ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲವರ ಲೇಖನಿಯಿಂದ

ಸಾಮಾಜಿಕ ಸಂವೇದನೆಯ ಶ್ವೇತಪ್ರಿಯ

 ಸಾಮಾಜಿಕ ಸಂವೇದನೆಯ ಶ್ವೇತಪ್ರಿಯ

ಗಜಲ್… ಗಜಲ್ ಎಂದರೆ ಅದೇನೋ ಪುಳಕ ಮನದಲಿ. ಈ ಗಜಲ್ ಪ್ರೀತಿಸುವ ರಸಿಕರಿಗೆ ಮಲ್ಲಿಯ ದಿಲ್ ಸೆ ಆದಾಬ್ ಅರ್ಜ್ ಹೈ.. ಪ್ರತಿವಾರ ಒಬ್ಬೊಬ್ಬ ಸುಖನವರ್ ಕುರಿತು ಬರೆಯುತ್ತ ಗಜಲ್ ಕಾರವಾನ್ ನಲ್ಲಿ ಅಲೆದಾಡುತ್ತಿರುವೆ. ಆ ಕಾರವಾನ್ ನಲ್ಲಿ ಆಕರ್ಷಿಸಿದ ಗುಲ್ಶನ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ, ನೀವು ನಿರೀಕ್ಷಿಸುತ್ತಿರುವ ಗಜಲ್ ಬೆಳದಿಂಗಳೊಂದಿಗೆ…

ನನ್ನಲ್ಲಿ ಇದೆ ದೋಷವಿದೆ ಇತರರಂತೆ ನಾನು ಇಲ್ಲ

ಯಾವತ್ತೂ ಮುಖದ ಮೇಲೆ ಮುಖವಾಡ ಹಾಕುವುದಿಲ್ಲ”

