬೈಲು.
ಕನ್ನಡ ಸಾಹಿತ್ಯ ಲೋಕಕ್ಕೆ ಹೊಸದಾಗಿ ಪಾದಾರ್ಪಣೆ ಮಾಡಿದ ‘ಚಿದಗ್ನಿ’ ಇತ್ತೀಚಿಗೆ ನಾನು ಓದಿದ ವಿಶಿಷ್ಟವಾದ ಒಂದು ಕಲಾತ್ಮಕ ಕಾದಂಬರಿ. ಡಾ.ಬಿ. ಪ್ರಭಾಕರ ಶಿಶಿಲ ಈ ಕಾದಂಬರಿಯ ಲೇಖಕರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ, ಬಳಿಕ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಇವರು ನಿವೃತ್ತಿ ಹೊಂದಿದವರು. ಅರ್ಥಶಾಸ್ತ್ರದ ಕೃತಿರಚನೆಯೊಂದಿಗೆ ಕನ್ನಡ ಸಾಹಿತ್ಯ ಲೋಕವನ್ನು ತಮ್ಮದೇ ಆದ ಛಾಪಿನೊಂದಿಗೆ ಹಲವು ಕೃತಿಗಳ ಮೂಲಕ ಶ್ರೀಮಂತ ಗೊಳಿಸಿದ ಹೆಗ್ಗಳಿಕೆ ಶಿಶಿಲರದು.
ಚಿದಗ್ನಿ ಕಾದಂಬರಿಯ ಕಥಾವರಣ ಸುಳ್ಯ ಪುತ್ತೂರು ಸುತ್ತಮುತ್ತ ಇದೆ. ಕಾದಂಬರಿಗೆ ಲೇಖಕರು ತಮ್ಮ ಚಿರಪರಿಚಿತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಕಥೆಯ ಜೀವಂತಿಕೆಯನ್ನು ಹೆಚ್ಚಿಸಿದ್ದಾರೆ. ಅಲ್ಲದೆ ಕತೆಗೆ ಬೇಕಾದ ಪೂರಕ ಮಾಹಿತಿಗಳನ್ನು ಸಂಗ್ರಹಿಸಿ ಅವರ ನಾಮಧೇಯವನ್ನು ಕಥೆಯಲ್ಲಿ ಬಳಸಿಕೊಂಡಿದ್ದಾರೆ. ಚಿದಗ್ನಿಯಲ್ಲಿ ಒಟ್ಟು ಹದಿನೈದು ಪರ್ವಗಳಿವೆ. ಪ್ರತಿಯೊಂದು ಭಾಗದಲ್ಲೂ ವಿಚಾರಧಾರೆ, ಆಲೋಚನೆ, ಚಿಂತನೆ, ಅನುಭವ, ಒಳನೋಟ ಎಲ್ಲವೂ ವೈವಿಧ್ಯಮಯವಾಗಿದೆ. ಕಾದಂಬರಿಕಾರನ ಕಲಾತ್ಮಕ ಭಾಷೆ ಕಾದಂಬರಿಗೆ ಹೊಸ ಹೊಳಹು ನೀಡಿದೆ.
ಸುಳ್ಯದ ಜನತೆಗೆ ಜೀವನಾಧಾರವಾಗಿರುವ ಪಯಸ್ವಿನಿ ನದಿಯನ್ನು ಕತೆಯ ಒಂದು ಮುಖ್ಯ ಭಾಗವಾಗಿ ಚಿತ್ರಿಸುವ ಪ್ರಯತ್ನವನ್ನು ಕಾದಂಬರಿಕಾರ ನಡೆಸಿದ್ದಾರೆ. ನದಿಯ ವರ್ಣನೆ ಸಹೃದಯರನ್ನು ಅಪೂರ್ವ ರೀತಿಯಲ್ಲಿ ಸೆಳೆಯುತ್ತದೆ. ಆ ಜೀವನದಿಯ ನೀರನ್ನು ಅಮೃತಕ್ಕೆ ಸಮಾನವೆಂದು ಲೇಖಕರು ಬಣ್ಣಿಸಿದ್ದಾರೆ. ಜೊತೆಗೆ ಇಂದಿನ ನಾಗರಿಕ ಬದುಕಿನ ರೀತಿಯಿಂದಾಗಿ ಪಯಸ್ವಿನಿ ನದಿಯ ನೀರು ಮಲಿನವಾಗುತ್ತಿರುವ ಬಗ್ಗೆ ಲೇಖಕರಿಗಿರುವ ಆತಂಕ ಸದಾಶಿವ ರಾವ್ ಪಾತ್ರದ ಮುಖಾಂತರ ಕಾದಂಬರಿಯಲ್ಲಿ ವ್ಯಕ್ತವಾಗಿದೆ.
