ಮಹಿಳಾ ದಿನದ ವಿಶೇಷ

ಅಲ್ಲಿದ್ದರು ಇಲ್ಲಿದ್ದರು ಎಲ್ಲಿದ್ದರು ಒಂದೇ

ಟಿ ಎಸ್ ಶ್ರವಣ ಕುಮಾರಿ.

ಮಕ್ಕಳನ್ನು ವ್ಯಾನಿಗೆ ಹತ್ತಿಸಿ ಬಂದ ತಾರಾ, ಹಾಯಾಗಿ ಮೊಬೈಲ್ ಹಿಡಿದುಕೊಂಡು ಕೂತಿದ್ದ ಗಂಡ ಶಶಾಂಕನನ್ನು “ಮಾಯಮ್ಮ ಬಂದ್ಲಾ” ಎಂದು ಕೇಳಿದಳು. ಮೊಬೈಲ್‌ನಲ್ಲಿ ಏನನ್ನೋ ನೋಡುತ್ತಿದ್ದ ಶಶಾಂಕ ಉತ್ತರಿಸಲಿಲ್ಲ. “ನಿನ್ನೇ ಕೇಳಿದ್ದು, ಮಾಯಮ್ಮ ಬಂದ್ಲಾ” ಎಂದು ಅಸಹನೆಯಿಂದ ಧ್ವನಿಯೇರಿಸಿ ಕೇಳಿದಳು. “ಬಂದಿದ್ರೆ ಒಳಗೆ ಶಬ್ದವಾಗ್ತಿರತ್ತಲ್ವಾ” ಎಂದ ಬಿಗುವಾಗಿ ತಲೆಯೆತ್ತದೆ. ಇನ್ನು ಮಾತಾಡಿದರೆ ಸುಮ್ಮನೆ ಜಗಳಕ್ಕೆ ನಾಂದಿ ಎಂದುಕೊಳ್ಳುತ್ತಾ ತಾರಾ ಅಡುಗೆಮನೆಗೆ ನಡೆದಳು. ಅಷ್ಟರಲ್ಲಿ ಸ್ನಾನ ಮುಗಿಸಿಬಂದ ಅತ್ತೆ ಪದ್ಮ “ಯಾಕೋ ಇನ್ನೂ ಮಾಯಮ್ಮ ಬರ‍್ಲಿಲ್ಲ ನೋಡು. ನಿನ್ನೆಯೇನೋ ಗಂಡ ಹೆಂಡ್ತೀಗೆ ಹತ್ಕೊಂಡ್ಹಾಗಿತ್ತು. ರಾತ್ರಿ ಮಲಗೋಹೊತ್ತಲ್ಲಿ ಕೂಗಾಟ, ಕಿರಿಚಾಟ ಕೇಳಿಸ್ತಾನೇಯಿತ್ತು” ಎಂದುಕೊಳ್ಳುತ್ತಾ ದೇವರಮನೆಗೆ ನಡೆದರು.

ಹೌದು, ತಾರಾನೂ ಮಲಗುವ ಮುಂಚೆ ರೂಮಿನ ಮೂಗುಬ್ಬಸದಿಂದ ಹೊರಬಂದು ಸ್ವಲ್ಪಹೊತ್ತು ಕತ್ತಲಲ್ಲೇ ಬಾಲ್ಕನಿಯಲ್ಲಿ ನಿಂತಿದ್ದಾಗ ಎಡಮೂಲೆಯಿಂದ ಹಿಂದಿನ ಸ್ಲಮ್ಮಿನ ಅವಳ ಗುಡಿಸಲು ಕಾಣುತ್ತಿತ್ತು. ಮಾಯಮ್ಮನ ಗಂಡ ಕೂಗಾಡುತ್ತಾ ಒಂದು ಕಟ್ಟಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಅವಳನ್ನು ಹೊಡೆಯಲು ಕಾದುನಿಂತಿದ್ದ; ಮಾಯಮ್ಮನೂ ಅವನನ್ನು ಝಾಡಿಸುವುದಕ್ಕೆ ಪೊರಕೆಯನ್ನು ಕೈಯಲ್ಲಿ ಹಿಡಿದಿದ್ದಳು. ಒಂದೆರಡು ನಿಮಿಷಗಳಲ್ಲೇ ಅವನು ಕಟ್ಟಿಗೆಯಿಂದ ಬಾರಿಸೇಬಿಟ್ಟ. ಕೂಡಲೇ ಇವಳು ಪೊರಕೆಯಿಂದ ಅವನನ್ನು ಝಾಡಿಸುತ್ತಾ ಮೂರುಬೀದಿಗೆ ಕೇಳುವಂತೆ ಅರಚಿಕೊಂಡು ಅಕ್ಕಪಕ್ಕದ ಗುಡಿಸಿಲಿನವರೆಲ್ಲಾ ಜಗಳ ಬಿಡಿಸಲು ಬಂದಿದ್ದನ್ನು ಇವಳೂ ನೋಡಿದ್ದಳು. ಇದು ಮಾಮೂಲಿನ ಕತೆಯೇ. ತಾನೇನು ಹೋಗಿ ಬಿಡಿಸುವುದಿಲ್ಲ; ಅವರು ಆಗೀಗ ಹೀಗೆ ಹೊಡೆದಾಡಿಕೊಳ್ಳೋದನ್ನ ನಿಲ್ಲಿಸೋದಿಲ್ಲ, ಆದರೂ ಇವತ್ಯಾಕೋ ಸ್ವಲ್ಪ ಹೆಚ್ಚೇ ಎಂದುಕೊಂಡು ಸುಮ್ಮನೆ ಒಳಹೋಗಿ ಮಲಗಿದ್ದಳು. ನಂತರವೂ ಎಷ್ಟೋ ಹೊತ್ತು ಅವರಿಬ್ಬರ ಅರಚಾಟ, ಕೂಗಾಟ ಕೇಳಿಸುತ್ತಲೇ ಇತ್ತು.
*
ನಿನ್ನೆ ಪ್ರಮೋಶನ್‌ ಲಿಸ್ಟ್‌ ಅನೌನ್ಸ್‌ ಆದಾಗಿನಿಂದ ಶಶಾಂಕ ತೀರಾ ಕೆಟ್ಟಮೂಡಿನಲ್ಲಿದ್ದ. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು, ಪ್ರೀತಿಸಿ ಮದುವೆಯಾದವರೇ. ಮದುವೆಯಾಗುವಾಗ ತಾರಾ ಕೆಲಸಕ್ಕೆ ಸೇರಿ ಎರಡುವರ್ಷವಾಗಿತ್ತಷ್ಟೇ. ಶಶಾಂಕನಿಗಾಗಲೇ ಆರುವರ್ಷ ಸರ್ವೀಸಾಗಿ ಎರಡು ಪ್ರಮೋಶನ್‌ಗಳನ್ನೂ ಪಡೆದುಕೊಂಡಿದ್ದ. ನಂತರದ ಎಂಟು ವರ್ಷಗಳಲ್ಲಿ ಅವನಿಗೆರಡು ಪ್ರಮೋಶನ್‌ ಸಿಕ್ಕರೆ ತಾರಾಗೆ ನಾಲ್ಕು ಸಿಕ್ಕು ಅವನ ಸಮಕ್ಕೇ ಬಂದುನಿಂತಿದ್ದಳು. ಈಬಾರಿ ಶಶಾಂಕ ನೆಕ್ಸ್ಟ್‌ ಲೆವೆಲ್‌ ಸಿಕ್ಕೇಸಿಗತ್ತೆ ಎಂದು ತುಂಬಾ ಆಸೆಯಿಟ್ಟುಕೊಂಡಿದ್ದ. ಅದಕ್ಕೆ ತಕ್ಕ ಪರ್ಫಾರ್ಮೆನ್ಸ್‌ ಕೂಡಾ ಇತ್ತು. ಎರಡು ವರ್ಷದ ಹಿಂದಷ್ಟೇ ಪ್ರಮೋಶನ್‌ ಪಡೆದುಕೊಂಡಿದ್ದ ತಾರಾ ಅದರ ಬಗ್ಗೆ ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡಿರಲಿಲ್ಲ. ಆದರೆ ಅನಿರೀಕ್ಷಿತವಾಗಿ ತಾರಾಗೆ ಸಿಕ್ಕು ಶಶಾಂಕನಿಗೆ ಸಿಗದೇಯಿದ್ದದ್ದು ಅವನಿಗೆ ಅವಮಾನವಾದಹಾಗನಿಸಿತ್ತು. ಎಲ್ಲರೂ ಅವನ ಮುಂದೆ ತಾರಾನ ಸಕ್ಸೆಸ್‌ನ ಹೊಗಳಿ ಅಭಿನಂದನೆ ಸಲ್ಲಿಸುವವರೇ. ನಿಜ, ಹತ್ತುವರ್ಷಗಳಲ್ಲಿ ತಾರಾಳ ಸಾಧನೆ ದೊಡ್ಡದೇ. ಅಭಿನಂದನಾರ್ಹವೇ. ಜೊತೆಜೊತೆಗೇ ತಾನೂ ಮೇಲೇರಿದ್ದರೆ ಶಶಾಂಕನೂ ಹೆಮ್ಮೆ ಪಟ್ಟುಕೊಳ್ಳುತ್ತಿದ್ದನೇನೋ. ಹಾಗಾಗದೆ ತಡವಾಗುತ್ತಿರುವುದು ಅವನ ಅಸಹನೆಗೆ ಕಾರಣವಾಗಿತ್ತು. ಅದಕ್ಕೆ ಅವಳೇನು ಮಾಡಲು ಸಾಧ್ಯ! ತಾರಾಳ ಹೆಸರು ಅನೌನ್ಸ್‌ ಮಾಡಿದ ಜನರಲ್‌ ಮ್ಯಾನೇಜರ್‌, ಅವನ ಹೊಟ್ಟೆ ಉರಿಸುವಂತೆ ತಾವೇ ಅವಳ ಬಳಿಗೆಹೋಗಿ ಕೈಕುಲುಕಿ ಭುಜವನ್ನು ಬಳಸಿ ʻಹಗ್‌ʼ ಎನ್ನುವಷ್ಟು ಅವಳನ್ನು ಬಳಸಿ ಬೆನ್ನುತಟ್ಟಿದ್ದರು. ಇಂದಿನ ವಿದ್ಯಮಾನದಲ್ಲಿ ಅದೆಲ್ಲವೂ ಸಹಜವೇ ಆದರೂ ಶಶಾಂಕನಿಗೆ ತುಂಬಾ ಇರಿಸುಮುರುಸಾಗಿತ್ತು. ಕಷ್ಟಪಟ್ಟು ತಡೆದುಕೊಂಡು ನಗುತ್ತಾ ಎಲ್ಲರೊಂದಿಗೆ ಕೈತಟ್ಟಿದ್ದ.