ಫರಾಗ ರೋಹವಿ

      ಸುಖವೆ ಇರಲಿ ಅಥವಾ ದುಃಖವೇ ಇರಲಿ ನಾವು ಇಲ್ಲಿ ಕನವರಿಸೋದು ‘ಕಾಲ’ವನ್ನು ಅಲ್ಲವೇ…! ಈ ಕಾಲ ಎಂಬುದು ನಿರಂತರವಾಗಿ ಚಲಿಸುವ ಪಾದರಸ. ಇದು ಯಾರಿಗೂ ಕಾಯುವುದಿಲ್ಲ, ಯಾರ ಓಲೈಕೆಯನ್ನೂ ಮಾಡುವುದಿಲ್ಲ; ಯಾರ ಮಾತನ್ನೂ ಕೇಳುವುದಿಲ್ಲ. ಇದಕ್ಕೆ ತನ್ನದೆಯಾದ ನಿಗೂಢವಾದ ತರ್ಕವಿದೆ, ನಿಯಮಗಳಿವೆ. ಇದಕ್ಕೆ ನಾವೆಲ್ಲರೂ ತಲೆ ಬಾಗಲೇ ಬೇಕು, ಇಷ್ಟ-ಕಷ್ಟವನ್ನು ಬದಿಗೊತ್ತಿ! ಕಾಲವನ್ನು ಪ್ರತಿನಿಧಿಸುವ ಯೌವ್ವನ, ವೃದ್ಧಾಪ್ಯ ಹಾಗೂ ಸಾವನ್ನು ಯಾರೂ ಮೀರುವಂತಿಲ್ಲ. ತಾನು ಕಳೆದುಕೊಂಡ, ಬಿಟ್ಟುಬಂದ, ತನ್ನಿಂದ ಬೇರೆ ಕಾರಣಗಳಿಗಾಗಿ ಮರೆಯಾದ, ಮರೆಯಾಗುತ್ತಿರುವ ಕಾಲವನ್ನು ಮರಳಿ ಪಡೆಯಲು ಮನುಷ್ಯ ಕಂಡುಕೊಂಡ ದಾರಿಯೆಂದರೆ ಕಲೆ ಮತ್ತು ವಿಜ್ಞಾನ. ಇಲ್ಲಿ ಕಲೆಗೆ ಬಹುಮುಖ ಆಯಾಮಗಳಿವೆ. ಆದರೆ ಉಳಿದೆಲ್ಲ ಕಲೆಗಳಿಗಿಂತ ಸಾಹಿತ್ಯವು ಹೆಚ್ಚು ಶ್ರೇಷ್ಠ ಮತ್ತು ಶಾಶ್ವತ. ಕಾಲಪುರುಷನ ಕ್ರೂರ ಹಸ್ತದಿಂದ ತಪ್ಪಿಸಿಕೊಳ್ಳುವ ಚಿರಂಜೀವಿ ಎಂದರೆ ಈ ಸಾಹಿತ್ಯ. “What is wonderful about great literature is that it transforms the man who reads it towards the condition of the man who wrote, and brings to birth in us also the creative impulse” ಎಂಬ ಆಂಗ್ಲ ಲೇಖಕ ಇ.ಎಮ್. ಫಾರ್ಸ್ಟರ್ ಅವರ ಮಾತು ಸಾಹಿತ್ಯದ ಮಹತ್ವವನ್ನು ಸಾರುತ್ತದೆ. ಸಾಹಿತ್ಯವು ಓದುವ ಮನುಷ್ಯನನ್ನು ಬರೆದ ಮನುಷ್ಯನ ಸ್ಥಿತಿಗೆ ಪರಿವರ್ತಿಸುತ್ತದೆ. ಇಂಥಹ ಸಾಹಿತ್ಯದ ಹೃದಯವೇ ಕಾವ್ಯ ಎಂಬ ಕನ್ನಿಕೆ. ಈ ಕಾವ್ಯದ ವಿವಿಧ ರೂಪಗಳಲ್ಲಿ ‘ಗಜಲ್’ ಎಂಬುದು ಜನಪ್ರಿಯವೂ, ಜನಮನ್ನಣೆಯೂ ಗಳಿಸಿದೆ. ಇಂದು ಕನ್ನಡ ಸಾರಸ್ವತ ಲೋಕದಲ್ಲಿ ಅಸಂಖ್ಯಾತ ಬರಹಗಾರರು ಗಜಲ್ ಕನ್ಯೆಯನ್ನು ಪ್ರೀತಿಸುತಿದ್ದಾರೆ, ಪೂಜಿಸುತಿದ್ದಾರೆ. ಇಂಥಹ ಆರಾಧಕರಲ್ಲಿ ಪ್ರಶಾಂತ ಅಂಗಡಿಯವರೂ ಒಬ್ಬರು.

