ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಬದುಕು ಒಲವಿನ ಆಗರವಾಗಲಿ..

ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಭೂಮಿಯ ಮೇಲೆ ಬದುಕಲೇಬೇಕು. ಭೂಮಿಯ ಮೇಲೆ ಬದುಕಿದ ಮನುಷ್ಯ ಆತ ಹೇಗೆ ಬದುಕಿದ ಎನ್ನುವುದರ ಮೇಲೆ ಆತನ ಬದುಕಿನ ಮೌಲ್ಯಗಳು ನಿರ್ಣಯಗೊಳ್ಳುತ್ತವೆ.

ಬದುಕು ಒಂದು ಸುಂದರವಾದ ಅನುಭವಗಳ ಶಾಲೆ. ಬದುಕು ಕೆಲವರಿಗೆ ನಂದನವನ. ಬದುಕು ಕೆಲವರಿಗೆ ವಿಶಾಲವಾದ ಬಯಲು. ಬದುಕು ಕೆಲವರಿಗೆ ಸಹನೀಯ. ಬದುಕು ಇನ್ನೂ ಕೆಲವರಿಗೆ ಅಸಹನೀಯ. ಬದುಕನ್ನು ನಾವು ಯಾವ ರೀತಿ ಸ್ವೀಕರಿಸುತ್ತೇವೆಯೋ ಹಾಗೆ ಬದುಕು ನಮಗೆ ದೊರಕುತ್ತದೆ.
ಪ್ರತಿಯೊಬ್ಬರ ಬದುಕಿನಲ್ಲಿಯೂ ಕೂಡ ಅನೇಕ ಸಂದರ್ಭಗಳು ಬರುತ್ತವೆ, ಹೋಗುತ್ತವೆ. ಆ ಸಂದರ್ಭಗಳನ್ನು ನಾವು ಯಾವ ಯಾವ ರೀತಿಯಲ್ಲಿ ಮುಖಾಮುಖಿಯಾಗುತ್ತೇವೆ ಎನ್ನುವುದರ ಮೇಲೆ ಬದುಕಿನ ಘಳಿಗೆಗಳು ನಿರ್ಣಯಗೊಳ್ಳುತ್ತವೆ.

ಅವನು ಅಗರ್ಭ ಶ್ರೀಮಂತ. ಸಂಪತ್ತನ್ನು ಗಳಿಸುತ್ತಲೇ ಗಳಿಸುತ್ತಲೇ ತನ್ನ ಬದುಕನ್ನು ಮುಗಿಸುತ್ತಾ ಹೋಗುತ್ತಿದ್ದಾನೆ. ಇಲ್ಲಿ ಇನ್ನೊಬ್ಬರು ತಾವು ಗಳಿಸಿದ ಸಂಪತ್ತನ್ನು ಅನುಭವಿಸಿ, ಇನ್ನೊಬ್ಬರಿಗೂ ಹಂಚಿ ಇನ್ನೊಬ್ಬರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುತ್ತಾನೆ. ಹಾಗಾದರೆ ಯಾರ ಬದುಕು ಸಾರ್ಥಕ..? ಇವನು ಬದುಕಿನೂದ್ದಕ್ಕೂ ತಾನು ತನ್ನ ಮಕ್ಕಳು, ತನ್ನ ಮಡದಿ ಕುಟುಂಬವೆಂದು ಬಯಸುತ್ತಲೇ ದುಡಿದು ಉಣ್ಣುತ್ತಲೇ ಬದುಕನ್ನು ಅಂತ್ಯಗೊಳಿಸುತ್ತಾನೆ. ಇನ್ನೊಬ್ಬರಿಗಾಗಿ ಬದುಕುವುದು ಅವನು ತೀರಾ ಅಪರೂಪ. ಇಂತಹ ಸನ್ನಿವೇಶಗಳನ್ನು ನಾವು ಸಮಾಜದಲ್ಲಿ ಕಾಣುತ್ತೇವೆ. ಅದು ಸಹಜ ಕೂಡ. ಎಲ್ಲಾ ವ್ಯಕ್ತಿಗಳು ಒಂದೇ ತೆರನಾಗಿ ಇರಬೇಕು ಎನ್ನುವುದು ತಪ್ಪಾದೀತು. ಆದರೂ ನಾನು ಬದುಕುವುದರ ಜೊತೆಗೆ ಇನ್ನೊಬ್ಬರನ್ನು ಪ್ರೀತಿಯಿಂದಲೇ ಬದುಕಲು ಹಂಬಲಿಸುವ ಮನಸ್ಸಾದರೂ ನಮ್ಮೊಳಗೆ ಬರಬೇಕು. ಆಗ ನಮ್ಮ ಬದುಕು ಅರ್ಥಪೂರ್ಣವಾಗುತ್ತದೆ.