ಸಂಜೆ ಇಬ್ಬರೂ ವಾಪಸ್ಸು ಬರುವಾಗ ಶಶಾಂಕ ಬಿಗುವಾಗೇ ಇದ್ದು ಯಾವ ಮಾತಿನಲ್ಲೂ ಉತ್ಸಾಹ ತೋರಲಿಲ್ಲ. ತನ್ನದೇನೂ ತಪ್ಪಿಲ್ಲದಿದ್ದರೂ ತಾರಾಗೂ ಅವನನ್ನು ಮಾಮೂಲಿನಂತೆ ಮಾತನಾಡಿಸಲು ಹಿಂದೇಟಾಗಿತ್ತು. ಅವನೂ ಇಂದು ಒಂದು ಮೆಟ್ಟಲೇರಿಬಿಟ್ಟಿದ್ದರೆ ಅವಳಿಗೆ ತನ್ನ ಪ್ರಮೋಶನ್ನಿನ ಸಂತಸ ಇಮ್ಮಡಿಯಾಗಿರುತ್ತಿತ್ತು. ಅಥವಾ ತನಗಲ್ಲದೆ ಅವನಿಗೇ ಬಂದಿದ್ದರೂ ಸಂತೋಷಪಟ್ಟು ಅವನಿಂದ ಪಾರ್ಟಿಯನ್ನು ಪೀಕುತ್ತಿದ್ದಳು. ಆದರೀಗ ತಾನವನ ಮೇಲಿನ ಸ್ಥಾನವನ್ನು ಪಡೆದುಕೊಂಡಿರುವುದಕ್ಕೆ ಅವನು ವ್ಯಕ್ತಪಡಿಸುತ್ತಿರುವ ಅಸಮಾಧಾನ ಅರ್ಥವಾದರೂ, ಅವಳೇನು ತಾನೇ ಮಾಡಲು ಸಾಧ್ಯ! ಮಾತಾಡಿದರೆಲ್ಲಿ ಒಡೆದೇಹೋಗುತ್ತಾನೋ ಎನ್ನುವಂತೆ ಕುಳಿತಿದ್ದವನನ್ನು ಮಾತನಾಡಿಸುವ ಧೈರ್ಯವನ್ನೇಮಾಡದೆ, ಮನೆ ತಲುಪುವವರೆಗೆ ಸುಮ್ಮನೆ ಕಿಟಕಿಯಿಂದ ಹೊರನೋಡುತ್ತಾ ಕುಳಿತಳು. ಮನೆ ಬಂದತಕ್ಷಣ ಕಾರ್‌ಪಾರ್ಕ್‌ ಮಾಡಿದವನೇ, ಕಾರಿನಿಂದಿಳಿದು ಮನೆಯೊಳಗೆ ಹೋಗಿ, ಶೂಸನ್ನು ಬಿಚ್ಚಿಬಿಸಾಕಿ, ಹಾಲಿನಲ್ಲೇ ಕುಳಿತಿದ್ದ ಅಮ್ಮನನ್ನೂ ಮಾತನಾಡಿಸದೇ ದಡದಡನೇ ಮಹಡಿಯನ್ನು ಹತ್ತಿ ತನ್ನ ಕೋಣೆಗೆ ಹೋಗಿದ್ದ. ಇವಳು ಒಳಬಂದಕೂಡಲೇ ಪದ್ಮ “ಅವನ್ಯಾಕೆ ಹಾಗೆ ದುಡುದಡೂಂತ ಮೇಲ್ಹೋದ? ಏನೋ ಕೋಪದಲ್ಲಿದ್ಹಾಗಿತ್ತು” ಎಂದು ತಾರಾನ ಕೇಳಿದರೆ ಅವಳೇನು ಹೇಳಿಯಾಳು. “ಇವತ್ತು ಪ್ರಮೋಶನ್‌ ಲಿಸ್ಟ್‌ ಅನೌನ್ಸ್‌ ಆಯ್ತು” ಎಂದಷ್ಟೇ ಹೇಳಿ ತಾನೂ ಮೇಲಕ್ಕೆ ಹತ್ತಿದಳು.

ಬಾತ್‌ರೂಮಿನಿಂದ ಮುಖ ಒರಸಿಕೊಳ್ಳುತ್ತಾ ಹೊರಬಂದವನು ಇವಳ ಕಡೆ ತಿರುಗಿಯೂ ನೋಡದೆ ಬಾಲ್ಕನಿಗೆ ನಡೆದು ಸಿಗರೇಟನ್ನು ಹಚ್ಚಿಕೊಂಡು ಎತ್ತಲೋ ನೋಡುತ್ತಾ ಕುಳಿತುಬಿಟ್ಟ. ಇವಳೂ ಫ್ರೆಷಪ್‌ಆಗಿ ಕೆಳಗೆ ಹೋಗಿ ಕಾಫಿಯನ್ನು ಬೆರಸಿ ಎರಡು ಕಪ್ಪಿನಲ್ಲಿ ತುಂಬಿಕೊಂಡು ಕೋಡುಬಳೆಯೊಂದಿಗೆ ಬಾಲ್ಕನಿಗೇ ತೆಗೆದುಕೊಂಡುಹೋಗಿ ಅವನ ಮುಂದಿಟ್ಟು ತನ್ನ ಕಪ್ಪನ್ನು ಕೈಗೆತೆಗೆದುಕೊಂಡಳು. “ಇಷ್ಟೊಂದು ಅಪ್ಸೆಟ್‌ ಆಗ್ಬೇಡ ಶಶಾಂಕ್. ಈಸಲ ನಿಂಗೆ ಪ್ರಮೋಶನ್‌ ಸಿಕ್ಕೇಸಿಗತ್ತೆ ಅಂತ ನಾನು ತುಂಬಾ ನಂಬಿಕೊಂಡಿದ್ದೆ. ರಿಯಲಿ ಯು ಡಿಸರ್ವ್ಡ್‌ ಇಟ್. ತುಂಬಾನೇ ಬೇಜಾರಾಯ್ತು. ಈ ಫೀಲ್ಡ್‌ ಹೀಗೇ ಅಲ್ವಾ. ನೋಬಡಿ ಕೆನ್ ಪ್ರೆಡಿಕ್ಟ್‌ ಎನಿಥಿಂಗ್. ನೀನಿಷ್ಟು ಬೇಜಾರು ಮಾಡ್ಕೊಂಡ್ರೆ ನಂಗೆ ತುಂಬಾ ನೋವಾಗತ್ತೆ” ಎನ್ನುತ್ತಾ ಎದ್ದುಹೋಗಿ ಅವನ ಭುಜವನ್ನು ಬಳಸಿ ಮುಖವನ್ನು ತನ್ನೆಡೆಗೆ ತಿರುಗಿಸಿಕೊಳ್ಳಲು ಪ್ರಯತ್ನಿಸಿದಳು. “ನಿಂಗ್ಯಾಕೆ ಬೇಜಾರಾಗ್ಬೇಕು; ಮೇಲಿಂದಮೇಲೆ ಪ್ರಮೋಶನ್ಸ್‌ ಬರ‍್ತಾನೇ ಇವೆಯಲ್ಲ. ಅದೇನು ಪರ್ಫಾರ್ಮೆನ್ಸ್‌ ನೋಡಿ ಕೊಡ್ತಾರೋ ಇಲ್ಲಾ ಮುಖಾ ನೋಡಿಕೊಡ್ತಾರೋ” ಎನ್ನುತ್ತಾ ಅವಳ ಕೈಕೊಡಹಿ, ಮುಖವನ್ನು ದೂಡಿ ಕಣ್ಣುಮುಚ್ಚಿ ಕುರ್ಚಿಗೊರಗಿದ. ಹಾಗೆಂದಾಗ ತಾರಾಗೆ ಕೋಪವೇ ಬಂತು. ಮುಖಾನೇ ನೋಡಿಕೊಡ್ತಾರೋ ಅಂದ್ರೇನರ್ಥ. ಪ್ರಮೋಶನ್‌ ತೊಗೊಳೋ ಯೋಗ್ಯತೆ ತನಗಿಲ್ವೇ! ತಾನು ನಿಷ್ಠೆಯಿಂದ ದುಡೀತಿಲ್ವೇ. ಪ್ರಾಜೆಕ್ಟ್‌ನ ಸಕ್ಸಸ್‌ಗೆ ತಾನೂ ಮುಖ್ಯಕಾರಣವಲ್ವೇ” ಅವನ ಮಾತಿನಿಂದ ಅವಳಿಗೆ ಅಸಹ್ಯವೆನಿಸಿ ಮುಂದೆ ಮಾತಾಡದೆ ಅಲ್ಲಿಂದ ಕೆಳಗಿಳಿದು ಬಂದಾಗ ಆಟಕ್ಕೆ ಹೋಗಿದ್ದ ಮಕ್ಕಳು ಮನೆಗೆ ಬಂದಿದ್ದರು.

ಮಕ್ಕಳ ಸ್ಕೂಲಿನ ಡೈರಿಯನ್ನು ತೆರೆದು ಅಂದಿನ ಪಾಠದ ಮತ್ತು ಹೋಮ್‌ವರ್ಕ್‌ನ ವಿವರಗಳನ್ನು ನೋಡಿಕೊಂಡು, ತಾನು ಕುಕ್ಕರಿಟ್ಟು ಬರುವತನಕ ಕೈಕಾಲು ತೊಳೆದು, ಪುಸ್ತಕವನ್ನು ಓದುತ್ತಾ ಕುಳಿತಿರಬೇಕೆಂದು ಹೇಳಿ ಅಡುಗೆಮನೆಗೆ ನಡೆದಳು. ಕುಕ್ಕರ್‌ ಕೂಗುವಷ್ಟರಲ್ಲಿ ಸರಸರ ತರಕಾರಿ ಹೆಚ್ಚಿ, ಪಲ್ಯವನ್ನು ಮಾಡಿದಳು. ಊಟಕ್ಕೆ ಮುಂಚೆ ಸಾರನ್ನು ಕುದಿಸಿದರಾಯಿತು ಎಂದುಕೊಂಡು ಮಕ್ಕಳ ಕಡೆಗೆ ಗಮನ ಹರಿಸಲು ಹೊರಟಾಗ ಡ್ರಾಯಿಂಗ್‌ ರೂಮಿನ ಗಡಿಯಾರದ ಕೋಳಿ 7 ಬಾರಿ ಕೂಗಿತ್ತು. ಎಂಟೂವರೆಯ ತನಕ ಇಬ್ಬರ ಹೋಮ್‌ವರ್ಕನ್ನೂ ಮುಗಿಸಿ, ಮರುದಿನದ ಟೈಮ್‌ಟೇಬಲ್ಲಿನ ಪ್ರಕಾರ ಅವರ ಬ್ಯಾಗುಗಳಲ್ಲಿ ಪುಸ್ತಕಗಳನ್ನಿಡಿಸಿ, ಅವರ ಯೂನಿಫಾರ್ಮ್‌, ಟೈ, ಬೆಲ್ಟ್‌, ಸಾಕ್ಸ್‌ ಶೂ ಎಲ್ಲವನ್ನೂ ಜೋಡಿಸಿಟ್ಟು ಹೊರಬರುವಾಗ ಇನ್ನೇನು ಒಂಭತ್ತು ಹೊಡೆಯುವುದರಲ್ಲಿತ್ತು. ಮಕ್ಕಳಿಗೆ ಟೇಬಲ್ಲಿನ ಮೇಲೆ ತಟ್ಟೆಯಿಟ್ಟು, ನೀರು ಜೋಡಿಸಲು ಹೇಳಿ ಸಾರು ಕುದಿಯಲಿಟ್ಟಳು. ಮಕ್ಕಳು ಹೋಗಿ ಅಪ್ಪನನ್ನು ಊಟಕ್ಕೆ ಕರೆದಾಗ ಇಳಿದುಬಂದ ಶಶಾಂಕನಿನ್ನೂ ಅದೇ ಮೂಡಿನಲ್ಲಿದ್ದ. ಬರಿಯ ಸಾಕು-ಬೇಕುಗಳಲ್ಲೇ ಊಟಮುಗಿದು ಎಲ್ಲರೂ ಎದ್ದರು. ಮಕ್ಕಳೊಂದಿಗೂ ಶಶಾಂಕ ಎಂದಿನಂತೆ ಮಾತನಾಡಲಿಲ್ಲ.

