ಶೋಭಾ ಭಟ್ ಅವರ ಕವನ ಸಂಕಲನ “ಪಂಚಮಸ್ವರ” ಒಂದು ಅವಲೋಕನ ರಾಜು ನಾಯ್ಕ ಬಿಸಲಕೊಪ್ಪ

“ಪಂಚಮಸ್ವರ” ಕವನ ಸಂಕಲನ
ಶೋಭಾ ಭಟ್
ಪ್ರಕಾಶನ ಸಂಸ್ಕೃತಿ ಬುಕ್ ಏಜನ್ಸಿಸ್
ಲಕ್ಷ್ಮೀ ಪುರಂ ಮೈಸೂರು

ಪೀಠಿಕೆ :- ಓದುಗನ ಹಂಬಲಕ್ಕೆ ಭಾವ ನುಗ್ಗಿಸುವ ಕಲೆ ಇದ್ದಾಗ ಕವಿತ್ವ ಅರಳುತ್ತದೆ.ಈ ಕಲೆ ಅರಿಯದಿದ್ದರೆ ಒಗ್ಗಿದ ಭಾವ ಬರಹವೆಲ್ಲ ಕಾವ್ಯವಾಗಲು ಸೋಲುತ್ತವೆ.. ಯಾರು ಏನು ತಿಂದರೊ ಅದು ಅವರ ಆಹಾರವಾಗುತ್ತದೆ..ನಾವು ಬಾಯಿಂದ ತಿನ್ನುವ ಆಹಾರ ಮಾತ್ರ ಆಹಾರವಲ್ಲ.. ಪಂಚೇಂದ್ರಿಯಗಳ ಮೂಲಕ ದೃಶ್ಯ,ಸ್ಪರ್ಶ,ಶ್ರವಣ,ಆಘ್ರಾಣ, ಮತ್ತು ಸ್ವಾದವನ್ನು ಆಸ್ವಾದಿಸಿದಾಗ ನಮ್ಮ ಶರೀರಕ್ಕೆ ಅವು ಆಹಾರವಾಗುತ್ತದೆ ಎಂಬುದು ಸ್ಪಷ್ಟ. . ನಾನು ಯಾರ ಕೃತಿಯನ್ನು ಓದಿದರು ನನ್ನ ಮತಿಯ ಮಿತಿಯಲ್ಲಿ ಆ ಸಾಹಿತ್ಯದ ಧರ್ಮ ಮೌಲ್ಯಗಳನ್ನು ಅರಿಯಲು ಪ್ರಯತ್ನಿಸುತ್ತೇನೆ. ಪಂಚಮಸ್ವರ ಕೃತಿ ಬಿಡುಗಡೆಯ ಸಂದರ್ಭ ನನಗೆ ಆಹ್ವಾನ ಇತ್ತಾದರು,ನನಗೆ ಹೋಗಲು ಆಗಿರಲಿಲ್ಲ.. ಪಂಚಮಸ್ವರ ಓದಬೇಕು ಕಳುಹಿಸುವಿರಾ ಎಂಬ ನನ್ನ ಪ್ರಶ್ನೆಗೆ ಅಳುಕಿಲ್ಲದೆ,ಈ ಕೃತಿ ನನ್ನ ಕೈ ಸೇರುವಂತೆ ಮಾಡಿದ್ದು ನನ್ನ ಬರಹಗಾರ ಸಹೋದರಿ ಶೋಭಾ ಭಟ್…ಹಾಗೆ ನೋಡಿದರೆ ಅವರ ಬರಹ ಓದಲು ಶುರು ಮಾಡಿದಾಗ ನಾನು ಮುದಗೊಂಡ ರೀತಿ ಅನನ್ಯ.. ಅವರ ಅನೇಕ ಕವನಗಳನ್ನು ಹಾಗೆ ಪ್ರಬುದ್ಧ ಮುಕ್ತಕಗಳನ್ನು ಓದಿದ್ದೇನೆ.. ಕೆಲವೊಂದಕ್ಕೆ ನನ್ನ ಸಮಯ ಮತ್ತು ಸಂದರ್ಭದ ಮಿತಿಯಲ್ಲಿ ವಿಶ್ಲೇಸಿಸಿದ್ದೇನೆ..ಸದಾ ಮೆದುಳಿನ ಹಸಿವು ತೀರಿಸುವ ಅವರ ಬರಹವನ್ನು ಗುಣಾತ್ಮಕವಾಗಿ ಮೆಚ್ಚಿಕೊಂಡವ ನಾನು.. ಈಗ ಪಂಚಮಸ್ವರ ಕವನ ಸಂಕಲನದ ಬಗ್ಗೆ ಒಂದು ಮೆಲುಕು ನೋಟ ಬೀರುವ ಸಾಹಸ ಮಾಡುವೆ..ಪಂಚಮ ಸ್ವರ ಸಂಗೀತದ ಸ್ವರಗಳಲ್ಲಿ ಶಿಖರವಿದ್ದಂತೆ ಕೋಗಿಲೆ ಮಾತ್ರ ಆ ಸ್ವರದ ತುದಿಯನ್ನು ಮುಟ್ಟಿ ಗಟ್ಟಿಯಾಗಿ ಹಾಡುತ್ತದೆ. ಇದೂ ತನಕ ಯಾವೊಬ್ಬ ಸಂಗೀತಗಾರ/ ಗಾಯಕನಿಗೂ ಆ ಶಿಖರ ಏರಲು ಆಗಲಿಲ್ಲ ಎಂಬುದನ್ನು ಓದಿದ್ದೇನೆ.. ಪಂಚಮಸ್ವರ ಕವನ ಸಂಕಲನದ ಇಂಚರದಲ್ಲಿ ಮನಸು ನಲಿಯಲು ಹೊತ್ತು ತೆಗೆದುಕೊಳ್ಳುವುದಿಲ್ಲ..

