ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಮನೆ ಮನೆ ನನ್ನ ಮನೆ

ಮನೆ ಮನೆ ನನ್ನ ಮನೆ

ಆಹಾರ ಸಂಗ್ರಹಣೆಗೆ ಗೂಡು ಬಿಟ್ಟು ಹೋದ ಹಕ್ಕಿ ಮತ್ತೆ ಮರಳಿ ಬರುವಂತೆ ನಾವು ಕೂಡ ಮತ್ತೆ ಬರುವುದು ಮನೆಗೇ ಇರುವುದು ಮನೆಯಲ್ಲೇ.
.
ಮನೆ ಎಂದರೆ ಇಟ್ಟಿಗೆ ಕಾಂಕ್ರೀಟುಗಳ ಕಟ್ಟಡ ಮಾತ್ರವಲ್ಲ ಪ್ರೀತಿ ಮಮತೆ ಭರವಸೆ ಆಸೆ ಆಕಾಂಕ್ಷೆ ಕನಸು ನೆನಪು ಎಲ್ಲವುಗಳನ್ನು ಸಂಗ್ರಹಿಸಿಟ್ಟ ಮುದ್ದಾದ ಖಜಾನೆ . ಅಲ್ಲಿನ ಪ್ರತಿಯೊಬ್ಬರೂ ಪ್ರೀತಿ ವಿಶ್ವಾಸದ ನಂಟಿನಲ್ಲಿ ಬಂಧಿತರಾಗಿರುತ್ತಾರೆ ಅಲ್ಲಿನ ಪ್ರತಿಯೊಂದು ವಸ್ತುಗಳ ಹಿಂದೆಯೂ ನೆನಪಿನ ಬುತ್ತಿ ಸವಿಯಲು ಇದ್ದೇ ಇರುತ್ತದೆ . ಊಟ ನಿದ್ರೆಗಳ ತಂಗುದಾಣವಲ್ಲ ಮನೆ . ಗೃಹ ವೆಂದರೆ ನಮ್ಮೆಲ್ಲಾ ಮುಚ್ಚಿಟ್ಟ ಭಾವನೆಗಳ ರಹಸ್ಯ ನಿಧಿ ; ಬಿಚ್ಚಿಟ್ಟ ಕನಸುಗಳ ಸಂಗ್ರಹಾಲಯ .

ದಾಸರೇನೋ ಹೇಳಿದರು “ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ” ಎಂದು . ಆದರೆ ಇಲ್ಲಿ ಬಂದು ಇರುವಷ್ಟು ಕಾಲಕ್ಕೂ ಅದು ನಮ್ಮ ಮನೆ ನಮ್ಮದೇ ಮನೆ . ಮನೆಯೊಡನಿನ ಭಾವಬೆಸುಗೆ ಅಷ್ಟು ಸುಲಭವಾಗಿ ಬಿಚ್ಚಿಕೊಳ್ಳುವವಂಥದ್ದಲ್ಲ . ಹುಲ್ಲು ಮಾಡಿನ ಗುಡಿಸಲೇ ಆಗಲಿ ವೈಭವೋಪೇತ ಬಂಗಲೆಯೇ ಆಗಲಿ ಪ್ರತಿಯೊಬ್ಬರಿಗೂ ಅವರವರ ಮನೆ ಹೆಚ್ಚು. ಮನೆ ಎಂದರೆ ಅದೇ ರೀತಿಯ ಅವಿನಾಭಾವ ಆಪ್ತ ಆತ್ಮೀಯ ಸಂಬಂಧ ಭಾವನೆ .