ಆರ್ಮಿ ಯೋಧ ಸದಾಶಿವರಾವ್ ಈ ಕಥೆಯ ಕೇಂದ್ರ ಬಿಂದು. ಕಡಿದು ಹೋದ ಸಂಬಂಧವನ್ನು ಬೆಸೆಯುವುದಕ್ಕಾಗಿ ಬಂದ ಸಮಯದಲ್ಲಿ ಅವರು ಶ್ರೀರಾಜನೊಂದಿಗೆ ತಮ್ಮ ಮನದ ಭಾವಗಳನ್ನು ಹಂಚಿಕೊಳ್ಳುವುದರೊಂದಿಗೆ ಕಥೆ ಪ್ರಾರಂಭವಾಗುತ್ತದೆ. ಈ ಕಥೆಯಲ್ಲಿ ಜಾತಿ ಮತ ಧರ್ಮಗಳ ಭೇದಗಳಿಲ್ಲದೆ ತಾವೆಲ್ಲರೂ ಒಂದೇ ಎನ್ನುವ ಐಕ್ಯತಾ ಭಾವವನ್ನು ಪ್ರತಿಬಿಂಬಿಸಿ, ವಾಸ್ತವಿಕತೆಯನ್ನು ಕಾದಂಬರಿಕಾರ ನಮ್ಮ ಮುಂದಿಟ್ಟಿದ್ದಾರೆ. ಇದಕ್ಕೆ ಕುರುಹು ಎಂಬಂತೆ ಕಥಾನಾಯಕ ಸದಾಶಿವರಾವ್ ರವರ ಕಾರಿನ ಡ್ರೈವರ್ ಸೈಫ್ ಉದ್ದೀನ್ ಧಾರ್ಮಿಕ ಕಟ್ಟು ಪಾಡುಗಳನ್ನು ಮೀರಿ ಒಂದಾಗಿ ಬದುಕುವುದು; ಶಿವರಾಮರಾಯರು ಬ್ರಾಹ್ಮಣ್ಯದ ಕಟ್ಟುಪಾಡುಗಳನ್ನು ಎಲ್ಲೂ ತೋರ್ಪಡಿಸದೆ ಇರುವುದು. ಅವರು ಆಧುನಿಕತೆಯನ್ನು ಮೈಗೂಡಿಸಿಕೊಂಡ ಬ್ರಾಹ್ಮಣರಾಗಿ ಕಾಣಿಸಿಕೊಂಡಿದ್ದಾರೆ. ಸದಾಶಿವರಾವ್, ಸೇರೆಗಾರರು, ಸೈಫುದ್ದೀನ್ ಮುಸಲ್ಮಾನ್ ಹಾಗೂ ಶಿವರಾಮರಾಯರು, ಬ್ರಾಹ್ಮಣರು ಎಲ್ಲರೂ ಒಟ್ಟಾಗಿ ಕುಳಿತು ಭೋಜನ ಮಾಡುವ ದೃಶ್ಯ ಇಲ್ಲಿ ಸಮಾನತೆಯನ್ನು ಪ್ರತಿಬಿಂಬಿಸುತ್ತದೆ. ದಕ್ಷಿಣ ಕನ್ನಡದ ತಿನಿಸುಗಳು ಬಾಯಲ್ಲಿ ನೀರೂರಿಸುತ್ತವೆ. ಆಹಾರ ಜೀವನ ವಿಧಾನದ ಭಾಗವೇ ಹೊರತು ಆಹಾರದಿಂದ ವ್ಯಕ್ತಿಯ ವ್ಯಕ್ತಿತ್ವ ನಿರ್ಧರಿಸಲ್ಪಡುವುದಿಲ್ಲ ಎಂಬ ವಿಚಾರಧಾರೆ ಕಾದಂಬರಿಯಲ್ಲಿ ಅನಾವರಣಗೊಂಡಿದೆ. ಅಡುಗೆ ಬಗ್ಗೆ ಲೇಖಕರಿಗಿದ್ದ ಆಸಕ್ತಿ ಕೃತಿಯಲ್ಲಿ ಸ್ವಲ್ಪಮಟ್ಟಿಗೆ ಕೈಮೀರಿದೆ.