ಟೇಬಲ್‌ ಕ್ಲೀನ್‌ಮಾಡಿ ಅಡುಗೆಕಟ್ಟೆಯನ್ನು ಒರೆಸುವಾಗ ಪದ್ಮಮ್ಮ ಒಳಬಂದು ”ಇನ್ನೂ ಅವನ ಕೋಪ ಇಳಿದ್ಹಾಗಿಲ್ಲ. ಏನಾಯ್ತು?” ಎಂದು ತಾರಾನ ಕೇಳಿದಾಗ “ಸಂಜೆ ಹೇಳಿದ್ನಲ್ಲಾ, ಪ್ರಮೋಶನ್‌ ಲಿಸ್ಟ್‌ ಅನೌನ್ಸ್‌ಆಯ್ತೂಂತ” ಎನ್ನುತ್ತಾ ಸ್ಟೋವನ್ನು ಒರೆಸತೊಡಗಿದಳು. “ನಿಂದು” ಎಂದವರಿಗೆ “ಬಂದಿದೆ” ಎಂದಷ್ಟೇ ಹೇಳಿದಳು. “ಸರಿಮತ್ತೇ, ಅದಕ್ಕೇ ಹೀಗಿದಾನೆ” ಎನ್ನುತ್ತಾ ಹೊರಹೋದಾಗ ತಾರಾಗೆ ವಿಪರೀತ ಕೋಪವೇಬಂತು… ಅಂದರೇನು? ಅವನಿಗೆ ಬಂದು ತನಗೆ ಬರದಿದ್ದರೆ ಅದು ಸಹಜ; ತಾನು ಕೋಪ ಮಾಡಿಕೊಳ್ಳಬಾರದು. ಅವನನ್ನು ಹಿಂದೆಹಾಕಿ ತಾನು ಮುನ್ನಡೆದರೆ ಅದಕ್ಕೆ ಈ ಅಸಹನೆಯೇಕೆ? ಒಂದ್ಮಾತು.. ʻಹೌದಾಮ್ಮ ಸಂತೋಷʼ ಅಂತ ಕೂಡಾ ಅತ್ತೆಯ ಬಾಯಲ್ಲಿ ಬರಲಿಲ್ಲವಲ್ಲ. ನನ್ನ ಉನ್ನತಿ ಅವರ ಲೆಕ್ಕದಲ್ಲೇ ಇಲ್ಲ. ಮುಖ್ಯವಾಗಿ ಮಗ ಯಾವಾಗ್ಲೂ ಸೊಸೆಗಿಂತಲೂ ಮುಂದಿರಬೇಕು ಅಷ್ಟೇ. ʻಥತ್‌ʼ ಎನ್ನಿಸಿ ಒರೆಸುವ ಬಟ್ಟೆಯನ್ನು ತೊಳೆದು ಒಣಗಹಾಕಿ ಅಡುಗೆಮನೆಯ ಲೈಟನ್ನಾರಿಸಿ ಮೆಟ್ಟಿಲೇರತೊಡಗಿದಳು. ಹಾಲಿನಲ್ಲೇ ಕುಳಿತಿದ್ದ ಪದ್ಮಮ್ಮ “ತಾರಾ” ಎಂದು ಕರೆದಾಗ ಹಿಂತಿರುಗಿ ನೋಡಿದಳು. “ಅಲ್ಲಾ, ನೀನೀ ಪ್ರಮೋಶನ್‌ ನಂಗ್ಬೇಡಾಂತ ಹೇಳಕ್ಕಾಗಲ್ವಾ. ನಿಮ್ಮ ಮಾವನವರು ಬ್ಯಾಂಕಿನಲ್ಲಿದ್ದಾಗ ಬೇರೆ ರಾಜ್ಯಗಳಿಗೆ ಟ್ರಾನ್ಸ್ಫರ್‌ ಆಗುತ್ತೇಂತ ಪ್ರಮೋಶನ್ನೇ ಬೇಡಾಂತ ಬರ‍್ಕೊಟ್ಟಿದ್ರು. ಹಾಗೇನೇ ನೀನೂನು…” ಎಂದಾಗ ತಾರಾಗೆ ಮೈಯೆಲ್ಲಾ ಉರಿದುಹೋಯಿತು. ನಂಗ್ಬೇರೆ ಯಾವ್‌ರಾಜ್ಯಕ್ಕೂ ಟ್ರಾನ್ಸ್ಫರ್‌ ಆಗ್ತಿಲ್ವಲ್ಲಾ. ಇದೇ ಊರಲ್ಲೇ ಇರ‍್ತೀನಲ್ಲ. ನಾನ್ಯಾಕೆ ಹಾಗ್‌ಬರ‍್ಕೊಡ್ಬೇಕು. ಅಂಥಾ ಸಿಸ್ಟಮ್‌ ಕಂಪನೀಲಿಲ್ಲ. ಬೇಕಿದ್ರೆ ಕೆಲ್ಸ ಬಿಟ್ಟು ಮನೇಲಿರ‍್ಬೋದಷ್ಟೇ” ಎಂದಾಗ “ಸರಿಮತ್ತೆ, ಅದನ್ನೇ ಮಾಡ್ಬೋದೇನೋ. ಅವನಿಗೆ ಬೇಜಾರು ಮಾಡ್ಸಿ ನೀನ್ಯಾವ ರಾಜ್ಯ ಆಳ್ಬೇಕಾಗಿದೆ. ನಾವೆಲ್ಲಾ ಕೆಲ್ಸಕ್ಹೋಗಿದ್ವಾ. ಗಂಡ ತಂದ್ಹಾಕಿದ್ರಲ್ಲೇ ಅಚ್ಚುಕಟ್ಟಾಗಿ ಸಂಸಾರ ಮಾಡ್ಕೊಂಡಿದ್ವಲ್ಲ” ಎಂದರು. “ಬಿಡ್ಬೋದು. ಈ ಮನೆಸಾಲಕ್ಕೆ ಅರವತ್ಸಾವಿರ, ಮಕ್ಕಳ ಸ್ಕೂಲು, ವ್ಯಾನ್‌ಫೀಸು ಇಪ್ಪತ್ಸಾವಿರ, ಕಾರಿನ್‌ಸಾಲಕ್ಕೆ ಹತ್ಸಾವಿರ, ತಿಂಗಳು ತಿಂಗಳೂ ಕ್ರೆಡಿಟ್‌ಕಾರ್ಡಿಗೆ ಇಪ್ಪತ್ತೈದು-ಮೂವತ್ಸಾವಿರ, ಅದ್ರಮೇಲೆ ಡಾಕ್ಟರು, ಔಷಧಿ, ಇನ್ನೂ ಮಿಕ್ಕ ಮನೆಖರ್ಚುಗಳು ಇವೆಲ್ಲಾ ಒಬ್ಬರ ಸಂಬಳದಲ್ಲಿ ನಿಭಾಯಿಸಕ್ಕೆ ಆಗತ್ತಾ ಹೇಳಿ” ಎಂದಾಗ ಈ ರೀತಿಯ ಉತ್ತರ ನಿರೀಕ್ಷಿಸದಿದ್ದ ಪದ್ದಮ್ಮ ತಬ್ಬಿಬ್ಬಾಗಿ ಅವಳನ್ನೇ ನೋಡಿದರು. ಮುಂದೆ ಮಾತಾಡದೆ ಅವಳು ಮೆಟ್ಟಿಲನ್ನೇರಿ ದೀಪವನ್ನಾರಿಸಿ ಕೋಣೆಗೆ ಹೋದಳು. ಅವಳು ಹೋದ ದಾರಿಯ ಕತ್ತಲನ್ನೇ ನೋಡುತ್ತಾ ಕೆಲಹೊತ್ತು ಕುಳಿತಿದ್ದ ಪದ್ಮಮ್ಮ ನಿಧಾನವಾಗೆದ್ದು ಹಾಲಿನ ದೀಪವನ್ನಾರಿಸಿ ತಮ್ಮ ಕೋಣೆಗೆ ನಡೆದರು. ಎಂದಿನಂತೆ ನಿದ್ರೆಮಾತ್ರೆ ನುಂಗಿ ಮಲಗಿದರೂ ʻಗಂಡಸು…, ಅವನ್ ಕೋಪ ಸಹಜವಾದ್ದೇ… ಆದರೇನೂ ಉಪಾಯವಿಲ್ಲವಲ್ಲ. ಇವಳು ಪ್ರಮೋಶನ್‌ ಬರೋಷ್ಟು ಉತ್ಸಾಹವಾಗಿ ಕೆಲ್ಸ ಯಾಕ್ಮಾಡ್ಬೇಕು. ಸಂಬಳಕ್ಕೆಷ್ಟೋ ಅಷ್ಟೂಂತ ದುಡ್ಕೊಂಡಿದ್ದರೆ ಆಗ್ತಿತ್ತಲ್ವಾʼ ಎಂದೇ ತರ್ಕಿಸುತ್ತಿರುವಾಗ ಮಾಯಮ್ಮನ ಮನೆಯ ಜಗಳ ಕೇಳಿಸುತ್ತಿತ್ತು… ಹಾಗೆಯೇ ಸ್ವಲ್ಪಹೊತ್ತಿನಲ್ಲೇ ಕಣ್ಣುಹತ್ತಿತು.
*
ಹೊತ್ತಾಗ್ಹೋಗತ್ತೆ ಎಂದುಕೊಳ್ಳುತ್ತಾ ಅಡುಗೆಯನ್ನು ಮುಂದುವರೆಸಿದ ತಾರಾ‌, ಇಬ್ಬರ ಊಟದಡಬ್ಬಿಯನ್ನೂ ಕಟ್ಟಿ, ತಿಂಡಿಯನ್ನು, ಅಡುಗೆಯನ್ನು ಹಾಟ್‌ಬಾಕ್ಸಿಗೆ ಹಾಕಿ ಡೈನಿಂಗ್‌ಟೇಬಲ್ಲಿನ ಮೇಲಿಟ್ಟಳು. ಮಾಯಮ್ಮನೂ ಇವತ್ತು ಕೈಕೊಟ್ಟರೆ ಬಿದ್ದಿರುವ ರಾಶಿ ಪಾತ್ರೆಯನ್ನೂ ತೊಳಿಯಬೇಕಲ್ಲಾ ಎಂದು ಆತಂಕಪಟ್ಟುಕೊಳ್ಳುತ್ತಿರುವಾಗಲೇ ಅವಳು ಬಂದು ನಿರಾಳವಾಗಿಸಿದಳು. ಅವಳ ಕಣ್ಣಿನಮೇಲ್ಬಾಗ ನೀಲಿಗಟ್ಟಿ ಮುಖವೆಲ್ಲಾ ಊದಿಕೊಂಡಿತ್ತು. ಕತ್ತಿನಮೇಲೆ, ಬೆನ್ನಿನಮೇಲೆಲ್ಲಾ ಹಾಕಿಕೊಂಡಿದ್ದ ರವಿಕೆಯನ್ನೂ ಮೀರಿ ಬಾಸುಂಡೆಯ ಬರೆಗಳು ಕಾಣುತ್ತಿದ್ದವು. ಏನಾಯ್ತು? ಎಂದು ಕಣ್ಣಲ್ಲೇ ಕೇಳಿದಳು ತಾರಾ. “ಸನಿಮುಂಡೇಮಗ. ಕುಡುಕ್‌ಬಡ್ಡೀಮಗ. ಕುಡ್ಯಕ್ಕೆ ಎಷ್ಟ್‌ಕ್ವಟ್ರೂ ಸಾಲ್ದಕ್ಕಾ. ಇನ್ನೂಕೊಡು, ಇನ್ನೂಕೊಡು ಅಂತ ಪ್ರಾಣತಿಂತನೆ. ಮೊನ್ನೆ ಚಿಕ್ಮಗೀಗೆ ಸೌಲ ಮಾಡಿ ಬಂಗಾರದ್ದೊಂದು ನಕ್ಸತ್ರಾನ ಕಿವಿಗಿಕ್ಕಿದ್ನಾ, ನೀನೂಅದ್ಕೆ ಸಾವಿರ್ರೂಪಾ ಕೊಟ್ಟಿದ್ರಲ್ಲಕ್ಕ. ನೆನ್ನೆ ಚಂಜೆ ಮನೇಗೋಗಿ ನೋಡ್ತಿನಿ, ಮಗೂ ಕಿವಿಯೆಲ್ಲಾ ರಕ್ತ; ಅತ್ಕಂಡು ಮಲಿಕ್ಕಂಡದೆ. ಬಿಚ್ಕಳಕ್ಕೆ ಬಂದಿಲ್ಲ ಮೂದೇವಿಗೆ, ಕಿವಿಕತ್ರಸಾಂಗೆ ಎಳ್ಕಂಡೋಗದೆ. ದೊಡ್ದು ಬ್ಯಾಡಕನಪ್ಪಾ ಅಂತ್‌ಕೈಹಿಡ್ಕಂಡಿದ್ಕೆ ಅದ್ಕೂ ಬಡ್ದುಹೋಗಿದಾನೆ. ಡಾಕ್ಟ್ರತ್ರ ವಲ್ಗೆ ಆಕಸ್ಕಂಡ್ಬಂದ್ನಕ್ಕ. ರಾತ್ರಿಗೆ ಚೆನ್ನಾಗಿ ಕುಡ್ಕಂಡ್ಬಂದಿದಾನಲ್ಲಾ. ವಟ್ಟೆ ಉರಿಯಲ್ವಾಕ್ಕಾ.. ಕೇಳಿದ್ಕೆ ಕಟ್ಗೆತಗೊಂಡು ಚಚ್ಚಿದಾನೆ ದೆಯ್ಯ… ಅಕ್ಪಕ್ದೋರೆಲ್ಲಾ ಬಂದು ಬಿಡಿಸ್ಕೊಣ್ದಿದ್ರೆ ಸಾಯ್ಸೇಬಿಡೋವ್ನು ಪಾಪಿ. ನನ್ನನ್ನ ಮನೆಯಿಂದಾಚೆ ನೂಕಿ ಬಾಕ್ಲು ಆಕ್ಕಂಡು ರಾತ್ರಿಯಿಡೀ ತೆಗ್ದಿಲ್ಲಕ್ಕಾ. ಕೋಳಿ ಕೂಗೋತಂಕ ಬಾಕ್ಲಲ್ಲೇ ಬಿದ್ದಿದ್ದೆ. ಆಗೆದ್ಬಂದು ತೆಗ್ದು ಎಲ್ಲೋ ಒಂಟೋದ” ಎನ್ನುತ್ತಾ ಅತ್ತುಕೊಂಡು ತೊಳೆಯುವ ಪಾತ್ರೆಗೆ ಕೈಹಾಕಿದಳು. ತಾರಾಳ ಮನಭಾರವಾಯಿತು. ಮೊದ್ಲು ತಿಂಡಿತಿಂದು ಮೈಕೈನೋವಿಗೆ ಈ ಮಾತ್ರೆ ತೊಗೋ. ಆಮೇಲೆ ಪಾತ್ರೆತೊಳ್ದು ಗುಡ್ಸೋವಂತೆ. ಎಲ್ಲಾದ್ರೂ ನಂಜಾದಾತು. ಮುಂದಿನ್ಬೀದಿ ಡಾಕ್ಟ್ರುಷಾಪು ತೆಗೆತ್ತಕ್ಷಣ ಮೊದ್ಲ್ಹೋಗಿ ತೋರಿಸ್ಕೋ” ಎನ್ನುತ್ತಾ ತಿಂಡಿ-ಕಾಫಿಯನ್ನು ಕೊಟ್ಟು, ಜೊತೆಗೆ ದುಡ್ಡನ್ನೂ ಕೊಟ್ಟು ರೆಡಿಯಾಗಲು ಹೊರಟಳು.

