ಪ್ರಹರಿ-ಸೂರ್ಯಸಖ ಪ್ರಸಾಧ ಕುಲಕರ್ಣಿ

ಪುಸ್ತಕ ಸಂಗಾತಿ

ಸೂರ್ಯಸಖ ಪ್ರಸಾಧ ಕುಲಕರ್ಣಿ

ಪ್ರಹರಿ

ನೇಸರನ ಕಿರಣಕೆ ಅರಳಿದ ತಾವರೆ

ನೇಸರನ ಕಿರಣಕೆ ಅರಳಿದ ತಾವರೆ

ಪಠತೋ ನಾಸ್ತಿ ಮೂರ್ಖತ್ವಂ ಈ ಸಂಸ್ಕೃತ ನುಡಿಯ ಅರ್ಥವೆಂದರೆ ಓದು ಮೂರ್ಖತನವನ್ನು ಅಳಿಯುತ್ತದೆ. ಹಾಗೆಯೆ ಮೌನವು ಕಾವ್ಯವನು ಹೆಣೆಯುತ್ತದೆ, ಮೌನವೇ ಕಾವ್ಯದ ತಾಯಿ, ಮೌನವೆಂದರೆ ನಿಶಬ್ಧವಲ್ಲ, ಅದೊಂದು ಗುಪ್ತ ಚೇತನದ ಚಿಲುಮೆ, ಅದು ಪುಟಿದಾಗ, ನೆಗೆದಾಗ ,ಉಕ್ಕಿ ಹರಿದಾಗ ಕಾವ್ಯ ಮೂಡಿ ಬರುತ್ತದೆ, ನಿಸರ್ಗ ಲಾಲಿ ಹಾಡಿದಾಗ, ನೆನಪಿನಾಳದಲಿ ಚಿತ್ರ ಮೂಡಿದಾಗ, ದುಃಖ ಉಕ್ಕಿದಾಗ, ಸಂತೋಷದ ಕಡಲು ಒಡೆದಾಗ, ಅದನ್ನು ಸವಿ ಶಬ್ಧಗಳಲಿ, ಸೆರೆಹಿಡಿದು, ಹಾಲುಣಿಸುವದೇ ಕವಿಕಾರ್ಯ ಮನದಲಿ ಮೂಡಿದ ಭಾವಗಳಿಗೆ, ಅಕ್ಷರದ ರೂಪ ನೀಡುತ್ತ, ನಯವಾಗಿ ಹೆಣೆಯುವ ಸಂಯೋಜನೆಯಾಗಿದೆ, ಅವು ದ್ವಿಪದಿ, ತ್ರಿಪದಿ ಹಾಗೂ ಚೌಪದಿ ರೂಪದಲ್ಲಿರುವ, ಕಗ್ಗಗಳು ಒಂದು ತೆರನಾದರೆ, ಆರು ಸಾಲಿನಲ್ಲಿರುವ ಷಟ್ಪದಿಯಲ್ಲಿ , ಮಹಾಕಾವ್ಯಗಳ ರಚನೆಯಾಗಿವೆ. ಕವನಗಳೆಂದರೆ, ತುಸು ಮಾತಿನಲಿರುವ ಕಸುವಿನಂಬರಗಳು. ಎದೆಯ ಮುಗಿಲಲಿ, ಭಾವಗಳ ಮೋಡ ಕವಿದಾಗ, ಕಾವ್ಯದ ಮಳೆ ಸುರಿಸಿವೆ, ಅನುಭವ, ಕಲ್ಪನೆಯ ಆಧಾರದಿಂದ, ರಚಿಸುವ, ಅರ್ಥ ಗರ್ಭಿತ, ಪದಚಮತ್ಕಾರವಾಗಿವೆ. ಇಂತಹುದೆ ಪದಗಳ ಚಮತ್ಕಾರದಲಿ ತಳೆದು ನಿಂತ ಸುಮಾರು 67 ಕವನಗಳ ಸಂಗಮವೆ ಈ ಪ್ರಹರಿ. ಪ್ರಹರಿ ಎಂದರೆ “ ಕಾವಲುಗಾರ ಯಾರು ಈ ಕಾವಲುಗಾರ-? ಯಾರಿಗಾಗಿ ಈ ಕಾವಲು-? ಈ ಕಾವಲುಗಾರನಲ್ಲೆನು ಅಡಕವಿದೆ -?, ಏತಕೆ-? ಈ ಕಾವಲು ಎಂದು ಬಹು ಆಸ್ಥೆಯಲಿ ಇಣುಕಿದಾಗ ಸೂರ್ಯಸಖ ಎನ್ನುವ ಕಾವ್ಯನಾಮದಲಿ ಪರಿಚಿತರಾದ ಕವಿ,ಕತೆಗಾರ, ವಿಶೇಷವಾದ ಧ್ವನಿ ಸಂಪತ್ತಿನಲಿ ಕವಿತೆಗಳ ವಾಚಕ, ಉತ್ತಮವಾಗಿ ಕೃತಿಗಳ ಅವಲೋಕನ ಮಾಡುವ ದೈತ್ಯ ಓದುಗ, ಕಾದಂಬರಿಕಾರರಾದ ಶ್ರೀಯುತ ಶ್ರೀ ಪ್ರಸಾದ ಕುಲಕರ್ಣಿಯವರ ಪ್ರಥಮ ಕವನ ಸಂಕಲನವಿದು. ಕಪಿಲಾ ಶ್ರೀದರ್, ಲೇಖಕಿ, ಮಾನಸೋಪಚಾರ ತಜ್ಞೆ ಬೆಂಗಳೂರು.ಇವರ ಮುನ್ನುಡಿಯು ಕವಿಯ ಬರವಣಿಗೆಯ ಹೊನ್ನ ಕಿರೀಟಕ್ಕೆ ಮುತ್ತು ರತ್ನ ಹವಳಗಳಿಂದ ಸಿಂಗರಿಸಿದೆಂತಿನಿಸಿತು.
ಕಾವ್ಯ ಪ್ರವೇಶಿಕೆಯ ಮೊದಲ ಶೀರ್ಷಿಕೆಯಡೆಗೆ ನೋಡುವದಾದರೆ,