ನಮಗೆ ಬದುಕು ಸಿಕ್ಕಿರುವುದು ಒಂದು ವರದಾನವೆಂದು ಭಾವಿಸಿಕೊಳ್ಳಬೇಕು. ಅದರಲ್ಲೂ ಮನುಷ್ಯನಾಗಿ ಹುಟ್ಟಿರುವುದು, ವಿವೇಕ ವಿವೇಚನೆಯನ್ನು ಪಡೆದುಕೊಂಡಿರುವುದು ನಮ್ಮ ಬದುಕಿನ ಆದರ್ಶವೆಂದೆ ಭಾವಿಸಬೇಕು. ಯಾವದು ಸರಿ, ಯಾವುದು ತಪ್ಪು ಎನ್ನುವ ತಿಳುವಳಿಕೆ ನಮ್ಮ ಎದೆಯೊಳಗೆ ಇಳಿದರೆ ಸಾಕು ಮನುಷ್ಯತ್ವ ಎಚ್ಚರಗೊಳ್ಳುತ್ತದೆ. ಉಳ್ಳವನು – ಇಲ್ಲದವನು ಎನ್ನುವ ಪರಿಕಲ್ಪನೆಯನ್ನು ಸಮಗೊಳಿಸಿ ಸಮಾನತೆಯ ಬದುಕನ್ನು ಬದುಕುವ ಒಲವು ಮೂಡಿದಾಗಲೇ ಮನುಷ್ಯನ ಜೀವನ ಸಾರ್ಥಕತೆ ಆಗುವದರಲ್ಲಿ ಅನುಮಾನವಿಲ್ಲ. ಇನ್ನೊಬ್ಬ ರಿಗೆ ನೆರಳಾಗದೆ ತನ್ನ ಅವನತಿಯ ನಂತರ ತನ್ನ ಸಂಪತ್ತು ಇನ್ನೊಬ್ಬರಿಗೆ ಹಸ್ತಾಂತರವಾಗುತ್ತದೆ ಎನ್ನುವ ಪರಿಕಲ್ಪನೆ ಇದ್ದಾಗಿಯೂ ಸುಖವನ್ನು ಅನುಭವಿಸದೆ ಹೋಗುತ್ತಾನೆ ಈ ಮನುಷ್ಯ..!! ಸಂಪತ್ತನ್ನು ಪರಿಶ್ರಮಕ್ಕೆ ಅನುಗುಣವಾಗಿ ಸಮಾನವಾಗಿ ಹಂಚಿದಾಗ ಮಾತ್ರ ‘ಸಮಾಜವಾದ’ದ ನೈಜ ಅರ್ಥ ಬದುಕಿನಲ್ಲಿ ಕಾಣಬಹುದಾಗಿದೆ. ಆದರೆ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಇದ್ದಾಗಿಯೂ ಬಡವರು ಶ್ರೀಮಂತರು ಎನ್ನುವ ಸಾಕಷ್ಟು ಅಂತರವನ್ನು ಕಾಣುತ್ತೇವೆ. ಪ್ರಜಾಪ್ರಭುತ್ವ ಮೌಲ್ಯವುಳ್ಳ ಸರ್ಕಾರಗಳು ಪ್ರಜೆಗಳ ಹಿತವನ್ನು ಬಯಸುತ್ತವೆ. ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗಿಯೂ ದೊಡ್ಡ ದೊಡ್ಡ ಉದ್ಯಮಿಗಳು, ಶ್ರೀಮಂತರು, ನೌಕರರು, ಸರಕಾರಕ್ಕೆ ಕಟ್ಟುವ ತೆರಿಗೆಯ ಜೊತೆಗೆ ಮಧ್ಯಮ ವರ್ಗ ಮತ್ತು ಬಡವರ ಕಟ್ಟುವ ಪರೋಕ್ಷ ತೆರಿಗೆಯ ಮೇಲೆ ಸರ್ಕಾರಗಳು ನಡೆಯುತ್ತವೆ.

