ತರಹಿ ಗಜಲ್

ಕಾವ್ಯ ಸಂಗಾತಿ

ತರಹಿ ಗಜಲ್

ಗಜಲ್

ಸಲಿಲ ಮಿಳಿತ ತೈಲದಿ ಕಿಡಿಯೊಂದು ಪ್ರಜ್ವಲಿಸುತಿದೆ ಹೇಗೆ ಸಹಿಸಲಿ
ಹುಸಿ ಭಾವನೆಯೊಳು ಹಸಿ ತತ್ವವು ಭವ್ಯವಾಗುತಿದೆ ಹೇಗೆ ಸಹಿಸಲಿ

ಅಂತರಾತ್ಮದ ಮೌಲ್ಯಕೆ ಒರೆಹಚ್ಚಿ ಗ್ರಹಿಸದ ಜಗವೀಗ ಪ್ರಬಲವಾಗಿದೆ
ಅರೆ ಬೆಂದ ನುಚ್ಚು ಸರ್ವರುದರವ ಪೋಷಿಸುತಿದೆ ಹೇಗೆ ಸಹಿಸಲಿ

ಹಾವ ಭಾವಗಳ ಗುಟ್ಟಿಗೆ ದರ್ಪಣವನಿತ್ತು ತಿಳಿಯುವವರಿಲ್ಲ ಮರುಳೆ
ಬಡಬಡಿಸುವ ಸೊಲ್ಲಿನಲಿ ದಿಟದ ಸಾರ ಕ್ಷೀಣಿಸುತಿದೆ ಹೇಗೆ ಸಹಿಸಲಿ

ಕಾಲ ಪರ್ಯಟನೆಯ ಉತ್ಕರ್ಷದಿ ಸುಲಿಗೆಯಾಗಿವೆ ಚೆನ್ನುಡಿಗಳ ಸಾರ
ಮುಲಾಜಿಲ್ಲದ ಅಭಿವ್ಯಕ್ತಿಗೆ ಸದ್ಭಾವ ಶಿಕಾರಿಯಾಗುತಿದೆ ಹೇಗೆ ಸಹಿಸಲಿ

ಒಡಲ ಬೇನೆ ದಳ್ಳುರಿಯಾಗುತಿದೆ ದಿಗ್ಭ್ರಾಂತತೆಯ ವ್ಯೂಹದಲಿ ನಲುಗಿ
ಮೌನದಾಕ್ರಂನದಿ ನಯನಗಳ ಕಾಂತಿ ಮಸುಕಾಗುತಿದೆ ಹೇಗೆ ಸಹಿಸ

—–-ನಯನ. ಜಿ. ಎಸ್———

ತರಹೀ ಗಜಲ್ : ನಯನ ಅವರ ಸಾನಿ ಮಿಸ್ರಾ”

ಹುಸಿ ಭಾವನೆಯೊಳು ಹಸಿ ತತ್ವವು ಭವ್ಯವಾಗುತಿದೆ ಹೇಗೆ ಸಹಿಸಲಿ
ಅಪಸ್ವರದ ಕಿಚ್ಚಿಗೆ ಆತ್ಮಗಳ ನಂಟು ಭಸ್ಮವಾಗುತಿದೆ ಹೇಗೆ ಸಹಿಸಲಿ

ಒಡೆದ ಒಡನಾಡಿ ಭಾವವು ಉದ್ಧಟತನದಿಂದ ಗಹಗಹಿಸಿ ನಗುತಿದೆ
ಮುಡಿಯನೇರಿದ ಒಲವ ಪುಷ್ಪ ಮಸಣ ಸೇರುತಿದೆ ಹೇಗೆ ಸಹಿಸಲಿ

ನೆಚ್ಚಿ ಹಂಚಿದ ಹೃದಯದ ಮಾತದು ಬಿಕರಿಯಾಗುತಿದೆ ಬೀದಿಯಲಿ
ನಂಬಿಕೆಯ ಮಹಲು ಸಿಡಿದು ನುಚ್ಚು ನೂರಾಗುತಿದೆ ಹೇಗೆ ಸಹಿಸಲಿ

ಕಾಲದ ಪುಟದಲ್ಲಿ ಕರಗಿ ಹೋಗುತ್ತಿದೆ ಕರ ಹಿಡಿದು ಕಳೆದ ಕ್ಷಣಗಳು
ನಲಿವಿನ ಯುಗವೊಂದು ಪರ್ಯವಸಾನವಾಗುತಿದೆ ಹೇಗೆ ಸಹಿಸಲಿ

ಮತಿಹೀನ ನಿಲುವಿಗೆ ಮಣಿದು ಕ್ಷೀಣಿಸುತ್ತಿದೆ “ವಿಜಯ”ದ ನಡಿಗೆ
ನಸುಕಿನಲೇ ದುಗುಡದ ಕಾರ್ಮೋಡ ಕವಿಯುತಿದೆ ಹೇಗೆ ಸಹಿಸಲಿ.

—————–ವಿಜಯಪ್ರಕಾಶ್. ಕೆ————

Leave a Reply

Back To Top