ಧರೆ ಸ್ವರ್ಗವಾಗಲಿ

ಕವಿಯ ಆಶೆಯಕೊಂದು ಮೊದಲಿಗೆ ನಮನಗಳು. ಸಗ್ಗವೆನ್ನುವದು ಎಲ್ಲೂ ಇಲ್ಲ, ಇಲ್ಲೆ ಇದೆ ಎನ್ನುವ ನಿಟ್ಟಿನಲಿ ಇಲ್ಲೆ ಸ್ವರ್ಗ ಇಲ್ಲೆ ನರಕ ಎನ್ನುವ ನುಡಿಯನೆ ಪ್ರತಿಪಾದಿಸಿದ್ದಾರೆನೊ ಎನಿಸಿತು,
ಪರೋಕ್ಷವಾಗಿ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ ಇಲ್ಲಿ ಸಲ್ಲುವವರು ಅಲ್ಲಿಯು ಸಲ್ಲವರಯ್ಯಾ ಇಲ್ಲಿ ಸಲ್ಲದವರು ಅಲ್ಲಿಯು ಸಲ್ಲರು ಕೂಡಲಸಂಗಮದೇವಾ ಎನ್ನುವ ವಿಶ್ವಗುರು ಬಸವಣ್ಣನವರ ನುಡಿಯ ಸದಾಶೆಯದಲ್ಲಿ ತಳೆದಿರುವ ಶೀರ್ಷಿಕೆಯಿದು. ನಾವಿರುವ ತಾಣವೆ ಸಗ್ಗವಾಗಲೆನ್ನುವ ಧ್ಯೇಯವಿದು.

ಈ ಕವಿತೆಯ ಸಾಲುಗಳು

ಅಹಮ್ಮಿನ ಗೋಡೆಯ ಧೂಳು
ರಾಚದಿರುವಲ್ಲಿ,
ಸವಿಮಾತು ಅನುರಣಿಸುವಲ್ಲಿ
ದಣಿವು ಕಾಣದ ದುಡಿಮೆ ಇರುವಲ್ಲಿ
ಸದ್ವಿವೇಕದ ಗಾಳಿ ಬೀಸುವಲ್ಲಿ
ಸುವಿಚಾರದ ಕ್ರಾಂತಿ ನಡೆಯುವಲ್ಲಿ
ರಾಗ ದ್ವೇಷಗಳು ಸುಳಿಯದಲ್ಲಿ
ಅನುರಾಗದಾರತಿ ಬೆಳಗಿರುವಲ್ಲಿ
ಮೆರವಣಿಗೆ ಹೊರಡಬೇಕಿದೆ ನಾನು
ಅಂಥಲ್ಲಿ ನೆಲೆ ನಿಲ್ಲಬೇಕಿದೆ ನಾನು”

84 ದಶಲಕ್ಷ ಕೋಟಿ ಜೀವರಾಶಿಗಳ ತಾಣವಾದ ( ಮರ್ತ್ಯಲೋಕ )ಈ ಭೂವಿ ಎಂಬ( ಕಮ್ಮಟ ) ಟಂಕಸಾಲೆಯಲಿ (ಕರ್ತಾರನ) ಸೃಷ್ಟಿಕರ್ತನ ಪರಿಪೂರ್ಣತೆಯ ಮುದ್ರೆ ಬೀಳಲು ಇಲ್ಲಿಯು ಸಲ್ಲಿದವರು ಅಲ್ಲಿಯು ಸಲ್ಲುವರೆಂಬ ಉದಾತ್ತ ಭಾವದಲಿ ರಚನೆಯಾದ ಈ ಸಾಲುಗಳು
ಅಗಮ್ಯ, ಅಗೋಚರ, ಅಪ್ರತಿಮ, ಅಪ್ರಮಾಣವಾದ ನಿರಾಕಾರ ಬಯಲೆಂಬ ದೇವನಲ್ಲಿ ಬೆರೆಯುವ ಅಂಶಗಳನು ಸೂಚಿಸಿದ್ದಾರೆನಿಸಿತು.

ಗುರುದೇವೋಭವ

ನಮ್ಮ ದೇಶದ ಎರಡನೇ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಳ್ಳಿ ರಾಧಾಕೃಷ್ಣರವರ ಜನುಮ ದಿನವಾದ ಸಪ್ಟೆಂಬರ್ 5 ರಂದು ಶಿಕ್ಷಕರ ದಿನವೆಂದು ಆಚರಿಸುವದು ಭಾರತೀಯರು ಗುರುವಿಗೆ ಕೊಡುವ ಮಹತ್ವವನು ಸೂಚಿಸುತ್ತದೆ
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎನ್ನುವ ದಾಸರ ನುಡಿಯ ಪ್ರತಿಧ್ವನಿಯ ಸಾಲುಗಳ ಪ್ರತೀಕವೆ ಈ ಶೀರ್ಷಿಕೆ ಎನಿಸುತ್ತದೆ.