ಚಿದಗ್ನಿಯಲ್ಲಿ ಲಲಿತಾ ಸಹಸ್ರನಾಮಾವಳಿಗೆ ಹೆಚ್ಚಿನ ಮಹತ್ವ ಸಂದಿದೆ. ಆ ಸ್ತೋತ್ರಗಳಿಗೆ ಅರ್ಥಬದ್ಧವಾದ ತಾತ್ಪರ್ಯವನ್ನೂ ನೀಡಲಾಗಿದೆ. ಬ್ರಾಹ್ಮೀ ಮುಹೂರ್ತದಲ್ಲಿ ಪಠಿಸುವ ಈ ಮಂತ್ರದೊಂದಿಗೆ ಶ್ಯಾಮಲಾ ದಂಡಕದ ಸ್ತೋತ್ರಗಳು, ವಿಷ್ಣು ಸಹಸ್ರನಾಮ ಹಾಸು ಹೊಕ್ಕಾಗಿವೆ. ಮೃತ್ಯುಂಜಯ ಮಂತ್ರದ ಮುಖಾಂತರ ಮೃತ್ಯುವಿನಿಂದ ಅಮೃತತ್ವದತ್ತ ಚಲಿಸುವುದರ ಬಗ್ಗೆ ಈ ಶ್ಲೋಕವನ್ನು ಬಹಳ ವಿಸ್ತಾರವಾಗಿ ಅರ್ಥೈಸಲಾಗಿದೆ. ಬ್ರಾಹ್ಮಣರಿಗೆ ಮಾತ್ರ ವೇದ, ಉಪನಿಷತ್ತುಗಳು ಸೀಮಿತವಲ್ಲ. ಕೆಳವರ್ಗದವರೂ ಅದನ್ನು ಕಲಿಯಬಹುದು ಎಂಬುದಕ್ಕೆ ಸೇರೆಗಾರರಾದ ಸದಾಶಿವ ರಾವ್ ಸಾಕ್ಷಿಯಾಗಿದ್ದಾರೆ.
ಅಧ್ಯಾತ್ಮದ ವಿಚಾರದಲ್ಲಿ ಲೇಖಕರಿಗೆ ಆಳವಾದ ಅರಿವಿದೆ. ಲೇಖಕರ ಈ ಆಧ್ಯಾತ್ಮಿಕ ಒಲವು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಆದರೂ ಕೃತಿಯ ಓಟಕ್ಕೆ ಆಧ್ಯಾತ್ಮಿಕ ವಿಚಾರಗಳು ಸ್ವಲ್ಪ ತಡೆಯೊಡ್ಡುತ್ತವೆ ಎಂದರೆ ತಪ್ಪಾಗದು. ದೇವಾಲಯಗಳ ವಿಚಾರದಲ್ಲಿಯೂ ಶೈವ ವೈಷ್ಣವರ ನಡುವೆ ನಡೆದ ಭಿನ್ನಾಭಿಪ್ರಾಯಗಳಿಗೆ ಸಮಯೋಚಿತ ಉತ್ತರವಾಗಿ ಈ ಕಾದಂಬರಿಯಲ್ಲಿ ಮೂಡಿಬಂದಿದೆ. ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳು ಭಕ್ತಿಗಿಂತ ಪ್ರತಿಷ್ಠೆಯ ಪ್ರದರ್ಶನಕ್ಕೆ ಕಾರಣವಾಗುತ್ತಿರುವ ಅಂಶವನ್ನು ಶಿವರಾಮರಾಯರ ಪಾತ್ರದ ಮೂಲಕ ಕಾಣಬಹುದು.
ದೇವಿಯನ್ನು ವಿವಿಧ ಸ್ವರೂಪದಲ್ಲಿ ವರ್ಣಿಸುವಾಗ “ಯೋನಿನಿಲಯ” ಎನ್ನುವ ಸ್ತುತಿಗೆ ಅರ್ಥಪೂರ್ಣವಾದ ವ್ಯಾಖ್ಯಾನ ಮಾಡಿದ್ದಾರೆ. ಹೆಣ್ಣಿನ ಅಸ್ಮಿತೆಯನ್ನು ಸೂಚಿಸುವ ಈ ಅಂಗವು ಸೃಷ್ಟಿಗೆ ಮೂಲ ಎಂದು ಹೇಳುತ್ತ ಇಂಗ್ಲೆಂಡಿನಲ್ಲಿ ಯೋನಿ ಪೂಜೆ ಮಾಡುವ ತಾಂತ್ರಿಕರ ಇರುವಿಕೆಯನ್ನು ತಿಳಿಸಿ ಹೊಸ ವಿಚಾರದ ಅರಿವನ್ನು ಮೂಡಿಸಿದ್ದಾರೆ. ಹೆಣ್ಣಿಗಿತ್ತ ಗೌರವವು ಈ ಕಥೆಗೆ ಸಂಜೀವಿನಿಯಾಗಿದೆ.