       ಶ್ರೀ ಪ್ರಶಾಂತ ಅಂಗಡಿಯವರು ೧೯೮೯ರ ಜುಲೈ ೨೦ ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ದಂಡಗೀಹಳ್ಳಿ ಎಂಬ ಕುಗ್ರಾಮದಲ್ಲಿ ಶ್ರೀ ಮಹಾದೇವಪ್ಪ ಗು. ಅಂಗಡಿ ಮತ್ತು ಶ್ರೀಮತಿ ರೇಣುಕಮ್ಮ ಮ. ಅಂಗಡಿ ದಂಪತಿಗಳ ಎರಡನೆ ಮಗನಾಗಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ದಂಡಗೀಹಳ್ಳಿ, ಹಾರಗೊಪ್ಪದಲ್ಲಿ, ಪ್ರೌಢ ಶಾಲೆಯ ಶಿಕ್ಷಣವನ್ನು ಸುಣಕಲ್ಲ ಬಿದರಿಯಲ್ಲಿ, ಪಿ.ಯು.ಸಿ, ಪದವಿ ಶಿಕ್ಷಣ ಧಾರವಾಡದಲ್ಲಿ, ಎಮ್. ಎಸ್ ಸಿ ರಸಾಯನಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಚಿತ್ರದುರ್ಗದಲ್ಲಿ ಹಾಗೂ ರಾಣೆಬೆನ್ನೂರಿನಲ್ಲಿ ಬಿ.ಎಡ್ ಪದವಿಯನ್ನು ಪಡೆದಿದ್ದಾರೆ. ಇವರು ಪ್ರಸ್ತುತ ಆದಿತ್ಯ ಬಿರ್ಲಾ ಗ್ರಾಸಿಂ ಇಂಡಸ್ಟ್ರೀಸ್ ಹರಿಹರದಲ್ಲಿ ಜೂನಿಯರ್ ಕೆಮಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತರು ವಿಜ್ಞಾನದ ವಿದ್ಯಾರ್ಥಿಯಾಗಿ ಲ್ಯಾಬೋರೇಟರಿಗೆ ಸೀಮಿತವಾಗದೆ ಸಾಮಾಜಿಕ ಸಂವೇದನೆಗಳನ್ನು ಮೈಗೂಡಿಸಿಕೊಂಡು ತಮ್ಮ ವಿಚಾರಗಳನ್ನು ಜನರಿಗೆ ತಲುಪಿಸಲು ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿ ಆಯ್ಕೆಮಾಡಿಕೊಂಡು ಕಾವ್ಯ, ಲೇಖನ, ವಿಮರ್ಶೆ ಹಾಗೂ ಗಜಲ್ ಕ್ಷೇತ್ರಗಳಲ್ಲಿ ಕೃಷಿ ಮಾಡುತ್ತ ಬಂದಿದ್ದಾರೆ. ಕರ್ನಾಟಕ ಸರಕಾರ ನೀಡುವ ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹ ಧನ ಸಹಾಯ ಯೋಜನೆ ಅಡಿಯಲ್ಲಿ ೨೦೨೦ ನೇ ಸಾಲಿನಲ್ಲಿ ಇವರ ‘ಕನ್ನಡಿ ಮುಂದಿನ ನಗ್ನ ಚಿತ್ರಗಳು’ ಎಂಬ ಗಜಲ್ ಸಂಕಲನವು ಪ್ರಕಟಗೊಂಡಿದೆ.

        ವೈಚಾರಿಕ ಪ್ರಜ್ಞೆ ಹೊಂದಿರುವ ಪ್ರಶಾಂತ ಅಂಗಡಿಯವರು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ಸಹೃದಯಿ. ಇವರು ತಾಲ್ಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಇವರ ಸಾಹಿತ್ಯದ ಹಲವು ರೂಪಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ರಾಜ್ಯದ ವಿವಿಧ ಸಂಸ್ಥೆಗಳು, ಸಂಘಟನೆಗಳು ಪ್ರಶಸ್ತಿ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಸ್ನೇಹ ಸಂಗಮ ಬಳಗ ತುಮಕೂರಿನ ‘ಯುವ ಕಣ್ಮಣಿ ಪ್ರಶಸ್ತಿ’ (೨೦೨೦), ಶ್ರೀ ಬಸವೇಶ್ವರ ಯುವಕರ ಸಂಘ ದಂಡಗೀಹಳ್ಳಿಯ ಬಸವ ಪ್ರಭೆ ಪ್ರಶಸ್ತಿ’ (೨೦೨೧)…. ಪ್ರಮುಖವಾಗಿವೆ.