“ಗುರುವಿಂದಲೇ ವೇದಾಂತ, ಸಿದ್ದಾಂತ,
ಬ್ರಹ್ಮನ ಬಿಂಬ, ಹರಿಹರನ ತೋರುವ ಕೈಗಂಬ,
ಬುದ್ದಿ ಹದಮಾಡಿ ವಿವೇಕ ಬಿತ್ತುವ ರೈತ,
ಮನೋಮಾಲಿನ್ಯ ಕಳೆವ ಕುಶಲತೆಯ ಕಲೆಯರಿತ ಕಲ್ಪಿ, ಬಾಳು ನಿರ್ಮಿಸೊ ಶಿಲ್ಪಿ”

ಈ ಕವಿತೆಯ ಸಾಲುಗಳ ಓದಿದಾಗ ನನಗೆ ನೆನಪಾದದ್ದು ಸಿಕ್ ಧರ್ಮ ಸಂಸ್ಥಾಪಕರಾದ ಗುರುನಾನಕರ ನುಡಿ ಧರಣಿಯಲ್ಲಿ ಸಾವಿರಾರು ಸೂರ್ಯಚಂದ್ರರು ಹುಟ್ಟಿಬಂದರೂ ಕೂಡಾ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನು ಅಳಿಯಲು ಸಾಧ್ಯವಿಲ್ಲ ಗುರುವಿನ ಅನುಗ್ರಹದಿಂದಲೆ ಸಾಧ್ಯ ಎನ್ನುವ ನುಡಿ ಅಲ್ಲದೆ ಸಂಸ್ಕೃತ ಪದವಾದ ಗುರು, ಗು ಎಂದರೆ ಅಂದಕಾರ ರು ಎಂದರೆ ಬೆಳಕು, ಅಜ್ಞಾನದ ಅಂದಕಾರದಿಂದ ಸುಜ್ಞಾನದ ಬೆಳಕಿನಡೆಗೆ ಕರೆದೊಯ್ಯುವವ.
ಒಟ್ಟಾರೆಯಾಗಿ ಅಸಮರ್ಥತೆಯನು ಅಯೋಗ್ಯತೆಯನು ಸದೃಢತೆಯಿಂದ ಸಮರ್ಥರಾಗಿಸುವ ಸಾಧಕನೆ ಗುರು ಎನ್ನವದು ನೆನೆದಿದ್ದಾರೆ.

ಸಾಧನೆ

ನಾವಳಿದ ಮೇಲೆ ಹೆಸರುಳಿದು, ಬೆಳಗುವುದೆ ಸಾಧನೆ
ಸಮಾಜದ ಸುತ್ತ ನಾವು ಸುತ್ತುವದಕ್ಕಿಂತ ನಮ್ಮ ಸುತ್ತ ಸಮಾಜ ಸುತ್ತುವಂತ ಕ್ಷೇತ್ರ ಆರಿಸಿಕೊಂಡು ತಪಸ್ಸಿನಂತೆ ನಿರಂತರವಾಗಿ ತೊಡಗುವ ಕ್ರೀಯೆಯಾಗಿದೆ.

“ಕಣ್ಣೀರೆ ಬರದ ಕಣ್ಣು ಯಾರಿಗಿಲ್ಲಿದೆ
ಪನ್ನೀರೇ ಸುರಿಸಿಕೊಳ್ಳುವ ಶಕ್ತಿ ನಮಗಿದೆ

ಬೀಸುವ ಗಾಳಿಯಲೇ ಹಚ್ಚಬೇಕು ದೀಪ
ನಮ್ಮ ಹಾದಿಗೇ ಅದುವೇ ಪ್ರದೀಪ

ಗುರಿಯ ಜೊತೆಗೆಂದು ಬೇಡ ಸಂಧಾನ
ನಮ್ಮದೇ ಗೆಲುವಾಗ ಬೇಡ ಅನುಮಾನ

ತಾರೆಗಳೇ ಇರಲಿ ಜಗದ ಪಾಲಿಗೆ
ಮಿಂಚುಹುಳುಗಳೆ ಸಾಕು ಅದುವೆ ದೀವಿಗೆ”