ಕುವೆಂಪು ಅವರು ಮನೆ ಮನೆ ನನ್ನ ಮನೆ ಎಂಬ ಶಿಶುಗೀತೆಯಲ್ಲಿ ತಮ್ಮ ಹಾಗೂ ತಮ್ಮ ಮನೆಯ ನಂಟು ಗಂಟುಗಳನ್ನು ತುಂಬ ಆತ್ಮೀಯವಾಗಿ ಬಿಚ್ಚಿಟ್ಟಿದ್ದಾರೆ . ಈ ಗೀತೆ ನಮಗೆ ಶಾಲೆಯಲ್ಲಿ ಪಠ್ಯದಲ್ಲಿಯೂ ಇದ್ದ ನೆನಪು .ಅದರಲ್ಲಿ ಅವರು ತಮ್ಮ ತಾಯಿ ತಂದೆ ಹಾಗೂ ಗೆಳೆಯರೊಡನೆ ಕೂಡಿ ಮುದ್ದು ಮಾತುಗಳನ್ನು ಆಡಿ ಮಕ್ಕಳಾಟಗಳನು ಹೂಡಿ ನಲಿದಿದ್ದನ್ನು ಸ್ಮರಿಸಿಕೊಳ್ಳುತ್ತಾರೆ . ಮನೆಯಲ್ಲಿ ಇದ್ದ ತಮ್ಮ ಓರಿಗೆಯ ಮಕ್ಕಳ ಹೆಸರುಗಳನ್ನು ಹೇಳುತ್ತಾ ಚಳಿ ಇದ್ದಾಗ ಒಲೆಯ ಬಳಿ ಬೆಂಕಿ ಕಾಯಿಸಿಕೊಂಡ ಕೊಳ್ಳುವ ಸಮಯದಲ್ಲಿ ಆಳು ಮಂಜ ಕಥೆ ಹೇಳುತ್ತಿದ್ದ ಎನ್ನುತ್ತಾರೆ ತಂದೆ ತಾಯಿಯರ ಪ್ರೀತಿ ಕಂಡ ಮನೆ ಬಂದ ನೆಂಟರು ಅಕ್ಕರೆಯಿಂದ ಕರೆದು ಕೊಬ್ಬರಿ ಬೆಲ್ಲ ಕೊಡುತ್ತಿದ್ದ ಮನೆ ಸವಿ ಮಾತುಗಳನ್ನಾಡುತ್ತಿದ್ದ ಮನೆ ಎಂದು ಭಾವ ಪರವಶತೆಯಿಂದ ನುಡಿಯುತ್ತಾರೆ . ಹಾಗೆಯೇ ತಾವು ನಡಿಗೆಯನ್ನು ನುಡಿಯನ್ನು ಕಲಿತ ಮನೆ ಹಾಗೂ ಪ್ರಕೃತಿಯ ಸೌಂದರ್ಯ ಸವಿಯಲು ಆರಂಭಿಸಿದ ಮನೆ ಎನ್ನುತ್ತಾರೆ . ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮಾಡಿನ ಸಂದಿನಿಂದ ಬೀಳುತ್ತಿದ್ದ ಬಿಸಿಲು ಕೋಲನ್ನು ಹಿಡಿಯಲು ಪ್ರಯತ್ನಿಸುತ್ತಿದ್ದ ತಾವು ಬೆಳಕನ್ನು ಮೊದಲು ಕಂಡ ಮನೆ ಎಂಬ ಭಕ್ತಿಭಾವ ಮೆರೆಯುತ್ತಾರೆ . ಇಂತಹ ಈ ಮೇರು ಕವಿಗಳ ಕವಿಶೈಲದ ಮನೆಯನ್ನು ನೋಡಿದಾಗ ಅವರು ನಡೆದಾಡಿದ ಜಾಗದಲ್ಲಿ ನಾವು ಈಗ ನಿಲ್ಲುತ್ತಿದ್ದೇವೆ ಎಂಬ ಭಾವನೆಯೇ ಪುಳಕ ತಂದಿತು . ಮಹನೀಯರ ಮನೆಗಳನ್ನೆಲ್ಲ ಈಗ ಈ ರೀತಿ ಸಂಗ್ರಹಾಲಯಗಳಾಗಿ ಮಾಡಿರುವುದು ತುಂಬಾ ಶ್ಲಾಘನೀಯ ಕೆಲಸ .

ಹೌದು ನಾವು ಬೆಳೆದ ಮನೆ ಅದು ನಮ್ಮ ನೆನಪಿನ ಭಿತ್ತಿಯಲ್ಲಿ ಸದಾ ಅಚ್ಚಾಗಿರುತ್ತದೆ . ಇನ್ನೂ ಹೆಣ್ಣುಮಕ್ಕಳಿಗೋ ತಾಯಿ ಮನೆ ಹಾಗೂ ಅತ್ತೆ ಮನೆ ಎಂಬ ಎರಡೆರಡು ಮನೆಗಳು . ತವರು ಮನೆ ಎಂಬ ಉದ್ಗಾರವೇ ಸಾಕು ಮನದಲ್ಲಿ ಪುಳಕ ಎಂಥದೋ ವರ್ಣಿಸಲಾಗದ ಅನಿರ್ವಚನೀಯ ಭಾವ ಆವರಿಸಿ ಬಿಡುತ್ತದೆ .

ಮನೆ ಎಂಬುವುದು ಮನೆ ಎನಿಸಿಕೊಳ್ಳಬೇಕಾದರೆ ಅದರಲ್ಲಿ ಇರುವವರೆಲ್ಲರ ಮೇಲೂ ನಿರ್ಭರವಾಗಿರುತ್ತವೆ .ಪ್ರೀತಿ ಮಮತೆ ಗಳನ್ನು ಕೊಟ್ಟು ಕೊಳ್ಳುವ ಸುಂದರ ತಾಣ ಅದು . ಅದಕ್ಕೆ ಹೇಳುವುದು “ಮನೆಯೇ ಮಂತ್ರಾಲಯ ಮನಸೇ ದೇವಾಲಯ” ಎಂದು . ಸಿರಿತನವಿರಲಿ ಬಡತನವಿರಲಿ ಎಂದಿಗೂ ಪ್ರೀತಿ ವಿಶ್ವಾಸಗಳಿಗೆ ಮಾತ್ರ ಕೊರತೆ ಕಾಣಬಾರದು . ಒಬ್ಬರನ್ನೊಬ್ಬರು ಬಿಟ್ಟು ಕೊಡದೆ ಪ್ರಗತಿಯ ಹಾದಿಯಲ್ಲಿ ಜತೆಯಾಗಿ ಸಾಗುತ್ತಾ ಸಹಾಯ ಮಾಡುತ್ತಾ ಮುಂದುವರೆಯುವುದೇ ಮನೆಯಲ್ಲಿರುವವರೆಲ್ಲರ ಕರ್ತವ್ಯ .

