ಸ್ಫೂರ್ತಿಯ ಸೆಲೆ
ಭಾರತಿ ನಲವಡೆ
ಯತ್ರ ನಾರ್ಯಂತು ಪೂಜ್ಯತೇ ರಮಂತೇ ತತ್ರ ದೇವತಾಃ’ಎಂಬಂತೆ ಎಲ್ಲಿ ಸ್ತ್ರೀಯರಿರುತ್ತಾರೋ ಲ್ಲಿ ದೇವತೆಗಳು ಪೂಜಿಸಲ್ಪಡುತ್ತಾರೆ ಎಂದು ಮನು ಸ್ಮತಿಯಲ್ಲಿ ಮನು ಉಲ್ಲೇಖಿಸಿದ್ದಾನೆ.ನಿಜ ಹೆಣ್ಣಿಗೆ ದೇವತೆಯ ಉಚ್ಚ ಸ್ಥಾನವನ್ನು ನೀಡಲಾಗಿದೆ.
ಇಂದು ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದ್ದಾಳೆ.ಮಾನವ ಕುಲದ ಭವಿಷ್ಯವು ತಾಯಂದಿರ ಕೈಯಲ್ಲಿದೆ.ಜಗತ್ತು ಒಂದು ಹೆಣ್ಣಿನಿಂದ ಕಳೆದು ಹೋಗಿದೆ ಎಂದು ಹೇಳುವವರಿದ್ದಾರೆ,ಆದರೆ ಅವರು ಒಂದು ಮಾತನ್ನು ತಿಳಿದುಕೊಳ್ಳುವದು ಅಗತ್ಯವಿದೆ.ಹೆಣ್ಣಿನ ಕಾರಣದಿಂದ ಕಳೆದು ಹೋದ ಜಗತ್ತನ್ನು ಹೆಣ್ಣು ಮಾತ್ರವೇ ಅದನ್ನು ಮರಳಿ ಪಡೆಯಬಲ್ಲಳು.’ನಿಮಗೆ ಒಳ್ಳೆಯ ನಾಗರೀಕರು ಬೇಕೋ ಹಾಗಾದರೆ ನನಗೆ ಒಳ್ಳೆಯ ತಾಯಂದಿರನ್ನು ಕೊಡಿ’ಎಂದು ನೆಪೋಲಿಯನ್ ಹೇಳಿದ್ದಾರೆ.ಯಾರಿಗೂ ಇಲ್ಲದ ಮಹತ್ವ ತಾಯಿಗೆ ಇದೆ.ಪುರಾಣ ಕಾಲದಲ್ಲಿ ಅವಲೋಕಿಸಿದರೆ ಲಕ್ಷ್ಮೀಧರಾಮಾತ್ಯನ ಶಾಸನದಲ್ಲಿ”ಕೆರೆಯಂ ಕಟ್ಟಿಸು,ಬಾವಿಯಂ ತೋಡಿಸು,ಅನಾಥರಿಗೆ,ಸ್ನೇಹಿತರಿಗೆ ನೆರವಾಗು”ಎಂದು ತಾಯಿ ಮಗುವಿಗೆ ಹಾಲುಣಿಸುತ್ತಾ ಬೋಧಿಸುತ್ತಿದ್ದಳು.ತಾಯಿ ಜೀಜಾಬಾಯಿಯ ಆಶೀರ್ವಾದ ಉಪದೇಶಗಳಿಲ್ಲದಿದ್ದರೆ ಛತ್ರಪತಿ ಶಿವಾಜಿ ಹಿಂದೂವಿ ಸಾಮ್ರಾಜ್ಯದ ಸೂರ್ಯನೆಂದೆಸಿಕೊಳ್ಳುತ್ತಿದ್ದನೆ? ಭುವನೇಶ್ವರಿದೇವಿಯ ಸಂಸ್ಕಾರದಿಂದ ವಿವೇಕಾನಂದ ದೇಶದ ಜಾಗೃತಿಗಾಗಿ ಧರ್ಮ ದುಂದುಭಿಯನ್ನು ಮೊಳಗಿಸಿದ. ದೇಶಕ್ಕೆ ರಾಷ್ಟ್ರಪಿತನನ್ನು ನೀಡಿದ ಪುತಲಿಬಾಯಿ -ಹೀಗೆ ಕುಟುಂಬದಲ್ಲಿ ತಾಯಿ ಎಂಬ ಸ್ಥಾನದ ಹೊಣೆಯ ಔನತ್ಯ ಅರ್ಥವಾಗುತ್ತದೆ.ಬಳೆ ತೊಡುವ ಕೈಗಳು ಖಡ್ಗವನ್ನು ಹಿಡಿಯಬಲ್ಲವೆಂದು ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ,ಝಾನ್ಸಿರಾಣಿ ಲಕ್ಷ್ಮೀಬಾಯಿ,ಓನಕೆ ಓಬವ್ವಮುಂತಾದ ವೀರವನಿತೆಯರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ.ಮದರ