ಕವನಸಂಕಲನ ಪಂಚಮಸ್ವರ ಈ ಪಂಚಮಸ್ವರದಲ್ಲಿ ಶತಕದ ಭಾವಸ್ವರವಿದೆ..ದೇವಿ ಸ್ತುತಿಯಿಂದ ಆರಂಭವಾಗಿ ಹಸಿರು ಮರವನ್ನು ಆವರಿಸಿದ ಮಾಧುರ್ಯವಿದೆ..ಯಾಕೆ ಎಂಬ ಪ್ರಶ್ನೆ ನನಗಿಲ್ಲ..ಹಸಿರು ಮರದ ಮರೆಯಲ್ಲಿಯ ಕೂಜನದ ಹಾಡು ಬಯಲಲ್ಲಿ ಮೊಳಗಿದೆ ಎಂಬುದು ನನಗೆ ವೇದ್ಯವಾಗಿದೆ.. ನಾನು ಪುಸ್ತಕದ ವರ್ಣನೆ,ಮುನ್ನುಡಿ ಹಿನ್ನುಡಿಗಳನ್ನು ಗೌರವಿಸಿ,ಕೇವಲ ಕವಿಯತ್ರಿಯ ಭಾವಕೋಶದಲ್ಲಿ ಜನನವಾದ ಪಂಚಮಸ್ವರದ ಇಂಚರವನ್ನಷ್ಟೆ ಆಲಿಸುವೆ..ಅಕ್ಷರ ಬರೆಯುವಾಗ ನಾವು ಅಕ್ಷರದೇವಿಯನ್ನು ಪ್ರಾರ್ಥಿಸುತ್ತೇವೆ..

ಹರಸು ತಾಯೆ ನಿನ್ನ ಕರುಣೆಯಿಂದ ಕರದಲ್ಲಿ ಲೇಖನಿ ಹಿಡಿದು ಭಾವ ಬಿತ್ತಿಯ ಹಣತೆ ಹಚ್ಚಲು ಶಾರದೆಯೆ ನಿನ್ನ ಕೃಪಾಶೀರ್ವಾದ ಬೇಕು ಎಂಬ ಭಾವ ಸ್ಪುಟವಾಗಿ ಇಲ್ಲಿ ಕಾಣುತ್ತದೆ.. ತಾಯಿ ಸುಖ ಅಕ್ಷರ ಬೀಜ ಬಿತ್ತಿದ ಮಾತಾಪಿತೃವಿನ ಆಶೀರ್ವಾದ ಕವಿಯತ್ರಿಯ ಅಕ್ಷರ ಬೇರನ್ನು ಗಟ್ಟಿಗೊಳಿಸಿದೆ..ಹದವ ಮಾಡು ತಂತಿಯನ್ನು ಎಂಬಲ್ಲಿ ಕವಿಯತ್ರಿ ಯ ಒಡಲ ಒಳಗೆ ಅವಿತ ಮೌನ ಭಾವ,ವಿನಯ, ವಿವೇಕ ಎಲ್ಲವು ಅರುಣರಾಗವಾಗಿದೆ.. ಅರುಣೋದಯವಾದ ಮೇಲೆ ಇಬ್ಬನಿ ಕರಗಲೇಬೇಕಲ್ಲವೆ?.. ಕರಗಿತು ಇಬ್ಬನಿ ನೇಸರನ ಕಿರಣದಲ್ಲಿ ಹಬ್ಬಿರುವ ಹಬ್ಬಕ್ಕೆ ಇಬ್ಬನಿ ಕರಗಿದ ಸಂಭ್ರಮವೆಂಬಂತೆ ಕೊಬ್ಬಿ ನಿಂತ ಚೆಲುವಿನ ಧಾತ್ರಿ ಸಾಕ್ಷಿ ಒದಗಿಸಿದೆ..