ಚಿದಗ್ನಿ ಕಾದಂಬರಿ ಕೇವಲ ಅಧ್ಯಾತ್ಮಕ್ಕೆ ಸೀಮಿತವಾಗಿಲ್ಲ. ಸಾಂಸಾರಿಕ ಜಂಜಾಟ ಮತ್ತು ಮಧುರ ಭಾವಗಳು ಇಲ್ಲಿ ಮಿಳಿತವಾಗಿವೆ. ಕಥಾನಾಯಕ ಸದಾಶಿವ ರಾವ್ ಮದುವೆಯಾಗಿ ಆದರ್ಶ ಪತಿಯಾಗಿರಲು ಹೆಣಗಿದ ಪರಿ ಹಾಗೂ ಹೆಣ್ಣೊಬ್ಬಳ ಅಸಹಾಯಕತೆಯನ್ನು ಮತ್ತು ಬದುಕಿನಲ್ಲಿ ಎದುರಾಗ ಬಹುದಾದ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಡಲು ಯಶಸ್ವಿಯಾಗಿದ್ದಾರೆ. ಕಥಾನಾಯಕಿಗೆ ನ್ಯಾಯ ಒದಗಿಸುವ ಪ್ರಯತ್ನ ಇಲ್ಲಿ ಅವಿರತವಾಗಿ ನಡೆದಿದೆ.
ಕಥಾನಾಯಕನಿಗೆ ಅಯಾಚಿತವಾಗಿ ಪರಿಚಯವಾದ ಮನೆ ಒಡತಿ ಹಾಗೂ ಆಕೆಯ ಸ್ನೇಹಿತನ ನಡುವಿನ ಸಂಬಂಧದಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ವಿಚಾರಗಳ ನಡುವಿನ ಸಂಘರ್ಷವನ್ನು ನಾವು ಕಾಣಬಹುದು. ಅವಳ ಆದರ್ಶ ಮಾತುಗಳು, ಜ್ಞಾನ, ಹಾಗೂ ಮಾನವೀಯತೆಯನ್ನು ಕಂಡು ಕಥಾನಾಯಕ ಆರ್ದೃನಾಗುತ್ತಾನೆ. ‘ಅಧ್ಯಾತ್ಮವೊಂದೇ ಜೀವನವಲ್ಲ, ಮತ್ತೊಂದು ಬದುಕು ಇದೆ’ ಎನ್ನುವುದನ್ನು ಲೇಖಕರು ಮುಂದಿಟ್ಟು ಓದುಗರ ಕಣ್ತೆರಿಸಿದ್ದಾರೆ. ಕೆಲವು ವಿದ್ಯಾವಂತ ಜನರೇ ನಮ್ಮ ಸಮಾಜದಲ್ಲಿ ವಿವಾಹಿತರಾಗಿಯೂ ಹಣ ಹಾಗೂ ಪ್ರತಿಷ್ಠೆಯ ಹಿಂದೆ ಓಡುವ, ಹಾಗೂ ಆ ಕಾರಣದಿಂದಾಗಿ ಮಾನಸಿಕ ಷಂಡತೆಗೊಳಗಾಗಿ ಬದುಕು ನಡೆಸುತ್ತಾರೆ. ಅಂಥ ವ್ಯಕ್ತಿಗಳಿಗೆ ಎಚ್ಚರಿಕೆ ಹಾಗೂ ಸಾಧ್ಯತೆಗಳನ್ನು ತೆರೆದಿಟ್ಟಿದ್ದಾರೆ. ಕಥಾನಾಯಕನ ಮನದ ಬೇಗೆಯನ್ನು ಹೃದಯ ಹಿಂಡುವಂತೆ, ಕಣ್ಣಾಲಿಗಳು ತೇವವಾಗುವಂತೆ ಚಿತ್ರಿಸಿದ್ದಾರೆ. ಅವನ ಪರಿಸ್ಥಿತಿ “ಹೊಟ್ಟೆ ತುಂಬಿದರು ಹಸಿವು ಹಿಂಗಲಿಲ್ಲ” ಎನ್ನುವಂತಿದೆ. ಕಥಾನಾಯಕಿಯ ಹುಡುಕಾಟದಲ್ಲಿ ಆತ ಯಶಸ್ವಿಯಾಗುತ್ತಾನೆಯೇ? ಈ ಕುರಿತು ಹೊಸ ತಿರುವುಗಳನ್ನು ನೀಡುವುದಲ್ಲದೆ ಪ್ರತಿ ಪಾತ್ರಕ್ಕೂ ಕಾದಂಬರಿಕಾರ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಅವರಿಬ್ಬರ ಬದುಕು ಎರಡು ದಿಕ್ಕುಗಳಲ್ಲಿ ಚಲಿಸುತ್ತದೆ. ಆದರೆ ಅದು ಯಾವ ಕಡೆ ಸೇರುತ್ತದೆ ಎನ್ನುವುದು ಚಿದಗ್ನಿಯ ಸಂಪೂರ್ಣ ಓದುವಿನಿಂದ ಅರಿವಾಗುತ್ತದೆ.