ಗೇಯತೆಯ ಅಂಶವನು ಹೊಂದಿರುವ ಅರ್ಥಗರ್ಭಿತವಾದ ಬಲು ಸುಂದರ ಕವಿತೆ ಇದು ಈಲ್ಲಿ ಮಿಂಚುಹುಳು ಈ ಪದದ ಬಳಕೆಯನು ಯೋಚಿಸಿದರೆ, ಸರ್ವೆ ಸಾಮಾನ್ಯವಾಗಿ ನನಗೆ ಅದಿಲ್ಲ ಇದಿಲ್ಲವೆಂದು ಕುಂದು ಕೊರತೆಗಳ ಅಳಲನು ತೋಡಿಕೊಳ್ಳುವದು ಹಾಗೂ ಅವರಿವರ ಕುರಿತು ದೂಷಣೆ ದೂರಿನ ಪಟ್ಟಿಯನು ತೆರೆದಿಡುತ್ತ ನಿರಾಸೆ ಸೋಲು ಹತಾಶೆ ಗಳ ಮೂಟೆಯನ್ನು ಹೊತ್ತು ಕುಳಿತವರನ್ನು ಸೂಚಿಸಿ ಸಾಧನೆಗೆ ಅಸಾಧ್ಯವಾದದು ಯಾವುದು ಇಲ್ಲ ಸಾಧಿಸುವ ಛಲ ಮುಟ್ಟುವ ಗುರಿಯೆಡೆಗೆ ಅವಿರತ ಪ್ರಯತ್ನವಿರಬೇಕೆಂದು ಸಾಧಿಪನಿಗೆ ಹುಲ್ಲುಕಡ್ಡಿಯು ಆಸರೆಯಾಗುವದೆನ್ನುವದರ ಪ್ರತೀಕವಾಗಿದೆ,
ಗೆಲ್ಲುವ ಛಲ ಪಡೆದೆ ತೀರುವೆನೆಂಬ ಹಠ ಯಶಸ್ಸಿಗೆ ತಹತಹಿಸುವ ಕಿಚ್ಚನ್ನು ಹಚ್ಚುವದು
ದಣಿವರಿಯದ ಹೋರಾಟದಿಂದ ಇಡಿ ವ್ಯಕ್ತಿತ್ವವನ್ನು ಪುನರ್ ರೂಪಿಸಿಕೊಂಡು ಮತ್ತು ಉನ್ನತಿಕರಿಸಿಕೊಳ್ಳುತ್ತ ಹುಸಿ ನೀರೀಕ್ಷೆಗಳ ನಿವಾಳಿಸಿ ಎಸೆದು ಸ್ಥಿತ ಪ್ರಜ್ಞತೆಯನ್ನು ರೂಡಿಸಿಕೊಂಡರೆ ಕನಸಿನ ಹಂಬಲ ಕಾಲಡಿಗೆ ತಾಗುತ್ತದೆ ಎನ್ನುವದಾಗಿದೆ.

ಚಂಡಾವರ್ತ

ಸುಂಟರಗಾಳಿ ಎನ್ನುವ ಶೀರ್ಷಿಕೆಯ ಪದವನು ಗಮನಿಸಿದರೆ ಹವಾಮಾನದ ವಿಧ್ಯಾಮಾನಗಳನು ಸೂಚಿಸುವಾಗ ಹೆಚ್ಚಾಗಿ ಬಳಸುತ್ತೆವೆ ಈಲ್ಲಿ ಕವಿಯು ಪ್ರತಿಮೆ ಹಾಗೂ ರೂಪಕವಾಗಿ ಗಾಳಿ ಮಾತುಗಳಿಗೆ ಹೊಲಿಸಿ ಬಳಸಿದ್ದಾರೆ. ಬಿಸಿಯಾಗುವಿಕೆ ಹಾಗೂ ಹರಿವಿನ ಪ್ರವಣತೆಯಿಂದ ಸೃಷ್ಟಿಯ ಅಸ್ಥಿರತೆ ಯಾವುದೆ ಋತುಮಾನಗಳಲ್ಲಿ ಸಂಭವಿಸುವ ಸಂಗತಿಯಾಗಿದೆ ಎನ್ನುವದನು ಕವಿಯ ಸಾಲುಗಳಲಿ ನೋಡುವದಾದರೆ

ಒಳಿತು ಕೆಡಕುಗಳ ಚಿಂತಿಸದೇ
ಮನ ಬಂದಂತೆ ಹಾರಾಡುತಿವೆ ಊಹಾಪೋಹಗಳು ಬಿರುಗಾಳಿಗೆ
ಸಿಲುಕಿದೆ ರೆಂಬೆ ಕೊಂಬೆಗಳಂತೆ
ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ.”

ಧುತ್ತನೆ ಆವರಿಸುವ ಸಂಕಷ್ಟಗಳೆಂದರೆ ಈ ಉಹಾಪೋಹದ ಕಟ್ಟುಕಥೆಗಳು,
ಬಿರುಗಾಳಿಗೆ ಸಿಲುಕುವ ರೆಂಬೆ ಕೊಂಬೆಗಳಂತೆ, ಚಂಡಾವರ್ತಕೆ ಸಿಲುಕಿದ ಮೋಡಗಳಂತೆ,
ಬೀಳಗೊಡದೆ ಹಬ್ಬಿದ ಆಲದ ಬಿಳಲಿನಂತೆ ನಿತ್ಯದ ಬದುಕಿನಲಿ ಹಾಸುಹೊಕ್ಕಾಗಿ ಅಹಂಕಾರದಲಿ ಸ್ವಚ್ಛಂದವಾಗಿ ವಿಹರಿಸಿದ ಸಂಗತಿಗಳೆಡೆಗೆ ಹೊಳವು ಹರವಿದ್ದಾರೆನಿಸಿತು,
ಅಗಸನ ಆಡಿಕಿಗಿ ಶ್ರೀರಾಮ ಕೆಟ್ಟಎನ್ನುವ ಹಳ್ಳಿಯ ಗಾಧೆಯನು ಪುಷ್ಟಿಕರಿಸಿದ್ದಾರೆ