ಹೊನ್ನ ಕಿರಣವ ಹೊತ್ತು ಬಂದ ರವಿಯ ಆಟವೆ ಬೆಳಗು- ಬೆರಗು ..ಸುಮದ ಕದಪಿಗೆ ಎಳೆಯ ಬಿಸಿಲಿನ ಚುಂಬನದಂತೆ, ಹನಿ ಮುತ್ತಿಗೆ ಗಂಧ ಸೂಸಿದಾಗ ರಸಿಕನ ಕಂಗಳಲ್ಲಿ ಬೆರಗು,ಬೆಳಗೆಂದರೆ ಧರಣಿ ತನುವಿನಲ್ಲಿ ಸುಧೆಯ ಸಿಂಚನ ಎಂಬುದು ಈ ಕವಿತೆಯ ಭಾವ ಸ್ಪಂದನ..ಈ ಸಂದರ್ಭದಲ್ಲಿ ಇಳೆಗು ಎಳೆಯ ಮಳೆಗು ಬಾಹು ಬಂಧನವಾಗುವಲ್ಲಿ ನಾಳೆಗಳ ಸುಳಿವಿರದೆ ತುಸು ಬೆಳಕಿನ ಸ್ಪರ್ಶ ಪಡೆದ ಕ್ಷಣ ಇಂದ್ರಚಾಪ ಮೂಡಿದೆ.. ಇಂದ್ರಚಾಪಕ್ಕಾವ ಬಂಧ? ಬಂಧವಿರದೆ ಚೆಂದವೇನು ..ಪೊಡವಿಯೊಳಗೆ ಮೊಳೆತು ಬೆಳೆಯುವ ಗಿಡಗಳೆಲ್ಲ ಧರಣಿ ತುರುಬಿಗೆ ಕಸುವು ತುಂಬವ ಕೆಲಸ ಸದ್ದಿಲ್ಲದೆ ಮಾಡುತ್ತಲೆ ಇರುತ್ತವೆ..ಕವಿಗೆ ಯಾವ ಘಳಿಗೆ ಯಾವ ನೋಟ? ಅವನೆದೆಯಲ್ಲಿ ಭಾವ ಬೀಜ ಮೊಳೆಯದೆ ಕವಿತೆ ಅರಳಬಹುದೇ? ಎಲ್ಲಿ ಅವಿತೆ ಕವಿತೆ ಬಾಳು ಸಂಗರವಾದರು ಮೃದುಲ ಸಂಗ ಸಿಗವುದು ಕವಿತೆಯಲ್ಲಿ?..ಎದೆಯ ಒಳಗೆ ಕಚಗುಳಿ ಇಟ್ಟ ಕನಸು,ಎದ್ದು ಗಿಡ ನೆಡಲು ಪ್ರೇರೆಪಿಸಿದಾಗ ನೀ ನೆಟ್ಟು ಗಿಡ ಹೂ ಬಿಟ್ಟಿದೆ ಅಂಗಳದ ತುಂಬೆಲ್ಲ ಚಿಕ್ಕ ತಂಗಿ ಬಿಡಿಸಿದ ಹಸೆಯಂತೆ,ಬಂದು ನೋಡೆಮ್ಮೆ ದಾರಿಯೆಲ್ಲ ಹಸಿರಾಗಿದೆ.. ಎಂಬ ಹೆಮ್ಮೆಯಲಿ ಸಂಬಂಧಗಳು ಅರಳುತ್ತವೆ.. ಸಂಬಂಧಗಳು ಎಂದೂ ಖಾಲಿ ಸೌಧವಾಗುವುದಿಲ್ಲ..ಕೋಲಿನ ನಂಟು ಕೂಡ ಸಂಬಂಧವೆ…ಗತ್ತಿನಲ್ಲಿ ಕುತ್ತುಗಳನ್ನು ಎದುರಿಸಿದರೆ ಆಗ ಬಾಳು ಗಂಧ ಗ್ರಹಣ .
