ಕಾವ್ಯ ಸಂಗಾತಿ
ಆಸರೆಯಾಗು ಬಾ
ಇಮಾಮ್ ಮದ್ಗಾರ
ಕನಸುಗಳ ರೆಕ್ಕೆ ಕತ್ತರಿಸಿ ಮೊಣಕಾಲಿಗೆ ಮೊಳೆ ಜಡೆಯಲಾಗಿದೆ ಮತ್ತೆ ಮೇಲೆಳಲಾಗುತ್ತಿಲ್ಲ ನೀನಾದರೂ ಆಸರೆಯಾಗು ಬಾ
ಭರವಸೆಗೂ ಭಯವಾಗುತ್ತಿದೆ
ನಂಬಿಕೆಯ ಮುಖವಾಡದಿಂದ ಹುಣ್ಣಿಮೆಯ ಶಶಿಗೂ ಸೆಕೆಯಾಗಿದೆ ನಂಬಿಕೆಯ ಬೆಂಕಿಯುರಿಯಿಂದ
ನೀನಾದರೂ ಆಸರೆಯಾಗು ಬಾ
ಹೊಸಹುರುಪಿನಲಿ ಹುರಿದುಂಬಿ ಮನಸು ಮುಗ್ಗರಿಸಿದೆ
ಮುರಿದು ಹೋದ ಕನಸುಗಳ ಜೋಡಿಸುತ್ತಾ ಮನದಾಳದ ಬಾವಿಗೂ ಬಾಯಾರಿದೆ ನೀನಾದರೂ ಆಸರೆಯಾಗು ಬಾ
ಒಲವಿನೆಲುಬು ಮುರಿದು
ನೋವಿಗೂ ಸ್ಪಂದಿಸುತ್ತಿಲ್ಲ ಎದೆಯ ನೋವುಗಳು
ಕತ್ತಲೆಯ ಕನಸುಗಳು ಬೆತ್ತಲಾದವೇಂಬ ಭಯದಿಂದ
ಬರಡಾಗುತ್ತಿದೆ ಬದುಕು ನೀನಾದರೂ ಆಸರೆಯಾಗು ಬಾ
ಭಾವ ತಂತಿಗಳೆಲ್ಲಾ ಭಾರವಾಗಿ ಅಪಸ್ವರ ನುಡಿಯುತಿದೆ
ಶುೃತಿಗೊಳಿಸಿದೆನ್ನ ಮನದ ವೀಣೆ
ಎದೆಯಭಾವ ದೊಲುಮೆಯ ಪುಣ್ಯ ಕುಸಿದು ತತ್ತರಿಸಿದೆನ್ನೆದೆಯ ಕೋಣೆ ನೀನಾದರೂ ಆಸರೆಯಾಗು ಬಾ