ಅವಳು ತಯಾರಾಗಿ ಬರುವಾಗ ಅತ್ತೆಯೂ ಶಶಾಂಕನೂ ತಿಂಡಿ ತಿನ್ನುತ್ತಿದ್ದರು. ತನ್ನ ತಟ್ಟೆಗೆ ಬಡಿಸಿಕೊಂಡು ಸ್ಪೂನನ್ನು ತರಲು ಒಳಹೋದಾಗ ಬಾಯಮ್ಮನಿಗಿಟ್ಟಿದ್ದ ತಿಂಡಿ, ಮಾತ್ರೆ ಅಲ್ಲೇ ಕುಳಿತಿತ್ತು. ಮೊದ್ಲುತಿಂದು ಮಾತ್ರೆತೊಗೋಂತ ಹೇಳಿಹೋಗಿದ್ರೂನೂ ಇವ್ಳಿಗೆ ಕೆಲ್ಸವೇ ಮುಖ್ಯವಾಯ್ತಾ ಎಂದುಕೊಳ್ಳುತ್ತಾ ಟೇಬಲ್ಲಿನ ಮುಂದೆ ಕುಳಿತಾಗ ಪದ್ಮಮ್ಮ “ನೋಡು ತಾರಾ, ಮನೆಯಲ್ಲಿ ದೊಡ್ಡವರು, ಗಂಡಸರು ತಿನ್ನಕ್ಕೆ ಮುಂಚಿತವಾಗೇ ಕೆಲಸದವ್ರಿಗೆ ತಿಂಡಿಕೊಡೋ ರೂಢಿ ಮಾಡ್ಬೇಡ. ನಂಗದು ಸರಿಬರಲ್ಲ” ಎಂದು ಮುಗುಮ್ಮಾಗಿ ಅಂದಾಗ ಕಟ್ಟೆಯ ಮೇಲಿನ ತಿಂಡಿತಟ್ಟೆಯ ಕತೆ ಅರ್ಥವಾಯಿತು. ಏನೂ ಮಾತಾಡದೆ ಸರಸರನೆ ತಿಂದೆದ್ದು ಕಾಫಿಬೆರಸಿ ಮೂವರಿಗೂ ತಂದಳು. ಅಷ್ಟರಲ್ಲಿ ಅವರಿಬ್ಬರೂ ತಿಂದಾಗಿತ್ತು. ಎಲ್ಲರ ತಟ್ಟೆ-ಲೋಟವನ್ನು ತೊಳೆಯುವ ಕಡೆ ಹಾಕಿ ಟೇಬಲನ್ನು ಒರೆಸಿ ಇಬ್ಬರ ಊಟದ ಡಬ್ಬಿಯ ಬ್ಯಾಗನ್ನೂ, ಕಾರಿನ ಕೀಯನ್ನೂ ತೆಗೆದುಕೊಳ್ಳುವಾಗ ಬಾಯಮ್ಮ ಪೊರಕೆ, ಬಕೇಟು ಹಿಡಿದುಕೊಂಡು ಎದುರುಬಂದಳು. “ಮೊದಲುಹೋಗಿ ತಿಂಡಿತಿಂದು ಮಾತ್ರೆತೊಗೋ” ಎಂದವಳೇ ಚಪ್ಪಲಿ ಮೆಟ್ಟಿಕೊಳ್ಳುತ್ತಿರುವಾಗ ಹಿಂದೆಯೇ ಶಶಾಂಕ ಶೂಸ್‌ ಹಾಕಿಕೊಳ್ಳಲು ಬಂದ. ತಕ್ಷಣ ಪದ್ದಮ್ಮ, ಪೊರ್ಕೆ, ಖಾಲೀಬಕೀಟು ಶಕುನ ಸರಿಯಿಲ್ಲ. ಮನೆಬಾಗ್ಲಿಗೆ ನೀರ‍್ಹಾಕೋಕೆ ಹೊತ್ತಿಲ್ಲ, ಗೊತ್ತಿಲ್ಲ ಈಮನ್ಲಿ. ಮೊದ್ಲೇ ನಿನ್ಮನ್ಸು ಸರಿಯಿಲ್ಲ. ಒಂದ್ಗಳ್ಗೆ ಕೂತ್ಹೋಗು ಶಶಿ” ಎಂದು ಮಗನನ್ನು ಕರೆದರು. ʻನಂಗೇನೂ ಹೇಳ್ಳಿಲ್ವಲ್ಲʼ ಎಂದುಕೊಂಡು ತಾರಾ ಪರ್ಸು, ಲ್ಯಾಪ್ಟಾಪ್‌ ಬ್ಯಾಗ್‌ಗಳು, ಊಟದಡಬ್ಬಿ ಎಲ್ಲವನ್ನೂ ಕಾರಿನಲ್ಲಿ ತುಂಬಿ ತನ್ನ ಜಾಗದಲ್ಲಿ ಕುಳಿತು ಸೀಟ್‌ಬೆಲ್ಟ್‌ ಕಟ್ಟಿಕೊಂಡಳು. ಒಂದೆರಡು ನಿಮಿಷದಲ್ಲೇ ಶಶಾಂಕ ಬಂದ. ಮಾತಿಲ್ಲದೇ ಬೆಲ್ಟ್‌ಬಿಗಿದು ಕಾರಿನ ಕೀಯನ್ನು ತಿರುಗಿಸಿದ. ಮೌನವನ್ನು ಸಹಿಸಲಾಗದೇ ತಾರಾ ಎಫ್.ಎಂ. ತಿರುಗಿಸಿದಳು. ಶಶಾಂಕ ʻತ್ಚ್‌ʼ ಅಂದರೂ ಕೇಳಿಸಿಕೊಳ್ಳದವಳಂತೆ ಕಿಟಕಿಯ ಹೊರಗೆ ನೋಡತೊಡಗಿದಳು… ಎಂದಿನಂತೆ ಅಂದೂ ದಿನ ಶುರುವಾಗಿತ್ತು, ಆದರೆ ಮೌನದೊಂದಿಗೆ…

ಆಫೀಸಿಗೆ ಬಂದಕೂಡಲೇ ನಿನ್ನೆ ಅಭಿನಂದಿಸಲು ಸಾಧ್ಯವಾಗದಿದ್ದವರೆಲ್ಲಾ ತಾವೇ ಬಂದು, ಇಲ್ಲವೇ ಫೋನ್‌ ಮೂಲಕ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದಾಗ ತಾರಾಗೆ ನಿನ್ನೆ ಸಂಜೆಯಿಂದಿದ್ದ ಖಿನ್ನತೆ ದೂರವಾಗುತ್ತಾ ನಿಧಾನವಾಗಿ ಉತ್ಸಾಹ ತುಂಬತೊಡಗಿತು. ತನ್ನ ಹಳೆಯ ಬಾಸ್‌ ರಾಗಿಣಿ ಶರ್ಮಗೂ ಈಸಲ ಒಳ್ಳೆಯ ಪ್ರಮೋಶನ್ ಸಿಕ್ಕು ವೈಸ್‌ಪ್ರೆಸಿಡೆಂಟ್ ಪೋಸ್ಟ್ ಸಿಕ್ಕಿತ್ತು. ಆದರೆ ನಿನ್ನೆ ಆಕೆ ಕಂಡಿರಲಿಲ್ಲ. ಏನೋ ವೈಯಕ್ತಿಕ ಕಾರಣಗಳಿಂದಾಗಿ ಬಂದಿರಲಿಲ್ಲವೆಂದು ತಿಳಿಯಿತು. ಈಗ ಸಿಕ್ಕರೆ ಅಭಿನಂದನೆ ತಿಳಿಸೋಣವೆಂದು ಇಂಟರ್‌ಕಾಮ್‌ ಕರೆಮಾಡಿದಾಗ ಆಕೆಯ ಸೆಕ್ರೆಟರಿ ಸ್ವಲ್ಪ ತಡವಾಗಿ ಬರುತ್ತಿದ್ದಾರೆಂದು, ಬಂದತಕ್ಷಣ ತಾನೇ ತಿಳಿಸುವೆನೆಂದೂ ಹೇಳಿದಳು.ʻ ಕೆಲಸಕ್ಕೆ ಸೇರಿದಾಗಿನಿಂದಲೂ ತನಗೆ ಸ್ಪೂರ್ತಿತುಂಬುತ್ತಾ, ತನ್ನ ಏಳ್ಗೆಯನ್ನು ಬಯಸುತ್ತಾ, ಯಾವುದೇ ಅಹಮಿಕೆಯಿಲ್ಲದೆ, ಎಲ್ಲರೊಡನೆ ಬೆರೆಯುತ್ತಾ, ಎಷ್ಟೇ ದೊಡ್ಡಹುದ್ದೆಯಲ್ಲಿದ್ದರೂ ಎಷ್ಟು ಸರಳವಾಗಿರಬಹುದು ಎನ್ನುವುದಕ್ಕೊಂದು ಉದಾಹರಣೆಯಂತಿರುವ ರಾಗಿಣಿ ಸದಾ ತನಗೆ ಆದರ್ಶʼ ಎಂದುಕೊಂಡಳು ತಾರಾ. ಆಕೆ ಬಂದಮೇಲೆ ಖುದ್ದಾಗಿ ಹೋಗಿಯೇ ಅಭಿನಂದಿಸಬೇಕು ಎಂದುಕೊಂಡು ಆಕೆಗೆ ಕೊಡಲು ಬುಕೆಯನ್ನೂ, ಚಾಕೋಲೇಟನ್ನೂ ಆರ್ಡರ್‌ ಮಾಡಿದಳು.