“ಮನದ ನಾಗರ*

ಇದೊಂದು ಅದ್ಭುತವಾದ ಕವಿತೆ, ಮನುಜನ ಬದುಕಿನ ಸಮಗ್ರವಾದ ಚಿತ್ರಣವನೆ ಈ ಕವಿತೆಯಲಿ ಚಿತ್ರಿಸಿದ್ದಾರೆನೊ ಎಂದೆನಿಸಿದೆ,
ಗೆದ್ದಲು ಕಟ್ಟಿದ ಆ ಹುತ್ತದೊಳಗೆ ಅವಿತ ನಾಗರದಂತೆ ದೇವನು ನಿರ್ಮಿಸಿದ ಈ ದೇಹವೆಂಬ ಮನದಲಿ ರೋಷ, ಆವೇಶ, ಅಹಂಕಾರವೆಂಬ ಕರಗವನು ಹೊತ್ತ ಅರಿಷಡ್ವರ್ಗದ ವೈರಿಗಳಿಂದ ಮನುಜ ವಿಷ ಕಕ್ಕುತಿದ್ದಾನೆಂದು ಮನವನ್ನು ಹಾವಿಗೆ ಹೋಲಿಸಿದ್ದಾರೆ.

ಪಂಚಮಿ ಹಬ್ಬ ಮಾಡೊದಂದ್ರ ನಮ್ಮ ಹೆಮ್ಮೆಯ ಸಂಸ್ಕೃತಿ
*ನಮ್ಮೊಳಗಿನ ಸರ್ಪವ ಕೊಲ್ಲದೆ ಹೋದರೆ ಆಗತೈತಿ ವಿಕೃತಿ
*

ಸುಂದರ ಸತ್ಯದ ನುಡಿಯಿದು ಭಾರತೀಯರು ಆಚರಿಸುವ ಪ್ರತಿ ಹುಣ್ಣಿಮೆ ಅಮವಾಸ್ಯೆ ಹಾಗೂ ಹಬ್ಬಗಳಿಗೆ ತನ್ನದೆ ಆದ ವೈಜ್ಞಾನಿಕ ವೈಚಾರಿಕ ವೈಶಿಷ್ಟಪೂರ್ಣವಾದ ಸಂಸ್ಕಾರದ ಹಿನ್ನೆಲೆಯಿಂದ ಕೂಡಿದ ಆಚರಣೆಯಿದೆ ಅದನ್ನು ಅರಿತು ಅಳವಡಿಸಿಕೊಂಡಾಗ ಮಾತ್ರವೇ ಸಂಸ್ಕೃತಿ ಸನ್ಮತಿ ಸದ್ಗತಿ ಎನ್ನುವದನೆ ಕವಿ ಇಲ್ಲಿ ಎಚ್ಚರಿಸುವದರ ಮೂಲಕ
ಮಂದಿರದ ಪ್ರತೀಕವಾದ ಮನುಷ್ಯತ್ವದಲಿ ನಾಗರದ ಪ್ರವೇಶ ನಿಶೆಧಿಸದೆ ಹೋದರೆ ಮತಿಹೀನರಾಗುವದನು ತಡೆಯಲು ಜಾಗರವಾಗಬೆಕೆಂಬ ಸಂದೇಶವಿಟ್ಟಿದ್ದಾರೆ.

ಅರಳಲಿ ಸುಮ

“ಹೆಣ್ಣು ಗಂಡು ಎರಡು ಕಣ್ಙು ನಮ್ಮ ಬಾಳ್ವೆಗೆ
ಸಮಾನರೆಂದು ಬಗೆದಾಗ ದೇಶದ ಏಳಿಗೆ,
ಆಸ್ಪದವನೆ ಕೊಡದಿರೋಣ ಅರಳೋ ಸುಮದ ಹತ್ಯೆಗೆ
ತುಂಬುತಾಳೆ ಹೆಣ್ಣು ಕೂಡಾ ಸಾಧನೆಯ ಜೋಳಿಗೆ”

ಇಡಿ ಈ ಕವಿತೆ ಸಾಲುಗಳು ಮತ್ತೆ ಮತ್ತೆ ಓದಿ ಸಂತಸಗೊಂಡೆ, ಈ ತೆರನಾದ ಮನಸ್ಥಿತಿ ಜಗದ ಪ್ರತಿ ಪುರುಷರಲಿ ಬಂದರೆ ಖಂಡಿತವಾಗಲು ಧರೆ ಸ್ವರ್ಗವಾಗುತ್ತದೆ “Mother and Mother land are superior even to Heaven ” ಎನ್ನುವ ನುಡಿ ನೆನಪಿಸಿತು.
ಲಿಂಗ ತಾರತಮ್ಯವನು ವಿರೋಧಿಸಿ ಅಸಮಾನತೆಯನ್ನು ಅಳಿಸುವ ಅಂಶಗಳೆಡೆಗೆ ಗಮನ ಹೊರಳಿದರೆ ಮತ್ತೆ ವೇದಗಳ ಕಾಲದಲಿ ಸ್ತ್ರೀಯರಿಗಿದ್ದ ಗೌರವ ಮರ್ಯಾದೆ ಪುನಃ ಮರಳುತ್ತವೆ ತಾನಾಗೆ ಅರಳಿದರೆ ದೀರ್ಘಾಯುಷ್ಯ ಬಲವಂತದ ಅರಳುವಿಕೆ ಸರ್ವನಾಶ ಬಲವಂತಕೆ ಬದಲಾಣೆಯಾಗದೆ ಪ್ರತಿ ಮಾನವ ಜೀವಿಗಳ ಅಂತರಂಗದ ಹಂಬಲವಾಗಲಿ.
ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳು ನಮ್ಮ ಮೇರು ಸಂಸ್ಕೃತಿಯನು ತಲೆ ತಗ್ಗಿಸುವಂತೆ ಮಾಡಿದ ಘನ ಘೋರ ಅಪರಾಧಗಳಾಗಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಬೆರಳೆಣಿಕೆ ಸ್ತ್ರೀಯರು ಮಾತ್ರ ಔದ್ಯೋಗಿಕ ರಂಗಗಳಲ್ಲಿ ತೊಡಗಿಕೊಂಡಿದ್ದಾರೆ ಅವರ ಚಾರಿತ್ರ್ಯ ವಧೆ ಮಾಡುವ ನುಡಿಗಳಿಂದ ಮಾನಸಿಕ ಹಿಂಸೆಯನು ನೀಡಿ ನೈತಿಕ ಬಲ ಕುಸಿಯುವಂತ ಗಳಿಗೆ ಮೂಡಿರುವದು ವಿಷಾಧನೀಯವೆ. ಸೌಹಾರ್ದಯುತ ಸಹಕಾರದ ಬೆಂಬಲದ ಮನ್ನಣೆಯು ಸ್ತ್ರೀಯರಿಗೆ ದೊರೆತರೆ ಸಾಧನೆಯ ಜೋಳಿಗೆ ತುಂಬುತ್ತಿರುವ ಜೀವಂತ ನಿದರ್ಶನಗಳೆ ಕಣ್ಣುಂದಿವೆ.