ಬಾಳಿನ ದಂದ್ವಗಳನ್ನು ತೊರೆದು ಅನುಸಂಧಾನ ಪ್ರಕ್ರಿಯೆ ನಡೆದಾಗ ಪ್ರೀತಿಯ ಹೂವಿನ ಮೈಬಣ್ಣ ಕೆಂಪಾಗುವುದಿಲ್ಲ.. ಕರಳು ಮಾತ್ರ ಕೂಗಿ ಕರೆದು ಅಳಬೇಡವೋ ರಂಗ ಎಂದು ಮುದ್ದು ಮಾಡಿ ಮದ್ದು ಹಚ್ಚುವ ಪ್ರಕ್ರಿಯೆಯೆ ಅನುಲಾಪ ಬಾಳಿನುದ್ದಕ್ಕೂ ಪ್ರೇಮದ ಬಂಧವನ್ನು ಉಳಿಸುತ್ತದೆ.. ಆಗ ಕರೆದು ಬಿಡು ಮನದೊಳಗೆ ಸಲುಗೆಯ ಚಿಲುಮೆಯಲಿ ನಲಿದುದ್ದಕ್ಕೆ ಕಲರವ ಮಾತ್ರ ಮೌನ ಸಾಕ್ಷಿಯಾಗುತ್ತದೆ.. ಇದ್ದಷ್ಟು ದಿನ ನಲಿದ ಈ ಬಾಳಿಗೆ ಭೂ ಸ್ವರ್ಗ ವಲ್ಲವೆ..ಶಶಿಯ ಬೆಳಕೋ,ಉಷೆಯ ಥಳಕೋ, ನುಸುಳಿ ಬರುವ ಕಿರಣ ಸ್ಪರ್ಶವೋ.. ಎಂಬ ಪ್ರಶ್ನೆ ಮಾತನ್ನು ಕಸಿದುಕೊಂಡಿದೆ..ಮೌನ ಮನದ ಮಾತು ಒಮ್ಮೊಮ್ಮೆ ಎದೆಯ ವೀಣೆಯನ್ನು ಮೀಟಿದಾಗ ಮೆಲುನಗೆಯ ಮೊರೆಯಲ್ಲಿ ಮೆಲ್ಲುಸಿರು ಹೊರ ನುಸುಳಿ ಮತ್ತೆ ಬಾಡದಿರಲಿ ಬಾಳ ಭಾವಗೀತೆ ಎಂಬ ತತ್ವ ಇಣುಕುತ್ತದೆ.. ಪರವಾಲಂಬಿ ಆಗದೆ ಬದುಕನ್ನು ಸ್ವಾವಲಂಬಿಗೊಳಿಸಲು ಮತ್ತೆ ಸಮಯ ಬೇಕಲ್ಲವೆ?.. ಒದಗಲಿ ಸಮಯ ಅಳೆದು ತೂಗಿದ ತಕ್ಕಡಿಯಲ್ಲಿ ಭಾವಗಳನ್ನದುಮುತಲಿ ಹೆಸರು ಕೊಟ್ಟು ಅಪ್ಪ ಬಾಳಿನ ಗುರಿಗೆ ಬೆನ್ನು ತಿರುಗಿಸದಿರು, ಸಲಿಲದ ಗುರಿ ಯಂತೆ ಬುಟ್ಟಿ ತುಂಬೊ ಫಸಲು ಮುಂದಿದೆ ಎಂದಾಗ ಗಟ್ಟಿ ಎದೆಗೆ ವರುಣಧಾರೆ ಬೇಡುವ ಭಾವ ಮೇಳೈಸಿದೆ..ವರುಣ ತೋರೆಯ ಕರುಣ ಎಂಬುದು ಕವಿ ಭಾವನೆ ಆದರೂ ಪ್ರಾಕೃತಿಕ ಸಂಸ್ಕಾರದ ಈ ದೇಹವೆ ವರುಣನ ಸಿಂಚನವಾಗದೆ ಬದುಕಲಾರದು ಎಂಬುದು ಕವಿಯೋಕ್ತಿ.. ಜ್ಞಾನ ಬೆಳಕಿನ ಹೊತ್ತಗೆ ಹಿಡಿದು ಮನದ ಪುಟದಲ್ಲಿನ ಅನುಭವ ಸಾರವನ್ನು ಭಾವ ಲಹರಿ ಗೆ ಹಾಯಿಸಿದಾಗ ಭವ್ಯ ಕವಿತೆ ಬರೆಯಲು,ಮಧುರ ವನ ಸುಮದ ಕಂಪಿನ ಕಂಗಳ ಭಾಷೆಯ ಅಂತರಂಗದ ಮುರಳಿ ನಾದ ಕರೆಯಿತ್ತೆಲ್ಲಿಗೆ?
.