ಕುವೆಂಪು ಅವರು ಓ ನನ್ನ ಚೇತನ ಆಗು ನೀ ಅನಿಕೇತನ ಎನ್ನುತ್ತಾರೆ . ವಿಶ್ವ ಮಾನವತೆಯೆಡೆಗಿನ ಮೊದಲ ಹೆಜ್ಜೆ ಅದು . ಆದರೆ ಭೌತಿಕದ ಈ ಮನೆ ಯ ನಂಟು ಅಂಟಿಸಿಕೊಳ್ಳದಂತದ್ದಲ್ಲ . ಈ ಬೆಸುಗೆಯ ಬಂಧುರ ಭಾವದಿಂದಲೇ ವಸುಧೈವ ಕುಟುಂಬಕಂ ಎಂಬ ಇಡೀ ವಿಶ್ವವನ್ನೇ ನಮ್ಮ ಮನೆಯನ್ನಾಗಿ ಮಾಡಿಕೊಳ್ಳುವಂತಹ ಲೋಕೋತ್ತರ ಆಶಯ ನಮ್ಮ ಸಂಸ್ಕೃತಿಯ ದು . 1ಪುಟ್ಟ ಮನೆಗೆ ಸೀಮಿತವಾಗದೆ ಪ್ರಪಂಚವನ್ನೇ ನನ್ನ ಮನೆ ಎಂದು ತಿಳಿದುಕೊಂಡು ಎಲ್ಲರೂ ನಮ್ಮ ಬಂಧುಗಳೇ ಎಂಬಂತೆ ಸಹಕಾರ ಸಮನ್ವಯದಲ್ಲಿ ಬಾಳುವ ಆಶೋತ್ತರವಿದು.

ಇನ್ನೂ ಭೌತಿಕವಾಗಿ ನಾವಿರುವ ಮನೆ ಎಂದಿಗೂ ನಮಗೂ ಅದೆಷ್ಟು ನೆಂಟು ಬೆಳೆದಿರುತ್ತದೆ ಎಂದರೆ ಬಾಡಿಗೆ ಮನೆಯಾದರೆ ಬಿಡುವಾಗ ಹೃದಯ ಕೀಳುವಷ್ಟು ನೋವಾಗುತ್ತದೆ . ಜೀವವಿರದ ವಸ್ತುಗಳೊಡನಿನ ಒಡನಾಟ ಎನ್ನುವುದು ಇದಕ್ಕೆ . ಬೆಳೆಸಿಕೊಂಡು ಬಂದ ಆಪ್ತತೆ ಅಷ್ಟು ಬೇಗ ಮಾಯವಾಗುವುದಿಲ್ಲ . ಬಂಧ ಬಂಧನಗಳು ಬೇಡವೆನ್ನುವವರಿಗೂ ಸಹ ಮನೆಯ ಆಕರ್ಷಣೆಯಿಂದ ಮನೆಯ ಲಿಪ್ತ ಸುಪ್ತ ನಂಟಿನಿಂದ ಬಿಡಿಸಿಕೊಳ್ಳಲು ಆಗುವುದೇ ಇಲ್ಲ . ಅದೇ ಮನೆಯ ವಿಶಿಷ್ಟತೆ.

ಇಂತಿರ್ಪ ಮನೆಯ ಪ್ರಾಮುಖ್ಯತೆ ಹೆಚ್ಚು ಅರಿವಾಗುವುದು ಮನೆ ಬಿಟ್ಟು ದೂರ ಇರಬೇಕಾದಂತಹ ಸಂದರ್ಭದಲ್ಲಿಯೇ . ಇದು ದೇಶವನ್ನು ಬಿಟ್ಟು ಹೋದಾಗ ಸಹ ಅನುಭವಿಸುವ ಯಾತನೆ . ಆದರೆ ಎಲ್ಲಿ ಹೋಗಲಿ ಎಲ್ಲಿ ಬರಲಿ ನಮಗಾಗಿ ನಮ್ಮ ಮನೆ ಮನೆಯವರು ಕಾಯುತ್ತಿರುತ್ತಾರೆ ಎನ್ನುವ ಅದೊಂದು ಭಾವವೇ ಸಾಕು ಆಸೆಯ ಜ್ಯೋತಿಯನ್ನು ಬೆಳಗಿಸುವುದಕ್ಕೆ ಭರವಸೆಯ ಬೆಳಕನ್ನು ತರಿಸುವುದಕ್ಕೆ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top