      ಭಾವನೆಗಳ ಅಭಿವ್ಯಕ್ತಿಗಿಂತಲೂ ಅನುಭವಗಳ ನಿರೂಪಣೆಯನ್ನು ನಿರೀಕ್ಷಿಸುವ ಗಜಲ್ ಹೃದಯವಂತಿಕೆಯ ಸಾಕಾರ ರೂಪ. ಸಂವಹನಕ್ಕಾಗಿ ನಾವು ಶಬ್ಧಗಳನ್ನು ಬಳಸುತ್ತೇವೆ. ಆದರೆ ಈ ಶಬ್ದಗಳಿಗೆ ತಮ್ಮಷ್ಟಕ್ಕೆ ಯಾವ ಅರ್ಥವೂ ಇರುವುದಿಲ್ಲ. ಅರ್ಥ ಎನ್ನುವುದು ಯಾದೃಚ್ಚಿಕ. ಕೇವಲ ಅರ್ಥದ ಬೆನ್ನುಹತ್ತಿ ಹೋದರೆ ಶಾಯರ್ ನ ಅನುಭವ ನಮಗೆ ದಕ್ಕುವುದಿಲ್ಲ. ಈ ಕಾರಣಕ್ಕಾಗಿಯೇ ಹಲವು ಶತಮಾನಗಳು ಕಳೆದರೂ ಅಸಂಖ್ಯಾತ ಗಜಲ್ ಗಳು ನಮ್ಮೊಂದಿಗೆ ಮಾತಿಗಿಳಿಯುತ್ತವೆ, ತಮ್ಮಲ್ಲಿ ಹುದುಗಿದ ಅನುಭವವನ್ನು ನಮ್ಮ ಹೃದಯಕ್ಕೆ ರವಾನಿಸಿತ್ತವೆ. ಇದು ಸಾಧ್ಯವಾಗಬೇಕಾದರೆ ಗಜಲ್ ಹೃದಯದ ಭಾಷೆಯನ್ನು ಮೈಗೂಡಿಸಿಕೊಳ್ಳಬೇಕು, ಹೃದಯದಷ್ಟೆ ಮೆದುವಾಗಿರಬೇಕು; ಮೃದುವಾಗಿರಬೇಕು. ಈ ಕಾರಣಕ್ಕಾಗಿಯೇ ಗಜಲ್ ಅನ್ನು ಕೋಮಲೆ, ಸುಕೋಮಲೆ ಎಂದೆಲ್ಲ ಕರೆಯಲಾಗುತ್ತದೆ. ಇನ್ನೂ ಪ್ರೀತಿಯ ಮೂರ್ತರೂಪವಾದ ಅರ್ಧಾಂಗಿಯ ಹೆಸರನ್ನು ತಮ್ಮ ತಖಲ್ಲುಸನಾಮವನ್ನಾಗಿ ಅಂದರೆ ‘ಶ್ವೇತಪ್ರಿಯ’ ಎಂದು ಬಳಸಿ ಗಜಲ್ ಬರೆಯುವ ಪ್ರಶಾಂತ ಅಂಗಡಿ ಅವರ ಗಜಲ್ ಗಳು ಪ್ರೀತಿಯ ಅಂಗಲಾಚನೆ, ಬದುಕಿನ ರಹಸ್ಯವನ್ನು ಬಿಚ್ಚಿಡುತ್ತವೆ. ಸಹೃದಯಿ ಓದುಗರ ಮನಸ್ಸಿನಲ್ಲಿ ಮೃದುವಾಗಿ, ಹಿತವಾಗಿ, ಹದವಾಗಿ ಹಾಗೂ ಹುಲುಸಾಗಿ ಜೀವನದ ಶ್ರದ್ಧೆಯನ್ನು ಬಿತ್ತುತ್ತವೆ. ಪ್ರೇಮ, ವಿರಹ, ವಿರಸ ಹಸಿವು, ತಾಯಿಯ ತ್ಯಾಗ, ಗುರುವಿನ ನೆನಪು ಸಮಾಜದಲ್ಲಿಯ ಕೋಮು ಮತೀಯವಾದದಲ್ಲಿ ಬೆಂದು ನರಳುತ್ತಿರುವ ಬದುಕುಗಳ ಆರ್ತನಾದ, ಧರ್ಮ, ಜಾತಿ, ದೇವರು, ಮೇಲು, ಕೀಳು ಸೇರಿದಂತೆ ಈ ಸಮಾಜದ ಹಲವಾರು ವಿಷಯಗಳ ಕುರಿತು ಗಜಲ್ ಗೋ ಅಂಗಡಿಯವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಜೀವನ ಎಂದರೇನು ಎಂಬುದನ್ನು ಅರಿಯದೇ ಜೀವಿಸುತ್ತಿರುವ ಮನುಷ್ಯ ಜೀವಿಯಾಗಿ ಜೀವಿಸದೆ ವಸ್ತುವಿನೋಪಾದಿಯಲ್ಲಿ ಕಾಲ ಕಳೆಯುತಿದ್ದಾನೆ. ಈ ಕಾರಣಕ್ಕಾಗಿಯೇ ಸುಖನವರ್ ಪ್ರಶಾಂತ ಅವರು ಹುಟ್ಟು-ಸಾವಿನ ಪ್ರಕ್ರಿಯೆಯಲ್ಲಿ ಮನುಷ್ಯತ್ವ ನೆಲೆಯೂರಿದರೆ ಜೀವನ ಸಾರ್ಥಕ ಎಂಬುದನ್ನು ತಮ್ಮ ಈ ಷೇರ್ ಮುಖಾಂತರ ಹೇಳಲು ಪ್ರಯತ್ನಿಸಿದ್ದಾರೆ.