ತನ್ನ ಇ-ಮೇಲ್‌ ತೆರೆದಾಗ ಮುಂದಿನ ಪ್ರಾಜೆಕ್ಟ್‌ನ ಬಗ್ಗೆ ವಿವರಗಳಿರುವ ಮೇಲ್‌ ಬಂದಿತ್ತು. ಅವಳ ಕೆಲಸದಸ್ಥಳ (ಪೋರ್ಟ್) ಬದಲಾವಣೆಯಾದರೂ ಮನೆಗೆ ಇದಕ್ಕಿಂದ ಹತ್ತಿರವಾಗಿದ್ದದ್ದು ಒಂದರ್ಧ ಗಂಟೆ ಪ್ರಯಾಣದ ಸಮಯ ಕಡಿಮೆಯಾಗುವುದು ಖುಷಿಯ ಸಂಗತಿಯಾಗಿತ್ತು. ಕೆಲಸ ಹೆಚ್ಚಾದರೂ ಪ್ರಯಾಣದ ವೇಳೆ ಉಳಿಯತ್ತಲ್ಲ‌, ಮನೆಹತ್ರದ ಮೆಟ್ರೋ‌ ಸ್ಟೇಷನ್ನಲ್ಲಿ ಸ್ಕೂಟರ್‌ ನಿಲ್ಲಿಸಿಹೋದ್ರೆ 20ನಿಮಿಷದಲ್ಲಿ ಆಫೀಸ್ನಲ್ಲಿರಬೋದು ಎಂದುಕೊಂಡಳು… ಪ್ರಮೋಶನ್‌ ಸಿಕ್ಕವರೆಲ್ಲರೂ ಈ ಶನಿವಾರ ರಾತ್ರಿ ಲಾ ಮಾರ್ವೆಲ್ಲಾನಲ್ಲಿ ಈ ಬಿಲ್ಡಿಂಗ್‌ನಲ್ಲಿರುವವರೆಲ್ಲರಿಗೂ ಪಾರ್ಟಿಕೊಡುವ ಪ್ರಪೋಸಲನ್ನು ಒಬ್ಬ ಮುಂದಿಟ್ಟಿದ್ದ. ಮಿಕ್ಕವರೆಲ್ಲಾ ಅದಕ್ಕೆ ಹೆಬ್ಬೆರಳನ್ನೆತ್ತಿದ್ದರು. ಇವಳೂ ಹೆಬ್ಬೆಟ್ಟು ತೋರಿಸಿದಳು… ತನ್ನ ಈಗಿನ ಜಾಗಕ್ಕೆ ಬರುತ್ತಿರುವವರ ವಿವರಗಳು ಬಂದವು. ಪೋರ್ಟ್‌ 2ರಿಂದ ಮರುದಿನ ಅವಳು ಬಂದು ರಿಪೋರ್ಟ್‌ ಮಾಡಿಕೊಳ್ಳುವವಳಿದ್ದಳು. ಅವಳಿಗೆ ನಾಲೆಡ್ಜ್‌ ಟ್ರಾನ್ಸ್‌ಫರ್‌ ಮಾಡಿ ಸೋಮವಾರ ತಾನು 4ನೇ ಪೋರ್ಟ್‌ಗೆ ಹೋಗಿ ರಿಪೋರ್ಟ್‌ ಮಾಡಿಕೊಳ್ಳಬೇಕಿತ್ತು. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳತೊಡಗಿದಳು. ಅಷ್ಟರಲ್ಲಿ ರಾಗಿಣಿಯ ಸೆಕ್ರೆಟರಿಯಿಂದ ಆಕೆ ಬಂದಿದ್ದಾರೆನ್ನುವ ಕರೆಬಂತು.

ಬುಕೆಯನ್ನೂ, ಚಾಕೋಲೇಟ್‌ ಬಾಕ್ಸನ್ನೂ ತೆಗೆದುಕೊಂಡು ತಾರಾ ಅವರನ್ನು ಭೇಟಿಯಾಗಲು ಹೋದಳು. ಕಾರ್ಯದರ್ಶಿ “ಸೀದಾ ಒಳಗೆ ಹೋಗಬಹುದು. ನೀವು ಬರ್ತೀರೀನ್ನೋದನ್ನ ಹೇಳಿದೀನಿ” ಎಂದಳು. ʻಥ್ಯಾಂಕ್ಸ್‌ʼ ಎನ್ನುವಂತೆ ಮುಗುಳ್ನಕ್ಕವಳು ಅವರ ಕ್ಯಾಬಿನ್ನಿನ ಒಳಹೊಕ್ಕಳು. “ಬಾ ತಾರಾ” ಎಂದು ರಾಗಿಣಿ ಸ್ವಾಗತಿಸಿದರೂ ಅವರ ಮುಖದ ಮೇಲೆ ಎಂದಿನ ನಗೆಯಿಲ್ಲದೆ ಮ್ಲಾನವಾಗಿತ್ತು. ಅವಳು ಕೊಟ್ಟ ಬುಕೆಯನ್ನೂ, ಚಾಕಲೇಟ್‌ ಬಾಕ್ಸನ್ನೂ ಯಾಂತ್ರಿಕವಾಗಿ ಪಕ್ಕದಲ್ಲಿಟ್ಟುಕೊಂಡು ತಾವೂ ಅವಳನ್ನು ಅಭಿನಂದಿಸಿದರು. ಒಂದೆರಡು ಸಾಂದರ್ಭಿಕ ಮಾತುಗಳ ನಂತರ “ಶಶಾಂಕ್‌ ಏನಂತಾರೆ” ಎಂದರು. ಅಷ್ಟರವರೆಗೂ ಪಕ್ಕಕ್ಕೆ ಸರಿದುಹೋಗಿದ್ದ ಭಾವ ಒಮ್ಮೆಲೇ ಅವಳ ಮುಖಕ್ಕೆ ನುಗ್ಗಿ ಮಂಕಾಗಿದ್ದನ್ನು ಗಮನಿಸಿದ ರಾಗಿಣಿ “ಹಾ! ನಂಗರ್ಥವಾಗತ್ತೆ. ನಮ್ಮನೇಲೂ ಇದೇಕತೆ. ನಿನ್ನೆ ಬೆಳಗ್ಗೇನೇ ಬಾಸ್‌ ವಿಷಯ ಹೇಳಿದ್ರು, ಹಂಗೇನೇ ಡೆಲ್ಲಿ ಇಲ್ಲಾಂದ್ರೆ ಕಲ್ಕತ್ತಾ ಆಫೀಸಿಗೆ ರಿಪೋರ್ಟ್‌ ಮಾಡ್ಕೋಬೇಕಾಗತ್ತೇಂತಾನೂ ಹೇಳಿದ್ರು. ಸಂತೋಷ ಹಂಚ್ಕೊಳ್ಳೋದಕ್ಕೆ ಹೋದ್ರೆ ಶರ್ಮ ʻನಿನ್ಮುದ್ದಿನ ಮಗನ್ನೇನು ಮಾಡ್ತಿ?ʼ ಅಂದ್ರು. ನನ್ಮಗ ಅವರ‍್ಮಗಾನೂ ಅಲ್ವಾ. ನಿಂಗೊತ್ತಲ್ಲಾ ಅವನು ಎಂ.ಆರ್.ಮಗು. ಅವ್ನ ಎಲ್ಲಾ ನಿಗಾನೂ ನೋಡ್ಬೇಕು. ಇಲ್ಲೊಂದು ಸ್ಪೆಷಲ್‌ಸ್ಕೂಲಿಗೆ ಹೋಗ್ತಾನೆ. ಸಂಜೆ ಬೇಗ್ನೆ ಮನೆಗ್ಬರ‍್ತಾನೆ. ನಾನು ಮನೇಗ್ಹೋಗೋತಂಕ ಮನೇಲಿರೋ ಆಯಾನೂ ಇದಾಳೆ. ಇಲ್ಲೀವರ‍್ಗೆ ವೈಲೆಂಟ್‌ ಇಲ್ಲ, ಹೋದ್ತಿಂಗ್ಳು 14ತುಂಬಿ 15ಕ್ಕೆ ಬಿದ್ದಿದೆ. ಅಡಾಲಸೆಂಟ್‌ ಏಜ್. ಇನ್ನು ಅವನ ಬಿಹೇವಿಯರ್‌ ಪಾಟರ್ನ್‌ ಚೇಂಜ್‌ ಆಗ್ಬೋದು. ಅದೇ ಯೋಚ್ನೆಯಾಗಿದೆ. ನಾನು ಊರು ಬಿಡೋದಾದ್ರೆ ಅವನಿಗೆ ಫುಲ್‌ಟೈಮ್‌ ಬೇರೆ ಏನಾದ್ರೂ ವ್ಯವಸ್ಥೆ ಮಾಡ್ಹೋಗೂಂತ ಶರ್ಮನ ಕಂಡೀಶನ್. ಈಗೆಲ್ಲಾ ಸಾಲಗಳು, ಅವನ ಫ್ಯಾಮಿಲಿ ಮೆಂಬರ್ಸ್‌ನ ಜವಾಬ್ದಾರಿ ಎಲ್ಲಾ ತೀರಿದ್ಯಲ್ಲ, ನಾನ್ಕೆಲ್ಸ ಬಿಟ್ರೆ ಬೇಜಾರಿಲ್ವಂತೆ. ನಾನ್ಯಾಕೆ ಬಿಡ್ಬೇಕ್ಹೇಳು. ನಂಗಿನ್ನೂ ನಲ್ವತ್ಮೂರು ವರ್ಷ. ಪ್ರಯತ್ನಪಟ್ರೆ ಕಂಪನಿಯ ಹೈಯೆಸ್ಟ್‌ ಪೊಸಿಷನ್‌ಗೆ ಹೋಗ್ಬೋದು. ಎಷ್ಟೊಂದು ಕಷ್ಟಪಟ್ಟು ಮೇಲ್ಬಂದಿದೀನಿ. ಈಗ ಮನೇಲಿರಕ್ಕಾಗತ್ತಾ. ಇಂಥಾ ಮಕ್ಳಿಗೆ ಎಲ್ಲೆಲ್ಲಿ ಬೋರ್ಡಿಂಗ್‌ ಫೆಸಿಲಿಟಿ ಇದೇಂತ ಹುಡುಕ್ತಿದೀನಿ. ಓಕೆ… ಏನೇನೋ ಹೇಳ್ತಾಹೋಗ್ಬಿಟ್ಟೆ. ನಿನ್ಕತೆ ಏನು?” ಎಂದು ತಾರಾಳತ್ತ ನೋಡಿದಾಗ “ನಿಮ್ಗೆ ಎಲ್ಲಾ ಅರ್ಥವಾಗಿದ್ಯಲ್ಲ ಮೇಡಂ, ನೋಡೋಣ. ಬಾಯಿಗ್ಬಂದಿದ್ದು ಮಾತಾಡ್ಬೋದು ಬಿಟ್ರೆ ಕೆಲ್ಸ ಬಿಡೂಂತ ಅವ್ನು ಹೇಳಕ್ಕಾಗಲ್ಲ” ಎಂದು ನೋವಿನಿಂದ ನಕ್ಕು‌ ತಾರಾ ಅಲ್ಲಿಂದೆದ್ದಳು. “ನೋಡು ತಾರಾ. ಈ ವಿಷಯದಲ್ಲಿ ಆಲ್‌ ಮೆನ್‌ ಬಿಹೇವ್‌ ದಿ ಸೇಮ್. ಡೋಂಟ್‌ ಲೂಸ್‌ ಕರೇಜ್. ನಿಂಗೆ ಕೆಪಾಸಿಟಿ ಇದೆ. ಇನ್ನೂ ಮುಂದೆಹೋಗೋಗೆ ಪ್ರಯತ್ನಪಡು. ಗಂಡ-ಹೆಂಡತಿ ಸಂಬಂಧದಲ್ಲಿ ಉದ್ಯೋಗದ ಅಂತಸ್ತಿಗೆ ಬೆಲೆಯಿರದ ಹಾಗೆ ನಡ್ಕೋ. ಐ ವಿಶ್‌ ಯು ಆಲ್‌ ದಿ ಬೆಸ್ಟ್‌” ಎಂದು ಅವಳ ಕೈಕುಲುಕಿ ಬೀಳ್ಕೊಟ್ಟರು.

ಮೂರು ದಿನ ಕಳೆದರೂ ಮನೆಯ ಬಿಗುವೇನೂ ಕಡಿಮೆಯಾಗಿರಲಿಲ್ಲ. ಶನಿವಾರ ಸಂಜೆ 7ಗಂಟೆಗೆ ಚೆನ್ನಾಗಿ ಅಲಂಕರಿಸಿಕೊಂಡು ತಯಾರಾಗಿ ಶಶಾಂಕನನ್ನು “ಹೋಗೋಣವೇ, ಇನ್ನುಹೊತ್ತಾಗತ್ತೆ” ಎಂದು ಕೇಳಿದಳು ತಾರಾ. ಅವಳನ್ನು ಮೇಲಿನಿಂದ ಕೆಳಗಿನವರೆಗೆ ʻಇಷ್ಟೊಂದು ಅಲಂಕಾರ ಬೇಕಾʼ ಎನ್ನುವಂತೆ ನೋಡುತ್ತಾ “ನೀನು ಹೋಸ್ಟು, ಬೇಗ ಹೋಗ್ಬೇಕು. ನಾನ್ಬಂದೇನು ಮಾಡ್ಬೇಕು. ನಿಧಾನ್ವಾಗಿ ಬರ‍್ತೀನಿ” ಎಂದ ಮುಗುಮ್ಮಾಗಿ. ಒಂದು ನಿಮಿಷ ಅವನನ್ನೇ ನೋಡುತ್ತಿದ್ದವಳು ಬೇರೇನೂ ಮಾತಾಡದೆ ಊಬರ್‌ಗೆ ಬುಕ್‌ ಮಾಡಿ ಕೆಳಗಿಳಿದಳು. ಮಕ್ಕಳಿಬ್ಬರಿಗೂ “ಎಂಟೂವರೆಯ ತಂಕ ಓದ್ಕೊಂತಾ ಇರಿ. ನಿಮ್ಮಿಷ್ಟದ ಪಿಸ್ಸಾ ಆರ್ಡರ್‌ ಮಾಡಿದೀನಿ. ಅಷ್ಟುಹೊತ್ತಿಗೆ ಬರತ್ತೆ. ತಿಂದು ಹಲ್ಲುಜ್ಜಿ ಮಲಕ್ಕೊಳ್ಳಿ” ಎಂದಾಗ ಆರವ್‌ “ಅಮ್ಮಾ ನೀನು ತುಂಬಾ ಬ್ಯೂಟಿಫುಲ್‌” ಅಂದ. ಅರುಷಿ ಅಮ್ಮನನ್ನು ತಬ್ಬಿಕೊಂಡು ಮುತ್ತಿಟ್ಟಳು. ಪದ್ಮಮ್ಮ “ಅವನ್ಬರಲ್ವೇ” ಎಂದಾಗ “ತಡೆದು ಬರ‍್ತಾರಂತೆ” ಎಂದು ಸ್ಯಾಂಡಲ್ಸ್‌ ಮೆಟ್ಟಿಕೊಂಡು ಗೇಟಿಗೆ ಹೋದ ಎರಡುನಿಮಿಷದಲ್ಲೇ ಟ್ಯಾಕ್ಸಿಬಂತು. ಹತ್ತಿಕೊಂಡು ಹೊರಟದ್ದನ್ನು ಶಶಾಂಕ ರೂಮಿನ ಕಿಟಿಕಿಯಿಂದಲೇ ನೋಡಿದ. ʻಇನ್ನೆಂಥಾ ದಿಮಾಕು. ʻಪ್ಲೀಸ್‌ಬಾʼ ಅನ್ಲಿಲ್ವಲ್ಲ. ವಾಪಸ್ಸು ಹೇಗ್ಬರ‍್ತಾಳೇಂತ ನೋಡ್ತೀನಿʼ ಎಂದುಕೊಂಡವನು ತಾನು ಖಂಡಿತ ಹೋಗುವುದಿಲ್ಲ ಎಂದು ನಿರ್ಧರಿಸಿಕೊಂಡು ರೂಮಿನ ಮಿನಿಫ್ರಿಜ್‌ ತೆರೆದು ಬಾಟಲನ್ನು, ಸೋಡಾವನ್ನೂ ಒಂದಷ್ಟು ಕುರುಕುಲನ್ನು ಬಾಲ್ಕನಿಯಲ್ಲಿಟ್ಟುಕೊಂಡು ಒಬ್ಬನೇ ಶುರುಹಚ್ಚಿಕೊಂಡ…

ಎಂಟು ಗಂಟೆಯಾದ್ರೂ ಮಗ ಹೊರಡದಿರುವುದನ್ನು ನೋಡಿದ ಪದ್ದಮ್ಮ ಕೆಳಗಿನಿಂದಲೇ “ಹೋಗಲ್ವೇನೋ” ಎಂದು ಕೂಗಿದರು. ಈಗಿನ್ನೂ ಪಾರ್ಟಿ ಶುರುವಾಗಿರತ್ತೆ. ಒಂಭತ್ತು ಗಂಟೆಮೇಲೆ ಹೋಗ್ತೀನಿ. ನೀನೂ ಮಕ್ಳು ಊಟಮಾಡಿ ಮಲ್ಕೊಳಿ. ನಾವು ಬರೋದು ಲೇಟಾಗತ್ತೇ” ಎಂದ ಮೇಲಿನಿಂದ ಬಗ್ಗಿನೋಡುತ್ತಾ. “ನಿಮ್ಗಳ ರೀತೀನೇ ಅರ್ಥವಾಗಲ್ಲಪ್ಪ. ಏನು ರಾತ್ರಿ ಸರ‍್ವೊತ್ತಿನ ತಂಕ ಪಾರ್ಟಿನಾ” ಎಂದು ಗೊಣಗುತ್ತಾ ಮೊಮ್ಮಕ್ಕಳ ಜೊತೆಯಲ್ಲೇ ಊಟಕ್ಕೆ ಕೂತರು. ಪಿಸ್ಸಾ ತಿಂದು ಮಕ್ಕಳು ತಮ್ಮ ರೂಮು ಸೇರಿಕೊಂಡರು. ಊಟವಾದ ಮೇಲೆ ತನ್ನ ತಟ್ಟೆಯೊಂದನ್ನು ಮಾತ್ರಾ ಸಿಂಕಿಗೆ ಹಾಕಿ, ಮಿಕ್ಕಿದ್ದು ನಾಳೆ ಅವ್ಳೇ ಕ್ಲೀನ್‌ ಮಾಡ್ಕೊಳ್ಳಿ ಎಂದುಕೊಳ್ಳುತ್ತಾ ದೀಪವಾರಿಸಿದರು. ತಮ್ಮ ಕೋಣೆಗೆ ಹೋಗಿ ಎಂದಿನಂತೆ ನಿದ್ರೆಮಾತ್ರೆ ತೆಗೆದುಕೊಂಡು “ಇನ್ನಿವ್ನು ಹೋಗೋದ್ಯಾವಾಗ, ಬರೋದ್ಯಾವಾಗ….” ಎಂದು ಗೊಣಗುತ್ತಾ, ಜೋರಾಗಿ ಆಕಳಿಸುತ್ತಾ ಮಲಗಿದರು.

ಹತ್ತು ಗಂಟೆಗೆ ಕೆಳಗಿಳಿದು ಬಂದ ಶಶಾಂಕ ಅನ್ನದ ಪಾತ್ರೆಯಲ್ಲಿ ಉಳಿದಿದ್ದ ಅನ್ನಕ್ಕಿಷ್ಟು ಮೊಸರು, ಉಪ್ಪಿನಕಾಯಿ ಹಾಕಿಕೊಂಡು ತಿಂದು, ಎಲ್ಲಾ ದೀಪಗಳನ್ನು ಆರಿಸಿಕೊಂಡು ಮತ್ತೆ ಮೇಲಕ್ಕೆ ಹೊರಟ. ಬಾಲ್ಕನಿಯಲ್ಲೇ ಅವಳಿಗೆ ಹೇಗೆ ಅವಮಾನ ಮಾಡಬೇಕು ಎಂದು ಲೆಕ್ಕಾಚಾರ ಹಾಕುತ್ತಾ ಕುಳಿತ. ಎಲ್ರೂ ಕುಡ್ದು ತೂರಾಡ್ತಿರ್ತಾರೆ. ಇವ್ಳು ಯಾರ‍್ಜೊತೆ ಬರ‍್ತಾಳೆ ನೋಡ್ತೀನಿ. ಯಾರಾದ್ರೂ ಬಲವಂತ ಮಾಡಿದ್ರೆ ಅವ್ಳೂ ತೊಗೊಂಡಿರ‍್ತಾಳೆ. ಮೊದ್ಲೇ ಸರಿ ಆ ಜಿ.ಎಮ್ಮು. ಅವತ್ತು ಎಲ್ರೆದುರೇ ಇವ್ಳನ್ನ ತಬ್ಕೊಂಡೋನು ಇವತ್ತಿನ ಅಲಂಕಾರ ನೋಡಿ ಮುದ್ದಿಟ್ಬಿಡ್ತಾನೇನೋ. ಬರ‍್ಲಿಇವತ್ತು ಅವ್ಳ ಗ್ರಾಚಾರ ಬಿಡಿಸ್ತೀನಿ. ನಂಗಿಂತಾ ಮೇಲಿನ್ಜಾಗ ಸಿಕ್ತೂಂತ ಮೆರೀತಿದಾಳೆ. ನನ್ಲೆಕ್ಕಕ್ಕಿಟ್ಟಿಲ್ಲ ಕತ್ತೆಮುಂಡೆ………. ಡಿಕ್ಷನರಿಯ ಪದಗಳೆಲ್ಲಾ ಅವನ ತಲೆಯಲ್ಲಿ ಬಂದು ಹೋದವು. ಅದೇ ಲಹರಿಯಲ್ಲಿಯೇ ಮುಳುಗಿದ್ದಾಗ ಯಾವಾಗಲೋ ಜೋಂಪು ಹತ್ತಿತ್ತು…
*
ಒಂಭತ್ತು ಗಂಟೆಯಾದರೂ ಶಶಾಂಕ ಬರದಿದ್ದಾಗ ತಾರಾಗೆ ಅವನಿನ್ನು ಬರುವುದಿಲ್ಲವೆಂದು ಅರ್ಥವಾಗಿಹೋಯಿತು. ಪಾರ್ಟಿ ಪೂರ್ತಿ ಹುಮ್ಮಸ್ಸಿನಲ್ಲಿ ರಂಗೇರಿತ್ತು. ತಂಪಾದ ಬೆಳಕಿನಲ್ಲಿ, ಇಂಪಾದ ಸಂಗೀತದ ಹಿನ್ನೆಲೆಯಲ್ಲಿ ಎಲ್ಲರೂ ಸೊಂಪಾಗಿ ಹೀರುತ್ತಾ, ಹರಟುತ್ತಾ, ಕೆಲವರು ಡ್ಯಾನ್ಸ್‌ ಮಾಡುತ್ತಾ ತಮ್ಮತಮ್ಮದೇ ರೀತಿಗಳಲ್ಲಿ ಮಜಾ ತೆಗೆದುಕೊಳ್ಳುತ್ತಿದ್ದರು. ಇನ್ನು ಲೇಟಾದರೆ ಮನೆ ಸೇರುವುದು ಕಷ್ಟವೆಂದುಕೊಂಡು ಹೊರಟುನಿಂತಾಗ ರಾಗಿಣಿ ಎದುರುಬಂದು “ಯಾಕೆ ಹೊರಟ್ಬಿಟ್ಟೆ. ಈಗಿನ್ನೂ ಪಾರ್ಟಿಯ ಮಜಾ ಬರ‍್ತಿದೆ. ಇನ್ನೂ ಒಂಭತ್ಗಂಟೆ ಅಷ್ಟೇ” ಎನ್ನುತ್ತಾ ನಿಲ್ಲಿಸಿಕೊಂಡರು. “ಇಲ್ಲಾ, ಶಶಾಂಕ್‌ ಫೋನ್ಮಾಡಿದ್ದ. ಮನೆಗೆ ಹಳೆಯ ಫ್ರೆಂಡ್‌ ಯಾರೋ ಅಚಾನಕ್‌ ಬಂದ್ರಂತೆ. ಬರಕ್ಕಾಗಲ್ಲ; ನಿನ್ಪಾಡಿಗೆ ಹೊರಟ್ಬಂದ್ಬುಡೂಂದ. ಅದಕ್ಕೇ ಹೊರ‍್ಟಿದೀನಿ” ಎನ್ನುತ್ತಾ ಬಾಗಿಲಕಡೆ ಹೆಜ್ಜೆ ಹಾಕಿದವಳನ್ನು ರಾಗಿಣಿ ತಡೆದು, “ಚಿಂತೆಬೇಡ. ನಾನ್ಹೋಗ್ತಾ ನಿನ್ನ ಮನೆಗೆ ಡ್ರಾಪ್‌ಮಾಡಿ ಹೋಗ್ತೀನಿ. ಕಮ್‌ ಲೆಟಸ್‌ ಸೆಲೆಬ್ರೇಟ್‌” ಎನ್ನುತ್ತಾ ತನ್ನ ಟೇಬಲ್ಲಿಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿಕೊಂಡು ಮುಂದಿದ್ದ ಗಾಜಿನಲೋಟಕ್ಕೆ ಪಕ್ಕದಲ್ಲಿದ್ದ ಬಾಟಲಿಯಿಂದ ಸುರಿದು ಅವಳ ಕೈಗೆಕೊಟ್ಟು ತನ್ನ ಗ್ಲಾಸನ್ನು ಅದಕ್ಕೆ ತಗುಲಿಸಿ ಚಿಯರ್ಸ್‌ ಎಂದು ಹೀರತೊಡಗಿದಳು. ಅತ್ತಿತ್ತ ನೋಡುತ್ತಾ ಸುಮ್ಮನೆ ಕುಳಿತವಳನ್ನು “ತೊಗೋ, ಹೇಳಿದ್ನಲ್ಲಾ, ನಾನಿನ್ನ ಡ್ರಾಪ್‌ಮಾಡ್ತೀನೀಂತ. ಹ್ಯಾವ್‌ ಅ ಸಿಪ್‌ ಡಿಯರ್‌. ಸೀ… ಓನ್ಲಿ ಜಿನ್” ಎನ್ನುತ್ತಾ ಅವಳ ಮುಖವನ್ನೇ ನೋಡಿದಳು. ಇನ್ನೇನೂ ತೋಚದೆ ತಾರಾ ಲೋಟವನ್ನು ತುಟಿಗೆ ತಾಗಿಸಿದಳು… ನಿಧಾನವಾಗಿ ಪೇಯ ಒಳಗಿಳಿಯತೊಡಗಿತು… ನಾಲ್ಕುದಿನದಿಂದ ಕಾಡುತ್ತಿದ್ದ ಚಿಂತೆಯೆಲ್ಲಾ ನಿಧಾನವಾಗಿ ಕರಗುತ್ತಿರುವ ಹಾಗನಿಸಿತು. ಗ್ಲಾಸ್‌ ಖಾಲಿಯಾಯಿತು… ರಾಗಿಣಿ ಇನ್ನೊಮ್ಮೆ ಹಾಕಲು ಬಂದಾಗ “ಸಾಕು, ಇನ್ನು ಬೇಡ” ಎನ್ನುವಂತೆ ತಲೆಯಾಡಿಸಿ ಕುರ್ಚಿಗೊರಗಿ ಕಣ್ಮುಚ್ಚಿದಳು. ಎಷ್ಟೋ ಹೊತ್ತಿನಮೇಲೆ ರಾಗಿಣಿ ಅವಳನ್ನೆಬ್ಬಿಸಿ “ಇನ್ನು ಊಟಮಾಡೋಣ” ಎಂದಳು. ಅಭ್ಯಾಸವಿದ್ದ ಅವಳಿನ್ನೂ ಸ್ವಯದಲ್ಲೇ ಇದ್ದಳು. ಆದರೆ ತಾರಾಳ ಸ್ಥಿತಿಯನ್ನು ನೋಡಿ ತಾನೇ ಅವಳ ತಟ್ಟೆಗೆ ಬಡಿಸಿಕೊಂಡು ತಂದು ಅವಳ ಮುಂದಿಟ್ಟಳು. ಹೇಗೋ ತಾರಾ ಊಟ ಮುಗಿಸಿದಳು…