ಕರೆದಿದೆ ಗೋಕುಲ ಗೋಕುಲದಲ್ಲಿ ಈಗ ಚಿಣ್ಣರಿಲ್ಲ ಮುರಳಿ ಸಣ್ಣವನಲ್ಲ.. ಸಂಬಂಧದ ಕೊಂಡಿ ಕಳಚಿಕೊಂಡ ರಾಧೆಯ ಹೃದಯ ಈಗ ಖಜಾನೆಯ ತೊಟ್ಟಿಲು ಆಗಿ ಉಳಿದಿಲ್ಲ. ಹಾಗಾಗಿ ಹಳ್ಳಿ ಬಿಟ್ಟು ಗೋಕುಲದ ದಾರಿ ಹಿಡಿದ ಮರಳು ಮನಕ್ಕೆ ಆಡುವಾತನ ಕಾಲಾಳು ನಾವು ಬೇಗ ಆಟ ಮುಗಿಸೋಣ,ಬದುಕಿಗೆ ಸಾವಿರದ ಆಯವಿದೆ..ವ್ಯೂಹದಲ್ಲಿ ಸಿಗುವಂತೆ ರಾಧೆ ಕರೆದ ಧಾಟಿ ಯಾವುದು?..ಹೇಗೆಲ್ಲ ಕರೆದೆ ರಾಧೆ ಭಕ್ತಿಯೋ,ಜ್ಞಾನವೋ, ಮೋಹವೋ, ಪ್ರೇಮವೋ ಬಣ್ಣದ ಸೇತುವೆ ಮೇಲೆ ಬಾಳಬೇಕಾದ ಬಾಳಬಂಧ ಗಿರಿಯ ತುದಿಯಲ್ಲಿ ಮರದ ನೆರಳಲ್ಲಿ ಶಿಶಿರದ ತಂಪಲ್ಲಿ ಕೂಜನನ ಧ್ವನಿಯಾದರೆ ಅದು ಪಂಚಮ ಸ್ವರ ವಾಗುತ್ತದೆ

ಕವಿತೆಯೆಂದರೇನು ಎಂಬ ಪ್ರಶ್ನೆ ತಲೆ ತಿನ್ನುತ್ತಿದೆ.. ನಾವು ಹೊರಗಿನಿಂದೆಲ್ಲವನ್ನು ಒಡಲಿಗಿಳಿಸಿಕೊಂಡು, ಒಡಲಿನಿಂದ ಹಿತಮಿತವಾದ ಭಾವದಲ್ಲಿ ಹೊರಗೆ ಪ್ರಸವಿಸುವ ಭಾವವೇ ಕವಿತೆಯೇ? ಉತ್ತರ ನನಗೆ ಸಿಕ್ಕಿಲ್ಲ..ಕವಿತೆಯ ಹುಟ್ಟು ಹೀಗೆ ಆಗಬಹುದೇನೋ ಭಾವ ಬೀಜ ಬಸುರಿನಲ್ಲಿ ಬಲಿತ ಮೇಲೆ ಪ್ರಸವಿಸುವಿಕೆಗೆ ನವಮಾಸದ ಅಗತ್ಯ ಇರುವುದಿಲ್ಲ..ಕವಿತೆ ಛಂದದಲ್ಲಿ ಬದ್ಧಳಾದಾರೆ ಇಂದ್ರಚಾಪದ ಮೊಹರು ಬೀಳುತ್ತದೆ.. ಅಂಬುಧಿಯಂಗಣ ಹಾಲ್ಬೆಳದಿಂಗಳ ಚುಂಬನಕ್ಕೆ ದಂಗಾಗಿ ತೇರನ್ನು ಏರಿದಾಗ ಸೋತಿದೆ ಶಶಿಗೆ ಯಾಕೆ ಎಂಬುದು ನಿಗೂಢ!. ನಾವು ಅಲೆಮಾರಿ ಯಂತಾದರೆ ನನ್ನವರು ಯಾರು ಎಂಬ ಪಥದಿಂದಲೆ ದೂರ ಸರಿದು ಮರುಗ ಬೇಕಾಗುತ್ತದೆ.. ವಧು ನೀನು ನಿನಗೇಷ್ಟು ಶೃಂಗಾರ ಬೇಕು ವಾಣಿ ಶಾರದೆ ಯ ಸ್ಮರಿಸಿ ಸೂರ್ಯ ಮುಳುಗುವ ಎದೆಯಲ್ಲಿ ಚಿಕ್ಕ ಪ್ರಣತಿ ಹಚ್ಚಿಬಿಡು.. ಆಗ ಗಂಧ ಚಂದನ ಲೇಪದಲ್ಲಿ ಮಿನುಗುವೆ..ನಿಲ್ಲು ಮನೆಯಲ್ಲಿ ಎಂದು ಯಶೋಧಾ ಗದರಿದಂತೆ ಹೇಳಬಹುದು.. ಹೊಲದ ಹಾಡು ಬರೆದು ಜಾಣೆಯಾಗುವೆ ಅಮ್ಮ, ಶಾಲೆ ದೂರವಿಲ್ಲ ನಡೆದೇ ಹೋಗುವೆ ಎಂದಾಗ ತೊರೆವೆಯೇಕೆ ಮಾಧವ ಮುರಳಿ ನುಡಿಸು ದೇಹ ಬಳಲಿದೆ ಎಳೆಯರು ಕಳೆಯರು ಎಲ್ಲ ಸೇರಿ ಕಳೆದ ದಿನಗಳ ಮಧುರ ಚಣದ ಮನದ ಹಾಡು ಅಕ್ಕರೆಯಲ್ಲಿ ಅಕ್ಷರವಾಗಿ ಕರಗಿ ಹೋಗದೆ ಬರಡು ನೆಲದ ಮುಗುಳ್ನಗುವೆ ಮಗು ಮನಸು.

