ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಸಂಸ್ಕಾರ

ಶಾಲೆಯು ಸಮಾಜದ ಪ್ರತಿಬಿಂಬವಿದ್ದಂತೆ. ಸಮಾಜದಲ್ಲಿ ಬದುಕಲು ಬೇಕಾದ ಮೌಲ್ಯಗಳನ್ನು ಬೆಳೆಸುವ ಮಂದಿರವಾಗಿದೆ. ಇದಕ್ಕೂ ಪೂರ್ವ ಸಂಸ್ಕಾರದ ಬೇರುಗಳು ಮನೆಯಿಂದ ಪ್ರಾರಂಭಗೊಂಡು ಶಾಲೆಯಲ್ಲಿ ಹೆಮ್ಮರವಾಗುವ ನಿಟ್ಟಿನಲ್ಲಿ ಗಿಡವಿದ್ದಾಗಲೇ ಬಗ್ಗಿಸುವ ತಪ್ಪು ಮಾಡಿದಾಗಲೇ ತಿದ್ದಿ ಹೇಳುವ ಗುರುತರವಾದ ಹೊಣೆ ಪಾಲಕರ ಮೇಲಿದೆ.ಪ್ರತಿದಿನದಂತೆ ನನ್ನ ತರಗತಿಯ ಮಕ್ಕಳ ಹಾಜರಿಯನ್ನು ಹಾಕಿ ಇನ್ನೇನು ಪಾಠ ಪ್ರಾರಂಭಿಸಬೇಕೆನ್ನುವಷ್ಟರಲ್ಲಿ ನನ್ನ ತರಗತಿಯ ವಿದ್ಯಾರ್ಥಿಯ ಪಾಲಕರೊಬ್ಬರು ಕೈಯಲ್ಲಿ ಒಂದು ಬೆತ್ತ ಹಿಡಿದು ಇನ್ನೊಂದು ಕೈಯಲ್ಲಿ ವಿದ್ಯಾರ್ಥಿಯನ್ನ ಎಳೆದುಕೊಂಡು ಬಂದು”ನೋಡಿ ಟೀಚರ್ ಇವನು ರಾತ್ರಿ ಟಿ.ವಿ ನೋಡಿ ತಡವಾಗಿ ಮಲಗಿ ತಡವಾಗಿ ಎದ್ದ. ಶಾಲೆಗೆ ಹೋಗು ಎಂದಾಗ ಇವತ್ತು ಟೆಸ್ಟ ಇದೆ ನಾ ಓದಿಲ್ಲ,ಶಾಲೆಗೆ ಹೋಗುವದಿಲ್ಲ ಎಂದ.ನಾನು ಟೀಚರಿಗೆ  ಹೇಳಿ ಕಳಿಸಿಬರುವೆ ಎಂದಾಗ ತಾ ಬರುವದಿಲ್ಲ ಎಂದು ಹಠ ಮಾಡಿದ ಆಗ ನನ್ನ ತಂದೆ ಅಂದರೆ ಇವರ ಅಜ್ಜ ನಿಮ್ಮ ತಂದೆಯ ಮಾತು ಕೇಳು ಶಾಲೆಗೆ ಹೋಗು ಎಂದಾಗ  “ನಾ ಶಾಲೆಗೆ ಹೋಗ್ತೆನೆ ಬಿಡ್ತೇನೆ ನಿನಗ್ಯಾಕೆ ಬೇಕು? ” ಎಂದು ನನ್ನ ತಂದೆಗೆ ಜೋರು ಮಾಡಿದ.” ಹಿರಿಯರೆಂಬ ಗೌರವ ಕೂಡ ತೋರಲಿಲ್ಲ ,ಅದಕ್ಕೆ ಒಂದು ಪೆಟ್ಟು ಹೊಡೆದೆ. ಆದ್ರೂ ಇವನು”ನಾ ಬಯ್ದರ ಸಿಟ್ಟು ಮಾಡ್ತೀರಿ ನೀ ಅಜ್ಜನಿಗೆ ನಿನ್ನ  ಔಷಧ ಗುಳಿಗಿಗೆ ತಿಂಗಳ ಇಷ್ಟು ಹಣ ಹೋಗತೇತಿ ಇದರಿಂದ ಸಾಕಾಗಿಹೋಗೇತಿ”ಅಂತ ಪದೇ ಪದೇ ಬೈಯ್ತಿರಿ, ನೀವು ಮಾತ್ರ ಬಯ್ಯಬಹುದೇ?ಎಂದು ಕೇಳಿ ನನಗೂ ಗೌರವ ಕೊಡಲಿಲ್ಲ , ಅದಕ್ಕೆ ಎಳೆದುಕೊಂಡು ನಿಮ್ಮ ಟೀಚರ ಹತ್ತಿರ ಹೇಳಿ ನಿನ್ನ ಮರ್ಯಾದೆ ತೆಗೆಯುವೆ ಎಂದು ಕರೆತಂದೆ ಮೇಡಂ ಎಂದು ಮಾತು ಮುಗಿಸಿದರು.