ಇಬ್ಬರೂ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತರು. ಈಗ ತಾರಾಗೆ ಸ್ವಲ್ಪ ಎಚ್ಚರವಾದಹಾಗೆನಿಸಿತು. ರಾಗಿಣಿ ಮರುದಿನ ತಾನು ಡೆಲ್ಲಿಗೆ ಹೊರಡುತ್ತಿರುವುದರ ಬಗ್ಗೆ ಹೇಳುತ್ತಿದ್ದಳು. ಮಗನನ್ನು ನೋಡಿಕೊಳ್ಳುತ್ತಿರುವ ಆಯಾ ಅವಳ ಜೊತೆಗೆ ಬರಲು ಒಪ್ಪಿರುವುದರಿಂದ ಸಧ್ಯಕ್ಕೆ ಒಂದು ವ್ಯವಸ್ಥೆಯಾಗಿದೆ ಎಂದಳು. “ಓ… ಸಧ್ಯ!” ಎಂದಳು ತಾರಾ.” ಹೌದು ಅದಕ್ಕೇ ಇವತ್ತು ನಾನು ತುಂಬಾ ಖುಷಿಯಾಗಿದೀನಿ ತಾರಾ. ಅಲ್ಲಿ ಹೇಗೂ ಕ್ವಾರ್ಟರ್ಸ್‌ ಇದೆ. ಹೋದ್ಮೇಲೆ ಇವನ ಸ್ಕೂಲಿಗೆ, ವ್ಯಾನಿಗೆ ವ್ಯವಸ್ಥೆಯಾಗತ್ತೆ. ಆಯಾ ನಂಬಿಕಸ್ತೆ. ಶರ್ಮ ಹೇಗೂ ಇಲ್ಲೂ ಮನೆಯಲ್ಲೇ ಪ್ರಾಜೆಕ್ಟ್‌ ಪ್ಲಾನಿಂಗ್‌ ಮಾಡೋದು. ಲ್ಯಾಪ್ಟಾಪು, ಪ್ರಿಂಟರ್‌ ಜೊತೆಗಿದ್ರೆ ಎಲ್ಲಿ ಬೇಕಾದ್ರೂ ಆಫೀಸ್‌ ಸೆಟಪ್‌ ಮಾಡ್ಕೋಬೋದು. ಬೇಕಿದ್ರೆ ಅವ್ನೂ ಬರ‍್ಬೋದು. ನಾನು ಕನ್ವಿನ್ಸ್‌ ಮಾಡಕ್ಹೋದ್ರೆ ಒಪ್ಪಲ್ಲ. ಈಗೋ ಪ್ರಾಬ್ಲಂ. ಅವ್ನಿಗೇ ಅನ್ಸಿದ್ರೆ ಬರ‍್ಲಿಬಿಡು….” ಮಾತನಾಡುತ್ತಲೇ ಇರುವಾಗ ತಾರಾಳ ಮನೆಬಂತು. ಶಶಾಂಕನ ರೂಮಿನ ದೀಪ ಉರಿಯುತ್ತಿರುವುದು ಕಾಣಿಸಿತು. “ರಾತ್ರಿ ಹನ್ನೆರಡಾಗಿದೆ. ಬಾಗ್ಲು ತೆಗ್ದು ನೀನು ಒಳಗ್ಹೋಗೋವರ‍್ಗೂ ಇಲ್ಲೇ ಕಾಯ್ತೀನಿ” ಅಂದ ರಾಗಿಣಿಗೆ “ಇಲ್ಲ ಶಶಾಂಕ್‌ ಎದ್ದಿದಾನೆ. ನೀವು ಹೊರಡಿ ಪರವಾಗಿಲ್ಲ” ಎಂದು ಕಳಿಸಿ ಮನೆಯ ಗೇಟನ್ನು ತೆರೆದಳು. ಶಶಾಂಕ ಕಿಟಕಿಯಿಂದ ಅವಳು ಒಳಬರುವುದನ್ನೇ ನೋಡುತ್ತಿದ್ದವನು ʻಥತ್‌ ಗೇಟಿನ ಬೀಗವನ್ನೂ ಹಾಕಿರಬೇಕಿತ್ತುʼ ಎಂದುಕೊಂಡು ಲೈಟ್‌ ಆರಿಸಿದ…

ಅವನು ನೋಡಿದ್ದಾನಲ್ಲ ಬಂದು ಬಾಗಿಲು ತೆರೆಯುತ್ತಾನೆ ಎಂದು ಕಾದ ತಾರ ಹತ್ತು ನಿಮಿಷವಾದರೂ ಬಾರದಿದ್ದಾಗ ಅವನ ಮೊಬೈಲ್‌ಗೆ ಕರೆಮಾಡಿದಳು. ಅವನು ಕಾಲ್‌ ರಿಸೀವ್‌ ಮಾಡಲೇಇಲ್ಲ. ಮತ್ತೆಮತ್ತೆ ಕರೆಮಾಡಿದಾಗ ಮೊಬೈಲ್‌ ಸ್ವಿಚಾಫ್‌ ಮಾಡಿದ. ತಾರಾಗೆ ವಿಪರೀತ ಭಯವಾಗಿ ಉಳಿದಿದ್ದ ಅಲ್ಪಸ್ವಲ್ಪ ನಿಶೆಯೂ ಇಳಿದುಹೋಗಿ ಸಧ್ಯದ ಪರಿಸ್ಥಿತಿ ಅರಿವಿಗೆ ಬಂತು. ಅತ್ತೆಯಾದರೂ ಬಂದು ಬಾಗಿಲು ತೆಗೆಯಬಹುದೇನೋ ಎಂದುಕೊಂಡು ಕಾಲಿಂಗ್‌ ಬೆಲ್‌ ಮಾಡಿದಳು. ಕೋಣೆಯ ಬಾಗಿಲು ಹಾಕಿಕೊಂಡು ಕೊರಡಿನಂತೆ ಮಲಗಿರುವವರಿಗೆ ಎಚ್ಚರವಾಗಲೇ ಇಲ್ಲ. ಐದಾರುಸಲ ಪ್ರಯತ್ನಪಟ್ಟು ಹತಾಶಳಾಗಿ ಕುಸಿದಳು. ಅವತ್ತು ಬಾಯಮ್ಮ ರಾತ್ರಿಯೆಲ್ಲಾ ಮನೆಬಾಗಿಲಲ್ಲಿ ಕೂತಿದ್ದಹಾಗೆ ತಾನೂ ಇಂದು ಕೂರಬೇಕೆ ಎನ್ನಿಸಿ ಮೈನಡುಗಿಹೋಯಿತು.

