ತಾರೆಗಳು ನಕ್ಕವು,ಕವಿತೆ-ಡಾ. ಪುಷ್ಪಾ ಶಲವಡಿಮಠ

ಕಾವ್ಯ ಸಂಗಾತಿ

ತಾರೆಗಳು ನಕ್ಕವು

ಡಾ. ಪುಷ್ಪಾ ಶಲವಡಿಮಠ

Bright abstract

ತಾರೆಗಳು ನಕ್ಕವು ಹಿತ್ತಲಲಿ
ನೆಲದ ನಂಟಿಗೆ ಅಂಟಿಕೊಂಡು
ಮಣ್ಣ ಪರಿಮಳ ಹೊತ್ತುಕೊಂಡು
ತಾರೆಗಳು ನಕ್ಕವು ಹಿತ್ತಲಲಿ

ಹಸಿರು ಗಿಡದಲಿ ಮೊಸರು ಚೆಲ್ಲಿದಂತೆ
ಮಲ್ಲಿಗೆ ಮೊಗ್ಗುಗಳೆಲ್ಲ ಬಿರಿದು
ಗಂಧ ಪರಿಮಳ ಹೊತ್ತು ತಂದು
ಗಗನ ತಾರೆಗಳು ನಾಚುವಂತೆ
ನೆಲದ ತಾರೆಗಳು ನಕ್ಕವು ಹಿತ್ತಲಲಿ

Girl enjoying fragrance of roses

ಬಟ್ಟಲ ಕಣ್ಣ ಬಟ್ಟಲ ಹೂ
ತುಂಟು ನಗೆಯ ತುಂಬೆ
ಸನ್ನೆ ಮಾಡಿ ಕರೆವ ಸಂಪಿಗೆ
ಕೆನ್ನೆ ಕೆಂಪಿನ ಕನಕಾಂಬರಿ
ದಿಬ್ಬಣ ಬಂದಿವೆ ಹಿತ್ತಲಿಗೆ

ಲಜ್ಜೆ ಭಾರದಿ ಬಾಗಿ ಮಂದಹಾಸ ಬೀರಿ
ಕೈ ಮಾಡಿ ಕರೆವ ದಾಸವಾಳ
ಸಣ್ಣಕಣ್ಣ ಮನದನ್ನೆ ಸೇವಂತಿ
ಚಂಡು ಪಾರಿಜಾತ ಸುಂದರಿ
ಸೂರ್ಯಕಾಂತೆ ಸೂರ್ಯಕಾಂತಿ

ಮುಗಿಲ ಹಂಗು ಹರಿದುಕೊಂಡು
ನೆಲದ ನಂಟಿಗೆ ಅಂಟಿಕೊಂಡು
ಹಸಿರು ತೋಳ ತೊಟ್ಟಿಲ ತುಂಬ ಅರಳಿ
ತಾರೆಗಳು ನಕ್ಕವು ಹಿತ್ತಲಲಿ


One thought on “ತಾರೆಗಳು ನಕ್ಕವು,ಕವಿತೆ-ಡಾ. ಪುಷ್ಪಾ ಶಲವಡಿಮಠ

Leave a Reply

Back To Top