ಕಾವ್ಯ ಸಂಗಾತಿ
ತನ್ನವರ ಕನವರಿಕೆಯಲಿ
ಭಾರತಿ ಅಶೋಕ್
ಅಲ್ಲಿದೆಯಲ್ಲ
ಅದು ಗಂಡನ(ಗಂಡ್ಮನಗಳ)ಮನೆ
ಅಲ್ಲಿ ಹೆಣ್ಮನವೊಂದಿದೆ
ಮಿಡಿಯುವುದದರ ಗುಣ
ಅದು ತುಡಿಯುತ್ತೆ
ಸದಾ ತನ್ನೆಡೆಗಿನ ಒಂದು ನೋಟಕ್ಕಾಗಿ, ಸ್ಪರ್ಶಕ್ಕಾಗಿ,ಮುಗುಳ್ನಗೆಗಾಗಿ
ಕಿರುಗಣ್ಣು ಬಿರುನೋಟಕ್ಕೆ
ತಳಮಳಿಸಿ ಮನ ಕುಗ್ಗಿ ನಿರೀಕ್ಷೆ ಸಾಯುತ್ತೆ,
ಅದು ಅ ಕ್ಷಣಕ್ಕೆ
ಅಲ್ಲಿಂದ ಕಾಲ್ಕಿತ್ತು
ಮತ್ತೆ ಓಡುತ್ತೆ ಒಡಲ ತುಂಬಿಸಲು
ಅಂಬಲಿಯನೀಯಲು-ಹಂಬಲವಿಲ್ಲದ ಮನ ಕೂಳು ತಿಂದು ಅವಳಿರುವಿಕೆ ಸತ್ತ ಭಾವದ ಹುರಿ ತೇಗ ತೇಗಿ ನಿರುಮ್ಮಳವಾಗುವವು
ಅವಳದು ಹೆಣ್ಮನ ಎಂದೆನಷ್ಟೆ
ಮಡಿಲ ಜೋಳಿಗೆ ಹಾಕಿ ಜೋಗುಳಕೆ ಕಾಯುವಳ ಎದೆಗೊದ್ದಂತೆ ಬಿದ್ದು ಕೊಳ್ಳುವ ಹೃದಯಹೀನ ಮನಗಳು
ಮಡಿಲ ಸಂತೈಸಿ
ಮಡಿಲೊಳಗೆ ಮುಖವಿರಿಸಿ ಮಗುವಂತೆ ಅತ್ತು ಎಲ್ಲ ಮರೆತು ಮಗುವಾಗುವಳು