ಆಗ ನಾನು “ನೋಡಿ ನಿಮ್ಮ ಮಗನ ಮರ್ಯಾದೆ ತೆಗೆಯುವೆ ಎಂದು ನೀವು ಹೇಳಿ ಇಲ್ಲಿಯವರೆಗೆ ಎಳೆದು ತಂದದ್ದು ನಿಮ್ಮ ತಪ್ಪು, ಮಕ್ಕಳು ಶಾಲೆಯಿಂದ ಬಂದ ಮೇಲೆ  ಶಿಕ್ಷಕರು ನೀಡಿದ ಮನೆಕೆಲಸ ಮಾಡುತ್ತಾರೋ ಇಲ್ಲೊ ಗಮನಿಸಬೇಕು. ಇನ್ನೂ ಟಿ.ವಿ ನೋಡಲು ಸ್ವಲ್ಪ ಸಮಯ ಕೊಡಬೇಕು. ಅದಕ್ಕಿಂತ ನೀವು ಮಾಡಿದ ದೊಡ್ಡ ತಪ್ಪೆಂದರೆ ನಿಮ್ಮ ಮಗನ ಮುಂದೆ ನಿಮ್ಮ ತಂದೆಯನ್ನು ಬೈದದ್ದು. ನಿಮ್ಮ ಈ ನಡುವಳಿಕೆ ನಿಮಗೆ ಮುಂದೆ ತಿರು ಮಂತ್ರವಾಗುತ್ತದೆ. ಮನೆಯಲ್ಲಿ ಹಿರಿಯರನ್ನು ನೀವು ಗೌರವಿಸುವ ಸಂಸ್ಕಾರವನ್ನು ಬೆಳೆಸಿದರೆ ಮಕ್ಕಳು ನಿಮ್ಮನ್ನು ಗೌರವಿಸುತ್ತಾರೆ.ನೀವೇ ನಿಮ್ಮ ಹೆತ್ತವರನ್ನು,ಹೆಂಡತಿಯನ್ನು ಗೌರವಿಸದಿದ್ದರೆ ಮಕ್ಕಳು ಅದೇ ಸಂಸ್ಕಾರವನ್ನು ಬೆಳೆಸಿಕೊಳ್ಳುತ್ತಾರೆ ಅಲ್ವ? ಎಂದಾಗ ತಲೆಯಾಡಿಸಿ ಇನ್ನೂ ಮುಂದೆ ಹಾಗಾಗದಂತೆ ನೋಡಿಕೊಳ್ಳುವೆ” ಎಂದು ತಪಿತಸ್ಥ ಭಾವದೊಂದಿಗೆ  ಮಗನನ್ನು ಶಾಲೆಯಲ್ಲಿ ಬಿಟ್ಟು ಅವನ ತಲೆ ಸವರಿ ಮನೆಗೆ ತೆರಳಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ವಿಭಕ್ತ ಕೌಟುಂಬಿಕ ಪದ್ಧತಿಯಲ್ಲಿ ನಗರೀಕರಣ ಪರಿಸರದಲ್ಲಿ ತಂದೆ-ತಾಯಿ ಉದ್ಯೋಗಾಕಾಂಕ್ಷಿಗಳಾದಾಗ ಪಾಲಕರ ಮಕ್ಕಳ ಸಂಬಂಧದ ಕಂದಕ ಆಳವಾಗುತ್ತದೆ.