ಹುಟ್ಟು ಸಾವಿನ ಮಧ್ಯ ಮನುಷ್ಯತ್ವ ಹುಟ್ಟಲಿ ಅದುವೇ ಜೀವನ

ಸತ್ತ ಹೃದಯ ಮೌನತಾಳಿ ಸೋಲುವದೇನು ಹೊಸತಲ್ಲ ಬಿಡು

ಗಡಿಯಾರದ ಮುಳ್ಳಿನೊಂದಿಗೆ ಹೆಜ್ಜೆ ಹಾಕುತ್ತಿರುವ ಮನುಷ್ಯ ಭಾವಾಂತರಂಗದ ಬಾಳನ್ನು ಮಟೇರಿಯಲಿಸ್ಟಿಕ್ ಆಗಿ ಮಾಡಿರುವುದು ಇಂದಿನ ದುರಂತ. ಮಾನವೀಯತೆ ಇಲ್ಲದ ಬದುಕೆಂದರೆ ಅದೊಂದು ಉಸಿರಾಡುವ ಅಸ್ಥಿಪಂಜರದಂತೆ ಎಂಬ ಆಶಯವನ್ನು ಇಲ್ಲಿ ಗಮನಿಸಬಹುದು.

ನಿನ್ನಪ್ಪನ ಬೆವರಲ್ಲಿ ಬೆಂದ ಅಕ್ಕಿ ತುಸು ಉಪ್ಪು ಹೆಚ್ಚೆಂದಳು ನನ್ನವ್ವ

ಹರಿದ ಬಟ್ಟೆಗೆ ಮುರುಕು ಚಪ್ಪರಕ್ಕೆ ನನ್ನಪ್ಪನ ದುಬ್ಬ ಕನ್ನಡಿಯಾಗಿತ್ತು”

ಹೆತ್ತವರ ಮಮತೆಯನ್ನು ಅಳೆಯುವ ಯಾವ ಮಾಪನವೂ ನಮ್ಮಲ್ಲಿ ಇಲ್ಲದಿರುವುದು ನೆಮ್ಮದಿಯ ನಿಟ್ಟುಸಿರು! ಇಲ್ಲದಿದ್ದರೆ ಮಮತೆಯನ್ನೂ ದಾಖಲಿಸಲು ನಾವು ಮುಂದಾಗುತಿದ್ದೇವು! ದುರಂತವೆಂದರೆ ಇತ್ತೀಚೆಗೆ ವೃದ್ಧಾಶ್ರಮಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಹೆತ್ತವರ ಬೆವರ ಹನಿಯಲಿ ಮಿಂದೆದ್ದು ಅವರನ್ನು ಬೀದಿಪಾಲು ಮಾಡುತ್ತಿರುವುದು ಭೋಗ ಸಂಸ್ಕೃತಿಯ ಲಕ್ಷಣವಾಗಿದೆ. ಇಲ್ಲಿ ಶಾಯರ್ ಪ್ರಶಾಂತ ಅಂಗಡಿಯವರು ಮಕ್ಕಳ ಪೋಷಣೆಯಲ್ಲಿ ತಂದೆಯವರ ಪಾತ್ರ ಕುರಿತು ಹೃದಯ ತಟ್ಟುವಂತೆ ದಾಖಲಿಸಿದ್ದಾರೆ.