ಖಾಲಿ ಹೃದಯ ತಟ್ಟಿ ಸಡಗರ ಹಂಚುತಿಹುದೆ ಬಾಳಲೆನ್ನುತ ಭಾವಿಸಿದ ನೋವಿನ ಪದರ ಕಳಚಲು ಮಣ್ಣಿನ ಹಣತೆಗಿಟ್ಟ ಸುಟ್ಟ ಸೊಡೂರು ಬೆಳಕ ನೀಡಲಿ ಉರಿದು ಕುಂದಣಗಾರ ಕುಂಬಾರ ಅವನಿಗೆ ಅವಳ ಮೋಡಿ ಯ ಒಲವು ಹೆಜ್ಜೆಯ ಗುರುತಿನ ದಾರಿ ಎಲ್ಲಿಯ ತನಕ ಹೊರಳಿ ಬಾಲ್ಯಕೆ ಹೋದರೂ ಕದ್ದು ಚಪ್ಪರಿಸಿದ ಪಪ್ಪಿಯ ಸವಿ ನಸುನಗೆಯ ಅರಳಿಸುತ್ತದೆ.. ತವರಿನ ಸಿರಿ ಕಂಡ ಬಾಳು ಈಗ ಪೂರ್ಣ ತಿರುವು ಮುರುವು ಏನೇ ಮಾಡಿದರು ಬಾಳು ಒಗ್ಗಿ ಹೋದ ಮೇಲೆ ಇದ್ದಷ್ಟು ದಿನ ಗುದ್ದಾಟ ಮಾಡಬೇಕು ಬಂದು ಬಿಡು ಹೀಗೆ ಉರುಳಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು ಸರಳ ಬದುಕು ಬಾಳುತ್ತ ನಲಿಯೋಣ ತುಂಟ ಬದುಕಿಗೂ ಕೂಡ ಸಾವಿನ ನಂಟಿದೆ ಹಣ್ಣೆಲೆ ಉದುರಿಸಲು ಹೊಂಚು ಹಾಕಿದ ವಸಂತನ ಮಡಿಲಲ್ಲಿ ಋತು ಸಂಗಮ ಹಾಡುವಾಗ ರವಿಗೆ ಶಿಶಿರದ ಜಡವಾವರಿಸಿ ಸುಗ್ಗಿಯ ಕಣದಲ್ಲಿ ಕಳ್ಳಗಿಂಡಿ ಯಲ್ಲಿ ನುಸುಳಿ ಬೆಳಕು ಹರಿದು ಬರಲಿ.. ಮುಗಿಲ ಧಾಳಿಗೆ ನಲುಗಿ ಗೂಡು ತೊರೆಯದೆ ಏನಾಗಲಿ ನಾನು ಎಂಬ ಗೊಂದಲ ಮನದಲ್ಲಿ… ಮಾಮರದ ಚಿಗುರನ್ನು ತಿಂದ ಕೂಜನವಾಗಲೇ? ಅಥವಾ ಉಪ್ಪು ನೀರಿನ ಚಿಪ್ಪಿನೊಳಗೆ ಮುತ್ತಾಗಲೇ ಎಂಬ ದ್ವಂದ್ವದ ಮನಸ್ಥಿತಿ ಪೂರ್ಣ ಪಾರದರ್ಶಕತೆ ತೆರೆದುಕೊಂಡಿದೆ. ಅದೇ ಹೊತ್ತಿನಲ್ಲಿ ಮೈಮನ ಮೋಹಕ ಚೆಲುವಿನ ಕರುನಾಡು ಕರ ಬೀಸಿ ಕರೆದಿದೆ..ಚಂದನದ ಬೀಡಿಗೆ ದಾರಿ ಎಲ್ಲಿ ಎಂದು ಸುಮದ ಘಮಕ್ಕೆ ಮತ್ತಾದ ಮಧುಕರನಂತೆ ಅಲೆದಾಡಿ, ಬೇಸರ ಬಂದಾಗ ಒಂದು ವಿನಂತಿ ಮಾಡುವುದೇನೆಂದರೆ, ಭ್ರೂಣದಲ್ಲೆ ಹೆಣ್ಣಿಗೆ ವಿಷ ಉಣಿಸಬೇಡಿ,ನಿರ್ಲಪ್ತ ಚಿತ್ತದವಳು ಆಕೆ ಕಡಲಂತೆ ಭೋರ್ಗೆರೆದರೆ ಗತಿಯೇನು? ಎಂಬ ಎಚ್ಚರಿಕೆ ಮೆದುಳನ್ನು ಚುಚ್ಚುತ್ತದೆ.. ಕಡಲೇಕೆ ನಿರ್ಲಿಪ್ತ ಗೊತ್ತಾ?..