ಹೆದರಿಕೆಗೆ ಬಚ್ಚಲಿಗೆ ಹೋಗುವಂತಾಯಿತು. ಎಲ್ಲಿ ಹೋಗುವುದು……? ತಡೆದುಕೊಳ್ಳಲು ಯತ್ನಿಸಿದಷ್ಟೂ ಒಳಗಿನ ಒತ್ತಡ ಹೆಚ್ಚಾಗುತ್ತಿದೆ.. ಮಕ್ಕಳಾದರೆ ಎಲ್ಲೋ ಕೂತು ಮಾಡಿಬಿಡಬಹುದು. ತಾನೀಗ ಏನ್ಮಾಡಬೇಕು? ʻಬಂದೇಬಿಟ್ಟರೆʼ ಎನ್ನಿಸಿ ಮೈಯೆಲ್ಲಾ ನಡುಗತೊಡಗಿತು. ಎಲ್ಲಿ ಮಾಡಬಹುದೆಂದು ಸುತ್ತಮುತ್ತಲೂ ನೋಡತೊಡಗಿದಳು. ಹಿತ್ತಲಿನ ಬಟ್ಟೆ ಒಗೆಯುವ ಕಟ್ಟೆ ನೆನಪಾಗಿ ಅದರ ನೀರುಹೋಗುವ ಮೋರಿಯಲ್ಲಿ ಮಾಡಬಹುದೇನೋ ಅನ್ನಿಸಿದರೂ ಕತ್ತಲಲ್ಲಿ ಅಲ್ಲಿಗೆ ಹೋಗಲು ಭಯವಾಯಿತು. ಒಳಗಿನಿಂದ ಒತ್ತಡವನ್ನು ತಡೆಯಲಾಗಲಿಲ್ಲ… ಮೆಲ್ಲನೆದ್ದು ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟುಕೊಂಡು ಹಿತ್ತಲಿಗೆ ಹೋದಳು. ಸುತ್ತಲೂ‌ ತಿರುತಿರಿಗಿ ನೋಡುತ್ತಾ ತಡೆಯಲಾಗದೇ ಕುಳಿತೇಬಿಟ್ಟಳು. ತಿಂಗಳಿಗೆ ಲಕ್ಷಕ್ಕೂ ಮೀರಿ ಸಂಬಳ ಪಡೆಯುವ ದೊಡ್ಡಹುದ್ದೆಯಲ್ಲಿರುವ ತಾನು ಹೀಗೆ ತನ್ನಮನೆಯಲ್ಲೇ ಮೋರಿಯಲ್ಲಿ ಕುಳಿತು ಮಾಡುತ್ತಿರುವ ಪರಿಸ್ಥಿತಿಗೆ ಹೀನಾಯವೆನಿಸತೊಡಗಿತು. ಒತ್ತಡವೆಲ್ಲಾ ಇಳಿದಮೇಲೆ ನಡುಕ ನಿಂತರೂ ತೀರಾ ಅವಮಾನವೆನಿಸಿತು. ಮುಂದಕ್ಕೆ ಬಂದು ಬಾಗಿಲಲ್ಲಿ ಕುಳಿತವಳಿಗೆ ಯಾರೂ ನೋಡದಿದ್ದರೂ ಜೀವಮಾನದಲ್ಲೇ ಇಂತಹ ಪರಿಸ್ಥಿತಿಯನ್ನು ಎದುರಿಸಿಲ್ಲವೆನ್ನಿಸಿ ಅಳು ನುಗ್ಗಿಬಂತು. ಸೆರಗಿಂದ ಬಾಯನ್ನು ಮುಚ್ಚಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದಳು. ಅದೆಷ್ಟು ಹೊತ್ತಾಯಿತೋ… ಬೀಟಿನ ಪೋಲೀಸು ಸೀಟಿಯೂದಿಕೊಂಡು ಹೋದ. ಸಧ್ಯ ಅವನು ಈಕಡೆ ತಿರುಗಲಿಲ್ಲ. ಮುಂದಿನ ಗತಿಯೇನು? ಇನ್ನು ನಮ್ಮಿಬ್ಬರ ಸಂಬಂಧ ಮುಗಿದಹಾಗೇನಾ ಅನ್ನಿಸಿ ಹೊಟ್ಟೆಯಲ್ಲಿ ನಡುಕಹುಟ್ಟಿತು. ಇಲ್ಲ, ಹೆದರಬಾರದು. ಕೈಯಲ್ಲಿ ಕೆಲಸವಿದೆ. ಅವನೇನಾದರೂ ನನ್ನನ್ನು ಬಿಡುವ ತೀರ್ಮಾನ ಮಾಡಿದರೆ ಮಕ್ಕಳನ್ನು ಕರೆದುಕೊಂಡು ಹೊರಟುಬಿಡಬೇಕು… ಈ ರೀತಿಯ ಅನುಮಾನವನ್ನು, ಅವಮಾನವನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಯಾಕೆ? ಮೇಲಿಂದ ತನ್ನನ್ನು ನೋಡಿದ್ದವನು ಬೇಕೆಂದೇ ಬಂದು ತೆಗೆಯಲಿಲ್ಲವೆಂದರೆ ಅವನ ಉದ್ದೇಶವೇನು? ಚಳಿಯಾಗತೊಡಗಿತು. ಸೆರಗನ್ನು ಬಿಗಿಯಾಗಿ ಸುತ್ತಿಕೊಂಡಳು. ಕಣ್ಮುಚ್ಚಲೂ ಭಯವಾಯಿತು. ಯಾರಾದರೂ ಬಂದುಬಿಟ್ಟರೆ! ಬಲವಂತವಾಗಿ ಕಣ್ತೆರೆದುಕೊಂಡು ಬಾಗಿಲನ್ನೊಮ್ಮೆ, ಗೇಟನ್ನೊಮ್ಮೆ ಪಿಳಿಪಿಳಿ ನೋಡುತ್ತಾ ಮಧ್ಯೆಮಧ್ಯೆ ಅಳುತ್ತಾ ಕುಳಿತುಬಿಟ್ಟಳು…
*
ಶಶಾಂಕನಿಗೆ ನಿದ್ರೆ ಬರಲಿಲ್ಲ… ಬರಲೇಯಿಲ್ಲ. ಅವಳಿಗೆ ಸರಿಯಾಗಿ ಬುದ್ದಿ ಕಲ್ಸಿದೀನಿ. ಎಷ್ಟು ಅಹಂಕಾರ ತನಗೇ ಪ್ರಮೋಶನ್‌ ಸಿಕ್ಕಿದೇಂತ. ನಂಗಿಂತ ಮುಂದೆ ಹೋಗಿದೀನೀಂತ. ಇರ‍್ಲಿ, ಒಂದ್ರಾತ್ರಿ ಹೊರಗ್ಬಿದ್ದಿದ್ರೆ ಬುದ್ದಿಬರತ್ತೆʼ. ಎಂದುಕೊಂಡವನು ಎದ್ದು ಸಿಗರೇಟು ಹಚ್ಚಿಕೊಂಡು ಕುರ್ಚಿಗೊರಗಿದ. ಅವಳೇನು ಮಾಡುತ್ತಿರಬಹುದು ಎನ್ನಿಸಿ ಕಿಟಕಿಗೆ ಬಂದು ಇಣುಕಿದ. ಮೆಟ್ಟಿಲಮೇಲೆ ಮುದುರಿಕುಳಿತಿದ್ದಾಳೆ. ಬಿದ್ದಿರ‍್ಲಿ ಅಲ್ಲೇ. ನಾಕ್ದಿನದಿಂದ ನಾನೆಷ್ಟು ಹಿಂಸೆಪಟ್ಕೊಂಡಿದೀನಿ. ಅವ್ಳಿಗೇನಾದ್ರೂ ಸ್ವಲ್ಪಾನಾದ್ರೂ ಕನ್‌ಸರ್ನ್‌ ಇದ್ಯಾ. ಇವತ್ತು ಪಾರ್ಟೀಲಿ ಮೆರೆದು ಬಂದಿದಾಳಲ್ಲ. ಏನಲಂಕಾರ, ವೈತಾರ… ಯಾರನ್ಮೆಚ್ಸೋಕೆ. ಇವ್ಳನ್ನ… ಈ ಶನೀನ ನಾನು ಪ್ರೀತ್ಸಿ ಮದ್ವೆಯಾದ್ನಲ್ಲಾ. ನನ್ನೇ ಮೆಟ್ಟಲ್ಲಿ ಹೊಡ್ಕೋಬೇಕು…… ಕೂತಿದ್ದವನಿಗೆ ಹಾಗೆ ಒಂದು ಸಣ್ಣ ಜೊಂಪು ಬಂತು.

ಮತ್ತೆ ಎಚ್ಚರವಾದಾಗ ಮಧ್ಯರಾತ್ರಿ ಮೂರುಗಂಟೆ. ಪೂರ್ತಿ ನಶೆಯಿಳಿದಿತ್ತು… ಅಯ್ಯೋ ಅವಳು ಹೊರಗೇ ಕೂತಿದಾಳಲ್ಲ. ಅವಳಿಗೇನಾದರೂ ಆಗಿದ್ದರೆ ಅನ್ನಿಸಿ ದಡದಡ ಕೆಳಗಿಳಿದು ಬಂದು ಬಾಗಿಲು ತೆರೆದ. ಸದ್ದಿಗೆ ಹೆದರಿ ಹಿಂದಕ್ಕೆ ತಿರುಗಿದಳು. ಅವಳ ಸ್ಥಿತಿಯನ್ನು ಕಂಡವನಿಗೆ ತನ್ನ ಬಗ್ಗೆಯೇ ಅಸಹ್ಯವೆನಿಸಿ, ನಡುಗುತ್ತಿದ್ದವಳನ್ನೆಬ್ಬಿಸಿ ಎದೆಗೊರಗಿಸಿಕೊಂಡ. ಕೋಪದಿಂದ ಅವನೆದೆಗೆ ಮುಷ್ಟಿಯಿಂದ ಗುದ್ದಿದವಳು ಸರಸರನೆ ಕೋಣೆಗೆ ಹೋಗಿ ಮಂಚದಮೇಲೆ ಬಿದ್ದು ಜೋರಾಗಿ ಅಳತೊಡಗಿದಳು. “ಸಾರಿ ಹನೀ… ನಾನು ತುಂಬಾ ದೊಡ್ಡತಪ್ಪು ಮಾಡ್ಬಿಟ್ಟೆ. ಈಗೋನೇ ಜಾಸ್ತಿ ಮಾಡ್ಕೊಂಡು ನಿನ್ನ ನೋಯಿಸ್ದೆ. ಪ್ಲೀಸ್… ಪ್ಲೀಸ್… ನನ್ಬುದ್ದೀಗೇನ್ಬಡ್ಕೊಂಡಿತ್ತೋ. ನಿನ್ಬಿಟ್ಟು ನಂಜೀವ್ನ ಇಲ್ಲಾ ಕಣೋ. ಇವತ್ತು ತೊಗೊಂಡ ಡೋಸ್‌ ಜಾಸ್ತಿಯಾಗಿ ಏನೇನೋ ಆಗೋಯ್ತು. ಐಯಾಮ್‌ ರಿಯಲಿ ಸಾರಿ… ರಿಯಲಿ ಸಾರಿ… ಎನ್ನುತ್ತಾ ಅವಳನ್ನು ಅನುನಯಿಸತೊಡಗಿದ….

ಎಷ್ಟೋ ಹೊತ್ತಾದ ಮೇಲೆದ್ದು ಬಾತ್ರೂಮಿಗೆ ಹೋಗಿ ಮುಖತೊಳೆದು ಕನ್ನಡಿಯಲ್ಲಿ ನೋಡಿಕೊಂಡವಳಿಗೆ ʻತನಗಾದರೂ ಅವನನ್ನು ಬಿಟ್ಟುಹೋಗುವುದು ಅಷ್ಟು ಸುಲಭವೇ. ಕಾರಣವಿಲ್ಲದೇ ಅವನೇನೋ ಕೋಪಮಾಡಿಕೊಂಡ. ಎಷ್ಟು ಅನಾಗರೀಕವಾಗಿ ವರ್ತಿಸ್ದ. ಹಾಗಂತ ಬಿಟ್ಟುಹೋದ್ರೆ ಸುಖವಾಗಿರ‍್ತೀನಾ. ಈಗವ್ನಿಗೆ ಅರ್ಥವಾಗಿದ್ಯಲ್ಲ, ಇದನ್ನ ಬೆಳಸ್ದೆ ಇಲ್ಲಿಗೇ ಮುಗ್ಸೋಣʼ ಎಂದುಕೊಂಡು ಟವೆಲಿನಲ್ಲಿ ಮುಖವೊರೆಸುತ್ತಾ ಹೊರಬಂದಳು. ಅವಳಿಗಾಗೇ ಕಾಯುತ್ತಿದ್ದವನು “ನಾಳೆ ಸಂಡೆ. ನೀನು ಆರಾಮಾಗಿ ಮಲ್ಗು. ಮಕ್ಕಳ್ನ ಸ್ವಿಮಿಂಗ್ ಕ್ಲಾಸ್ಗೆ ನಾನೇ ಕರ್ಕೊಂಡ್ಹೋಗ್ತೀನಿ. ತಿಂಡೀಗೆ ಸ್ವಿಗ್ಗೀಗೆ ಆರ್ಡರ್‌ ಮಾಡ್ತೀನಿ. ನಿಶ್ಚಿಂತೆಯಾಗಿ ನಿದ್ದೆಮಾಡು” ಎನ್ನುತ್ತಾ ಅವಳಿಗೆ ಹೊದಿಸಿ ತಾನೂ ಮಲಗಿದ. ಕೆಲವೇ ಕ್ಷಣಗಳಲ್ಲಿ ಅವಳು ನಿದ್ರೆಗೆ ಜಾರಿದಳು.


ಟಿ ಎಸ್ ಶ್ರವಣ ಕುಮಾರಿ.

2 thoughts on “ಮಹಿಳಾ ದಿನದ ವಿಶೇಷ

Leave a Reply

Back To Top