ಕಾವ್ಯ ಸಂಗಾತಿ
ಅವಳ ದುಃಖ
ವಸುಂಧರಾ ಕದಲೂರು
ದುಃಖಿಸುತ್ತಿದ್ದಳು ಅವಳು
ಬಿಟ್ಟು ಹೋದುದಕ್ಕೆ
ನಟ್ಟ ನಡುಕಾಡಿನಲಿ
ಮಿಸುಕುವ ಒಡಲೊಡನೆ
ದುಃಖಿಸುತ್ತಿದ್ದಳು ಅವಳು
ಬಿಟ್ಟು ಹೋದುದಕ್ಕೆ
ನಟ್ಟ ನಡುರಾತ್ರಿಯಲಿ
ಎದೆಹಾಲಿನೊಡನೆ
ದುಃಖಿಸುತ್ತಿದ್ದಳು ಅವಳು
ಬಿಟ್ಟು ಕೊಟ್ಟುದ್ದಕ್ಕೆ
ನಟ್ಟ ನಡುಸಭೆಯಲಿ
ಮಾನಾಪಮಾನದೊಡನೆ
ದುಃಖಿಸುತ್ತಿದ್ದಳು ಅವಳು
ಜೀವ ಚೈತನ್ಯವನು ಕಲ್ಲು
ಮಾಡಿ ಹೋದುದಕ್ಕೆ
ಜಡಚೇತನದೊಡನೆ
ದುಃಖಿಸುತ್ತಿದ್ದಳು ಅವಳು
ಗಂಡು ಸಂತಾನವನೇ
ಹಡೆಯುವ ವರ ಪಡೆದ
ಬಾಳ ಗೋಳಾಟದೊಡನೆ
ಅವಳ ದುಃಖ ಶತಮಾನಗಳ
ಭರತ ಇಳಿತಗಳ ಕಾಣುತ್ತಿವೆ
ಎಂದೆಂದಿಗೂ ಬತ್ತಲಾರದ
ಕಡಲ ಬಿರು ಅಲೆಗಳೊಡನೆ
ವಸುಂಧರಾ ಕದಲೂರು.
Beautiful poem