ಊರ್ಮಿಳೆ

ಕುವೆಂಪುರವರ ಶ್ರೀರಾಮಾಯಣದರ್ಶನಂ ಕೃತಿಯಲ್ಲಿ ಬಹುಜನಕ್ಕೆ ಆಪ್ತವೆನಿಸುವ ಸ್ತ್ರೀ ಪಾತ್ರಗಳಲ್ಲಿ ಊರ್ಮಿಳೆಯೆ ಮೊದಲಿಗಳೆಂದರೆ ತಪ್ಪಾಗದೇನೊ,
ಇಲ್ಲಿಯು ಕೂಡಾ ತಮ್ಮ ಕವಿತೆಯಲ್ಲಿನ ಪಾತ್ರಕ್ಕೆ ಶಕ್ತ ನ್ಯಾಯವನು ಒದಗಿಸುವಲ್ಲಿ ಕುಲಕರ್ಣಿಯವರು ಯಶಸ್ವಿಯಾಗಿದ್ದಾರೆ, ಅನುರಕ್ತಳಾಗಿ ಬಂದ ಸಖಿಗೆ, ವಿರಕ್ತನಾಗಿ ಹೊದ ನಲ್ಲನ ಪಾತ್ರದ ಪರಿಚೆಯವನು ಕಣ್ಣಿಗೆ ಕಡೆದಂತೆ ಆತ್ಮದ ಕದ ತಟ್ಟುವ ಊರ್ಮಿಳೆಯ ಅಳಲನು ಓದುಗರ ಎದೆ ಮೀಟಿ ಕಂಬನಿಗರಿಸುತ್ತದೆ.

ಒಂದು ನೂರ ಅರವತ್ತೆಂಟು ಚಂದ್ರ ಕಾಯುವೆ ಬ್ರಹ್ಮಗಂಟನಾ

ಈ ಸಾಲು ಓದಿದಾಗ ಒಂದು ವರ್ಷಕ್ಕೆ 12 ತಿಂಗಳಾದರೆ ಹದಿನಾಲ್ಕು ವರ್ಷದ ವರೆಗೆ ವನವಾಸ ಮುಗಿಯುವ ತನಕ ಅಂದರೆ 168 ಹುಣ್ಣಿಮೆಗಳು ಎನ್ನುವ ಸಂಖ್ಯೆಯು ಹೃದಯನಾಥ ಲಕ್ಷ್ಮಣನಿಗಾಗಿ ಊರ್ಮಿಳೆ ಕಾದಿರುವ ಸುದೀರ್ಘ ಅವಧಿಯನ್ನು ಸೂಚಿಸುತ್ತದೆ.
ಸಧವೆಯಾದ ಸತಿಯು ಹಚ್ಚಿದ ಹರಿದ್ರ ಒಣಗುವ ಮುನ್ನ ವಿಧವೆಯಂತೆ ಬದುಕಿದ ಬಾಳದು,
ಪರಿತ್ಯಕ್ತೆಯಾಗಿ ವಿರಸದಿಂದ ಉಂಟಾದ ಎದೆಭಾರವನು, ಪತಿಧರ್ಮ ಮರೆತವನ ನೆನಪಿಂದ ಊರ್ಮಿಳೆಯ ಜೀವನವೆ ವಿಷಾದದ ವರಪ್ರಸಾದವಾಗಿದೆ ಎಂದಿಲ್ಲಿ ಸ್ಮರಿಸಿದ್ದಾರೆ.

