ಪುಸ್ತಕ ಸಂಗಾತಿ
ಸಾಗುತ ಇದೆ ದೋಣಿ ನದಿಯ ನೀರನು ಸೀಳುತಾ
ಗೊರೂರು ಅನಂತ ರಾಜು
ಕರುನಾಡಿನಲ್ಲಿ ಅದೆಷ್ಟೋ ಸಾಹಿತಿಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ನವ್ಯಕನ್ನಡದಲ್ಲಿಯೂ ಉತ್ತುಂಗಕ್ಕೇರಿಸುವ ಸಾಹಿತ್ಯವನ್ನು ನೀಡಿ ಕನ್ನಡ ನುಡಿಯನ್ನು ವಿಶ್ವಮಟ್ಟದಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಅದೇ ನಿಟ್ಟಿನಲ್ಲಿ, ಸ್ವತಂತ್ರ ಅಮೃತ ಮಹೋತ್ಸವವನ್ನು ನೆನಪಿಸಿಕೊಳ್ಳುವಂತೆ “ಸಾಗುತ ಇದೆ ದೋಣಿ ನದಿಯ ನೀರನು ಸೀಳುತಾ” ಎನ್ನುವಂತಹ, ಗಮನ ಸೆಳೆಯುವ ಶೀರ್ಷಿಕೆಯನೊತ್ತ ಹಾಸನದ ಖ್ಯಾತ ಸಾಹಿತಿಯೊಬ್ಬರ ವಿಮರ್ಶನ ಕೃತಿಯೊಂದು ಇದೀಗ ಬೆಳಕಿಗೆ ಬಂದಿದೆ.
ಆ ಸಾಹಿತಿಯೇ ಶ್ರೀಯುತ ಗೊರೂರು ಅನಂತರಾಜುರವರು. ಇವರ ಕೈಚಳಕದಿಂದ ಹೊರಬಂದ ನಾನಾ ಪುಸ್ತಕ, ಲೇಖನ, ಸಂಕಲನಗಳಿಗೆ ಹೊಸ ಸೇರ್ಪಡೆ, ಹಾಸನದ ಹೆಸರಾಂತ ಸಾಹಿತಿಗಳನೇಕರು ಬರೆದಿರುವಂತಹ, ಸುಂದರವಾದ ವಿಮರ್ಶನ ಲೇಖನಗಳನ್ನು ಜೋಡಿಸಿರುವಂತಹ ಹೊತ್ತಿಗೆ “ಸಾಗುತ ಇದೆ ದೋಣಿ ನದಿಯ ನೀರನು ಸೀಳುತಾ”. ಇದೊಂದು ಸಮೃದ್ಧ ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಬಿಡಿ ಕೃತಿಯೆಂದೇ ಹೇಳಬೇಕು. ಯಾವುದೇ ಪುಸ್ತಕವಿರಲಿ ಅಲ್ಲಿರಬೇಕಿರುವುದು ಜ್ಞಾನಾರ್ಜನೆಯ ಭಂಡಾರ, ಸಮಚಿತ್ತ ಕಾಯುವ ಬರಹಗಳು. ಆ ರೀತಿಯಲ್ಲೇ ಬರೆಯುವಂತಹ ಒಬ್ಬ ಸಾಹಿತಿಯ ಪ್ರಹಸನ, ಲೇಖನ, ನಾನಾ ಬಗೆಯ ಕೃತಿಗಳಿತ್ಯಾದಿಗಳಿಗೆ, ಇತರೆ ಸಾಹಿತಿಗಳು ಬಿಡಿಯಾಗಿ ಬರೆದಿರುವಂತಹ ಅಭಿಪ್ರಾಯ ಮಾಲಿಕೆಯನ್ನು ಕ್ರೋಢಿಕರಿಸಿ ಪ್ರಕಟಪಡಿಸಲಾಗಿರುವಂತಹದ್ದೇ ಈ ಪುಸ್ತಕ ಮತ್ತು ಅದರ ವಿಶೇಷತೆ.