    ಎಲ್ಲರೂ ಬಲಾಢ್ಯತೆಗೆ, ಗಟ್ಟಿತನಕ್ಕೆ ಮನಸೋಲುತ್ತಾರೆ. ಹಾಗಂತ ಇದು ಹಿಂಸೆ, ಕ್ರೂರತೆ ಎಂದಲ್ಲ. ಪ್ರಕೃತಿಯ ಮಡಿಲಲ್ಲಿ ಮೃದುತ್ವಕ್ಕೆ, ಸಾಧುತನಕ್ಕೆ ಧೀರ್ಘಾಯುಷ್ಯವಿದೆ. ಈ ಸೆಲೆಯಲ್ಲಿಯೆ ಮೆದುತನದ ಪ್ರತಿಬಿಂಬವಾದ ಗಜಲ್ ಕಾವ್ಯ ಪ್ರಕಾರ ಎಲ್ಲರ ಹೃದಯವನ್ನು ಆವರಿಸಿದೆ. ವಿಷಯದ ಆಯ್ಕೆ ಯಾವುದೇ ಇದ್ದರೂ ಅದನ್ನು ಜನರಿಗೆ ತಲುಪಿಸುವ ಸೇತುವೆ ಮಾತ್ರ ಪ್ರೀತಿನೇ ಆಗಬೇಕು. ಅಂದಾಗ ಮಾತ್ರ ಸಹೃದಯಿಗಳ ಹೃದಯ ತಟ್ಟಲು, ಮುಟ್ಟಲು ಸಾಧ್ಯ. ಈ ದಿಸೆಯಲ್ಲಿ ಗಜಲ್ ಗೋ ಪ್ರಶಾಂತ ಅಂಗಡಿ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ರಚನೆಯಾಗಲಿ, ಅವುಗಳು ಸಂಕಲನ ರೂಪ ಪಡೆದು ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಪ್ರೀತಿಯಿಂದ ಶುಭ ಕೋರುತ್ತೇನೆ.

ಮಾನವನ ಬಯಕೆಗಳಿಗೆ ಯಾವ ಅಂತ್ಯವೂ ಇಲ್ಲ

ಎರಡು ಗಜ ಭೂಮಿಯೂ ಬೇಕು ಎರಡು ಗಜ ಕಫನ್ ನ ನಂತರ”

ಕೈಫಿ ಅಜ್ಮಿ  

ಮನುಷ್ಯನ ಮನಸು ತಳಮಳಗಳ ಗೋದಾಮು. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ನ ಪಾತ್ರ ಅನನ್ಯ. ಇಂಥಹ ಗಜಲ್ ಜನ್ನತ್ ನಲ್ಲಿ ವಿಹರಿಸುತ್ತಿರಬೇಕಾದರೆ ಹಲವು ಬಾರಿ ಕಾಲವನ್ನೂ ಶಪಿಸಿದ್ದೇನೆ. ಆದರೂ ಕಾಲದ ಮುಂದೆ ಮಂಡಿಯೂರಲೆ ಬೇಕಲ್ಲವೇ.. ಅನಿವಾರ್ಯವಾಗಿ ಇಂದು ನನಗೆ ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮತ್ತೆ ಮುಂದಿನ ಗುರುವಾರ‌ ತಮ್ಮ ಮುಂದೆ ಬರುವೆ..ಹೋಗಿ ಬರುವೆ, ಅಲ್ವಿದಾ….


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

  1. ಗಝಲ್ ಕುರಿತು ಕುತೂಹಲ ಹುಟ್ಟಿಸುವ ಅಧ್ಯಯನ ಶೀಲ ಬರಹ …ಧನ್ಯವಾದಗಳು

Leave a Reply

Back To Top