ನೇಹ

“ಗೆಳೆತನವೆಂದರೆ ನಿರೀಕ್ಷೆ ಮೀರಿದ ನಂಬಿಕೆ ಎಂಬುವ ಜೀವಾಳ
ಸ್ನೇಹದಲೆಂದು ಅಪೇಕ್ಷೆ ಇರದ ಹೊಂದಿಕೆ ಎಂಬುವ ರಸಗವಳ”

ಈ ಕವಿತೆಯ ಸಾಲುಗಳನ್ನು ಗಮನಿಸಿದಾಗ
ಖ್ಯಾತ ಕವಿಗಳಾದ ಬಿ ಆರ್ ಲಕ್ಷಣರಾವ್ ಅವರ ರಚನೆಯ ಸಾಲುಗಳಿಗೆ ಮೂಡಿದ ವ್ಯತಿರಿಕ್ತ ಸಾಲುಗಳಿವು ಎನಿಸಿತು

“ಆಗು ಗೆಳೆಯ ಆಗು ನಿ ಭರವಸೆಯ ಪ್ರವಾದಿ,
ಹತಾಷೆಯಲ್ಲೆನಿದೆ ಬರಿ ಶೂನ್ಯ, ಬರಿ ಬೂದಿ,
ಅದುಮಿದಷ್ಟು ಚಿಮ್ಮಿ ಬರುವ ಚೈತನ್ಯದ ಚಿಲುಮೆ,
ಉಬ್ಬೆಯಲ್ಲೂ ಹುಳಿ ನೀಗಿದ ಸಿಹಿ ಹಣ್ಣಿನ ರೀತಿ”

ಈ ಕವಿತೆಯ ಸಾಲಿನ ಆಶೆಯದ ಫಲವಾಗಿ ಪ್ರಸಾದ ಸರ್ ರವರ ಎದೆ ನೆಲದಲಿ ಉಳುಮೆಗೈದ ಪ್ರೀತಿಯ ಫಸಲಿನಲಿ ಮೂಡಿದ ಸಾಲುಗಳಿಂದ ಹೇಳುವದಾದರೆ ಸಡಗರಕ್ಕೆ ನೀಡಿದ ಉಡುಗೊರೆಯೆ ಸ್ನೇಹ,
ಪದಗಳಿಗೆ ನಿಲುಕದ ಅನುಭೂತಿಯ ಭಾವವನು ಸಮಾನ ಹೃದಯಗಳಲಿ ಬೆಸೆಯುವ ವಿನಾಯತಿಗೆ ಆ ದೇವನು ನೀಡಿರುವ ರಿಯಾಯಿತಿಯಾಗಿದೆ ಎನಿಸಿತು.

ಸಿಂ -ಪತಿ

“ಅಂತಪುರದ ಮಧುರ ನುಡಿಗಳು ಕೇಡು ತರುವದಂತೆ ಮನೆಗೆ
ಹುಟ್ಟುವವಂತೆ ವಂಶದ ಕುಡಿಗಳು ಸೋಳಾ ಸೋಮವಾರದ ಕಥೆಗೆ”

ಆಧುನಿಕತೆಯ ದಾಳಿಗೆ, ವಿದೇಶಿ ಸಂಸ್ಕಾರ ನೆಚ್ಚಿದ ಬಾಳಿಗೆ ಹಲವರ ಬದುಕಾಗಿದೆ ಹರಿದ ಜೋಳಿಗೆ ಈ ಅಂಶ ಒಂದೆಡೆಯಾದರೆ ಅತಿಯಾದ ಕುರುಡು ನಂಬಿಕೆಗಳು ವೈಜ್ಞಾನಿಕ ಅಂಶಗಳ ಅಳವಡಿಕೆಗೆ ಅಡ್ಡಿಯಾಗಿರುವದನು ಲಘುವಾದ ಹಾಸ್ಯದ ಸಾಲುಗಳ ಮೂಲಕ ಬಿಂಬಿಸುತ್ತ
ಲೈಂಗಿಕ ಶಿಕ್ಷಣದ ಬಗೆಗಿರಲಿ ವೈಚಾರಿಕ ಬೋಧನೆ
ಸಂಪ್ರದಾಯದ ಹೆಸರಿನಲಿ ಆಗದಿರಲಿ ರೋಧನೆ ಎಂದು ಕವಿ ಈ ಕವಿತೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ

ರಂಗಿ ನೆಪ್ಪು

ಸುಂದರ ಪ್ರೇಮ ಪರಿಣಯದ ಗೇಯತೆಯ ಲಯದಲಿ ಅರಳಿದ ಸೂರ್ಯನ ಅಂತರಂಗದ ತಾವರೆಯಿದು
ಜಿ ಪಿ ರಾಜರತ್ನಂ ರವರ ರತ್ನನ ಪರಪಂಚದ ಶೈಲಿಯಂತೆ ಗೋಚರಿಸಿತು.

ಪ್ರಹರಿ ಕೃತಿಯ ಶೀರ್ಷಿಕೆಯಡೆಗೆ ಆಲೋಚಿಸಿದಾಗ ನನಗೆ ತೋಚಿದ್ದೆಂದರೆ
ಜನ್ಮದಾತರ ಕಾವಲಿನಲಿ ಸಾಗಿದ ಬಾಲ್ಯವು ನಂತರ ಗುರುಗಳ ಮಾರ್ಗದರ್ಶನದಲ್ಲಿ ಪಯಣಿಸಿ ಬದುಕಿನ ಎಲ್ಲ ಘಟ್ಟಗಳಲ್ಲಿ ಸದಾ ಕಾವಲುಗಾರನೆಂದರೆ ಮನುಜರ ಅಂತರಾತ್ಮ ,
ಆತ್ಮಸಾಕ್ಷಿ ಅಥವಾ ಮನಸಾಕ್ಷಿಯೆ ಕಾವಲು ಎಂದಿದ್ದಾರೆ.