ಕುಟುಂಬದಲ್ಲಿ ಮಗು ತೊದಲುನುಡಿಯಾಡುವಾಗ ತಾಯಿಗೆ ಬಯ್ದರೆ ತಂದೆ ನಗುವದು ತಂದೆಗೆ ಬಯ್ದರೆ ತಾಯಿ ನಗುವ ಸಂದರ್ಭಗಳು ಸಹಜ.  ಅದು ತಪ್ಪು ಹಾಗೆ ಮಾತನಾಡಬಾರದು ತಪ್ಪಾಯಿತು ಅನ್ನು ಎಂದು ಹೇಳಿ ಚಿಕ್ಕ ಚಿಕ್ಕ ತಪ್ಪುಗಳನ್ನು ನಗುತ ಮನ್ನಿಸಿ ತಿದ್ದಬೇಕು.

ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಕುಟುಂಬದ ಮುಖ್ಯಸ್ಥನಾದ ತಂದೆ ಅನ್ನಿಸಿಕೊಂಡ ವ್ಯಕ್ತಿ ತಾನೇ ಮನೆಯ ಜವಾಬ್ದಾರಿಯನ್ನು ತೆಗೆದುಕೊಃಡಿದ್ದರೂ ನಾನೇ ಶ್ರೇಷ್ಠ ಋಲ್ಲರೂ  ನಾನು ಹೇಳಿದಂತೆ ಕೇಳಬೇಕು ಎಂಬ ದರ್ಪದಲಿ ಕಷ್ಟ ಸುಖಗಳಲ್ಲಿ ಜೊತೆಯಾಗಿ ಬಾಳಬಂಡಿಗೆ ನೆರವಾದ ಪತ್ನಿಯನ್ನು ಕಡೆಗಣಿಸಿ ಮಾತನಾಡಿದರೆ ಮುಂದೆ ಮಕ್ಕಳೂ ಕೂಡ ತಾಯಿಗೆ ಅಗೌರವ ತೋರುವ ತಾನು ಬೇಡಿದನ್ನ ಕೊಡಿಸುವ ತಂದೆಗೆ ಮಾತ್ರ ಗೌರವ ಕೊಡುವ ಮನೋಭಾವನೆಯನ್ನು ಮಕ್ಕಳು ಬೆಳೆಸಿಕೊಳ್ಳುತ್ತಾರೆ.ಆದ್ದರಿಂದ ಒಂದು ಕುಟುಂಬ ಅಂತ ಬಂದಾಗ ಅಲ್ಲಿ ಮನೆಯ ಯಜಮಾನ ಅನಿಸಿಕೊಂಡ ವ್ಯಕ್ತಿ ತನ್ನ ತಂದೆ ತಾಯಿ, ಹೆಂಡತಿಯನ್ನು ಗೌರವದಿಂದ ಕಾಣಬೇಕಾಗುತ್ತದೆ.

ಅರವಿಂದರು ಒಂದೆಡೆ ಹೀಗೆ ಹೇಳಿದ್ದಾರೆ”ನಿನ್ನ ಮನೆಯ ಕಿಟಕಿ ಬಾಗಿಲುಗಳನ್ನು ತೆರೆದು ಬಿಡು,ಬೆಳಕು ಗಾಳಿ ನುಗ್ಗಲಿ”ಎಂಬಂತೆ ಈಗ ನಮ್ಮ ಮಕ್ಕಳ ಮನದ ಮನೆಗಿರುವ ಬಾಗಿಲು ಕಿಟಕಿ ತೆರೆಯಬೇಕು ಎಂಬುದರ ಮೂಲಕ ಉತ್ತಮ ಅಭ್ಯಾಸಗಳ ಮೂಲಕ ವ್ಯಕ್ತಿತ್ವ ವಿಕಸನದ ಕುರಿತು ಪಾಲಕರ ಹೊಣೆಯನ್ನು ಎಚ್ಚರಿಸಿದ್ದಾರೆ.