ಹರಿವ ನೀರು ತವಕಿಸಿ ತನ್ನೊಡಲಿಗಿಳಿಯಲು ಬರುತ್ತದೆ ಎಂಬ ಆಸೆ ಅದಕ್ಕೆ.. ಭಾವ ಹೊನಲು ಚಿತ್ತ ಭಿತ್ತಿಯಲ್ಲಿ ರಂಗು ತಳೆದ ಮುಂಜಾನೆ ಹೊತ್ತಲ್ಲಿ ಮಾಗಿಯ ಮುಂಜಾವು ಬಾನನ್ನು ಅಲೆಯುವ ಸಂದರ್ಭದಲ್ಲಿ ಕರಿ ಮುಗಿಲ ಪ್ರತಿಬಿಂಬ ಕೊಳದಲ್ಲಿ ಮಿನುಗುತ್ತ ನೋವಿನ ಮಾಪನ ಮಾಡುವಂತಿದೆ.. ನಿಲ್ಲದೇ ಮನ ಎದೆಯಲ್ಲಿ ಕಂಪನ ಸೃಷ್ಟಿಸಿ ಕದಳಿವನದಲ್ಲಿ ವಿಹರಿಸುವಾಗ ಕದಳಿ ಹೂವು ಅರಳಿದ್ದು ಸೋಜಿಗ.. ಮಾಗುವ ಬಾಳು ಅದು ಯಾವಾಗಲು ದೇವ ಸೃಷ್ಟಿಯ ಸೊಬಗು ಜೀವನ ಎಷ್ಟು ಬೆರಗುಗೊಳಿಸುವುದೋ ಅಷ್ಟೇ ಮೆರುಗನ್ನು ನೀಡುತ್ತದೆ.. ಆದರೆ ನೆರಳಿನಂತೆ ನೆನಪು ಕಳ್ಳ ಹೆಜ್ಜೆಯಿಟ್ಟು ಬಂದು ಬಿಡುತ್ತದೆ.. ಬದುಕು ಮಿತ್ರನ ಮೈತ್ರಿ ಗೆ ತುಡಿಯುತ್ತದೆ.. ಖಗಗಳೆಲ್ಲ ಗಗನದಲ್ಲಿ ಹಾರುವ ಗುಂಗಿನಲ್ಲಿ ಹೊಸ ಯುಗ ಉದಯಿಸಿದಂತೆ ನವ ಬೆಳಗು ಕುಳಿರು ಗಾಳಿಯ ಜೊತೆ ಮೆಲ್ಲನೆ ಅಡಿ ಇಟ್ಟು ಕೊಳದಲ್ಲಿ ಇಳಿಯುವಾಗ ಅವಿನಿ ಜಾತೆಗೆ ವಿಯೋಗ. ಬಂದುದು ವಿಚಿತ್ರ…ಅವಧ ಸುತ ಅವಧಿ ಮುಗಿಯುವುದರಲ್ಲಿ ಜನಕ ಸುತೆಗೆ ಆಸರೆಯಾದನೆ,? ಜೀವನ ರಾಗ ಪಾಠ ಮಾಡುವಾಗ ಆಸರೆಯಲ್ಲಿ ಮನುಜಾ ನೀ ಯಾರಿಗಾದೆ ಬರಿದು ಮಾಡಿದ ಪ್ರಕೃತಿಯ ಮಡಿಲು ನೋಡಿದಾಗ ಕವಿಯತ್ರಿ ಅಳು ನುಂಗಿ ನಗುವೆ ಇನ್ನೆಲ್ಲಿ ಗತ ವೈಭವ ಕದ್ದು ತರಲೇನು ತತ್ತುನ್ನು ಎಂದು ಹಂಬಲಿಸುವ ಮನಸು ಆರ್ದ್ರಗೊಳಿಸುತ್ತದೆ.

ಹಕ್ಕಿಯಾಗಿದೆ ಕನಸು ಮಿನುಗುವ ಕನಸು ದೂಮ್ರದಲ್ಲಿ ಕಣ್ಣಲ್ಲಿ ಕಪ್ಪಾಗಿದ್ದು ನೋವಿನ ಸಂಗತಿಯಾದರು ನಗುವಿನ ಸಿರಿ ಬಾಳೆಂಬ ನಂಬಿಕೆ ಬೇಕು.. ನಮ್ಮ ಬಾಳನ್ನು ತೂಗುವ ಮೊದಲೇ ಗಡಿ ಕಾಯುವ ವೀರ ಯೋಧ ರೊಂದಿಗೆ ನಮ್ಮ ಬಾಳನ್ನು ತುಲನೆ ಮಾಡಿದರೆ.. ಸೊರುತ್ತಿದೆ ಒಲವು ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು..ಯಾಕೆಂದರೆ ನಾವು ಬಾಳಿನ ಗುಟ್ಟನರಿಯೇವು ಮಾಗಿ ಚಳಿಯಲಿ ಮಗುವು ನಗುವ ಸೊಬಗನ್ನು ಕಂಡಾಗ ಬಾಳಿಗೆ ಶಶಿ ತಂದವಳು ಅಲ್ಲಿ ಮಾತ್ರ ವಾತ್ಸಲ್ಯದ ಕಲರವ ಹೃದಯವನ್ನು ತಟ್ಟುತ್ತದೆ…ತಾಯಿ ನೆನಪಾಗಿ ಮರ ಮುಗಿಲ ನ್ನು ದಿಟ್ಟಿಸುತ್ತಾ ನೀರೊಳಗಿನ ಬಿಂಬ. ಈ ಬಾಳು ಮಣ್ಣು ಸೇರುವ ಕಾಲ ದಿಲ್ಲಿ ಬರಡಲ್ಲ ಬಾಳು ಎಂಬ ಸಮಾಧಾನದ ಚಿತ್ತ ಮುಗಿಲಿನ ನುಲಿವು ಮಳೆ ಬರುವಾಗ ತಲ್ಲಣಿಸಿದರೂ ಭಾವ ಸಾಂಧ್ರವಾಗಿದೆ.. ಮನೆಯಲ್ಲಿ ಹುಟ್ಟಿ ಜೊತೆ ಬೆಳೆದ ಅಕ್ಕನೋ ತಂಗಿಯೋ..