ಹಾಸನ ಜಿಲ್ಲೆಯ ಗೊರೂರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಹಿತಿಗಳ ತವರೂರು ಎಂದೇ ಸುಪ್ರಸಿದ್ಧ. ಅಂತಹ ಊರಿಗೆ ಈ ಶತಮಾನದ ಕಿರೀಟ ಗೊರೂರು ಅನಂತ ರಾಜು ಅವರು ಎಂದರೆ ತಪ್ಪಾಗದು. ಅವರ ಬಗ್ಗೆ ಅನೇಕ ಹಿರಿಯ ಸಾಹಿತಿಗಳು ಹೇಳುವ ಒಂದು ಸಾಮಾನ್ಯ ಮಾತು ಸರಳ ಸಜ್ಜನಿಕೆಯ ಪಾದರಸದಂತಹ ವ್ಯಕ್ತಿ ಕನ್ನಡವನ್ನು ನಿತ್ಯ ಲೇಖನಿಯ ಮೂಲಕ ಸುಲಲಿತವಾಗಿ ಹರಿಯಬಿಡುವ ಸಾಹಿತಿ. ಅಂತಹ ಸಾಹಿತಿಗಳ ಕೃತಿಗೆ ನುಡಿಪೋಣಿಸುವುದು ಸಣ್ಣ ವಿಚಾರವಲ್ಲ. ಅಂತಹದೊಂದು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವೆಂದುಕೊಂಡಿದ್ದೇನೆ. ಅವರ ಈ ಕೃತಿಯಲ್ಲಿ ಅನೇಕ ಸಾಹಿತಿಗಳು ತಮ್ಮ ಸಾಹಿತ್ಯಿಕ ಚಾತುರ್ಯತೆಯನ್ನು ಹೊರಗೆಡವಿದ್ದಾರೆ ಎಂದರೂ ತಪ್ಪಾಗಲಾರದು. ಅಂತೆಯೆ ಶ್ರೀಯುತ ಚನ್ನೇಗೌಡರು ಗೆಳೆಯರೆಂದೆಣಿಸದೆ ಮಾಡಿದಂತಹ ಸಂದರ್ಭೋಚಿತ ವಿಮರ್ಶೆ, ಸಾವಿತ್ರಮ್ಮ ಓಂ ಅವರು ಹಾಸನದ ಸಾಂಸ್ಕೃತಿಕ ದಿಗ್ಗಜರ ಕುರಿತು ಶ್ರೀಯುತರು ಬರೆದ ಮತ್ತು ಅನಂತ ರಾಜುರವರ ಮೂವತ್ತಕ್ಕೂ ಅಧಿಕ ಕೃತಿಗಳನ್ನು ಕುರಿತು ಸುಂದರವಾಗಿ ಲೇಖನಿ ಹರಿಸಿರುವುದು ಶ್ಲಾಘನೀಯವಾಗಿದೆ. ಮಾಲಾಚೆಲುವನ ಹಳ್ಳಿಯವರು ಶ್ರೀಯುತರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳನ್ನೂ ಅವರ ಪ್ರತಿಭೆಯನ್ನು ಅನಾವರಣಗೊಳಿಸಿರುವುದು, ಶ್ರೀಮಾನ್ ಗಿರಿರಾಜ್ ಅವರು, ನಾಟಕ ಬರವಣಿಗೆಯಲ್ಲಿ ಗೊರೂರರ ಕೈಚಳಕ ಕುರಿತು ಬರೆದ ಲೇಖನ, ವಾಣಿ ಮಹೇಶ್ ರವರು ಬದುಕು ಸಂತೆ ಬಂಡಿ ಶೀರ್ಷಿಕೆಯಡಿ ಅನಂತ ರಾಜುರವರು ಗೊರೂರು ಅಣೆಕಟ್ಟು ಕಟ್ಟುವುದನ್ನು ನೋಡುತ್ತ ಬೆಳೆದವರು ಎನ್ನುವ ವಿಚಾರವನ್ನೆತ್ತಿ ವಿಮರ್ಶೆ ಮಾಡಿರುವಂತಹದೆಲ್ಲ ಗಮನ ಸೆಳೆಯುತ್ತದೆ. ಶ್ರೀಯುತ ಪ್ರಕಾಶ್ ರವರು ರಂಗಭೂಮಿ ಹಾಗೂ ಜಾನಪದ ಕಲಾವಿದರ ಸಂದರ್ಶನ ಮಾಡಿದಂತಹ ರಂಗ ವೈಭವವನ್ನು ಹೆಸರಿಗೆ ತಕ್ಕಂತೆ ಅರ್ಥಗರ್ಭಿತವಾಗಿ ವಿಮರ್ಶಿಸಿದ್ದಾರೆ. ಶ್ರೀ ಗಗೋಚರವರು ಚೈನಾ ನಾಟಕ ಕುರಿತು ಬರೆದ ಕೃತಿಗೆ ಸೂಕ್ತ ರೀತಿಯಲ್ಲಿ ವಿಷಯ ಎತ್ತಿಹಿಡಿಯುವಂತ ವಿಚಾರ ಜೋಡಿಸಿ ವಿಮರ್ಶೆ ಬರೆದಿದ್ದಾರೆ. ಶ್ರೀ ಕೃಷ್ಣಸ್ವಾಮಿರವರು ಕಥಾಸಿರಿ ಐಸಿರಿ ಕುರಿತು ಬರೆಯುವಾಗ ಶ್ರೀಯುತರು ಕೈಯಾಡಿಸಿದ ಕ್ಷೇತ್ರಗಳನ್ನೆಲ್ಲ ಪ್ರಕಟ ಪಡಿಸಿದೆ. ಲಲಿತಾರವರು ಅನಂತರಾಜುರವರು ಪ್ರತಿಯೊಬ್ಬರ ಬರವಣಿಗೆ ನೀಡಿದ ಮಾನ್ಯತೆ, ಸೇವಾಪರತೆ ಕುರಿತು ತಮ್ಮ ಭಾವನೆಗಳನ್ನೂ ವ್ಯಕ್ತಪಡಿಸುತ್ತ ವಿಮರ್ಶನಾ ತೋರಣ ಕಟ್ಟಿದ್ದಾರೆ. ಪುಟ್ಟೇಗೌಡರು, ಹೊಯ್ಸಳ ಇತಿಹಾಸ ಕುರಿತು ಬರೆದ ಲೇಖನ ಮತ್ತು ಹೇಮೆಯೊಂದಿಗಿನ ಅನಂತ ರಾಜುರವರಿಗಿರುವ ಆತ್ಮೀಯ ನಂಟನ್ನು ಕಲೆಹಾಕಿ ತಾವೂ ಭಾವನಾತ್ಮಕವಾಗಿ ಲೇಖನ ದಾಖಲಿಸಿದ್ದಾರೆ. ಸ್ವತಃ ಶ್ರೀಯುತ ಅನಂತ ರಾಜುರವರು ಇತರರ ಕೃತಿಗಳಿಗೆ ಬರೆದ ವಿಮರ್ಶೆ ಆಸಕ್ತಿದಾಯಕವಾಗಿದೆ. ಒಟ್ಟಿನಲ್ಲಿ ಈ ಹೊತ್ತಗೆಯು ಒಬ್ಬ ಸಕಲಕಲಾವಲ್ಲಭ ಸಾಹಿತಿ ನಾಗರೀಕ ಸಮಾಜವೆಂಬ ನದಿಯಲಿ, ಬಿಳಿಹಾಳೆ ಎಂಬ ನೀರನು, ದೋಣಿ ಎಂಬ ಲೇಖನಿಯ ಮೂಲಕ ಅಕ್ಷರಗಳಿಂದ ಸೀಳುತ ಸಾಗುತ್ತಲೇ ಹೋಗುತ್ತಿದ್ದಾರೆ ಎಂಬುದನ್ನು ವ್ಯಕ್ತ ಪಡಿಸಿದಂತಿದೆ. ಕೊನೆಯದಾಗಿ ಇಂತಹ ಹಿರಿಯ ಲೇಖನಿ ಸಾಧಕರ ಸಾಹಿತ್ಯ ಕಲಾ ಸಾಧನೆ ಇನ್ನಷ್ಟು ಭೋರ್ಗರೆದು ಹರಿಯುತ್ತಲೇ ಇರಲಿ ಎಂಬ ಶುಭಕಾಮನೆಯೊಂದಿಗೆ, ಆಶಯ ನುಡಿಗಳನು ಆತ್ಮಪೂರ್ವಕ ಅಕ್ಷರಗಳಲ್ಲಿ ದಾಖಲಿಸಿದ್ದೇನೆ ..
ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್