ನಮ್ಮ ಸಂಸ್ಕ್ರತಿ,ಸಂಪ್ರದಾಯಗಳ ಕುರಿತು ಹೇಳುವ ಹಿರಿಯರ ನಡೆನುಡಿಗಳನ್ನು ಪಾಲಕರು ಗೌರವಿಸಬೇಕು.ಅದನ್ನು ಬಿಟ್ಟು ತಮ್ಮ ಮಕ್ಕಳೆದುರಿಗೆ ಅದು ನಿಮ್ಮ ಕಾಲ ಈಗ ಕಾಲ ಬದಲಾಗಿದೆ.ಎಂದು ಅಣಕದ ನುಡಿಯಾಡುವುದರಿಂದ ಅನುಭವದ ಮೂಸೆಯಲ್ಲಿ ಪರಿಶ್ರಮದ ಎರಕ ಹೊಯ್ದ ಮನಗಳು ನೊಂದು  ಈ ಮಾತನ್ನು ಕೇಳಲಿಕ್ಕಾ ನಾವು ಇಷ್ಟು ಕಷ್ಟ ಪಟ್ಟು ಇವರನ್ನು ಬೆಳೆಸಿದ್ದು?ಇರಲಿ ಅನುಭವ ಸಾಲದು ಮಾತನಾಡುತ್ತಾನೆ ಎಂದು  ದ್ವಂದ್ವದಿ ತಾವೇ ಸಮಾಧಾನ ಪಟ್ಟು ನಿಟ್ಟುಸಿರ ಬಿಟ್ಟು  ತೇವವಾಗುವ ಕಣ್ಣಾಲಿಗಳ ತೋರಿಸದೇ ಮೌನದಿ ನಕ್ಕು ಒಪ್ಪಿತ ಭಾವದಿ ಮತ್ತೆ ಅಪ್ಪುವ ಹಿರಿಜೀವಗಳ ಮುಪ್ಪಿನ ಬದುಕ ಸವೆಸುವ ತವಕದಲ್ಲಿ ಭಾವುಕತೆಗೆ ಬೆಲೆ ಎಲ್ಲಿದೆ?

ಈ ಕಡೆ ಪಾಲಕರು ಪೂಜೆ ಪುನಸ್ಕಾರದಲಿ ತೊಡಗಿದಾಗ ಆ ಕಡೆ ಮಕ್ಕಳು ಕಂಪ್ಯೂಟರ್ ಮೊಬೈಲ್ ಗೇಮ್ಸಗಳೆಡೆ ನೆಟ್ಟ ಗಮನ ಮನೆಗೆ ಬಂದವರನ್ನು ಕಣ್ಣೆತ್ತಿ ನೋಡಿ ಮಾತನಾಡದ ಮನ ಇನ್ನೆಲ್ಲಿವೆ ಮೌಲ್ಯಗಳೆ ಅಲ್ಲಿ ಧಮನ.ಪಾಲಕರಾದವರು ಅತಿಥಿಗಳನು ಉಪಚರಿಸುವ ಪರಂಪರೆ ಕೂಡ ಮಕ್ಕಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.

ಈ ನಿಟ್ಟಿನಲ್ಲಿ ಹಿರಿಯರನ್ನು ಗೌರವಿಸುವ ಅವರ ಬುದ್ಧಿಮಾತನು ಕೇಳುವ ತಾಳ್ಮೆ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ.ಮಕ್ಕಳಿಗೆ ತಂದೆತಾಯಂದಿರಿಂದ ಬಂದ ಗುಣಗಳು ಶೇಕಡಾ 50 ಆದರೆ ಪರಿಸರದ ಪ್ರಭಾವದಿಂದ ಶೇಕಡಾ50ರಷ್ಟೆಂಬುದು ಸಮೀಕ್ಷೆಯಿಂದ ದೃಢಪಟ್ಟಿದೆ.ಮಕ್ಕಳು ಯುವಜನತೆಗೆಡಾ.ಎಪಿಜೆ ಅಬ್ದುಲ ಕಲಾಂರವರು ಮೂರು ಸೂತ್ರಗಳನ್ನು ಹೇಳಿದ್ದಾರೆ.”ಕನಸು,ಚಿಂತನೆ,ಕಾರ್ಯತತ್ವ” ಕನಸುಗಳು ಚಿಂತನೆಗಳಾಗಿ ಬದಲಾಗಿ,ಚಿಂತನೆಗಳು ಕಾರ್ಯಗಳಾಗಬೇಕು.ಮಕ್ಕಳ ಪಾಲಕರ ಪಾತ್ರದ ಮಹತ್ವ ತಿಳಿಸಿದ್ದಾರೆ.ಮಕ್ಕಳು ಗೌರವ ಕೊಡುವಂತ ಆದರ್ಶ  ವ್ಯಕ್ತಿತ್ವ ಪಾಲಕರ ನಡೆನುಡಿಯಲ್ಲಿ ಹಾಸುಹೊಕ್ಕಾಗಿದ್ದರೆ ಮಾತ್ರ ಸಮಾಜಕ್ಕೆ ಒಬ್ಬ ಸುಶೀಕ್ಷಿತ ಮಾನವೀಯತೆಯ ನಡೆಯ ಜವಾಬ್ದಾರಿಯುತ ಇಂದಿನ   ನಾಗರೀಕನಾಗಲು ಸಾಧ್ಯವಾಗುತ್ತದೆ.