ಚಿದಗ್ನಿ ಕಾದಂಬರಿಯಲ್ಲಿ ಮೂಡಿ ಬಂದ ಇಬ್ರಾಹಿಂನ ಪಾತ್ರ ಎಲ್ಲರ ಮನಸ್ಸನ್ನು ಸೂರೆಗೊಳ್ಳುವುದಲ್ಲದೆ, ಆಧುನಿಕ ಬದುಕಿನಲ್ಲಿ ಧರ್ಮ ಸಂಘರ್ಷದ ಸಂದರ್ಭದಲ್ಲಿ ಇಬ್ರಾಹಿಂ ಸಮಾಜದ ಅಗತ್ಯದ ಪ್ರಾತಿನಿಧಿಕ ಪಾತ್ರವಾಗಿ ಕಾಣುತ್ತಾನೆ. ಕಥೆಯ ಪ್ರಾರಂಭ ಮತ್ತು ಕೊನೆಯ ಭಾಗ ಓದುಗರನ್ನು ಬಹಳ ಆಕರ್ಷಿಸುತ್ತದೆ.
ಒಟ್ಟಿನಲ್ಲಿ ಈ ಕಾದಂಬರಿಯು ಕೇವಲ ಪ್ರೀತಿ ಪ್ರೇಮ ಸಾಂಸಾರಿಕ ಚಿತ್ರಣಕ್ಕೆ ಸೀಮಿತವಾಗಿರದೆ ಮನೋಜ್ಞವಾಗಿದೆ. ಯೋಗ, ಅಧ್ಯಾತ್ಮ, ಪ್ರಕೃತಿಪ್ರೇಮ, ಕಾನೂನು, ರಾಜಕೀಯ, ವೈದ್ಯಕೀಯ, ಜಾತ್ಯಾತೀತತೆ, ಬಾಂಧವ್ಯ, ಯೋಧರ ಆದರ್ಶ ಹೀಗೆ ಎಲ್ಲ ಹಸಿವನ್ನು ತಣಿಸುವ ಕಾದಂಬರಿಯು ಓದುಗರಿಗೆ ರಸೋಲ್ಲಾಸವನ್ನು ನೀಡಿ, ಮನಸ್ಸಿಗೆ ಹೊಸ ಅನುಭವ ಶಾಂತಿಯನ್ನು ನೀಡುತ್ತದೆ. ಚಿದಗ್ನಿ ಕಾಂದಂಬರಿ ಮನದಲ್ಲಿ ಮೂಡುವ ಅಹಂಕಾರವನ್ನು ಭಸ್ಮಮಾಡಿ, ಓದುಗನಿಗೆ ಹೊಸ ಜ್ಞಾನದ ವಿಸ್ತಾರವನ್ನು ಕಾಣಿಸಿ ಬದುಕಿನ ಬೇಗೆಗಳಿಗೆ ತಂಪೆರೆಯುವುದರಲ್ಲಿ ಸಂದೇಹವಿಲ್ಲ. ಇಂಥ ಅಪೂರ್ವ ಕೃತಿಯೊಂದನ್ನು ಕನ್ನಡ ಸಾರಸ್ವತ ಪ್ರಪಂಚಕ್ಕೆ ನೀಡಿದ ಡಾ. ಪ್ರಭಾಕರ ಶಿಶಿಲರು ಅಭಿನಂದನಾರ್ಹರು.
ವಿಮಲಾರುಣ ಪಡ್ಡoಬೈಲು.