ಥೇರೇಸಾರವರ ಸಮಾಜ ಸೇವೆ ಅಮೋಘ.ದಿಟ್ಟ ಮಹಿಳೆಯ ರೂಪದಲ್ಲಿ ಭಾರತೀಯ ರಾಜಕೀಯ ರಂಗ ಪ್ರವೇಶಿಸಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ ಇಂದಿರಾಗಾಂಧಿ.ಪ್ರಸ್ತುತ ರಾಜಕೀಯ ರಂಗದಲ್ಲಿರಾಷ್ಟಪತಿಯಾಗಿ ಸೇವೆ ಸಲ್ಲಿಸಿದ ಪ್ರತಿಭಾ ಪಾಟೀಲ ಸೇವೆ ಸಲ್ಲಿಸುತ್ತಿರುವ ದ್ರೌಪದಿ ಮುರ್ಮುರಿಂದ ಹಿಡಿದು ಮೇಯರ,ಕ್ಯಾಬಿನೆಟ್ ದರ್ಜೆ ಮಂತ್ರಿ,ನ್ಯಾಯಮೂರ್ತಿಗಳಾಗಿ ಸರ್ಕಾರದ ಉನ್ನತ ಹುದ್ದೆಗಳಲ್ಲಿ ತಮ್ಮ ಅಪೂರ್ವ ಸಾಮರ್ಥ್ಯ ಹಾಗೂ ಪ್ರತಿಭೆಯಿಂದ ಮೆರೆದಿದ್ದಾರೆ.
ಹೆಣ್ಣು ಸಂಸಾರದ ಕಣ್ಣಾಗಿ ತಾಯಿಯಾಗಿ,ಸಹೋದರಿಯಾಗಿ,ಮಗಳಾಗಿ, ಸೊಸೆಯಾಗಿ ತನ್ನ ಪಾತ್ರಗಳ ಚೌಕಟ್ಟಿನಲ್ಲೆ ತನ್ನ ಕರ್ತವ್ಯಗಳನ್ನು ಚಾಚೂ ತಪ್ಪದೇ ನಿಭಾಯಿಸುತ್ತಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಔದ್ಯೋಗಿಕ ಕ್ರಾಂತಿಗೆ ನಾಂದಿ ಹಾಡಿ ಪುರುಷನಂತೆ ಎಲ್ಲ ಹುದ್ದೆಗಳನ್ನು ನಿಭಾಯಿಸುವತ್ತ ದಾಪುಗಾಲು ಹಾಕುತ್ತಿದ್ದಾಳೆ. ಕುಟುಂಬದೊಂದಿಗೆ ತನ್ನ ವೃತ್ತಿ ಜೊತೆಗೆ ಪ್ರವೃತ್ತಿಯಲ್ಲಿ ತನ್ನದೇ ಆದ ಸಾಧನೆಯ ಶಿಖರವನ್ನೇರುತ್ತಿದ್ದಾಳೆ.ಕೆಲವೊಮ್ಮೆ ಕುಟುಂಬದಲ್ಲಾಗಲಿ ತನ್ನ ಕಾರ್ಯಕ್ಷೇತ್ರದಲ್ಲಾಗುವ ತಲ್ಲಣಗಳನ್ನು ತಾಳ್ಮೆಯಿಂದಲೇ ಸಹಿಸಿ ಕ್ಷಮಯಾಧರಿತ್ರಿಯಾಗುತ್ತಾಳೆ.ತನ್ನದಲ್ಲದ ತಪ್ಪಿಗೆ ತನ್ನ ಮಕ್ಕಳು ಹಾಗೂ ಕುಟುಂಬದ ಪ್ರತಿಷ್ಠೆಗಾಗಿ ಚಕಾರವೆತ್ತದೆ ಬದುಕ ಬಂಡಿಯ ನೊಗವನು ಹೊತ್ತು ಸೋತು ಗೆಲ್ಲುತ್ತಾಳೆ.