ಹೀಗೆ ವಿಧವಿಧವಾದ ವಿಭಿನ್ನ ಮನೋಮಂಥನದ ಲಹರಿಯಲ್ಲಿ ಆವಿರ್ಭವಿಸಿದ 67 ಕವಿತೆಗಳ ಗುಚ್ಚವು ವೈಶಿಷ್ಟ್ಯತೆಯಲಿ ಅರಳಿ ಓದುಗರೆದೆಗೆ ಅನುಭೂತಿಯ ಲಗ್ಗೆ ಹಾಕಿವೆ ,ಬಾಳಿಗೆ ರಸಾನುಭವ ಒದಗಿಸುವ ಯತ್ನದಲಿ ಅಪರೂಪದ ಅಪರಿಮಿತಗಳೆಡೆಗೆ ಪ್ರವಹಿಸಿದೆ ಈ ಪ್ರಹರಿ,
ಅಕ್ಷರ ಲೋಕದ ಕಾವಲುಗಾರನಾಗಿ ಸದ್ವಿವೇಕ ಸದ್ವಿಚಾರಕೆ ಹಪಹಪಿಸುವಿಕೆಯಿದೆ,
ಅಕ್ಕರದ ಕಡಲಲಿ ಮಿಂದೆದ್ದು ಹೊತ್ತಿಗೆಗಳನೆ ಆಟಿಕೆಯಾಗಿಸಿಕೊಂಡ ನೆನಪಿನ ಸುರುಳಿಯಿದೆ, ರಮ್ಯತೆಗೆ ಪದಪುಂಜಗಳ ಆಗರವಿದೆ, ಮೌಲ್ಯಗಳ ಮರಿಚಿಕೆಗೆ ಕಳವಳವಿದೆ, ಶರೀಫರ ಜೀವನ ವೃತ್ತಾಂತವಿದೆ, ಆರಕ್ಷರ ಸೇವೆಗೆ ಗೌರವದ ವಂದನೆಯಿದೆ, ಕರ್ಪೂರದಂತೆ ಅಸ್ತಿತ್ವವೆ ಇರದಂತೆ ಲಯವಾಗಿ ಬಯಲೊಳಗೆ ಲೀನವಾಗುವ ಆಧ್ಯಾತ್ಮಿಕ ಚಿಂತನೆಯಿದೆ, ಏನಿಲ್ಲ ಎನ್ನುವದರ ಮೂಲಕ ಇರಬೇಕಾಗಿರುವದರ ಸೂಚನೆಯಿದೆ, ಸಹಬಾಳ್ವೆಯ ಹಂಬಲವಿದೆ, ಅತೃಪ್ತಿಯೆಡೆಗಿನ ಆಕ್ರೋಶವಿದೆ, ನಾನು- ಅವನು ಅಹಂಬಾವಕೆ ಮೂಡಿದ ಅಸಡ್ಡೆಯಿದೆ, ಮಾಟಗಾತಿಯೊಂದಿಗೆ ಒಲವಿನ ಪಯಣವಿದೆ, ಬಸವೇಶ್ವರರ ಧರ್ಮದ ವಿಚಾರಗಳ ವಿಚಲಿತಕೆ ನಯವಾದ ಆಕ್ರೋಶವಿದೆ, ಬದ್ದನ ಆಶಯಗಳಿಗೆ ತಣ್ಣೀರೆರಚಿದ್ದಕ್ಕೆ ವಿಷಾಧವಿದೆ, ಅಮ್ಮನೆಂದರೆ ಶಬ್ಧ ಕೋಶಕೂ ಮೀರಿದ ಪ್ರೇಮವಿದೆ, ಅವಳೆಂದರೆ ಶೀರ್ಷಿಕೆ ಯಲ್ಲಿ ಸಮಗ್ರ ಸ್ತ್ರೀ ಪಾತ್ರಗಳ ದಿಗದರ್ಶನವಿದೆ, ರಾಧಾಚಂದ್ರಮತಿಯ ಪ್ರೇಮಸ್ಪೂರ್ತಿ ಕಾವ್ಯಲೋಕದಲವಳ ಕೀರ್ತಿಯ ಕಥನವಿದೆ, ಒಟ್ಟಾರೆಯಾಗಿ ಸಾಮಾಜಿಕ, ದಾರ್ಶನಿಕ ಪೌರಾಣಿಕ ಅಂಶಗಳೊಟ್ಟಿಗೆ ಸ್ವ ವಿಮರ್ಶೆಯ ಕವಿತೆಗಳು ಸೂಜಿಗಲ್ಲಂತೆ ಸೆಳೆಯುತ್ತವೆ.
ಮಗದಷ್ಟು ಸಾಹಿತ್ಯದ ಕೃಷಿಯಿಂದ ಸಾರಸ್ವತದ ಹಿರಿಮೆ ವೃದ್ಧಸಲೆನುವ ಸದಾಶಯದಲಿ ವಿರಮಿಸುವೆ.


ಪಾರ್ವತಿ ಎಸ್ ದೇಸಾಯಿ

One thought on “ಪ್ರಹರಿ-ಸೂರ್ಯಸಖ ಪ್ರಸಾಧ ಕುಲಕರ್ಣಿ

Leave a Reply

Back To Top