ಸರ್ಕಾರಗಳು ಜನಕಲ್ಯಾಣವನ್ನು ಬಯಸುತ್ತಲೇ ಸಮಾಜದ ಪ್ರತಿಯೊಬ್ಬರ ಒಳಿತನ್ನು ಬಯಸುತ್ತವೆ. ನಾವು ಪ್ರೀತಿಯಿಂದಲೇ ದುಡಿಮೆಯನ್ನು ಮಾಡುತ್ತಾ, ಕುಟುಂಬವನ್ನು ನಿರ್ವಹಿಸುತ್ತಾ, ಮನುಷ್ಯತ್ವವನ್ನು ಸಮಾಜದೊಳಗೆ ಬಿತ್ತಬೇಕಾಗಿದೆ.

ಹೀಗೆ ನಾವು ಮನುಷ್ಯತ್ವದ ಮೌಲ್ಯಗಳು ಬಿತ್ತುವಾಗ ಅನೇಕ ಅಡ್ಡಗೋಡೆಗಳು ಬರುವುದು ಸಹಜ. ಅಂತಹ ಅಡ್ಡಗೋಡೆಗಳನ್ನು ಪ್ರೀತಿಯಿಂದಲೇ ತೆಗೆದುಹಾಕಿ, ಬದುಕನ್ನು ಒಲವಿನ ನಂದನವನವಾಗಿ ಮಾಡಬೇಕು. ಪ್ರತಿಯೊಬ್ಬರ ಬದುಕನ್ನು ನಂದನವನ ಮಾಡಲು ಹಲವಾರು ಮಹಾತ್ಮರು ಸಾಕಷ್ಟು ಶ್ರಮವಹಿಸಿದ್ದಾರೆ. ‘ತಾನು ತನ್ನ ಸಂಸಾರ ಎನ್ನದೆ, ನಾವು ನಮ್ಮದು’ ಎನ್ನುವ ಉದಾತ್ತ ಮನೋಭಾವವನ್ನು ಬೆಳೆಸಿದ್ದಾರೆ. ಅಂತಹ ಅನೇಕ ಮಹನೀಯರ ತ್ಯಾಗದಿಂದಲೇ ಇವತ್ತು ಸಮಾಜ ಸ್ವಸ್ಥವಾಗಿ ಬೆಳೆಯುತಿದೆ. ಆಧುನಿಕ ಕಾಲಘಟ್ಟದಲ್ಲಿ ಅನೇಕ ಸ್ಥಿತ್ಯಂತರಗಳ ಮಧ್ಯದಲ್ಲಿಯೂ ಯಾಂತ್ರಿಕ ಬದುಕಿನಲ್ಲಿಯೂ ಮನುಷ್ಯ ಬಾಂಧವ್ಯಗಳನ್ನು ಗಟ್ಟಿಗೊಳಿಸುವ ದಿಟ್ಟ ನಿರ್ಧಾರ ನಾವು ಕೈಗೊಳ್ಳಲೇಬೇಕಾಗಿದೆ. “ನಾವು ಪ್ರಾಣಿಗಳಿಗಿಂತ ವಿಭಿನ್ನ” ಎನ್ನುವುದನ್ನು ಮರೆಯಬಾರದು. ನಾನು ನನ್ನ ಬದುಕನ್ನು ಎಷ್ಟು ಅಪರಿಮಿತವಾಗಿ ಪ್ರೀತಿಸುತ್ತೇನೆಯೋ.. ಅಷ್ಟೇ ಇನ್ನೊಬ್ಬರ ಬದುಕನ್ನು ನಾವು ಪ್ರೀತಿಸಬೇಕಾಗಿದೆ. ನನ್ನ ಆಶಯಗಳನ್ನು ನಾನು ಈಡೇರಿಸುವುದಕ್ಕಾಗಿ ಎಷ್ಟು ಪ್ರಯತ್ನ ಪಡುತ್ತೇನೆಯೋ… ಇನ್ನೊಬ್ಬರ ಆಶಯಗಳಿಗೂ ನಾವು ಗೌರವವನ್ನು ಕೊಡಬೇಕಾಗಿದೆ. ಬದುಕಿನಲ್ಲಿ ಬರುವ ಅನೇಕ ಸಮಸ್ಯೆಗಳಿಗೆ ಚರ್ಚೆ, ಸಂವಾದ, ಮುಖ್ಯವೇ ಹೊರತು ವಿವಾದ, ಜಗಳ, ಆಕ್ರೋಶ, ದ್ವೇಷ ಮುಖ್ಯವಲ್ಲ ಎನ್ನುವುದನ್ನು ನಾವು ಮನಗಾಣಬೇಕು.

ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಅನೇಕ ಧರ್ಮಗಳು, ಜಾತಿಗಳು, ಪ್ರದೇಶಗಳು, ಭಾಷೆಗಳು, ವಿಭಿನ್ನ ಆಲೋಚನಾ ಮನಸ್ಸುಗಳು ಇಲ್ಲಿ ಸಾಕಷ್ಟು ಇರುವುದನ್ನು ಕಾಣುತ್ತೇವೆ. ಒಬ್ಬರ ಆಶಯಗಳನ್ನು ಪ್ರಜ್ಞಾಪೂರ್ವಕವಾಗಿ ಚರ್ಚಿಸಬೇಕಾಗಿದೆ. ನಮ್ಮ ತತ್ವಗಳನ್ನು, ಸಿದ್ದಾಂತಗಳನ್ನು ಪ್ರಶ್ನಿಸುವವರಿಗೆ ಪ್ರೀತಿ ಪೂರ್ವಕವಾಗಿ ತಿಳಿಸಿ ಹೇಳುವ ಸಹೃದಯತೆ ಬೇಕು. ಒಬ್ಬರ ಅಭಿಪ್ರಾಯಗಳನ್ನು ಗೌರವಿಸುವ ದೊಡ್ಡತನ ನಮ್ಮಲ್ಲಿ ಇರಬೇಕು. ಹಲ್ಲೆ, ದ್ವೇಷ, ಕೊಲೆ ಅಂತಿಮವಲ್ಲ. ಆಗ ಬದುಕು ಅಸಹ್ಯವಾಗುತ್ತದೆ.

ಮನುಷ್ಯನ ಬದುಕು ದೀರ್ಘ ಪಯಣವಲ್ಲ ಎನ್ನುವುದು ನೆನಪಿರಬೇಕು..!! ನೂರು ವರ್ಷದಷ್ಟು ಆಯುಷ್ಯವನ್ನು ಪಡೆದುಕೊಂಡರೂ ಅನೇಕ ಕಾರಣಗಳಿಗಾಗಿ ನಾವು ಬದುಕನ್ನು ಮಧ್ಯದಲ್ಲಿಯೇ ಬಿಟ್ಟು ಹೋಗುವುದನ್ನು ಕಾಣುತ್ತೇವೆ. ಬದುಕಿರುವವರೆಗೂ ಭೂಮಿಗೆ ನಾವು ಒಲವನ್ನು ಹಂಚ ಬೇಕೇ ಹೊರತು ದ್ವೇಷವನ್ನಲ್ಲ. ಪ್ರೀತಿಯನ್ನು ಹಂಚಿದರೆ ಇನ್ನೊಬ್ಬರನ್ನು ಬೆಳೆಸುತ್ತದೆ, ಉಳಿಸುತ್ತದೆ. ದ್ವೇಷ ಇನ್ನೊಬ್ಬರನ್ನು ಅಳಿಸುತ್ತದೆ. ಕೊನೆಗೊಳಿಸುತ್ತದೆ. ಎನ್ನುವ ತಾತ್ವಿಕ ಸಿದ್ದಾಂತ ನಮ್ಮೊಳಗೆ ಮೊಳಕೆಯೊಡೆಯಬೇಕು. ಆಗ ನಮ್ಮೆಲ್ಲರ ಬದುಕು ಒಲವಧಾರೆಯಾಗಿ, ಒಲವಿನ ಆಗರವಾಗಿ ಗೋಚರಿಸುತ್ತದೆ. ಪ್ರೀತಿಯಿಂದಲೇ ನಗು ನಗುತ್ತಾ ಜಗತ್ತನ್ನು ಕಟ್ಟುಬೇಕಾಗಿದೆ. ಪ್ರೀತಿಯಿಂದಲೇ ಬದುಕುವ ನಾವುಗಳು ಒಬ್ಬರ ಮನಸ್ಸನ್ನು ಇನ್ನೊಬ್ಬರು ಅರಿತುಕೊಳ್ಳುವ ಒಲವಿನ ಬದುಕು ನಮ್ಮೆಲ್ಲರದಾಗಲಿ ಎಂದು ಬಯಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ

One thought on “

Leave a Reply

Back To Top