ನಮ್ಮ ನಿಮ್ಮವಳು ಅವಳ ಬದುಕಿನ ಚಿತ್ರಣ ಜಸ ತರುವ ದೀವಳಿಗೆ ಯಂತೆ ದಿಶೆ ದಿಶೆಯಲ್ಲಿ ಬಾಳ ಸಂಕ್ರಾಂತಿ ಬೆಳಗುವ ಹಂಬಲ ಮಾತ್ರ ಕಡಿಮೆಯಾಗಿಲ್ಲ… ಸಂಕ್ರಾಂತಿ ಯು ಮೂಡಿ ಅನ್ನದಾತ ನ ಬಾಳಲ್ಲಿ ತೆನೆ ತೆನೆ ಸೇರಿ ಹಬ್ಬವಾದಂತೆ ಅವರ ಮನದಲ್ಲಿ ಮುದ್ದು ಚಂದ್ರಮ ಒಲವ ಮಂದಾರ ಸುರಿಸಿದ ನವೀನ ಗೀತೆ ಹುಡುಗರಾಟ ವಲ್ಲ!!. ಕೇಳು ಬಿನ್ನಪವ ಎಂಬಲ್ಲಿ ಹರೆಯದಲ್ಲೆ ಬಸವಿ ಬಿಟ್ಟು ಹೋದರೆನ್ನನು.. ಎಂಬ ಸಾಲು ಮನ ಕಲಕುತ್ತದೆ. ಇಲ್ಲಿ ದೇವದಾಸಿ ಪದ್ಧತಿಯ ಕಮರು ಘಾಟು ಮೂಗಿಗೆ ತಾಗುತ್ತದೆ.. ನೀನು ಒಂಟಿಯೇ ಗೆಳೆಯಾ ಭಾವ ಹೂರಣದ ಒಳನೋಟ ಸಾಂತ್ವನದ ಚೆಂದದ ನಿರೂಪಣೆ ಮುದಗೊಳಿಸುತ್ತದೆ..ನೆನೆಪ ಸೆಲೆ ಮುರಳಿಯ ಮರಳು ಇದು ವಿಭಿನ್ನ ದೃಷ್ಟಿಯೇ ತಾನೊಂದು ಕವಿತೆ.. ಹಸಿರು ಮರ ದ ಕೆಳಗೆ ಮರಳಿ ಮೃದುವಾಗಿ ಭಾವ ಉದಯವಾದ ರೀತಿ ತಿಳಿಯುತ್ತದೆ..

ಉಪಸಂಹಾರ:- ಶ್ರೀಮತಿ ಶೋಭಾ ಭಟ್ಟರ ಪಂಚಮ ಸ್ವರಕ್ಕೆ ಪೂರ್ಣ ನ್ಯಾಯ ಒದಗಿಸಲು ನನ್ನಿಂದ ಆಗಲಿಲ್ಲ ಕಾರಣ ಕವನ ಸಂಕಲನದಲ್ಲಿರುವ ಕವಿತೆಗಳ ಸಂಖ್ಯೆ ಶತಕ..ಅಷ್ಟನ್ನು ಓದಿ ಅದರ ಭಾವಾರ್ಥವನ್ನು ಒಂದೆರಡು ಸಾಲಿನಲ್ಲಿ ಬರೆಯುವುದು ಬಹಳ ಕಷ್ಟ..ಆದಾಗ್ಯೂ ಶತಾಯ ಗತಾಯ ಪ್ರಯತ್ನಿಸಿದ್ದೇನೆ..ಪರಿಶುದ್ಧ ಭಾಷೆ.. ನವಿರು ಭಾವ ಬೆಸೆದು ಬರೆದ ಎಲ್ಲ ಕವನಗಳು ಉತ್ಕೃಷ್ಟವಾಗಿವೆ.. ಅವರ ಭಾಷೆ ಪ್ರಬುದ್ಧತೆ, ಛಂದಸ್ಸಿನ ಅಧ್ಯಯನ, ಅನುಭವ ಜ್ಞಾನ, ಎಲ್ಲವು ಕವನ ಸಂಕಲನದಲ್ಲಿ ಸಮ್ಮಿಳಿತವಾಗಿವೆ.. ಓದಲೇಬೇಕೆಂದು ತರಿಸಿಕೊಂಡ ಈ ಕವನ ಸಂಕಲನ ಭಾವ ಸಮುದ್ರದಂತೆ ಇದೆ ಸಾಂಧ್ರವಾದ ಪ್ರಬುದ್ಧ ಬರಹಗಳು ಮನಸ್ಸನ್ನು ಕೇಂದ್ರಿಕರಿಸಿ ಬಿಡುತ್ತವೆ. ನೀವು ಖಂಡಿತ ಓದಲೇಬೇಕಾದ ಭಾವಪೂರ್ಣಿಮೆ ಅಂದರೆ ಅದು ಪಂಚಮಸ್ವರ..

Leave a Reply

Back To Top