ಸ್ವಾಭಿಮಾನಿ ಮಹಿಳೆ ಅತಿಯಾದ ಅರಗಿಸಿಕೊಳ್ಳಲಾಗದ ಕೌಟುಂಬಿಕ ಕಲಹಗಳನ್ನು ಪ್ರತಿಭಟಿಸುವ ಛಾತಿಯನ್ನು ಹೊಂದಿದ್ದು ಜೀವಕ್ಕೆ ಕುತ್ತು ಬಂದಾಗ ಬಂಧನವನ್ನೇ ಕಳಚಿ ತನ್ನ ಆತ್ಮರಕ್ಷಣೆಗೆ ಮುಂದಾಗುವ ಎಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ. ವಿನಯಾ ಪ್ರತಿಭಾವಂತ ವಿದ್ಯಾರ್ಥಿ ಹೆಸರಿಗೆ ತಕ್ಕ ಹಾಗೆ ವಿನಯದ ಸ್ವಭಾವ ಅವಳ ತಾಯಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಕೆಲಸ ತಂದೆ ಕೂಲಿ ಸಾಲು ಸಾಲಾಗಿ ನಾಲ್ಕು ಹುಡುಗಿಯರು ಎಲ್ಲರೂ ಓದಿನಲ್ಲಿ ಮುಂದು. ದ್ವಿತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಾಸಾದ ವಿನಯಳಿಗೆ ಉತ್ತಮ ಅಂಕಗಳು ಕೂಡ ಬಂದಿತ್ತು.ಆದರೆ ಅವಳ ತಾಯಿ ತನಗೆ ಕಷ್ಟವಾದರೂ ಸರಿ ತನ್ನ ನಾಲ್ಕು ಹೆಣ್ಣು ಮಕ್ಕಳನ್ನು ಚನ್ನಾಗಿ ಓದಿಸುವ ಇಚ್ಛಾಶಕ್ತಿ ಪ್ರಬಲವಾಗಿದ್ದರಿಂದ ಇಂದು ವಿನಯ ನರ್ಸಿಂಗ ವಿದ್ಯಾರ್ಥಿನಿಯಾಗಿ ಸರ್ಕಾರಿ ನರ್ಸಿಂಗ ಕಾಲೇಜಿನಲ್ಲಿ ಸೀಟ್ ಗಿಟ್ಟಿಸಲು ನೆರವಾಯಿತು.ಹೀಗೆ ಮಹಿಳಾಶಕ್ತಿ ಅಸ್ಮಿತೆಗೆ ಪ್ರೋತ್ಸಾಹ ಬೇಕು. ಮಕ್ಕಳ ಭವಿಷ್ಯದಲ್ಲಿ ತಾಯಿಯ ಪಾತ್ರ ಬಹಳ ಮಹತ್ವದ್ದಾಗಿದೆ.
ಬದುಕಿನ ಯಾವುದೇ ಕ್ಷೇತ್ರದಲ್ಲಿ ಜಯ ಸಾಧಿಸಲು ಪ್ರಯತ್ನ ಪರಿಶ್ರಮಗಳು ಒಂದು ನಿಟ್ಟಿನಲ್ಲಿ
ಯೋಜನೆ-ಯೋಚನೆಯ ಮೂಲಕ ಸಾಗಬೇಕು.ಆಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ.
ಕೊರತೆ ಎಲ್ಲರಲ್ಲೂ ಇರುತ್ತದೆ.ಯಾರೂ ಪರಿಪೂರ್ಣರಾಗಿ ಹುಟ್ಟುವದಿಲ್ಲ.ಕೊರತೆಯನ್ನು ಸೊನ್ನೆಗೆ ಹೋಲಿಸಲಾಗುತ್ತದೆ.ಸೊನ್ನೆಯು ಸಂಖ್ಯೆಯ ಹಿಂದೆ ಇದ್ದರೆ ಅದಕ್ಕೆ ಬೆಲೆ ಇರುವುದಿಲ್ಲ,ಅದರಿಂದ ಸಂಖ್ಯೆಗೂ ಬೆಲೆ ಬರುವದಿಲ್ಲ.ಅದೇ ಸೊನ್ನೆ ಸಂಖ್ಯೆಯ ಮುಂದೆ ಇದ್ದರೆ ಸಂಖ್ಯೆಗೆ ಬೆಲೆ ಇರುತ್ತದೆ.ಕೊರತೆ ಶಕ್ತಿಯಾಗಿ ಪರಿವರ್ತನೆಗೊಳ್ಳುವದು.ಮಾನವ ಪ್ರಯತ್ನದಿಂದ ಹೊರತು ಪ್ರಕೃತಿಯಿಂದಲ್ಲ,ಕೊರತೆಯನ್ನು ಸಾಮರ್ಥ್ಯವನ್ನಾಗಿ ಪರಿವರ್ತಿಸಿಕೊಂಬವರ ಜೀವನವೇ ಜಗತ್ತಿನ ಇತಿಹಾಸವಾಗಿದೆ.ಇದಕ್ಕೆ ಮಹಿಳೆಯೇ ಸ್ಫೂರ್ತಿಯ ಸೆಲೆಯಾಗಿದ್ದಾಳೆ.