ನಾವು ನಮ್ಮ ಹೆತ್ತವರನ್ನು ಹೇಗೆ ನೋಡಿಕೊಳ್ಳುತ್ತೇವೆಯೋ ಹಾಗೆ ನಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಾರೆ. ಆದ್ದರಿಂದ ಗೌರವ ಕೊಟ್ಟು ಗೌರವ ಪಡೆಯುವ ಜಾಯಮಾನವನ್ನು ಬೆಳೆಸಿಕೊಳ್ಳುವ ಮೂಲಕ ಮಕ್ಕಳನ್ನು ಸಮಾಜಕ್ಕೆ ಹೊರೆಯಾಗದೆ ನೆರವಾಗುವ ತೆರದಲ್ಲಿ ಬೆಳೆಸಲು ಸಾಧ್ಯವಾಗುತ್ತದೆ.

ಮನೆಯಲ್ಲಿ ಹಿರಿಯರು ಒಂದೆರಡು ಬುದ್ಧಿಮಾತು ಹೇಳಿದರೂ ಖಿನ್ನತೆ,ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದೆ ಸಮಸ್ಯೆ ಎಂದು ಅಲವತ್ತುಕೊಳ್ಳುವ ಪಾಲಕರ “ಧೃತರಾಷ್ಟ್ರಪ್ರೇಮ” ಅವರ ಭವಿಷ್ಯಕ್ಕೆ ಮಾರಕವಾಗಿದೆ.

ಆದ್ದರಿಂದ ಮಕ್ಕಳ ತಪ್ಪನ್ನು ತಾಳ್ಮೆಯಿಂದ ತಿದ್ದಿ ಓಲೈಸುವ ಮೂಲಕ ಅವರ ತಪ್ಪನ್ನು ತಕ್ಷಣವೇ ತಿದ್ದಿ  ಅದರ ಪರಿಣಾಮವನ್ನು ತಿಳಿಹೇಳುವ ಅದರಂತೆ ತಾವು  ನಡೆಯುವ  ಅರಿವು ಪಾಲಕರದಾಗಬೇಕಿದೆ.ಕಷ್ಟ ಪಟ್ಟು ಬೆಳೆಸಿದ ಮಕ್ಕಳು ವೃದ್ದಾಪ್ಯದಲಿ ಅವರ ಸೇವೆ ಮಾಡಲಾಗದೇ ವೃದ್ದಾಶ್ರಮಕ್ಕೆ ತಳ್ಳುವ ಮಕ್ಕಳು ತಮ್ಮ ಮಕ್ಕಳೂ ತಮಗೂ ಹಾಗೆ ಮಾಡುವ ಸಮಯ ಬರುವದೆಂದು ಎಂದೂ ಲೆಕ್ಕಿಸರು.ಕಾಲಚಕ್ರದ ಬಂಡಿಯ ಮೇಲಿನ ಬದುಕ ಪಯಣಿಗರು ನಾವೆಲ್ಲ ಕತ್ತಲು ಸರಿದ ಮೇಲೆ ಬೆಳಕು ಬರುವಂತೆ ಹಿರಿಯರ ಸೇವೆಯ ಭಾಗ್ಯ ವರವಾಗಿ ಬರುವ ತೆರದಿ ತಿಳಿವ ಭರದಿ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ


ಭಾರತಿ ನಲವಡೆ

 ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

3 thoughts on “

  1. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಲೇಕನ ಟೀಚರ್

Leave a Reply

Back To Top